ಕಡಲಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸಂಭ್ರಮ: ಸಿರಿ ಬರೆಯುವ ಫರಸನ್ ಡೈರಿಯ ಕೊನೆಯ ಕಂತು
ಸೌದಿ ಅರೇಬಿಯಾದಲ್ಲಿರುವ(saudi arabia) ಅತಿ ಸುಂದರ ಬೀಚು, ಅಲ್ಲಿ ಗಾಳ ಹಾಕಿ ಮೀನು ಹಿಡಿದಿದ್ದು, ಸ್ವಚ್ಛ ಕಡಲಲ್ಲಿ ಈಜಿದ್ದು ಎಲ್ಲವೂ ಮರೆಯಲಾಗದ ನೆನಪುಗಳೇ. ಆ ಸವಿನೆನಪುಗಳಿಗೆ ನಮಸ್ಕಾರ.
ಮಾರನೆಯ ದಿನ ತಿಂಡಿ ತಿಂದು ಗೈಡ್ ನ ಆಗಮನಕ್ಕೆ ಕಾದು ನಿಂತಿದ್ದೆವು. ತನ್ನ ಗಾಡಿಯಲ್ಲಿ ಬಂದ ಅಬು ಮುಹನ್ನದ್ ಎಲ್ಲರಿಗಿಂತ ತಾನೇ ಠಾಕೂ ಠೀಕಾಗಿ ಕೌಬಾಯ್(cow boy) ರೀತಿ ತಯಾರಾಗಿ ನಿಂತಿದ್ದ. ಹಿಂದಿನ ದಿನ ಇವನೊಡನೆ ನಮ್ಮನ್ನ ನೋಡಿದ್ದ ಹೋಟೆಲಿನ ಬೆಂಗಾಲಿ ಕೆಲಸದವರು, ಸರಿಯಾದ ಗೈಡ್ ಅನ್ನೇ ಹಿಡಿದಿದ್ದೇವೆಂದೂ, ಇವನೊಂಥರಾ ಸಿ.ಐ.ಡಿ ಎಂದೂ ಎಲ್ಲಾ ಪೋಲೀಸಿನವರ ಜೊತೆ ಓಡಾಡುತ್ತಿರುತ್ತಾನೆಂದೂ ಬಿಲ್ಡಪ್ ಕೊಟ್ಟರು.
ನೀವು ಇದನ್ನು ಇಷ್ಟಪಡಬಹುದು: ಸಮುದ್ರ ತೀರ, ಕತ್ತಲ ರಾತ್ರಿ, ವೃದ್ಧ ಬೆಸ್ತ ಅಬು ಅಲಿ: ಸಿರಿ ಬರೆಯುವ ಫರಸನ್ ಡೈರಿ ಭಾಗ 2
ಅಬು ಮುಹನ್ನದ್ ನಮ್ಮನ್ನು ಬಹಳಷ್ಟು ದೂರ ಕರೆದುಕೊಂಡು ಒಂದು ಹಳ್ಳಿಯ ಕಡೆ ಹೋದ ಅಲ್ಲಿಂದ ಮುಂದೆ ಸಮುದ್ರದ ತಟದಲ್ಲಿ ತಂದು ನಿಲ್ಲಿಸಿದ, ನಾನು ನೋಡಿದ ಅತ್ಯಂತ ಸುಂದರ ಬೀಚ್ ಇದು. ಯಾವುದೋ ದೂರದ ಸ್ವರ್ಗಕ್ಕೆ ಕರೆದುಕೊಂಡು ಬಂದಿದ್ದಾನೆ ಎಂದೇ ಆನಿಸಿತು. ಕಾರಿನಿಂದಿಳಿದು ನೀರಿಗೆ ಕಾಲಿಡುತ್ತಲೇ ಕೆಂಪು ಏಡಿಯೊಂದು(red crab) ದುಡುದುಡು ಓಡುತ್ತಾ ಬೃಹದಾಕಾರದ ಕಲ್ಲಿನ ಕೆಳಗೆ ನುಸುಳಿಕೊಂಡಿತು. ನನ್ನ ಪಾದದ ಕೆಳಗೆ ಕಚುಗುಳಿ ಇಟ್ಟ ಅನುಭವ. ಕಾಲೆತ್ತಿ ನೋಡಿದರೆ ನೀಲಿ ಬಣ್ಣದ ಪುಟ್ಟ ಮೀನು ಪರದಾಡುತ್ತಾ ಮುಂದೆ ಹೋಗಿ ಈಜಿ ಕೊಂಡು ಹೊರಟೇ ಹೋಯಿತು.
ಕಾಲಿಗೆ ಚುಚ್ಚಿತು ಶಂಖದ ಹುಳು
ನೆನ್ನೆಯ ಅನುಭವ ಇದ್ದುದರಿಂದ ಇವತ್ತು ಸ್ವಿಮ್ ಸೂಟ್ ಧರಿಸಿಯೇ ಅದರ ಮೇಲೆ ಒಂದು ಕಾರ್ಡಿಗನ್(cardigan) ಹಾಕಿಕೊಂಡು ಬಂದಿದ್ದೆ. ಕಾರ್ಡಿಗನ್ ತೆಗೆದು ನೀರಿನಲ್ಲಿ ಈಜಲು ಸ್ವಲ್ಪ ಆಳಕ್ಕೆ ಹೋಗೋಣವೆಂದು ಮುಂದೆ ಹೋಗುತ್ತಿರುವಾಗ ಬಹಳ ಜೋರಾಗಿ ಬೆರಳಿಗೆ ಏನೋ ಚುಚ್ಚಿ ತಲೆ ಸುತ್ತು ಬರುವಂತಾಯಿತು, ಏಡಿ ಕಚ್ಚಿತೇನೋ ಎಂದುಕೊಂಡು ಕಾಲೆತ್ತಿ ನೋಡಿದರೆ ಉದ್ದದ ಬಿಳಿಯ ಮುಳ್ಳು. ಯಾವ ಪ್ರಾಣಿಯದೋ ಏನು ಕಥೆಯೋ. ಮಕ್ಕಳಿಗೆ ಈಕಡೆ ಬರಬೇಡಿ ಎಂದು ಹೇಳಿದೆ. ಅಷ್ಟರಲ್ಲಿ ರವಿ ಅನ್ನುವವರಿಗೂ ಚುಚ್ಚಿತು. ಕೃಷ್ಣ ನಿಧಾನಕ್ಕೆ ನಾಜೂಕಾಗಿ ಅದೇನೆಂದು ಎತ್ತಿ ನೋಡಿದರೆ ಒಂದು ದೊಡ್ಡ ಶಂಖ.
ಆ ಶಂಖದ ಸುತ್ತಾ ಮುಳ್ಳುಗಳು ಬಟ್ಟೆ ಹೊಲಿಯುವ ಸೂಜಿಯಷ್ಟು ದಪ್ಪದ ಚೂಪಾದ ಮುಳ್ಳುಗಳು. ಅದರೊಳಗೊಂದು ಶಂಖದ ಹುಳು. ಅದರ ಆಂಟೆನಾವನ್ನ ಮುಂದೆ ಚಾಚಿ ಆಡಿಸುತ್ತಿತ್ತು. ಈ ವಿಚಿತ್ರವನ್ನ ಕಂಡು ಆಶ್ಚರ್ಯಚಕಿತರಾದೆವು. ಎಲ್ಲರೂ ಈ ವಿಚಿತ್ರವನ್ನ ಪರಿಶೀಲಿಸಿ ನೋಡಿದ ಮೇಲೆ, ಒಂದಷ್ಟು ದೂರ ಸಮುದ್ರದಲ್ಲೇ ಇದನ್ನ ಬಿಟ್ಟೆವು. ಶಂಖದ ಹುಳುವಿನಂಥ ನಿರುಪದ್ರವಿ(?) ಹುಳುವೂ ಎಂಥೆಂಥ ಆಯುಧಗಳನ್ನ ತಯಾರಿಸಿ ಇಟ್ಟು ಕೊಂಡಿದ್ದವಲ್ಲಾ ಎಂದು ಆಶ್ಚರ್ಯವಾಯಿತು.
ಸಮುದ್ರದ ನೀರು ಉಪ್ಪು ಹೌದು. ಆ ನೀರು ಉಪ್ಪಿರುತ್ತದೆಂದು ನಮ್ಮ ನಾಲಿಗೆಗೂ ನೆನಪಿರುತ್ತದೆ. ಆದರೆ ಬಾಯಿಗೆ ಆ ನೀರು ತಗುಲಿದ ತಕ್ಷಣ ಒಂದು ರೀತಿಯ ಶಾಕ್ ಆಯಿತು. ಈ ಕೋವಿಡ್ ದೆಸೆಯಿಂದ ಸಮುದ್ರದ ಕಡೆ ಮುಖ ಮಾಡಿ ಬಹಳ ದಿನಗಳಾದ್ದರಿಂದ ಎಲ್ಲಾ ಅನುಭವಗಳು ಮರೆತೇ ಹೋಗಿವೆ ಅಂದುಕೊಂಡೆ.
ಯಲ್ಲಾ ಯಲ್ಲಾ ಎಂದ್ರೆ ಎಸ್ ಆಲ್ ರೈಟ್ ಅಂತರ್ಥ
ನನಗೆ ಸುಮಾರಾಗಿ ಈಜಲು ಬರುವುದರಿಂದ ಆದಷ್ಟು ಮುಂದೆ ಹೋದೆ. ನೀರು ಅಷ್ಟು ಶುಭ್ರವಾಗಿದ್ದರಿಂದ ಹಾಗೂ ಈಜು ಕನ್ನಡಕ ಧರಿಸಿದ್ದರಿಂದ ಸುಲಭವಾಗಿ ನೀರಿನಾಳದಲ್ಲಿ ತರಾವರಿಯ ಮೀನುಗಳು ಕಂಡವು. ಮನಸ್ಸು ತೃಪ್ತಿಯಾಗುವವರೆಗೂ ಈಜಿ ಹೊರಬಂದ ಮೇಲೆ, ಅಬು ಮುಹನ್ನದ್ “ಯಲ್ಲಾ ಯಲ್ಲಾ”(yalla yalla) (ಎಸ್ ಆಲ್ ರೈಟ್ ಎಂದರ್ಥ) ಎಂದು ಎಲ್ಲೆಲ್ಲೋ ಹತ್ತಿಸಿಕೊಂಡು ಹೊರಟ. ಒಂದಷ್ಟು ಪುಟ್ಟ ಪುಟ್ಟ ಗುಡ್ಡಗಳನ್ನು ದಾಟಿಸಿ, ನಮ್ಮ ಕೈಗಳಿಗೆ ಮೀನು ಹಿಡಿಯಲು ಗಾಳ, ದಾರಗಳನ್ನೂ, ಪಕ್ಕದಲ್ಲಿ ಒಂದಷ್ಟು ಬೈಟ್ ಮೀನುಗಳನ್ನೂ ಕೊಟ್ಟ. ಮೀನು ಸಿಕ್ಕಾಗ ಸುಮ್ಮನೆ ನೋಡಿ ವಾಪಾಸ್ಸು ಬಿಟ್ಟು ಬಿಡೋಣೆಂದು ನಾನು ಕೃಷ್ಣ ಮಾತಾಡಿಕೊಂಡೆವು.
ನಾವು ಕುಳಿತ ಜಾಗದಿಂದ ಕಪ್ಪು, ಕಡು ನೀಲಿ, ಹಳದಿ, ತಿಳಿಗೆಂಪು, ಸಿಮೆಂಟ್ ಬಣ್ಣದ ಮೀನುಗಳು ಧಾರಾಳವಾಗಿ ಈಜಾಡುತ್ತಿದ್ದುದು ಕಾಣಿಸುತ್ತಿತ್ತು. ಬೈಟ್ ಮೀನನ್ನು ಲಾಳಕ್ಕೆ ಸಿಕ್ಕಿಸಲು ಕಷ್ಟವಾಗಿ ಪಕ್ಕದಲ್ಲಿ ಕುಳಿತಿದ್ದ ನನ್ನ ಸ್ನೇಹಿತೆ ಚೇತನಾ ಅವರ ಮಗಳಿಗೆ ಹಾಕಿಕೊಡಲು ಹೇಳಿ, ನೀರೊಳಕ್ಕೆ ಬಿಟ್ಟೆವು. ಆ ಮೀನುಗಳೋ ಬಹಳ ಚಾಕಚಕ್ಯತೆಯಿಂದ ಗಾಳಕ್ಕೆ ಸಿಗದೆ ಅಕ್ಕಪಕ್ಕದಲ್ಲೆಲ್ಲಾ ತಿಂದು ನಾವು ದಾರ ಮೇಲಕ್ಕೆಳೆದಾಗ ಬರೀ ಬೈಟ್ ಮೀನಿನ ಮೂಳೆ ಮೇಲಕ್ಕೆ ಬರುತ್ತಿತ್ತು. ನಮ್ಮ ಜೊತೆಗಿದ್ದ ಚೇತನ ಮತ್ತು ರೋಹಿಣಿ ಎನ್ನುವವರಿಗೆ ಕಾಫಿ ಪುಡಿ ಬಣ್ಣದ ಮತ್ತು ಇದ್ದಲುಗಪ್ಪಿನ ಮೀನು ಸಿಕ್ಕಿ ಹಿರಿ ಹಿರಿ ಹಿಗ್ಗಿದರು.
ನೀವು ಇದನ್ನು ಇಷ್ಟಪಡಬಹುದು: ಸೌದಿ ಅರೇಬಿಯಾದಲ್ಲೊಂದು ಅದ್ಭುತ ದ್ವೀಪ: ಸಿರಿ ಹುಲಿಕಲ್ ಬರೆಯುವ ಫರಸನ್ ಡೈರಿ
ಸುಮಾರು ಒಂದು ಗಂಟೆ ಕಳೆದರೂ ನಮಗೇನೂ ಸಿಗಲಿಲ್ಲ. ಚಿಕ್ಕ ಮಕ್ಕಳಿಗೆಲ್ಲಾ ಬೋರ್ ಆಗಿ ಬೈಟ್ ಮೀನುಗಳನ್ನು ಸುಮ್ಮನೆ ನೀರಿಗೆ ಎಸೆಯತೊಡಗಿದರು. ಅದೆಲ್ಲಿದ್ದವೋ ಏನೋ ಒಂದಷ್ಟು ಸೀಗಲ್ ಥರದ ಹಕ್ಕಿಗಳು ನಮ್ಮಗಳ ತಲೆಯ ಮೇಲೆ ಒಂದಷ್ಟು ದೂರದಲ್ಲಿ ಗಿರಕಿ ಹೊಡೆಯತೊಡಗಿದವು. ಮಕ್ಕಳು ಖುಷಿಯಿಂದ ಕೂಗಿಕೊಂಡು ಅವಕ್ಕೆ ಬೈಟ್ ಮೀನುಗಳನ್ನ ಎಸೆಯತೊಡಗಿದರು. ನಮ್ಮ fishing ಕಾರ್ಯಕ್ರಮ ಬರ್ಡ್ ಫೀಡಿಂಗ್ ಕಾರ್ಯಕ್ರಮವಾಗಿ ಬದಲಾಯಿತು. ಅಲ್ಲಿಂದ ಹೊರಡುವ ಹೊತ್ತಿಗೆ, ಬಹಳ ಜನ ಫಿಷಿಂಗ್(pshing) ಮಾಡಿ ಅಲ್ಲಲ್ಲಿಯೇ ಬಿಟ್ಟು ಹೋದ ಗಾಳಗಳು, ನೈಲಾನ್ ದಾರಗಳು ಕಂಡವು. ನಾವು ಸಾಧ್ಯವಾದಷ್ಟು ಎಲ್ಲವನ್ನೂ ಗುಡ್ಡೆ ಹಾಕಿ ಒಂದು ಚೀಲದಲ್ಲಿ ತುಂಬಿ ಟ್ರಾಷ್‌ಕ್ಯಾನ್ ಸಿಕ್ಕಾಗ ಎಸೆಯೋಣವೆಂದು ಕಾರಿನಲ್ಲೇ ತುಂಬಿದೆವು. ಅಬು ಮುಹನ್ನದ್ ಹತ್ತಿರದ ಮತ್ತೊಂದು ಬೀಚ್ ಗೆ ಕರೆದುಕೊಂಡು ಹೋದ. ಮತ್ತಷ್ಟು ಸುಂದರವಾದ ಬೀಚ್, ಆ ನೀರಿಗೆ ಅಂಟಿಕೊಂಡಂತೆ ಅಲೆಗಳಿಂದ ಹಿತವಾದ ಮಸಾಜ್ ಮಾಡಿಸಿಕೊಂಡಂ ತೆ ನಿಂತಿದ್ದ ಬೃಹದಾಕಾರದ ಬಂಡೆ. ಆ ಬಂಡೆಗೇ ಹಗ್ಗಕಟ್ಟಿ ಮಣೆ ಬಡಿದು, ಉಯ್ಯಾಲೆ ಮಾಡಿಟ್ಟಿದ್ದರು. ಇನ್ನು ಕೇಳಬೇಕೇ.. ಎಲ್ಲರೂ ಉಯ್ಯಾಲೆಯ ಮೇಲೆ ಕೂತು, ನಿಂತು ಜೀಕಿದ್ದೇ ಜೀಕಿದ್ದು.
ಅಲ್ಲಿಂದ ಮತ್ತೊಂದು ಗುಡ್ಡದ ಮೇಲೆ ಕರೆದುಕೊಂಡು ಹೋಗಿ ಕೂರಿಸಿದ ಅಬು ಮುಹನ್ನದ್, ತಿಳಿ ನೀಲಿಕಡಲಲ್ಲಿ ಕಿತ್ತಲೆ ಬಣ್ಣದ ಸೂರ್ಯ ನಿರಾಯಾಸವಾಗಿ ಇಳಿಯುವುದನ್ನು ನೋಡಿದೆವು. ಬೆಳಗ್ಗೆ ಶಂಖ ಕಾಲಿಗೆ ಚುಚ್ಚಿತ್ತಲ್ಲ, ಆ ಜಾಗದಿಂದ ಆಗಾಗ ಮೈಗೆಲ್ಲಾ ಕರೆಂಟ್ ಪಾಸ್ ಆಗುತ್ತಿದೆ ಅನ್ನಿಸುತ್ತಿತ್ತು. ಇದೇನಪ್ಪಾ ಗ್ರಹಚಾರ ಅಂದುಕೊಂಡು ಅದೇ ಶಂಖದಿಂದ ಚುಚ್ಚಿಸಿಕೊಂಡಿದ್ದ ರವಿ ಅನ್ನುವವರಿಗೆ, “ರವಿ ನಿಮಗೇನಾದರೂ ಚುಚ್ಚಿಸಿಕೊಂಡ ಜಾಗ ನೋಯುತ್ತಿದೆಯೆ?” ಎಂದೆ? ಅದಕ್ಕವರು “ನೋಯ್ತಾ ಇಲ್ಲ, ಕರೆಂಟ್ ಹೊಡೆದಂಗೆ ಆಗುತ್ತಿದೆ ಎಂದರು.” (ಮುಂದಿನ ದಿನದವರೆಗೂ ಇಬ್ಬರಿಗೂ ಅದೇ ಅನುಭವವವಾಗುತ್ತಿತ್ತು.)
ಶಂಖದ ಹುಳುವನ್ನು ತಿನ್ನಲು ಬಂದ ಚಿಕ್ಕ ಪುಟ್ಟ ಪ್ರಾಣಿಗಳು ಇದರಿಂದ ಚುಚ್ಚಿಸಿಕೊಂಡು ಕರೆಂಟು ಹೊಡೆದಂತಾಗಿ ನಿಷ್ಕ್ರಿಯವಾಗುತ್ತವೇನೋ. ಸಮುದ್ರ ಒಂದು ನಿರಂತರವಾದ ಎಂದೂ ಮುಗಿಯದ ಬೆರಗುಗಳನ್ನು ಹಿಡಿದಿಟ್ಟಿದೆ ಎನ್ನಿಸಲು ಇಂಥ ಚಿಕ್ಕಚಿಕ್ಕ ಅನುಭವಗಳೂ ಕಾರಣವೇನೋ.
ಇಡೀ ದಿನದ ಸುತ್ತಾಟ ಮುಗಿಸಿ ಅಲ್ಲಿಂದ ಹೋಟೆಲ್ಲಿಗೆ ವಾಪಾಸ್ಸು ಬಂದು ವಿರಮಿಸಿದೆವು. ಮಾರನೆಯ ದಿನ ವಾಪಸ್ಸು ಫೆರ್ರಿಯಲ್ಲಿ(ferry) ಹೊರಟಾಗ ಮನಸ್ಸು, ಮೊಬೈಲಿನ ತುಂಬಾ ಈ ಅದ್ಭುತ ದ್ವೀಪ ಫರಸನ್ ನ(farasan) ಚಿತ್ರಗಳು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.