ತುಂಬಿದ ಮನೆಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಊರಿನ ಹೆಸರು ಬದಲಿಸಿದ ಅನಿಲ್ ಕಪೂರ್ ಸಿನಿಮಾ: ಸಿಂಧುಚಂದ್ರ ಹೆಗಡೆ ಬರೆಯುವ ಸಿಂಪ್ಲೀ ಕಾಶ್ಮೀರ ಸರಣಿ ಭಾಗ 3

ಕಾಶ್ಮೀರದ ಜನಜೀವನ ಬೇರೆಯೇ. ದೂರದಲ್ಲಿ ಕುಳಿತು ಕಲ್ಪಿಸಿಕೊಂಡ ಹಾಗೆ ಕಾಶ್ಮೀರ ಇಲ್ಲ. ಅಲ್ಲಿನ ಚಂದ ನೋಡಬೇಕಾದರೆ, ಅಲ್ಲಿ ಬದುಕುವವರ ಮನಸ್ಥಿತಿ ತಿಳಿಯಬೇಕಾದರೆ ಕಾಶ್ಮೀರದ ಬೀದಿಗೆ ಇಳಿಯಬೇಕು ಅನ್ನುವುದನ್ನು ಲೈವ್ಲಿಯಾಗಿ ಬರೆದಿದ್ದಾರೆ ಸಿಂಧುಚಂದ್ರ.

ಕುದುರೆ ಕಾಯುವವನು ನನಗೆ ಗದರಿಸಿದ, ಕುದುರೆಗೆ ನಿಮಗಿಂತ ಹೆಚ್ಚು ಗೊತ್ತಿದೆ, ಸುಮ್ಮನೆ ಕೂಗಿ ಅದಕ್ಕೆ ಕನ್ ಪ್ಯೂಸ್ ಮಾಡಬೇಡಿ ಎಂದು. ಆದರೆ ಕುದುರೆ ಕಲ್ಲು ಕೆಸರಿನ ಹಾದಿಯಲ್ಲಿ  ಬೆಟ್ಟ ಹತ್ತಲು ಶುರು ಮಾಡಿದ್ದೇ ನಾನು ಮತ್ತೂ ಕಿರುಚತೊಡಗಿದ್ದೆ. ಅವನು  ಹೀಗೇ ಕಿರುಚಿದರೆ ನಿಮ್ಮನ್ನು ಇಲ್ಲಿಯೇ ಇಳಿಸಿ ಹೋಗುತ್ತೇವೆ ಎಂದು ಬೈದ. ಕುದುರೆಯ ಲಗಾಮನ್ನು ಗಟ್ಟಿಯಾಗಿ ಹಿಡಿದು ಕೈಗಳು ನೋಯಲು ಆರಂಭಿಸಿದ್ದವು. ಇವನೋ ಪುಣ್ಯಾತ್ಮ ಬಲಬದಿಗೆ ಜಗ್ಗಿದರೆ ಕುದುರೆ ಈ ಕಡೆ ಹೋಗುತ್ತದೆ, ಎಡಬದಿಗೆ ಜಗ್ಗಿದರೆ ಆ ಕಡೆ ಹೋಗುತ್ತದೆ ಎಂದು ಕುದುರೆ ಸವಾರಿ ಕಲಿಸುತ್ತಿದ್ದಾನೆ. ಮಗಳೂ ಕೂಡ ಭಯ್ಯಾ ಭಯ್ಯಾ ಎಂದು ಕಿರುಚುತ್ತಿರುವುದು ಕೇಳಿದರೂ ತಿರುಗಿ ನೋಡಲಾಗದ ಸ್ಥಿತಿ. ಕುದುರೆ ಯಾವುದರ ಪರಿವೆಯೂ ಇಲ್ಲದಂತೆ ಹಾರುತ್ತಾ ಬೆಟ್ಟ ಏರುತ್ತಿದೆ. ಆ ಹಾದಿಯೋ ಮಳೆ ಬಂದು ಸಂಪೂರ್ಣ ಕೆಸರುಮಯ. 

ಕುದುರೆಗೂ ಸ್ಲಿಪ್ ಆಗುತ್ತಿದೆ. ಚಂದ್ರ ಕುಳಿತಿದ್ದ ಕುದುರೆ ಒಮ್ಮೆ ಜಾರಿ ಸಂಭಾಳಿಸಿಕೊಂಡಿತು. ದೇವರೇ ಇಲ್ಲಿ ಕೆಳಗೇನಾದರೂ ಬಿದ್ದರೆ ಸೊಂಟವೂ ಉಳಿಯುವುದಿಲ್ಲ, ಮೂಳೆಯಂತೂ ಸುರಳೀತ ಇರಲು ಸಾಧ್ಯವೇ ಇಲ್ಲ ಎಂದು ನಾನು ನೂರು ರೀತಿಯ ಯೋಚನೆ ಮಾಡುತ್ತಾ, ಒಮ್ಮೆ ಅಳುತ್ತಾ ಒಮ್ಮೆ ನಗುತ್ತಾ, ಕೂಗುತ್ತಾ, ಬೈಸಿಕೊಳ್ಳುತ್ತಾ ಬೆಟ್ಟದ ತುದಿ ತಲುಪಿದಾಗ ಅರ್ಧ ಜೀವ ಹೋದಂತಾಗಿತ್ತು. ಇಷ್ಟು ರಿಸ್ಕನ್ನು ನಾನು ಇದುವರೆಗೆ ಜೀವನದಲ್ಲಿ  ತೆಗೆದುಕೊಂಡಿರಲಿಲ್ಲ. ಆದರೆ ಬೆಟ್ಟದ ತುದಿಯ ಆ ದೃಶ್ಯಾವಳಿ ನನ್ನ ಅಷ್ಟೂ ಶ್ರಮವನ್ನು ತೊಳೆದುಹಾಕಿತು. 

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಒದ್ದಾಡಿಸಿದ ಕುದುರೆ ಸವಾರಿ  

ಬೆಳ್ಳಿಯ ಬೆಟ್ಟದ ಬುಡಕ್ಕೆ ಹಸಿರು ಹಾಸಿನ ಕಾರ್ಪೆಟ್ ಹಾಸಿದಂತೆ.. ವ್ಹಾ, ನಾನು ಈವರೆಗೆ ಊಹಿಸಿಕೊಂಡಿದ್ದ ಅಷ್ಟೂ ಚಿತ್ರಗಳನ್ನು ಮೀರಿ ನನ್ನೆದುರಿಗೊಂದು ಸ್ವರ್ಗದ ತುಣುಕು. ಅಲ್ಲಿ ಕಾಶ್ಮೀರಿ ಜನರ ಪೋಷಾಕುಗಳನ್ನು(Kashmiri Traditional Wear) ತೊಟ್ಟು ನಾವೆಲ್ಲರೂ ಫೋಟೋ ತೆಗೆಸಿಕೊಂಡೆವು. ಅಲ್ಲಿಂದ ಮತ್ತೆ ಹೊರಡಬೇಕೆಂದಕೂಡಲೇ ನಾನು ನಡುಗಲಾರಂಭಿಸಿದೆ. ಕುದುರೆಯ ಮೇಲೆ ಕುಳಿತು ಬೆಟ್ಟ ಏರುವುದಾದರೂ ಬೇಕು, ಇಳಿಯುವುದು ಸಾದ್ಯವಿಲ್ಲ ಎಂದು ಹಠ ಮಾಡತೊಡಗಿದೆ. ಹಾಗಾದರೆ ಇಲ್ಲೇ ಉಳಿಯಿರಿ ಎಂದ ಕುದುರೆ ಕಾಯುವವನು. ಪ್ಲೀಸ್ ಏನಾದರೂ ವಾಹನ ತರಿಸಲು ಸಾಧ್ಯವಾಗಬಹುದೇ ಎಂದೂ ಗೋಗರೆದೆ, ಅವನು ಕರಗಲಿಲ್ಲ, ಸುಮ್ಮನೇ ಕುದುರೆ ಏರಿ  ಎಂದು ಗದರಿಸಿದ. ನಾನು ಬೇರೆ ದಾರಿ ಇಲ್ಲದೆ ಕುದುರೆ ಏರಿದೆ.

ಈ ಬಾರಿ ನನಗೆ ಕಪ್ಪು ಕುದುರೆಯಾಗಿತ್ತು, ಭಯಂಕರ ಚಂದದ ಕುದುರೆ ಅದು. ನಾನು ಅದರ ಮೆಲೆ ಕುಳಿತೇ ಇಲ್ಲವೇನೋ ಎಂಬ ಭಾವದಲ್ಲಿ ಸಾಗುತ್ತಿತ್ತು. ಇಳಿಜಾರಾಗಿದ್ದರಿಂದ, ರಾಡಿಯೂ ಇದ್ದಿದ್ದರಿಂದ, ಕುದುರೆ ಜಾರುತ್ತಿತ್ತು. ಕುದುರೆ ಸಂಬಾಳಿಸುವವನೇ ಮೂರು ಬಾರಿ ಬಿದ್ದ. ನಾನು ಕಿರುಚಿ ಕಿರುಚಿ ಸಾಕಾಗಿ ಸುಮ್ಮನೆ ಕುಳಿತೆ. ಉಳಿದವರೆಲ್ಲರೂ ಆ, ಊ, ಎಂದು ಕೂಗುತ್ತಲೆ ಇದ್ದರು. ಬೆಟ್ಟದ ನಡುವೆ ಒಂದು ದೊಡ್ಡ ಓಳಿ ಎದುರಾಯಿತು. ಪ್ಲೀಸ್ ಕುದುರೆ ಬಳಿ ಹಾರಬೇಡ ಎಂದು ಹೇಳು ಎಂದೆ ನಾನು ದಡ್ಡರ ಹಾಗೆ. ಕುದುರೆಯವನು ಗಂಭೀರವಾಗಿ ಅದು ಹಾರೇ ಹಾರುತ್ತದೆ, ದಾರಿ ಸಾಗಲೇ ಬೇಕು, ನೀವು ಗಟ್ಟಿಯಾಗಿ ಲಗಾಮು ಹಿಡಿಯಿರಿ ಅಷ್ಟೇ ಎಂದ. 

ಕುದುರೆ ಯಾವ ಪರಿಯಲ್ಲಿ ಹಾರಿತೆಂದರೆ ನಾನು ಎರಡಡಿ ಮೇಲೆ ಹಾರಿ ಕುಳಿತೆ. ನಾನು ಕಿರುಚಿದ್ದಕ್ಕೋ ಏನೋ ಕುದುರೆ ಜೋರಾಗಿ ಓಡತೊಡಗಿತು. ನಾನು ಭಯ್ಯಾ ಭಯ್ಯಾ ಈ ಕುದುರೆ ಎತ್ತ ಸಾಗುತ್ತಿದೆ ನೋಡು ಎಂದು ಅಳತೊಡಗಿದೆ. ಅವನು ಸಿಟ್ಟಿನಿಂದ ಕುದುರೆಗೀಗ ಹುಚ್ಚು ಹಿಡಿದಿದೆ, ಅದು ಆತ್ಮಹತ್ಯೆ ಮಾಡಿಕೊಳ್ಳಲು ಸಾಗುತ್ತಿದೆ ನಿಮ್ಮ ಕಾಟದಿಂದ ಬೇಸತ್ತು ಎಂದ. ಮಗಳು ಸುರಕ್ಷಿತವಾಗಿರಲಿ ಎಂದು ಈ ಎಲ್ಲಾ ಹೆದರಿಕೆಯ ನಡುವೆಯೂ ಬೇಡಿಕೊಳ್ಳುತ್ತಿದ್ದೆ. ಅಂತೂ ಇಂತೂ ಪೆಹಲ್ಗಾಂವ್(pahalgam) ತಲುಪಿದಾಗ ಸಂಜೆ 7.30 ಆಗಿತ್ತು. ಹೋಟೆಲ್ ತನಕ ಹೋಗುವುದಿದ್ದರೆ ಮತ್ತೆ ಬೆಟ್ಟ ಏರುವ ಪರಿಸ್ಥಿತಿ ಎಂದು ಪೇಟೆ ತಿರುಗಬೇಕೆಂದು ನೆಪ ಹೇಳಿ ಪೇಟೆಯಲ್ಲಿಯೇ ಕುದುರೆಯಿಂದ ಇಳಿದೆ. 

ಪಹಲ್ ಗಾಂವ್ ನ ಬಹಳಷ್ಟು ಅಂಗಡಿಗಳ ಹೆಸರು ಭಟ್ ಎಂಬ ಹೆಸರಿನಿಂದ ಆರಂಭವಾಗುವುದನ್ನು ಕಂಡು ಆಶ್ಚರ್‍ಯಪಟ್ಟೆ. ಕಾಶ್ಮೀರದಲ್ಲಿ(kashmir) ಬಹಳಷ್ಟು ಮುಸ್ಲಿಂ ಸಮುದಾಯದವರ ಹೆಸರು ಭಟ್ ಇದೆ ಎಂದು ಮಾರ್ಗಮಧ್ಯೆ ರಾಯಿಸ್ ಹೆಳಿದ್ದ. ಆದರೂ ಭಟ್ ಚಿಕನ್ ಸೆಂಟರ್, ಭಟ್ ನಾನವೆಜ್ ಹೋಟೆಲ್ ಈ ರೀತಿಯ ಹೆಸರೇ ನಗು ತರಿಸುತ್ತಿತ್ತು. ಅಷ್ಟು ಪೇಟೆ ಓಡಾಡಿದರೂ ಎಲ್ಲಿಯೂ ಮಹಿಳಾ ಅಂಗಡಿಕಾರರು ಕಾಣಸಿಗಲಿಲ್ಲ. ರಸ್ತೆಗಳಲ್ಲಿ  ಅಲ್ಲಿನ ಮಹಿಳೆಯರ ಓಡಾಟವೂ ಇರಲಿಲ್ಲ. ಅಲ್ಲಿ  ಮದ್ಯದಂಗಡಿಗಳೂ ಕಾಣಸಿಗಲಿಲ್ಲ. ಕಾಶ್ಮೀರಿಗಳು ಮದ್ಯ ಸೇವನೆ ಮಾಡುವುದಿಲ್ಲ, ಆದ್ದರಿಂದ ಇಲ್ಲಿ ಅದರ ಮಾರಾಟವಿಲ್ಲ, ಟೂರಿಸ್ಟ್ ಗಳಿಗೆಂದು ಕೆಲವೊಂದು ಕಡೆ ಅದರ ಸಪ್ಲೈ ಇದೆ ಎಂಬ ಮಾಹಿತಿ ನಂತರ ದೊರಕಿತು.

ಮಾರನೇದಿನ ನಾವು ಹೊರಟಿದ್ದು  ಚಂದನವಾಡಿ(chandanwadi) ಎಂಬ ಜಾಗಕ್ಕೆ. ಚಂದನವಾಡಿಯ ರಸ್ತೆಗಳಲ್ಲಿ ಸಾವಿರ ಸಾವಿರ ಕ್ರಿಕೆಟ್ ಬ್ಯಾಟ್ ಗಳನ್ನು(cricket bat) ತಯಾರಿಸಿ ಮಾರಾಟ ಮಾಡಲಾಗುತ್ತದೆ. ವಿಲ್ಲೋ ಮರಗಳಿಂದ(willo tree) ತಯಾರು ಮಾಡಲಾಗುವ ಈ ಬ್ಯಾಟ್ ಗಳು ನೀಟಾಗಿ ಜೋಡಿಸಲ್ಪಟ್ಟಿರುವುದು ರಸ್ತೆಯುದ್ದಕ್ಕೂ ನೋಡಲು ಸಿಗುವ ವಿಶೇಷ. ಚಂದನವಾಡಿಯ ರಸ್ತೆಯಲ್ಲಿ ಸಿಗುವ ಬೇತಾಬ್ ವ್ಯಾಲಿಗೆ(betab valley kashmir) ತಲುಪಿದಾಗ ಮಧ್ಯಾಹ್ನವಾಗಿತ್ತು. 

ಅನಿಲ್ ಕಪೂರ್ ಸಿನಿಮಾದಿಂದ ಹೆಸರು ಬದಲು

ಹಜನ್ ವ್ಯಾಲಿ(hazan valley) ಎಂದು  ಕರೆಯಲ್ಪಡುತ್ತಿದ್ದ ಈ ಜಾಗ ಅನಿಲ್ ಕಪೂರ್ ನಟನೆಯ ಬೇತಾಬ್(betab) ಹಿಂದಿ ಚಲನಚಿತ್ರ ಇಲ್ಲಿ ಚಿತ್ರೀಕರಣವಾದ ನಂತರ ಬೇತಾಬ್ ವ್ಯಾಲಿ ಎಂದೇ ಕರೆಯಲ್ಪಡುತ್ತಿದೆ. ಇದೂ ಕೂಡ ಅತ್ಯದ್ಭುತ ತಾಣ. ಪ್ರಕೃತಿ ಕಾಶ್ಮೀರವನ್ನು ಎಷ್ಟು ಸುಂದರವಾಗಿ ರೂಪಿಸಿದೆಯೆಂದರೆ, ಪ್ರತಿ ದೃಶ್ಯ ಕೂಡ ಬಹಳ ಪುರುಸೊತ್ತಿನಲ್ಲಿ ಕಲಾವಿದನೊಬ್ಬ ವರ್ಣಚಿತ್ರ ರಚಿಸಿ, ಫ್ರೇಮ್ ನಲ್ಲಿ ಹಿಡಿದಿಟ್ಟಿರುವಂತೆ. ಹಸಿರು ನೀರು, ಅದೇ ಬಣ್ಣದ ಕಲ್ಲು, ಅದಕ್ಕೆ ಹೊಂದಿಕೊಂಡ ಕಲ್ಲಿನ ಪರ್ವತಗಳು, ಹಿಮರಾಶಿಯ ಶ್ರೇಣಿಗಳು ಬೇಲಿಗಳಂತೆ, ವ್ಹಾ ಎಷ್ಟು ಬರೆದರೂ ಕಡಿಮೆಯೇ. ಶಬ್ದಗಳು ಖಾಲಿಯಾಗುತ್ತವೆ ವಿನಃ ಆ ಸೌಂದರ್‍ಯವನ್ನು ಬಣ್ಣಿಸಲಾಗುವುದಿಲ್ಲ. ಅಲ್ಲಿಂದ ಅರು ವ್ಯಾಲಿ(aru valley) ಎಂಬ ಕಣಿವೆಗೆ ಸಾಗಿದೆವು. 

ಅರು ನದಿಯ(aru river) ದಂಡೆಗೆ ಆತುಕೊಂಡಿರುವ ಈ ಕಣಿವೆ ಟ್ರೆಕ್ಕಿಂಗ್ ಗೆ(trekking) ಸಾಗುವವರಿಗೆ ಆರಂಭ ಸ್ಥಳವೆಂದು ಗುರುತಿಸಿಕೊಂಡಿದೆ. ಹಿಮಚ್ಛಾದಿತ ಪರ್ವತಗಳು, ಜಲಪಾತಗಳು, ಇಲ್ಲಿನ ವಿಶೇಷ. ಅಲ್ಲಿಂದ ಪುನಃ ನಾವು ಪೆಹಲ್ ಗಾಂವ್ ಗೆ ಮರಳಿ ಅಲ್ಲಿಯೇ ಉಳಿದೆವು.

ಪ್ರಯಾಣದ 4ನೇ ದಿನ ನಾವು ಹೊರಟಿದ್ದು, ಗುಲ್ ಮಾರ್ಗ(gulmarg) ಎಂಬ ಜಾಗಕ್ಕೆ. ಪೆಹಲ್ ಗಾಂವ್ ದಿಂದ 140ಕಿ.ಮೀ ದೂರವಿರುವ ಗುಲ್ ಮಾರ್ಗ ತಲುಪಲು ಬೇಕಾದ ಸಮಯ 4 ರಿಂದ 5 ತಾಸು. ಸಮುದ್ರ ಮಟ್ಟದಿಂದ 2730 ಮೀಟರ್ ಎತ್ತರದಲ್ಲಿರುವ ಗುಲ್ ಮಾರ್ಗ ಎಂಬ ಹಳ್ಳಿ ಕಾನಿಫೆರ್ ಮರಗಳಿಂದ ತುಂಬಿರುವ ಕಾಡು ಹಾಗೂ ಗಾಲ್ಫ್ ಆಟದ ಮೈದಾನಕ್ಕಾಗಿ ವಿಶ್ವ ಮಟ್ಟದಲ್ಲಿ  ಖ್ಯಾತಿಯೆತ್ತಿದೆ. ಹಾಗೂ ಗೊಂಡಾಲಾ ರೈಡ್ ಎಂದು ಕರೆಯಲ್ಪಡುವ ಕೇಬಲ್ ಕಾರ್  ಮುಖಾಂತರ ಸಮುದ್ರಮಟ್ಟದಿಂದ 14000 ಅಡಿ ಎತ್ತರದ ಆಫರ್ ವಾಟ್ ಪರ್ವತದ ತುತ್ತ ತುದಿಯನ್ನು ಮುಟ್ಟುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. 

ಅತೀ ಎತ್ತರದಲ್ಲಿ ಕಾರ್‍ಯ ನಿರ್ವಹಿಸುವ ಕೇಬಲ್ ಕಾರ್ ಗಳ ಪೈಕಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಈ ಜಾಗ ಒಂದು ಅಮೋಘ ಅನುಭವವನ್ನು  ನೀಡಿತು. ಎರಡು ಹಂತಗಳಲ್ಲಿ ಕೇಬಲ್ ಕಾರ್ ಕಾರ್‍ಯ ನಿರ್ವಹಿಸುತ್ತದೆ. 9000 ಅಡಿಗಳವರೆಗೆ ಒಂದನೇ ಫೇಸ್, ಅಲ್ಲಿಯವರೆಗೆ ಹೋಗಿ ಬೇಕಾದರೂ ವಾಪಸ್ ಬರಬಹುದು. ಅಲ್ಲಿಂದ ಮತ್ತೆ 5000 ಅಡಿ ಮೇಲೆ ಹೋಗುವ ಅವಕಾಶ, ಅಂದರೆ ಸಮುದ್ರ ಮಟ್ಟದಿಂದ 14000 ಅಡಿ ಮೇಲೆ ಹೋಗುವ ಅವಕಾಶ ಎರಡನೇ ಫೇಸ್ ನಲ್ಲಿ. ಚಂದ್ರು ಹಾಗೂ ನಮ್ಮ ತಂಡದ ಕೆಲವು ಸದಸ್ಯರು  ಒಂದನೇ ಫೇಸ್ ನಲ್ಲೇ ಇಳಿದರೆ, ನಾನು ಮಗಳು ಇನ್ನುಳಿದ ನಾಲ್ವರೊಂದಿಗೆ ಎರಡನೇ ಫೇಸ್ ಗೆ ಹೋದೆವು.

ವಾತಾವರಣ ಅನುಕೂಲಕರವಿದ್ದರೆ ಮಾತ್ರ ಎರಡನೇ ಫೇಸ್ ಗೆ ತೆರಳುವ ಅವಕಾಶ ಲಭ್ಯವಾಗುತ್ತದೆ. ಆ ದಿನ ಪ್ರಕೃತಿ ನಮಗೆ ಸಾಥ್ ನೀಡಿತು. ಕೇಬಲ್ ಕಾರ್(cable car) ಮೂಲಕ ಅಷ್ಟು ಎತ್ತರದಲ್ಲಿ  ಹೋಗುವುದು ಮತ್ತು ಅಲ್ಲಿಂದ ಹಿಮಪರ್ವತ ಶ್ರೇಣಿಗಳನ್ನು  ನೋಡುವುದು ಒಂದು ಅನನ್ಯ ಅನುಭವ. ನಾವು ಎರಡನೇ ಫೇಸ್ ನ ಕೊನೆ ಹಂತ ತಲುಪಿ ಪರ್ವತದ ತುತ್ತ ತುದಿ ತಲುಪಿದಾಗ ನಮಗೆ ಕಂಡ ದೃಶ್ಯ,ಹೇಗೆ ಬಣ್ಣಿಸಲಿ ಅದನ್ನು? 

ಪೌರಾಣಿಕ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ತೋರಿಸುವ ಶಿವನ ವಾಸ ಸ್ಥಾನ ಕೈಲಾಸದ ಕಲ್ಪನೆ ನನಗಲ್ಲಿ ದಕ್ಕಿತು. ಮೋಡಗಳು ಪರ್ವತದ ಮೇಲೇ ಮಲಗಿದಂತೆ. ಹಿಮಗಾಳಿ ಜೋರಾಗಿ ಬೀಸುತ್ತಿತ್ತು, ನಿಲ್ಲಲಾಗದಷ್ಟು ಚಳಿ. ನಾನು ಮಗಳು ಇಬ್ಬರೂ ಗಡಗಡ ನಡುಗುತ್ತಿದ್ದೆವು. ಬಾಡಿಗೆಗೆ ಪಡೆದಿದ್ದ ಗಂ ಬೂಟ್ ಕಾಲಲಿದ್ದರೂ ಮಂಜುಗಡ್ಡೆಯ ಮೇಲೇ ನಿಂತಿದ್ದೇವೇನೋ ಎಂಬ ಭಾವನೆ ಹುಟ್ಟುವಂತೆ ಕಾಲು ಮರಗಟ್ಟಿ ಹೋಗಿತ್ತು. ಸ್ಲೆಡ್ಜ್ ಆಟ ಆಡಲು ಬನ್ನಿ ಎಂದು ಕಾಟ ಕೊಡುವ ಒಂದಷ್ಟು ಮಂದಿ ಸುತ್ತುವರೆದರು. 

ಮುಂದಿನ ಕಂತು: ಫೆವಿಕ್ವಿಕ್ ಕಾರಣಕ್ಕೆ ತಡೆದು ನಿಲ್ಲಿಸಿದ ಸೆಕ್ಯುರಿಟಿ

ಭಾಗ 1 ಭಾಗ 2 ಓದಲು ಕ್ಲಿಕ್ಕಿಸಿ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button