ಕಲಬುರಗಿ ಎಂಬ ಬಿಸಿಲೂರಿನ 7 ತಂಪು ತಾಣಗಳು
ಕಲಬುರಗಿ ಬಿಸಿಲೂರು ಎಂದೇ ಖ್ಯಾತಿ ಪಡೆದ ಊರು. ಕೋಟೆಗಳ ಊರು, ರಾಜ ಮಹಾರಾಜ ಮಹಾರಾಜರು ಓಡಾಡಿದ ಊರು, ತೊಗರಿಯ ನಾಡು ಎಂದೆಲ್ಲಾ ಕರೆಯಲ್ಪಡುವ ಈ ಊರಿಗೆ ಹೋದರೆ ನೋಡಬಹುದಾದ ತಂಪುತಾಣಗಳ ಪಟ್ಟಿ ಇದು. ಮರೀಬೇಡಿ. ನೀರ ಝರಿ ನೋಡಿ ಖುಷಿಯಾಗಿ.
ಎತ್ತಿಪೋತ ಜಲಪಾತ
ಚಿಂಚೋಳಿ ತಾಲೂಕಿನ ಕೊಂಚಾವರಂ ಕಾಡಿನಲ್ಲಿರುವ ಒಂಟಿ ಚಿಂತಾ ತಾಂಡಾದಿಂದ 1 ಕಿ.ಮೀ. ನಡೆದು ಅರಣ್ಯಕ್ಕೆ ಹೋದರೆ ಸಿಗುವ ಅದ್ಭುತ ನಿಸರ್ಗ ತಾಣದ ಹೆಸರೇ ಎತ್ತಿಪೋತ ಜಲಪಾತ. ಇಲ್ಲಿ ಕಪ್ಪು ಶಿಲೆಗಳನ್ನು ಬಳಸಿ ಸಾಗುವ ನೀರು 15 ರಿಂದ 20 ಅಡಿ ಎತ್ತರದಿಂದ ಧುಮುಕುತ್ತದೆ. ಮಳೆಗಾಲದಲ್ಲಂತೂ ಕೆಂಪು ಬಣ್ಣ ಮಿಶ್ರಿತ ನೀರು ಇಲ್ಲಿಂದ ಧುಮುಕುವ ಸೊಬಗು ನೋಡುವುದೇ ಸೊಗಸು.
ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ
ಹೀಗೆ ಹೋಗುವುದು:
ಕಲಬುರಗಿಯಿಂದ ಚಿಂಚೋಳಿಗೆ ಬಸ್ಸಿನ ಮೂಲಕ ಸಾಗಿ ಅಲ್ಲಿಂದ ಖಾಸಗಿ ವಾಹನದಲ್ಲಿ ಜಲಪಾತಕ್ಕೆ ಹೋಗಬಹುದು.
ಪಂಚಲಿಂಗಗಳ ಬುಗ್ಗಿ
ಶಿಲಾ ತೊಟ್ಟಿಯಲ್ಲಿ ಸದಾಕಾಲ 5 ನೀರಿನ ಚಿಲುಮೆ ಸದಾಕಾಲ ನೀರನ್ನು ಚಿಮ್ಮಿಸುತ್ತಿರುತ್ತವೆ. ಜನ ಅದನ್ನು ಭಕ್ತಿಯಿಂದ ನೋಡುತ್ತಾರೆ. ಖುಷಿ ಪಡುತ್ತಾರೆ. ಚಿಂಚೋಳಿ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿದೆ ಈ ಸುಂದರ ಪ್ರದೇಶ. ಮುಲ್ಲಾಮಾರಿ ನದಿ ತೀರದಲ್ಲಿ ಈ ತಾಣವಿದೆ. ಪ್ರಾಚೀನ ಕಾಲದ 5 ಶಿವಲಿಂಗವೇ ಇಲ್ಲಿನ ಆಕರ್ಷಣೆ.
ಹೀಗೆ ಹೋಗುವುದು:
ಕಲಬುರಗಿಯಿಂದ ಚಿಂಚೋಳಿಗೆ ಬಸ್ಸಿನ ಸೌಕರ್ಯವಿದೆ. 60 ಕಿ.ಮೀ. ಕ್ರಮಿಸಿ ಚಿಂಚೋಳಿ ತಲುಪಬಹುದು.
ಚಂದ್ರಪಳ್ಳಿ ಕೆರೆ
ಮುಲ್ಲಾಮಾರಿ ಅಣೆಕಟ್ಟೆ ಹಿನ್ನೀರು ನಿಂತು ರಚನೆಯಾಗಿರುವ ಸುಂದರ ವಿಹಾರ ತಾಣ ಚಿಂಚೋಳಿಯ ಚಂದ್ರಪಳ್ಳಿ ಕೆರೆ. ಮಕ್ಕಳ ಖುಷಿಗೆ ಬೋಟಿಂಗ್ ಇದೆ. ದೊಡ್ಡೋರಿಗೆ ಪ್ರಕೃತಿ ಸೌಂದರ್ಯವಿದೆ. ಕಲಬುರಗಿಯಿಂದ ಈ ಚಂದ್ರಪಳ್ಳಿ ಕೆರೆಗೆ ಬಸ್ ಸೌಕರ್ಯ ಇದೆ.
ಅಪ್ಪನ ಕೆರೆ
ಕಲಬುರಗಿ ಅಪ್ಪನ ಕೆರೆ ಆಕರ್ಷಕ ಜಲತಾಣ. ಇಲ್ಲೀಗ ಉದ್ಯಾನವನ ತಲೆ ಎತ್ತಿದೆ. ಜೊತೆಗೇ ವಿವಿಧ ಬಗೆಯ ಬೋಟಿಂಗ್ ಸೌಕರ್ಯವೂ ಇದೆ. 40 ಎಕರೆ ವಿಶಾಲ ಕೆರೆ ಪ್ರದೇಶದಲ್ಲಿ ಜಲರಾಶಿಯಲ್ಲೇ ಗಂಟೆಗಟ್ಟಲೇ ವಿಹರಿಸಲು ಅನುಕೂಲಗಳಿವೆ.
ಬೆಣ್ಣೆತೊರಾ
ಬೆಣ್ಣೆತೊರಾ ಜಲಾಶಯ ಹಿನ್ನಿರು ಪ್ರದೇಶ. ಇಲ್ಲಿ ದೇಶ ವಿದೇಶಗಳಿಂದ ಪಕ್ಷಿಗಳು ವಲಸೆ ಬರುತ್ತವೆ. ಹಾಗಾಗಿ ಇದು ಪ್ರವಾಸಿಗರ ಮತ್ತು ಪಕ್ಷಿ ಪ್ರೇಮಿಗಳ ನೆಚ್ಚಿನ ತಾಣ. ಕಲಬುರಗಿ ನಗರದಿಂದ ಕೇವಲ 15 ಕಿ.ಮೀ. ಅಂತರದಲ್ಲಿರುವ ಜಾಗವಿದು.
ಅಮರ್ಜಾ ಅಣೆಕಟ್ಟೆ
ಆಳಂದ ತಾಲೂಕಿನ ಅಮರ್ಜಾ ಅಣೆಕಟ್ಟೆ ಪ್ರದೇಶವೂ ಜಲರಾಶಿಯ ತಾಣ. ಇಲ್ಲಿಯೂ ಪ್ರವಾಸಿಗರಿಗೆ ಜಲ ವಿಹಾರಕ್ಕೆ ಅನುಕೂಲ ಕಲ್ಪಿಸಲು ಅವಕಾಶಗಳಿವೆ. ಆಳಂದ ಹಾಗೂ ಕಲಬುರಗಿಯಿಂದ ಇಲ್ಲಿಗೆ ಹೋಗಿ ಬರಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು. ಕೋರಳ್ಳಿ ಹತ್ತಿರವಿರುವ ಈ ಜಲಾಶಯದಲ್ಲಿ ಸದಾಕಾಲ ನೀರಿರುತ್ತದೆ.
ಖಾಜಾ ಕೋಟನೂರ್, ಬೋಸ್ಗಾ ಕೆರೆಗಳು
ಕಲಬುರಗಿ ಹೊರವಲಯ ೧೫ ಕಿ.ಮೀ. ಅಂತರದಲ್ಲಿರುವ ಬೋಸ್ಗಾ ಹಾಗೂ ಖಾಜಾ ಕೋಟನೂರ್ ಕೆರೆಗಳು ಜಿಲ್ಲೆಯ ಅದ್ಭುತ ಪ್ರವಾಸಿ ತಾಣಗಳು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ