ಇವರ ದಾರಿಯೇ ಡಿಫರೆಂಟುಏಕಾಂಗಿ ಸಂಚಾರಿವಿಂಗಡಿಸದಸ್ಫೂರ್ತಿ ಗಾಥೆ

ದೋಣಿ ಮಗುಚಿ ಗಂಗೆಗೆ ಬಿದ್ದೆ: ಮನಸ್ವಿನಿ ಹೊಸ್ಕೆರೆ ಬರೆದ ರಿಷಿಕೇಶದ ಸೋಲೋ ಟ್ರಾವೆಲ್ ಅನುಭವ

ಊರು ದಕ್ಷಿಣ ಕನ್ನಡ. ಬೆಂಗಳೂರು ಕರ್ಮಭೂಮಿ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕಂಟೆಂಟ್ ರೈಟರ್. ಪುರ್ಸೊತ್ತಾದಾಗಲೆಲ್ಲಾ ಊರು ಸುತ್ತೋದು ಇಷ್ಟ. ಬೈಕ್ ರೈಡಿಂಗ್ ಅಂದ್ರೆ ಖುಷಿ. ಪ್ರಕೃತಿಯನ್ನು ಪ್ರೀತಿಸುವ, ಅಲೆಮಾರಿತನವನ್ನು ಜೀವನದ ಭಾಗವಾಗಿಸಿಕೊಂಡಿರುವ ಹುಮ್ಮಸ್ಸಿನ ಹುಡುಗಿ ಮನಸ್ವಿನಿ ಹೊಸ್ಕೆರೆ.

ನನಗಿಷ್ಟವಾದ ಪ್ರವಾಸ ಎಂದ ಕೂಡಲೇ ಕಣ್ಮುಂದೆ ಬರುವುದು ಪ್ರಶಾಂತವಾದ ಗಂಗಾ ನದಿಯ ತಟದಲ್ಲಿ ಕಳೆದ ಆ ಸಂಜೆ. 

ರಿಷಿಕೇಶಕ್ಕೆ ಪಯಣಿಸಬೇಕೆಂಬ ನನ್ನ ಆಸೆ ಹಲವು ವರ್ಷಗಳ ನಂತರ ಈಡೇರಿತ್ತು. ನನ್ನ 15 ದಿನಗಳ ಹಿಮಾಲಯದ ಟ್ರೆಕ್ಕಿನ ನಂತರ ಡೆಹ್ರಾಡೂನ್‌ಗೆ ಹಿಂತಿರುಗಿ ಸುಮ್ಮನೇ ಕಳೆಯಲು 4 ದಿನ ಮೀಸಲಿರಿಸಿದ್ದೆ. ಅದರಲ್ಲಿ 1 ದಿನ ಆಗಲೇ ಕಳೆದಿತ್ತು. ಹಿಮಾಲಯದ ತಪ್ಪಲಿನ ಮತ್ತು ಉತ್ತರಾಖಂಡದ ಅಜಗಜಾಂತರದ ಹವೆಯ ವೈಪರೀತ್ಯಕ್ಕೆ ಒಗ್ಗಿಕೊಳ್ಳಲಾಗದೆ ಕೆಮ್ಮುತ್ತಿದ್ದ ನನ್ನನ್ನು ಉಪಚರಿಸುತ್ತಿದ್ದ ಗೆಸ್ಟ್ ಹೌಸ್‌ನ ಆಪತ್ಭಾಂಧವರು ಬಹಳವೇ ಆಪ್ತರಾಗಿದ್ದರು.

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಒಂಟಿ ಪ್ರವಾಸ ನನಗೇನೂ ಹೊಸದಲ್ಲವಾದರೂ ರಿಷಿಕೇಶ ಹಲವು ರೀತಿಯಲ್ಲಿ ವಿಶಿಷ್ಟವಾಗಿತ್ತು.

ಡೆಹ್ರಾಡೂನಿನಲ್ಲಿ ನಾನುಳಿದುಕೊಂಡಿದ್ದ ಗೆಸ್ಟ್ ಹೌಸಿನ ಆಂಟಿ ‘ಅಕೇಲೇ ವಹ ಮತ್ ಜಾವೊ, ಬಹುತ್ ಬಿಗಡ್ ಗಯಾ ಹೆ ರಿಷೀಕೇಶ್’. (ಒಬ್ಬಳೇ ಅಲ್ಲಿಗೆ ಹೋಗಬೇಡ, ಕಾಲ ಬಹಳ ಕೆಟ್ಟಿದೆ) ಎಂದಾಗ ‘ಇಲ್ಲ ಹೆದರಬೇಡಿ’ ಎನ್ನುತ್ತ ಕ್ಯಾಬ್ ಬುಕ್ ಮಾಡಿದ್ದೆ. ಹೋಗಲು, ಬರಲು ಮತ್ತು ಅಲ್ಲಿ ನಿಲ್ಲಿಸಲು ಒಂದು ದಿನದ ಅವಧಿಗೆ ಚಾಲಕ ಹೇಳಿದ್ದು 8 ಸಾವಿರ ರುಪಾಯಿ. ಒಂಟಿ ಪ್ರವಾಸ ಎಷ್ಟೇ ಮಜವೆನಿಸಿದರೂ ಕೆಲವೊಮ್ಮೆ ಜೇಬಿಗೆ ಭಾರಿಯಾಗುವುದಿದೆ.

ಅದನ್ನೇ ಯೋಚಿಸುತ್ತ, ಒಂದು ದಿನಕ್ಕೆ ಬ್ಯಾಕ್ ಪ್ಯಾಕ್ ತೆಗೆದಿರಿಸಿ, ಮಲಗಲು ಹೊರಟವಳಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಅಡುಗೆ ಮನೆಯಲ್ಲಿ ಕಾರ್ನ್ ಫ್ಲೇಕ್ಸನ್ನಾದರೂ ತಿನ್ನೋಣವೆಂದು ಹೋದೆ. ನನ್ನ ಪಕ್ಕದ ರೂಮಿನಲ್ಲಿ ಬಹಳ ದಿವಸದಿಂದ ತಂಗಿದ್ದ ಪೋಲಾಂಡ್‌ನ ಯುವತಿ ಕ್ಯಾರೊಲೀನ ಮಾತಿಗೆ ಸಿಕ್ಕಳು. ನಾನು ಆಗಷ್ಟೇ ೧೫ ದಿನಗಳ ಸೋಲೋ ಹಿಮಾಲಯದ ಟ್ರೆಕ್ ಮುಗಿಸಿ ಹಿಂತಿರುಗಿದ್ದನ್ನು ತಿಳಿದಿದ್ದ ಅವಳು ‘ಇನ್ನೂ ಕರ್ನಾಟಕಕ್ಕೆ ಹಿಂತಿರುಗಿಲ್ಲವೇ’ ಎಂದು ಹರುಕು ಮುರುಕು ಇಂಗ್ಲಿಷಿನಲ್ಲಿ ಕೇಳಿದಾಗ ಮರುದಿನದ ರಿಷಿಕೇಶದ ಪ್ಲಾನ್ ಬಗ್ಗೆ ಹೇಳಿದೆ. 

‘ಟಿಬೆಟ್ ಭಾಷೆಯ ಅಭ್ಯಾಸಕ್ಕಾಗಿ 1 ವರ್ಷದಿಂದ ಡೆಹ್ರಾಡೂನಿನಲ್ಲಿದ್ದರೂ ನಾನಿನ್ನೂ ರಿಷೀಕೇಶ್ ನೋಡಿಲ್ಲ, ನಿನಗಭ್ಯಂತರವಿಲ್ಲವಾದರೆ ನಾನೂ ಜೊತೆಗೆ ಬರಬಹುದೆ?’ ಎಂದು ಮೆಲ್ಲಗೆ ಕೇಳಿದಳು. ನನ್ನ ಬುದ್ಧಿ ತಕ್ಷಣ ಕ್ಯಾಬ್ ಚಾರ್ಜಿನ ಅರ್ಧ ಅವಳು ಭರಿಸುವಳು ಎಂದು ನೆನಪಿಸಿತು. ‘ಆಯಿತು, ಬಾ, ನನಗೆ ಜೊತೆಯಿದ್ದರೆ ಖಂಡಿತ ಸಂತೋಷ’ ಎಂದೆ. ಖುಷಿಯಿಂದ ಬ್ಯಾಗ್ ಪ್ಯಾಕ್ ಮಾಡಲು ತೆರಳಿದಳು. ನನಗೂ ಚೆನ್ನಾಗಿ ನಿದ್ದೆ ಹತ್ತಿತು.

ಬೆಳ್ಳಂಬೆಳಗ್ಗೆ ನಾವಿಬ್ಬರೂ ಯಾರನ್ನೂ ಎಬ್ಬಿಸಬಾರದೆಂದು ಸದ್ದಿಲ್ಲದೆ ಗೇಟಿನ ಕಡೆ ಹೆಜ್ಜೆ ಹಾಕಿದರೂ, ಆಗಲೇ ಎಚ್ಚರವಾಗಿದ್ದ ಆಂಟಿ ಬಿಸಿಬಿಸಿ ಶುಂಠಿ ಚಹಾ ಹಿಡಿದುಕೊಂಡು ಬಂದು ‘ಇದನ್ನು ಕುಡಿದು ಹೋಗಿ, ಅಲ್ಲಿ ಬಹಳ ಜನಸಂದಣಿ ಇರುತ್ತದೆ’ ಎಂದರು. ಜೊತೆಗೇ ನನ್ನ ಕಿವಿಯ ಬಳಿ ಬಂದು ‘ಈ ವಿದೇಶಿ ಜೊತೆ ಹುಶಾರು, ಅವರಿಗೆ ಗಾಂಜ ಕೆಫೆ ಹುಚ್ಚಿರುತ್ತದೆ. ನೀನು ಅಂಥಲ್ಲಿಗೆಲ್ಲ ಹೋಗಿ ಸಿಕ್ಕಿಕೊಳ್ಳಬೇಡ’ ಎಂದೆಚ್ಚರಿಸಿದರು. ಅಪ್ಪ ಅಮ್ಮನನ್ನು ಕಂಡು ಆಗಲೇ 20 ದಿನಗಳಾಗಿದ್ದರಿಂದ, ಯಾವ ಜನ್ಮದ ತಾಯಿಯಾಗಿ ಈಕೆ ಬಂದಿದ್ದಾರೋ ಎನ್ನಿಸಿತು. ‘ಕಾಳಜಿ ಮಾಡಬೇಡಿ, ಆಗಾಗ ಫೋನ್ ಮಾಡುತ್ತೇನೆ’ ಅಂದೆ.

4 ಘಂಟೆಗಳ ಘಾಟಿ ತಿರುವಿನ ಸಂಚಾರದ ನಂತರ ರಿಷೀಕೇಶ ಸಿಟಿ ತಲುಪಿದೆವು. ಕ್ಯಾಬ್ ಚಾಲಕ ‘ನನಗೆ ಇಲ್ಲಿಯವರೆಗೆ ಮಾತ್ರ ಅವಕಾಶ. ಇಲ್ಲಿಂದ ಲಕ್ಷ್ಮಣ್ ಝೂಲ (ತೂಗು ಸೇತುವೆ)ಗೆ ನಡೆದುಕೊಂಡು ತಲುಪಬಹುದು. ರಾತ್ರಿ ಹೊತ್ತಿಗೆ ನಾನು ರಾಮ್ ಝೂಲದ ಹೊರಗಡೆ ಪಾರ್ಕಿಂಗ್‌ನಲ್ಲಿ ಕಾಯುತ್ತಿರುತ್ತೇನೆ. ಅಲ್ಲಿಗೇ ಬಂದುಬಿಡಿ’ ಎಂದು ನಮ್ಮನ್ನಿಳಿಸಿದ.

ಮಾಯವಾದ ಕ್ಯಾರೋಲಿನ

ಸ್ವಲ್ಪ ನಡೆದ ನಂತರ ಮೊದಲು ಸಿಕ್ಕಿದ್ದೇ ಗೋವಾದ ಹವಾ ಇದ್ದ ಒಂದು ರೂಫ್ ಟಾಪ್ ಕೆಫೆ. ಅಲ್ಲಿ ಹೋಗಿ ಬ್ಯಾಗ್ ಕೆಳಗಿಟ್ಟು ಮುಖ ತೊಳೆದು, ತಿಂಡಿ ತರಲು ಹೇಳಿದೆವು. ಅಲ್ಲಿನ ಮಾಲಕ ರೋಜರ್ ನನ್ನ ಬಳಿ ಬಂದು ‘ನೀವು ಸೌಥ್ ಇಂಡಿಯಾದವರೆ? ನನಗೆ ಅಲ್ಲಿನ ತೀರ ಪ್ರದೇಶ ತುಂಬ ಇಷ್ಟ. ನಾನು ಗೋವಾದಲ್ಲಿ ಬೆಳೆದಿದ್ದು’ ಎನ್ನುತ್ತ ಮಾತಿಗಿಳಿದ. ಸ್ಯಾಂಡ್ವಿಚ್ ತಿಂದು ಕೋಲ್ಡ್ ಕಾಫಿ ಕುಡಿದು ಹೊರಡುವ ಮುನ್ನ ‘ತಪ್ಪು ತಿಳಿಯಬೇಡಿ, ನಾವಿನ್ನೂ ತುಂಬ ಸ್ಥಳಗಳನ್ನು ಸುತ್ತಬೇಕಿದೆ. ನಮ್ಮ ಬ್ಯಾಗ್ ಇಲ್ಲಿಟ್ಟು ಹೋದರೆ ನೋಡಿಕೂಳ್ಳುತ್ತೀರೆ?’ ಎಂದು ವಿನಂತಿಸಿಕೊಂಡೆ. ತಕ್ಷಣ ಸಮ್ಮತಿಸಿ, ಒಳಗೆ ಇದ್ದ ಸ್ಟೋರ್ ರೂಮಿನಲ್ಲಿ ನಮ್ಮಿಬ್ಬರ ಲಗೇಜುಗಳನ್ನೂ ಇರಿಸಿದ. ಬಿಸಿಲಿನ ಝಳ ಜೋರಾಗಿದ್ದರಿಂದ, ನಾವಿಬ್ಬರೂ ನೀರಿನ ಬಾಟಲ್, ಕ್ಯಾಪ್ ಮತ್ತು ಕ್ಯಾಮೆರ ತೆಗೆದುಕೊಂಡು ಮುಂದೆ ನಡೆದೆವು.

ಲಕ್ಷ್ಮಣ್ ಝೂಲದ ಕೆಳಗೆ ತಣ್ಣಗೆ ಹರಿಯುತ್ತಿತ್ತು ಗಂಗೆ. ಹಾಗೇ ಮುಂದೆ ನಡೆದರೆ ಶಾಪಿಂಗ್ ಮಾರ್ಕೆಟ್.

ಬಾರ್ಗೇನ್ ಮಾಡಲು ಒಂದಿಷ್ಟೂ ಬರದ ನಾನು ಎಲ್ಲ ಇಷ್ಟವಾದುದನ್ನೂ ಹಾಗೇ ಬಿಟ್ಟು ಮುನ್ನಡೆಯುತ್ತಿದ್ದೆ. ಅದನ್ನು ಗಮನಿಸಿದ ಕ್ಯಾರೋಲಿನ ನಿಮಿಷದಲ್ಲಿ ಅಂಗಡಿಯವರು ಹೇಳಿದ ದರದ ಅರ್ಧ ಬೆಲೆಗೆ ನನಗೆ ಬೇಕಾದುದನ್ನೆಲ್ಲಾ ಕೊಡಿಸುತ್ತ ಮುನ್ನಡೆದಳು. ಅದೇ ಖುಷಿಯಲ್ಲಿ ನಾನವಳಿಗೆ ಒಂದು ಹುಖಾಃ ಕೊಡಿಸಿದೆ.

ಸಂತೋಷದಿಂದ ತೇಲಾಡುತ್ತ ರಾಮ್ ಝೂಲ ತಲುಪಿದಾಗ ದಾರಿಯಲ್ಲಿ ಎದುರಾದ ಯಾರೊಂದಿಗೋ ಮಾತಿಗಿಳಿದಳು. ಅಲ್ಲಿದ್ದ 4 ಜನ ಯುವಕ ಯುವತಿಯರು ‘ಹಾಯ್’ ಎನ್ನುತ್ತ ವೇವ್ ಮಾಡಿದರು. ಅವರೆಲ್ಲರೂ ಪೋಲ್ಯಾಂಡ್‌ನವರೆಂದೂ ತಾನು ಅವರೊಂದಿಗೆ ಸಲ್ಪ ಸಮಯ ಕಳೆದು ಬರುತ್ತೇನೆಂದು ಹೇಳಿ ಕ್ಯಾರೋಲಿನ ಸಂದಿಯ ಓಣಿಯೊಳಗೆ ಮರೆಯಾದಳು. ಡೆಹ್ರಾಡೂನಿನ ಆಂಟಿಯ ಮಾತು ನೆನಪಾಗಿ ನಾನು ಮುನ್ನಡೆದೆ.

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ತೂಗು ಸೇತುವೆಯ ಸುತ್ತಮುತ್ತಲಷ್ಟೆ ರಿಷೀಕೇಶದ ನೈಜ ಜೀವನವಿರುವುದು. ಅಷ್ಟರಲ್ಲಿ ಹಲವಾರು ಗೈಡ್‌ಗಳು ನನ್ನನ್ನು ಸುತ್ತುವರೆದು ‘ರಿವರ್ ರಾಫ್ಟಿಂಗ್’ ಮಾಡಿ ಎಂದು ದುಂಬಾಲು ಬಿದ್ದರು. ಕ್ಯಾರೋಲಿನಾ ಇದ್ದಿದ್ದರೆ ಖಂಡಿತ ಅರ್ಧ ಬೆಲೆಗೆ ಇದನ್ನೂ ಕೊಡಿಸಿರುತ್ತಿದ್ದಳು ಎಂದುಕೊಳ್ಳುತ್ತ, ಅವರು ಕೇಳಿದಷ್ಟನ್ನು ತೆತ್ತು ತೆಪ್ಪ ಹತ್ತಿದೆ. ನಂತರ ನಡೆದದ್ದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ದೋಣಿ ಮಗುಚಿತು

ಅದುವರೆಗೂ ಶಾಂತಿಯೆ ಮೂರ್ತವೆತ್ತಂತಿದ್ದ ಗಂಗೆ ರೌದ್ರ ಸ್ವರೂಪ ತೋರಿಸಿದ್ದಳು. ನಮ್ಮ ತೆಪ್ಪವನ್ನು ಏರು ಪೇರಾಗಿಸುತ್ತ, ಮೈಯೆಲ್ಲ ತೋಯಿಸುತ್ತ ‘ನಾನೆಂದರೆ ಹೀಗೆ!’ ಎಂದು ಹೇಳಿದಂತಿತ್ತು. ನನ್ನ ಜೊತೆಗಿದ್ದ ಹುಡುಗರೆಲ್ಲ ಕೇಕೆ ಹೊಡೆಯುತ್ತ ಹುಟ್ಟು ಹಾಕುತ್ತಿದ್ದರೆ ನಾನು ಮಳೆಯಲ್ಲಿ ತೋಯ್ದ ಗುಬ್ಬಚ್ಚಿಯಂತೆ ಮುಂದೆ ಕಣ್ಣು ಮುಚ್ಚಿ ಕುಳಿತಿದ್ದೆ. ಅದನ್ನು ಕಂಡ ಗೈಡ್ ‘ಈಗ ನೋಡಿ ಮಜ ತೋರಿಸುತ್ತೇನೆ. ನಿಮ್ಮೆಲ್ಲರಿಗೂ ಲೈಫ್ ಜಾಕೆಟ್ ತೊಡಿಸಿದ್ದೇವೆ, ಹೆದರಬೇಡಿ’ ಎನ್ನುತ್ತ ಹುಟ್ಟು ಹಾಕುವುದನ್ನು ನಿಲ್ಲಿಸಿ ತಕ್ಷಣ ದೋಣಿಯನ್ನು ಮಗುಚಿದ. ಕಣ್ಣು ಬಿಟ್ಟ ನನಗೆ ಉಸಿರು ನಿಂತಂತಾಗಿ ಕಣ್ಣೆಲ್ಲ ಮಂಜು ಮಂಜು! ಒಂದಿಷ್ಟೂ ಈಜಲು ಬಾರದೆ ರಿವರ್ ರಾಫ್ಟಿಂಗ್ ಗೆ ಬಂದೆನಲ್ಲ ಎಂದು ನನ್ನನ್ನು ನಾನೇ ಹಳಿದುಕೊಳ್ಳುವಾಗಲೇ ಯಾರದೋ ಕಾಣದ ಕೈ ನೀರೊಳಗಿಂದ ಬಂದು ನನ್ನನ್ನು ಮೇಲೆತ್ತಿ ವಾಪಸ್ ದೋಣಿಯೊಳಗೆ ಎಸೆಯಿತು. ಕಣ್ಬಿಟ್ಟಾಗ ಕಂಡಿದ್ದು ಸುತ್ತ ಗಹಗಹಿಸಿ ನಗುತ್ತ ಕುಳಿತಿದ್ದ ನಮ್ಮ ತೆಪ್ಪದ ಪಟಾಲಮ್. 

‘ಕ್ಯಾ ಮ್ಯಾಡಮ್, ತೇರ್ನ ನಹಿ ಆತಾ? ಬಹೊತ್ ಮಜಾ ಆಯಾನಾ?’ (ಏನು ಈಜಲು ಬರುವುದಿಲ್ಲವೇ.. ತುಂಬ ಮಜ ಬಂತಲ್ಲವೇ?)’ ಎಂದು ಇನ್ನೂ ನಗುತ್ತಿದ್ದ ಅವರನ್ನು ಮತ್ತೆ ನೀರಿಗೆ ತಳ್ಳುವ ಮನಸ್ಸಾಗಿತ್ತು. ಜೀವದೊಂದಿಗೆ ಆಟವಾಡುತ್ತ ಅದನ್ನೇ ಕಾಯಕವಾಗಿಸಿಕೊಂಡಿರುವ ಅವರ ಮೇಲೆ ಗೌರವವೂ ಮೂಡಿತು.

ದಡ ತಲುಪಿದಾಗ ಸೂರ್ಯಾಸ್ತದ ಸಮಯ. ನಿಂತರೆ ಎಲ್ಲಿ ಜಗತ್ಪ್ರಸಿದ್ಧ ಗಂಗಾ ಆರತಿ ತಪ್ಪಿ ಹೋಗುವುದೋ ಎಂಬ ಚಿಂತೆಯಿಂದ ತಕ್ಷಣ ಘಂಟಾ ನಾದ ಕೇಳುತ್ತಿದ್ದ ಕಡೆ ಓಡಿದೆ.

ಆರತಿ ಹತ್ತಿರದಿಂದ ನೋಡಲು ಸರತಿ ಸಾಲು, ಜಾಸ್ತಿ ದರದ ಟಿಕೆಟ್ ಕೊಂಡು, ಪೂಜೆಯನ್ನು ಹತ್ತಿರದಿಂದ ಕಣ್ತುಂಬ ನೋಡಿದೆ. 1 ಘಂಟೆಗಳ ಕಾಲ ಅಷ್ಟು ಭಾರದ ಮಹಾ ಮಂಗಳಾರತಿಯನ್ನು ಶ್ರದ್ಧೆ ಭಕ್ತಿಯಿಂದ, ಮಂತ್ರಘೋಷಗಳೊಂದಿಗೆ ನಡೆಸುವ ಅರ್ಚಕರ ಮೇಲೂ ಗೌರವ ಮೂಡಿತು.

ಪ್ರಸಾದ ಸ್ವೀಕರಿಸುವ ವೇಳೆಗಾಗಲೇ ಕತ್ತಲಾವರಿಸಿತ್ತು. ರೋಮಿಂಗ್‌ನಲ್ಲಿದ್ದ ಕ್ಯಾರೋಲಿನಾಳನ್ನು ಹೇಗಪ್ಪಾ ಹುಡುಕುವುದು ಎಂದುಕೊಳ್ಳುತ್ತ, ಇಂಟರ್ನೆಟ್‌ಗಾಗಿ ತಡಕಾಡುತ್ತ ಯಾವ ದಾರಿಯಲ್ಲಿ ಅವಳು ಬಂದರೂ ಕಾಣಿಸಲಿ ಎಂಬ ಉದ್ದೇಶದಿಂದ, ರಿಷಿಕೇಶದ ಮಾರ್ಕೆಟ್ ಬಳಿ ಇರುವ ಸರ್ಕಲ್‌ನಲ್ಲಿ ನಿಂತಿದ್ದೆ. ಆಗ ನನಗೆ ಇನ್ನೊಂದು ಅಚ್ಚರಿ ಕಾದಿತ್ತು.

ಕೊಂಬಿನಲ್ಲಿ ಎತ್ತಿ ಹಿಡಿದ ಗೂಳಿ

ದಿನವಿಡೀ ನಡೆದು ನಡೆದು ಕಾಲು ಸೋತಿತ್ತು. ಕೆಳಗೆ ಮುಖ ಮಾಡಿ ಮೊಬೈಲ್‌ನಲ್ಲಿ ಮೆಸೇಜ್ ಮಾಡುತ್ತ ಮುಳುಗಿಹೋಗಿದ್ದವಳಿಗೆ, ಯಾಕೋ ಒಮ್ಮೆಲೆ ಗಾಳಿಯಲ್ಲಿ ತೇಲುತ್ತಿರುವಂತೆ, ಸುಖವಾಗಿ ಸೋಫಾದಲ್ಲಿ ಕುಳಿತ ಭಾವ. ಜೊತೆಗೆ ಯಾರೋ ನನ್ನನ್ನು ನೆಲದಿಂದ ಎತ್ತರೆತ್ತರಕ್ಕೆ ಒಯ್ಯುತ್ತಿರುವಂತೆ ಭಾವನೆ. ಇನ್ನೇನು ನೆಲವೇ ಕಾಣದಂತಾಗಬೇಕು ಅಷ್ಟರಲ್ಲಿ ತುಸು ದೂರದಲ್ಲಿದ್ದ ಹೆಂಗಸು ನನಗೆ – ‘ಅರೇ ಬೀ ಕೇರ್ ಫುಲ್, ಓಡು ಓಡು!’ ಎಂದು ಅರಚಿದಂತಾಯಿತು. 

ತಲೆ ಎತ್ತಿ ನೋಡಿದರೆ ನನ್ನ ಸುತ್ತ ಮುತ್ತ 100 ಜನ ಜಮಾಯಿಸಿದ್ದರು, ಸರ್ಕಸ್ ನೋಡಲು ಬಂದವರಂತೆ. ಅಚ್ಚರಿಯಿಂದ ಕಣ್ಣ್ ಬಿಟ್ಟರೆ ಕಂಡಿದ್ದು ತನ್ನ ಎರಡು ಕೊಂಬುಗಳಿಂದ ನನ್ನನ್ನು ಎತ್ತರಕ್ಕೇರಿಸಿ ಹಿಡಿದಿದ್ದ ಪುಟ್ಟ ಪುಂಡು ಗೂಳಿ!

ಅದರ ಕಣ್ಣು ನನ್ನ ಕಣ್ಣನ್ನು ಸಂಧಿಸಿ ಅದು ನನ್ನನ್ನು ‘ನೀನ್ಯಾರು’ ಎಂಬಂತೆ ಪ್ರಶ್ನಾರ್ಥಕ ನೋಟ ಬೀರಿತು. ಅದರ ಅರಿವಿಗೂ ಬರುವ ಮೊದಲು ಹೈ ಜಂಪಿನಂತೆ ನೆಲಕ್ಕೆ ಹಾರಿದೆ. ಎತ್ತಿ ದೂರ ಎಸೆಯುವ ಚಾನ್ಸ್ ಮಿಸ್ಸಾಗಿದ್ದರಿಂದ ಗೂಳಿ ಬೇಸರದಲ್ಲಿ ತೆರಳಿತು. ಸುತ್ತ ಜಮಾಯಿಸಿದ್ದ ಎಲ್ಲರೂ ಕೂದಲು ಕೊಂಕದಂತೆ ಪಾರಾಗಿದ್ದ ನನ್ನನ್ನು ಕಂಡು ನಿಟ್ಟುಸಿರಿಟ್ಟರು. ರಿಷೀಕೇಶದ ರಸ್ತೆಗಳು ಮಿತಿ ಮೀರಿ ಕೊಬ್ಬಿ ಬೆಳೆದ ಹೋರಿ, ಗೂಳಿ, ಪುಂಡು ದನಗಳ ಆವಾಸವೆಂದು ತಿಳಿದಿದ್ದರೂ ಬೇಜವಾಬ್ದಾರಿಯಿಂದಿದ್ದ ನನ್ನ ಮೇಲೆ ನನಗೆ ಕೋಪ ಬಂದರೂ, ಅರ್ಧ ಕೊಂಬು ಬಂದಿದ್ದ, ಇನ್ನೂ ಅಷ್ಟಾಗಿ ಬೆಳೆಯದಿದ್ದ ಮುಗ್ಧ ಗೂಳಿ ನನಗೆ ಸಿಕ್ಕಿದ್ದರ ಬಗ್ಗೆ ಸಮಾಧಾನವಿತ್ತು.

ಮನೆಯವರಿಗೋಸ್ಕರ ಅಲ್ಲಿನ ಸಿಹಿ ತಿನಿಸುಗಳನ್ನು ಸಲ್ಪ ಕೊಂಡು ಮುನ್ನಡೆಯುವಾಗ ಕ್ಯಾರೋಲಿನ ಸಿಕ್ಕಿದಳು. ‘ಬ್ರಿಡ್ಜ್ ನ ಮೇಲಿಂದ ಆರತಿ ವೀಕ್ಷಿಸಿದೆ. ಎಷ್ಟು ಸುಂದರ ಅಲ್ಲವೇ’ ಎನ್ನುವಾಗ ಅವಳ ಕಂಗಳು ಮಿನುಗಿದ್ದವು!

ಚಾಲಕ ಹೇಳಿದ್ದ ಸ್ಥಳಕ್ಕಿಂತ ಸಲ್ಪ ದೂರ ನಡೆದ ನಂತರವೂ ಕ್ಯಾಬ್ ಕಾಣಿಸದಿದ್ದಾಗ ‘ಅವನಿಗೆ ಕರೆ ಮಾಡು’ ಎಂದಳು. ನಮ್ಮನ್ನು ಕಾದು ಕಾದು ಬೇಸರ ಬಂದು ತಾನು ಯೋಗ ಕೇಂದ್ರಕ್ಕೆ ಯಾವುದೋ ಬಾಬಾಜಿ ಬಳಿ ಬಂದಿದ್ದೇನೆ ಎಂದ.

ನಾವಿಬ್ಬರೂ ಚಂದ್ರನ ತಂಪಿನಲ್ಲಿ ಮಿನುಗುತ್ತಿದ್ದ ಗಂಗಾ ಮಾತೆಯ ನೀರಲೆಯನ್ನು ಕಣ್ತುಂಬಿಕೊಳ್ಳುತ್ತ ಮಾತಾಡದೆ ಕುಳಿತಿದ್ದ ಆ ಅದ್ಭುತ ಸಮಯ ಇನ್ನೂ ನನ್ನ ಮನದಲ್ಲುಳಿದಿದೆ.

ಕತ್ತಲೇರುತ್ತಿದ್ದಂತೆ ಚಳಿ ಆವರಿಸಿತ್ತು. ಯಾತ್ರಿ ಪ್ರದೇಶವಾದರಿಂದ ಒಂದೊಂದಾಗಿ ಕೆಫೆಗಳು ಮುಚ್ಚತೊಡಗಿದ್ದವು. ರಸ್ತೆ ಬದಿ ಚಹ ಕುಡಿದು ಅಲ್ಲೇ ಹತ್ತಿರ ನಿಂತು ಕಾಯತೊಡಗಿದೆವು. ತಡ ರಾತ್ರಿಯಲ್ಲಿ 2 ಘಂಟೆಗಳ ಕಾಲ ಇಬ್ಬರು ಹುಡುಗಿಯರು ಏಕಾಂಗಿಯಾಗಿ ಭಾರತದ ಪ್ರದೇಶಗಳಲ್ಲಿ ಕಳೆಯುವಾಗಿನ ಕಷ್ಟ ನಿಮ್ಮ ಊಹೆಗೂ ಮೀರಿದ್ದು.

ರಾತ್ರಿ 11 ಅಗುತ್ತ ಬಂದಿತ್ತು. ಅದರ ಮೇಲೆ ತಡೆಯಲಾರದ ಹಸಿವು. ಕ್ಯಾರೋಲಿನಳ ಕೋಪ ಮೇರೆ ಮೀರಿತ್ತು. ನನ್ನ ಕೈಯಿಂದ ಫೋನ್ ಕಿತ್ತುಕೊಂಡು, ಚಾಲಕನಿಗೆ ಇಂಗ್ಲೀಷಿನಲ್ಲಿ ಏನನ್ನೋ ಒದರಿದಳು. 5 ನಿಮಿಷಗಳಲ್ಲಿ ಕ್ಯಾಬ್ ನಮ್ಮ ಮುಂದೆ ನಿಂತಿತ್ತು. ‘ಅವನು ಓಡೋಡಿ ಬರುವಂತೆ ಅಂಥದ್ದೇನು ಹೇಳಿದೆ’ ಎಂದು ಕುತೂಹಲದಿಂದ ಕೇಳಿದೆ. 

‘ನಾನು ಇಲ್ಲಿರುವ ನಿನ್ನ ಇಂಡಿಯನ್ ಫ್ರೆಂಡ್‌ನಷ್ಟು ಒಳ್ಳೆಯವಳಲ್ಲ. ಇನ್ನೂ ತಡ ಮಾಡಿದರೆ ಪೋಲಿಷ್ ಕಾನ್ಸುಲೇಟ್ ಬಳಿ ಹೋಗಿ ನಿನ್ನ ಜೀವನ ನರಕ ಮಾಡಿಸುತ್ತೇನೆ ಎಂದೆ’ ಎಂದು ನಕ್ಕಳು. ಅವನಿಗೆ ಪೋಲಿಶ್ ಎಂದು ಭಯವಾಯಿತೋ ಅಥವ ಪೋಲೀಸ್ ಎಂದು ಕೇಳಿಸಿತೊ, ಏನಾದರಾಗಲಿ, ಸದ್ಯ ಸುರಕ್ಷಿತವಾಗಿ ತಲುಪಿದೆವಲ್ಲ ಎಂದು ನೆಮ್ಮದಿಯಿಂದ ಕಣ್ಮುಚ್ಚಿ ಸೀಟಿಗೊರಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button