ಕಾಡಿನ ಕತೆಗಳುವಿಂಗಡಿಸದವಿಸ್ಮಯ ವಿಶ್ವ

ಶೌಚಾಲಯದಲ್ಲಿ 7 ಗಂಟೆ ಒಟ್ಟಿಗೇ ಕಳೆದ ನಾಯಿ ಮತ್ತು ಚಿರತೆ: ಸುಬ್ರಮಣ್ಯದಲ್ಲಿ ವಿಶಿಷ್ಟ ಘಟನೆ

ಕಾಡು ಕಡಿಯಬೇಡಿ, ಕಾಡು ಬರಿದು ಮಾಡಬೇಡಿ ಎಂದು ಪರಿಸರವಾದಿಗಳು ಕೇಳಿಕೊಳ್ಳುತ್ತಿರುವುದಕ್ಕಾಗಿ ಪೂರಕವಾಗಿ ಸುಬ್ರಮಣ್ಯದಲ್ಲೊಂದು ಘಟನೆ ನಡೆದಿದೆ. ಈ ಘಟನೆಯನ್ನು ಓದಿಯಾದರೂ ಜನರು ಕಾಡು ಕಡಿಯುವುದನ್ನು ನಿಲ್ಲಿಸಿ, ಕಾಡು ಉಳಿಯುವಂತೆ ನೋಡಿಕೊಳ್ಳಬಹುದು ಎಂಬ ಆಶಯದಿಂದ ಈ ಬರಹ.

ಬೆಳಿಗ್ಗೆ ಸುಮಾರು ಏಳು ಗಂಟೆಗೆ ದಕ್ಷಿಣ ಕನ್ನಡದ ಸುಬ್ರಮಣ್ಯ ಸಮೀಪದ ಕೈಕಂಬ ಎಂಬ ಮನೆಯ ನಾಯಿಯೊಂದು ಜೋರಾಗಿ ಕಿರುಚಿಕೊಂಡು ಓಡೋಡಿ ಬಂತು. ನೋಡಿದರೆ ಅದನ್ನು ಚಿರತೆ ಅಟ್ಟಿಸಿಕೊಂಡು ಬರುತ್ತಿತ್ತು. ನಾಯಿ ಹೆದರಿ ನೇರವಾಗಿ ಶೌಚಾಲಯಕ್ಕೆ ನುಗ್ಗಿತು. ಅದನ್ನು ಬೆನ್ನಟ್ಟಿಕೊಂಡು ಬಂದ ಚಿರತೆಯೂ ಶೌಚಾಲಯಕ್ಕೆ ಹೋಯಿತು. ಚಿರತೆ ನೋಡಿದ ಆ ಮನೆಯ ಸದಸ್ಯರೊಬ್ಬರು ತಕ್ಷಣ ಆ ಶೌಚಾಲಯದ ಬಾಗಿಲನ್ನು ಮುಚ್ಚಿ ಭದ್ರ ಪಡಿಸಿದ್ದಾರೆ.

ಒಳಗೆ ಚಿರತೆ ಮತ್ತು ನಾಯಿ. ಸ್ವಲ್ಪ ಹೊತ್ತು ಬೊಬ್ಬೆ ಹೊಡೆದ ನಾಯಿ ಮತ್ತು ಚಿರತೆ ಆಮೇಲೆ ಒಂದೊಂದು ಮೂಲೆಯಲ್ಲಿ ಕುಳಿತಿದೆ. ಅಷ್ಟು ಹೊತ್ತಿಗೆ ಮನೆಯವರು ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದರು. ಶೀಘ್ರವೇ ಅಲ್ಲಿಂದ ಒಂದು ತಂಡ ಬಂತು, ಆದರೆ ಏನೂ ಮಾಡುವಂತಿರಲಿಲ್ಲ. ಅರಣ್ಯಾಧಿಕಾರಿಗಳ ಬಳಿ ಪ್ರಜ್ಞೆ ತಪ್ಪಿಸುವ ಸಾಧನಗಳು ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೇಗಾದರೂ ಚಿರತೆಯನ್ನು ಅಲ್ಲಿಂದ ಹೊರತಂದು ನಾಯಿ ರಕ್ಷಣೆ ಮಾಡಬೇಕು ಅನ್ನುವುದು ಎಲ್ಲರ ಮನಸ್ಸು. ನಾಯಿ ಒಂದು ಮೂಲೆಯಲ್ಲಿ ಭಯದಿಂದ ಮಲಗಿತ್ತು. ಚಿರತೆ ಮನಸ್ಸಲ್ಲಿ ಏನಿತ್ತೋ ದೇವರಿಗ್ಗೊತ್ತು. ಜನ ಬಂದರು. ಅಧಿಕಾರಿಗಳು ಬಂದರು. ಕೊನೆಗೆ ಆ ಶೌಚಾಲಯದ ಮೇಲೆ ಮಾಡಿನಂತೆ ಹಾಕಿದ್ದ ಸಿಮೆಂಟ್ ಶೀಟನ್ನು ಜೆಸಿಬಿ ಬಳಸಿಕೊಂಡು ತೆಗೆದು ಬಿಟ್ಟರು. ಅಷ್ಟಾಗುವಾಗ ಮಧ್ಯಾಹ್ನ ಆಗಿತ್ತು. ನಾಯಿ ಜೀವ ಬಿಗಿಬಿಡಿದು ಕುಳಿತಿತ್ತು. ಜನ ಬಂದವರು ಶೌಚಾಲಯದ ಕಿಟಕಿ ಬಳಿ ಹೋಗಿ ಮೊಬೈಲ್ ಹಿಡಿಯುತ್ತಿದ್ದರು. ಚಿರತೆ ಆಕ್ರೋಶದಿಂದ ಜಿಗಿಯುತ್ತಿತ್ತು. ಕೆಲವರಿಗೆ ಬೇಡದ್ದೇ ಕೆಲಸ. ಏನು ಮಾಡುವುದು.

ಮಾಡು ತೆಗೆದ ನಂತರ ಜನ ಸ್ವಲ್ಪ ದೂರವೇ ನಿಂತರು. ಚಿರತೆಗೂ ಜನರನ್ನು ನೋಡಿ ಗಾಬರಿ ಹೆಚ್ಚಾಗಿತ್ತು. ಚಿರತೆಗಳು ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ಓಡುತ್ತವೆ. ನಿಲ್ಲುವುದಿಲ್ಲ. ಈಗ ರಾಶಿ ಬಿದ್ದ ಜನರನ್ನು ನೋಡಿ ಇನ್ನಷ್ಟು ಗಾಬರಿಯಾಗಿರಬಹುದು. ಅದು ತನ್ನ ಜೀವ ಉಳಿಸಿಕೊಳ್ಳಲು ಹಾರಿತು. ಶೌಚಾಲಯದ ಗೋಡೆ ಹಾರಿ ಹೊರಬಂದು ಕಾಡಿನತ್ತ ಜಿಗಿದು ಹೋಯಿತು. ಅಲ್ಲಿಗೆ ಈ ಪ್ರಕರಣ ಸುಖಾಂತ್ಯವಾಗಿದೆ.

ಆದರೆ ಈಗ ಸಮಸ್ಯೆ ನೋಡಬೇಕು. ಚಿರತೆಗಳಿಗೆ ಕಾಡಿನಲ್ಲಿ ಆಹಾರ ಸಿಗದೇ ಇದ್ದಾಗ ಊರಿನತ್ತ ಬರುತ್ತವೆ. ಎಲ್ಲಾ ಪ್ರಾಣಿಗಳೂ ಅಷ್ಟೇ. ಚಿರತೆಗಳು ಕಾಡಿನಲ್ಲಿಯೇ ಇರಬೇಕೆಂದಾದರೆ ಕಾಡಿನಲ್ಲಿಯೇ ಅವುಗಳಿಗೆ ಆಹಾರ ಸಿಗಬೇಕು. ಅದು ಸಾಧ್ಯವಾಗಬೇಕೆಂದಾದರೆ ಕಾಡು ಉಳಿಯಬೇಕು. ಕಾಡು ಉಳಿದರೆ ಅಲ್ಲಿ ಚಿರತೆ ಆಹಾರವಾಗುವಂತಹ ಪ್ರಾಣಿಗಳೂ ಇರುತ್ತವೆ. ಕಾಡಿನ ಸಮತೋಲನ ಚೆನ್ನಾಗಿರುತ್ತದೆ. ಚಿರತೆಗಳು ಆಹಾರ ಹುಡುಕಿಕೊಂಡು ಊರಿಗೆ ಬರುವುದಿಲ್ಲ. ನಾಯಿಗಳಂತಹ ಸಾಕು ಪ್ರಾಣಿ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ಬರುವುದಿಲ್ಲ.

ಪ್ರಕೃತಿಯಲ್ಲಿ ಎಲ್ಲರಿಗೂ ಜಾಗ ಇದೆ. ಅವರವರ ಜಾಗವನ್ನು ಅವರವರಿಗೆ ಕೊಡಬೇಕಾದುದು ನಾವು ಪ್ರಕೃತಿಗೆ ಸಲ್ಲಿಸಬೇಕಾದ ಗೌರವ. ಎಲ್ಲಾ ಜಾಗವೂ ಮನುಷ್ಯರಿಗೇ ಬೇಕು ಅಂತ ಹೊರಟರೆ ಪ್ರಕೃತಿಯೇ ನಮ್ಮನ್ನು ದೂರ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಅದಕ್ಕೆ ಈ ಘಟನೆ ಸಾಕ್ಷಿ. ಇದರೊಂದಿಗೆ ಕುಂದಾಪುರದಲ್ಲಿ ಕಪ್ಪು ಚಿರತೆಯೊಂದು ರೈಲಿಗೆ ಡಿಕ್ಕಿ ಹೊಡೆದು ತೀರಿಕೊಂಡಿದೆ. ಪಾಪ ಅದರ ತಪ್ಪಲ್ಲ. ಅದರ ಜಾಗದಲ್ಲಿ ನಾವು ರಸ್ತೆ ಮಾಡಿಕೊಂಡದ್ದರ ಪರಿಣಾಮ ಅದು. ಆಗಿದ್ದು ಆಗಿ ಹೋಗಿದೆ. ಇನ್ನಾದರೂ ಕಾಡನ್ನು ಗೌರವಿಸಿ ಮತ್ತು ಉಳಿಸಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button