ನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುಸೂಪರ್ ಗ್ಯಾಂಗು

ಭಾಗ 2 – ದಟ್ಟ ಕಾಡಲ್ಲಿ ದಾರಿ ತಪ್ಪಿದ್ದ ವೇಳೆಯಲ್ಲಿ ಗೆಳೆಯನಿಗೆ ಹಾವು ಕಚ್ಚಿತು: ವಿಶ್ವಜಿತ್ ನಾಯಕ್ ಬರೆದ ಒಂಭತ್ತು ಗುಡ್ಡದ ರೋಚಕ ಕತೆ

ಭಾಗ 2

ಟ್ರೆಕ್ಕಿಂಗ್ ಎಂದರೆ ಪ್ರೀತಿ. ರೈಡಿಂಗ್ ಅಂದ್ರೆ ಪ್ರಾಣ. ಹಸಿರು ಬಯಲನ್ನೂ ದಟ್ಟ ಕಾಡನ್ನೂ ನೀಲಿ ಸಮುದ್ರವನ್ನೂ ಅತಿಯಾಗಿ ಇಷ್ಟಪಡುವ ಉತ್ತರ ಕನ್ನಡದ ಹುಡುಗ ವಿಶ್ವಜಿತ್ ನಾಯಕ್. ಐಟಿಯಲ್ಲಿ ಕೆಲಸ. ಅಕ್ಷರಗಳೆಂದರೆ ಖುಷಿ. ಆಗಾಗ ಬರೆಯುತ್ತಾರೆ. ಭಾಷೆ ಒಲಿದಿದೆ. ನೀವು ಇವರನ್ನು ಓದುವುದಷ್ಟೇ ಬಾಕಿ ಇದೆ.    

ಅದು ಸರಿಯಾಗಿ 12 ಘಂಟೆ ಮಧ್ಯಾಹ್ನ. 4 ಘಂಟೆಗಳಿಂದ ತೊಟ್ಟು ನೀರಿಗಾಗಿ ಅಲೆದಾಡುತ್ತಿರುವಾಗ ಎಲ್ಲೋ ಕೆಳಗಡೆ ಝರಿಯ ನಾದ. ನೀರಿನ ಶಬ್ದಕ್ಕೆ ಅರ್ಧ ದಣಿವು, ಬಾಯಾರಿಕೆ ಕಡಿಮೆಯಾಗಿತ್ತು. ಆಳವಾದ ಪ್ರಪಾತ. ಕಾಡು ಗತ್ತಲು. ಆ ಭಯಾನಕ ಸನ್ನಿವೇಶ ನೆನೆಸಿಕೊಂಡರೆ ಕೆಲವೊಮ್ಮೆ ಈಗಲೂ ಮೈ ಬೆವರುತ್ತದೆ. ಬೇರೆ ದಾರಿ ಇರಲಿಲ್ಲ. ನೀರಿಗಾಗಿ ದಾರಿ ಮಾಡಿಕೊಂಡು ಆ ಕಣಿವೆಯೊಳಗೆ ಇಳಿಯಲೇಬೇಕಾಯಿತು. ಯಾವ ದಿಕ್ಕು ಎಂದು ನೋಡುವ ಸಹನೆ ಯಾರಿಗೂ ಇರಲಿಲ್ಲ.

ಜಾರಿಕೊಂಡು, ಗಿಡ ಗಂಟಿಗಳ ಮೇಲೆ ಬಿದ್ದು, ತೆವಳಿಕೊಂಡು, ನಿಧಾನವಾಗಿ ಒಬ್ಬರ ಹಿಂದೆ ಒಬ್ಬರಂತೆ ಇಳಿಯ ತೊಡಗಿದೆವು. ಕೊನೆಗೂ 20 ನಿಮಿಷಗಳ ಸಾಹಸದ ಬಳಿಕ ಜಾರಿಯನ್ನು ತಲುಪಿದಾಗ ನೀರನ್ನು ನೋಡಿ, ಏನೋ ಅಮೃತ ದೊರೆತ ಅನುಭವ. 

ಇನ್ನೇನು ನೀರು ಕುಡಿಯ ಬೇಕು ಅನ್ನುವಷ್ಟರಲ್ಲಿ ಸರದಿಯ ಕೊನೆಗೆ ಬರುತ್ತಿದ್ದ ಜಗದೀಶ, “ಮಗಾ.. ತಲೆಗೆ ಏನೋ ಕಚ್ಚಿದಂತಾಯಿತು. ಆ ಮರದಲ್ಲಿ ನೋಡಿಕೊಂಡು ಬನ್ರೋ..” ಎಂದ. ವೆಂಕಟೇಶ ಎದ್ದು ಹೋಗಿ “ಮಗಾ..!! ಹಾವು ಕಣೋ” ಎಂದ. ಅಷ್ಟರಲ್ಲೇ ನಮ್ಮೆಲ್ಲರ ಜೀವ ಬಾಯಿಗೆ ಬಂದಿತ್ತು. ನಾವೆಲ್ಲರೂ ಜಾರಿಕೊಂಡು ಬಂದರೆ ಜಗದೀಶ ಮಾತ್ರ ಕೊನೆಯಲ್ಲಿ, ಖುಷಿಗೆ ಎದ್ದು ನಿಂತು ಬರುತ್ತಿದ್ದ. ಅದೇ ದೊಡ್ಡ ತಪ್ಪಾಗಿತ್ತು.

snake

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಆ ಕ್ಷಣದಲ್ಲಿ ಮೆದುಳು ಖಾಲಿ ಹಾಳೆ. ತಿನ್ನಲು ಊಟವಿಲ್ಲ. ಮುಂದಿನ ದಾರಿಯಿಲ್ಲ. ಎಲ್ಲೋ ಕಳೆದು ಹೋಗಿ ದಾರಿ ಹುಡುಕುವುದೇ ಒಂದು ಸಾಹಸವಾಗಿರುವಾಗ ಈ ದೇಹ ಹೊತ್ತು ಎಲ್ಲಿ ಅಲೆಯುವುದು? ಎಲ್ಲರೂ ಚಿಂತಾಕ್ರಾಂತವಾಗಿ ಕುಳಿತಿದ್ದೆವು. 

ಹಾಳಾದ್ದು ನೆಟ್‌ವರ್ಕ್ ಹುಡುಕಿದರೂ ಸಿಗಲಿಲ್ಲ. ಜಗದೀಶ ಮಾತ್ರ “ನಾನು ಸಾಯುತ್ತಿದ್ದೆನಮ್ಮ ಮನೆಯವ್ರಿಗೆ ಹೇಳಿಬಿಡಿ” ಎಂದು ಸಾರಿ ಸಾರಿ ಗುನುಗುವಾಗ ನಮಗೇ ಜೀವ ಹೋದ ಹಾಗೆ. ಸೂರ್ಯ ನೆತ್ತಿಯ ಮೇಲೆ ರಾರಾಜಿಸುತ್ತಿದ್ದ. ಸಂಜೆಯ ಹೊತ್ತಿಗೆ ಯಾವುದಾದರೂ ಜಾಗ ಸೇರಬೇಕು. ಉಪವಾಸ ಮಲಗಿದರೆ ಕಷ್ಟ ಎಂದು, ಅವನಿಗೆ ಏನೂ ಆಗದು ಎಂದು ಧೈರ್ಯ ತುಂಬಿ, ಅವನ ಬ್ಯಾಗ್ ಖಾಲಿ ಮಾಡಿ, ಯಾವುದೋ ಬಿದಿರಿಗೆ ಅವನನ್ನು ವನ್ಯ ಮೃಗದಂತೆ ನೇತು ಹಾಕಿಕೊಂಡು ಹೋಗುವಾಗ ಎಲ್ಲಿಗೆ ಹೊರಟಿದ್ದೇವೆ ಎಂದು ಗೊತ್ತಿರಲಿಲ್ಲ.

ಹಾಸ್ಯ ಪ್ರಜ್ಞೆಯೋ.. ಏನೋ ತಿಳಿಯದು. ಅಂದು ನಾನು ಹೇಳಿದ ಒಂದು ಅನಾವಶ್ಯಕವಾದ ಮಾತು, ಆ ಕಠಿಣ ಪರಿಸ್ತಿತಿಯಲ್ಲೂ ಎಲ್ಲರೂ ನಗುವಂತೆ ಮಾಡಿತ್ತು.

“ಹೋಗ್ಲಿ ಬಿಡು ಮಗಾ… ಅದಕ್ಕೂ ಕೂಡ ಲೈಫ್ ಅಲ್ಲಿ ಇದು ಮೊದಲನೆಯ ಎಕ್ಸ್‌ಪೀರಿಯೆನ್ಸ್…”

11

ಎಲ್ಲಿ ಹೋಗ್ತಿದೀವಿ ಅಂತಲೇ ಗೊತ್ತಿಲ್ಲ

ನಾವು ಹಾಗೆಯೇ ನಡೆಯತೊಡಗಿದೆವು. ಯಾವುದೋ ಎಂದು ಮುಗಿಯದ ಕಾಲ್ಪನಿಕ ಮರುಭೂಮಿಯಂತಹ ಕಾಡಿನಲ್ಲಿ ಕಳೆದು ಹೋದ ಅನುಭವ. ಮತ್ತೆ ಮನೆ ಸೇರಿದರೆ ಸಾಕು. ಇನ್ನು ಎಂದಿಗೂ ಟ್ರೆಕಿಂಗ್ ಅನ್ನೋ ಮಾತೇ ಎತ್ತಲ್ಲ ಎಂದು ದೇವರಿಗೆ ಬೇಡಿಕೊಂಡಿದ್ದೆವೋ ಏನೋ? ಆ ತರಹದ ಪರಿಸ್ಥಿತಿ. ನಮ್ಮ ಅದೃಷ್ಟವೋ.. ದುರಾದೃಷ್ಟವೋ…ಎಂಬಂತೆ ಸುಮಾರು 3 ಘಂಟೆಯ ಹೊತ್ತಿಗೆ ಅಭಿಯ ನೋಕಿಯಾ 1100 ಮೊಬೈಲ್ ನಲ್ಲಿ ಕವರೇಜ್ ಸಿಕ್ಕಿತು. 

ಪಂಜಾ ಊರಿನ ನೆಟ್‌ವರ್ಕ್ ಎಂದು ತೋರಿಸಿದಾಗ ಹೋದ ಜೀವ ಮತ್ತೆ ಬಂದಂತಾಯಿತು. ಜಗದೀಶ ಮಾತನಾಡುತ್ತಿದ್ದ. ನಾವು ಮಲಗಲು ಬಿಟ್ಟಿರಲಿಲ್ಲ.

ಅಭಿ ತಡ ಮಾಡದೆ, ಹೇಳಿದರೂ ಕೇಳದೆ 100 ಡೈಯಲ್ ಮಾಡಿ, ನಮ್ಮಲ್ಲಿ ಒಬ್ಬರಿಗೆ ಹಾವು ಕಚ್ಚಿದೆ, ಆದಷ್ಟು ಬೇಗ ರಕ್ಷಣೆಗೆ ಹೆಲಿಕಾಪ್ಟರ್ ಕಳಿಸಿ ಎಂದ. 

ಅವರು ನಾಲ್ಕು ಜನ ನಾವು ಇಲ್ಲೇ ಟೆಂಟ್ ಹಾಕುತ್ತೇವೆ. ನೀವು ಹೋಗಿ ಯಾರನ್ನಾದರೂ ಕಳಿಸಿ ಎಂದಾಗ, ನಾವು ಹೊರಟು, ಅದೃಷ್ಟಕ್ಕೆ ಸರಸ್ವತಿ ಎಸ್ಟೇಟ್ ತಲುಪಿದಾಗ ಸಂಜೆ 5 ಗಂಟೆ. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನೇ ಒಬ್ಬ ಆಳಿಗೆ ವಿಷಯ ತಿಳಿಸಿ, ಹಾವಿನ ಫೋಟೋ ತೋರಿಸಿದಾಗ ಆತ….

“ಈ ಹಾವು ಕಚ್ಚಿದರೆ ಎಂತ ಆಗುದಿಲ್ಲ ಮಾರಾಯ್ರೆ… ಮಲ್ಕೋ ಬಾರ್ದು ಅಷ್ಟೇ…” ಎಂದಾಗ

ಅದನ್ನು ಕೇಳಿ ಸ್ವಲ್ಪ ಮಟ್ಟಿಗೆ ಸಮಾಧಾನ ಆಯಿತು. ಇನ್ನೇನು ಮರಳಿ ಹೋಗಿ ಅವರನ್ನು ಕರೆದುಕೊಂಡು ಬರಬೇಕು ಅನ್ನುವಷ್ಟರಲ್ಲಿ ಅಭಿ ಮತ್ತು ಸಂಗಡಿಗರು ನಮ್ಮನ್ನು ತಲುಪಿದ್ದರು.

12

ತಡ ಮಾಡದೆ ಆ 4 ಜನರನ್ನು ಜೀಪ್ ನಲ್ಲಿ ಹೊಸಕೆರೆಗೆ ಕಳುಹಿಸಿ ನಾವು ಸೂರ್ಯಾಸ್ತ ಆಗುವ ತನಕ ಫೋಟೋ ಸೆಶನ್ ಮಾಡಿ ಇನ್ನೂ 8 ಕಿ ಮೀ ದೂರ ಇರುವ ಲಕ್ಷ್ಮಿ ಎಸ್ಟೇಟ್ ಕಡೆ ಹೊರಟೆವು. ಅಲ್ಲಿಗೆ ಹೋಗಿ ಯಾವುದಾದರೂ ಜೀಪ್ ಕರೆಸಿ ಮೂಡಿಗೆರೆ ತಲುಪಬೇಕು ಎನ್ನುವುದು ನಮ್ಮ ಗುರಿಯಾಗಿತ್ತು.ಸುಮಾರು 2-3 ಕಿ ಮೀ ನಡೆದಿರಬೇಕು ಆ ಜೀಪ್ ಟ್ರ್ಯಾಕ್ ನಲ್ಲಿ. ಯಾವುದೋ ಒಂದು ಮಾಡಿಫೈ ಮಾಡಿರೋ ಮುಂದೆ ರಾಂಗ್ಲರ್ ಎಂದು ಬರೆದುಕೊಂಡಿರುವ 4X4 ಓಪನ್ ಜೀಪ್ ಬಂತು. ನಾವು ನಿಲ್ಲಿಸಿ ಎಸ್ಟೇಟ್ ಇನ್ನೂ ಎಷ್ಟು ದೂರ ಇದೆ ಎಂದು ಸುಸ್ತಾಗಿ ಕೇಳಿದಾಗ ಆ ವಯ್ಯ “ನಿಮ್ಮನ್ನ ಕರೆದುಕೊಂಡು ಹೋಗಿರುವುದಕ್ಕೆ ಬಂದಿರುವುದು. ಇರಿ ಮುಂದೆ ಹೋಗಿ ತಿರುಗಿಸಿಕೊಂಡು ಬರುತ್ತೇನೆ” ಎಂದಾಗ ಏನೋ ಒಂದು ತರಹದ ಕುಶಿ. ಅಬ್ಬಾ ನಮ್ಮ ವೆಂಕಿ ಅಭಿ ಎಲ್ಲರೂ ನಮಗೋಸ್ಕರ ಜೀಪ್ ಕಳುಹಿಸಿದ್ದಾರೆ ಎಂದು ಮಾತನಾಡಿಕೊಂಡೆವು.

ಎಲ್ಲರೂ ಕುಣಿದು ಕುಪ್ಪಳಿಸಿ ಜ಼ೀಪ್ ಏರಿದೆವು. ಮಾತು ಶುರುಮಾಡಿದ ಆತ- “ನಾನು ವಿಕ್ರಮ ಗೌಡ. ಈ ಕಾಡಿನ ಎಲ್ಲವೂ ಗೊತ್ತಿದೆ ನನಗೆ. ಇಲ್ಲಿಗೆಲ್ಲ ಯಾಕೆ ಬರುತ್ತೀರಿ? ಕೊನೆಯ ಬಾರಿ ಬೆಂಗಳೂರಿನ  ಕಳೆದುಹೋದ ಹುಡುಗರ ಮೃತ ದೇಹಗಳನ್ನು ಹುಡುಕಿ ಕೊಟ್ಟಿದ್ದು ನಾವೇ” ಎಂದಾಗ ಏನೋ ಸರಿಯಿಲ್ಲ ಎನಿಸಿತು.

ಪೊಲೀಸರು ಕಾಯುತ್ತಿದ್ದಾರೆ

ಇದು ಅಭಿ ಮಾಡಿದ 100 ಡಯಲ್ ಪ್ರಭಾವ ಎಂದು ತಿಳಿದದ್ದು-“ನಿಮ್ಮನ್ನು 3 ಜಿಲ್ಲೆಗಳ ಪೊಲೀಸರು ಕಾಯುತ್ತಿದ್ದಾರೆ” ಎಂದಾಗಲೇ.

ಅದೇನೋ ಸ್ಪೈನಲ್ ಕಾರ್ಡ್ ಅಂತಾರಲ್ಲ… ಒಂಥರಾ ಕರೆಂಟ್ ಪಾಸ್ ಆದಂತಾಯಿತು. ಯಾರೂ ಏನೂ ಮಾತನಾಡಲಿಲ್ಲ.

11 ನಿಮಿಷಗಳ ಸವಾರಿಯ ನಂತರ ಎಸ್ಟೇಟ್ ತಲುಪಿದಾಗ 20-25 ಪೊಲೀಸರು ನಮಗೆ ಗೌರವ ಸಲ್ಲಿಸಲು ಸಜ್ಜಾಗಿದ್ದರು. ಮುಂದೆ ನಡೆದದ್ದು ಇತಿಹಾಸ. ನನಗನ್ನಿಸುವ ಹಾಗೆ ನಮಗೆ ಯಾರಿಗೂ ಸರಿಯಾಗಿ ನೆನಪು ಇರ್ಲಿಕ್ಕಿಲ್ಲ. ಆದರೂ ಅವರು ಹೇಳಿದ ಕೆಲವು ಮಾತುಗಳು ಇಲ್ಲಿವೆ.

-ಇದು ಸಂರಕ್ಷಿತ ಅರಣ್ಯ. ಪರ್ಮಿಶನ್ ಲೆಟರ್ ಯಾರು ಕೊಟ್ಟಿದ್ದು ನಿಮಗೆ?

– ಆಕ್ಟಿವ್ ನಕ್ಸಲ್ ಬೆಲ್ಟ್ ಇದು.

-ಅಪ್ಪ ಅಮ್ಮ ನಿಮ್ಮನ್ನ ಇದಕ್ಕೇನಾ ಓದಕ್ಕೆ ಕಳ್ಸೋದು?

-ಎನ್‌ಕೌಂಟರ್ ಮಾಡಿ ಬಿಸಾಕಿ ಇವ್ರನ್ನ..

– ಎಲ್ಲರೂ ನಿಮ್ಮ ವಿಳಾಸ ಹಾಗೂ ಫೋನ್ ನಂಬರ್ ಬರೆಯಿರಿ ಇದರಲ್ಲಿ.

ನಮ್ಮ ಶಿವು ಗೆ ಇದನ್ನೆಲ್ಲ ಕೇಳಿ ನಗು ತಡೆಯಲಾಗದೆ ನಕ್ಕು ಬಿಟ್ಟ. ಇನ್ನೊಂದು ರೌಂಡ್ ಮತ್ತೆ…

ಅದಕ್ಕಿಂತ ಮಿಗಿಲಾಗಿ ಊರಲ್ಲೆಲ್ಲ ಹಬ್ಬಿದ ಸುದ್ದಿಯೆಂದರೆ- ಬೆಂಗಳೂರಿನಿಂದ ಬಂದ ಹುಡುಗರು ಕಾಡಿನಲ್ಲಿ ಯಾವುದೋ ಹುಡುಗಿಯ ರೇಪ್ ಮಾಡಿ ತಲೆತಪ್ಪಿಸಿಕೊಂಡಿದ್ದಾರೆ ಎಂದು. ಅದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತ್ತು. ನಮ್ಮ ಸ್ವಾಗತ ಮಾಡಲು ಹಳ್ಳಿಯ ಜನರೆಲ್ಲ ಬೇರೆ ಸೇರಿದ್ದರು. ಏನೋ ಯಕ್ಷಪ್ರಶ್ನೆಯೇ ಉತ್ತರವಾದಂತೆ.

ಸರಿ.. ಆಗಿದ್ದು ಆಯಿತು. ಮೂಡಿಗೆರೆ ಸೇರಿಕೊಳ್ಳೋಣ ಎಂದು ಜ಼ೀಪ್ ಡ್ರೈವರ್ ಗೆ ಕಾಲ್ ಮಾಡಿದರೆ ಆನೆ ಕಾಟ ಈಗ ಬರಕ್ಕೆ ಆಗಲ್ಲ. ನಾಳೆ ಬೆಳಿಗ್ಗೆ ಬರುತ್ತೇನೆ ಎಂದ. ಅಷ್ಟರಲ್ಲಿ ಆ ಎಸ್ಟೇಟ್ ನ ಸೂಪರ್ ವೈಸರ್ ಶಾಂತರಾಜು ಇವತ್ತು ನಮ್ಮ ರೂಮ್ ನಲ್ಲಿ ಇದ್ದು ಬೆಳಿಗ್ಗೆ ಹೋಗಿ ಎಂದಾಗ ಒಪ್ಪಿಕೊಳ್ಳುವುದು ಅನಿವಾರ್ಯಕ್ಕಿಂತ ಇಷ್ಟವಾಗಿತ್ತು. 

ಇದ್ದ ಸಾಮಾನುಗಳಲ್ಲಿಯೇ ಚಿತ್ರಾನ್ನ ಮಾಡಿ ಬಡಿಸಿದ ಶಾಂತರಾಜು ಆತ್ಮೀಯನಾಗಿಬಿಟ್ಟಿದ್ದ. ಹಂಡೆ ನೀರಿನ ಸ್ನಾನ, ಎರಡು ದಿನಗಳ ನಂತರ ತಿಂದ ಅನ್ನ, ಆ ನಿದ್ದೆ ನೆನೆಸಿಕೊಂಡಾಗಲೆಲ್ಲಾ ಏನೋ ಖುಷಿಯಾಗತ್ತೆ. ಬೆಳಿಗ್ಗೆ ಎದ್ದು ಶಾಂತರಾಜು ಜೊತೆಗೆ ಫೋಟೋ ತೆಗೆಸಿಕೊಂಡು, 2 ಕಿ ಮೀ ನಡೆದು ಮೂಡಿಗೆರೆಯ ಬಸ್ ಹಿಡಿದಾಗ.. ಜನರೆಲ್ಲ ನಾವೇ ನಕ್ಸಲ್ ಕಡೆಯವರು ಎಂಬಂತೆ ನೋಡುತ್ತಿದ್ದರು. ಮತ್ತೆ ಬಸ್ ನಲ್ಲಿ ಜನರದ್ದು ಹುಡುಗಿಯ ರೇಪ್ ಬಗ್ಗೆಯೇ ಮಾತುಕತೆ.

13

ಕೊನೆಗೂ ನಾವು ಮೂಡಿಗೆರೆ ಯಲ್ಲಿ ಆ 4 ಜನರನ್ನು ಭೇಟಿಯಾಗಿ ಬದುಕಿ ಬೆಂಗಳೂರು ತಲುಪಿದೆವು. ಜಗದೀಶ ಖುಶಿಯಾಗಿದ್ದ.

ಇದೊಂದು ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವ. ಆ ಚಾರಣದ ಕೊನೆಯಲ್ಲಿ ನಾವು ಹವ್ಯಾಸಿ ಚಾರಣಿಗರು ಎಂದು ಗರ್ವ ಪಡುವಂತಾಗಿತ್ತು. ಈ ಸನ್ನಿವೇಶವೇ ನಮ್ಮೊಳಗಿರುವ  ಕಾಡ್ ಬಾಯ್ಸ್ ನ ಕಂಡುಕೊಳ್ಳಲು ನೆರವಾಗಿತ್ತು. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button