ತುಂಬಿದ ಮನೆದೂರ ತೀರ ಯಾನವಿಂಗಡಿಸದ

ದಾಲ್ ಸರೋವರದ ಬೋಟ್ ಹೌಸಿನಲ್ಲಿ ನಾವು: ಸಿಂಧುಚಂದ್ರ ಹೆಗಡೆ ಬರೆಯುವ ಸಿಂಪ್ಲೀ ಕಾಶ್ಮೀರ ಸರಣಿ ಭಾಗ 1

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಸಾಹಿತ್ಯ ಕೃಷಿ ಮಾಡುತ್ತಿರುವ ಸೂಕ್ಷ್ಮ ಮನಸ್ಸಿನ ಕತೆಗಾರ್ತಿ, ಕವಯಿತ್ರಿ ಸಿಂಧುಚಂದ್ರ ಹೆಗಡೆ. ಊರು ಸಿರಸಿ. ನಗುತ್ತೇನೆ ಮರೆಯಲ್ಲಿ ಮತ್ತು ರಸ್ತೆಯಲ್ಲಿ ಮೇಫ್ಲವರ್ ಕವನ ಸಂಕಲನಗಳು, ಕನಸಿನ ಕಾಡಿಗೆ ಎಂಬ ಕಥಾ ಸಂಕಲನ ಬರೆದಿರುವ ಸಿಂಧುಚಂದ್ರ ಸಿಂಪ್ಲೀ ಕಾಶ್ಮೀರ ಎಂಬ ಚೆಂದದ ಸರಣಿ ಬರೆಯುತ್ತಿದ್ದಾರೆ.  

ಕಾಶ್ಮೀರವನ್ನು ನೋಡುವುದು ನನ್ನ ಬಹು ದಿನಗಳ ಕನಸಾಗಿತ್ತು. ಪೋಸ್ಟರ್ ಗಳಲ್ಲಿ ಅದರ ಚಂದದ ಬೆಟ್ಟ, ಹಿಮ ಕಣಿವೆಗಳನ್ನು ನೋಡುವಾಗಲೆಲ್ಲಾ ಒಮ್ಮೆ ಹೋಗಿ ಬರಬೇಕಲ್ಲಿಗೆ ಎಂದುಕೊಳ್ಳುತ್ತಿದ್ದೆ. ಆದರೆ ಇತ್ತೀಚಿಗೆ ಅಲ್ಲಿನ ಪರಿಸ್ಥತಿಗಳು ಅಷ್ಟೇನೂ ಅನುಕೂಲಕರವಾಗಿಲ್ಲದ ನಿಟ್ಟಿನಲ್ಲಿ ನನ್ನ ಕಾಶ್ಮೀರದ ಕನಸು ಬಿಸಿಲಿನ ಝಳಕ್ಕೆ ಹಿಮ ಕರಗಿದಂತೆ ಕರಗತೊಡಗಿತ್ತು. ಆದರೆ ಆಗ ತಾನೇ ಕಾಶ್ಮೀರದ(kashmir) ಪ್ರವಾಸ ಮುಗಿಸಿ ಬಂದಿದ್ದವರೊಬ್ಬರು ಭೇಟಿಯಾಗಿ, ಏನೂ ತೊಂದರೆಯಿಲ್ಲ, ನೀವು ಈಗ ಕಾಶ್ಮೀರಕ್ಕೆ ಹೋಗಲು ಎಂದು ಹೇಳಿದ ಮೇಲೆ ಧೈರ್‍ಯದಿಂದ ಥಾಮಸ್ ಕುಕ್ ಎನ್ನುವ ಟ್ರಾವೆಲ್ ಏಜೆನ್ಸಿ(travel agency) ಮೂಲಕ ಚಂದ್ರ, ನಾನು, ಮಗಳು ಸಿಂಚನ ಕಾಶ್ಮೀರಕ್ಕೆ ಪಯಣ ಬೆಳೆಸಿದ್ದು ಒಂದು ರೋಚಕ ಅನುಭವ. 

Kashmir

ನೀವು ಇದನ್ನು ಇಷ್ಟಪಡಬಹುದು: ಕಲಬುರಗಿಗೆ ಹೋದವರು ನೋಡಲು ಮರೆಯಬಾರದ ಜಾಗಗಳು

ಅಯ್ಯೋ, ಕಾಶ್ಮೀರಕ್ಕೆ ನಾನು ಬರುವುದಿಲ್ಲ, ಅಲ್ಲೆಲ್ಲಾ ಭಯೋತ್ಪಾದಕರಂತೇ, ಹಿಮಪರ್ವತಗಳು ಕುಸಿದು ಬೀಳುತ್ತವಂತೆ ಎಂದು ಮಗಳು ರಾಗ ಹಾಡಿದರೂ, ನಾನು ನೀನು ಬರದಿದ್ದರೆ ಇಲ್ಲ, ನಾನು, ಅಪ್ಪ ಹೊಗುತ್ತೇವೆ ಎಂದು ಖಡಾಖಡಿಂತವಾಗಿ ಹೇಳಿದಾಗ  ಮನಸ್ಸಿಲ್ಲದ ಮನಸ್ಸಿನಲ್ಲಿ ಮಗಳು ಜೊತೆಯಾಗಿದ್ದಳು. ಬೆಂಗಳೂರಿನಿಂದ ದೆಹಲಿಗೆ, ನಂತರ ಅಲ್ಲಿಂದ ಶ್ರೀನಗರಕ್ಕೆ ವಿಮಾನದ ಟಿಕೆಟ್ ಗಳನ್ನು ಕಾಯ್ದಿರಿಸಲಾಗಿತ್ತು. ಹೊರಡುವ ದಿನ ಹತ್ತಿರ ಬಂದ ಹಾಗೇ, ಕಾಶ್ಮೀರದಲ್ಲಿನ ಕಲ್ಲು ತೂರಾಟದ ಸುದ್ದಿಗಳೂ ಜೋರಾಗಿಯೇ ಬರಲು ಆರಂಭವಾಗಿತ್ತು. ಅಪ್ಪ ಅಮ್ಮ ಕೂಡ ಈಗ ಏಕೆ ಕಾಶ್ಮೀರಕ್ಕೆ ಹೊರಟಿದ್ದೀರ? ಬೇರೆ ಎಲ್ಲಾದರೂ ಪ್ಲಾನ್ ಮಾಡಿ ಎಂದು ಹೇಳಲು ಶುರು ಮಾಡಿದ್ದರು. ನನಗೆ ಒಳಗೊಳಗೆ ಹೆದರಿಕೆಯಿದ್ದರೂ ಇಲ್ಲ ಏನೂ ತೊಂದರೆಯಿಲ್ಲ, ನಾವು ಹೋಗಿಯೇ ಹೋಗುತ್ತೇವೆ ಎಂದೆ ಗಟ್ಟಿ ಮನಸ್ಸು ಮಾಡಿ.

ನಮ್ಮ ಪ್ಯಾಕೇಜ್ ಹೆಸರು ಸಿಂಪ್ಲೀ ಕಾಶ್ಮೀರ.(simply kashmir) ಹೆಸರೇ ಸೂಚಿಸುವಂತೆ ಕಾಶ್ಮೀರದ ಆಸುಪಾಸಿನ ಸ್ಥಳಗಳೇ ಪ್ರವಾಸದಲ್ಲಿ ಸೇರ್ಪಡೆಯಾಗಿದ್ದವು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಸಮಯಕ್ಕೆ ಸರಿಯಾಗಿ ನಮ್ಮ ಇಂಡಿಗೋ ಫ್ಲೈಟ್ ದೆಹಲಿಯೆಡೆಗೆ ಹಾರತೊಡಗಿತ್ತು. ಪ್ಲಾಸ್ಟಿಕ್ ಗೊಂಬೆಯಂತಿದ್ದ ಗಗನಸಖಿಯೊಬ್ಬಳು ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದರ ಬಗ್ಗೆ, ಎಮರ್ಜೆನ್ಸಿ ಎಗ್ಸಿಟ್ ಗಳ ಬಗ್ಗೆ ಪಟಪಟನೆ ಇಂಗ್ಲಿಷ್ ನಂತರ ಹಿಂದಿಯಲ್ಲಿ ಹೇಳುತ್ತಿದ್ದರೆ, ಅದನ್ನು ಅಭಿನಯದ ಮುಖಾಂತರ ತಿಳಿಸುತ್ತಿದ್ದಳು ಇನ್ನೋರ್ವ ಗಗನಸಖಿ. 

ನಂತರ ಅವರು ಎಲ್ಲರ ಬಳಿ ಬಂದು ಸೀಟ್ ಬೆಲ್ಟ್ ಕಟ್ಟಿಕೊಳ್ಳಿ ಎಂಧು ನಯವಾಗಿ ಹೇಳುತ್ತಿದ್ದರೆ, ನಮ್ಮ ಎದುರಿನ ಸೀಟಿನಲ್ಲಿದ್ದವನೊಬ್ಬ ತನ್ನ ಪ್ಯಾಂಟ್ ಬೆಲ್ಟ್ ತೋರಿಸಿ, ಗಗನಸಖಿಯ ಮುಖದಲ್ಲಿ ನಗು ಚಿಮ್ಮಿಸುವಲ್ಲಿ  ಯಶಸ್ವಿಯಾದದ್ದನ್ನು ನಾನು, ಮಗಳು ನೋಡಿ ನಕ್ಕೆವು.

ದೆಹಲಿಯಿಂದ ನಾವು ಫ್ಲೈಟ್ ಬದಲಾಯಿಸಬೇಕಿತ್ತು. ನಮ್ಮಲ್ಲಿ  ಬಹಳ ಕಾಲಾವಕಾಶವಿರಲಿಲ್ಲ. ದೆಹಲಿಯಲ್ಲಿ(delhi) ನಾವು ಇಳಿದಾಗ ಕೆಂಡದುಂಡೆಯ ಮೇಲೆ ಕಾಲಿಟ್ಟ ಅನುಭವ. ಮೇ ತಿಂಗಳು ಅದು. ಅಕ್ಷರಶಃ ಬೇಯುತ್ತಿತ್ತು ದೆಹಲಿ. ಮತ್ತೆ ಬ್ಯಾಗ್ ಗಳ ಹಾಗೂ ನಮ್ಮೆಲ್ಲರ ಚೆಕಿಂಗ್ ನಡೆಯಿತು. ಚೆಕಿಂಗ್ ಝೋನ್‌ನಲ್ಲಿದ್ದ ಸೆಕ್ಯುರಿಟಿ ಲೇಡಿ ಆಫೀಸರ್ ಒಬ್ಬಳು ನನ್ನ  ಮಗಳಿಗೆ ವ್ಹಾ ಎಂತಹ ಹೈಟ್ ಇದ್ದಾಳೆ, ಮಿಲ್ಟ್ರಿಗೆ ಸೇರಬಹುದು..ಎಂದು ಹಿಂದಿಯಲ್ಲಿ ಹೇಳಿ ಬೆನ್ನು ತಟ್ಟಿದಳು. 

Srinagar

ವಿಮಾನ ದೆಹಲಿಯಿಂದ ಶ್ರೀನಗರಕ್ಕೆ(srinagar) ಹಾರಿ, ಇಳಿಯತೊಡಗಿದಾಗ ನನಗೆ ಮೆದುಳಿನಲ್ಲಿ ಕರೆಂಟ್ ಹರಿದಂತಾಗಿ, ಕಿವಿಯಲ್ಲಿ ನೋವಿನ ಅನುಭವ ಉಂಟಾಗಿ ಸಿಕ್ಕಾಪಟ್ಟೆ ತ್ರಾಸಾಯಿತು. ಮಗಳು ನನಗೂ ಹಾಗೇ ಆಗುತ್ತಿದೆ ನೀನು ಸುಮ್ಮನಿರು ಎಂದು ಗದರಿದಾಗ ಸುಮ್ಮನೆ ಕುಳಿತೆ. ನಾವು ಶ್ರೀನಗರ ತಲುಪಿದಾಗ ಸಂಜೆ 4 ಘಂಟೆ. 

ಸಣ್ಣದಾಗಿ ಮಳೆಯಿತ್ತು..ಯಾವುದೇ ಗಜಿಬಿಜಿಯಿಲ್ಲದ ವಿಮಾನ ನಿಲ್ದಾಣ..ನಾನು ಚಳಿಯಿಂದ ಗಡಗಡ ನಡುಗುತ್ತಿದ್ದೆ.. ಬದಿಗಿದ್ದ ಮುಸ್ಲಿಂ ಹೆಂಗಸೊಬ್ಬಳು ಬಹಳ ಕಂಫರ್ಟ್ ಆಗಿ ಕೇಳಿದಳು, ಎಲ್ಲಿಂದ ಬಂದಿದ್ದು? ನಾನು ಬೆಂಗಳೂರಿನಿಂದ ಎಂದೆ.. ಹಂ..ಅದಕ್ಕೇ ನಡುಗುತ್ತಿದ್ದೀರಿ ಎಂದು ನಕ್ಕಳು. ಅಷ್ಟರಲ್ಲಿ ಥಾಮಸ್ ಕುಕ್ ಬೋರ್ಡ್ ಹಿಡಿದ ಎರಡು ಯುವಕರು ನಮ್ಮನ್ನು ಬರಮಾಡಿಕೊಂಡರು. ನಮ್ಮ ಟೀಮ್ ನಲ್ಲಿರುವ ಉಳಿದವರೆಲ್ಲಿ? ನಾನು ಕೇಳಿದೆ. ಅವರೆಲ್ಲಾ ಮಧ್ಯಾಹ್ನವೇ ಬಂದಿದ್ದಾರೆ ನೀವೇ ಲೇಟ್, ನೀವೀಗ ಅವರನ್ನು ಕೂಡಿಕೊಳ್ಳಬೇಕು ಎಂದು ಹೇಳುತ್ತಾ ನಮ್ಮನ್ನು ಟೆಂಪೋ ಟ್ರಾವೆಲ್ಲರ್ ಒಂದರ ಬಳಿ ಕರೆದೊಯ್ದರು. ಏನೂ ಗೊತ್ತಿಲ್ಲದ ಜಾಗದಲ್ಲಿ, ಯಾರೂ ಪರಿಚಯವಿರದ ಶ್ರೀನಗರದಲ್ಲಿ ಅಪರಿಚಿತರೊಂದಿಗೆ ನಮ್ಮ ಪಯಣ ಆರಂಭಗೊಂಡಿತು. 

ದಾಲ್ ಲೇಕ್ ಗೆ ಪಯಣ

ಸಣ್ಣದಾಗಿ ಮಳೆ ಜಿಮುರುತ್ತಿತ್ತು. ತೊಳೆದಿಟ್ಟಂತೆ ತೋರುತ್ತಿದ್ದ ರಸ್ತೆಗಳು, ಅಷ್ಟಾಗಿ ಜನಸಂಚಾರವಿಲ್ಲದ ಸ್ಥಳ, ಚಳಿಗೋ ಮಳೆಗೋ ಭಯಕ್ಕೋ ಗೊತ್ತಿಲ್ಲ ಸಣ್ಣಗೆ ನಡುಗುತ್ತಲೇ ಇದ್ದೆ. ಇಬ್ಬರಲ್ಲಿ  ಒಬ್ಬ ಯುವಕ ತಾನು ಕೈವಲ್ಯಕುಮಾರ್ ಎಂದು ಪರಿಚಯಿಸಿಕೊಂಡ. ನನಗೆ ಏನೋ ಒಂದು ರೀತಿಯ ಸಮಾಧಾನ. ಇನ್ನೊಬ್ಬ ರಾಯೀಸ್ ಅಹಮ್ಮದ್ ಭಟ್ ಎಂದ. ಇಡೀ ನಿಮ್ಮ ಪ್ರವಾಸಕ್ಕೆ ರಾಯೀಸ್ ನಿಮಗೆ ಗೈಡ್ ಆಗಿರುತ್ತಾರೆ ಎಂದ.. ಅಷ್ಟರಲ್ಲಿ  ಶ್ರೀನಗರ ಪಟ್ಟಣದೊಳಗೆ ನಾವು ಎಂಟ್ರಿ ಕೊಟ್ಟಿದ್ದೆವು. ಎಲ್ಲಾ ಕಡೆಯೂ ಮುಸ್ಲಿಂ ಸಮುದಾಯದವರೇ ಕಾಣಿಸುತಿದ್ದರು. ಅವರ ವೇಷ ಭೂಷಣಗಳು ನಾನು ಟಿವಿ ಹಾಗೂ ಸಿನಿಮಾಗಳಲ್ಲಿ  ನೋಡಿದ ಕಾಶ್ಮೀರಿವಾಲಾ(kashmiriwala) ಗಳಂತೆಯೇ ಇತ್ತು. ರಸ್ತೆಯಲ್ಲಿ  ಮಹಿಳೆಯರ ಓಡಾಟ ಸೀಮಿತಸಂಖ್ಯೆಯಲ್ಲಿರುವುದನ್ನು ನಾನೂ ಅದಾಗಲೇ ಗಮನಿಸಿದ್ದೆ. ನಾವೀಗ ಮೊದಲು ದಾಲ್ ಲೇಕ್ ಗೆ(dal lake) ಹೋಗುತ್ತೇವೆ. ಅಲ್ಲಿ  ನಿಮ್ಮ ಮುಂದಿನ ಪ್ರಯಾಣದ ವಿವರಗಳನ್ನು ತಿಳಿಸಲಾಗುವುದು ಎಂದ ರಾಯಿಸ್.

Dal Lake Boat

ದಾಲ್ ಲೇಕ್.. ನೋಟ ತೀರುವವರೆಗೂ ಸರೋವರ. 18 ಸ್ಕ್ವೇರ್ ಕಿಲೋಮೀಟರ್ ವ್ಯಾಪಿಸಿಕೊಂಡಿರುವ ಸರೋವರದಲ್ಲಿ ಪುಟ್ಟ್ಟ  ದೋಣಿಯೊಂದರಲ್ಲಿ ನಮ್ಮ ಲಗೇಜ್ ಗಳನ್ನು ಹಾಕಿ ನಾವೂ ಕುಳಿತುಕೊಂಡೆವು. ಟೂರ್ ಪ್ರೋಗ್ರಾಮ್ ನ ಪ್ರಕಾರ ನಾವಂದು ಬೋಟ್ ಹೌಸ್ ನಲ್ಲಿ(boat house) ಉಳಿಯುವುದು ಎಂದಿತ್ತು. ನನಗಂತೂ ಯಾವುದೋ ಸಿನಿಮಾ ಸೆಟ್ ನಲ್ಲಿದ್ದಂತ ಅನುಭವ.. ಮಳೆ ನಿಂತು ಮಸುಕಾದ ವಾತಾವರಣದಲ್ಲಿ ದೂರದಲ್ಲಿ ಮಂಜು ಮುಸುಕಿದ ಬೆಟ್ಟಗಳು, ನದಿಯ ದಡದುದ್ದಕ್ಕೂ ಆತುಕೊಂಡಿರುವ ಬೋಟ್ ಹೌಸ್ ಗಳು.. ನಾವು ಗಡಗಡ ನಡುಗುತ್ತಾ ದೋಣಿಯ ಮೇಲೆ. ಅಲ್ಲೇ ದೋಣಿಯ ಮೇಲೆ ಬಂದ ಒಬ್ಬ ಕಾಶ್ಮೀರಿ ನಮ್ಮ ದೋಣಿಯ ಹತ್ತಿರ ಬಂದು ಕೇಸರಿ ತೆಗೆದುಕೊಳ್ಳಿ ಎಂದು ದುಂಬಾಲು ಬಿದ್ದ. ನಾನು, ಸ್ವಲ್ಪ ತಡೆಯಯ್ಯಾ ಇದೀಗ ಕಾಶ್ಮೀರಕ್ಕೆ ಕಾಲಿರಿಸಿದ್ದೇವೆ, ಲಗೇಜ್ ಕೂಡ ಇಳಿಸಿಲ್ಲ ಎಂದು ಕೊಂಯ್ ಎಂದೆ. 

ಅಲ್ಲಿ ಹಿಂದಿ ಓಡುತ್ತದೆ ಎಂದು ನನಗಾಗಲೇ ಅರಿವಾಗಿದ್ದರಿಂದ ಭಾಷಾ ಸಮಸ್ಯೆ ನಮಗೆ ತಲೆದೋರಲಿಲ್ಲ. ನಮ್ಮನ್ನು ಸ್ವಾನ್ ಪ್ಯಾಲೇಸ್ ಬೋಟ್ ಹೌಸ್ ಎಂದು ಬೋರ್ಡ್ ಇದ್ದಲ್ಲಿ ಇಳಿಸಲಾಯಿತು.. ಅಲ್ಲಿ  ನಮ್ಮೊಂದಿಗೆ ಪ್ರಯಾಣದಲ್ಲಿ ಜೊತೆಯಾಗಲಿದ್ದವರು ಕಾಯುತ್ತಿದ್ದರು..14 ಜನರ ಟೀಮ್ ಆಗಿತ್ತು ನಮ್ಮದು, ನಾವು ಮೂವರನ್ನು ಹೊರತುಪಡಿಸಿದರೆ ಎಲ್ಲರೂ ಮದ್ರಾಸಿಗಳು.. ಯಾರಿಗೂ ಹಿಂದಿ ಬರುವುದಿಲ್ಲ.. ಎಲ್ಲಾ ಮಾಹಿತಿಗಳನ್ನು ಇಂಗ್ಲಿಷಿನಲ್ಲಿಯೇ ನೀಡಲು ಅವರು ಟೂರ್ ಮ್ಯಾನೇಜರ್ ಗೆ ವಿನಂತಿಸಿದರು. 

ಇವತ್ತಿನ ನಿಮ್ಮ ಸರೋವರದ ಸುತ್ತಾಟಕ್ಕೆ ತೆರಳಬಹುದು ಎಂದು ಹೇಳಿ ಪ್ರತಿ ಕುಟುಂಬದವರಿಗೆ ಒಂದೊಂದು ದೋಣಿಯನ್ನು ಫಿಕ್ಸ್ ಮಾಡಿದರು. ಹೀಗೇ ಕಾಶ್ಮೀರಕ್ಕೆ ಕಾಲಿರಿಸಿದ ಮೊದಲ ದಿನವೇ ದಾಲ್ ಸರೋವರದ ಸುತ್ತಾಟದೊಂದಿಗೆ ನಮ್ಮ ತಿರುಗಾಟ ಪ್ರಾರಂಭವಾಯಿತು. ಅಲ್ಲಿನ  ತೇಲುವ ಮಾರುಕಟ್ಟೆಯನ್ನು(floating market) ನೋಡಿ ನಾನು ದಂಗಾಗಿ ಹೋದೆ. ಎಲ್ಲವೂ ದೋಣಿಯ ಮೇಲೇ ಮಾರಲ್ಪಡುತ್ತದೆ. ಹೂವು, ತರಕಾರಿ, ಅಂಗಿ, ಬಳೆ, ಸರ, ಕೇಸರ್,(kesar) ಅಲ್ಲಿ ಎಲ್ಲವೂ ದೋಣಿ ಮೇಲೆ.. ಅಲ್ಲಿ ಎಲ್ಲಾ ದೋಣಿಗಳೂ ಚಲಿಸುವುದು ಹುಟ್ಟು ಹಾಕುವ ಮುಖಾಂತರವೇ. ಯಾವುದೇ ದೋಣಿಗಳಿಗೆ ಮೋಟಾರ್ ಗೀಟಾರ್ ವ್ಯವಸ್ಥೆಯಿಲ್ಲ. ಹಾಗಾಗಿ ಪ್ರಶಾಂತತೆಯ ಇನ್ನೊಂದು ಅರ್ಥವೇ ಈ ದಾಲ್ ಸರೋವರ ಯಾನ ಅನಿಸಿಬಿಡುತ್ತದೆ. 

ಮಾಯಾ ಜಾಗತ್ತಿನಲ್ಲಿ ದೋಣಿ ಯಾನ

ಜೀವನದ ಎಲ್ಲಾ ಜಂಜಾಟಗಳಿಂದ ದೂರ ಸರಿದಂತೆ ದೋಣಿಯಾನ ನಮ್ಮನ್ನು ಮಾಯಾ ಜಗತ್ತಿಗಿಳಿಸಿಬಿಡುತ್ತದೆ. ನಾವಂತೂ ಹೋದ ಸಮಯ ಕತ್ತಲಾಗುವ ವೇಳೆಯಾದ್ದರಿಂದ ಸರೋವರ ಮತ್ತೂ ಮೋಹಕತೆಯಲ್ಲಿ ಲೀನವಾಗುತ್ತಿತ್ತು. ಒಂದೆಡೆ ಪರ್ವತಗಳ ನೋಟ, ಮತ್ತೊಂದೆಡೆ ಚಿಕ್ಕಚಿಕ್ಕ ಅರಮನೆಗಳಂತೆ ಶೋಭಿಸುವ ಬೋಟ್ ಹೌಸ್ ಗಳ ಸಾಲು, ದೇವನಗರಿಗೆ ಅಡಿ ಇಟ್ಟೇವೇನೋ ಎಂಬಂತೆ ಭಾಸವಾಗುತ್ತಿತ್ತು. 

ಪ್ರಯಾಣದ ಅಷ್ಟೂ ಸುಸ್ತು ಬಸಿದುಹೋಗುವ ದೋಣಿಯಾನ ಅದು. ಶಾಂತತೆ ಎನ್ನುವುದು ಹೇಗಿರುತ್ತದೆ ಎಂಬುದನ್ನು ಅಲ್ಲಿ ಹೋಗಿ ಅನುಭವಿಸಬೇಕು. ನಮ್ಮ ದೋಣಿ ನಡೆಸುವವನೂ ಸಹ ಅಷ್ಟೊಂದು ಮಾತುಗಾರನಾಗಿರಲಿಲ್ಲ. ಮೊದಲರ್ಧ ತಾಸಂತೂ ಅವನು ಮಾತೇ ಆಡಲಿಲ್ಲ. ನಂತರ ತೇಲುವ ಪೇಟೆಯಲ್ಲಿ ಏನಾದರೂ ಖರೀದಿಸುತ್ತೀರೋ ಎಂದು ಮಾತು ಆರಂಭಿಸಿದ. ಮೊದಲನೇ ದಿನವಾದ್ದರಿಂದ ನನಗೂ ಖರೀದಿಯಲ್ಲಿ ಅಂಥಾ ಆಸಕ್ತಿಯಿರಲಿಲ್ಲ. ಇಲ್ಲ ಖರೀದಿಯಲ್ಲಿ ಸಮಯ ವ್ಯರ್ಥ ಮಾಡುವುದಿಲ್ಲವೆಂದು ಹೇಳಿದೆ. 

ದೋಣಿಯಾನದಲ್ಲಿ ನಮ್ಮ ಹಿಂದೆ ಮುಂದೆ ಅಕ್ಕ ಪಕ್ಕ ಎಲ್ಲಾ ಬದಿಯಿಂದಲೂ ದೋಣಿಗಳು ಅಡ್ಡಾಡುತ್ತಿದ್ದರೂ ಎಲ್ಲಿಯೂ ಒಂದಕ್ಕೊಂದು ತಾಗದೇ ಮುಂದೆ ಹೋಗುವುದು ಸೋಜಿಗವೆನಿಸುತ್ತದೆ. ಕಾಶ್ಮೀರಿ ಭಾಷೆ ಮಾತನಾಡುತ್ತಿದ್ದ ಅವರಿಗೆಲ್ಲರಿಗೂ ಹಿಂದಿ ಬಹಳ ಚೆನ್ನಾಗಿ ಗೊತ್ತಿತ್ತು. ಮತ್ತು ಪ್ರವಾಸಿಗರಿಗೆ ವಿವರಿಸುವಷ್ಟು ಇಂಗ್ಲಿಷನ್ನೂ ಕಲಿತಿಟ್ಟುಕೊಂಡಿದ್ದಾರೆ. ಅಷ್ಟು ದೊಡ್ಡ ತೇಲುವ ಮಾರುಕಟ್ಟೆಯಲ್ಲಿ ಒಂದೇ ಒಂದು ಅಂಗಡಿಯಲ್ಲಿ ಮಹಿಳೆಯರು ವಸ್ತುಗಳನ್ನು ಮಾರಲು ಕುಳಿತಿಲ್ಲದಿರುವುದು ನನಗೆ ಆಶ್ಚರ್‍ಯವನ್ನುಂಟುಮಾಡಿತ್ತು. 

ಮುಂದಿನ ಕಂತು: ಶಂಕರಾಚಾರ್ಯ ಬೆಟ್ಟದ ಮೇಲೆ ಈಶ್ವರನಿಗೆ ಅಭಿಷೇಕ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

One Comment

  1. ನಿಮ್ಮ ಕಾಶ್ಮೀರ ಪಯಣ ಓದಿದೆ. ವಾವ್ಹ್! ಎಷ್ಟು ಸುಂದರವಾದ ಅನುಭವ ನಿಮ್ಮದು.ಓದುತ್ತಾ ಓದುತ್ತಾ ನಾನು ನಿಮ್ಮೊಂದಿಗೆ ಪ್ರಯಾಣ ಮಾಡಿದ ಪೀಲ್ ಆಯ್ತು. ಖುಷಿಯಾಯಿತು ಓದಿ.

Leave a Reply

Your email address will not be published. Required fields are marked *

Back to top button