ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಜಬಾರಾ ಎಂಬ ಹಳ್ಳಿಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಿದ ಮಾದರಿ ಐಎಎಸ್ ಅಧಿಕಾರಿ ರಜತ್ ಬನ್ಸಲ್

ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೆ ಊರನ್ನೇ ಬದಲಿಸಬಹುದು ಎಂಬುದಕ್ಕೆ ಸಾಕ್ಷಿ ಛತ್ತೀಸ್ ಗಢದ ಜಬಾರಾ ಎಂಬ ಹಳ್ಳಿ. ಆ ಹಳ್ಳಿಯನ್ನು ಸ್ವಲ್ಪ ಪರಿವರ್ತನೆ ಮಾಡಿ ಅದನ್ನೊಂದು ಪ್ರವಾಸಿ ತಾಣವನ್ನಾಗಿ ಮಾಡಿದ್ದು ಧಮಾತ್ರಿ ಜಿಲ್ಲಾಧಿಕಾರಿ ರಜತ್ ಬನ್ಸಲ್. ಇದೀಗ ಆ ಹಳ್ಳಿಗೆ ದೇಶ, ವಿದೇಶಗಳ ಪ್ರವಾಸಿಗರು ಬರುತ್ತಾರೆ. ಆ ಇಂಟರೆಸ್ಟಿಂಗ್ ಕತೆ ಇಲ್ಲಿದೆ.

  • ನವ್ಯಶ್ರೀ ಶೆಟ್ಟಿ 

2019, ಏಪ್ರಿಲ್ ಛತ್ತೀಸ್ ಗಢದ ಜಬಾರಾ ಎಂಬ ಪುಟ್ಟ ಹಳ್ಳಿಯ ಜನರ ಬದುಕಲ್ಲಿ ದೊಡ್ಡ ಬದಲಾವಣೆ ತಂದಿತು. ಅವರು ವಾಸಿಸುವ ಜಾಗದ ಸುತ್ತಮುತ್ತಲಿನ 5,352 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಅವರೇ ಹಕ್ಕುದಾರರು ಎಂಬ ಆದೇಶ ಬಂತು. 

ನಿಮಗೆ ಜಬಾರಾ ಗೊತ್ತಿರಲಿಕ್ಕಿಲ್ಲ. ಛತ್ತೀಸ್ ಗಢದ ಧಮಾತ್ರಿ ಪ್ರದೇಶದಲ್ಲಿರುವ ಹಳ್ಳಿ. 57 ಮನೆಗಳಿವೆ ಅಷ್ಟೇ. ಈ ಹಳ್ಳಿ ಸುತ್ತಲೂ ಹಸಿರೋ ಹಸಿರು. ಹಳ್ಳಿ ಪಕ್ಕದಲ್ಲಿ ಕಾಜಲ್ ನದಿ ಹರಿಯುತ್ತಾಳೆ. ಇಂಥಾ ಹಳ್ಳಿ ಜನರು ಆ ಪ್ರದೇಶದ ಮೇಲೆ ತಮ್ಮ ಹಕ್ಕನ್ನು ಪಡೆದುಕೊಂಡರು.

ಇಷ್ಟೆಲ್ಲಾ ಆದರೂ ಆ ಹಳ್ಳಿಯವರಿಗೆ ಇದರಿಂದ ಏನು ಬದಲಾವಣೆ ಅನ್ನುವುದು ಗೊತ್ತಿರಲಿಲ್ಲ. ಮೊದಲು ಹೇಗಿದ್ದರೋ ಈಗಲೂ ಹಾಗೆ ಅಂದುಕೊಂಡರು. ಈ ಮೊದಲು ಕಾಡಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದಂತೆ ಆಮೇಲೂ ಬಳಸಿಕೊಳ್ಳಬಹುದು ಎಂದುಕೊಂಡರು. ಆದರೆ ಅದರಿಂದ ದೊಡ್ಡ ಬದಲಾವಣೆಯಾಗುತ್ತದೆ ಎಂದು ಅವರಿಗೆ ಗೊತ್ತಿರಲಿಲ್ಲ. ಒಬ್ಬ ವ್ಯಕ್ತಿಗೆ ಮಾತ್ರ ಅದು ದೊಡ್ಡ ಬದಲಾವಣೆ ತರುತ್ತದೆ ಎಂದು ನಂಬಿಕೆ ಇತ್ತು. ಅವರ ಹೆಸರು ರಜತ್ ಬನ್ಸಲ್. 

Jabrra-eco-tourism

ರಜತ್ ಧಮಾತ್ರಿಯ ಜಿಲ್ಲಾಧಿಕಾರಿಯಾಗಿದ್ದವರು. ಈ ಹಳ್ಳಿಯ ಜನರ ಲೈಫು ಬದಲಿಸಬೇಕು ಎಂದು ಆಸೆ ಪಟ್ಟರು. ಹಳ್ಳಿಯವರ ಜಾಗವನ್ನು ಹಳ್ಳಿಯವರೇ ಮಾರ್ಪಾಡು ಮಾಡುವಂತೆ ಮಾಡುವ, ಜಬಾರಾ ಎಂಬ ಹಳ್ಳಿಗೆ ನಾನಾ ಭಾಗದ, ನಾನಾ ದೇಶದ ಪ್ರವಾಸಿಗರು ಬರುವಂತೆ ಮಾಡುವ ಕನಸಿತ್ತು.

ಅದಕ್ಕಾಗಿ ಅವರು ಮೊದಲು ಆ ಜಾಗದ ಹಕ್ಕನ್ನು ಅರಣ್ಯ ಇಲಾಖೆಯಿಂದ ಪಡೆದು ಆ ಹಳ್ಳಿಯವರಿಗೆ ನೀಡಿದರು. ಅರಣ್ಯ ಸಂಪನ್ಮೂಲಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳುವ ಅನುಮತಿ ಸಿಕ್ಕಿತು. ಹಾಗಂತ ಅವರು ಅದನ್ನು ಹಾಳು ಮಾಡಿಕೊಳ್ಳುವಂತಿಲ್ಲ. ಆ ಹಳ್ಳಿಯವರಿಗೆ ಏನೇನು ಮಾಡಬಹುದು ಎಂಬ ಐಡಿಯಾಗಳನ್ನು ಕೊಟ್ಟರು. 

ಆರಂಭದಲ್ಲಿ ಅರಣ್ಯ ಇಲಾಖೆಯವರು ಕಾಡು ಹಾಳಾಗುತ್ತದೆ ಎಂದು ಹೆದರಿದರು. ಆದರೆ ರಜತ್ ತುಂಬಾ ಚೆನ್ನಾಗಿ ಪ್ಲಾನ್ ಮಾಡಿದ್ದರು. ಕಾಡಿಗೆ ಯಾವುದೇ ರೀತಿಯ ಹಾನಿಯಾಗದಂತೆ ಒಂದು ಪ್ರವಾಸಿ ತಾಣವನ್ನಾಗಿ ಆ ಜಾಗವನ್ನು ರೂಪಿಸಿದರು. 

ಆ ಹಳ್ಳಿಯಲ್ಲಿ ಸುಮಾರು ನೂರರಷ್ಟು ಔಷಧಿ ಸಸ್ಯಗಳಿದ್ದವು. ಅದನ್ನು ಅವರು ತಮ್ಮ ಬಳಕೆಗಾಗಿ ಬಳಸುತ್ತಿದ್ದಾರೆ. ಅದನ್ನು ಬೇರೆಯವರಿಗೂ ಉಪಯೋಗಿಸಬಹುದಲ್ಲ ಎಂದು ಆಲೋಚಿಸಿ ಅಲ್ಲೊಂದು ವೆಲ್ ನೆಸ್ ಸೆಂಟರ್ ಆರಂಭಿಸಿದರು. ಬೇರೆಯವರಿಗೂ ಆ ಔಷಧಿ ಸಸ್ಯಗಳು ಉಪಯೋಗ ಆಗುವಂತೆ ಮಾಡಿ ವೆಲ್ ನೆಸ್ ಟೂರಿಸಂ ಶುರು ಮಾಡಿದರು. 20 ಮಂದಿ ಹಳ್ಳಿಗರಿಗೆ ಅದಕ್ಕೆ ಬೇಕಾದ ತರಬೇತಿ ನೀಡಿ ಹೋಮ್ ಸ್ಟೇ ಥರದ ವ್ಯವಸ್ಥೆ ಕಲ್ಪಿಸಿ ಅಷ್ಟೂ ಮಂದಿಗೆ ಉದ್ಯೋಗ ದೊರೆಯುವಂತೆ ಮಾಡಿದರು.

ಇದರ ಜೊತೆ ಇಕೋ ಟೂರಿಸಂ ಕಲ್ಪನೆ ಜಾರಿಗೆ ತಂದರು. ಅಲ್ಲಿಗೆ ಆಹಾರ ಸವಿಯುವ ಯೋಜನೆ, ಪ್ರಕೃತಿಯಲ್ಲಿ ನಡೆಯುವುದುವು, ಕಾಡಲ್ಲಿ ಧ್ಯಾನ ಮಾಡುವುದು, ಫಿಶ್ ಸ್ಪಾ ಹೀಗೆ ಬೇರೆ ಬೇರೆ ಯೋಜನೆಗಳೆಲ್ಲಾ ಸೇರಿ ಆ ಹಳ್ಳಿಯೇ ಪ್ರವಾಸಿಗರಿಗೆ ತೆರೆದುಕೊಂಡಿತು. 2019ರ ಆಗಸ್ಟ್ 20ರಂದು ಆ ಹಳ್ಳಿ ಹೊಸದಾಗಿ ರೂಪುಗೊಂಡು ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಯಿತು.

ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ: ಸಿಂಧೂ ಪ್ರದೀಪ್

ಹಳ್ಳಿಗರು ಮೊದಲಿಗೆ ಹೊರಗಿನವರನ್ನು ನಂಬಲಿಲ್ಲ. ನಂಬಿಕೆ ಬರಲು ಸುಮಾರು ತಿಂಗಳುಗಳು ಬೇಕಾದವು. ಈಗ ಆ ಪುಟ್ಟ ಹಳ್ಳಿಗೆ ಬೇರೆ ಬೇರೆ ದೇಶಗಳ ಜನ ಬರುತ್ತಾರೆ. ಹಳ್ಳಿಗರು ಒಳ್ಳೆಯ ಆದಾಯ ಪಡೆಯುತ್ತಾರೆ. ಹಳ್ಳಿಗರಿಂದಾಗಿ ಅಲ್ಲಿಗೆ ಬರುವ ನಗರದವನೂ ತಮ್ಮ ಲೈಫ್ ಸ್ಟೈಲ್ ಬದಲಾವಣೆ ಮಾಡಿದ್ದೂ ಇದೆ.

ಇದರಿಂದ ಹೀಗೆ ಹಳ್ಳಿಯನ್ನು ಬದಲಾಯಿಸುವುದು ಸರಿಯೇ ಎಂಬ ಪ್ರಶ್ನೆಯೂ ಹುಟ್ಟಬಹುದು. ಅದಕ್ಕೆ ಉತ್ತರ ಪ್ರವಾಸಿಗರ ಕೈಯಲ್ಲೇ ಇದೆ. ಆಯಾಯ ಜಾಗಕ್ಕೆ ನಾವು ಕೊಡುವ ಗೌರವ ಕೊಟ್ಟುಕೊಂಡು, ಜವಾಬ್ದಾರಿಯುತವಾಗಿ ನಡೆದುಕೊಂಡರೆ ಎಲ್ಲವೂ ಚೆನ್ನಾಗಿರುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button