ಕಾಡಿನ ಕತೆಗಳುನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗು

ಆರ್ಡೆನಸ್ ಕಾಡಿನಲ್ಲಿ ಜಿಪಿಎಸ್ ಇಲ್ಲದೆ ಟ್ರೆಕ್ಕಿಂಗ್: ಮೇಘನಾ ಸುಧೀಂದ್ರ ಹೇಳಿದ ಕುತೂಹಲಕಾರಿ ಕತೆ

ಬೆಂಗಳೂರನ್ನು ಬಹಳ ಪ್ರೀತಿಸುವ, ಜಯನಗರದ ಹುಡುಗಿ ಎಂದು ಕರೆಸಿಕೊಳ್ಳಲು ಇಷ್ಟಪಡುವ ಶ್ರದ್ಧಾವಂತ ಬರಹಗಾರ್ತಿ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಪರಿಣತಿ. ಸಾಹಿತ್ಯದಲ್ಲಿ ಪ್ರೀತಿ. ಜಯನಗರದ ಹುಡುಗಿ, ಎಐ ಕತೆಗಳು, ಲಿಪಿಯ ಪತ್ರಗಳು ಎಂಬೆಲ್ಲಾ ವಿಭಿನ್ನ ಪುಸ್ತಕಗಳನ್ನು ಬರೆದ ಖ್ಯಾತಿ. ಅನೇಕ ವೆಬ್ ಮ್ಯಾಗಜಿನ್ ಗಳ ಹೆಮ್ಮೆಯ ಅಂಕಣಗಾರ್ತಿ. ಹೆಸರು ಮೇಘನಾ ಸುಧೀಂದ್ರ.   

ಬೆಂಗಳೂರಿನಲ್ಲಿ 25 ವರ್ಷ ಇದ್ದು 26ನೇ ವರ್ಷಕ್ಕೆ ಬೇರೆ ದೇಶಕ್ಕೆ ಹಾರಿದ ಅಸಂಖ್ಯಾತ ಮಧ್ಯಮ ವರ್ಗದ ಹುಡುಗಿಯರಲ್ಲಿ ನಾನೂ ಒಬ್ಬಳು. ಬೆಂಗಳೂರಿನಲ್ಲೇ ಇದ್ದರೂ ಜನತಾ ಹೋಟೆಲ್ಲಿಗೆ, ಸಿಟಿಅರ್ ಗೆ, ಲೇಕ್ ವ್ಯೂ ಐಸ್ಕ್ರೀಮ್ ಬಾರಿಗೆ ಮತ್ತು ಸ್ಟೆಗಿಗೆ ಕಡ್ಡಾಯವಾಗಿ ಜಿಪಿಸ್ ಹಾಕಿಕೊಂಡೇ ಹೋಗುವ ನನಗೆ ಅಮ್ಮ ಯಾವಾಗಲೂ, “ಈ ಮ್ಯಾಪ್ ಇಲ್ಲದಿದ್ದರೆ ನೀನು ಕಳೆದುಹೋಗುತ್ತೀಯ, ಹಾಗಿರಬಾರದು” ಎಂದು ಎಷ್ಟು ಬುದ್ಧಿ ಹೇಳಿದರೂ ಬೇರೆ ದೇಶಕ್ಕೆ ಹೋದಾಗ ಪಕ್ಕಾ ಅಲ್ಲಿನ ಲೋಕಲ್ ಸಿಮ್ ತೆಗೆದುಕೊಂಡು ಪಕ್ಕದ ರೋಡಿಗೆ ಹೋದಾಗಲೂ ಜಿಪಿಸ್ ಹಾಕುವ ಜಾತಿಗೆ ಸೇರಿದ ನನಗೆ ಮ್ಯಾಪು ಮತ್ತು ನನ್ನ ಬುದ್ಧಿವಂತಿಕೆಯನ್ನು ವಂಚಿಸಿದ್ದು ಮಾತ್ರ ಆರ್ಡೆನಸ್ ಕಾಡು.

ಈ ಆರ್ಡೆನಸ್ ಕಾಡು ನಮ್ಮ ಸಹ್ಯಾದ್ರಿಯ ಹಾಗೆ. ಯಾವಾಗಲೂ ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ ನಡೆಯುವ ನಿತ್ಯೋತ್ಸವ. ಮೂರು ದೇಶ ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಮ್ ಸುತ್ತುವರೆದಿರುವ ಈ ಕಾಡಿನಲ್ಲಿ ಜನ ಟ್ರೆಕ್ಕಿಂಗ್ ಹೋಗುತ್ತಾರೆ. ಆದರೆ ಪ್ಲಾಸ್ಟಿಕ್ ಬಾಟಲ್ಲು, ಬಿಯರ್ ಬಾಟಲ್ ಎಲ್ಲೆಂದರಲ್ಲಿ  ಬಿಸಾಕುವ, ಪೊರ್ಕಿ ಹುಡುಗರು ಅಲೆದಾಡುವ ಜಾಗವಂತೂ ಅಲ್ಲ. ಹೆಣ್ಣುಮಕ್ಕಳಿಗೆ ಟಾಯ್ಲೆಟ್ ಇಲ್ಲದೇ ಒದ್ದಾಡುವ ಪರಿಸ್ಥಿತಿಯೂ ಇರುವುದಿಲ್ಲ. 

ಹೀಗೆ ಒಂದು ಡಿಸೆಂಬರಿನ ಕೊರೆಯುವ ಚಳಿಯಲ್ಲಿ ಆರ್ಡೆನಸ್ ಕಾಡಿಗೆ ಹೊರಡುವ ಯೋಚನೆ ಆಯಿತು. ಬೆಂಗಳೂರಿನಂತಹ ಸುಖವಾದ ಊರಿನಲ್ಲಿ ಬೆಳೆದವರಿಗೆ ತುಂಬಾ ಮಳೆ ಬರೋದು, ತುಂಬಾ ಗಾಳಿ ಬರೋದು ಅಥವಾ ತುಂಬಾ ಬಿಸಿಲು ಬರೋದು ಎಂಬುದರ ಬಗ್ಗೆ ಎಲ್ಲಾ ಅಷ್ಟಾಗಿ ಗೊತ್ತಿರುವುದಿಲ್ಲ. ಇತ್ತೀಚೆಗೆ ಮಾತ್ರ ಅಕ್ಟೋಬರಿನಲ್ಲಿ ಶೆಕೆ, ಜುಲೈನಲ್ಲಿ ಮಳೆ ಎಂದು ಮಂಕಾಗಿ ಕೂತಿದೆ ನಮ್ಮೂರು.

ಇರಲಿ, ಅವತ್ತು ಬಾರ್ಸಿಲೋನಾದಿಂದ ಮೊದಲು ಆಂಟ್ ವರ್ಪಿಗೆ ಹೋಗಿ ಅಲ್ಲಿಂದ ಒಂದು ಕಾರಿನಲ್ಲಿ 3 ಕನ್ನಡಿಗರು, ಒಂದು ಗುಜ್ಜು ಹುಡುಗ ಟ್ರೆಕ್ಕಿಂಗ್ ಹೋಗೋದು ಎಂದು ನಿರ್ಧಾರ ಮಾಡಲಾಯಿತು. ಹಾಗೆ ನೋಡಿದರೆ ಅಲ್ಲಿದ್ದ ಮೂರೂ ಜನ ಹಿಮಾಲಯ, ಮೇಘಾಲಯ ಮತ್ತು ಯುರೋಪಿನ ಆಲ್ಫ್ಸ್ ಪರ್ವತ ಶ್ರೇಣಿಯನ್ನು ರಾಗಿಗುಡ್ಡ ಹತ್ತಿದಷ್ಟೇ ಸಲೀಸಾಗಿ ಹತ್ತಿದ್ದರು. ನಾನು ಮಾತ್ರ ಸಾವನದುರ್ಗ ಹತ್ತಿ ಮೌಂಟ್ ಎವರೆಸ್ಟ್ ಹತ್ತಿದ ರೇಂಜಿಗೆ ಬಿಲ್ಡಪ್ ತಗೋತಿದ್ದೆ. ನನ್ನ ಸ್ನಾತಕೋತ್ತರ ಪದವಿಯನ್ನು ಅತ್ಯಂತ ಸಂತೋಷದಿಂದ ಕಳೆಯುತ್ತಿದ್ದುದ್ದನ್ನು ಕಂಡು ಈ ಪಿಎಚ್ ಡಿ ಹುಡುಗ ಹುಡುಗಿಯರು ಇವಳಿಗೆ ನಮ್ಮೂರಿನ ಗಮ್ಮತ್ತು ತೋರಿಸೋಣ ಎಂದೇ ಪಣ ತೊಟ್ಟಿದ್ದರು.

 “ಏನೇನ್ ತಗೋಬೇಕು” ಎಂದು ಆ ಗ್ರೂಪಿನಲ್ಲಿ ನಾನು ಕೇಳಿದಾಗ, “ಶೂ, ಬ್ಯಾಗು, ನೀರಿನ ಕ್ಯಾನು, ಜಾಕೆಟ್“ ಒಂದು ಸಾವಿರ ಸಾಮಾನುಗಳ ಲಿಸ್ಟ್ ಹೇಳಿದ ಮೇಲೆ, “ಚೀಪ್ ಟಿಕೆಟ್ ತಗೊಂಡು ಆಂಟ್ ವರ್ಪಿನಲ್ಲಿ ಸೇವ್ ಮಾಡಿದ್ದೆಲ್ಲಾ ಬರೀ ಇಲ್ಲಿಗೆ ಆಗಿ ಹೋಯ್ತಲ್ಲ, ಹುಷಾರಿಲ್ಲ ಎಂದು ಹೇಳಿಬಿಡೋಣ” ಎಂದು ಮನಸ್ಸಾಗಿದ್ದರೂ ಬೇಡ ಎಂದುಕೊಂಡು ಪ್ರಿಪೇರ್ ಆದೆ. ಡೆಕತ್ಲಾನ್ ನನಿನಲ್ಲಿ ಕಂಡ ಪಿಂಕ್ ಶೂವನ್ನು ಬಹಳ ಖುಷಿಯಿಂದ ತೆಗೆದುಕೊಂಡೆ. 

ಆರ್ಡೆನಸ್ ಕಾಡಿನಲ್ಲಿ ಐದು ರೀತಿಯ ಟ್ರೆಕ್ಕಿಂಗ್ ಮಾಡಬಹುದು ಒಂದು ಬೆಟ್ಟ ಹತಿ ಇಳಿದು ಹತ್ತಿ ಇಳಿದು ಮಾಡಬಹುದು, ಮತ್ತೊಂದು ಪ್ಲೇನ್ ಲ್ಯಾಂಡಿನ ಮೇಲೆ ನಡೆದುಕೊಂಡು ಹೋಗಬಹುದು, ಇನ್ನೊಂದು ಶಾಲೋ ನದಿಯ ಮೇಲೂ ನಡೆದುಕೊಂಡು ಹೋಗಬಹುದು, ಕಾಡಿನ ಮಧ್ಯ ನಡೆದುಕೊಂಡು ಹೋಗಬಹುದು ಮತ್ತೊಂದು ವ್ಯಾಲಿ ಟ್ರೆಕ್. ತುಂಬಾ ಸುಲಭದ್ದು ಯಾವುದು ಎಂದು ನನ್ನ ಗುಂಪಿನಲ್ಲಿದ್ದವರಿಗೆ ಕೇಳಿದಕ್ಕೆ, “ಎಲ್ಲಾ ಐದೂ ಮಾಡೋಣ ಏನಂತೀಯಾ” ಎಂದಾಗ “ಪಕ್ಕಾ ನನಗೆ ಜ್ವರ ಬರಲಿದೆ” ಎಂದು ಮೆಸೇಜು ಬರೆದುಬಿಡೋಣ ಎಂದು ನಿಶ್ಚಯ ಮಾಡಿದೆ.

ಬೆಳಗ್ಗೆ ಹಾಗೂ ಹೀಗೂ ಎದ್ದು , ಆಂಟ್ವರ್ಪಿಗೆ ಬೆಲ್ಜಿಯನ್ ಗೆಳತಿಯ ಮನೆಯಲ್ಲಿ ಇದ್ದು ಅವಳಮ್ಮ ಚೆನ್ನಾಗಿ ಫೇಷಿಯಲ್ ಮಾಡಿದ ಮೇಲೆ 2 ಕನ್ನಡಿಗರು ಮತ್ತು ಒಬ್ಬ ಗುಜ್ಜು ಹುಡುಗ ಇರುವ ಕಾರು ಹತ್ತಿದೆ. “ಅಲ್ಲಿ ಟೆಂಪರೇಚರ್ ಎಷ್ಟು, ಒಂದು 10 ಡಿಗ್ರಿ ಇರಬಹುದಾ “ ಎಂದು ಪ್ರಶ್ನೆ ಕೇಳಿದ್ದೆ, “ಹಹಹ 1 ಡಿಗ್ರಿ ಇದೆ ಆಗಲೇ, ಹೋಗುತ್ತಾ ಹೋಗುತ್ತಾ ಸ್ವಲ್ಪ – 2 ಅಥವಾ -3 ಕ್ಕೆ ಬರಬಹುದು“ ಎಂದಾಗ  ನನಗೆ ಮೂರ್ಛೆ ಹೋಗೋದೊಂದು ಬಾಕಿ ಇತ್ತು. ಯಾಕೋ ಅಲ್ಲಿ ನಾನು ಹೊಗೆ ಹಾಕಿಸಿಕೊಳ್ಳುವ ಪ್ಲಾನ್ ಎಂದು ಖಾತ್ರಿಯಾಯಿತು. ಆದರೂ ನನ್ನ ಧೈರ್ಯ ಹೆಚ್ಚಿಸಲು ಬಭ್ರುವಾಹನ ಸಿನಿಮಾದ ಹಾಡುಗಳನ್ನು ಹಾಕಿ ಹುರಿದುಂಬಿಸುತ್ತಿದ್ದರು, ಯಾವತ್ತೂ ನಂಬದಿರುವ ದೇವರನ್ನು ನೆನಪಿಸಿಕೊಂಡೆ. ಆದರೆ ಯಾವ ದೇವರನ್ನು ನೆನಪಿಸಿಕೊಳ್ಳಲಿ ಎಂದು ಯೋಚಿಸುವಲ್ಲಿ ನಮ್ಮ ಟ್ರೆಕ್ಕಿನ ಹಾದಿ ಬಂದೇ ಬಿಟ್ಟಿತ್ತು.

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

“ಆನ್ಲಿಯರ್ ಕಾಡಿನ ಹಾದಿ ತೆಗೆದುಕೊಳ್ಳೋಣ, ಅದು ಸ್ವಲ್ಪ ಸಮತಟ್ಟಾದ ಟ್ರೆಕ್, ಒಂದು 15 ಕಿಮೀ ಇದೆ, ಆರಾಮಾಗಿ ಮಾಡಬಹುದು, ಈ ಜಾಗಗಳಲ್ಲಿ ನೀರು, ಇಲ್ಲಿ ಊಟ, ಮತ್ತೊಂದೆಡೆ ಟಾಯ್ಲೆಟ್ ಎಲ್ಲಾ ಇದೆ” ಎಂದು ನಮ್ಮ ಟ್ರೆಕ್ಕಿನ ಗೈಡ್ ಹೇಳಿದ.”ನನ್ನ ಸಾವಿಗೆ ಆರ್ಡೆನಸ್ ಕಾರಣ” ಎಂದು ಬರೆಯುವ ವಿಷಾದದಲ್ಲಿದ್ದೆ. ಆದರೆ ರಾಜಕುಮಾರ್ ಹಾಡುಗಳನ್ನ ಹಾಡಿಕೊಂಡು “ಜೈ ರಾಜಣ್ಣ” ಎಂದು ಹತ್ತುವ ಮನಸ್ಸು ಮಾಡಿದೆ. ಚಿಕ್ಕಮಗಳೂರಿನಲ್ಲಿ ಹವಾಯಿ ಚಪ್ಲಿ ಹಾಕಿಕೊಂಡು ಬೆಟ್ಟ ಹತ್ತುತ್ತಿದ್ದ ಗೆಳೆಯರನ್ನ ನೋಡಿದ ನನಗೆ ಈ 2 ಜಾಕೆಟ್ಟು, 2ಸಾಕ್ಸು, ಗ್ಲೌಸು, ಮಫ್ಲರು ಎಲ್ಲಾ ಹೊತ್ತುಕೊಂಡು ಟ್ರೆಕ್ ಮಾಡುವುದು ಹೇಗಪ್ಪಾ ಎಂದೇ ಯೋಚನೆ ಆಯಿತು.

ಆನ್ಲಿಯರ್ ಕಾಡಿನ ಹಾದಿ. ಸೂರೆ ನದಿಯನ್ನು ಬಳಸಿಕೊಂಡು ಇರುವ ಹಾದಿ. ನದಿಯ ಜಾಡನ್ನೇ ಹಿಡಿದುಕೊಂಡು ಬೆಟ್ಟದ ತುದಿಗೆ ತಲುಪಿ ಇಳಿಯಬೇಕು. ಸೂರೆ ಮನಸೂರೆಗೊಳ್ಳುತ್ತದೆ ಎಂದು ಅನ್ನಿಸಿ ಹತ್ತಲು ಶುರು ಮಾಡಿದೆವು. ಎರಡು ಸ್ಟಿಕ್ ಬೇರೆ ಕೊಟ್ಟರು, ಊಟ ಮಾಡುವಾಗ ನೈಫ್ ಫೋರ್ಕು ಇರುವ ಹಾಗೆ ಇವರಿಗೆ ಸದಾ ಕೈಯಲ್ಲಿ ಏನೋ ಇರಬೇಕೆಂದುಕೊಂಡೇ ನಾನು 10 ಹೆಚ್ಚೆ ಇಟ್ಟೆ, ಕುಸಿದೆ. ಡಿಸೆಂಬರಿನ ಛಳಿಗೆ ಎಲೆಗಳೆಲ್ಲಾ ಉದುರಿ ಒಂದು ದೊಡ್ಡ ಪಿಟ್ ಮೇಲೆ ತುಂಬಿತ್ತು, ಇಂಥದ್ದು ದಾರಿಯಲ್ಲಿ ಹಲವು ಇದ್ದುದ್ದರಿಂದ ಅದಕ್ಕೆ ಕೋಲು ಕೊಟ್ಟಿದ್ದರು. ನಾನು ಅದನ್ನೇ ಉದಾಸೀನ ಮಾಡಿ ಕಾಲಿಟ್ಟಿದ್ದೆ ಬಿದ್ದೆ. “ಮೊದಲನೇ ವಿಘ್ನ” ಎಂದು ಗೊಣಗಿಕೊಂಡು ಫೋನ್ ತೆಗೆದರೆ ಒಂದು ಕಡ್ಡಿ ಸಿಗ್ನಲ್ಲೂ ಇಲ್ಲ, ಇಂಡಿಯಾ ನಂಬರು, ಲೈಕಾ ನೆಟ್ವರ್ಕು ಸಿಗ್ನಲ್ಲೂ ಇರಲ್ಲಿಲ್ಲ.

“ಮುಂದಿನ ಸಲ ನೀನು ಸ್ಯಾಟಲೈಟ್ ಫೋನ್ ತೆಗೆದುಕೊಂಡು ಬಾ” ಎಂದು ರೇಗಿಸಿ ಒಂದು ಮ್ಯಾಪ್ ಕೈಗೆ ಕೊಟ್ಟ ಟ್ರೆಕ್ಕಿನ ಗೆಳೆಯ. ಇಂಡಿಯಾ ಮ್ಯಾಪನ್ನ ಹೂವಿನ ತರಹ ಬರೆದು ಉಗಿಸಿಕೊಳ್ಳುತ್ತಿದ್ದ ನನಗೆ ಈ ಮ್ಯಾಪನ್ನ ಓದುವುದು ಹೇಗೆಂದು ನಯಾಪೈಸೆ ಅರ್ಥವಾಗಲ್ಲಿಲ್ಲ. “ನಾರ್ಥ್ ಎಲ್ಲಿದೆ” ಎಂದು ಕೇಳಿದೆ. “ಕಾಂಪಸ್ ತೆಗೆದು ಮುಂದೆ ತೋರಿಸಿದ” ನನ್ನ ಗೆಳೆಯ. “”ಯಾವ ಝಮಾನಾದ ಊರಿದು, ನಾನ್ಸೆನ್ಸ್, ನಾವೆಲ್ಲಾ ಟೆಕ್ನಾಲಜಿಯಲ್ಲಿ ಮಾಸ್ಟರ್ಸು, ಪಿ ಎಚ್ ಡಿ ಮಾಡ್ತಿರೋದು, ಇನ್ನೂ ಅಜ್ಜನ ಕಾಲದಲ್ಲಿದ್ದರೆ ಏನೂ ಪ್ರಯೋಜನ ಇಲ್ಲ” ಎಂದು ಬೈದುಕೊಂಡೇ ಮ್ಯಾಪನ್ನು ಫಾಲೋ ಮಾಡಲು ನೋಡಿದೆ. ಊಹೂ ನಯಾ ಪೈಸೆ ಅರ್ಥವಾಗಲ್ಲಿಲ್ಲ.

“ಇಲ್ಲಿ ವೈಲ್ಡ್ ಕ್ಯಾಟ್ ಇದೆ” ಎಂಬ ಬೋರ್ಡ್ ಹಾಕಿದ್ದರು. “ಕುಮಾರ ಪರ್ವತದಲ್ಲಿ ಹುಲಿ ಘರ್ಜನೆಯನ್ನೇ ಕೇಳಿದ್ದೇನೆ, ಇದೇನು ಕಾಡುಬೆಕ್ಕು ತಾನೆ” ಎಂದು ಗುಜ್ಜು ಬಾಯ್ ನಕ್ಕ. “ಈ ಹುಚ್ಚು ನನ್ನ ಮಕ್ಕಳ ಸಹವಾಸದಿಂದ ನಾನು ಯಾವ ಪ್ರಾಣಿಗೂ ಆಹಾರವಾಗದೇ ಇರಲಿ” ಎಂದು ದಯಾಮಯಿಯಾದ ಭಗವಂತನಿಗೆ ಪ್ರಾರ್ಥಿಸಿ ಮುಂದೆ ನಡೆಯುತ್ತಾ ಹೋದೆ. 

ಹಸಿರು ವರ್ಣದ ಕಾಡು ಒಮ್ಮೆಲೆ ಕೆಂಪು ಮತ್ತು ಕಿತ್ತಳೆ ಮಿಶ್ರಿತ ಕಾಡಾಗಿ ಪರಿವರ್ತನೆ ಆಗತೊಡಗಿತ್ತು. ಇನ್ನೊಂದು 10 ದಿವಸದ ನಂತರ ಇದರ ಮೇಲೆ ಸ್ನೋ ಬಿದ್ದು ಇನ್ನೂ ಕಠಿಣ ಹಾದಿಯಾಗುತ್ತದೆ ಎಂದು ಹೇಳುತ್ತಿದ್ದರು ನಮ್ಮ ಗೈಡ್. “ಸದ್ಯ ಹತ್ತು ದಿವಸದ ಮುಂಚೆ ಬರಲಿಲ್ಲ” ಎಂದು ಅಂದುಕೊಳ್ಳುವಷ್ಟರಲ್ಲಿ, “ಅಲ್ಲಿ ನೋಡಿ ಬಸ್ಟಾಂಜೇ ಪ್ಲಾಟ್ಯೂ” ಎಂದು ಕಣ್ಣರಳಿಸಿದ ಗೈಡ್. 

ಭಾರತದವರು ತಾಜ್ ಮಹಲ್ ತೋರಿಸುವ ರೇಂಜಿಗೆ ಹೇಳಿದ. ನನಗೆ ತಲೆ ಬುಡ ಗೊತ್ತಿರಲ್ಲಿಲ್ಲ. “ಎರಡನೇ ವಿಶ್ವಯುದ್ಧದಲ್ಲಿ ಬಸ್ಸಾಂಜೇಯಲ್ಲೇ ಅಮೇರಿಕಾದವರು ಮತ್ತು ಜರ್ಮನಿಯವರು ಮುಖಾಮುಖಿಯಾಗಿದ್ದು” ಎಂದು ವಿಶ್ವಯುದ್ಧದ ಕಥೆಯನ್ನ ಹೇಳೋದಕ್ಕೆ ಶುರು ಮಾಡಿದ್ದ.

ಗಾಳಿ ಜಾಸ್ತಿ ಆಗಿ ತಣ್ಣಗೆ ಕಾಲಲ್ಲಿ ಕೊರೆತ ಬರೋದಕ್ಕೆ ಶುರುವಾಯಿತು. ಮೂಗು ಫ್ರೀಜ್ ಆಗೋಕೆ ಶುರು ಆಯಿತು. “ಅಯ್ಯೋ ಸಾಕ್ ನಿಲ್ಲಿಸಯ್ಯ, ನಿನ್ನ ಕಥೆಯನ್ನ” ಎಂದು ಹೇಳುವ ಮುಂಚೆಯೇ ಗುಜ್ಜು ಬಾಯ್ , “ಹೇ ಇಲ್ಲಿ ಸ್ನಾಕ್ಸ್ ತಿನ್ನೋಣ” ಎಂದಾಗ “ಅಬ್ಬಾ ಸದ್ಯ, ಇವನಿಗಾದರೂ ಕರುಣೆ ಬಂದಿತ್ತಲ್ಲ” ಎಂದು ಟೇಪ್ಲಾ ತಿಂದು ಮುನ್ನಡೆಯುತ್ತಿದ್ದಾಗ, “ಓಕ್ ಗಯ್ಸ್, 3 ಕಿಮೀ ಆಯ್ತು ಇನ್ನು 7 ಕಿಮೀ ನೀವೆ ದಾರಿ ಹುಡುಕಿಕೊಂಡು ಹೋಗಬೇಕು, ದಾರಿ ತಪ್ಪಿದರೋ ಇನ್ನು ನಿಮಗೆ 20 ಕಿಮೀ ಟ್ರೆಕ್ ಆಗುತ್ತದೆ ಹುಷಾರು” ಎಂದು ಮ್ಯಾಪ್ ಕೈಗಿತ್ತು ಹೋದರು.

 “ಓಹ್ ಮರದ ಮೇಲೆ ಯಾವ ಕಲರ್ ಆರೋ ಹಾಕಿದಾರೋ ಆ ಆರೋವನ್ನೆ ಫಾಲೋ ಮಾಡಿಕೊಂಡು ಹೋಗೋಣ” ಎಂದು ನಾನು ಅನ್ನುವಷ್ಟರಲ್ಲಿ ಅಲ್ಲಿ ನೀರು ಜಳ ಜಳ ಹರಿಯೋದು ಕೇಳಿಸಿತು. “ಅಲ್ಲಿ ಹತ್ತೋಣ” ಎಂದು ಹೇಳಿದಾಗ, “ಅಯ್ಯೋ ದಾರಿ ತಪ್ಪುತ್ತೇವೆ ಜಿಪಿಎಸ್ ಇಲ್ಲಾ” ಎಂಬ ನನ್ನ ಮಾತನ್ನು ಕಾಡಿನ ಪಕ್ಷಿಯೂ ಕೇಳಲು ಸಿದ್ಧವಿರಲ್ಲಿಲ್ಲ. ಕರ್ಮ ಎಂದು ಹತ್ತುತ್ತಿದ್ದರೆ ಸೆಖೆ ಕಿತ್ತುಕೊಂಡು ಬರುತ್ತಿತ್ತು. 1 ಡಿಗ್ರಿ ಸೆಲ್ಶಿಯಸ್ಸಿನಲ್ಲಿ ಬೆವರುತ್ತಿದ್ದ ನನಗೆ ಮೋಸ್ಟ್ಲಿ ಏನೋ ಆಗೋಗಿದೆ ಎಂಬ ಸಂದೇಹದಲ್ಲೇ ಹತ್ತಿ ಗುಡ್ಡದ ಮೇಲೆ ಬಿದ್ದುಕೊಂಡಿದ್ದಾಯಿತು. ಸೂರೆ ನದಿ ಒಳ್ಳೆ ಬೆಳ್ಳಗಿನ ಹಾಲಿನ ಹಾಕೆ ಹರಿಯುತ್ತಿದ್ದಳು. “ಈ ತಾಯಿಯೂ ನಕ್ಕರೆ ಸಂತೋಷದ ಸಕ್ಕರೆ, ಮಮತೆಯ ಮಾತೆಗೆ ಭಾಗ್ಯದ ದಾತೆಗೆ, ಮಾಡುವೆ ಭಕ್ತಿಯ ವಂದನೆ” ಎಂದು ಏನೋ ದೊಡ್ಡ ಹೀರೋಗಳ ಹಾಗೆ ಡ್ಯಾನ್ಸ್ ಮಾಡಿ ಮೈಮರೆತಾಗ ನಮಗೆ ಇದು ಭಾರತ ಅಲ್ಲ ಗೊತ್ತಾಗಿದ್ದು ಕತ್ತಲಾಗುತ್ತಾ ಬಂದಾಗ, ಛಳಿಗಾಲದಲ್ಲಿ 4 ಘಂಟೆಗೆ ಕತ್ತಲಾಗುತ್ತದೆ, ಅಂದರೆ ಬೆಳಗ್ಗಿನದ್ದು ಏನು ಅಷ್ಟು ಬಿಸಿಲಿಲ್ಲ. ಎಲ್ಲಾ ಬಿಸಿಲನ್ನೂ ಭಾರತದ ದಕ್ಷಿಣ ಭಾಗಕ್ಕೆ, ಆಫ್ರಿಕಾಗೆ ಧಾರೆ ಎರೆದಿರುವ ಸೂರ್ಯನಿಗೆ ಈ ಜಾಗದ ಮೇಲೆ ಅಷ್ಟೇನೂ ಪ್ರೀತಿ ಪ್ರೇಮ ವಾತ್ಸಲ್ಯವಿಲ್ಲ.

“ಇಲ್ಲಿ ಪ್ರಾಣಿಗಳಿಗೆ ಆಹಾರ ಆಗಿರುವ ಮನುಷ್ಯರ ಕಥೆ ಬಹಳಷ್ಟಿದೆ” ಎಂದು ಕೇಳಿದ ನನಗೆ, ತೀರ ಹೀಗೆ ಸಾಯಲು ಇಷ್ಟವಿರಲ್ಲಿಲ್ಲ. ಸತ್ತರೂ ವೀರ ಸ್ವರ್ಗವೇ ಬೇಕು ಎಂದು ಮತ್ತೆ ಹೊರಟ ನನಗೆ ಸಿಕ್ಕಿದ್ದು ಅದೇ ಗುಡ್ಡ ಹತ್ತುವ ದಾರಿಗಳು. “ಇದು ಫ್ಲಾಟ್ ಲ್ಯಾಂಡ್ ಎಂದು ಹೇಳಿದ ಭೂಪನ್ನನ್ನು ಕಂಡರೆ ಗದಾಯುದ್ಧವಾಗುತ್ತದೆ” ಎಂದು ಅರಚಿದಾಗಲೇ ಇನ್ನೊಬ್ಬ ಹೇಳಿದ್ದು, “ನಾವು ದಾರಿ ತಪ್ಪಿದ್ದೇವೆ ಆ ಜೀವನದಿ ಹಾಡಿಗೆ ಮೈಮರೆತಿದ್ದೇವೆ”ಎಂದಾಗ ನನಗೆ ಕಾಲು ನೋಯಲು ಶುರುವಾಯಿತು. ಚಳಿಯಲ್ಲಿ ಥರ್ಮಲ್ಸ್ ಹಾಕದಿದ್ದರೆ ಕಾಲು ಕೊರೆಯುತ್ತದೆ “ ಎಂದು ಅರಿವಾಗುವಷ್ಟರಲ್ಲಿ ಮಂಡಿ ನೋವು ಮಿತಿ ಮೀರಿತ್ತು.

“ನಾನು ಇಲ್ಲಿ ಹೆಲಿಕಾಪ್ಟರನ್ನು ಕರೆಸುತ್ತೇನೆ ಆಗಲ್ಲ” ಎಂದು ಕೂತಾಗ ಅದರ ಪ್ರೈಸ್ ನೋಡಿ ಬೆಚ್ಚಿಬಿದ್ದೆ/ ಹಾಳಾಗಿ ಹೋಗಲಿ ಎಂದು ಹತ್ತುತ್ತಾ ಹೋದಾಗ ಬೆವರಿನ ಹನಿಗಳು ಪಟ ಪಟ ಎಲೆಯ ಮೇಲೆ ಬೀಳುತ್ತಿತ್ತು. ಕಾಲೂ ಸಹ ಸಡಿಲಗೊಂಡಿತು. ಸೂರೆ ನದಿ ನಮ್ಮ ಜೊತೆಯೆ ಬಂದ ಹಾಗೆ ಜೊತೆ ಜೊತೆ ನಡೆಯುತ್ತಿದ್ದಳು. ಅವಳು ದಾರಿ ತಪ್ಪಿಸಲ್ಲಿಲ್ಲ. ದಡ ಮುಟ್ಟಿಸಿದಳು, ಥಪ್ ಎಂದು ಬಂಡೆಯ ಮೇಲೆ ಬಿದ್ದಾಗ ಆಕಾಶದ ನಕ್ಷತ್ರಗಳು ಫಳ ಫಳ ಹೊಳೆಯುತ್ತಿದ್ದವು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button