ಕಾಡಿನ ಕತೆಗಳುನಡಿಗೆ ನಮ್ಮ ಖುಷಿಗೆಸೂಪರ್ ಗ್ಯಾಂಗು

ದಟ್ಟ ಕಾಡಲ್ಲಿ ದಾರಿ ತಪ್ಪಿದ್ದ ವೇಳೆಯಲ್ಲಿ ಗೆಳೆಯನಿಗೆ ಹಾವು ಕಚ್ಚಿತು: ವಿಶ್ವಜಿತ್ ನಾಯಕ್ ಬರೆದ ಒಂಭತ್ತು ಗುಡ್ಡದ ರೋಚಕ ಕತೆ

ಭಾಗ 1

ಟ್ರೆಕ್ಕಿಂಗ್ ಎಂದರೆ ಪ್ರೀತಿ. ರೈಡಿಂಗ್ ಅಂದ್ರೆ ಪ್ರಾಣ. ಹಸಿರು ಬಯಲನ್ನೂ ದಟ್ಟ ಕಾಡನ್ನೂ ನೀಲಿ ಸಮುದ್ರವನ್ನೂ ಅತಿಯಾಗಿ ಇಷ್ಟಪಡುವ ಉತ್ತರ ಕನ್ನಡದ ಹುಡುಗ ವಿಶ್ವಜಿತ್ ನಾಯಕ್. ಐಟಿಯಲ್ಲಿ ಕೆಲಸ. ಅಕ್ಷರಗಳೆಂದರೆ ಖುಷಿ. ಆಗಾಗ ಬರೆಯುತ್ತಾರೆ. ಭಾಷೆ ಒಲಿದಿದೆ. ನೀವು ಇವರನ್ನು ಓದುವುದಷ್ಟೇ ಬಾಕಿ ಇದೆ.    

ಕಿರಿಕ್ ಪಾರ್ಟಿ ಸಿನಿಮಾ ನೋಡುವಾಗ ಬರೀ ಇಂಜಿನಿಯರಿಂಗ್ ಕಾಲೇಜ್ ದಿನಗಳದೇ ನೆನಪು. ವಿಪರ್ಯಾಸವೆಂದರೆ ನಮಗೆ ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಅಂದರೆ ಚಾರಣ. ನಾವು ಏನಾದರೂ ಈ ಸಿನಿಮಾ ಮಾಡಿದ್ದರೆ ಸೆಮಿಸ್ಟರ್ ಗೆ ಕನಿಷ್ಟ ಒಂದಾದರೂ ಚಾರಣ ಮಾಡಿಸಿ, ನಮ್ಮ ಪಶ್ಚಿಮ ಘಟ್ಟದ ಅಂದ ಕಣ್ಣಿನಲ್ಲಿ ಹೆಪ್ಪುಗಟ್ಟುವ ತನಕ ತೋರಿಸ ಬಹುದಿತ್ತು ಅಂದುಕೊಂಡೆ.

ಪಶ್ಚಿಮ ಘಟ್ಟದಲ್ಲೇ ಹುಟ್ಟಿ ಬೆಳೆದಿದ್ದರೂ, ಕಾಡು ಮೇಡುಗಳನ್ನು ಸುತ್ತಿ ಕಣ್ಣಾ ಮುಚ್ಚಾಲೆ ಆಡಿದ್ದರೂ, ಕಾಡು-ಬೆಟ್ಟ ಅಳೆಯುವುದನ್ನೇ ಚಾರಣ ಎನ್ನುತ್ತಾರೆ ಎಂದು ತಿಳಿದಿದ್ದು ಎರಡನೆಯ ಸೆಮಿಸ್ಟರ್ ನಲ್ಲಿ ಸಿಂಹ ಮತ್ತು ಸಂಗಡಿಗರು ಕೊಡಚಾದ್ರಿಗೆ ಕರೆದುಕೊಂಡು ಹೋದಾಗಲೇ.

ಅದಾದ ಮೇಲೆ ಸೆಮಿಸ್ಟೆರ್ ಗೆ ಒಮ್ಮೆಯಂತೆ, ಅಥವಾ ಯಾವಾಗ ಬೇಸರವಾಗತ್ತೋ ಆವಾಗ ಪಶ್ಚಿಮ ಘಟ್ಟದ ಕಡೆಗೆ ಚಾರಣ ಹೋಗುವುದು ಹವ್ಯಾಸವಾಗಿ ಹೋಯಿತು. ನಮ್ಮದೇ ಒಂದು ಗುಂಪಿಗೆ ಚಾರಣಿಗರು ಎಂದು ಹೆಸರಿಟ್ಟು, ಆದಷ್ಟು ಜನರನ್ನು ಕೂಡಿಸಿ ಚರಣದ ರುಚಿ ಎಲ್ಲರಿಗೂ ಹಂಚಲು ಪ್ರಾರಂಭಿಸಿದೆವು. ಕೊನೆಗೆ ಹೆಸರನ್ನು ಬದಲಾಯಿಸಿ ಇಟ್ಟ ಹೆಸರೇ ಕಾಡ್ ಬಾಯ್ಸ್ .

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಕರ್ನಾಟಕದ ಎಲ್ಲ ಪ್ರಮುಖ ಚಾರಣ ಮುಗಿಸಬೇಕು ಅಂದುಕೊಂಡು ಮಾಡಿದ ಚೆಕ್ ಲಿಸ್ಟ್ ಅಲ್ಲಿ ಮಧ್ಯದಲ್ಲಿ ಇರುವ ಒಂದು ಹೆಸರು ಒಂಬತ್ತು ಗುಡ್ಡ. ಆ ಚಾರಣದ ರೋಮಾಂಚಕ ಅನುಭವ ಇದು.

ಟ್ರೆಕ್ಕಿಂಗ್ ಹೋಗಿ ಕಾಣೆಯಾದವರ ಜಾಡು ಹಿಡಿದು

ಅದು 22 ಜನವರಿ 2010. ಎಂದಿನಂತೆ ಅದೇ ಬೋರಿಂಗ್ ಕ್ಲಾಸ್, ಅದೇ ಲಾಸ್ಟ್ ಬೆಂಚ್. ಅದೇ ಬೆಂಗಳೂರು ಮಿರರ್ ನ ಸ್ಪೆಶಲ್ ಪೇಜ್. ಸಿಂಹ ತಂದಿದ್ದ ಚಿತ್ರಾನ್ನ- ಇದು ನಮ್ಮ ಪ್ರತಿದಿನದ ಕ್ಲಾಸ್ ಗಳಲ್ಲಿನ ದೈನಂದಿನ ಅಭ್ಯಾಸ.

ಇದ್ದಕ್ಕಿದ್ದಂತೆ ಸಿಂಹ ಏನನ್ನೋ ನೆನಸಿಕೊಂಡು ವಿಶ್ವಾ ಕಳೆದ ತಿಂಗಳು ಅರವಿಂದನ ಫ್ರೆಂಡ್ಸ್ ಟ್ರೆಕಿಂಗ್ ಹೋಗಿ ಕಾಡಲ್ಲಿ ಕಳೆದು ಹೋಗಿ, 1 ತಿಂಗಳ ನಂತರ ಅವರ ಅಸ್ಥಿಪಂಜರ ಕಾಡಲ್ಲಿ ಸಿಕ್ತಂತೆ. ಕತ್ತಲ್ಲಿರೋ ಗೋಲ್ಡ್ ಚೈನ್ ನೋಡಿ ಅವರ ಗುರುತು ಸಿಕ್ಕಿತಂತೆ ಮಗಾ ಎಂದ.

ಹೌದಾ? ಎಲ್ಲಿರೋದು ಆ ಜಾಗ? ನಾವ್ಯಾವಾಗ ಹೋಗೋದು? 

ನಾನು ಕುತೂಹಲದಿಂದ ಕೇಳಿದೆ.

“ಗುಂಡ್ಯ ಹತ್ತಿರ “ವೈ ನಾಟ್ ಟುನೈಟ್?” ಅಂದ.

ಅದು ಸೀರೀಯಸ್ ಆಗಿ ಹೋಗಿತ್ತು.

ಸಿಂಹ : ”ನಾನು ಬೇಗ ಮನೆಗೆ ಹೋಗಿ ಬ್ಯಾಗ್ ಮತ್ತು ಟೆಂಟ್ ತಗೊಂಡ್ ಬರ್ತೀನಿ. ಎಲ್ಲರಿಗೂ ಹೇಳಿಬಿಡು ಮಜೆಸ್ಟಿಕ್ ಬರಕ್ಕೆ.”

6 ಜನ ರೆಡೀ ಆದ್ರು. ಎಲ್ಲರಿಗೂ ರಾತ್ರಿ ಮಜೆಸ್ಟಿಕ್ ಗೆ ಬರಲು ಹೆಳಿದ್ದಾಯಿತು.

ಯಲಹಂಕದ ನಮ್ಮ ಹಾಸ್ಟೆಲ್ ನಿಂದ ನಾವು ಹೊರಟು ಮಜೆಸ್ಟಿಕ್ ಸೇರಿದಾಗ ಸಮಯ 10 ಘಂಟೆ.

ನಾನು, ನರಸಿಂಹ, ವೆಂಕ, ವತ್ಸ, ಶಿವು, ವಿಜಯ್ ಜೊತೆಗೆ 150 ಚಪಾತಿ, ಗ್ಲೂಕೋಸ್, ಚಟ್ನಿ ಪುಡಿ ಪ್ಯಾಕೆಟ್-4, 1 ಟೆಂಟ್.

ಊಟ ಮಾಡಿ ಎಲ್ಲರೂ ಮೆಜೆಸ್ಟಿಕ್ ನ ಚಿಕ್ಕಮಗಳೂರು ಪ್ಲಾಟ್ ಫ್ರಾರ್ಮಲ್ಲಿ ಸೇರಿದ್ವಿ.

ಎರಡು ದಾರಿಗಳು

ಸಿಂಹ -”ನೋಡಿ ನಮ್ಮ ಹತ್ತಿರ ಎರಡು ದಾರಿ ಇದೆ.

  1. ಒಂಬತ್ತು ಗುಡ್ಡ- ದಾರಿ. ರಿಸ್ಟ್ರಿಕ್ಟೆಡ್ ಫಾರೆಸ್ಟ್. ಮ್ಯಾಪ್, ಕಂಪಾಸ್ ಜೊತೆ ಉತ್ತರ ದಿಕ್ಕಿನೆಡೆಗೆ ನದಿಯ ಮೂಲ ಹುಡುಕಿಕೊಂಡು ನಡೆಯಬೇಕು.
  2. ಎತ್ತಿನ ಭುಜ – ಆರಾಮಾಗಿರತ್ತೆ

ಏನು ಮಾಡೋದು?” 

ಎಲ್ಲರ ನಿರ್ಧಾರ .ಒಂಬತ್ತು ಗುಡ್ಡ ಆಗಿತ್ತು. ಕೆಂಪು ಬಣ್ಣದ ಬಸ್ ಹತ್ತಿ ಕುಳಿತಾಗ ಸಮಯ ರಾತ್ರಿ 11:38.

ಕಾಡಿನ ಅಂತರಾಳ ಅರಿಯದ ನಾವು, ಅವಲಂಬಿತರಾಗಿದ್ದು ಕೀ ಚೈನ್ ದಿಕ್ಸೂಚಿ, ಒಂದು ಹಾಳೆಯ ಮೇಲೆ ಪ್ರಿಂಟ್ ಔಟ್ ತೆಗೆದ ನಕ್ಷೆಯ ಮೇಲೆ. ಮೇಲ್ನೋಟಕ್ಕೆ ಯಾವುದೋ ರಿಯಾಲಿಟೀ ಶೋ ತರ ಅನಿಸುತ್ತಿದೆ ಇಂದು ಬರೆಯುವಾಗ. 6-5=2 ಎಂಬ ಕಾಲ್ಪನಿಕ ಕಥೆಯ ಸಿನಿಮಾ ಮಾಡಿ ಜನರಲ್ಲಿ ಗುಂಡ್ಯ ಮತ್ತು ಅಕ್ಕ ಪಕ್ಕದ ಸ್ಥಳಗಳ ಚಾರಣಗಳ ಬಗ್ಗೆ ಕುತೂಹಲ ಹಾಗೂ ಭಯ ಒಟ್ಟಿಗೆ ಮೂಡಿಸಿದ್ದ ನೆನಪಿದೆಯಾ?

[ಒಂಬತ್ತು ಗುಡ್ಡ – ಇದು ಮೂರು ಜಿಲ್ಲೆಗಳು ಅಂದರೆ ಹಾಸನ್, ಚಿಕ್ಕ ಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಹಂಚಿಕೊಂಡಿದೆ.]

ಆಗ ಇನ್ನೂ ಶಿರಾಡಿ ಘಾಟ್ ಗೆ ಕಾಂಕ್ರೀಟ್ ಹಾಕಿರಲಿಲ್ಲ. ಅದೇ ತಿರುವು ಮುರುವಾದ ರಸ್ತೆಯಲ್ಲಿ ಕೆಂಪು ಬಸ್ ನ ಚಾಲಕರ ಚಾಲನಾ ಕೌಶಲ್ಯವನ್ನು ನೋಡಿ ಅವರ ಅಭಿಮಾನಿಯಾಗಿದ್ದೆ.

ಮುಂಜಾನೆ ಕೋಳಿ ಕೂಗುವ ಮುಂಚೆ ಗುಂಡ್ಯ ಚೆಕ್ ಪೋಸ್ಟ್ ಮುಂದೆ ಕುಳಿತಿದ್ದೆವು. ಅಲ್ಲೇ ಅಂಗಡಿಯಲ್ಲಿ ಚಹಾ ಕುಡಿದು, ಬೋಟಿ (ಎಣ್ಣೆಯಲ್ಲಿ ಕರಿದ ಹಳದಿ ಬಣ್ಣದ ಪದಾರ್ಥ) ತಿನ್ನುತ್ತಾ ಬೆಳಕು ಹರಿಯುವುದನ್ನು ಕಾಯುತ್ತಿರುವಾಗ ಶಿವು ಮಾಡಿದ ಘೋರ ಅಪರಾಧ ಎಂದರೆ ಅಲ್ಲಿನ ಬೀದಿನಾಯಿಗಳಿಗೆ ತಿನ್ನಲು ಬೋಟಿ ಹಾಕಿದ್ದು.

ದಿನ 1: 19 ಜನವರಿ 2009

ಕಬ್ಬಿನಾಲೆ ಕಾಡನ್ನು ಪ್ರವೇಶಿಸುವ ಮುನ್ನ ದೊರೆತ ಹಲವು ಮಂದಿಯ ಬಾಯಲ್ಲಿ ಕೇಳಿದ ಮಾತುಗಳೆಲ್ಲ ಕಳೆದ ತಿಂಗಳು ಬಂದು ಪ್ರಾಣ ಕಳೆದುಕೊಂಡ ಬೆಂಗಳೂರು ಹುಡುಗರ ಬಗ್ಗೆಯೇ. ಆದರೂ ಯಾವುದೇ ಅನುಮಾನಗಳಿಗೆ ಎಡೆ ಮಾಡಿ ಕೊಡದೆ ಕಬ್ಬಿನಾಲೆಯ ಮೊದಲ ಝರಿ ದಾಟುವಾಗ ನಾಯಿ ಕೂಡ ನಮ್ಮ ಜೊತೆ ಪ್ರಯಾಣ ಆರಂಭಿಸಿತ್ತು. ಅಲ್ಲೇ ಹೊಳೆಯ ಪಕ್ಕ ವಿರಾಮ ತೆಗೆದುಕೊಂಡು ತಿಂಡಿ ತಿನ್ನುತ್ತಿರುವಾಗ ಯಾರದೋ ದ್ವನಿ ಕೇಳಿಸಿತು. 4 ಜನ ಚಾರಣಿಗರು ಅದೇ ದಾರಿಯಲ್ಲಿ ನಮ್ಮಂತೆಯೇ ಮ್ಯಾಪ್ ಮತ್ತು ದಿಕ್ಸೂಚಿ ಹಿಡಿದು ಒಂಬತ್ತು ಗುಡ್ಡಕ್ಕೆ ಹೊರಟಿದ್ದರು. ಪರಸ್ಪರ ಪರಿಚಯ ಮಾಡಿಕೊಂಡು ಜೊತೆಯಲ್ಲಿ ಹೊರಟೆವು.

direc2
map1-1

ಅವರು ವೆಂಕಿ, ಅಭಿ, ಜಗ್ಗಾ ಮತ್ತು ಪ್ರಶಾಂತ್. ಎಲ್ಲರಿಗೂ ಅದು ಮೊದಲನೆಯ ಚಾರಣ. ಬ್ಲಾಗ್ ಓದಿಕೊಂಡು ಒಬ್ಬೊಬ್ಬರು 40 ಕಿಲೋ ಬ್ಯಾಗ್ ಹೊತ್ತುಕೊಂಡು, ಅದರಲ್ಲಿ ಮಿನರಲ್ ವಾಟರ್ ಬಾಟಲ್ ಗಳನ್ನು ತುಂಬಿಕೊಂಡು ಬಂದಿರುವುದನ್ನು ನೋಡಿ ನಮಗೆ ನಗು ಬಂದರೂ ತೋರಿಸಿಕೊಳ್ಳಲಿಲ್ಲ. ಹೀಗೆ ನಡೆಯುತ್ತಾ ಮುಂದೆ ಸಾಗಿದಾಗ ಮೊದಲು ಕಾಣಿಸಿದ್ದು ಕಾಳಿಂಗ ಸರ್ಪ. 

ವಿಚಲಿತಗೊಳ್ಳದೆ ಕೆಂಪು ಹೊಳೆಯ ಮೂಲ ಹುಡುಕುತ್ತಾ ಸಾಗಿದಾಗ ನಡು ನಡುವೆ ಹಸಿವಾದಾಗ ತಂದ ತಿಂಡಿಗಳನ್ನು ತಿನ್ನುತ್ತಾ… ನಮ್ಮ ಮತ್ತು ಅವರ ಮ್ಯಾಪ್ ರೀಡಿಂಗ್ ಗಳನ್ನು ಟ್ಯಾಲೀ ಮಾಡುತ್ತಾ ನಡೆದು ಸಂಜೆಯಾಗಿದ್ದು ಗೊತ್ತೇ ಆಗಲಿಲ್ಲ. ನಮ್ಮ ಕೀ ಚೈನ್ ದಿಕ್ಸೂಚಿಯಂತೂ ಕೆಲವೊಮ್ಮೆ ನಾರ್ತ್ ಡೈರೆಕ್ಶನ್ ಗುಂಡ್ಯ ಕಡೆಗೆ ತೋರಿಸುತ್ತಿತ್ತು. ಇವರು ಕಂಪಾಸ್ ತರದಿದ್ದರೆ ನಮಗೆ ದೇವರೇ ಗತಿ ಆಗಿದ್ದ ಅಂದುಕೊಂಡೆವು.

sunrays4

ಹಳ್ಳ ಕೊಳ್ಳಗಳನ್ನು ದಾಟುತ್ತಾ, ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ನೀರಿನ ಮಧ್ಯದಲ್ಲೇ ಸಾಗುತ್ತಾ, ಆಗಾಗ ನೀರು ಕುಡಿಯುತ್ತಾ ಸಾಗಿದ್ದರಿಂದ ಅಷ್ಟು ಆಯಾಸ ಎನಿಸಲಿಲ್ಲ. 

ಸಂಜೆ 5.45ರ ಹೊತ್ತಿಗೆ ಕೆಂಪುಹೊಳೆ ಕವಲೊಡೆದು ಕೂಡಿತ್ತು. ಯಾವ ಕಡೆಗೆ ಹೋಗುವುದು ಎಂದು ತಿಳಿಯದೆ, ಎಲ್ಲ ಲಗೇಜ್ ಗಳನ್ನು ಅಲ್ಲೇ ಇಟ್ಟು, ಎಲ್ಲರನ್ನೂ ಅಲ್ಲಿಯೇ ಇರಲು ಹೇಳಿ, ನಾನು ಮತ್ತು ವತ್ಸ ಬಲಬದಿಯ ಕವಲೆಡೆಗೆ ಹೋಗಿ ದಾರಿ ಹುಡುಕಿಕೊಂಡು ಬರುತ್ತೇವೆ ಎಂದು ಹೇಳಿ ಹೊರಟೆವು. ಸ್ವಲ್ಪ ದೂರ ಹೋಗಿ ಅಲ್ಲಿ ದಾರಿಯೇ ಇಲ್ಲ ಎಂದು ಹಿಂದಿರುಗಿ ಬಂದು ರಾತ್ರಿ ಅಲ್ಲೇ ಉಳಿದುಕೊಳ್ಳೋಣ ಎಂದು ನಿರ್ಧರಿಸಿದೆವು.

6
sitting5
7
8

ದಾರಿ ತಪ್ಪಿದ ಭಾವ

ನಾವು ದಾರಿ ಕಳೆದುಕೊಂಡಿದ್ದೇವೆ ಅನ್ನಿಸಲು ಶುರುವಾಯಿತು. ಆ ಕಲ್ಲಿನ ಸುತ್ತ ನೀರು. ಕಲ್ಲಿನ ಮೇಲೆ 3 ಟೆಂಟ್ ಗಳು. ಪಕ್ಕದಲ್ಲಿ ಕ್ಯಾಂಪ್ ಫೈರ್. ಚಪಾತಿ ಮತ್ತು ಚಟ್ನೀ ಪುಡಿ. ಅಂದು ಮಾಡಿ ತಿಂದ ಮ್ಯಾಗಿ ಇಂದಿಗೂ ಬಾಯಲ್ಲಿ ನೀರು ತರಿಸುತ್ತದೆ. 

ಚೆನ್ನಾಗಿ ತಿಂದು ಸೆಂಟ್ರಿ ಸಿಸ್ಟಮ್ ಅಂದರೆ ನಮ್ಮಲ್ಲಿ ಇರುವುದು 1 ಟೆಂಟ್ನಲ್ಲಿ ಮೂರು ಜನ ಮಾತ್ರ ಮಲಗಲು ಸಾಧ್ಯ. 3 ಜನ ಮಲಗುವುದು ಇನ್ನೂ ಮೂರು ಜನ ಬೆಂಕಿಯ ಹತ್ತಿರ ಕುಳಿತು ಪಹರೆ ಕಾಯುವುದು ಎಂದು ನಿರ್ಧರಿಸಿ 3-3 ಘಂಟೆಯ ಅವಧಿ ನಿಶ್ಚಯಿಸಿದೆವು. ಅವರು ಮಾತ್ರ 2 ಟೆಂಟಲ್ಲಿ 4 ಜನ ಮಲಗಿ ನಿದ್ರೆಗೆ ಜಾರಿದ್ದರು. ನಾವು ದಾರಿ ತಪ್ಪಿದ್ದೆವು, ನಾಳಿನ ಬಗ್ಗೆ ಚಿಂತೆಯಿರಲಿಲ್ಲ. ದಟ್ಟ ಕಾಡು, ಕತ್ತಲು, ಬೆಂಕಿ, 10 ಜನ ಜೊತೆಗೆ ನಾಯಿ, ಉಳಿದ ಕೆಲವು ಆಹಾರ.

ದಿನ 2 ಜನವರಿ 25 2009

ಮರುದಿನ ಬೆಳಿಗ್ಗೆ ಎದ್ದು ಹೊರಟಾಗ ಸಮಯ 7 ಘಂಟೆ. ಎಡ ಬದಿಯ ಕವಲು ಹಿಡಿದು ಹೊರಟೆವು. ಕೇವಲ 1 ಘಂಟೆಯ ಅವಧಿಗೆ ನಮ್ಮ ಎಲ್ಲಾ ನೀರಿನ ಬಾಟಲಿಗಳು ಖಾಲಿ ಆಗಿದ್ದವು. ನಮ್ಮ ಮುಂದಿನ ಗುರಿ ನೀರು ಹುಡುಕುವುದಾಗಿತ್ತು. ಅದೇ ಉತ್ತರ ದಿಕ್ಕಿನೆಡೆಗೆ ಕಂಡ ಕಂಡ ಗುಡ್ಡಗಳಲ್ಲಿ ದಾರಿ ಮಾಡಿಕೊಂಡು ಹತ್ತಿ ಇಳಿದು ನೀರಿಗಾಗಿ ಹಾತೊರೆಯುತ್ತಿದ್ದಾಗ ನಮ್ಮ ಹೃದಯ ಬಡಿತ, ಕಂಪನದ ಅನುಭವವಾಗುತ್ತಿತ್ತು. ಪ್ರತಿ 20-25 ಹೆಜ್ಜೆಗಳಿಗೆ ವಿರಾಮ ತೆಗೆದುಕೊಂಡು ನಡೆಯುತ್ತಿದ್ದೆವು. ಅದು ಕೊನೆಗೆ 10-15 ಹೆಜ್ಜೆಗಳಿಗಾಯಿತು. ಒಂದು ಗುಡ್ಡ ಇಳಿದು ಇನ್ನೊಂದು ಹತ್ತಿದಾಗ ದೂರದಲ್ಲಿ ನಾವು ಕುಳಿತುಕೊಂಡು, ಜಾರಿಕೊಂಡು ಬಂದ ಹುಲ್ಲುಗಳು, ಕಾಲುದಾರಿಯಂತೆ ಗೋಚರಿಸುತ್ತಿತ್ತು. ಮತ್ತೆ ಮತ್ತೆ ತಿರುಗಿ ಅಲ್ಲಿಗೆ ಬಂದು ಚಕ್ರವ್ಯೂಹ ದಲ್ಲಿ ಸಿಲುಕಿಕೊಂಡಿದ್ದೇವಾ? ಎಂಬ ಭಯವಾಯಿತು. ಅವುಗಳು ಎಂದು ಮುಗಿಯದ ಪಶ್ಚಿಮ ಘಟ್ಟಗಳು. ಟ್ರೆಕಿಂಗ್ ನ ಅಸಲಿ ಥ್ರಿಲ್ ಈಗ ಶುರುವಾಗಿತ್ತು.

9
10

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button