ಆಹಾರ ವಿಹಾರತುಂಬಿದ ಮನೆವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಸಮುದ್ರ ತೀರ, ಕತ್ತಲ ರಾತ್ರಿ, ವೃದ್ಧ ಬೆಸ್ತ ಅಬು ಅಲಿ: ಸಿರಿ ಬರೆಯುವ ಫರಸನ್ ಡೈರಿ ಭಾಗ 2

ಅಪರಿಚಿತ ಜಾಗದಲ್ಲಿ ಭಾಷೆ ಬರದಿದ್ದರೆ ಆಹಾರಕ್ಕೆ ಎಷ್ಟು ಪೇಚಾಡಬೇಕಾಗುತ್ತದೆ ಅನ್ನುವುದು ಗೊತ್ತಿದ್ದವರಿಗಷ್ಟೇ ಗೊತ್ತು. ಆ ಪೇಚಾಟ, ಕಡಲ ಬದಿಯ ಮೌನ, ಕತ್ತಲಿನ ಸೌಂದರ್ಯ ಎಲ್ಲವೂ ಇಲ್ಲಿ ಅಕ್ಷರ ರೂಪದಲ್ಲಿದೆ.  

ಸಿರಿ ಹುಲಿಕಲ್ ಬರೆಯುವ ಫರಸನ್ ಡೈರಿಯ ಎರಡನೇ ಕಂತು

ನಾನು ಬೋಟ್ ಓಡಿಸುತ್ತಿದ್ದರೆ ಕೃಷ್ಣ ನಾಟಕೀಯವಾಗಿ ಎದೆ ಉಜ್ಜಿಕೊಳ್ಳುವುದು, ಹೆದರಿಕೊಂಡಂತೆ ಮಾಡುವುದು ಎಲ್ಲಾ ಮಾಡುತ್ತಿದ್ದ. ಎದುರಿನ‌ ಸಮುದ್ರ ಮತ್ತು ನಾನು ಚಲಾಯಿಸುತ್ತಿದ್ದ ಬೋಟ್ ಎಲ್ಲವನ್ನೂ ಎಲ್ಲರನ್ನೂ ಮರೆಯುವಂತೆ ಮಾಡಿತು. ಬೋಟ್ ಓಡಿಸಲು ಹೇಳಿಕೊಡುತ್ತಿದ್ದ ಹುಡುಗ ನನಗೆ‌ ಸ್ವಲ್ಪ ಬೋಟ್ ಓಡಿಸುವ ಹಿಡಿತ ಬಂದಿದೆ ಎಂದು ಖಾತ್ರಿ ಮಾಡಿಕೊಂಡು ತನ್ನ ಪಾಡಿಗೆ ತಾನು‌ ದೂರ ಹೋಗಿ ಕುಳಿತ. 

ಆಗಾಗ ಎಡಕ್ಕೆ ಬಲಕ್ಕೆ ತಿರುಗಿಸು ಎಂದು ಹೇಳುತ್ತಿದ್ದ, ಹದಿನೈದು ಇಪ್ಪತ್ತು ನಿಮಿಷದ ನಂತರ ಸಮಾಧಾನವಾಗಿ ಅವನಿಗೆ ಬಾಪ್ಪಾ ಎಂದು ಕರೆದೆ. ಹೋಗುವಾಗ ಒಂದಷ್ಟು ಹೊತ್ತಾದ ಮೇಲೆ ಕೃಷ್ಣ ಮತ್ತು ರವಿ(ನೆರೆಮನೆಯವರು) ಬೋಟ್ ಓಡಿಸಿದರು. ಡಾಕಿಂಗ್ ಸ್ಟೇಷನ್ ನಲ್ಲಿ ಇಳಿಯುವ ಹೊತ್ತಿಗೆ ಅಬು ಮುಹನ್ನದ್ ಮತ್ತೆ ಪ್ರತ್ಯಕ್ಷವಾಗಿದ್ದ. ಇರುವುದರಲ್ಲೇ ಸ್ವಲ್ಪ ಹೆಚ್ಚು ಅರೆಬಿಕ್ ತಿಳಿದಿದ್ದ ಇಬ್ಬರು ಸ್ನೇಹಿತರು ರಾತ್ರಿಗೆ ಲೋಕಲ್ ಕ್ಯೂಸಿನ್(cuisine) ವ್ಯವಸ್ಥೆ ಮಾಡು ಎಂದೂ, ನಮ್ಮ ಕಡೆ ತೋರಿಸಿ ವೆಜಿಟೇರಿಯನ್ ಊಟವೂ ಇರಬೇಕೆಂದು ಹೇಳಿದರು.

ಅವನಿಗೆ ಅರ್ಥವಾಗಲೆಂದು ಒಂದಷ್ಟು ಚಿತ್ರಗಳನ್ನೂ ತೋರಿಸಿದರು. ನಾವು ಹೋಟೆಲ್ಲಿಗೆ ಹೋಗಿ ಎಲ್ಲರೂ ಒಂದಷ್ಟು ಸುಧಾರಿಸಿಕೊಂಡು ತಯಾರಾಗಿ ಅವನು ಕಳುಹಿಸಿದ್ದ ಲೊಕೇಷನ್ ಕಡೆಗೆ ಹೊರಟೆವು. ಸಮುದ್ರದ ಮುಂದೆ ಒಂದಷ್ಟು ದೂರದಲ್ಲಿ ಕಾರ್ಪೆಟ್ ಹಾಸಿ ಒರಗಿಕೊಳ್ಳಲು ದಿಂಬುಗಳನ್ನಿಟ್ಟು ಆ ತುದಿಯಿಂದ ಈ ತುದಿಯವರೆಗೆ ಏನೇನೋ ಥರಾವರಿ ಖಾದ್ಯಗಳನ್ನ ಇಟ್ಟಿದ್ದ. ನಮ್ಮನ್ನ ಕರೆದು ದೊಡ್ಡ ದೊಡ್ಡ ಎರೆಡು ಮೂರು ಪಾತ್ರೆಗಳನ್ನು ತೋರಿಸಿ ನಿಮಗೆ ಎನ್ನುವಂತೆ ಕೈ ಆಡಿಸಿದ ಏನು ಮಾಡಿದಾನೋ ಎಂದು ನೋಡಿದರೆ ಒಂದು ಹೆಡಿಗೆ ಹಚ್ಚಿದ ಸೌತೆಕಾಯಿ, ಒಂದು ರಾಶಿ ಕ್ಯಾಪ್ಸಿಕಮ್(capsicum), ಕ್ಯಾರೆಟ್. ನಮ್ಮ ಸ್ಥಿತಿಗೆ‌ ನಗಬೇಕೋ ಅಳಬೇಕೋ ತಿಳಿಯಲಿಲ್ಲ. 

ಇವನಿಗೆ ಅರ್ಥವಾಗಲೆಂದು ಒಂದಷ್ಟು ತರಕಾರಿ ಚಿತ್ರ ತೋರಿಸಿದ್ದರಂತೆ. ಇವನು ನಮಗೆ ಆ ತರಕಾರಿಗಳನ್ನು ಹಚ್ಚಿ ತಂದಿದ್ದಾನೆ‌. ಇಷ್ಟು ವರ್ಷ ಇಲ್ಲಿ ಇದ್ದೂ, ಇಲ್ಲಿನ ಭಾಷೆ ಕಲಿಯದೆ ಇದ್ದುದಕ್ಕೆ ಸರಿಯಾದ ಶಾಸ್ತಿಯಾಯಿತು ಅಂದುಕೊಂಡೆ.

ಮೊಸರು, ಹಮ್ಮಸ್(hummus) ಮತ್ತು ಅರೆಬಿಕ್ ಬ್ರೆಡ್(arabic bread) ತಿಂದು ಹೇಗೋ ಸಂಭಾಳಿಸಿ ನಾನೂ ಕೃಷ್ಣ ಸಮುದ್ರದ ಹತ್ತಿರ ಹೋದೆವು. ರಾತ್ರಿಯ ದೂರದ ಬೀದಿ ಬದಿಯ ಬೆಳಕಿನಲ್ಲಿ ಸಮುದ್ರ ಪ್ರಶಾಂತವಾಗಿ ಕಾಣುತ್ತಿತ್ತು. ಇದ್ದಕ್ಕಿದ್ದಂತೆ ಒಂದೆರಡು ಮೀನುಗಳು ಹಾರಿ ಹಾರಿ ನೀರಿನಲ್ಲಿ ಜಿಮ್ನಾಸ್ಟಿಕ್ಸ್ ಮಾಡಿದುವು. ಸಾವಿರಾರು ಪುಟ್ಟ ಪುಟ್ಟ ಶಂಖದ ಹುಳುಗಳು ನಿಧಾನಕ್ಕೆ ನಿರಾತಂಕವಾಗಿ ಓಡಾಡುತ್ತಿದ್ದವು..

ಒಬ್ಬೊಬ್ಬರಾಗಿ ಊಟ‌ ಮುಗಿಸಿ ಎಲ್ಲರೂ ನಾವು ನಿಂತಲ್ಲಿಗೆ ಬಂದರು. ಅಡುಗೆ ಮಾಡಿದವನ‌ ಹೆಸರು ಅಬು ಅಲಿ ಎಂದು ತಿಳಿಯಿತು. ಅವನು ಸಮುದ್ರಕ್ಕೆ ಇನ್ನೂ ಹತ್ತಿರದಲ್ಲಿ ಕಾರ್ಪೆಟ್, ದಿಂಬುಗಳನ್ನಿಟ್ಟು ವ್ಯವಸ್ಥೆ ಮಾಡಿದ. ತಾನು ತನ್ನ ಮಗನೂ ಬಹಳ ಒಳ್ಳೆಯ ನೃತ್ಯ ಮಾಡುತ್ತೇವೆಂದು, ಹಿಂದಿನ ರಾಜನ ಮುಂದೆ ಜನದ್ ರಿಯಾ ಹಬ್ಬದ (janadriyah festival) ಸಮಯದಲ್ಲಿ ಡ್ಯಾನ್ಸ್ ಮಾಡಿದ್ದೇನೆ ಎಂದೂ ಹೇಳಿದ‌‌. ನಾವು ನಮಗೂ ಮಾಡಿ ತೋರಿಸು ಎಂದು‌ ಹುರಿದುಂಬಿಸಿದೆವು. ನಾವು ಕೇಳುವುದು ಹೆಚ್ಚೋ ಅವನು ಮಾಡುವುದು ಹೆಚ್ಚೋ ಎನ್ನುವಂತೆ ಸುಮಾರು ಎಪ್ಪತ್ತು ವರ್ಷದ ಅಬು ಅಲಿ ಹಾಡುತ್ತಾ ಕುಣಿಯ ತೊಡಗಿದ.

ಅಬು ಅಲಿ ಮೂಲತಹ ಬೆಸ್ತ. ನಾಳೆ ನಿಮ್ಮನ್ನ ಸಮುದ್ರದಲ್ಲಿ ಮೀನು ಹಿಡಿಯಲು ಕರೆದುಕೊಂಡು ಹೋಗುತ್ತೇನೆ ಎಂದು ನಮ್ಮ ಮುಂದಿನ‌‌ ದಿನದ ಚಟುವಟಿಕೆಗಳೇನೆಂದು ಹೇಳಿದ. ಈ‌ ಮೀನು ಹಿಡಿಯುವ ಕಾರ್ಯಕ್ರಮದಲ್ಲಿ ಅಷ್ಟೇನು ಆಸಕ್ತಿ ಇರಲಿಲ್ಲವಾದರೂ ಮತ್ತೆ ಸಮುದ್ರಕ್ಕೆ ಹೋಗುವ ಯೋಚನೆಯೇ ಖುಷಿ ಉಂಟು ಮಾಡುತ್ತಿತ್ತು.

ನಾಳೆ ಕೊನೆಯ ಕಂತು: ಕಾಲಿಗೆ ಚುಚ್ಚಿದ ಶಂಖದ ಹುಳು

ಮೊದಲ ಕಂತಿಗೆ ಇಲ್ಲಿ ಕ್ಕಿಕ್ಕಿಸಿ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button