ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಶಿವಮೊಗ್ಗ ಜಿಲ್ಲೆಯಲ್ಲಿ ನೀವು ನೋಡಲು ಮರೆತಿರಬಹುದಾದ ಏಳು ಅಪರೂಪದ ತಾಣಗಳು

ಕೆಲವು ಊರಿಗೆ ಹೋದರೂ ನಾವು ಕೆಲವೊಂದು ಅಪರೂಪದ ತಾಣಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಅಂಥಾ ಏಳು ತಾಣಗಳ ಪರಿಚಯ ಇಲ್ಲಿದೆ.

  1. ಭೀಮೇಶ್ವರ ಕ್ಷೇತ್ರ    

ಭೀಮಲಿಂಗೇಶ್ವರ ದೇವಸ್ಥಾನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸಮೀಪದಲ್ಲಿದೆ. ಸಾಗರ, ಜೋಗದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಸಿಗುವ ಕೋಗಾರಿನಿಂದ ಮೂರು ಕಿಲೋಮೀಟರ್ ದೂರದಲ್ಲಿ ಈ ಭೀಮಲಿಂಗೇಶ್ವರ ದೇವಸ್ಥಾನ ಪ್ರವಾಸಿಗರಿಗೆ ತೆರೆದುಕೊಳ್ಳುತ್ತದೆ. 

ಎರಡು ಕಿಲೋಮೀಟರ್ ಮಣ್ಣು ರಸ್ತೆಯ ಕಾರಣ ವಾಹನಗಳ ಮೂಲಕ ಸಾಗುವುದು ಸ್ವಲ್ಪ ಕಠಿಣ. ಇಳಿಜಾರಿನ ರಸ್ತೆ, ಚಾರಣಕ್ಕೆ ಹೇಳಿಮಾಡಿಸಿಟ್ಟಂತಿರುವ ಜಾಗ. ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ವನವಾಸದ ಸಂದ‘ರ್ದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾದ್ದರಿಂದ ಧರ್ಮರಾಯನು ಕಾಶಿಯಿಂದ ಈಶ್ವರ ಲಿಂಗವನ್ನು ತರಿಸಿ ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ಪ್ರತೀತಿ. 

ಸ್ಥಳೀಯವಾಗಿ ಸಿಗುವ ಕಲ್ಲಿನ ಬಂಡೆಯನ್ನೇ ಹಲಗೆಯನ್ನಾಗಿಸಿ ನಿರ್ಮಿಸಿದ ದೇವಸ್ಥಾನದೆದುರು ಒಂದು ಬೃಹತ್ ಬಂಡೆ ಎರಡು ಹೋಳಾಗಿ ಮಲಗಿದೆ. ಅದಕ್ಕೆ ಪ್ರಮುಖ ಕಾರಣ ದೇವಸ್ಥಾನದ ಬಾಗಿಲಿಗೆ ಬೇಕಾದ ಕಲ್ಲು ಹಲಗೆಯಾಗಿ ಏಳಿಸಲು ಆಗದಿದ್ದಾಗ  ಭೀಮನು ತನ್ನ ಕಾಲಿನಿಂದ ಬಲವಾಗಿ ಒದ್ದ, ಅದು ಎರಡು ಹೋಳಾಯಿತು. ಒಂದು ಹೋಳು ಬಳಕೆಗೆ ಬಂದಿತು ಎನ್ನುತ್ತಾರೆ. 

  1. ಶಿವಪ್ಪ ನಾಯಕ ಅರಮನೆ 

ಮಲೆನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಶಿವಪ್ಪ ನಾಯಕ ಅರಮನೆಯು 18ನೇ ಶತಮಾನದಲ್ಲಿ ಕೆಳದಿಯ ಅರಸರಿಂದ ನಿರ್ಮಾಣಗೊಂಡಿದೆ. ಇದು ಆಗಿನ ಕಾಲದಲ್ಲಿ ಶಿವಪ್ಪನಾಯಕನ ಬೇಸಿಗೆಯ ಮನೆಯಾಗಿತ್ತು. ಎರಡು ಅಂತಸ್ತುಗಳ, ಚೌಕಿ ಮನೆಯಾದ ಇದನ್ನು  ಹೆಂಚಿನ ಮಾಡಿನಿಂದ ಮರ, ಮಣ್ಣು, ಗಚ್ಚುಗಾರೆಯಿಂದ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಅರಮನೆ ವೀಕ್ಷಿಸಲು ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ. 

19ನೇ ಶತಮಾನದವರೆಗೂ ರಾಜ್ಯಅರಣ್ಯ ಇಲಾಖೆಯ ವಶದಲ್ಲಿದ್ದು, ಅರಣ್ಯ ಇಲಾಖೆ ತನ್ನ ಗೋದಾಮನ್ನಾಗಿ ಮಾಡಿಕೊಂಡಿದ್ದ ಈ ಅರಮನೆಯನ್ನು 1980ರ ದಶಕದಲ್ಲಿ ಪತ್ತೆ ಹಚ್ಚಲಾಯಿತು. ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ತನ್ನ ಸುಪರ್ದಿಗೆ ಪಡೆದು ಜೀರ್ಣೋದ್ಧಾರ ಮಾಡಿದೆ. ಅರಮನೆ ಪ್ರಾಂಗಣದಲ್ಲಿರುವ ಕಲ್ಲುಗಳು ಇತಿಹಾಸದ ಕತೆಗಳು ಹೇಳುತ್ತದೆ. ಇಲ್ಲೊಂದು ಮ್ಯೂಸಿಯಂ ಕೂಡ ಇದೆ. ಜಿಲ್ಲೆಯ ಹಲವು ಭಾಗಗಳಿಂದ ಸಂಗ್ರಹಿಸಿದ ಪ್ರಾಚ್ಯ ವಸ್ತುಗಳು ಈ ಪ್ರದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಧಾರ್ಮಿಕ, ರಾಜಕೀಯ ರಂಗಗಳ ಬಗ್ಗೆ ಮಾಹಿತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಹಿಂದೆ ಹೊಸನಗರ ತಾಲೂಕಿನ ಬಿದನೂರಿನಲ್ಲಿ ಸಿಕ್ಕಿದ್ದ ಮೈಸೂರು ರಾಜ್ಯದ ಆಡಳಿತಗಾರ ಹೈದರಾಲಿ ಕಾಲದ ಕಬ್ಬಿಣದ ರಾಕೆಟ್‌ಗಳನ್ನು ಇಲ್ಲಿ ಇಡಲಾಗಿದೆ. ಇದಕ್ಕಾಗಿಯೆ ವಿಶೇಷವಾದ ಬಿದನೂರು ಗ್ಯಾಲರಿ ಸ್ಥಾಪಿಸಲಾಗಿದ್ದು, ರಾಕೆಟ್ ವಿನ್ಯಾಸ, ಯಾವ ಕಾಲದ್ದು, ಕಾರ್ಯನಿರ್ವಹಣೆ ಸೇರಿದಂತೆ ವೈಜ್ಞಾನಿಕವಾಗಿ ನಡೆದಿರುವ ಸಂಶೋಧನೆಗಳನ್ನು ಸಾರುವ ಮಾಹಿತಿ ಲಕಗಳನ್ನು ಹಾಕಲಾಗಿದೆ.

  1. ಕವಲೆದುರ್ಗ 

ಚೆಲುವೆಲ್ಲಾ ತನ್ನದೆನ್ನುವ ತೀರ್ಥಹಳ್ಳಿಯಿಂದ ಸುಮಾರು 16 ಕಿ.ಮೀ. ದೂರದಲ್ಲಿರುವ ಕೆಳದಿ ಅರಸರ ಭುವನಗಿರಿ ದುರ್ಗವೇ ಈ ಕವಲೆದುರ್ಗ.

ದಟ್ಟವಾದ ಅರಣ್ಯದ ನಡುವೆ ಎತ್ತರದ ಗುಡ್ಡದ ಮೇಲೆ ನಿರ್ಮಿಸಲಾಗಿರುವ ಕೋಟೆಯು ಇತಿಹಾಸ ಹಾಗೂ ಅದರ ಪರಂಪರೆಯನ್ನು ಸಾರುತ್ತದೆ. 80 ಎಕರೆಗೂ ಹೆಚ್ಚು ವಿಸ್ತಾರ ಹೊಂದಿರುವ ಈ ಕವಲೇದುರ್ಗ ಕೋಟೆ ಶಿವಪ್ಪ ನಾಯಕನ ಕಾಲದ್ದು. ಮಲ್ಲವ ಅರಸರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ‘ಭುವನಗಿರಿ ದುರ್ಗ’ ಎಂಬ ಹೆಸರಿಟ್ಟು ಆಳ್ವಿಕೆ ನಡೆಸಿದರು.

Ravikiran Ashok Naik

18ನೇ ಶತಮಾನದಲ್ಲಿ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ದಾಳಿಯಿಂದ ಕವಲೇದುರ್ಗ ಕೋಟೆಯ ಸ್ವರೂಪ ಹಾಳಾಗಿದೆ. ಕವಲೆದುರ್ಗ ಆಳುತಿದ್ದ ಕೆಳದಿ ನಾಯಕರು ಆರಂಭದಲ್ಲಿ ವಿಜಯನಗರ ಅರಸರ ಸಾಮಂತರಾಗಿದ್ದರು. ನಂತರ ಸ್ವಾತಂತ್ರ್ಯ ಘೋಷಿಸಿದರು. ವೆಂಕಟಪ್ಪ ನಾಯಕ ಈ ಕೋಟೆಯ ನಿರ್ಮಾತೃ. ವೆಂಕಟಪ್ಪ ನಾಯಕನು ಕವಲೆ ದುರ್ಗವನ್ನೇ ರಾಜಧಾನಿ ಮಾಡಿಕೊಂಡು, ಕೋಟೆ ಬಲಪಡಿಸಿ ಜಲಕಂದರ ನಿರ್ಮಿಸಿ ಇದಕ್ಕೆ ಭುವನಗಿರಿ ದುರ್ಗವೆಂದು ಕರೆದನೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. 

ಕೋಟೆಯ ಆವರಣದಲ್ಲಿ ಅರಮನೆ ಮಹತ್ತಿನ ಮಠ, ಶೃಂಗೇರಿ ಮಠ ಟಂಕಶಾಲೆ, ಕಣಜಗಳು ಆನೆ ಮತ್ತು ಕುದುರೆ ಲಯಗಳಿದ್ದವು. ಕೊಳ ಮತ್ತು ನೀರಿನ ವ್ಯವಸ್ಥೆ ಮಾಡಿ ಇದನ್ನು ಸುಸಜ್ಜಿತ ಅಗ್ರಹಾರವನ್ನಾಗಿ ರೂಪಿಸಲಾಗಿತ್ತು. ಈಗಲೂ ಸಹ ಇವುಗಳನ್ನು ಹಾಳುಬಿದ್ದ ಸ್ಥಿತಿಯಲ್ಲಿ ಕಾಣಬಹುದಾಗಿದೆ. ಗುಡ್ಡದ ರೂಪುರೇಷೆ ಅನುಸರಿಸಿ ಬೃಹತ್ ಕಲ್ಲುಗಳನ್ನು ಬಳಸಿ ಮೂರು ಸುತ್ತಿನ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯ ಇಕ್ಕೆಲಗಳಲ್ಲಿ ಪ್ರತಿ ಸುತ್ತಿನಲ್ಲಿ ಕಾವಲುಗಾರರ ಕೋಠಿ ಸಹಿತ ಪ್ರವೇಶದ್ವಾರವಿದೆ. ಕೋಟೆಯ ತುದಿಯಲ್ಲಿ ಶ್ರೀ ಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ ಹಾಗೂ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.

  1. ಉದ್ದಾಂಜನೇಯ ದೇವಾಲಯ
No photo description available.

ಉದ್ದಾಂಜನೇಯ ಇರುವುದು ಭದ್ರಾವತಿ ತಾಲ್ಲೂಕಿನ ಶಿವನಿ ರಸ್ತೆಯ ಗಂಗೂರು ಗ್ರಾಮದಲ್ಲಿ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಉದ್ದಾಂಜನೇಯ ಕುರಿತು ಹಲವಾರು ಪುರಾಣ ಕಥೆಗಳಿವೆ. ಬಹತ್ ಬಂಡೆಯ ಮೇಲೆ ಶ್ರೀ ವ್ಯಾಸತೀರ್ಥರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ 12ಅಡಿ ಎತ್ತರವಿರುವ ಉದ್ದಾಂಜನೇಯ ದರ್ಶನ ನಿಜಕ್ಕೂ ಆಕರ್ಷಣೀಯ ಎಂದರೆ ತಪ್ಪಾಗಲಾರದು. ಸ್ವಲ್ಪ ದೂರದಲ್ಲಿ ದಟ್ಟ ಕಾನನದ ಮಧ್ಯೆ ಇದ್ದು, ಸದಾ ಪ್ರಕತಿ ಸೌಂದರ್ಯ ತುಂಬಿ ಕೊಂಡು ಭಕ್ತರನ್ನು ತನ್ನಡೆಗೆ ಆಕರ್ಷಿಸುತ್ತಿದೆ. ಸದಾ ತಂಪಾದ ಗಾಳಿ, ನಿಶಬ್ದ, ವಾಹನಗಳ ಕಿರಿಕಿರಿ ಇಲ್ಲ. ಜನದಟ್ಟಣೆ ಇಲ್ಲ. ನಗರ ಪ್ರದೇಶ ದಿಂದ ಬಂದವರಿಗೆ ಪುನಃ ಹಿಂದಿರುಗಿ ಹೋಗುವವರೆಗೂ ನೆಮ್ಮದಿ ಖಚಿತ. 

  1. ಭದ್ರಾವತಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ

ಭದ್ರಾವತಿ ನಗರದ ಹದಯ ಭಾಗದಲ್ಲಿ ಪುರಾಣ ಪ್ರಸಿದ್ಧ 13ನೇ ಶತಮಾನದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಇರುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಭದ್ರಾವತಿ ಕೇವಲ ಉಕ್ಕಿನ ನಗರವಲ್ಲ, ಕಾರ್ಮಿಕರ ನಗರವಲ್ಲ. ಇದೊಂದು ಶಿಲ್ಪಿಗಳ ನೆಲೆಬೀಡು. ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಎಂಬ ಸುಂದರ ದೇವಾಲಯವನ್ನು ಈಗಿನ ಆಧುನಿಕ ಯಂತ್ರಗಳಿಂದಾಗಲಿ ಅಥವಾ ಇಂದಿನ ಶಿಲ್ಪಿಗಳಿಂದಾಗಲಿ ನಿರ್ಮಿಸಲು ಸಾಧವಿಲ್ಲ. ಇದರಿಂದಲೆ ಅರ್ಥವಾಗುತ್ತದೆ ಅಂದಿನ ವೆಂಕಿಪುರ ಅಥವಾ ಬೆಂಕಿಪುರ(‘ದ್ರಾವತಿಯ ಹಳೆಯ ಹೆಸರು)ದಲ್ಲಿ ಮಹಾನ್ ಶಿಲ್ಪಿಗಳು ನೆಲೆಸಿದ್ದರು ಎಂಬುದು.

File:Lakshminarasimha temple at Nuggehalli north western closeup view.jpg

ಈ ದೇವಾಲಯ ಹೊಯ್ಸಳ ಸಾಮ್ರಾಜ್ಯದ ಸಂಕೇತ ಎಂದರೆ ತಪ್ಪಾಗಲಾರದು. ಹೊಯ್ಸಳ ಸಾಮ್ರಾಜ್ಯದ ವೀರನರಸಿಂಹ ತಮ್ಮ ಸಾಮ್ರಾಜ್ಯದೊಳಗಿದ್ದ ವೆಂಕಿ ಮಹರ್ಷಿಗಳಿಗೆ ದರ್ಶನವಿತ್ತ ಈ ಲಕ್ಷ್ಮೀ ನರಸಿಂಹನ ದೇಗುಲಕ್ಕೆ ಪಟ್ಟವೇರಿದ ಆರಂಭದಲ್ಲಿಯೇ ಭೇಟಿ ಕೊಟ್ಟು ಭಕ್ತಿಯಿಂದ ಪೂಜಿಸಿ ಬೇಲೂರು ಹಳೇಬೀಡಿನ ಮಾದರಿಯಲ್ಲಿಯೇ ಈ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವನ್ನು 1226ರಲ್ಲಿ ವ್ಯಯ ನಾಮ ಸಂವತ್ಸರದಂದು ಕಟ್ಟಿಸಿದನು. 

  1. ಹಣಗೆರೆ ಕಟ್ಟೆ 
Hindu Muslim Communal Harmony at Hanagere katte, Shimoga District,  Karnataka - YouTube

ತೀರ್ಥಹಳ್ಳಿ ತಾಲೂಕಿನಲ್ಲಿರುವ ಹಣಗೆರೆ ಕಟ್ಟೆಯಲ್ಲಿ ಒಂದೇ ಸೂರಿನಡಿ ದೇವಾಲಯ ಮತ್ತು ದರ್ಗಾ ಇರುವುದು ವಿಶೇಷವಾದರೆ, ಹಿಂದೂ ಮುಸ್ಲಿಂ ದೇವರುಗಳನ್ನು ಯಾವುದೇ ಭೇದ ಭಾವವಿಲ್ಲದೆ ಒಟ್ಟಾಗಿ ಎರಡೂ ಧರ್ಮದವರು ಪೂಜಿಸುವುದು ಇಲ್ಲಿನ ಮತ್ತೊಂದು ವಿಶೇಷ. ಎರಡು ಧರ್ಮ, ಸಂಸ್ಕೃತಿ, ಆಚರಣೆಗಳ ಸಮ್ಮಿಲನ ಭಾವೈಕ್ಯದ ಕೈಗನ್ನಡಿಯಾಗಿದೆ. ಭಾವೈಕ್ಯ, ಸೌಹಾರ್ದದ ಕೇಂದ್ರವಾಗಿರುವ ಹಣಗೆರೆ ಕಟ್ಟೆಯ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಒಂದೇ ಸೂರಿನಲ್ಲಿ ಭೂತರಾಯ, ಚೌಡೇಶ್ವರಿ ದೇವರು ಹಾಗೂ ಎದುರುಗಡೆ ಸಯ್ಯದ್ ಸಾದತ್ ದರ್ಗಾವನ್ನು ಕಾಣಬಹುದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರೇ ಅರ್ಚಕರಾಗಿ ದೇವರಿಗೆ ಪೂಜೆಯನ್ನು ಸಲ್ಲಿಸಿ, ಹಣ್ಣು ಕಾಯಿಗಳನ್ನು ಅರ್ಪಿಸಿ ಆರಾಧಿಸುತ್ತಾರೆ. ಮುಸ್ಲಿಂ ಜನಾಂಗದವವರು ಸಕ್ಕರೆಯ ಹೊದಿಕೆಯನ್ನು ದೇವರಿಗೊಪ್ಪಿಸಿ, ಅರಬ್ಬೀ ಶ್ಲೋಕಗಳ ಪಠಣದೊಂದಿಗೆ ನವಿಲುಗರಿಯಲ್ಲಿ ತಲೆಸವರಿ, ಸನ್ನಂಗಳವನ್ನು ಹಾರೈಸುವುದು ಇಲ್ಲಿನ ಪದ್ಧತಿಯಾಗಿದೆ. ಎರಡು ‘ರ್ಮದವರು ಈ ಮೂರು ದೇವಸ್ಥಾನಗಳಲ್ಲಿ ಬಂದು ಪ್ರಾರ್ಥಿಸಿ ಹೊರಡುತ್ತಾರೆ. ಹಿಂದೂ ದೇವರನ್ನು ಸುತ್ತಿಬರಲು ಹೊರಟವರು ಮಸೀದಿಯನ್ನು ಸುತ್ತಿಬರುತ್ತಾರೆ.

  1. ಡ್ಯಾಂ ಒಳಗೊಂದು ಡ್ಯಾಂ ಮಡೆನೂರು ಡ್ಯಾಂ

ವಿದ್ಯುತ್ ಉತ್ಪಾದಿಸುವ ಜಲಾಶಯಗಳ ಹೆಸರು ಹೇಳುವಾಗ ನೆನಪಿಗೆ ಬರುವುದು ಪ್ರಮುಖವಾಗಿ ಲಿಂಗನಮಕ್ಕಿ ಜಲಾಶಯ. ಆದರೆ ಲಿಂಗನಮಕ್ಕಿ ಜಲಾಶಯದ ಒಳಗೆ ಇನ್ನೊಂದು ಜಲಾಶಯ ಮುಳುಗಿರುವ, ಅಪರೂಪಕ್ಕೊಮ್ಮೆ ಇದು ಹೊರ ಜಗತ್ತಿಗೆ ಕಾಣಿಸಿಕೊಳ್ಳುವುದು  ಬಹಳ ಜನರಿಗೆ ಗೊತ್ತಿಲ್ಲ.

ಇದೇ ಮಡೆನೂರು ಅಥವಾ ಹಿರೇಭಾಸ್ಕರ ಜಲಾಶಯ. 1939ರ ಅವಧಿಯಲ್ಲಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವ ಕಾಲ. ಆಗ ನಾಲ್ಮಡಿ ಕೃಷ್ಣರಾಜ ಒಡೆಯರ ಕಲ್ಪನೆಯಲ್ಲಿ ಮುಖ್ಯ ಇಂಜಿನಿಯರ ಸುಬ್ಬರಾವ್ ನೇತೃತ್ವದಲ್ಲಿ 144 ಅಡಿ ಎತ್ತರದ 25 ಟಿಎಂಸಿ ಸಾಮರ್ಥ್ಯದ 120 ಮೆ. ವ್ಯಾ. ನಷ್ಟು ವಿದ್ಯುತ್ ಉತ್ಪಾದಿಸುವ ಹಿರೇಭಾಸ್ಕರ್ ಜಲಾಶಯ ನಿರ್ಮಾಣ ಆರಂಭವಾಯಿತು.   1747ರಲ್ಲಿ ಇದು ಪೂರ್ಣಗೊಂಡು 1948ರಲ್ಲಿ ಮಹಾತ್ಮಾಗಾಂಧಿ ವಿದ್ಯುದಾಗಾರದ ಮೂಲಕ ಉತ್ಪಾದನೆ ಆರಂಭಗೊಂಡಿತು. ಸಂಪೂರ್ಣ ಗಾರೆಯಿಂದ ನಿರ್ಮಾಣವಾದ ಇದರಲ್ಲಿ ಅಪರೂಪದ ತಂತ್ರಜ್ಞಾನವಾದ ಸೈಫನ್ ವ್ಯವಸ್ಥೆ ಇತ್ತು. ಆದರೆ ಮತ್ತಷ್ಟು ವಿದ್ಯುತ್ ಉತ್ಪಾದನೆಗಾಗಿ 1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಈ ಜಲಾಶಯ ಅದರಡಿ ಮುಳುಗಿ ಹೋಯಿತು. ಅಪರೂಪದಲ್ಲಿ ಒಮ್ಮೊಮ್ಮೆ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾದಾಗ ಮಡೆನೂರು ಅಣೆಕಟ್ಟು ಹೊರ ಜಗತ್ತಿಗೆ ದರ್ಶನ ನೀಡುತ್ತದೆ. ಈಗಲೂ ಅದೇ ಸುಸ್ಥಿತಿಯಲ್ಲಿಯೇ ಇದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button