ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ: ಸಿಂಧೂ ಪ್ರದೀಪ್

ಸಾಸಿವೆ ತಂದವಳು ಎಂದೇ ಪ್ರಖ್ಯಾತಿ ಹೊಂದಿರುವ ಭಾರತಿ ಬಿ ವಿ ಅವರು ಹುಟ್ಟಿದ್ದು ಕೊಳ್ಳೇಗಾಲದಲ್ಲಿ, ಬೆಳೆದಿದ್ದು ಮೈಸೂರಿನ ಸುತ್ತ ಮುತ್ತಲ ಊರುಗಳು ಹಾಗೂ ಬೆಂಗಳೂರು. ಎರಡು ಕವನ ಸಂಕಲನಗಳು, ಗದ್ಯ ಬರಹಗಳು ಹಾಗೂ ಪ್ರವಾಸ ಕಥನಗಳನ್ನು ಬರೆದಿರುವ ಇವರಿಗೆ ಪ್ರವಾಸ ಮಾಡುವುದು, ದೇಶ ಸುತ್ತುವುದು ಅಂದ್ರೆ ಅಚ್ಚುಮೆಮೆಚ್ಚು. ಈಗಾಗಲೇ 12 ದೇಶ ಸುತ್ತಿದ್ದಾರೆ. ಕ್ಯಾನ್ಸರ್ ಗೆದ್ದು ಯಾವಾಗಲೂ ಲವಲವಿಕೆಯಿಂದ ಇರುವ ಇವರ ಇವರ ಜೀವನೋತ್ಸಾಹ ಎಲ್ಲರಿಗೂ ಸ್ಫೂರ್ತಿ. 

  • ಸಿಂಧೂ ಪ್ರದೀಪ್ 

ಭಾರತಿ ಬಿವಿ ಬರಹಗಾರ್ತಿಯಾಗಿ ಹೆಚ್ಚು ಪರಿಚಿತೆ. ಆದರೆ ಇವರೊಬ್ಬ ಪ್ರವಾಸದ ಹುಚ್ಚು ಅಂಟಿಸಿಕೊಂಡಿರುವ ಜೀವನೋತ್ಸಾಹಿ. ಬಿಡುವಿನ ವೇಳೆಯಲ್ಲಿ ಕುಟುಂಬದವರ ಜೊತೆಗೆ ಹಾಗೂ ಗೆಳತಿಯರ ಜೊತೆಗೆ ಸುತ್ತಾಡುವುದೆಂದರೆ ಇವರಿಗೆ ಬಹಳ ಇಷ್ಟ, ಅವಕಾಶ ಸಿಕ್ಕರೆ ಇದುವರೆಗೂ ಮಾಡಿರದ ಸೋಲೋ ಟ್ರಾವೆಲಿಂಗ್ ಮಾಡಬೇಕೆನ್ನುವುದು ಇವರ ದೊಡ್ಡಾಸೆ. ಇವರು ಇಟಲಿ, ಸ್ವಿಟ್ಜರ್ಲೆಂಡ್(switzerland), ಟರ್ಕಿ, ಶ್ರೀಲಂಕಾ, ಪೋಲ್ಯಾಂಡ್(poland) ಸೇರಿದಂತೆ ಸುಮಾರು 10ರಿಂದ 12 ದೇಶಗಳನ್ನು ಸುತ್ತಿದ್ದಾರೆ.

ಸುಮಾರು 8 ವರ್ಷಗಳಿಂದ ಪ್ರಾರಂಭಿಸಿದ ಪ್ರವಾಸ ಜೀವನದಲ್ಲಿ ಕಾಂಬೋಡಿಯಾ ಪ್ರವಾಸ ಇವರಿಗೆ ಬಹಳ ಮನಸಿಗೆ ಹತ್ತಿರವಾದದ್ದು ಹಾಗೂ ಬಹಳ ಇಷ್ಟಪಟ್ಟ ದೇಶ ಎಂದು ಹೇಳುತ್ತಾರೆ.

ನೀವು ಇದನ್ನು ಇಷ್ಟಪಡಬಹುದು: 4 ವರ್ಷ, 17 ದೇಶ, ಸುತ್ತಾಟದಲ್ಲಿಯೇ ದಿನ ಕಳೆಯುತ್ತಿರುವ ಅವಿನಾಶ್, ರುಚಿಕ

ಸಣ್ಣ ಪುಟ್ಟ ಕಷ್ಟಗಳಿಗೆ ಜೀವನವೇ ಬೇಡ ಎಂದು ಕೊರಗುವವರ ಮಧ್ಯ ಇವರು ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ನಮ್ಮೆಲ್ಲರಿಗೂ ದೊಡ್ಡ ರೋಲ್ ಮಾಡೆಲ್(role model) ಆಗಿರುವುದಲ್ಲದೆ ಜೀವನ ದೊಡ್ಡ ಪಾಠವನ್ನೇ ಹೇಳಿ ಕೊಟ್ಟಿದ್ದಾರೆ. ಎಲ್ಲರಿಗೂ ನಾನಾ ರೀತಿಯ ಕೊರತೆಗಳು ಇರುತ್ತದೆ. ಆದರೆ ಆ ಕೊರತೆಗಳೇ ಎಲ್ಲದರಿಂದ ಹಿಂದೆ ಉಳಿಯುವಂತೆ ಮಾಡಬಾರದು, ಅವುಗಳನ್ನು ಗೆದ್ದು ಮುಂದೆ ಬಂದು ನಮ್ಮನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳುವ ಇವರು ಭಾರಿ ಕ್ರಿಯಾಶೀಲ ವ್ಯಕ್ತಿ.

ಸಸ್ಯಾಹಾರಿಗಳ ಸಮಸ್ಯೆ

ಅಪ್ಪಟ ಸಸ್ಯಾಹಾರಿಯಾಗಿರುವ ಇವರಿಗೆ ಬೇರೆ ದೇಶಗಳಿಗೆ ಹೋದಾಗ ಆರಂಭದಲ್ಲಿ ಬಹಳಷ್ಟು ಕಷ್ಟ ಆಗಿದ್ದಂತೂ ನಿಜ. ಬೆಳಗಿನ ಉಪಾಹಾರಕ್ಕೆ ಎಲ್ಲಾ ಕಡೆಯಲ್ಲೂ ಬ್ರೆಡ್ ಹಾಗೂ ಕೆಲವು ಹಣ್ಣುಗಳು, ಸಲಾಡ್ ಗಳು ಸಿಗುತ್ತಿದ್ದವು. ಆದರೆ ಮಧ್ಯಾಹ್ನದ ಹಾಗೂ ರಾತ್ರಿಯ ಊಟಕ್ಕೆ ಸ್ವಲ್ಪ ಕಷ್ಟ ಆಗುತ್ತಿತ್ತು. ಈಗ ಎಲ್ಲೇ ಹೋದರೂ ಚಟ್ನಿ ಪುಡಿ ಹಿಡಿದುಕೊಂಡು ಹೋಗುತ್ತೇನೆ, ಅದೇ ನನ್ನ ಜೀವ ರಕ್ಷಕ. 

ಅನ್ನದ ಜೊತೆ ಚಟ್ನಿ ಪುಡಿ ಇದ್ದರೆ ಸಾಕು ಕೆಲವು ತರಕಾರಿಗಳನ್ನು ಬೇಯಿಸಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಮನೆ ಊಟ ಮಾಡುವುದು ಸಹಜ. ಆದರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಅಲ್ಲಿನ ಆಹಾರವನ್ನೂ ಖುಷಿಯಿಂದ ಸ್ವೀಕರಿಸಬೇಕು. ಹಾಗೆಯೇ ಅದು ಯಾವ ಸ್ಥಳವೇ ಆಗಿರಲಿ ಅಲ್ಲಿನ ಸ್ಥಳೀಯ ಸಂಪ್ರದಾಯಕ್ಕೆ ಆದಷ್ಟೂ ಹೊಂದಿಕೊಳ್ಳಬೇಕು ಎಂದು ಹೇಳುತ್ತಾರೆ.

ಒಮ್ಮೆ ವಿಯೆಟ್ನಾಮ್ ಗೆ(vietnam) ತಮ್ಮ ಕುಟುಂಬದ ಜೊತೆಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ಸ್ಥಳೀಯ ಟ್ಯಾಕ್ಸಿ ಡ್ರೈವರ್(taxi driver) ಇವರು ತಂಗಿದ್ದ ಹೋಟೆಲ್ ಬಳಿ ಇಳಿಸಿ ತಡರಾತ್ರಿ ಇಲ್ಲಿ ಹೊರಗಡೆ ಓಡಾಡಬೇಡಿ, ಇಲ್ಲಿ ತುಂಬಾ ಕಳ್ಳ ಖದೀಮರ ಕಾಟ ಇದೆ. ಪ್ರವಾಸಿಗಳನ್ನು ಹೆದರಿಸಿ ಕಳ್ಳತನ ಮಾಡುತ್ತಾರೆ ಎಂದು ಎಚ್ಚರಿಕೆ ಕೊಟ್ಟು ಹೋದ. ಆದರೆ ಭಾರತಿ ಅವರು ತಡರಾತ್ರಿ ತಮ್ಮ ಮಗನ ಜೊತೆ ಆಹಾರದ ಹುಡುಕಾಟದಲ್ಲಿ ತಾವು ತಂಗಿದ್ದ ಹೊಟೇಲ್ ನಿಂದ ಕೆಲವು ದೂರ ಕ್ರಮಿಸಿ ವಾಪಸ್ಸಾದರಂತೆ, ಅಂದು ಟ್ಯಾಕ್ಸಿ ಚಾಲಕ ಹೇಳಿದ ರೀತಿ ಯಾವುದೇ ಘಟನೆ ಸಂಭವಿಸಲಿಲ್ಲ ಎನ್ನುತ್ತಾರೆ ಅವರು. ಯಾವುದೇ ಸ್ಥಳವಿರಲಿ ಮಾಹಿತಿ ಇಲ್ಲದೇ ಭಂಡ ಧೈರ್ಯಮಾಡಿ ಓಡಾಡುವ ಮೊದಲು ಸ್ವಲ್ಪ ಎಚ್ಚರ ವಹಿಸಿ ಎಂದು ಹೇಳುತ್ತಾರೆ.

ಪ್ರವಾಸ ಎಂದ ಕೂಡಲೇ ತುದಿಗಾಲಲ್ಲಿ ನಿಂತು ತಯಾರಾಗುವ ಭಾರತಿ ಅವರು ಅಲ್ಲಿ ಏನೇ ಇದ್ದರೂ ಹೇಗೆ ಇದ್ದರು ಪ್ರವಾಸದ ಕ್ಷಣಗಳನ್ನು ಎಂಜಾಯ್ ಮಾಡುವುದಷ್ಟೇ ಇವರ ಮುಖ್ಯ ಉದ್ದೇಶವಾಗಿರುತ್ತದೆ.

ಈಜಿಪ್ಟ್ ಹೋದಾಗ ಆದ ಅನುಭವ

ಇವರ ಮತ್ತೊಂದು ಅನುಭವವೆಂದರೆ, ಒಮ್ಮೆ ಇವರ ಪತಿಯ ಜೊತೆಗೆ ಈಜಿಪ್ಟ್ ಹೋಗಿದ್ದಾಗ ಅಲ್ಲಿನ ಸಿನೈ ಮರುಭೂಮಿ(sinai desert)ಗೆ ಬೇಟಿ ನೀಡಿದ್ದರು. ಅಲ್ಲಿಂದ ವಾಪಸ್ ಬಂದ ಮೇಲೆ ಅಲ್ಲಿ ಐಸಿಸ್ ಉಗ್ರರ ದಾಳಿ ನಡೆದಿತ್ತು. ಆದರೆ ಇವರು ಇರುವ ಸ್ಥಳದಲ್ಲಿ ಅಂತಹ ಯಾವುದೇ ಅಹಿತಕರ ಘಟನೆಗಳು ಸಂಭವಿಸಿರಲಿಲ್ಲ. ಈ ದಾಳಿಯ ವಿಷಯ ಕೇಳಿದ ಭಾರತಿಗೆ ಅವರ ಮಗ ಕರೆ ಮಾಡಿ ಬೈಯಲು ಪ್ರಾರಂಭಿಸಿದರಂತೆ, ಅಪ್ಪ ಅಮ್ಮ ನೀವಿಬ್ಬರು ಯಾಕೆ ಹೀಗೆ ಭಂಡ ಧೈರ್ಯ ಮಾಡುತ್ತೀರಾ, ಸಹಜ ದಿನಗಳಲ್ಲೇ ಅಲ್ಲಿನ ಸ್ಥಳಗಳಿಗೆ ಭೇಟಿ ನೀಡುವುದು ಸುರಕ್ಷಿತವಲ್ಲ ಅಂಥದ್ದರಲ್ಲಿ ನೀವು ಈ ಸಮಯದಲ್ಲಿ ಭೇಟಿ ನೀಡಿದ್ದೀರಲ್ಲ ಎಂದು ಕಾಳಜಿಯಿಂದ ಬೈಯುವ ಮಗನ ಮಾತನ್ನು ನೆನಪಿಸಿಕೊಂಡು ಈಗಲೂ ನಗುತ್ತಾರೆ.

ಭಾರತಿ ಅವರೇ ಹೇಳುವಹಾಗೆ ಇವರಿಗೆ ಆಹಾರದ ಹಸಿವಿಗಿಂತ ಪ್ರವಾಸದ ಹಸಿವು ಜಾಸ್ತಿ ಅಂತೆ, ಎಷ್ಟು ಸುತ್ತಿದರೂ ಮತ್ತಷ್ಟು ಸುತ್ತಬೇಕು, ಇನ್ನೊಂದಷ್ಟು ಸ್ಥಳಗಳಿಗೆ ಭೇಟಿನೀಡಬೇಕೆನ್ನುವ ಹಸಿವು, ಮೈ ಮನಸ್ಸಿಗೆ ಯಾವುದೇ ಊನಗಳಿದ್ದರೂ ಈ ಪ್ರವಾಸ ಎನ್ನುವುದು ಎಲ್ಲವನ್ನೂ ಮರೆಸುತ್ತದೆ ಎಂದು ಹೇಳುವ ಇವರು ಇದಕ್ಕಾಗಿಯೇ ಇನ್ನೂ ಹಲವಾರು ದೇಶಗಳನ್ನು ಭೇಟಿ ನೀಡಲು ಕಾಯುತ್ತಿದ್ದಾರೆ. ಕಳೆದ ವರ್ಷ ಮಧ್ಯಪ್ರದೇಶ ಹಾಗೂ ಪೂರ್ವ ಯೂರೋಪ್ ಗೆ(est europe) ಭೇಟಿ ನೀಡಲು ಇಚ್ಛಿಸಿದ್ದರು. ಆದರೆ ದೇಶದೆಲ್ಲೆಡೆ ಹಬ್ಬಿದ ಕೊರೋನಾದಿಂದ ಎಲ್ಲವೂ ರದ್ದುಗೊಂಡಿತು.

ಈ ವರ್ಷ ಪೂರ್ವ ಯೂರೋಪ್ ಗೆ ಭೇಟಿ ನೀಡುತ್ತೇನೆ ಎನ್ನುವ ಭಾರತಿಯವರ ಜೀವನೋತ್ಸಾಹ ಎಲ್ಲರಿಗೂ ಸ್ಫೂರ್ತಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button