ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಕಲಬುರಗಿಗೆ ಹೋದವರು ನೋಡಲು ಮರೆಯಬಾರದ ಜಾಗಗಳು

ಕೆಲವೊಂದು ಊರಿಗೆ ಹೋದಾಗ ಏನು ನೋಡಬೇಕು ಅನ್ನುವುದೇ ಗೊತ್ತಾಗುವುದಿಲ್ಲ. ನೀವು ಯಾವತ್ತಾದರೂ ಒಮ್ಮೆ ಕಲಬುರಗಿಗೆ ಹೋದರೆ ನೀವು ಈ ಜಾಗಗಳನ್ನು ನೋಡಿಬನ್ನಿ. 

ಕನಗನಳ್ಳಿ ಮಹಾಚೈತ್ಯ ಸ್ತೂಪ

The Marg Foundation

ಚಿತ್ತಾಪುರ ತಾಲೂಕಿನ ಕನಗನಳ್ಳಿಯಲ್ಲಿ ಕ್ರಿ.ಪೂ.3 ಶತಮಾನದ ಸಾಮ್ರಾಟ ಅಶೋಕನ ಕಾಲದಿಂದ ಕ್ರಿ.ಶ.3ನೇ ಶತಮಾನದವರೆಗೆ ನಿರ್ಮಾಣಗೊಂಡ ಮಹಾಚೈತ್ಯ ಇದಾಗಿದೆ. ಇದನ್ನು ಅಭೋಲೋಕದ ಮಹಾಚೈತ್ರಯ ಎನ್ನಲಾಗಿದೆ. ೧೯೫೪ರಲ್ಲಿ ಸಂಶೋಧಕ ಕಪಟರಾಳ ಕೃಷ್ಣರಾಯರು ಇದನ್ನು ಬೆಳಕಿಗೆ ತಂದರು. ಇಲ್ಲಿ ಬುದ್ಧನ 10 ಶಾಸನಯುಕ್ತ ಪ್ರತಿಮೆಗಳು, ಭೋಧಿವೃಕ್ಷದ ಕೆತ್ತನೆ, ಚೈತ್ಯ ಗ್ರಹ, ವಿಹಾರ ಸಮುಚ್ಛಯ ಸೇರಿದಂತೆ ನೂರಾರು ಐತಿಹಾಸಿಕ ಕುರುಹುಗಳು ಇಲ್ಲಿವೆ. ಸಾಮ್ರಾಟ ಅಶೋಕದ ಅಪರೂಪದ ಚಿತ್ರ ಇಲ್ಲಿದೆ, ಪ್ರಾಚ್ಯ ವಸ್ತು ಇಲಾಖೆ ಸುಪರ್ದಿಯಲ್ಲಿದ್ದು, ಐತಿಹಾಸಿಕ ಸ್ಥಳವಾಗಿದೆ.

ಕನಗನಹಳ್ಳಿ ಬೌದ್ಧ ಸ್ಮಾರಕಗಳ ಉತ್ಖನನ ಪ್ರದೇಶವಾಗಿದೆ. ಇಲ್ಲಿ ಅಶೋಕನ ಕಾಲದ ಬುದ್ಧನ ಸ್ಮಾರಕಗಳು, ಪೂರ್ತಿ ಬುದ್ಧನ ಪುತ್ಥಳಿ, ಸ್ತೂಪಗಳು, ಆ ಕಾಲದ ನಾಣ್ಯಗಳು ದೊರಕಿವೆ. ಹೀಗಾಗಿ ಬೌದ್ಧ ಭರ್ಮ ಹಾಗೂ ಅಶೋಕನ ಆಳ್ವಿಕೆಯಲ್ಲಿನ ಬುದ್ಧ ಭರ್ಮದ ಉನ್ನತಿ ಸಾರುವ ಪಳಿಯುಳಿಕೆ ದೊರಕಿರುವ ತಾಣ ಇದಾಗಿದ್ದರಿಂದ ಪ್ರವಾಸಿ ಆಕರ್ಷಣೆಯಾಗಿದೆ. ಕಲಬುರಗಿಯಿಂದ 45 ಕಿ.ಮೀ. ದೂರ. ಸನ್ನತಿ ಪಕ್ಕದಲ್ಲೇ ಇರುವುದರಿಂದ ವಾಹನ ಸೌಕರ್ಯ ಸಾಕಷ್ಟಿದೆ.

ಬಾಣಂತಿ ಕಂಬ 

ಸೇಡಂನ ಮತ್ತೊಂದು ಪ್ರಮುಖ ಐತಿಹಾಸಿಕ ಬಾಣಂತಿ ಕಂಬವು ಏಕಶಿಲಾ ಸ್ಥಂಭವಾಗಿದ್ದು, ಜೈನರ ವಾಸ್ತು ಶಿಲ್ಪದ ಶೈಲಿಯ ಪ್ರಕಾರ ಮಾನಸ್ಥಂಭವಾಗಿದ್ದು, ದಂತಕತೆಯ ಆಭಾರದ ಮೇಲೆ ಘಟೋತ್ಕಘಜ ಜನನಾನಂತರ ಅವನ ತಾಯಿ ಹಿಡಿಂಬೆಯು ಈ ಕಂಬವನ್ನು ನಿಲ್ಲಿಸಿದಳೆಂಬ ಐತಿಹ್ಯ ಎನ್ನಲಾಗುತ್ತಿದೆ. ಸೇಡಂ ನಿಂದ ಬಸ್ ಸೌಕರ್ಯ ವಿದೆ.

ಜಯತೀರ್ಥರ ವೃಂದಾವನ ತಾಣ ಮಳಖೇಡ 

ದಕ್ಷಿಣ ಭಾರತದಲ್ಲಿಯೇ ವೈಶಿಷ್ಟ್ಯವುಳ್ಳ ದ್ವೈತ ಮತದ ಭಾರ್ಮಿಕ ಸ್ಥಳ, ಮಧ್ವ ಸಂಪ್ರದಾಯದ ಜಗದ್ಗುರು ಮಧ್ವಾಚಾರ್ಯರ ಮೂಲಪೀಠವಾಗಿದ್ದು, ಸುಮಾರು 22 ವರ್ಷ ಜಯತೀರ್ಥ ಯತಿಗಳು ಇದನ್ನು ನಡೆಸಿಕೊಂಡು ಬಂದಿದ್ದರು. ಕಾಗಿಣಾ ನದಿಯ ದಡದಲ್ಲಿ ಅವರ ಗುರುಗಳಾದ ಅಕ್ಷೋಭ್ಯ ತೀರ್ಥರ ಪಕ್ಕದಲ್ಲಿಯೇ ಜಯತೀರ್ಥರ ವೃಂದಾವನವಿದೆ. ಈ ಐತಿಹಾಸಿಕ ಸ್ಥಳ  ಮಳಖೇಡ ೪೦ ಕಿ.ಮೀ. ದೂರದಲ್ಲಿದೆ. ಸೇಡಂ ಮತ್ತು ಕಲಬುರಗಿಯಿಂದ ಬಸ್ ಸೌಕರ್ಯವಿದೆ.

ಬಿಜ್ಜನಹಳ್ಳಿಯ ಚಮ್ಮಾವುಗೆ

ಸೇಡಂ ತಾಲೂಕಿನಲ್ಲಿರುವ ಬಿಜ್ಜನಹಳ್ಳಿ ಇತಿಹಾಸ ಪ್ರಸಿದ್ಧ ಊರು. ಕಾಗಿಣಾ ತೀರದಲ್ಲಿರುವ ಈ ಊರು ಶಿವಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ದಂಪತಿಗಳ ಚಮ್ಮಾವುಗೆಗಳಿಂದ ಪ್ರಸಿದ್ಧಿಯಾಗಿದೆ. ಇಲ್ಲಿನ ಶಿವಶರಣಪ್ಪ ಸೌಲಬಮ್ಣನವರ್ ಮನೆಯಲ್ಲಿರುವ ಚಮ್ಮಾವುಗೆಗಳನ್ನೇ ಶರಣ ಹರಳಯ್ಯ ದಂಪತಿಗಳು ಸಾಮಾಜಿಕ ಸಮಾನತೆ ಹರಿಕಾರ ಬಸವಣ್ಣನವರಿಗೆ ಅರ್ಪಿಸಿದ್ದರು ಎಂಬ ನಂಬಿಕೆ ಪ್ರಚಲಿತವಿದೆ. ಈ ಮನೆಯೇ ಗುಡಿಯಾಗಿದ್ದು ಚಮ್ಮಾವುಗೆಗಳನ್ನು ಗಾಜಿನ ಪೆಟ್ಟಿಗೆಯಲ್ಲಿಡಲಾಗಿದ್ದು ಭಕ್ತರು ನಿತ್ಯ ಪೂಜಿಸುತ್ತಾರೆ.

ಮರತೂರು ವಿಜ್ಞಾನೇಶ್ವರ ಸ್ಮಾರಕ 

ಅಚ್ಚ ಕನ್ನಡದಲ್ಲಿ ಹಿಂದು ಕಾನೂನು ಬರೆದ ಮಿತಾಕ್ಷರ ಗ್ರಂಥ ಕರ್ತೃ ವಾಸವಾಗಿದ್ದ ಮರತೂರು ಕಾನೂನು ಪಂಡಿತರ ಪಾಲಿಗೆ ಮಹತ್ವದ ತಾಣ. ಇಲ್ಲೀಗ ವಿಜ್ಞಾನೇಶ್ವರ ಸ್ಮಾರಕ ನಿರ್ಮಿಸಲಾಗಿದ್ದು, ಉದ್ಯಾವವನ, ಕಾನೂನು ಗ್ರಂಥಗಳಿರುವ ಗ್ರಂಥಾಲಯ ತಲೆ ಎತ್ತಿವೆ. ಮಿತಾಕ್ಷ  ಎಂಬ ಕಾನೂನು ಗ್ರಂಥದ ವಿಜ್ಞಾನೇಶ್ವರ ಇದೇ ಊರಿನವರು ಎಂದು ಶಿಲಾಶಾಸನಗಳಿಂದ ಸಾಬೀತಾಗಿದೆ. ಇಲ್ಲಿಗೆ ಹೋಗಿ ಬರಲು ಸಾಕಷ್ಟು ಬಸ್, ಆಟೋ ಸೌಕರ್ಯವಿದೆ.

ನಾಲವಾರದ ಮೇನ್ ಡೋರ್

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಮಹಾದ್ವಾರ ರಾಜಸ್ಥಾನದ ಹವಾ ಮಹಲ ಮಾದರಿಯಲ್ಲಿ ನಿರ್ಮಿಸಲಾಗಿದೆ. ಪೀಠಾಧಿಪತಿ ಡಾ. ಸಿದ್ದ ತೋಟೆಂದ್ರ ಮಹಾಸ್ವಾಮಿಗಳ ಅಭಿರುಚಿಯಂತೆ ರಾಜಸ್ಥಾನದಿಂದ ವಿಶೇಷವಾಗಿ ಗುಲಾಬಿ ಕಲ್ಲುಗಳನ್ನು, ಅಲ್ಲಿಂದಲೆ ನಿಪುಣ ಶಿಲ್ಪಿಗಳನ್ನು ಕರೆಸಿ ಹವಾ ಮಹಲ್ ಮಾದರಿಯಲ್ಲಿ ಮಹಾದ್ವಾರ ನಿರ್ಮಿಸಿದ್ದು, ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಇದೊಂದು ವಿಶಿಷ್ಟ ವಿನ್ಯಾಸ, ರಾಜಸ್ಥಾನಿ ಕಲೆಯಿಂದ ಕೂಡಿದ ಕಟ್ಟಡವಾಗಿದೆ. ಚಿತ್ತಾಪುರ, ಕಲಬುರಗಿಯಿಂದ ಬಸ್ ಸೌಕರ್ಯ ವಿದೆ.

ಬುದ್ಧ ವಿಹಾರ

File:BudhViharGul.jpg

ಕಳೆದ 5 ವರ್ಷದ ಹಿಂದಷ್ಟೆ ತಲೆ ಎತ್ತಿರುವ ಬುದ್ಧ ವಿಹಾರ ಕಲಬುರಗಿಯಲ್ಲಿ ಕಟ್ಟಲಾಗಿದೆ. ಸ್ತೂಪದ ಮಾದರಿಯಲ್ಲಿರುವ ಈ ವಿಹಾರ ವಿಶಾಲ ಗುಮ್ಮಟ ಹೊಂದಿದೆ. 170 ಕಂಬಗಳಿವೆ. ಅಜಂತಾ, ಎಲ್ಲೋರಾ ಶಿಲ್ಪಗಳ ಮಾದರಿ ಇಲ್ಲಿ ಅಳವಡಿಸಲಾಗಿದೆ. ಮಂದಸ್ಮಿತ ಬುದ್ಧ, ಭ್ಯಾನ ಮಂದಿರ ಇಲ್ಲಿನ ಆಕರ್ಷಣೆ.

ಸಿಮೆಂಟ್ ಕಾರ್ಖಾನೆಗಳು

ಸೇಡಂ ಮತ್ತು ಚಿತ್ತಾಪುರ ತಾಲೂಕಿನಲ್ಲಿ ಇಡೀ ಭಾರತ ದೇಶದಲ್ಲಿಯೇ ಅತ್ಯಂತ ಹೆಚ್ಚು ಗುಣಮಟ್ಟದ ಸಿಮೆಂಟ್ ಉತ್ಪಾದನೆಗೆ ಬಳಸುವ ಸುಣ್ಣದ ಕಲ್ಲಿನ ನಿಕ್ಷೇಪ ಸೇಡಂ ಸುತ್ತಮುತ್ತಲಿನಲ್ಲಿರುವುದರಿಂದಾಗಿ ಅತಿ ಹೆಚ್ಚು ಸಿಮೆಂಟ್ ಕಾರ್ಖಾನೆಗಳು ಈ ಭಾಗದಲ್ಲಿ ಸ್ಥಾಪಿಸಲ್ಪಟ್ಟಿವೆ. ವಾಸವದತ್ತಾ, ರಾಜಶ್ರೀ, ಅಲ್ಟ್ರಾಟೆಕ್, ಶ್ರೀ, ಸಿಸಿಐ, ಸೌತ್ ಇಂಡಿಯಾ ಸೇರಿದಂತೆ ಇನ್ನೂ ಹಲವು ಕಾರ್ಖಾನೆಗಳು ಕಾರ್ಯಾರಂಭಗೊಳ್ಳಲಿವೆ. 

ಅದ್ಭುತ ರಮ್ಯ ಪ್ರಯಾಣದ ಹಾದಿಗಳು

Sateesh Sajja

ಚಿಂಚೋಳಿ ಗೊಟ್ಟಂಗೊಟ್ಟ ಪ್ರದೇಶ. ಜಿಲ್ಲೆಯಲ್ಲಿರುವ ಅದ್ಭುತ ಪ್ರವಾಸಿತ ತಾಣದ ರಮ್ಯ ದಾರಿ ಇದಾಗಿದೆ. ಅಕ್ಕಪಕ್ಕ ಮುಲ್ಲಾಮಾರಿ ನದಿ ಹಿನ್ನೀರು. ಪಕ್ಕದಲ್ಲೇ ಚಂದ್ರಂಪಳ್ಳಿ ಕೆರೆ. ಮಧ್ಯದಲ್ಲಿ ಕಡಿದಾದ ದಾರಿ. ಅದು ಗೊಟ್ಟಂಗೊಟ್ಟ ಬೆಟ್ಟಕ್ಕೆ ಕರೆದೊಯ್ಯುತ್ತದೆ. ಚಂದ್ರಂಪಳ್ಳಿ ಕೆರೆ ತಾಣದಿಂದ ಇಲ್ಲಿಗೆ ಹೋಗುವುದೇ ರಮ್ಯ ಅನುಭವ. ದಕ್ಷಿಣ ಕನ್ನಡದ ಯಾಣ ಚಾರಣದ ಅನುಭವದಂತೆಯೇ ಇಲ್ಲಿಯೂ ಪ್ರವಾಸಿಗರು ಅನುಭವ ಹೊಂದುತ್ತಾರೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button