ತುಂಬಿದ ಮನೆಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಸೌದಿ ಅರೇಬಿಯಾದಲ್ಲೊಂದು ಅದ್ಭುತ ದ್ವೀಪ: ಸಿರಿ ಹುಲಿಕಲ್ ಬರೆಯುವ ಫರಸನ್ ಡೈರಿ

ಮೃಗನಯನೀ ಎಂಬ ಬ್ಲಾಗ್ ಮೂಲಕ ಪರಿಚಿತೆ. ನಡೆದಷ್ಟು ದಾರಿ ದೂರ ಎಂಬ ಕಥಾಸಂಕಲನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಪ್ರವೇಶ. ಊರು ಚಿಕ್ಕಮಗಳೂರು. ಸದ್ಯ ಸೌದಿ ಅರೆಬಿಯಾದ ರಿಯಾದ್ ನಲ್ಲಿ ವಾಸ. ಪೂರ್ತಿ ಹೆಸರು ಸಿರಿ ಹುಲಿಕಲ್. ತುಂಬಾ ಚೆಂದ ಬರೆಯುವ ಇವರು ಬಹಳ ವರ್ಷಗಳಿಂದ ಬರೆಯದೇ ಕಳೆದುಹೋಗಿದ್ದರು. ಅವರನ್ನು ಕನ್ನಡ.ಟ್ರಾವೆಲ್ ಸಂಪರ್ಕಿಸಿ ಒಂದು ಸರಣಿ ಬರೆಸಿದೆ. ಬಹಳ ವರ್ಷಗಳ ನಂತರ ಸೌದಿ ಅರೇಬಿಯಾದ ನಿರ್ಜನ ಪ್ರವಾಸಿ ಸ್ಥಳ ಫರಸನ್ ಬಗ್ಗೆ ಅವರು ಬರೆದಿರುವ ಮೊದಲ ಕಂತು ಇಲ್ಲಿದೆ. ಓದಿ ಖುಷಿ ಪಡಿ. ಮುಂದಿನ ಕಂತುಗಳನ್ನು ಓದಲು ಮರೆಯದಿರಿ.  

ಸೌದಿ ಅರೇಬಿಯಾದ ನೈರುತ್ಯ ಮೂಲೆಯಲ್ಲಿ ಜಝನ್(Jizan,pronounced as jazan) ಎನ್ನುವ ಊರಿದೆ. ಆ ಊರಿನ ಪಕ್ಕದಲ್ಲಿ ಒಂದಷ್ಟು ಹವಳ ದ್ವೀಪಗಳಿವೆ, ಅದರಲ್ಲಿ ಫರಸನ್ ದ್ವೀಪವೂ ಒಂದು. ಈ ದ್ವೀಪದ ಸುತ್ತ ಕೆಂಪು ಸಮುದ್ರವಿದೆ. ಇಲ್ಲಿಗೆ ಜಝನಿಂದ ಫೆರ್ರಿಯಲ್ಲಿ ಹೋಗಬೇಕು. ಮನುಷ್ಯರನ್ನು ಮಾತ್ರವಲ್ಲಾ ವಾಹನಗಳನ್ನೂ ಕೊಂಡೊಯ್ಯುವ ಫೆರ್ರಿಯಾದ್ದರಿಂದ ನಾವುಗಳು (ನಾಲ್ಕು ಕುಟುಂಬದವರು ಒಟ್ಟಿಗೆ ಹೋಗಿದ್ದೆವು.) 

ನಮಗೂ ನಮ್ಮ ವಾಹನಕ್ಕೂ ಟಿಕೆಟ್ ತೆಗೆದುಕೊಂಡಿದ್ದೆವು. ತೆಗೆದುಕೊಂಡೆವು ಅಂದರೆ‌, ದುಡ್ಡೇನು ಇಲ್ಲ. ಟಿಕೆಟ್ ದರವನ್ನ ಸರ್ಕಾರವೇ ನೋಡಿಕೊಳ್ಳುತ್ತದೆ. ಆದರೆ‌ ನಮ್ಮ ಸರಕಾರಿ ಬಸ್ಸುಗಳ ಹಾಗೆ ಮನ ಬಂದ ಹಾಗೆ ನುಗ್ಗುವ ಹಾಗಿಲ್ಲ. ಅದರಲ್ಲಿ ಕೂರಲು ಇರುವ ಜಾಗದಷ್ಟು ಟಿಕೆಟ್ ಕೊಟ್ಟು ಕೌಂಟರ್ ಮುಚ್ಚುತ್ತಾರೆ. ಅರೆಬಿಕ್ ಬರದಿದ್ದರೆ ಕಷ್ಟ. ನಾವು ಗೈಡ್ ಒಬ್ಬರನ್ನು ಗುರುತು‌ ಮಾಡಿಕೊಂಡಿದ್ದರಿಂದ ಅವರೇ ಟಿಕೆಟ್ ಕೊಡಿಸಿ ಫೆರ್ರಿಯಲ್ಲಿ ಹೊರಡುವ ವ್ಯವಸ್ಥೆ ಮಾಡಿದ್ದರು. ಫರಸನ್ ತಲುಪಿ ಹೊಟೆಲ್ ನಲ್ಲಿ ಚೆಕ್ ಇನ್ ಮಾಡಿ ಹೊರಬಂದಾಗ ಅಲ್ಲಿನ ಗೈಡ್‌ ಕಾಯುತ್ತಿದ್ದರು. ಗೈಡ್ ಹೆಸರು ಅಬು ಮುಹನ್ನದ್. ಅರೆಬಿಕ್ ಬಿಟ್ಟು ಬೇರೆ ಭಾಷೆ ಬರದು. ನಮಗೋ ಗೊತ್ತಿರುವುದು ಹರಕು ಮುರಕು ಅರೆಬಿಕ್. ಅವನೋ‌ ಉದ್ದುದ್ದ ವಾಕ್ಯಗಳಲ್ಲಿ ಮಾತಾಡುತ್ತಿದ್ದ. ನಮಗೋ ಒಂದು ಪದ ಅಲ್ಲಿ ಇಲ್ಲಿ ಅರ್ಥವಾಗುತ್ತಿತ್ತು. ಈ ಗೊಂದಲಗಳ ನಡುವೆಯೇ “ಯಲ್ಲ ಯಲ್ಲ” ಎಂದು  ಹೊರಡಿಸಿಯೇ ಬಿಟ್ಟ. 

ಅಲ್ಲಿಂದ ಹೊರಡಿಸಿ ಒಂದು ಸ್ಪೀಡ್‌ಬೋಟ್ ನಲ್ಲಿ ಎರಡು ಮನೆಯವರನ್ನೂ ಇನ್ನೊಂದು ಸ್ಪೀಡ್ ಬೋಟ್ ನಲ್ಲಿ ಇನ್ನೊಂದೆರಡು ಮನೆಯವರನ್ನು ಕೂರಿಸಿ “ಯಲ್ಲಾ ಯಲ್ಲಾ” ಎಂದು ಕೈ ಬೀಸಿ ಇನ್ನೇಲ್ಲಿಗೋ ಹೊರಟೇ ಹೋದ. ಇವನೇನು ಹೀಗೆ ಎಲ್ಲೋ ಕೂರಿಸಿ, ಎಲ್ಲೋ ಹೋಗೇ ಬಿಟ್ಟನಲ್ಲ‌ ಎಂದುಕೊಳ್ಳುವ ಹೊತ್ತಿಗೆ, ಮಕ್ಕಳು ಖುಷಿಯಿಂದ ಕೂಗತೊಡಗಿದರು, ಒಂದಷ್ಟು ಪೆಲಿಕನ್‌ ಹಕ್ಕಿಗಳು ನಿರ್ಭಯವಾಗಿ ಸ್ಪೀಡ್ ಬೋಟ್ ಪಕ್ಕಕ್ಕೇ ಹಾರಿಬಂದವು. ಬೋಟ್ ಓಡಿಸುತ್ತಿದ್ದವ ಇಪ್ಪತ್ತು ವರ್ಷದ ಹುಡುಗ ಜೊತೆಗೆ ಅವನ‌ ಸಹಾಯಕ್ಕೆ ಅವನ ಸ್ನೇಹಿತ. ಇವರು, ರಿಯಾನ್(ನೆರೆ ಮನೆಯವರ ಐದರ ಹುಡುಗ) ಮತ್ತು ಅಚಿಂತ್ಯನನ್ನು (ನನ್ನ ಐದು ವರ್ಷದ ಮಗ) ಕರೆದು ಬೈಟ್ ಮೀನುಗಳನ್ನು ಇಬ್ಬರ ಕೈಗೂ ಇಟ್ಟು ಪಕ್ಷಿಗಳ ಕಡೆ ಎಸೆಯಿರಿ‌ ಎಂದು ತೋರಿಸಿದ. ಇವರಿಬ್ಬರಿಗೂ ಅದೆಷ್ಟು ಖುಷಿಯಾಯಿತೆಂದರೆ ಅವನ ಬಳಿ‌ ಮತ್ತೂ ಮತ್ತೂ ಮೀನುಗಳನ್ನು ಕೇಳಿ ಪಡೆಯತೊಡಗಿದರು. ಪೆಲಿಕನ್ ಪಕ್ಷಿಗಳು ಇವರು ಎಲ್ಲಿ ಎಸೆದರೂ ಹಾರಿ ಮೀನನ್ನು‌ ಹಿಡಿದು ನುಂಗುತ್ತಿದ್ದವು. ಈ ಮಕ್ಕಳು ಮೀನು ಎಸೆಯುವುದು ನಿಲ್ಲುವಂತೆ ಕಾಣಲಿಲ್ಲ, ಅವನಿಗೂ ಸಾಕಾಗಿ. ಮೀನುಗಳು ಮುಗಿದು ಹೋಯ್ತೆಂದು ಕೈ ಆಡಿಸಿದ. 

ನೀವು ಇದನ್ನು ಇಷ್ಟಪಡಬಹುದು: 12 ದೇಶ ಸುತ್ತಿರುವ, ಕ್ಯಾನ್ಸರ್ ಗೆದ್ದಿರುವ ಜೀವನೋತ್ಸಾಹಿ ಭಾರತಿ ಬಿವಿ ಕತೆ ಎಲ್ಲರಿಗೂ ಸ್ಫೂರ್ತಿ: ಸಿಂಧೂ ಪ್ರದೀಪ್

ಸ್ಪೀಡ್‌ಬೋಟಿನಲ್ಲಿ ಮ್ಯಾಂಗ್ರೋವ್ ಕಾಡುಗಳ ಹತ್ತಿರ ಕರೆದೊಯ್ದು ಪೆಲಿಕನ್ ಹಕ್ಕಿಗಳ ಗೂಡು, ಮರಿಗಳನ್ನು ತೋರಿಸಿದರು. ಮರಿಗಳೆಂದರೆ ನನ್ನ ಮನಸ್ಸಿನಲ್ಲಿ ನಮ್ಮ ಗುಬ್ಬಚ್ಚಿ, ಕೋಳಿ, ಬಾತುಗಳ ಮರಿಗಳ ಥರ ಪುಟ್ಟ ಮರಿಗಳು ಎಂದಿತ್ತು. ಇಷ್ಟು ದೊಡ್ಡ ಮರಿಯನ್ನು ಕಂಡು ಆಶ್ಚರ್ಯ. ಇವುಗಳು ಮರಿಗಳಲ್ಲವೇನೋ ಎಂದು ಅನುಮಾನವಾಯಿತು. ಒಂದು ಬೈಟ್ ಮೀನನ್ನು ಪಡೆದು ಪಕ್ಷಿಯ ಬಳಿ ಎಸೆದೆ. ಅದು ತನ್ನ ಉದ್ದ ಕೊಕ್ಕನ್ನು ಬಡಿಯಿತೇ ವಿನಃ ಎಸೆದ ಮೀನಿನ ಕಡೆ ಹಾರಲಿಲ್ಲ. ಮೀನು ನೀರೊಳಗೆ ಬಿತ್ತು. ಬೋಟ್ ಓಡಿಸುತ್ತಿದ್ದ ಹುಡುಗ “ಮಮ್ಮ”  ಎಂದು ಒಂದು ಪದವನ್ನು ಹೇಳಿ ಊಟ ತಂದು ಕೊಡುತ್ತದೆ ಎಂದು ಅಭಿನಯಿಸಿ‌ ತೋರಿಸಿದ‌‌. ಅಷ್ಟು ದೊಡ್ಡ ಮರಿಗಳು!  ಅಲ್ಲಿಂದ ಹತ್ತಿರದ ಮತ್ತೊಂದು ಪುಟಾಣಿ ದ್ವೀಪಕ್ಕೆ ಕರೆದುಕೊಂಡು ಹೋಗಿ ಇಳಿಯಿರಿ ಎಂದು ಹೇಳಿ‌ ಈಜಾಡಿ‌ ಎಂದು ಕೈ ಕಾಲು‌ ಬೀಸಿ ತೋರಿಸಿದರು. ಶುಭ್ರ‌ ತಿಳಿ ನೀಲಿ ಬಣ್ಣದ ಜಲ, ಬಿಳೀ ನುಣುಪು ಮರಳು, ಸ್ವಿಮ್ಮಿಂಗ್ ಸೂಟ್ ತೆಗೆದುಕೊಂಡು ಬನ್ನಿ ಎಂದು‌ ಹೇಳಲೇ ಇಲ್ಲವಲ್ಲ ಈ ಗೈಡು‌ ಎಂದು ಅವನನ್ನು ಮನಸ್ಸಿನಲ್ಲೇ ಶಪಿಸಿದೆ‌. ಅಚಿಂತ್ಯನ‌ ಇನ್ನೊಂದು ಜೊತೆ ಬಟ್ಟೆ ಯಾವಾಗಲೂ ಇರುವುದರಿಂದ ಅವನೂ ಅವನ‌ ಅಪ್ಪನೂ, ಜೊತೆಗೆ ಬಂದಿದ್ದ ನನ್ನ‌ ಸ್ನೇಹಿತೆಯರ ಮನೆಯವರೆಲ್ಲ ನೀರಿಗಿಳಿದರು. ಇವರುಗಳ ಒಂದಷ್ಟು ಫೋಟೋಗಳನ್ನ ತೆಗೆದು ಸುತ್ತ ಮುತ್ತ ಏನೇನಿದೆ ಎಂದು ನೋಡೋಣವೆಂದು ಹತ್ತಿದರೆ ಅಲ್ಲಿ ಬರಿಗಾಲಲ್ಲಿ ಕಾಲಿಡಲು ಸಾಧ್ಯವಿಲ್ಲದಷ್ಟು ಒಣಗಿದ ಹವಳದಂಡೆ. ಹವಳ ದಂಡೆ ಎಂದರೆ ನಾವು ಪುಸ್ತಕಗಳಲ್ಲಿ ಓದಿದ ಕೆಂಪು ಹವಳಗಳಲ್ಲ. ಒಣಗಿಹೋದ ಮಣ್ಣಿನ ಬಣ್ಣದ ಜೀವವಿಲ್ಲದ  ಚೂಪು ಆಯುಧಗಳು. ಎಷ್ಟು ಚೂಪಾಗಿದ್ದವೆಂದರೆ,‌ ಬರಿಗಾಲಲ್ಲಿ ಶಂಖ ಹುಡುಕಲು ಹೋದ ನನ್ನ ಸ್ನೇಹಿತೆಯ ಪಾದವೆಲ್ಲಾ ತೂತಾಗಿ ನಡೆಯಲಾರದಷ್ಟು ಪೆಟ್ಟಾಗಿ ಹೋಯಿತು. 

ಅಲ್ಲೊಂದೆರಡು ಘಂಟೆಗಳ ಕಾಲ ಕಳೆದು ವಾಪಸ್ಸು ಹೊರಟಾಗ ಮಕ್ಕಳು ನೀರೊಳಗೆ ಹೋಗಿ  ಬಗೆಬಗೆಯ ಶಂಖ, ಹಸಿರು ಬಣ್ಣದ ಚಪ್ಪಟೆ ಕಲ್ಲು(ಹವಳ?) ಇನ್ನೂ ಏನೇನೋ  ಒಟ್ಟು ಮಾಡಿದ್ದರು. ಹೊರಗಿದ್ದ ನನ್ನ ಸ್ನೇಹಿತೆ ದೊಡ್ಡ ದೊಡ್ಡ ಒಣಗಿದ ಶಂಖವನ್ನೆಲ್ಲಾ ಗುಡ್ಡೆ ಹಾಕಿ ಕೊಂಡಿದ್ದರು. ಇವನ್ನೆಲ್ಲಾ ಸ್ಪೀಡ್ ಬೋಟ್ ನಲ್ಲಿರಿಸಿ ವಾಪಸ್ಸು ಹೊರಟಾಗ ಬೋಟ್ ಓಡಿಸುತ್ತೀರ ಎಂದು ಆ ಬೋಟ್ ನಡೆಸುವವ  ಅಭಿನಯಿಸಿ ತೋರಿಸಿದ. ನಾನು ಸಿಕ್ಕಿದ್ದೇ ಛಾನ್ಸ್ ಎಂದು ಹೋಗಿ ಹೇಳಿಕೊಂಡೆ. ಇದನ್ನ ಕಂಡ ಕೃಷ್ಣನಿಗೆ ಜಂಘಾ ಬಲವೇ ಉಡುಗಿ ಹೋಯಿತು. 

ದಮ್ಮಯ್ಯಾ ಬೇಡವೆಂದು ಕೈ ಮುಗಿದ, ನನಗೆ ಒಂದು‌ ಕಡೆ ನಗು, ಇನ್ನೊಂದು ಕಡೆ ಚೆನ್ನಾಗಿ ಓಡಿಸಬೇಕೆಂಬ ಹಠ, ಇವನ  ವಿರೋಧದ ನಡುವೆಯೇ ಓಡಿಸಲು ಶುರು ಮಾಡಿದೆ. 

ನಾಳೆ ಎರಡನೇ ಕಂತು: ಸಮುದ್ರ ದಡದಲ್ಲಿ ಒಂದು ರಾತ್ರಿ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button