ನಡಿಗೆ ನಮ್ಮ ಖುಷಿಗೆಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಬೆಳ್ತಂಗಡಿ ಸಮೀಪದಲ್ಲಿದೆ ಸುಂದರ ಎರ್ಮಾಯಿ ಜಲಪಾತ

ಕಾಲೇಜು ಪ್ರವಾಸಗಳು ಯಾವಾಗಲೂ ಬಹುಕಾಲ ನೆನಪಲ್ಲಿ ಉಳಿಯುತ್ತವೆ. ಅಂಥಾ ಒಂದು ಚಂದದ ಕತೆಯನ್ನು ಉಜಿರೆ ಎಸ್ ಡಿಎಂ ಕಾಲೇಜು ವಿದ್ಯಾರ್ಥಿನಿ ಮಧುರ ಭಟ್ಟ ಬರೆದಿದ್ದಾರೆ. 

ಪ್ರವಾಸದಲ್ಲಿ ನಾವು ಕಳೆಯುವ ಪ್ರತಿ ಕ್ಷಣವೂ ನಮಗೆ ಒಂದಲ್ಲಾ ಒಂದು ಪಾಠ, ಅನುಭವವನ್ನು ನೀಡುತ್ತಲೇ ಇರುತ್ತದೆ. ಅಂಥಾ ಒಂದು ಪ್ರವಾಸದ ಕಥೆಯನ್ನು ನಾನು ನಿಮ್ಮಲ್ಲಿ ಹಂಚಿಕೊಳ್ಳಬೇಕು. ಏಕೆಂದರೆ ಆ ಪ್ರವಾಸ ಬರೀ ಪ್ರವಾಸವಾಗಿರಲಿಲ್ಲ. ಅದು ನಮಗೊಂದು ಜೀವನ ಪಾಠ(life lesson) ಹೇಳಿಕೊಟ್ಟಿತ್ತು. 

ಅಂದು ನಾವು ಸ್ನೇಹಿತರೆಲ್ಲ ಸೇರಿ ನಮ್ಮ ತರಗತಿಗೆ ರಜೆ ಹಾಕಿ(class bunk) ಪ್ರವಾಸವನ್ನು ಮಾಡುವ ಯೋಜನೆಯನ್ನು ಹಾಕಿದ್ದೆವು. ಆದರೆ ಅಲ್ಲಿ ನಮಗೊಂದು ಅಡೆಚಣೆ ಎಂದರೆ ನಾವು ಈಗ ಮಾತ್ರ ಅಂದರೆ ಒಂದು ದಿನದ ಹಿಂದೆ ಪರಿಚಿತರಾದ ಸ್ನೇಹಿತರು ಯಾರಿಗೂ ಯಾರ ಬಗ್ಗೆಯೂ ತಿಳಿದಿಲ್ಲ. ಆದರೂ ನಾವೆಲ್ಲಾ ಪ್ರವಾಸಕ್ಕೆ ಒಟ್ಟಿಗೆ ಹೋಗಲು ಬಕ ಪಕ್ಷಿಯಂತೆ ಕಾಯುತ್ತಿದ್ದೆವು. 

Lohith Bittira

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಜನವರಿ 13, 2021ರಂದು ನಾವೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangadi) ತಾಲೂಕಿನ ಎರ್ಮಾಯಿ ಜಲಪಾತಕ್ಕೆ(Ermayi Falls) ಹೋಗಲು ಸಕಲ ಸಿದ್ಧತೆಯೊಂದಿಗೆ ಬಂದು ಎಲ್ಲರೂ ಒಂದೇ ಕಡೆ ಸೇರಿದೆವು. ಆಗ ನನ್ನ ಫೋನಿಗೆ ನಮ್ಮ ಗುರುಗಳ ದೂರವಾಣಿ ಕರೆ ಬಂತು. ನಾನು ಆ ಕಾಲ್ ಪಿಕ್ ಮಾಡಿ ನಮಸ್ತೆ ಸರ್ ಎಂದೆ ಆ ಕಡೆಯಿಂದ ನಮಸ್ತೆ, ಈಗ ನೀವು ನಮ್ಮ ಒಟ್ಟಿಗೆ ಒಂದು ಕೆಲಸಕ್ಕೆ ಬರಬೇಕು, ತರಗತಿಯಲ್ಲಿ ಯಾರೂ ಕಾಣುತ್ತಿಲ್ಲ. ಎಲ್ಲಾ ಎಲ್ಲಿದ್ದೀರಿ ಎಂದು ಕೇಳಿದರು. ನನಗೆ ಒಮ್ಮೆಲೇ ಯಾರೋ ಬಂದು ನನ್ನ ಗಂಟಲನ್ನು ಹಿಚುಕಿದಂತಾಯಿತು. ಸರ್ ಅದು ಅದು ಎಂದು ಹೇಳುತ್ತಾ ನನಗೆ ಏನೂ ಗೊತ್ತಿಲ್ಲ ಅನ್ನುವ ಹಾಗೆ ವರ್ತಿಸಿ ಮೈ ಹುಷಾರಿಲ್ಲ ಎಂದು ಬಿಟ್ಟೆ. ಅದಾದ ನಂತರ ನಾವೆಲ್ಲಾ ಸ್ನೇಹಿತರು ಸೇರಿ ಎರ್ಮಾಯಿ ಜಲಪಾತಕ್ಕೆ ಹೊರಟೆವು. 

ಹೊರಟಿದ್ದೇನೋ ನಿಜ. ಆದರೆ ಹೋಗಲು ನಮಗೆ ದಾರಿ ಮತ್ತು ಗಾಡಿ ಬೇಡವೇ. ಅಲ್ಲಿ ಮತ್ತೆ ಸಮಸ್ಯೆ ಎದುರಾಯಿತು ನಾವೆಲ್ಲರೂ ಹೊಸಬರೇ ಆಗಿದ್ದರಿಂದ ನಮಗೆ ಯಾರಿಗೂ ದಾರಿಯೇ ತಿಳಿದಿರಲಿಲ್ಲ. ಹಾಗಾಗಿ ನಾವು ಒಂದು ಜೀಪ್(jeep) ಹತ್ತಿರ ಹೋಗಿ ನಾವು ಎರ್ಮಾಯಿ ಜಲಪಾತಕ್ಕೆ ಹೋಗಬೇಕು, ನಮಗೆ ಅಲ್ಲಿಯ ತನಕ ಬಿಡುವಿರಾ ಎಂದು ವಿನಂತಿ ಮಾಡಿಕೊಂಡೆವು. 

ಅವರು ಅಲ್ಲಿಗೆ ಒಂದೂವರೆ ಸಾವಿರ ದುಡ್ಡು ಆಗುವುದೆಂದು ಹೇಳಿದರು. ನಾನು ಒಮ್ಮೆ ನನ್ನ ಹೃದಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಕಿರು ನಗೆಯೊಂದಿಗೆ ಸರ್ ಅದು ತುಂಬಾ ಹೆಚ್ಚಾಯಿತು, ಸ್ವಲ್ಪ ಕಡಿಮೆ ಮಾಡ್ತೀರಾ ಎಂದು ಕೇಳಿದೆ. ಅದಕ್ಕೆ ಅವರು ಸರಿ ಹಾಗಾದರೆ ನೀವು ಬಾಡಿಗೆ ಗಾಡಿಯನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು. ನಂತರ ಅಲ್ಲಿಂದ ಬಾಡಿಗೆ ಗಾಡಿಗೆ ಕಾದು ಕಾದು ಹಣ್ಣಾಗಿ ಒಂದು ತಾಸಿನ ನಂತರ ಬಾಡಿಗೆ ಗಾಡಿ ಸಿಕ್ಕಿತು.  ಅದರ ಮೇಲೆ ಏರಿ ಕುಳಿತಾಗ ನಮಗೆಲ್ಲ ಎಲ್ಲಿಲ್ಲದ ಖುಷಿ, ಎರ್ಮಾಯಿಗೆ(Ermayi Falls) ಕಡೆಗೂ ಹೊರಟೇ ಬಿಟ್ಟೆವೆಂದು.  

ಅಂತೂ ಇಂತೂ ಆ ಗಾಡಿಯಲ್ಲಿ ಕುತ 20ನಿಮಿಷಕ್ಕೆ ಎರ್ಮಾಯಿಗೆ ಬಂದು ತಲುಪಿದೆವು. ನಂತರ ಅಲ್ಲಿಂದ ಜಲಪಾತ ನೋಡಲು 2 ಕಿಲೋಮೀಟರ್ ನಡೆಯಬೇಕಿತ್ತು ಆ ಕಾಡು ದಾರಿಯಲ್ಲಿ. ಆ ಕಾಡು ಬರಿ ಕಾಡಲ್ಲ ಅದು, ನಮ್ಮನ್ನೆಲ್ಲ ಸೆಳೆಯುವ ಸೌಂದರ್ಯ ಇರುವ ತಾಣ. ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ವಾತಾವರಣ ಹೀಗೆ ಅಲ್ಲಿ ಎಲ್ಲವೂ ಶುದ್ಧವಾಗಿಯೇ ಇತ್ತು. ನಾವು ಎಲ್ಲಾ ಸ್ನೇಹಿತರು ನಮ್ಮ ನಮ್ಮದೆ ಕಥೆ ಪುರಾಣಗಳನ್ನೆಲ್ಲ ಮಾತನಾಡುತ್ತಾ ಕಡೆಗೂ ಜಲಪಾತಕ್ಕೆ ಬಂದು ತಲುಪಿದೆವು. 

ಜಲಪಾತ ಅದು ಬರಿ ಜಲಪಾತವಾಗಿ ನನ್ನ ಕಣ್ಣಿಗೆ ಕಾಣಲೇ ಇಲ್ಲಾ. ಆ ಅವಳ ಜುಳು ಜುಳು ಶಬ್ದ ನನ್ನ ಹೃದಯದ ಮಿಡಿತಕ್ಕೆ ತಕ್ಕಹಾಗೆ ಹೆಜ್ಜೆ ಹಾಕುತ್ತಿದ್ದಂತಹ ಅನುಭವ ನನಗಾಗುತ್ತಿತ್ತು. ನಾವೆಲ್ಲರೂ ಆ ಜಲಪಾತದ ಶುದ್ಧ ನೀರಿನಲ್ಲಿ ಮುಳುಗಿ ಅದರಲ್ಲಿ ಆಟವಾಡಿದೆವು. ಆ ನೀರಿನ ಆಟವೆಲ್ಲ ನನಗೆ ನನ್ನ ಬಾಲ್ಯವನ್ನು ನೆನಪಿಸುತ್ತಿದ್ದವು. ಆಟ ಆಡಿದ ನಂತರ ನಾವೆಲ್ಲಾ ಹಾಡು ಕುಣಿತವೆಲ್ಲ ಮಾಡಿ ಒಂದಿಷ್ಟು ಫೋಟೋ ತೆಗೆದುಕೊಂಡೆವು. ಹೀಗೆ ನಮ್ಮ ಪಯಣ ಸಾಗಿತು ಅಲ್ಲಿಯ ಪಯಣ ಬರಿ ಪಯಣವಾಗಿರದೆ ನಮ್ಮ ಸ್ನೇಹವನ್ನು ಗಟ್ಟಿ ಮಾಡಿತು, ಪರಿಸರದ ಪರಿಚಯವಾಯಿತು, ನಿಸರ್ಗದ ಸೌಂದರ್ಯ ಸವಿಯಲು ಅವಕಾಶವಾಯಿತು. 

ಹೋಗುವುದು ಹೇಗೆ: ಧರ್ಮಸ್ಥಳದ(dharmasthala) ಉಜಿರೆಯಿಂದ(ujire) ಸುಮಾರು 40 ನಿಮಿಷಗಳ ದಾರಿ. ಉಜಿರೆಯಲ್ಲಿ ಜೀಪ್ ಬಾಡಿಗೆಗೆ ಪಡೆದು ಹೋಗಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

One Comment

Leave a Reply

Your email address will not be published. Required fields are marked *

Back to top button