ಬಸವ ಕಲ್ಯಾಣದ ಶರಣರಿಗೆ ನಮಸ್ಕಾರ; ಬೀದರ್ ಕಡೆ ಹೋದರೆ ಈ 13 ಶರಣ ಸ್ಮಾರಕಗಳನ್ನು ನೋಡಿ ಬನ್ನಿ
ಸಮುದ್ರ ದಂಡೆ, ಬೆಟ್ಟ ಗುಡ್ಡ ತಿರುಗಾಡುವುದು ಇದ್ದಿದ್ದೇ. ಎಲ್ಲಾ ದಿನ ಒಂದೇ ಅಲ್ಲ. ಯಾವತ್ತೋ ಒಮ್ಮೆ ಮನಸ್ಸು ಮೌನಕ್ಕೆ ಶರಣಾಗುತ್ತದೆ. ಆ ಹೊತ್ತಿಗೆ ಹಿರಿಯರ ಸಾನ್ನಿಧ್ಯ ಬೇಕು ಅನ್ನಿಸುತ್ತದೆ. ಅಂಥಾ ಹೊತ್ತಲ್ಲಿ ಭೇಟಿ ನೀಡಬೇಕಾದ ಜಾಗ ಎಂದರೆ ಬಸವ ಕಲ್ಯಾಣ. ಬಸವ ಕಲ್ಯಾಣದಲ್ಲಿ ಹತ್ತಾರು ಶರಣರ ಸ್ಮಾರಕಗಳಿವೆ. ಅಲ್ಲಿ ಆ ಶರಣರ ವಚನಗಳು ಕೇಳಿಸುತ್ತವೆ. ವಚನಗಳು ಬಾಳಿಗೆ ದಾರಿ ತೋರಿಸುತ್ತವೆ. ಯಾವತ್ತಾದರೂ ಬೀದರ್ ಕಡೆಗೆ ಹೋದರೆ ಈ ಸ್ಮಾರಕಗಳಿಗೊಂದು ಭೇಟಿ ಕೊಡಿ. ಶರಣರು ಮರೆತು ಹೋಗುವಂಥವರಲ್ಲ. ಶರಣರ ಸ್ಮಾರಕ ಅಳಿದು ಹೋಗುವಂತದ್ದಲ್ಲ.
- ಬಸವಣ್ಣನ ಅರಿವಿನ ಮನೆ
ಬಸವಣ್ಣನ ಹೆಸರು ಕೇಳಿದರೇನೇ ಒಂಥರಾ ತೃಪ್ತ ಭಾವ. ಮಹಾನ್ ಕನಸನ್ನು ಕಂಡಿದ್ದ ಮಹಾ ಮಾನವತಾವಾದಿ. ಲಿಂಗ ತಾರತಮ್ಯ, ಜಾತಿ ತಾರತಮ್ಯ ಹೋಗಲಾಡಿಸಲು ಹಾಗೂ ಸಮಾನತೆಯನ್ನು ಜಾರಿಗೆ ತರಲು ಕ್ರಾಂತಿಯನ್ನೇ ಮಾಡಿದ್ದ ಶ್ರೇಷ್ಠರು ಅವರು. ಅವರ ಕಾರ್ಯಕ್ಷೇತ್ರ ಈ ಬಸವಕಲ್ಯಾಣ. ಅವರು ನಡೆದಾಡಿದ ಜಾಗ ಈ ಬಸವ ಕಲ್ಯಾಣ.
ಇಲ್ಲಿರುವ ಅರಿವಿನಮನೆ ಬಸವಣ್ಣನವರು ತ್ರಿವಿಧ ಲಿಂಗ ಪೂಜೆಯಲ್ಲಿ ನಿರತರಾಗಿದ್ದ ಪವಿತ್ರವಾದ ಸ್ಥಳ. ಅದಕ್ಕಾಗಿಯೇ ಇದು ಅರಿವಿನ ಮನೆ. ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣ ಜೀವಿಸಿದ್ದ ಕಾಲಾವಧಿ ಕ್ರಿ.ಶ. 1131ರಿಂದ 1167. ಹುಟ್ಟಿದ್ದು ಬಾಗೇವಾಡಿಯಲ್ಲಾದರೂ ಮುಂದೆ ಕಪ್ಪಡಿ ಸಂಗಮಕ್ಕೆ ಹೋದರು. ಅಲ್ಲಿ ಗುರುಗಳಾದ ಜಾತವೇದ ಮುನಿಗಳ ಆಶ್ರಯದಲ್ಲಿ ಅವರ ಅನುಗ್ರಹದಿಂದ ವಿದ್ಯಾ ಪಾರಂಗತರಾದರು.
ಮುಂದೆ ಗುರುಗಳ ಆದೇಶದಂತೆ ಕಲ್ಯಾಣಕ್ಕೆ ಬಂದು ಬಲದೇವ ಮಂತ್ರಿಯ ಮಗಳಾದ ಗಂಗಾಂಬಿಕೆಯನ್ನು ಮದುವೆಯಾಗಿ ಕರಣಿಕ ಕಾಯಕವನ್ನು ಕೈಗೊಂಡು ಗೃಹಸ್ಥ ಜೀವನವನ್ನು ನಡೆಸಿದರು . ಒಂದು ಸಲ ಬಿಜ್ಜಳನ ಓಲಗದಲ್ಲಿ ಲಿಪಿಯನ್ನು ಓದಿ ಸಿಂಹಾಸನದ ಕೆಳಗಿದ್ದ 64 ಕೋಟಿ ಧನವನ್ನು ಶೋಧಿಸಿ ಬಿಜ್ಜಳ ದೊರೆಗೆ ಸಿಗುವಂತೆ ಮಾಡಿದರು . ಮನೆ ಇವರ ಅಗಾಧವಾದ ಜಾಣತನಕ್ಕೆ ಮೆಚ್ಚಿದ ದೊರೆ ಬಸವಣ್ಣನವರಿಗೆ ಮಂತ್ರಿ ಪದವಿಯನ್ನು ಕೊಟ್ಟರು. ತನ್ನ ತಂಗಿಯಾದ ನೀಲಲೋಚನೆಯನ್ನು (ಸಿದ್ದರಸ ಮಂತ್ರಿಯ ಮಗಳು) ಮದುವೆ ಮಾಡಿಕೊಟ್ಟರು. ಇವೆಲ್ಲವೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬಸವಣ್ಣನವರ ನೇತೃತ್ವದಲ್ಲಿ ಸಾಮಾಜಿಕ, ಸಾಹಿತ್ಯಕ, ಧಾರ್ಮಿಕ ಹಾಗೂ ಆರ್ಥಿಕ ಕ್ರಾಂತಿಗಳು ಜರುಗಿ ಇತಿಹಾಸದಲ್ಲಿಯೇ ಅತಿ ಅಪೂರ್ವವೆನಿಸಿದ ಅನುಭವ ಮಂಟಪವೆಂಬ ಅಧ್ಯಾತ್ಮಿಕ ಮಹಾ ಸಂಸ್ಥೆಯೊಂದು ಜನ್ಮತಾಳಿತು.
ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ
ವೈರಾಗ್ಯನಿಧಿ ಪ್ರಭುದೇವರು ಅಧ್ಯಕ್ಷರಾಗಿದ್ದ ಈ ಅನುಭವ ಮಂಟಪದ ಆಧ್ಯಾತ್ಮಿಕ ಚರ್ಚೆಯಲ್ಲಿ ಭಾಗವಹಿಸಲು ಸ್ತ್ರೀ ಪುರುಷರು ಎಂಬ ಭೇದಭಾವವಿರಲಿಲ್ಲ. ಬಸವಣ್ಣನವರ ಶಕ್ತಿಗೆ ಮಾರು ಹೋಗಿ ಕಾಶ್ಮೀರದ ಮಹಾದೇವ ಭೂಪಾಲ, ಅಫಘಾನಿಸ್ತಾನದ ಮರುಳ ಶಂಕರದೇವ, ಬಳ್ಳಿಗಾಂವೆಯ ಪ್ರಭುದೇವರು, ಸೊನ್ನಲಿಗೆಯ ಸಿದ್ದರಾಮೇಶ್ವರ, ದೇವರ ಹಿಪ್ಪರಗಿಯ ಮಡಿವಾಳ ಮಾಚಿದೇವ ಮೊದಲಾದ ಶರಣರು ಹಾಗೂ ಉಡುತಡಿಯ ಅಕ್ಕಮಹಾದೇವಿಯಕ್ಕ, ಕಾಶ್ಮೀರದ ಮಹಾದೇವ ಭೂಪಾಲನ ಪಟ್ಟದ ರಾಣಿಯಾದ ಮಹಾದೇವಿ ಮುಂತಾದ ಶರಣ, ಶರಣೆಯರು ಆಗಮಿಸಿದ್ದರಿಂದ ಬಸವ ಕಲ್ಯಾಣ ಶ್ರೇಷ್ಠ ಕ್ಷೇತ್ರವೆಂದು ಅವತ್ತಿನಿಂದ ಇವತ್ತಿನವರೆಗೆ ಚಿರಸ್ಥಾಯಿಯಾಗಿದೆ.
- ಅಲ್ಲಮ ಪ್ರಭು ಗದ್ದುಗೆ
ಅಲ್ಲಮಪ್ರಭು ಕರವೂರು ಗ್ರಾಮದ ನಟವರ ಸಮುದಾಯಕ್ಕೆ ಸೇರಿದವರು. ತಂದೆ, ತಾಯಿಯು ಸುಜ್ಞಾನಿ ಹಾಗೂ ನಿರಹಂಕಾರಿ ಬಳ್ಳಗಾಯ ಗೊಗ್ಗೇಶ್ವರ ದೇವರ ಆರಾಧಕರು. ಹೆಂಡತಿಯ ಅಕಾಲಿಕ ಮರಣದ ಕಾರಣವಾಗಿ ಪ್ರಾಪಂಚಿಕದಿಂದ ಪಾರಮಾರ್ಥಕ ಜೀವನಕ್ಕೆ ಹೊರಳಿದವರು. ಯೋಗಿ ಅನಿಮಿಷದೇವನ ದರ್ಶನದಿಂದ ದಿವ್ಯಜ್ಞಾನಿಯಾದ ಇವರು ಗೊಗ್ಗಯ್ಯನಿಗೆ ಅಂತರಂಗದ ಕೃಷಿ, ಮುಕ್ತಾಯಕ್ಕನಿಗೆ ಸಾವು ಬದುಕಿನ ರಹಸ್ಯ, ಸಿದ್ಧರಾಮನಿಗೆ ಲೌಕಿಕ ಸಾಧನೆಯ ನಿರರ್ಥಕತೆ ಮುಂತಾದವುಗಳ ಬಗ್ಗೆ ತಿಳಿ ಹೇಳಿದ ದಾರ್ಶನಿಕ.
ಬಸವಣ್ಣ ಅಸ್ತಿತ್ವಕ್ಕೆ ತಂದ ಶೂನ್ಯಸಿಂಹಾಸನವೇರಿದ ಮಹಾಪುರುಷ. ಕರ್ನಾಟಕದ ವಿರಕ್ತಮಠಗಳು ಈ ಪೀಠ ಪರಂಪರೆಗೆ ಸೇರಿವೆ. ‘ಗುಹೇಶ್ವರ’ ಅಂಕಿತದಿಂದ ಸಾವಿರಾರು ವಚನಗಳನ್ನು ಬರೆದಿದ್ದಾರೆ.
ಆನಂದಪುರ(1660) ಜೋಡಿದಾಸೇನಹಳ್ಳಿ (1686) ಚಿಕ್ಕಹೆಜ್ಜಾಲೆ ಶಾಸನಗಳಲ್ಲಿ ಇವರ ಪ್ರಸ್ತಾಪವಿದೆ. ಇವರ 1636 ವಚನಗಳು ಸಿಕ್ಕಿವೆ. ಇವತ್ತಿಗೂ ಅವರ ವಚನಗಳು ಹೊಸ ಪೀಳಿಗೆಯನ್ನು ತಟ್ಟುತ್ತಲೇ ಇವೆ. ಅವರ ಗದ್ದುಗೆಗೆ ಹೋಗಿ ಬಂದರೆ, ಅಲ್ಲಮನ ವಚನ ಓದಿದರೆ ಸಮಾಧಾನ ಸಿಗಬಹುದು.
- ಮಡಿವಾಳ ಮಾಚೇಶ್ವರ ಹೊಂಡ
ಮಡಿವಾಳ ಮಾಚಿದೇವರ ಶರಣರದ್ದು ಮಡಿವಾಳ ವೃತ್ತಿ. ಹಿಪ್ಪರಗಿಯ ಕಲ್ಲಿನಾಥಸ್ವಾಮಿ ಇವರ ದೇವ. ಮಾಚಿದೇವ ಹಿಪ್ಪರಗಿಯಿಂದ ಕಲ್ಯಾಣ ಪಟ್ಟಣಕ್ಕೆ ಹೊರಟಾಗ ಮಧ್ಯ ದಾರಿಯಲ್ಲಿ ಬಂದ ಭೀಮಾ ನದಿಯನ್ನು ಪವಾಡ ರೂಪದಲ್ಲಿ ದಾಟಿ ಬಂದ ಪ್ರತೀತಿ ಇದೆ. ತನ್ನ ಮೇಲೇರಿ ಬಂದ ಬಿಜ್ಜಳನ ಆನೆಯನ್ನು ಕೊಂದರು ಎಂಬ ಕತೆಯನ್ನು ಇತಿಹಾಸದ ಪುಟಗಳು ತಿಳಿಸುತ್ತವೆ. ಆನೆಯನ್ನು ದಂಡಿಸಿದ ಕತೆಗೆ ಪೂರಕವಾದ ಶಿಲ್ಪಕೃತಿಗಳುಗಳು ಅಮೀನಭಾವಿ, ಮುಳಗುಂದ ಹಾಗೂ ಧಾರವಾಡಗಳಲ್ಲಿವೆ. ಕಾನಕಾನಹಳ್ಳಿ ತೆಲುಗು ಶಾಸನ(1700) ಕೂಡ ಇವರನ್ನು ಉಲ್ಲೇಖಿಸಿದೆ. ಬಸವಣ್ಣನ ಬಗ್ಗೆ ಅಪಾರ ಭಕ್ತಿ ಹೊಂದಿದ ಈತ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಶರಣ ಸೈನ್ಯದ ನೇತೃತ್ವ ವಹಿಸಿ, ಮುರಗೊಡ ಸಮೀಪದ ಕಾರಿಮನೆಯಲ್ಲಿ ಲಿಂಗೈಕ್ಯರಾದರೆಂದು ಪ್ರತೀತಿ ಇದೆ. ಇವರ 286 ವಚನಗಳು ದೊರಕಿವೆ. ಮಾಚೇಶ್ವರ ಹೊಂಡಕ್ಕೆ ಒಮ್ಮೆ ಹೋಗಿ ಬಂದರೆ ಮಾಚಿದೇವರು ಇನ್ನೂ ಹತ್ತಿರಾಗಬಹುದು.
- ಉರಿಲಿಂಗ ಪೆದ್ದಿ ಶರಣರು
ಈ ಶರಣರ ಹೆಸರು ಪೆದ್ದಣ್ಣ. ಇವರು ಪೆದ್ದಿ ಶೋಷಿತ ಜನಾಂಗದಲ್ಲಿ ಜನಿಸಿ ಅನೇಕ ಕಷ್ಟಗಳನ್ನು ಎದುರಿಸಿದವರು. ಕಡು ಬಡತನದಿಂದಾಗಿ ಹೊಟ್ಟೆಪಾಡಿಗಾಗಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಒಂದು ದಿನ ಆ ಊರಿನ ಮಠಕ್ಕೆ ಕಳ್ಳತನಕ್ಕೆ ಬಂದು ಮಠದ ಮಾಳಿಗೆಯನ್ನು ಏರಿ ಬೆಳಕಿಂಡಿಯೊಳಗಿಂದ ಇಳಿಯಲು ಯತ್ನಿಸಿದರು. ಆಗ ಆ ಮಠದ ಉರಿಲಿಂಗ ದೇವರು ಲಿಂಗ ಪೂಜೆ ಮಾಡುತ್ತಿದ್ದುದ್ದನ್ನು ಮತ್ತು ಸೂರಯ್ಯ ಎಂಬುವರಿಗೆ ಲಿಂಗ ದೀಕ್ಷೆ ಕೊಡುವದನ್ನು ನೋಡಿ ಇವರ ಹೃದಯ ಪರಿವರ್ತನೆಯಾಯಿತು ಎಂಬ ಕತೆ ಇದೆ. ತಾನೂ ಕೂಡ ಸೂರಯ್ಯನಂತೆ ಲಿಂಗ ದೀಕ್ಷೆ ಪಡೆಯಬೇಕೆಂದು ನಿರ್ಧರಿಸಿದ ಅವರು ಅಂದಿನಿಂದ ಕಳ್ಳತನ ಮಾಡುವದನ್ನು ಬಿಟ್ಟು ಮಠಕ್ಕೆ ಉರುವಲು ಕಟ್ಟಿಗೆಯನ್ನು ಪೂರೈಸುವ ಕಾಯಕ ಕೈಕೊಂಡರು. ಅದಕ್ಕೆ ಪ್ರತಿಯಾಗಿ ಹಣ ತೆಗೆದುಕೊಳ್ಳಲಿಲ್ಲ. ಪ್ರತಿಯಾಗಿ ತನಗೂ ಲಿಂಗದೀಕ್ಷೆ ಕೊಡಬೇಕೆಂದು ಹಠ ಹಿಡಿದರು. ಆಗ ಉರಿಲಿಂಗ ದೇವರು ಕೋಪಗೊಂಡು ದಾರಿಯಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಇದನ್ನು ಪೂಜಿಸು ಎಂದು ಹೇಳಿದರು. ಉರಿಲಿಂಗದೇವನು ‘ಫೇ ದಗಡಿ ಜಾ’ ಎಂದು ಎಸೆದ ಕಲ್ಲನ್ನೇ ಲಿಂಗವೆಂದು ಪೂಜಿಸಿದ ಕೀರ್ತಿ ಇವರದು. ಶಿವಭಕ್ತರಾದ ಇವರು ಮುಂದೆ ಘನ ವಿದ್ವಾಂಸನಾಗುವರು. ಉರಿಲಿಂಗದೇವ ಇವರನ್ನೇ ತಮ್ಮ ಉತ್ತರಾಧಿಕಾರಿಯಾಗಿ ಮಠಕ್ಕೆ ನೇಮಿಸಿದರು. ಕೊಡ್ತಾ ಕಲ್ಯಾಣ, ಕೊರಳೆ, ಭಾಲ್ಕಿ, ಬೇನಚಿಂಚೋಳಿ ಮುಂತಾದ ಕಡೆ ಇವರ ಮಠಗಳಿವೆ. ವಚನದಲ್ಲಿ ಸಂಸ್ಕೃತ ಬಳಕೆ ಇವರ ವಚನದ ವೈಶಿಷ್ಟ್ಯ. ಇವರ 363 ವಚನಗಳು ಸಿಕ್ಕಿವೆ. ಇವರ ಮಠಕ್ಕೆ ಭೇಟಿ ನೀಡಿದರೆ ಈ ಮಹಾನ್ ಚೇತನಕ್ಕೆ ಗೌರವಿಸಿದಂತೆ.
- ಅಂಬಿಗರ ಚೌಡಯ್ಯ ಸ್ಮಾರಕ
ಅಂಬಿಗರ ಚೌಡಯ್ಯ ಎಂಬ ಅಂಕಿತನಾಮದಲ್ಲಿರುವ ಇವರ 274 ವಚನಗಳು ಸಿಕ್ಕಿವೆ. ವೃತ್ತಿಯಿಂದ ಅಂಬಿಗರಾಗಿದ್ದವರು. ಅಕ್ಷರದ ಸಹವಾಸಕ್ಕೆ ಬಿದ್ದು ವಚನಕಾರರಾದರು. ಮೂಢನಂಬಿಕೆಗಳನ್ನು ನಿರಾಕರಿಸುತ್ತಲೇ ಒಳ್ಳೆಯ ರೀತಿಯಲ್ಲಿ ಬಾಳಬೇಕೆಂದು ಸಮಾಜಕ್ಕೆ ಕರೆ ಕೊಟ್ಟಿದ್ದಾರೆ. ಇವರ ವಚನಗಳು ತುಸು ಕಹಿ ಅನ್ನಿಸಿದರೂ ಯೋಚಿಸಿದಾಗ ಅದರ ವಿವಿಧ ಅರ್ಥಗಳು ಗೋಚರಿಸುತ್ತಾ ಹೋಗುತ್ತವೆ. ಕಲ್ಲಿನಿಂದ ಕಟ್ಟಿದ ಇವರ ವಿಶಿಷ್ಟ ಸ್ಮಾರಕಕ್ಕೆ ಹೋದರೆ ಅಂಬಿಗರ ಚೌಡಯ್ಯನವರ ಜೀವನ ತಟ್ಟಬಹುದು.
- ಅಕ್ಕನಾಗಮ್ಮನ ಗವಿ
ಅಕ್ಕನಾಗಮ್ಮ ಬಾಗೇವಾಡಿಯ ಮಾದರಸ ಹಾಗೂ ಮಾದಲಾಂಬಿಕೆಯ ಮಗಳು. ಬಸವಣ್ಣನ ಸಹೋದರಿ. ಬಸವಣ್ಣ ಬಾಗೇವಾಡಿ ಬಿಡುವಾಗ ಅವರೊಂದಿಗೆ ತಾವೂ ಕೂಡಲಸಂಗಮಕ್ಕೆ ಬಂದವರು. ಕೂಡಲಸಂಗಮದಲ್ಲಿ ಶಿವಾಸ್ವಾಮಿಯ ಜೊತೆಗೆ ವಿವಾಹವಾಯಿತು. ಇವರ ಮಗ ಚೆನ್ನಬಸವಣ್ಣ. ಅಕ್ಕ ನಾಗಮ್ಮನವರು ಯೋಗ ಸಾಧಕರಾಗಿದ್ದರು. ಕಲ್ಯಾಣ ಕ್ರಾಂತಿಯ ನಂತರ ಚಿಕ್ಕಮಗಳೂರಿನ ತರೀಕೆರೆಯಲ್ಲಿ ಉಳಿದ ಇವರು ಧರ್ಮರಕ್ಷಣೆಯ ಕಾರ್ಯದಲ್ಲಿ ನಿರತರಾಗಿ ಕೊನೆಗೆ ಅಲ್ಲಿಯೇ ಲಿಂಗೈಕ್ಯರಾದರು ಎಂದು ನಂಬಲಾಗಿದೆ. ಈಗಲೂ ತರೀಕೆರ ಹತ್ತಿರ ಅವರ ಸಮಾಧಿ ಇದೆ. ಇವರ 14 ವಚನಗಳು ಲಭ್ಯವಾಗಿವೆ. ಅವರ ನೆನಪಲ್ಲಿ ಈ ಗವಿ ದಿಟ್ಟವಾಗಿ ನಿಂತಿದೆ.
- ನೂಲಿಯ ಚಂದಯ್ಯ ಗವಿ
ನೂಲಿಯ ಚಂದಯ್ಯನವರು ನವರು ಕೊರವ ಸಮಾಜದ ಕಾಯಕ ಜೀವಿ. ಚಿತ್ರದುರ್ಗದಿಂದ ಹೊಳಲ್ಕೆರೆಗೆ ಬರುವ ಮಾರ್ಗದ ನುಲೆನೂರು ಗ್ರಾಮದಲ್ಲಿ ಇವರು ಅನುಷ್ಠಾನ ಮಾಡಿ ಅಲ್ಲಿಯೇ ಲಿಂಗೈಕ್ಯರಾದರು ಎಂದು ಹೇಳಲಾಗುತ್ತದೆ. ನೂಲಿಯ ಚಂದಯ್ಯನವರ ಜೀವನವು ಬಸವ ಪುರಾಣ, ಶೂನ್ಯಸಂಪಾದನೆ, ಚನ್ನಬಸವಪುರಾಣ ಮುಂತಾದವುಗಳಲ್ಲಿ ಉಲ್ಲೇಖವಾಗಿದೆ. ಬನವಾಸಿ ಮಧುಕೇಶ್ವರ ದೇವಾಲಯದ ಶಿಲಾ ಮಂಟಪದ ಕೆಳಭಾಗದಲ್ಲಿ ಇವರ ವಿಗ್ರಹ ಮತ್ತು ಹೆಸರು ಕೆತ್ತಲಾಗಿದೆ.
ಹುಲ್ಲಿನಿಂದ ನೂಲಿಯ ಹಗ್ಗ, ಕಣ್ಣಿಗಳನ್ನು ಮಾಡಿ ಜಂಗಮ ದಾಸೋಹ ಮಾಡುತ್ತಿದ್ದರು. ಕೊಯ್ಯುವ ಕಾಯಕದಲ್ಲಿ ನಿರತರಾಗಿರುವಾಗ ಇಷ್ಟಲಿಂಗ ಹರಿದು ಬಿದ್ದರೂ ಚಂದಯ್ಯನವರು ಲೆಕ್ಕಿಸಲಿಲ್ಲ. ಕೊನೆಗೆ ಇಷ್ಟಲಿಂಗವೇ ಚಂದಯ್ಯನ ಬೆನ್ನುಹತ್ತಿ ಬಂದಿತೆಂದು ತಿಳಿದು ಬರುತ್ತದೆ.
ಪ್ರತಿವರ್ಷ ಜೇಷ್ಠ ಮಾಸದ ಕೊನೆಗೆ ಚಂದಯ್ಯನವರ ಜಯಂತಿ ಆಚರಿಸಲಾಗುತ್ತದೆ. ಇವರ 18 ವಚನಗಳು ಸಧ್ಯ ಲಭ್ಯವಿದೆ. ಇಂಥಾ ಮಹಾಮಹಿಮ ನೂಲಿಯ ಚಂದಯ್ಯ ಗವಿ ಅಲ್ಲಿನ ಮೌನದಿಂದಲೇ ಮನಸ್ಸು ಗೆಲ್ಲುತ್ತದೆ.
- ಜೇಡರ ದಾಸಿಮಯ್ಯ ಸ್ಮಾರಕ
ಜೇಡರ ದಾಸಿಮಯ್ಯ ಬಸವ ಪೂರ್ವದ ವಚನಕಾರರು. ಬಟ್ಟೆ ನೇಯುವುದು ಇವರ ಕಾಯಕ. ರಾಯಚೂರ ಜಿಲ್ಲೆಯ ಗಬ್ಬುರಿನ ದುಗ್ಗಳೆಯನ್ನು ವಿವಾಹವಾದವರು. ಇವರ ತವನಿಧಿ ಪವಾಡ, ಜಂಗಮರಿಗೆ ವಸ್ತ್ರ ನೀಡಿದ ಪವಾಡಗಳು ಪುರಾಣಗಳಲ್ಲಿ ಉಲ್ಲೇಖಗೊಂಡಿವೆ. ಅಬ್ಬಲೂರಿನ ಸೋಮೇಶ್ವರ ದೇವಾಲಯದಲ್ಲಿ ಇವರು ಜಂಗಮನಿಗೆ ವಸ್ತ್ರ ನೀಡುತ್ತಿರುವ ಶಿಲ್ಪವಿದೆ. ಬನವಾಸಿ ಮಧುಕೇಶ್ವರ ದೇವಾಲಯದ ಶಿಲಾ ಮಂಟಪದ ಕೆಳಭಾಗದಲ್ಲಿ ಇವರ ವಿಗ್ರಹ ಹಾಗೂ ಹೆಸರನ್ನು ಕೆತ್ತಲಾಗಿದೆ. ಗಬ್ಬುರು 1148, ತಿರಿಯಿಂಡಿ 1197, ಗೀಜಗನಹಳ್ಳಿ 1201, ಬಿದಿರೆ 1165 ಗ್ರಾಮಗಳ ಶಾಸನಗಳಲ್ಲಿ ಇವರ ಪ್ರಸ್ತಾಪವಿದೆ. ಶಂಕರ ದಾಸಿಮಯ್ಯನ ಸಮಕಾಲೀನರಾದ ಇವರ 176 ವಚನಗಳು ಸಿಕ್ಕಿವೆ.
- ಗೊಲ್ಲಾಳೇಶ್ವರ
ಗೊಲ್ಲಾಳ ಮೂಲತಃ ಢವಳಾರ ಗ್ರಾಮದವರು. ಇದರನೆರೆಯ ಗೋಲಗೇರಿ ಇವರ ಐಕ್ಯಸ್ಥಳ. ಇಲ್ಲಿ ಸುಪ್ರಸಿದ್ದ ಗೊಲ್ಲಾಳೇಶ್ವರ ದೇವಾಲಯ ಇದೆ. ಜಾತಿಯಿಂದ ಕುರುಬರಾಗಿರುವ ಈ ಮುಗ್ಧ ಭಕ್ತ ಶ್ರೀಶೈಲಕ್ಕೆ ಹೊರಟ ಭಕ್ತರಿಗೆ ತನಗೂ ಒಂದು ಲಿಂಗ ತರಬೇಕೆಂದು ಕೇಳಿಕೊಳ್ಳುತ್ತಾರೆ. ಲಿಂಗ ತರಲು ಮರೆತ ಅವರು ಕುರಿ ಹಿಕ್ಕೆಯನ್ನು ನೀಡಿ ಇದೇ ಲಿಂಗವೆಂದು ಹೇಳುತ್ತಾರೆ. ಅವರ ಮಾತನ್ನು ನಂಬಿ ಹಿಕ್ಕೆಯನ್ನೇ ಭಕ್ತಿಯಿಂದ ಪೂಜಿಸಿದ ಮಹಾಭಕ್ತ ಇವರು. ಇವರ 10 ವಚನಗಳು ಲಭ್ಯವಿವೆ. ಇವರ ಸ್ಮಾರಕ ಕಿರಿದಾಗಿದ್ದರೂ ಇವರ ವ್ಯಕ್ತಿತ್ವ ಹಿರಿದಾಗಿದೆ.
- ಮೋಳಿಗೆ ಮಾರಯ್ಯನ ಗವಿ
12ನೇ ಶತಮಾನದಲ್ಲಿ ಕಲ್ಯಾಣವು ಭೂ ಕೈಲಾಸವಾಗಿ ವಚನ ಸಾಹಿತ್ಯದ ಉಗಮಸ್ಥಾನವಾಗಿ ಪ್ರಸಿದ್ದಿ ಪಡೆದ ವಿಷಯ ಜಂಗಮರ ಮೂಲಕ ತಿಳಿದುಕೊಂಡು ಕಾಶ್ಮೀರದ ಅರಸ ಮಹಾದೇವ ಭೂಪಾಲನು ತನ್ನ ರಾಣಿ ಮಹಾದೇವಿಯೊಡನೆ ಮಗನಿಗೆ ರಾಜ್ಯ ಒಪ್ಪಿಸಿ ಕಲ್ಯಾಣಕ್ಕೆ ಬಂದರು.
ಕಲ್ಯಾಣದಲ್ಲಿ ಅನುಭವ ಮಂಟಪದ ಸದಸ್ಯರಾಗಿ ಕಟ್ಟಿಗೆಯ ಕಾಯಕವನ್ನು ಮಾಡುತ್ತಾ ವಚನಗಳನ್ನು ರಚಿಸುತ್ತಾ ಜ್ಞಾನ ದಾಸೋಹ, ಅನ್ನದಾಸೋಹ ತಪ್ಪದೆ ಮಾಡುವ ವ್ರತವನ್ನು ಕೈಗೊಂಡರು. ಕಟ್ಟಿಗೆ ಹೊರೆ ಹೊತ್ತು ಎಲ್ಲಾ ಶರಣರ ಮನೆ ಬಾಗಿಲಿಗೆ ಕಟ್ಟಿಗೆ ಒದಗಿಸುತ್ತಾ ಪವಿತ್ರವಾದ ಕಾಯಕದಿಂದ ಪ್ರಸಿದ್ಧರಾದರು.
ಕಟ್ಟಿಗೆ ಹೊರೆಗೆ ಕನ್ನಡದಲ್ಲಿ ಮೋಳಿಗೆ ಎಂದು ಕರೆಯುತ್ತಾರೆ. ಆದಕಾರಣ ಅವರಿಗೆ ಮೋಳಿಗೆ ಮಾರಯ್ಯನೆಂದು ಹೆಸರಾಯಿತು. ಕಲ್ಯಾಣ ಕ್ರಾಂತಿಯ ಸಮಯದಲ್ಲಿ 130 ವರ್ಷದವರಾಗಿದ್ದು, ಮೋಳಕೇರಾ ಎಂಬ ಗ್ರಾಮದಲ್ಲಿ ಲಿಂಗೈಕ್ಯರಾದರೆಂದು ಇತಿಹಾಸ ತಿಳಿಸುತ್ತದೆ. ಇವರು ಸುಮಾರು 300 ವಚನಗಳನ್ನು ಬರೆದಿದ್ದಾಗಿಯೂ ತಿಳಿದು ಬರುತ್ತದೆ. ಅಂಥಾ ಅಪರೂಪದ ಶರಣರು ಇವರು.
- ಅಕ್ಕಮಹಾದೇವಿ
ಶಿವಮೊಗ್ಗ ಜಿಲ್ಲೆಯ ಉಡುತಡಿ ಅಕ್ಕ ಮಹಾದೇವಿಯವರ ಜನ್ಮಸ್ಥಳ. ಬಾಲ್ಯದಿಂದಲೇ ಅಲೌಕಿಕ ಬದುಕಿನ ಬಗ್ಗೆ ಆಸಕ್ತಿ ಹೊಂದಿದವರು. ಚನ್ನಮಲ್ಲಿಕಾರ್ಜುನನ ಆರಾಧಕರಾಗಿದ್ದವರು. ಒತ್ತಾಯದಿಂದ ಕೌಶಿಕನೆಂಬ ರಾಜನೊಂದಿಗೆ ವಿವಾಹವಾಗಿದ್ದ ಇವರು ದಾಂಪತ್ಯ ಜೀವನ ತೊರೆದು ಕಲ್ಯಾಣಕೆ ಬಂದರು. ಅನುಭವ ಮಂಟಪದ ಸಂವಾದದಲ್ಲಿ ಭಾಗಿಯಾದ ಇವರು ಶ್ರೀಶೈಲದ ಕದಳಿಗೆ ಹೋಗಿ ಅಲ್ಲಿಯೇ ಲಿಂಗೈಕ್ಯರಾದರು. ಹರಿಹರ ಮೊದಲಾದವರು ಇವರನ್ನು ಕುರಿತು ಕೃತಿ ರಚಿಸಿದ್ದಾರೆ. ಅಕ್ಕಾಮಹಾದೇವಿಯವರ 434 ವಚನಗಳು ಸಿಕ್ಕಿವೆ .
- ತ್ರಿಪುರಾಂತಕೇಶ್ವರ
ಬಸವಕಲ್ಯಾಣದ ತ್ರಿಪುರಾಂತ ಕೆರೆಯ ದಂಡೆಯ ಮೇಲೆ ಈ ತ್ರಿಪುರಾಂತಕೇಶ್ವರ ದೇವಾಲಯ ಇದೆ. ಇದು ಬಸವಣ್ಣನವರ ಕಾಲದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಕಿನ್ನರಿ ಬೊಮ್ಮಯ್ಯ ಹಾಗೂ ಈ ದೇವಾಲಯಕ್ಕೆ ವಿಶೇಷ ಸಂಬಂಧ ಇದೆ.
- ಕಂಬಳಿ ನಾಗಿದೇವ ಮಠ
ಸಂಬೋಳಿ ನಾಗಿದೇವರನ್ನು ಶಿವನಾಗಮಯ್ಯ ಎಂದು ಕರೆಯುವ ರೂಢಿ ಇದೆ. ಶಿವನಾಗಿಮಯ್ಯ ಶೋಷಿತ ಜಾತಿಯಲ್ಲಿ ಜನಿಸಿದವರು. ಬಸವಣ್ಣ ಇವರ ಮನೆಯಲ್ಲಿ ಪ್ರಸಾದ ಸೇವಿಸಿದುದು ವೈದಿಕರಿಗೆ ಸರಿ ಬರಲಿಲ್ಲ. ಅವರು ಬಿಜ್ಜಳ ಮಹಾರಾಜನಿಗೆ ಬಸವಣ್ಣನ ಬಗ್ಗೆ ಚಾಡಿ ಹೇಳಿದರು. ಬಿಜ್ಜಳ ಶಿವನಾಗಿಮಯ್ಯನನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ದೇಹದಿಂದ ಹಾಲು ಸುರಿಯಿತೆಂಬ ಪವಾಡದ ಕತೆ ಚಾಲ್ತಿಯಲ್ಲಿದೆ. ಕಲ್ಯಾಣದಲ್ಲಿರುವ ಇವರ ಮಠಕ್ಕೆ ಕಂಬಳಿ ನಾಗಿದೇವ ಮಠ ಎಂದು ಕರೆಯುವ ರೂಢಿ ಇದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ