ಇವರ ದಾರಿಯೇ ಡಿಫರೆಂಟುನಡಿಗೆ ನಮ್ಮ ಖುಷಿಗೆವಿಂಗಡಿಸದಸೂಪರ್ ಗ್ಯಾಂಗುಸ್ಫೂರ್ತಿ ಗಾಥೆ

ದಟ್ಟ ಕಾನನದ ಜಲಪಾತದ ಬುಡದಲ್ಲಿ ಅಪರಿಚಿತರ ಗುಂಪು: ಉಜಿರೆ ಎಸ್ ಡಿಎಂ ಕಾಲೇಜು ವಿದ್ಯಾರ್ಥಿ ರಾಮ್ ಮೋಹನ್ ಭಟ್ ಬರೆದ ಕುತೂಹಲಕರ ಕತೆ

ಕೆಲವು ಪ್ರಯಾಣಗಳು ಅನಿರೀಕ್ಷಿತವಾಗಿ ಜರುಗುತ್ತವೆ. ಕಡೆಗೆ ಪ್ಲಾನ್ ಮಾಡಿದ ಪ್ರವಾಸಗಳಿಗಿಂತ ಅದೇ ಮರೆಯಲಾಗದ ಪ್ರವಾಸವಾಗಿ ಮನಸ್ಸಲ್ಲಿ ಉಳಿಯುತ್ತದೆ. ಅಂಥದ್ದೊಂದು ಪ್ರವಾಸದ ಕತೆ ಇದು. ಅಪರಿಚಿತರಾಗಿದ್ದವರು ಸ್ನೇಹಿತರಾದ ಚಂದದ ಕತೆ.

ಪ್ರವಾಸ ಎಂದಾಕ್ಷಣ ಹಿಂದೇಟು ಹಾಕುವವರಿಗಿಂತ ನಮ್ಮ ಜೊತೆಗೆ ಹೆಜ್ಜೆ ಹಾಕುವವರೇ ಹೆಚ್ಚು. ಪ್ರವಾಸ ಎಂಬ ಪದವೇ ಹಾಗೆ, ವಿಶೇಷ ತತ್ವ ವಿಭಿನ್ನ ಅನುಭವ. ಪ್ರತಿಯೊಂದು ಮೈಲಿಗಲ್ಲುಗಳು ಒಂದೊಂದು ಕತೆಯನ್ನು ಹೇಳುತ್ತದೆ, ವೈಯ್ಯಾರದಿ ಹೆಜ್ಜೆ ಹಾಕುವ ಜಲಧಾರೆ,ಹಸಿರ ವನಸಿರಿ ಹೊಸ ಪಾಠಗಳನ್ನೇ ಕಲಿಸುತ್ತವೆ.

ಹೊಸ ಜಾಗ, ವಿಭಿನ್ನ ವ್ಯಕ್ತಿ – ವ್ಯಕ್ತಿತ್ವಗಳು, ಭಾಷೆ,ಸಂಸ್ಕೃತಿಗಳನ್ನು ಪರಿಚಯಿಸುವ ರಾಯಭಾರಿ ಪಯಣ. ಹೀಗೆಂದಾಗ ನನಗೆ ನೆನಪಾದದ್ದು “ದೇಶ ಸುತ್ತಿನೋಡು ಕೋಶ ಓದಿ ನೋಡು ಎಂಬ ಮಾತು”. ಪ್ರವಾಸ ಹೊರಡುವ ಮೊದಲು ಬಹಳ ಪೂರ್ವ ತಯಾರಿ ಅಗತ್ಯ. ಆದರೆ ನಾನೀಗ ಹೇಳ ಹೊರಟಿರುವುದು ಯಾವುದೇ ಪೂರ್ವ ತಯಾರಿ ಇಲ್ಲದೇ ಯಶಸ್ವಿಯಾದ ಚಾರಣೆಯ ಕಥೆ. 

ಅಂದು ನಮ್ಮ ಸ್ನಾತಕೋತ್ತರ ಯಾನದ ಮೊದಲ ದಿನ. ಹಲವಾರು ಆಕಾಂಕ್ಷೆ, ನಿರೀಕ್ಷೆ ಹೊತ್ತು ಬೇರೆ ಬೇರೆ ಊರು ಹಾಗೂ ಕಾಲೇಜುಗಳಿಂದ ಹಳೆ ನೆನಪುಗಳ ಜೊತೆ ಹೊಸ ಕನಸುಗಳ ಗಂಟು ಮೂಟೆ ಕಟ್ಟಿ ಗುರಿಯತ್ತ ಹೆಜ್ಜೆ ಹಾಕಿರುತ್ತಾರೆ. ಉಜಿರೆಯ ಎಸ್. ಡಿ. ಎಮ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ನಾನು. ತರಗತಿಯಲ್ಲಿರುವ 30 ಹೊಸಾ ಸ್ನೇಹಿತರ ಭೇಟಿಗೆ ಕಾತರದಿಂದ ಹಾಯುತ್ತಿದ್ದೆ. ಆದರೆ ಮನಸ್ಸು ಅಸಡ್ಡೆಯಿಂದ “ಕ್ಲಾಸಲ್ಲಿ ಕೂರ್ಬೇಕಲ್ಲ ಮಾರಾಯ ಇವತ್ತು”  ಎನ್ನುತ್ತಿತ್ತು.

ನನ್ನ ಲೆಕ್ಕಾಚಾರವೆಲ್ಲ ಉಲ್ಟಾ ಆಗಿತ್ತು ಅಂದು. ಕರೋನಾ ರಿಪೋರ್ಟ್ ಸಿಗದೆ ಹೆಚ್ಚಿನ ಮಂದಿ ಗೈರು. ಮೊದಲ ದಿನ ನಾವು 9 ಮಂದಿ ಮಾತ್ರ. ವಿಭಾಗದ ಎಲ್ಲಾ ಪ್ರಾಧ್ಯಾಪಕರ ಭೇಟಿ ಆಯಿತು. ಕಾಲೇಜು, ಸ್ಟುಡಿಯೋ ಎಲ್ಲೆಡೆ ಮೂಲೆ ಮೂಲೆ ಅಲೆದಾಯಿತು. ಇನ್ನೆಲ್ಲಿಗೆ ಹೋಗುವುದು ಎನ್ನುವ ಪ್ರಶ್ನೆ ಹಾಗೇ ಸುಮ್ಮನೆ ಕಾಡಿತು. ಆರೋಗ್ಯಕರ ಚರ್ಚೆಯ ಬಳಿಕ ದಿಡುಪೆ ಜಲಪಾತಕ್ಕೆ ಹೋಗುವ ತೀರ್ಮಾನಕ್ಕೆ ಬಂದೆವು.

ಉಜಿರೆ ಪೇಟೆಯವರೆಗೆ ಕಾಲ್ನಡಿಗೆ ಮತ್ತು ಪಟ್ಟಾಂಗ. ಉಜಿರೆಯಿಂದ ನಮ್ಮ ಜೀಪು ಸವಾರಿ ಶುರು. ಜಲಪಾತದ ಕಡೆಗಿನ ಹಾದಿ ಬಲ್ಲವರು ನಮ್ಮ ಜೊತೆಗಿರುವ ಧೈರ್ಯ ಪಯಣದ ಹುರುಪನ್ನು ಮತ್ತಷ್ಟು ಹೆಚ್ಚಿಸಿದರು. ದಾರಿಯುದ್ದಕ್ಕೂ ಹಾಡು, ಹರಟೆ, ಹಾಸ್ಯ.

ಈ ಮನೋರಂಜನೆಗಳ ವರದಿಂದ  ಇಪ್ಪತ್ತು ಕಿ. ಮೀ.ನ ಸಂಚಾರ ಅರಿವಿಗೇ ಬರಲಿಲ್ಲ. ಜೀಪಿನಿಂದ ಇಳಿದು ಜಲಪಾತದ ಕಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದೆವು.

ಕಾಡುದಾರಿಯಲ್ಲಿ ಎರಡು ಕಿ.ಮೀ. ಸಂಚರಿಸಬೇಕಿತ್ತು. ಮೊದಲ ಹೆಜ್ಜೆಗಳ ವೇಗ, ಉತ್ಸಾಹ ಮುಂದೆ ಹೋಗುತ್ತಾ ಕೊಂಚ ಮಂದಗತಿಗೆ ತಿರುಗಿತು. ಕೆಲವರಂತೂ ಸುಸ್ತಾಗಿ ಮಧ್ಯದಲ್ಲಿ ಕುಳಿತೇ ಬಿಟ್ಟರು. ಬೆವರಿ, ಬೆಂಡಾಗಿದ್ದ ನಮಗೆ ಮರಗಳು ತಂಪಾದ ಗಾಳಿ ಬೀಸಿ “ನಡೀರಿ ಮುಂದಕ್ಕೆ, ಮುಂದೆ ಸುಂದರ ದೃಶ್ಯ ನಿಮಗಾಗಿ ಕಾಯ್ತಾ ಇದೆ” ಎಂಬ ಸೂಚನೆ ನೀಡಿದವು. “ನಂಗೆ ಆಗ್ತಾ ಇಲ್ಲ… ನಾನು ಬರಲ್ಲ, ಇಲ್ಲೇ ಕೂರ್ತಿನಿ” ಅಂದವರನ್ನು ಎಬ್ಬಿಸಿ ಮುಂದೆ ನೂಕುವುದೇ ಒಂದು ಸಾಹಸ.

ಹಬ್ಬ…ಹುಸ್ಸಬ್ಬ…ಎಂದು ಏದುಸಿರು ಬಿಡುತ್ತಾ ಆಮೆ ಹೆಜ್ಜೆ ಹಾಕುತ್ತಾ, ಎಷ್ಟು ನಡೀಬೇಕು ಇನ್ನೂ ಎಂದು ಗೊಣಗುತ್ತಾ ಮುಂದೆ ನಡೆದೆವು. ಅಷ್ಟರಲ್ಲಿ ಎಲ್ಲರ ಕಿವಿ ಚುರುಕಾಯಿತು. ಎಲ್ಲೋ ರಭಸದಿಂದ ಧುಮುಕುವ ನೀರಿನ ಸದ್ದು. ಬಾಡಿದ್ದ ಮುಖಗಳು ಈಗ ಅರಳಿ, ಜಲಪಾತ ನೋಡಲು ಪೈಪೋಟಿ ಎಂಬಂತೆ ಓಟಕ್ಕಿಳಿದವು. ಶುಭ್ರ, ಶ್ವೇತ ವರ್ಣದ ಸುಂದರಿಯನ್ನು ಕಣ್ತುಂಬಿಕೊಳ್ಳುತ್ತಾ ನಾನಂತೂ ಮೈಮರೆತು ನಿಂತುಬಿಟ್ಟೆ.

ಗೆಳೆಯರೆಲ್ಲ ಖುಷಿಯಿಂದ ಜೋರಾಗಿ  ಕಿರುಚಲು ಪ್ರಾರಂಭಿಸಿದರು. ವಿಶಾಲ ಕಾನನದ ಹೃದಯ ಭಾಗದಲ್ಲಿ ನೆಲೆಸಿದ್ದ ಜಲಪಾತವನ್ನು ನೋಡಿ ಹಿಂದಿರುಗಲು ಮನಸ್ಸು ಕೇಳಲಿಲ್ಲ. ನೀರಿಗೆ ಮೈಯೊಡ್ಡುವ ಆಸೆಯಾಗಿ ನೀರಿಗೆ ಧುಮುಕಿ ಈಜಾಡಿದೆವು. ಸ್ವಲ್ಪ ಹೊತ್ತು ಅಲ್ಲೇ ಕಳೆದು ಸುಂದರ ನೋಟ ಹಾಗೂ ತಂಪಾದ ಅನುಭವವನ್ನು ನೆನಪುಗಳ ಆಲ್ಬಮ್ ನಲ್ಲಿ ಜೋಡಿಸಿ ಹಿಂತಿರುಗಿದೆವು.

ಸಾರ್ಥಕತೆಯ ಹೊಳಪು ಎಲ್ಲರ ಮೊಗದಲ್ಲೂ ಕಂಗೊಳಿಸುತ್ತಿತ್ತು. ಬೆಳಗ್ಗೆ ಅಪರಿಚಿತರಾಗಿದ್ದವರು, ಪಯಣದ ಕೊನೆಗೆ ಮನ ಬಿಡಲೊಲ್ಲೆ ಎನ್ನುವಷ್ಟು ಆಪ್ತರಾಗಿದ್ದೆವು. ಹೊಸ ಗೆಳೆಯರನ್ನು ಕೊಟ್ಟ ಪ್ರವಾಸಕ್ಕೊಂದು ಥ್ಯಾಂಕ್ಸ್. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

One Comment

Leave a Reply

Your email address will not be published. Required fields are marked *

Back to top button