ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

4 ವರ್ಷ, 17 ದೇಶ, ಸುತ್ತಾಟದಲ್ಲಿಯೇ ದಿನ ಕಳೆಯುತ್ತಿರುವ ಅವಿನಾಶ್, ರುಚಿಕ: ಅಪರೂಪದ ಜೋಡಿಯ ಕತೆ ಹೇಳಿದ ಸುಜಯ್

ಪ್ರತಿಯೊಬ್ಬರ ಜೀವನಶೈಲಿಯೂ ಒಂದೊಂದು ರೀತಿಯಲ್ಲಿ ಭಿನ್ನವೇ ಆಗಿರುತ್ತದೆ. ಅದರಲ್ಲಿ ಇನ್ನೂ ಸೂಪರ್ ಸ್ಪೆಷಲ್ ಆಗಿ ಬದುಕುವವರು ಕೆಲವರಿರುತ್ತಾರೆ. ಅಂತಹ ಒಂದು ಜೋಡಿ ಅವಿನಾಶ್ ಶಾಸ್ತ್ರಿ ಮತ್ತು ರುಚಿಕ ಶಂಕರ್. 2016ರಲ್ಲಿ ಮದುವೆಯಾದ ನಾಲ್ಕೇ ತಿಂಗಳಲ್ಲಿ ಸೂಟ್ ಕೇಸ್ ಹಿಡಿದು ಜಗತ್ತು ಸುತ್ತಲು ಹೊರಟ ಅವರು ಸದ್ಯ ಮೆಕ್ಸಿಕೋದಲ್ಲಿದ್ದಾರೆ. ಪ್ರವಾಸದಲ್ಲಿಯೇ ಬದುಕು ಸಾಗಿಸುತ್ತಿರುವ ಅಪರೂಪದ ಜೋಡಿಯನ್ನು ಪರಿಚಯಿಸಿರುವುದು ಪುತ್ತೂರಿನ ಹುಡುಗ ಸುಜಯ್ ಪಿ.

 ಶಿವಮೊಗ್ಗದ ಅವಿನಾಶ್ ಶಾಸ್ತ್ರಿ ಮತ್ತು ಡೆಲ್ಲಿಯ ರುಚಿಕ ಶಂಕರ್, 2016 ಜುಲೈಯಲ್ಲಿ ಮೈಸೂರಲ್ಲಿ ಮದುವೆಯಾದರು. ಮದುವೆಯಾದ ನಾಲ್ಕು ತಿಂಗಳಲ್ಲಿ ಅಂದರೆ 2016 ನವೆಂಬರಲ್ಲಿ ಎರಡು ಸೂಟ್ ಕೇಸ್ ಗಳೊಂದಿಗೆ ಮೊದಲು ಕಾಲಿಟ್ಟಿದ್ದು ವಿಯೆಟ್ನಾಂಗೆ. ಈಗ 2021 ಫೆಬ್ರವರಿಯಲ್ಲಿ ನಾನು ಅವರನ್ನು ಸಂಪರ್ಕಿಸಿದಾಗ ಮೆಕ್ಸಿಕೋದಲ್ಲಿದ್ದರು.(mexico)

ಅವರು ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 17 ದೇಶಗಳನ್ನು ಸುತ್ತಿದ್ದಾರೆ. Nepal, Philippines, Taiwan, Singapore, Vietnam, Thailand, Cambodia, Indonesia, Malaysia, Japan, Hongkong, USA, Mexico, Colombia, Peru, Bolivia, Chile ಇವಿಷ್ಟು ಈ ಜೋಡಿ ಸುತ್ತಾಡಿದ ದೇಶಗಳು. 

ಕೋವಿಡ್ ಆರಂಭದ ಸಮಯದಲ್ಲಿ ಮೆಕ್ಸಿಕೋಗೆ ಬಂದವರು ಕಳೆದ ಆರು ತಿಂಗಳಿಗಿಂತಲೂ ಹೆಚ್ಚಿನ ಕಾಲ ಅಲ್ಲೇ ಇದ್ದಾರೆ. ನಾಲ್ಕು ವರ್ಷಗಳಲ್ಲಿ ಅತಿಹೆಚ್ಚು ಸಮಯ ಕಳೆದದ್ದು ಇದೇ ದೇಶದಲ್ಲಿ ಅನ್ನುತ್ತಾರೆ ಈ ಜೋಡಿ. ಸದ್ಯ ಮೆಕ್ಸಿಕೋದಲ್ಲಿ ಕೋವಿಡ್ ನಂತರ humanity basis ಮೇಲೆ ವೀಸಾ extend ಮಾಡಿದ್ದರಿಂದ ಅಲ್ಲೇ ಇದ್ದಾರೆ. 

ದುಡ್ಡಿಗೆ ಏನ್ ಮಾಡ್ತೀರಿ?

‘Living out of a suitcase without a home’ ಎಂಬ ಸ್ಲೋಗನ್ ನೊಂದಿಗೆ ಬದುಕುತ್ತಿರುವ ಇವರದ್ದು ಸಾಮಾನ್ಯರಿಗಿಂತ ಭಿನ್ನವಾದ ಜೀವನಶೈಲಿ. ಮೂಲತಃ ಪಯಣವನ್ನು ಇಷ್ಟಪಡುತ್ತಿದ್ದ ಅವಿನಾಶ್, ರುಚಿಕಾರನ್ನು ಮದುವೆಯಾಗುವ ಮೊದಲೇ ಚಿಲಿ, ವಿಯೆಟ್ನಾಂ ದೇಶಗಳಿಗೆ ಟ್ರಾವೆಲ್ ಮಾಡಿದ ಅನುಭವ ಇದ್ದವರು. ರುಚಿಕಾ ಅವರದ್ದೂ ಇದೇ ರೀತಿಯ ಅಭಿರುಚಿ ಇದ್ದುದರಿಂದ ಬೇಗನೆ ಸ್ನೇಹಿತರಾದರು. ಮದುವೆಗೂ ಮೊದಲು ಸ್ನೇಹಿತರಾಗಿ ಇದ್ದಾಗಲೆ ಒಂದು ಅಥವಾ ಎರಡು ವರ್ಷದ ಟ್ರಾವೆಲ್ ಪ್ಲಾನ್ ಮಾಡಿದ್ದರಂತೆ. ಆದರೆ ಈಗ ನಾಲ್ಕು ವರ್ಷ ಕಳೆದರೂ ಇವರ ಪಯಣ ಮುಂದುವರೆದಿದೆ. 

ದುಡ್ಡಿಗೆ ಏನು ಮಾಡ್ತೀರಿ? ಅನ್ನೋದು ಎಲ್ಲರೂ ಕೇಳೋ ಪ್ರಶ್ನೆ ಆಗಿರೋದ್ರಿಂದ ನಾನು ಕೇಳುವ ಮೊದಲೇ ಅವರೇ ಉತ್ತರಿಸಿದರು. ಅವಿನಾಶ್ ಪ್ರೋಗ್ರಾಮರ್ ಕೆಲಸ ಮಾಡೋದ್ರಿಂದ ಅವರಿಗೆ ಒಂದು ಕಡೆ ಇದ್ದು ಕೆಲಸ ಮಾಡುವ ಅವಶ್ಯಕತೆ ಇರೋದಿಲ್ಲ. ಅವರಿಗೊಂದು ಲ್ಯಾಪ್‌ಟಾಪ್ ಮತ್ತು ಇಂಟರ್ ನೆಟ್ ಇದ್ದರೆ ಸಾಕು ಅವರು ಕೆಲಸ ಮಾಡಬಹುದು, ಗಳಿಸಬಹುದು. 

ಅದೇ ರೀತಿ ಮೂಲತಃ ಲಾಯರ್ ಆಗಿದ್ದ ರುಚಿಕಾ ಅವರು ಈಗ ಇವರಿಬ್ಬರ second breakfast ಅನ್ನೋ ಯೂಟ್ಯೂಬ್ ಚಾನಲ್‌ ನಿರ್ವಹಿಸುವುದರ ಮೂಲಕ ಭೇಟಿ ನೀಡಿದ ಪ್ರತಿಯೊಂದು ಜಾಗದ ಬಗ್ಗೆ ವಿಡಿಯೋ ಮಾಹಿತಿ ನೀಡುತ್ತಾರೆ‌. ಯೂಟ್ಯೂಬ್‌ನಿಂದಲೂ ಸ್ವಲ್ಪ ಮಟ್ಟಿನ ಆದಾಯವಿದೆ ಎನ್ನುತ್ತಾರೆ.

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಎಲ್ಲಾ ದೇಶ ನೋಡಬೇಕು

ಪ್ರಪಂಚದ ಪ್ರತಿಯೊಂದು ದೇಶ ಸುತ್ತಬೇಕು, ಅಲ್ಲಿನ ಜನರ ಕಲೆ, ಆಹಾರ ಪದ್ಧತಿ ತಿಳಿಯಬೇಕು. ಜನರ ಜೀವನಶೈಲಿಯನ್ನು ಅನುಭವಿಸಬೇಕು ಅನ್ನೋದು ಈ ಜೋಡಿಯ ಪಯಣದ ಗುರಿ. ಅದಕ್ಕಾಗಿ ಪ್ರತಿ ದೇಶದಲ್ಲಿ ಕನಿಷ್ಠ ಎರಡರಿಂದ ಮೂರು ತಿಂಗಳುಗಳ ಕಾಲ ಇದ್ದು, ಕಳೆದ ನಾಲ್ಕು ವರ್ಷಗಳಲ್ಲಿ 17 ದೇಶಗಳನ್ನು ಮಾತ್ರ ಸುತ್ತಾಡಿದ್ದಾರೆ. ತಾವು ಭೇಟಿ ನೀಡಿದ ಪ್ರತಿ ದೇಶಗಳಲ್ಲೂ ಗೆಳೆಯರನ್ನು ಮಾಡಿಕೊಂಡಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. 

ಇನ್ನು ಇವರ ನಾಲ್ಕು ವರ್ಷದ ನೆನಪಿನ ಬುತ್ತಿಯನ್ನು ಕೆದಕಿದರೆ ಕೆಲವು ಸ್ವಾರಸ್ಯಕರ ಘಟನೆಗಳು ಸಿಕ್ಕವು.

ಅವುಗಳಲ್ಲೊಂದು ಮಲೇಷಿಯಾದಲ್ಲಿದ್ದಾಗ ನಡೆದ ಘಟನೆ.

ಮಲೇಷಿಯಾದಲ್ಲಿ ಇದ್ದಾಗ ಸಮೀಪದ ಬೊರ್ನಿಯೋ ದ್ವೀಪದಲ್ಲಿ ಇಬ್ಬರದೂ ದಾಖಲೆಗಳು, ಐಡೆಂಟಿಟಿ ಕಾರ್ಡ್ಸ್, ಎಟಿಎಂಗಳು ಇದ್ದ ಬ್ಯಾಗ್ ಕಳೆದುಕೊಂಡರು. ಅದು ತಮ್ಮ ಪ್ರವಾಸ ಜೀವನದ ಅತ್ಯಂತ ಕಠಿಣ ಸಂದರ್ಭ ಅನ್ನುತ್ತಾರೆ ಅವರು. ಅದೃಷ್ಟವಶಾತ್ ಪಾಸ್‌ಪೋರ್ಟ್ ಮಾತ್ರ ಅವರ ಜೊತೆಯೇ ಉಳಿದುಕೊಂಡಿತ್ತು.

ಆ ಸಂದರ್ಭದಲ್ಲಿ ಭಾರತದಿಂದ ನೇರವಾಗಿ ಹಣ ವರ್ಗಾವಣೆಯೂ ಸಾಧ್ಯವಾಗದೇ ಅಮೇರಿಕಾದಲ್ಲಿರುವ ಮಿತ್ರನೊಬ್ಬನ ಮುಖಾಂತರ ಸ್ಥಳೀಯ ಕಫೆ ಮ್ಯಾನೇಜರ್ ಒಬ್ಬರ ಅಕೌಂಟಿಗೆ ಹಣ ಕಳುಹಿಸಿ ಅಲ್ಲಿಂದ ನೇರವಾಗಿ  ಭಾರತಕ್ಕೆ ಬಂದು ಮೂರು ತಿಂಗಳುಗಳ ಕಾಲ ಪ್ರತಿಯೊಂದು ದಾಖಲೆಗಳು, ಐಡೆಂಟಿಟಿ ಕಾರ್ಡ್‌ಗಳನ್ನು ಮಾಡಿಸಿಕೊಂಡು ಮತ್ತೆ ಪ್ರಯಾಣ ಮುಂದುವರೆಸಿದ್ದರು.

ಟ್ರಾವೆಲರ್ಸ್‌‌ ಇಂತಹ ಅನಿರೀಕ್ಷಿತ ಘಟನೆಗಳಿಗೆ ರೆಡಿ ಇರಬೇಕಾಗುತ್ತದೆ ಅನ್ನುವ ಅವಿನಾಶ್, “ಯಾವತ್ತೋ ಒಂದು ದಿನ ನಮ್ಮ ಪಾಸ್‌ಪೋರ್ಟ್ ಕೂಡ ಕಳೆದು ಹೋಗುತ್ತದೆ ಎಂದು ನನಗೆ ಈಗಲೇ ತಿಳಿದಿದೆ” ಎಂದು ನಗುತ್ತಾರೆ. 

ಪೆರು ದೇಶದಲ್ಲಿ ಸಿಕ್ಕ ಭಾರತೀಯ

ಇನ್ನೊಂದು ಘಟನೆಯನ್ನು ವಿವರಿಸುತ್ತಾ, ಪೆರು ದೇಶಕ್ಕೆ ಭೇಟಿಕೊಟ್ಟಿದ್ದಾಗ ಅಲ್ಲಿನ ಕೂಸ್ಕೋ(peru cusco) ಎಂಬ ಪಟ್ಟಣದಲ್ಲಿ ಇಂಡಿಯನ್ ರೆಸ್ಟೋರೆಂಟ್ ಒಂದು ಕಾಣಸಿಕ್ಕಿ ಒಳಹೋದಾಗ ಅದು ಅಮಿತ್ ಅನ್ನೋ ಭಾರತೀಯನ ರೆಸ್ಟೋರೆಂಟ್ ಆಗಿರುತ್ತದೆ. 

ಅಮಿತ್ ಮೂಲತಃ ಒಬ್ಬ ಚೆಫ್. ಹಲವು ಹೋಟೆಲ್‌ಗಳಲ್ಲಿ ಕೆಲಸ ಮಾಡಿದ ಅನುಭವವಿದ್ದವರು. ಜೊತೆಗೆ ತಿರುಗಾಟದ ಹುಚ್ಚಿದ್ದವರು. ಒಮ್ಮೆ ಪೆರುವಿನ ಕೂಸ್ಕೋಗೆ ಬಂದ ಅಮಿತ್ ಅಲ್ಲಿನ ಪರಿಸರ ಇಷ್ಟಪಟ್ಟು, ಸ್ಥಳೀಯ ಬ್ಯಾಂಕ್ ಒಂದರಿಂದ ಸಾಲ ಪಡೆದು ರೆಸ್ಟೋರೆಂಟ್ ಆರಂಬಿಸಿದ್ದರು.

ಭಾರತದ ಉತ್ತರಾಖಂಡದ ಗರ್ವಾಲ್ ಅನ್ನೋ ಪ್ರದೇಶದ ಅಮಿತ್ ಅವರಿಗೆ ಪ್ರಪಂಚದ ಇನ್ಯಾವುದೋ ಭಾಗದ ಪೆರುವಿನ ಕೂಸ್ಕೋ ನಗರ ಕೂಡಾ ತನ್ನದೇ ಸ್ವಂತ ಊರಿನಂತೆ ಆಶ್ರಯ ನೀಡುತ್ತದೆ ಅನ್ನೋದು ತುಂಬಾ ಸ್ವಾರಸ್ಯಕರ ಸಂಗತಿ ಅನ್ನುತ್ತಾರೆ ಅವಿನಾಶ್. 

ಮನುಷ್ಯ ಪ್ರೀತಿ ಎಲ್ಲಾ ಕಡೆ ಒಂದೇ

ಪ್ರಪಂಚದ ಪ್ರತಿಯೊಬ್ಬ ಮನುಷ್ಯನೂ ಬೇರೆ ಬೇರೆ ಹಿನ್ನೆಲೆಯಿಂದ ಬಂದಿದ್ದರೂ ಆತನೊಳಗಿರುವ ಮನುಷ್ಯಪ್ರೀತಿ, ಭಯ, ಭಾವನೆಗಳೆಲ್ಲ ಒಂದೇ ಎನ್ನುವುದು ನಮಗಾದ ಬಿಗ್ಗೆಸ್ಟ್ ರಿಯಲೈಸೇಶನ್ ಅನ್ನೋದು ಅವಿನಾಶ್-ರುಚಿ ಜೋಡಿಯ ಮನದ ಮಾತು.

ಮೈಸೂರಿನಲ್ಲಿರುವ ಮಿತ್ರನಿಗೂ ಪೆರುವಿನ ದಾರಿಯೊಂದರಲ್ಲಿ ಸಿಕ್ಕಿ ದೂರದ ದಾರಿ ನಡೆಯಲು ಜೊತೆಯಾದ ಅಪರಿಚಿತ ಮಿತ್ರನಿಗೂ ಇರುವ ಮನಸ್ಸು ಎರಡೂ ಒಂದೇ ಅನ್ನೋದು ಕಲಿತೆವು ಎಂದು ಖುಷಿಯಿಂದ ಹೇಳುತ್ತಾರೆ. 

ಜನರ ಆಹಾರ ವೈವಿಧ್ಯತೆಯ ಕುರಿತಾಗಿ ತುಂಬಾನೇ ಆಸಕ್ತಿ ಇರುವ ಈ ಜೋಡಿ, ಸದ್ಯ ಇವರು ಇರುವ ಮೆಕ್ಸಿಕೋದಲ್ಲಿ ಕಳೆದ ವರ್ಷದ ಭಾರತದ ಸ್ವಾತಂತ್ರ್ಯ ದಿನದಂದು ಅಲ್ಲಿನ ಸ್ಥಳೀಯ ಜನರಿಗೆ ಇಡ್ಲಿ, ದೋಸೆ, ಉಪ್ಪಿಟ್ಟು ಮುಂತಾದ ಸೌತ್ ಇಂಡಿಯನ್ ತಿಂಡಿಗಳನ್ನು ಮಾಡುವ ಕ್ಲಾಸ್ ಕೂಡಾ ಕೊಟ್ಟಿದ್ದಾರಂತೆ. 

ಇನ್ನೊಂದು ಸಂಗತಿ ಏನೆಂದರೆ ಭೇಟಿ ನೀಡಿದ ದೇಶದ ಸ್ಥಳೀಯ ಜನರ ಆಹಾರ ಶೈಲಿಯ ಅನುಭವ ಸಿಗಲು ಮೂಲತಃ ಸಸ್ಯಾಹಾರಿ ಆಗಿದ್ದ ಅವಿನಾಶ ಅವರು ಕಳೆದ ಎರಡು ವರ್ಷಗಳಿಂದ Non vegetarian ಆಗಿ ಬದಲಾಗಿಬಿಟ್ಟಿದ್ದಾರೆ. ಟ್ರಾವೆಲ್ ಮಾಡಿದ ಜಾಗವನ್ನು ಇನ್ನೊಂದು ಜಾಗಕ್ಕೆ ಹೋಲಿಕೆ ಮಾಡೋಕೆ ಹೋಗಬೇಡಿ ಅನ್ನೋದು ಟ್ರಾವೆಲರ್ಸ್‌‌ಗೆ ಈ ಜೋಡಿ ಕೊಡುವ ಟಿಪ್ಸ್. ನೀವು ಹೋದ ಜಾಗ ಹೇಗಿದೆಯೋ ಹಾಗೇ ಅನುಭವಿಸಿ, ಹೊಸದನ್ನು ಕಲಿಯಿರಿ ಅನ್ನುತ್ತಾರೆ. 

ಅವಿನಾಶ ರುಚಿಕಾ ಜೋಡಿ ಸಾಮಾನ್ಯವಾಗಿ ಒಂದು ದೇಶದಲ್ಲಿ ಎರಡರಿಂದ ಮೂರು ತಿಂಗಳು ಇರುತ್ತಾರೆ. ಇದರಿಂದ ಖರ್ಚೂ ಕಡಿಮೆ ಮತ್ತು ಒಂದು ದೇಶವನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಕಿಚನ್ ಇರುವ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವುದರಿಂದ ಊಟದ ವೆಚ್ಚವೂ ಸ್ವಲ್ಪ ಮಟ್ಟಿಗೆ ಉಳಿತಾಯವಾಗುತ್ತದೆ. ವಾರದ ದಿನಗಳಲ್ಲಿ ಕೆಲಸ ಮಾಡುವ ಇವರು ವೀಕೆಂಡ್ ಅನ್ನು ತಿರುಗಾಟಕ್ಕೆ ಮೀಸಲಿಡುತ್ತಾರೆ. 

ಟ್ರಾವೆಲ್, ಪಯಣ ಅನ್ನೋದು ಯಾವುದೇ ಒಂದು ಡೆಸ್ಟಿನೇಶನ್ ಗೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ, ನಾವು ಹೋಗುವ ಪ್ರತಿ ದಾರಿಯೂ ಪ್ರವಾಸವೇ ಅನ್ನೋದು ಟ್ರಾವೆಲರ್ಸ್‌‌ಗೆ ಇವರ ಕಿವಿಮಾತು. 

ಸದ್ಯದಲ್ಲೇ ಭಾರತಕ್ಕೆ

ಭಾರತಕ್ಕೆ ಬರುವ ಬಗ್ಗೆ ಕೇಳಿದಾಗ ಸದ್ಯದಲ್ಲೇ ಭಾರತಕ್ಕೆ ಬರುವ ಪ್ಲಾನ್ ಇದೆಯಂತೆ. ಆದರೆ ಅಲ್ಲಿಗೆ ಪಯಣ ನಿಲ್ಲುವುದಿಲ್ಲ. ಎರಡು ಮೂರು ತಿಂಗಳು ಭಾರತದಲ್ಲಿದ್ದು ಮತ್ತೆ ವಿಮಾನವೇರುವುದು ಇವರ ಆಲೋಚನೆ. 

ನಾವು ಸೇವಿಂಗ್ಸ್ ಮಾಡಿಟ್ಟಿರೋ ದುಡ್ಡಲ್ಲಿ ಟ್ರಾವೆಲ್ ಮಾಡ್ತಿಲ್ಲ, ಕೆಲಸ ಮಾಡ್ತಾನೇ ಟ್ರಾವೆಲ್ ಮಾಡ್ತಾ ಇದ್ದೇವೆ ಅನ್ನೋ ಇವರು, “ನಾವೂ ಕೂಡಾ ಬೆಂಗಳೂರಲ್ಲಿ ಕೆಲಸ ಮಾಡುತ್ತಾ ಬಾಡಿಗೆ ಕಟ್ಟುತ್ತಾ ಬದುಕುತ್ತಿರುವ ದಂಪತಿಗಳಂತೆಯೇ. ವ್ಯತ್ಯಾಸ ಏನೆಂದರೆ ಅವರು ಒಂದು ಕಡೆ ಮಾತ್ರ ಬಾಡಿಗೆ ಕಟ್ಟುತ್ತಾರೆ, ನಾವು ಹೋದಲ್ಲೆಲ್ಲಾ ಬಾಡಿಗೆ ಕಟ್ಟುತ್ತಾ ಬದುಕುತಿದ್ದೇವೆ”. ಎಂದು ಜೋರಾಗಿ ನಗುತ್ತಾರೆ. 

ಮೆಕ್ಸಿಕೋದಿಂದ ಸ್ಕೈಪ್ ಮುಖಾಂತರ ಕೇಳಿದ ಅವರ ನಗು ಇನ್ನೂ ಕಿವಿಯಲ್ಲಿದೆ. ಕರೆ ಮುಗಿದಾಗ ನಮ್ಮಲ್ಲಿ ಬೆಳಗಿನ ಹತ್ತು ಗಂಟೆಯಾಗಿತ್ತು, ಅಲ್ಲಿ ರಾತ್ರಿ ಹತ್ತೂವರೆಯಾಗಿತ್ತು. ನಾನು ಗುಡ್ ನೈಟ್ ಅಂದೆ. ಅವರು ಗುಡ್ ಮಾರ್ನಿಂಗ್ ಅಂದರು.

ಜೋಡಿ ಪ್ರಪಂಚವೆಲ್ಲಾ ಸುತ್ತಾಡಲಿ, ಈ ರೀತಿಯ ಪ್ರವಾಸದ ಬಯಕೆ ಇರುವವರಿಗೆ ಸ್ಫೂರ್ತಿಯಾಗಲಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

2 Comments

  1. Such a beautiful journey!! ಈ ಜೋಡಿ ಒಬ್ಬರನೊಬ್ಬರು ಏಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರೀತಿ ಪ್ರವಾಸದ ಮೇಲೆಯೂ ಹಬ್ಬಿದೆ. And this article has a great structure of writing with crispy words. ಈ ಕಥೆಯನ್ನು ಹಂಚಿಕೊಂಡವರು ಸರೀ ಅದನ್ನು ನಮಗೆ ಪರಿಚಯ ಮಾಡಿ ಕೊಟ್ಟವರು ಸರೀ ಪರಿಸರದ ರಸಿಕರೆ ಆಗಿರಬೇಕು!! ಇನ್ನಷ್ಟೂ ತಿಳಿಯದ ಕಥೆಗಳನ್ನು ಬಿಚ್ಚಿಡಲು all the best ಸುಜಯ್

Leave a Reply

Your email address will not be published. Required fields are marked *

Back to top button