ಕಾಡಿನ ಕತೆಗಳುವಿಸ್ಮಯ ವಿಶ್ವಸ್ಫೂರ್ತಿ ಗಾಥೆ

ಹುಲಿಯಂತಿದ್ದ ಚಿರತೆ ಟೆಂಪಲ್ ಮೇಲ್: ಶ್ರೇಯಸ್ ದೇವನೂರ್ ಬರೆದ ಕಾಡಿನ ಕತೆ

ಕಾಡು ಎಂಬ ಪದ ಕೇಳಿದರೇ ಖುಷಿ ಪಡುವ ಹುಡುಗ. ಕಾಡು ಪ್ರಾಣಿಗಳನ್ನು ನೋಡಲು ಕ್ಯಾಮೆರಾ ಹಿಡಿದುಕೊಂಡು ಊರೂರು ಸುತ್ತುವ ವೈಲ್ಡ್ ಲೈಫ್ ಫೋಟೋಗ್ರಾಫರ್. ಊರು ಮೈಸೂರು. ಆದರೂ ಇಡೀ ಜಗತ್ತೇ ತನ್ನ ಊರು ಎಂದು ಭಾವಿಸಿದಂತೆ ಇರುವ ಉತ್ಸಾಹಿ ಶ್ರೇಯಸ್ ದೇವನೂರ್.          

ಕಾಡು ಮನುಷ್ಯನ ಎರಡನೇ ಮನೆಯಲ್ಲ, ಅದು ಅವನ ಮೂಲ ಸ್ಥಾನ. ಹೀಗಾಗಿ ಹಸಿರು ಕಂಡೊಡನೆ ಮನಸ್ಸಿಗೆ ಉಲ್ಲಾಸವಾಗುವುದು. ಕಾಡು ಪ್ರಾಣಿಗಳು ಕಂಡರೆ ರೋಮಾಂಚನ.

ನಮ್ಮ ಮೈಸೂರಿನ ಸುತ್ತಲು ಇರುವ ಕಾಡುಗಳು ದೇಶ ವಿದೇಶದ ವನ್ಯಜೀವಿ ಪ್ರಿಯರನ್ನು ಸದಾ ಕೈಬೀಸಿ ಕರೆಯುತ್ತದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಅಂಥಾ ಮನೋಹರ ಪ್ರದೇಶ. ನಾಗರಹೊಳೆ ಅಭಯಾರಣ್ಯ ಹಸಿರು ರತ್ನಗಳಿಂದ ಅಲಂಕಾರಗೊಂಡಿದ್ದು, ಇಲ್ಲಿನ ಸಮೃದ್ಧ ಹಿನ್ನೀರು, ಬಾನೆತ್ತರಕ್ಕೆ ಕೈ ಚಾಚುತ್ತಾ ನಿಂತಿರುವ ಮರಗಳು, ಗಾಂಧಾರ ಭಾಷೆಯ ಚಿಲಿಪಿಲಿ ಹಕ್ಕಿಗಳ ಕಲರವ, ಕಾಡಿನಷ್ಟೇ ಸುಂದರವಾದ ವನ್ಯ ಪ್ರಾಣಿಗಳಿಗೆ ಸೂಕ್ತ ಸ್ಥಳವಾಗಿ ತುಂಬು ಹೃದಯದ ಸೌಂದರ್ಯದಿಂದ ಕೂಡಿದೆ.

ವನ್ಯಜೀವಿ ಎಂದೊಡನೆ ಅಭಯಾರಣ್ಯಗಳು, ಉತ್ಸಾಹಿ ಪ್ರವಾಸಿಗರು, ಕಾಡು ಪ್ರಾಣಿಗಳನ್ನು ತಮ್ಮ ಕ್ಯಾಮೆರಾ ಮೂಲಕ ಸೆರೆ ಹಿಡಿಯಲು ಕಾತರದಿಂದ ಕಾಯುವ ಚಿತ್ರಣವೊಂದು ಕಣ್ಮುಂದೆ ಬರುತ್ತದೆ. ಪ್ರತೀ ಬಾರಿ ಕಾಡಿಗೆ ಹೋದಾಗಲೂ ಹೊಸ ಹೊಸ ಅನುಭವ ಆಗುತ್ತಲೇ ಇರುತ್ತದೆ. ಅಂತಹ ಅನುಭವಗಳಲ್ಲಿ ಸದಾ ನೆನಪಿನಲ್ಲೇ ಇರುವ ಅನುಭವವನ್ನು ನೀಡಿದ ಈ ಪ್ರಾಣಿಯನ್ನು ನೋಡಿದವರು ಮರೆತ ಇತಿಹಾಸವಿಲ್ಲ.

ವನ್ಯಜೀವಿ ಪ್ರಿಯರಿಗೆ ನೆನಪಿಟ್ಟುಕೊಳ್ಳಲು ಸಾಕಷ್ಟು ಕಥೆಗಳನ್ನು ನೀಡಿದ ಚಿರತೆ ಇದು. ಈಗ ನಾನು ಹೇಳ ಬಯಸುವುದು ನಾಗರಹೊಳೆಯ ಕಾಕನಕೋಟೆ ವಲಯದಲ್ಲಿ ದಿಗ್ಗಜನಂತೆ ಮೆರೆದು, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ಟೆಂಪಲ್ ಮೇಲ್ ಚಿರತೆಯ ಬಗ್ಗೆ. ಆತನ ಮತ್ತೊಂದು ಹೆಸರೇ ಟೋರ್ನ್ ಇಯರ್.

ನಾಚಿಕೆಯ ಚಿರತೆ ನಮಗೆ ಕಾಣಿಸಿಕೊಳ್ಳುವುದು ಕಡಿಮೆ

ಈತನಿಗೆ ಈ ಎರಡು ಹೆಸರು ಬರಲು ಕಾರಣ ಹುಡುಕಿದರೆ ತೆರೆದುಕೊಳ್ಳುವುದು ಅವನ ಸರಹದ್ದಿನಲ್ಲಿರುವ ಸುಮಾರು 400 ವರ್ಷಗಳ ಹಳೆಯದಾದ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಗೋಪಾಲ ದೇವರ ಗುಡಿ. ಈ ಗುಡಿಯ ಗಾರುಡಿಗನಂತೆ ಅದರ ಮೇಲೇರಿ ಆರಾಮವಾಗಿ ಕುಳಿತು ಮಲಗಿ ವಿಶ್ರಮಿಸುತ್ತಾ ಛಾಯಾಗ್ರಹಕರ ಕ್ಯಾಮೆರಾಗಳಿಗೆ ಪೋಸ್ ಕೊಡುತ್ತಿದ್ದ. ಆಗಾಗ ಟೆಂಪಲ್ ಏರಿ ಕುಳಿತುಕೊಳ್ಳುತ್ತಿದ್ದ ಇವನಿಗೆ ಪ್ರವಾಸಿ ಪ್ರಿಯರು ಇಟ್ಟ ಹೆಸರೇ ಟೆಂಪಲ್ ಮೇಲ್. ಬಹುಶಃ ಸರಹದ್ದು ಕಾಳಗದಲ್ಲಿ ಮತ್ತೊಂದು ಚಿರತೆಯೊಡನೆ ಕಾದಾಡುವಾಗ ತನ್ನ ಬಲಭಾಗದ ಕಿವಿ ಹರಿದು ಹೋಗಿದ್ದರಿಂದ ಮತ್ತದೇ ಪ್ರಾಣಿ ಪ್ರಿಯರು ಈತನನ್ನು ಟೋರ್ನ್ ಇಯರ್ ಎಂದು ಕರೆದಿದ್ದಾರೆ.

ನಮಗೆಲ್ಲ ತಿಳಿದಿರುವಂತೆ ಚಿರತೆಗಳು ಬೆಕ್ಕುಗಳ ಜಾತಿಗೆ ಸೇರಿದ ಪ್ರಾಣಿಗಳು. ಕಾಡಿನಲ್ಲಿ ಹುಲಿಗಳು ಮೇಲುಗೈ ಸಾಧಿಸುವುದರಿಂದ, ಹುಲಿಗಳು ಗೋಚರಿಸುವಷ್ಟು ಚಿರತೆ ಕಾಣಿಸುವುದಿಲ್ಲ. ಏಕೆಂದರೆ ಚಿರತೆಗಳು ಅತ್ಯಂತ ನಾಚಿಕೆ ಸ್ವಭಾವದ ಗುಣಗಳನ್ನು ಹೊಂದಿದ್ದು ಗುಪ್ತವಾಗಿ ಬದುಕುವ ಜೀವಿಗಳು. ಹುಲಿಯ ಹಾವಭಾವ ಊಹಿಸಬಹುದು, ಆದರೆ ಚಿರತೆಯ ಹಾವಭಾವ ಊಹಿಸುವುದು ಅಸಾಧ್ಯ.

ಅತಿ ಹೆಚ್ಚು ಫೋಟೋ ಹೊಡೆಸಿಕೊಂಡ ಟೆಂಪಲ್ ಮೇಲ್

ಭಾರತದ ಕಾಡುಗಳಲ್ಲಿ ಅತೀ ಹೆಚ್ಚು ಬಾರಿ ಪ್ರವಾಸಿಗರಿಂದ ಫೋಟೋ ಹೊಡೆಸಿಕೊಂಡ ಹುಲಿಯ ಬಗ್ಗೆ ಕೇಳಿರಬಹುದು, ಅದು ರಾಜಸ್ಥಾನದ ಮಚಲಿ ಎಂಬ ಹುಲಿ. ಆದರೆ ನಮ್ಮ ದಕ್ಷಿಣ ಭಾರತದಲ್ಲಿ ಚಿರತೆಯೊಂದು ಅತ್ಯಂತ ಹೆಚ್ಚು ಬಾರಿ ಪ್ರವಾಸಿಗರ ಛಾಯಾಚಿತ್ರಕ್ಕೆ ಸೆರೆಯಾಗಿದೆ ಎಂಬುದು ನಿಜಕ್ಕೂ ಅಚ್ಚರಿ. ಹೌದು ಆ ಚಿರತೆಯೇ ನಾಗರಹೊಳೆಯ ಟೆಂಪಲ್ ಮೇಲ್ ಚಿರತೆ.

ತುಂಬಾ ನಾಚಿಕೆ ಸ್ವಭಾವದ, ಹುಲಿಯ ಜಾತಿಗೆ ಸೇರಿದ್ದರೂ ಅವುಗಳಷ್ಟು ಧೈರ್ಯಶಾಲಿಗಳಲ್ಲದ ಚಿರತೆಗಳಿಗೆ ಮನುಷ್ಯರನ್ನು ಕಂಡರೆ ಅಥವಾ ಸಾರಿಗೆ ವಾಹನವನ್ನು ನೋಡಿದರೆ ಗಾಬರಿ. ಕ್ಷಣ ಮಾತ್ರದಲ್ಲಿ ಅವು ಮರೆಯಾಗುತ್ತವೆ. ಆದರೆ ಈ ಮಾತಿಗೆ ವಿರುದ್ಧ ನಮ್ಮ ಟೆಂಪಲ್ ಮೇಲ್ ಚಿರತೆ.

ಕಾಡಿನಲ್ಲಿ ಒಂದು ಸಾಮಾನ್ಯ ಮಾತಿದೆ, ನಾವು ಪ್ರಾಣಿಗಳನ್ನು ನೋಡುವುದಕ್ಕೂ ಮೊದಲೇ ಅವು ನಮ್ಮನ್ನು ಗಮನಿಸಿರುತ್ತವೆ ಎಂಬುದು. ಆದರೆ ಈ ಚಿರತೆ ಜನರನ್ನು ಗಮನಿಸಿಯೂ ಭಂಡ ಧೈರ್ಯದಿಂದ ಓಡಾಡಿಕೊಂಡಿದ್ದ. ಸಫಾರಿಗೆ ಹೋದವರಿಗೆ ಸಿಕ್ಕರೆ ಕ್ಯಾಮೆರಾದ ಹೊಟ್ಟೆ ತುಂಬುವಷ್ಟು ಪೋಸು ಕೊಡುತ್ತಿದ್ದ. ಈತ ಬೇರೆ ಚಿರತೆಗಳ ಹಾಗೆ ಹೆದರಿ ಓಡುವುದನ್ನು ನಾವಂತೂ ಕಂಡಿಲ್ಲ. ರಾಜ ಗಾಂಭೀರ್ಯದ ಇವನ ಮುಖದಲ್ಲಿ ಸದಾ ಖಡಕ್ ಲುಕ್. ಅದರಲ್ಲೂ ಕಬಿನಿಗೆ ಬರುವ ಸಾರಿ ಪ್ರಿಯರಿಗೆ ಇವನೆಂದರೆ ಅಚ್ಚುಮೆಚ್ಚು. ಫೋಟೋಗ್ರಫಿ ದೃಷ್ಟಿಯಿಂದ ಹೇಳುವುದಾದರೆ ಯಾರಿಗೂ ನಿರಾಸೆ ಮಾಡಿಲ್ಲ. ಒಳ್ಳೆಯ ಸೈಟಿಂಗ್ ಕೊಟ್ಟಿದ್ದಾನೆ.

ಇವನ ಭಂಡತನ ಹೇಗಿತ್ತು ಎಂದರೆ, ಕೆಲವೊಮ್ಮೆ ಸಾರಿ ಗಾಡಿಗೆ ಅಡ್ಡಲಾಗಿ ನಡೆದು ವಾಹನಕ್ಕೆ ದಾರಿ ಕೊಡದೆ ತಿರುಗಿ ಗರ್ಜಿಸಿ ಹೆದರಿಸುತ್ತಿದ್ದ. ಇವನ ಜಾಗದಲ್ಲಿ ಬೇರೆ ಯಾವುದೇ ಚಿರತೆ ಇದ್ದರೂ ಕ್ಷಣಾರ್ಧದಲ್ಲೇ ಚಂಗನೆ ಜಿಗಿದು ಓಡಿ ಹೋಗುತ್ತಿತ್ತು. ಇಲ್ಲವೇ ವೇಗವಾಗಿ ಮರ ಹತ್ತಿ ಮರೆಯಾಗುತಿತ್ತು.

ಆದರೆ ಈತ ಮರದಲ್ಲಿ ಕಾಣಿಸಿಕೊಂಡಿರುವುದು ತುಂಬಾ ಕಡಿಮೆ. ಕೆಲವೊಮ್ಮೆ ತನ್ನ ಆಹಾರವನ್ನು ಮರದ ಮೇಲೆ ಇರಿಸಿದಾಗ ಮಾತ್ರ ಮರದ ಮೇಲಿರುತ್ತಾನೆ. ಹುಲಿಯಲ್ಲಿ ನಾವು ಯಾವ ನಡವಳಿಕೆ, ಹಾವಭಾವ ನೋಡುತ್ತೇವೋ, ಆ ಎಲ್ಲಾ ಗುಣಗಳೂ ಈ ಚಿರತೆಯಲ್ಲಿ ಕಾಣುತ್ತಿದ್ದದ್ದೇ ವಿಶೇಷ. ಇದು ಚಿರತೆ ರೂಪದಲ್ಲಿರುವ ಹುಲಿ ಅಂದರೂ ತಪ್ಪಲ್ಲ.

ಸಫಾರಿಗೆ ಹೋದಾಗ ಫೋನ್ ಕರೆಯಲ್ಲಿ ಇಲ್ಲೊಂದು ಚಿರತೆ ನಡೆದುಕೊಂಡು ಹೋಗುತ್ತಿದೆ ಎಂದು ಸುದ್ದಿ ಬಂದರೆ ಸಾಕು, ಅದು ಯಾವ ಚಿರತೆಯೂ ಆಗಿರುವುದಿಲ್ಲ. ನಮ್ಮ ಟೆಂಪಲ್ ಮೇಲ್ ಆಗಿರುತ್ತಾನೆ. ಇವನ ಬಗ್ಗೆ ತಿಳಿದಿರುವ ವನ್ಯಜೀವಿ ಪ್ರಿಯರು, ‘ಓ…. ! ಟೆಂಪಲ್ ಮೇಲ್, ನಿಧಾನಕ್ಕೇ ಗಾಡಿ ಓಡಿಸಿ ಏನು ತೊಂದರೆ ಇಲ್ಲ. ಎಲ್ಲೂ ಹೋಗಲ್ಲ ಅವ್ನು ಸಿಕ್ಕೇ ಸಿಗ್ತಾನೆ’ ಎಂದು ದೃಢವಾಗಿ ನಂಬಿಕೆಯಿಂದ ಹೇಳುತ್ತಾರೆ. ಟೆಂಪಲ್ ಮೇಲ್ ಸೈಟಿಂಗ್ ಆಗಿದೆ ಎಂದರೆ ಅಂದಿನ ಪ್ರವಾಸಿಗರಿಗೆ ಮೃಷ್ಟಾನ್ನದಂತೆ.

ಭಂಡ ಧೈರ್ಯಶಾಲಿ ಅಲ್ಲೇ ಕೂತಿದ್ದ

ಬೇರೆ ಯಾವ ಚಿರತೆಯೂ ಅವನಷ್ಟು ಧೈರ್ಯಶಾಲಿ ಆಗಿಲ್ಲದ ಕಾರಣ ಕಬಿನಿಗೆ ವನ್ಯಜೀವಿ ಛಾಯಾಗ್ರಹಣಕ್ಕೆ ಬರುವವರು ಇವನನ್ನು ಸುಲಭವಾಗಿ ಗುರುತಿಸುತ್ತಿದ್ದರು.

ನೀವು ಇದನ್ನು ಇಷ್ಟಪಡಬಹುದು: ಒಂದು ದಿನದಲ್ಲಿ ಮಹಾಬಲಿಪುರಂನಲ್ಲಿ ಏನೇನು ನೋಡಬಹುದು: ಸುವರ್ಣಲಕ್ಷ್ಮಿ ಹೇಳುತ್ತಾರೆ ಓದಿ

ಇವನನ್ನು ಆಗಾಗ ಕ್ಯಾಮರಾ ಕಣ್ಣಲ್ಲಿ ನೋಡುತ್ತಿದ್ದ ನಮಗೆ ಹುಲಿಯನ್ನೇ ನೋಡುತ್ತಿದ್ದೇವೆ ಎಂದು ಭಾಸವಾಗುತ್ತಿತ್ತು. ಕೊನೆಯವರೆಗೂ ಅವನ ಮುಖದಲ್ಲಿ ಅದೇ ಗತ್ತು ಮತ್ತು ಆ ವ್ಯಾಘ್ರ ಕಳೆ ಕಾಣಿಸುತ್ತಿತ್ತು.

ಟೆಂಪಲ್ ಮೇಲ್ ಕಾಡಿನ ಓಳಗೆ ಮಾತ್ರವಲ್ಲ ಆಗಾಗ ಕಾಡಿನಿಂದ ಹೊರಬಂದು ಸಾರಿಗೆ ಟಿಕೆಟ್ ಕೊಡುವ ಜಾಗದಲ್ಲೂ ಸಹ ಕಾಣಿಸಿ ಕೊಂಡಿದ್ದಾನೆ. ಜಸ್ಟ್ ಫಾರ್ ಚೇಂಜ್ ಅನ್ನುವಂತೆ ನಾಡಿಗೊಂದು ವಿಸಿಟ್ ಕೊಟ್ಟು ಮತ್ತೆ ಕಾಡು ಸೇರುತ್ತಿದ್ದ.

ವನ್ಯಜೀವಿ ಛಾಯಾಗ್ರಾಹಕರಾದ ಮಂಜುನಾಥ್ ಹೆಗಡೆ ಟೆಂಪಲ್ ಮೇಲ್ ಬಗ್ಗೆ ಹೇಳುವುದು ಹೀಗೆ.. ಸರಿ ಸುಮಾರು ಮಧ್ಯಾಹ್ನ 2.30ರ ಸಮಯ. ಸಫಾರಿಗೆ ಹೊರಟವರಿಗೆ ನವಿಲೊಂದು ಹೆದರಿ ಓಡುತ್ತಿರುವುದು ಕಾಣಿಸಿತು. ಕಾಡಿನ ಹೊರಗಡೆ ಇದು ಯಾಕೆ ಹೆದರುತ್ತಿದೆ ಎಂದುಕೊಳ್ಳುವಷ್ಟರಲ್ಲೇ ಅದು ಮರವೇರಿತು. ಹಾವು ಏನಾದರು ಕಂಡಿರಬಹುದೆನೋ ಎಂದುಕೊಂಡರೂ, ಹಾವಾಗಿದ್ದರೆ ಅದು ಹೆದರಿ ಮರವೇರುವುದಿಲ್ಲ ಎನಿಸಿತು. ಯಾವುದಕ್ಕೂ ನೋಡಿ ಬರುವ ಎಂದು ಕಾಮಗಾರಿ ನಡೆಯುತ್ತಿದ್ದ ಇಲಾಖೆಯ ಕಟ್ಟಡದ ಮೇಲೆ ಹತ್ತಿ ನೋಡಿದರೆ ಏನೂ ವ್ಯತ್ಯಾಸ ಕಾಣಲಿಲ್ಲ. ಕೊನೆಗೆ ನವಿಲು ಕೂಗುತ್ತಿರುವ ದಿಕ್ಕಿನಲ್ಲೇ ನೋಡುತ್ತಾ ಹೋದಾಗ ಮೈ ಜುಮ್ ಅಂದಿತು. ಅಲ್ಲೇ ತುಸು ದೂರಲ್ಲಿ ಈ ಧಡಿಯ ಕೂತಿದ್ದ. ಅರ್ಥಾತ್ ಕಾಕನಕೋಟೆಯ ಅಗ್ರ ಚಿರತೆ ಟೆಂಪಲ್ ಮೇಲ್ ಹೊಂಚುಹಾಕಿ ಕುಳಿತಿದ್ದ. ಇವನ್ಯಾಕೆ ಇಲ್ಲಿ ಬಂದ ಅನ್ನುವಷ್ಟರಲ್ಲೆ ಸ್ವಲ್ಪ ದೂರದಲ್ಲಿ ಕುರಿ ಮಂದೆ ಮೇಯ್ತಾ ಇತ್ತು. ನೋಡು ನೋಡುತ್ತಿರುವಂತೆ ಗಿಡಗಳಲ್ಲಿ ಮರೆಯಾಗಿ ಹೋದ. ಸಂಜೆ ಸಫಾರಿ ಮುಗಿಸಿ ಬಂದಾಗ ಈತ ಕುರಿ ಹಿಡಿಯಲು ಪ್ರಯತ್ನ ಪಡುತ್ತಿದ್ದ ಅಂತ ಕೇಳಿ ಬಂತು. 13-14 ವರ್ಷವಾದರೂ ಈತನದು ಗಟ್ಟಿ ಗುಂಡಿಗೆ.

ಇತ್ತೀಚೆಗೆ ನಾವು ಸಫಾರಿಗೆ ಹೋದಾಗ ಸಂಜೆ 5.45ರ ತನಕ ಹುಲಿಯಾಗಲಿ ಚಿರತೆಯಾಗಲಿ ಕಾಣದೇ ಹಿಂದಿರುವಾಗಲೇ ಒಂದು ಕರೆ ಬರುತ್ತದೆ. ಕೆರೆಯ ಪಕ್ಕದಲ್ಲಿ ಚಿರತೆಯೊಂದು ಕುಳಿತಿದೆ ಎಂಬ ಮಾಹಿತಿ ಸಿಕ್ಕಿತು. ಚಳಿಗಾಲದಲ್ಲಿ ಕತ್ತಲಾಗುವುದು ಬೇಗ. ಛಾಯಾಗ್ರಹಣಕ್ಕೆ ಸೂಕ್ತ ಬೆಳಕು ಸಿಗುವುದಿಲ್ಲ. ಆದರೂ ಆ ದಿನ ಏನೂ ಕಾಣದೇ ಹಿಂದಿರುಗುವ ಬದಲು, ಕನಿಷ್ಠ ಪಕ್ಷ ಚಿರತೆಯನ್ನಾದರೂ ಕಣ್ತುಂಬಿಕೊಳ್ಳಲು ಹೊರಟೆವು. 

ನಾವು ಸ್ಥಳಕ್ಕೆ ಹೋಗಿ ಚಿರತೆಯನ್ನು ನೋಡುವವರೆಗೂ ಅದು ಟೆಂಪಲ್ ಮೇಲ್ ಇರಬಹುದಾ ಎಂಬ ಸುಳಿವು ಸಹ ಇರಲಿಲ್ಲ. ಆತ ಕತ್ತಲೆ ಬೆಳಕಿನಲ್ಲಿ ಮರದ ಕೆಳಗೆ ಕುಳಿತಿದ್ದ. ಅಷ್ಟರಲ್ಲಾಗಲೇ ಅವನ ಕಣ್ಣುಗಳು ತುಸು ಮಂದವಾಗಿದ್ದವು. ವಯಸ್ಸಾಗಿ ತನ್ನ ಕೋರೆ ಹಲ್ಲುಗಳನ್ನೂ ಸಹ ಆತ ಕಳೆದುಕೊಂಡಿದ್ದ. ನಾವು ಒಂದಿಷ್ಟು ಹೊತ್ತು ಆತನನ್ನು ನೋಡುತ್ತಾ ನಿಂತೆವು. ಎರಡು ಬಾರಿ ಆಕಳಿಸಿದ. ಸ್ವಲ್ಪ ಹೊತ್ತಿನ ನಂತರ ಎದ್ದು, ನಡೆಯಲಾರಂಭಿಸಿದ. ಆದರೆ ಅಂದು ಅವನ ನಡಿಗೆ ಎಂದಿನಂತಿರಲಿಲ್ಲ. ಕುಂಟುತ್ತಾ ನಡೆಯಲು ಕಷ್ಟ ಪಡುತ್ತಾ ಮುಂದೆ ಸಾಗುತ್ತಿದ್ದ. ಅವನು ಎದ್ದು ನಡೆಯುವ ತನಕ ಅವನ ಕಾಲಿಗೆ ಪೆಟ್ಟಾಗಿದೆ, ಏನೋ ನೋವು ಅನುಭವಿಸುತ್ತಿದ್ದಾನೆ ಅಂತ ನಮಗೆ ಗೊತ್ತಾಗಲಿಲ್ಲ. ಏಕೆಂದರೆ ಅಷ್ಟು ನೋವಿದ್ದರೂ ಅವನ ಮುಖದಲ್ಲಿ ಅದೇ ಗಾಂಭೀರ್ಯ, ಖಡಕ್ ಲುಕ್.

ಇದಾದ ಮೇಲೂ ಚೇತರಿಸಿಕೊಂಡು ಎರಡು ಮೂರು ಸಲ ಸಾರಿಯಲ್ಲಿ ಸಿಕ್ಕಿರಬಹುದೇನೋ. ಇವನು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಮಾರ್ಚ್ 6, 2020ರ ಸಂಜೆ. ಕಬಿನಿಯ ಜಿ.ಕೆ.ಕೆರೆಯಲ್ಲಿದ್ದ.

ಛಾಯಾಗ್ರಾಹಕ ಚಿರಾಗ್ ರಾಜ್ ಅದಕ್ಕೆ ಸಾಕ್ಷಿಯಾಗಿದ್ದರು. ‘ಅಂದು ಸಾರಿಗೆ ಹೋದಾಗ ಟೆಂಪಲ್ ಮೇಲ್ ನೀರಿನಲ್ಲಿ ಕೂತಿದೆ ಎಂದು ಹೇಳುತ್ತಿದ್ದರು. ಆದರೆ ಯಾರಿಗೂ ಕಾಣಿಸುತ್ತಿರಲಿಲ್ಲ. ಹುಲಿ ಇರಬಹುದೇನೋ ಅನಿಸಿತು. ಕೆಲ ಸಮಯದ ನಂತರ ಅದು ಟೆಂಪಲ್ ಮೇಲ್ ಅಂತ ಸ್ಪಷ್ಟವಾಯಿತು. ಟೆಂಪಲ್ ನಿಧಾನವಾಗಿ ನೀರಿನಿಂದ ಎದ್ದು ಮೇಲೆ ಬಂದ. ಎಲ್ಲಾ ವಾಹನಗಳನ್ನೂ ನೋಡಿ ಎಲ್ಲರಿಗೂ ಪೋಸ್ ಕೊಟ್ಟ. ಆಗ ಬಹಳ ಸುಸ್ತಾಗಿದ್ದ ಅನಿಸುತ್ತೆ. ಆದರ ಅವನ ಮುಖದ ಖದರ್ ಮಾತ್ರ ಕಮ್ಮಿ ಯಾಗಿರಲಿಲ್ಲ. ಒಂದು ಹುಲಿಯ ನೋಟ ಅವನಲ್ಲಿತ್ತು, ಚಿರತೆಯೊಂದು ಇವನ ತರಹ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ಆಗಲೂ ಆತ ಸಾಬೀತು ಮಾಡಿದ.

ನಿಧಾನಕ್ಕೆ ನಡೆದು ಬಂದು ದಿಬ್ಬದ ಮೇಲೆ ಕುಳಿತುಕೊಂಡ. ಆ ದಿಬ್ಬ ನಮ್ಮ  ಡ್ರೈವರ್ ರಾಜಣ್ಣರವರ ಗಾಡಿಯ ಸಮೀಪವೇ ಇದ್ದರಿಂದ ಅಷ್ಟು ಹತ್ತಿರದಿಂದ ಟೆಂಪಲ್ ಮೇಲ್ ನನ್ನು ನೋಡುವ ಭಾಗ್ಯ ಸಿಕ್ಕಿತು. ಚಿರತೆಯೊಂದನ್ನು ಅಷ್ಟು ಹತ್ತಿರದಿಂದ ನೋಡುವಾಗ ಸ್ವಲ್ಪ ಭಯವಾಯ್ತು. ಆದರೆ ಆತ ನಿರಾಳನಾಗಿದ್ದ’ ಎನ್ನುತ್ತಾ ಅಂದಿನ ಅನುಭವ ಹಂಚಿಕೊಳ್ಳುತ್ತಾರೆ ಚಿರಾಗ್.

ಆದರೆ ಅದೇ ಆತನ ಕೊನೆಯ ದರ್ಶನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಲ್ಲಿಂದ ಎದ್ದು ಬೆನ್ನು ತಿರುಗಿಸಿದವನು ಇಲ್ಲಿಯವರಗೂ ಇತ್ತ ಮುಖ ಮಾಡಲಿಲ್ಲ.

ಅಂದಿನಿಂದ ಇಂದಿನವರೆಗೂ ಅಂಥಾ ಮತ್ತೊಂದು ಧೈರ್ಯಶಾಲಿ ಚಿರತೆ ಕಂಡಿಲ್ಲ.

ಸಾಮಾನ್ಯ ಬೆಕ್ಕುಗಳ ಜಾತಿಗೆ ಸೇರಿದ ಇವು ತಮ್ಮ ಗತಿಸುವ ಕಾಲ ಬಂದಾಗ ದೂರದ ಸ್ಥಳಗಳನ್ನು ಸೇರುತ್ತವೆ ಎಂದು ಎಲ್ಲೋ ಓದಿದ್ದೆ. ಅಂದು ಹಾಗೆ  ಹೋದ ಈತ ಕಳೆದ 8 ತಿಂಗಳಿನಿಂದ ಸಫಾರಿ ವಾಹನಗಳಿಗಾಗಲಿ, ಕಾಡಿನಲ್ಲಿ ಗಸ್ತು ತಿರುಗುವ ಸಿಬ್ಬಂದಿಗಳಿಗಾಗಲಿ ಸಿಕ್ಕಿಲ್ಲ. ಆತ ಗತಿಸಿರಬಹುದು ಎಂದು ಹೇಳುವುದಿರಲಿ, ಆ ಭಾವನೆ ನಮ್ಮ ಮನಸ್ಸಿಗೆ ಬರುವುದೂ ದೂರದ ಮಾತು. ಆತ ಎಲ್ಲೇ ಇರಲಿ ಹೇಗೇ ಇರಲಿ ಚೆನ್ನಾಗಿರಲಿ ಎನ್ನುವುದು ನಮ್ಮ ಹಾರೈಕೆ.

ಏನೇ ಆದರೂ ನಾಗರಹೊಳೆಯ ವನ್ಯಜೀವಿ ಇತಿಹಾಸದ ಪುಟಗಳಲ್ಲಿ ತನ್ನದೇ ದಂತಕಥೆ ಸೃಷ್ಟಿಸಿರುವ ಈತ ನಿಜಕ್ಕೂ ನಮ್ಮೆಲ್ಲರೊಳಗೆ ಅಜರಾಮರವಾಗಿದ್ದಾನೆ ಅನಿಸುತ್ತದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button