ಊಟ, ನಿದ್ದೆ, ತಿಂಡಿ, ಪಯಣ ಎಲ್ಲವೂ ಕಾರಲ್ಲೇ: ಸ್ಟೌ, ಬೆಡ್ ಕಾರಲ್ಲಿಟ್ಟುಕೊಂಡು ದೇಶ ಸುತ್ತುವ ಅಪರೂಪದ ಮಲಯಾಳಿ ಜೋಡಿ
ಊಟ, ನಿದ್ದೆ, ತಿಂಡಿ, ಪಯಣ ಎಲ್ಲವೂ ಕಾರಲ್ಲೇ: ಸ್ಟೌ, ಬೆಡ್ ಕಾರಲ್ಲಿಟ್ಟುಕೊಂಡು ದೇಶ ಸುತ್ತುವ ಅಪರೂಪದ ಮಲಯಾಳಿ ಜೋಡಿ
ಕಾರನ್ನು ಒಂದು ಮನೆಯಂತೆ ಮಾರ್ಪಡಿಸಿಕೊಂಡು, ಕಾರಲ್ಲಿ ಸಂಸಾರ ಮಾಡುತ್ತಾ ದೇಶ ಸುತ್ತುತ್ತಿರುವ ಕೇರಳದ ಜೋಡಿಯ ಹೆಸರು ಹರಿಕೃಷ್ಣನ್ ಮತ್ತು ಲಕ್ಷ್ಮೀ ಕೃಷ್ಣ. ಒನ್ ಫೈನ್ ಡೇ ಕೆಲಸ ಬಿಟ್ಟು, ಕಾರು ಹತ್ತಿ ಹೊರಟವರು ಈಗ ದೇಶದ ಉತ್ತರ ಭಾಗದಲ್ಲಿ ಇದ್ದಾರೆ. ಸುತ್ತುವುದಿನ್ನೂ ಬಾಕಿ ಇದೆ. ದಾರಿ ಇನ್ನೂ ದೂರವಿದೆ. ಈ ಯಂಗ್ ಜೋಡಿಯ ಕತೆ ಅನೇಕರಿಗೆ ದೇಶ ಸುತ್ತುವ ಮತ್ತು ಕತೆ ಹೇಳುವ ಸ್ಫೂರ್ತಿ ನೀಡಿದ್ದಂತೂ ಹೌದು. ಅದಕ್ಕಾಗಿ ಈ ಜೋಡಿಗೆ ಅಭಿನಂದನೆ.
ಬೇರೆ ಬೇರೆ ಊರುಗಳನ್ನು ನೋಡಬೇಕು, ಅಲ್ಲಿನ ಕತೆಗಳನ್ನು ಬೇರೆಯವರಿಗೂ ಹೇಳಬೇಕು ಎಂಬ ಆಸೆಯೊಂದಿದ್ದರೆ ಹೇಗೆ ಬೇಕಾದರೂ ಟೂರ್ ಮಾಡಬಹುದು ಎಂಬುದಕ್ಕೆ ಈ ಕಿರಿಯ ಜೋಡಿಯೇ ಸಾಕ್ಷಿ. ಈ ಹುಡುಗನ ಹೆಸರು ಹರಿಕೃಷ್ಣನ್. 31 ವರ್ಷದ ತರುಣ. ಊರು ಕೇರಳ. ಬೆಂಗಳೂರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ. ಆ ಹುಡುಗಿಯ ಹೆಸರು ಲಕ್ಷ್ಮೀ ಕೃಷ್ಣ. ಗ್ರಾಫಿಕ್ ಡಿಸೈನರ್. ವಯಸ್ಸು 23.
ಮದುವೆ ನಿಶ್ಚಯ ಆದ ಮೇಲೆ ಇಬ್ಬರಿಗೂ ತಮ್ಮ ಕನಸು ಒಂದೇ ಅನ್ನುವುದು ಗೊತ್ತಾಯಿತು. ಜಗತ್ತು ಸುತ್ತುವ ಆಸೆ ಇದ್ದ ದಂಪತಿ ಅವರು. ಯಾವಾಗ ಮದುವೆ ಆಯಿತೋ ಅವತ್ತಿನಿಂದ ಒಂದು ದೊಡ್ಡ ಪಯಣ ಹೊರಡುವ ಕನಸು ಕಂಡರು. ಒಮ್ಮೆ ಬೈಕಿನಲ್ಲಿ ಥಾಯ್ ಲ್ಯಾಂಡ್ ಟೂರು ಹೋಗುವುದು ಅಂತಂದುಕೊಂಡರು. ಆಮೇಲೆ ಅದನ್ನು ಕೈಬಿಟ್ಟು ಕಾರಲ್ಲಿ ದೇಶ ಸುತ್ತುವ ತೀರ್ಮಾನ ತೆಗೆದುಕೊಂಡರು.
ಒಂದು ಕಾರು ತೆಗೆದುಕೊಂಡು ಅದರ ಹಿಂದಿನ ಸೀಟನ್ನು ತೆಗೆದು ಹಾಸಿಗೆಯನ್ನಾಗಿ ಮಾಡಿಕೊಂಡರು. ಲ್ಯಾಪ್ ಕೂಲಿಂಗ್ ಪ್ಯಾಡ್ ನಿಂದ ಎಕ್ಸಾಸ್ಟ್ ಫ್ಯಾನ್ ರೆಡಿ ಮಾಡಿದರು. ಅದಕ್ಕೆ ಯೂಎಸ್ ಬಿ ಕೇಬಲ್ ತಾಗಿಸಿ ಪವರ್ ಬ್ಯಾಂಕ್ ಚಾರ್ಜ್ ಮಾಡುವ ವ್ಯವಸ್ಥೆ ರೂಪಿಸಿದರು. ಹಿಂದಿನ ಕಿಟಕಿ ಗ್ಲಾಸುಗಳಿಗೆ ಕಪ್ಪು ಪ್ಲಾಸ್ಟಿಕ್ ಹಾಕಿದರು. ಒಂದು ಸ್ಟೌ ಮತ್ತು ಐದು ಕೆಜಿ ಗ್ಲಾಸ್ ಸಿಲಿಂಡರ್ ಕಾರಲ್ಲಿ ಇಟ್ಟರು. ಒನ್ ಫೈನ್ ಡೇ ಇಬ್ಬರೂ ಕೆಲಸಕ್ಕೆ ರಾಜೀನಾಮೆ ನೀಡಿ ದೇಶ ಸುತ್ತಲು ಹೊರಟರು.
ಅಲ್ಲಿಂದ ಅವರ ಜೀವನ ನಡೆಯುವುದೇ ಕಾರಿನಲ್ಲಿ. ಊಟ, ತಿಂಡಿ, ನಿದ್ದೆ ಎಲ್ಲವೂ ಕಾರಲ್ಲೇ. ಈಗಾಗಲೇ ಅವರು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮತ್ತು ರಾಜಸ್ಥಾನ ರಾಜ್ಯಗಳನ್ನು ಸುತ್ತಿದ್ದಾರೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಅವರ ಬಕೆಟ್ ಲಿಸ್ಟಲ್ಲಿದೆ. ಅಲ್ಲಿಂದ ಅವರು ಮತ್ತೆ ಕೇರಳಕ್ಕೆ ಮರಳಲಿದ್ದಾರೆ.
ಅವರು ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲಿನ ಕತೆಗಳನ್ನೆಲ್ಲಾ ತಮ್ಮ ಟಿನ್ ಪಿನ್ ಸ್ಟೋರ್ಸ್ ಎಂಬ ಯೂಟ್ಯೂಬ್ ಚಾನಲ್ಲಿನಲ್ಲಿ ಹೇಳಿಕೊಳ್ಳುತ್ತಾರೆ. ಅವರ ಪ್ರವಾಸ ಕತೆಗಳಿಗೆ ಸಾವಿರಾರು ಮಂದಿ ಪ್ರೇಕ್ಷಕರು ಸೃಷ್ಟಿಯಾಗಿದ್ದಾರೆ. ಅವರು ದಾರಿಯಲ್ಲಿ ಕಾರು ನಿಲ್ಲಿಸಿ ಅಡುಗೆ ಮಾಡುವುದು, ಕ್ಯಾನ್ ಇಟ್ಟುಕೊಂಡು ಎಲ್ಲಿ ಒಳ್ಳೆಯ ನೀರು ಸಿಗುತ್ತದೋ ಅದನ್ನು ತುಂಬಿಕೊಳ್ಳುವುದು, ಒಟ್ಟಾರೆ ಕಾರಲ್ಲೇ ಬದುಕುತ್ತಿರುವುದು ತುಂಬಾ ಇಂಟರೆಸ್ಟಿಂಗ್ ಅನ್ನಿಸಿದೆ.
ಈ ಜೋಡಿಗೆ ತುಂಬಾ ಸಮಸ್ಯೆ ಆಗಿದ್ದು ಕೊರೋನಾ ಶುರುವಾದ ಮೇಲೆ. ಅನೇಕ ಕಡೆ ಕಾರು ನಿಲ್ಲಿಸಲು ಆಗದ ಕಡೆ ಹೋಟೆಲಲ್ಲಿ ಉಳಿದುಕೊಳ್ಳಬೇಕಾಯಿತು. ಅದಕ್ಕೆ ಬಜೆಟ್ ಕಡಿಮೆಯಾಯಿತು. ಈಗ ಯೂಟ್ಯೂಬ್ ವಿಡಿಯೋಗಳಿಂದ ಹಣ ಗಳಿಸುತ್ತಿರುವುದರಿಂದ ಅವರಿಗೆ ಒಳಿತಾಗಿದೆ.
ಬೇರೇನೂ ಸಮಸ್ಯೆಯಾಗದಿದ್ದರೂ ರಾತ್ರಿ ಹೊತ್ತು ಕಾರು ಪಾರ್ಕ್ ಮಾಡಲು ಸೇಫ್ ಜಾಗ ಹುಡುಕುವುದು ಸ್ವಲ್ಪ ಕಷ್ಟವಾಗುತ್ತಿತ್ತು ಅನ್ನುವುದು ಹರಿಕೃಷ್ಣನ್ ಮಾತು. ಹಾಗಾಗಿ ಸ್ವಲ್ಪ ಮಲಗುವುದು ತಡವಾಗುತ್ತಿತ್ತು. ಯಾವಾಗ ಕಾರು ಪಾರ್ಕ್ ಮಾಡುವ ಸಮಯ ಬರುತ್ತದೋ ಆವಾಗ ಸ್ವಲ್ಪ ಸಮಯ ಮೊದಲೇ ಲಕ್ಷ್ಮಿ ಮಲಗುತ್ತಿದ್ದರು. ಹರಿ ಒಬ್ಬರೇ ಡ್ರೈವ್ ಮಾಡಿಕೊಂಡು ಪೆಟ್ರೋಲ್ ಬಂಕ್ ಸಮೀಪದ ಸೇಫ್ ಪ್ಲೇಸ್ ಅನ್ನಿಸಿದ ಜಾಗದಲ್ಲಿ ಕಾರು ನಿಲ್ಲಿಸಿ ನಿದ್ದೆ ಮಾಡುತ್ತಿದ್ದರು.
ಹೀಗೆ ಸುಮಾರು ರಾಜ್ಯಗಳನ್ನು ಸುತ್ತಿದ್ದಾಗಿದೆ. ಅಲ್ಲಿನ ಹಳ್ಳಿಯ ಕತೆಯಗಳನ್ನು ತಿಳಿದಾಗಿದೆ. ರುಚಿರುಚಿಯ ಆಹಾರ ಸವಿದಾಗಿದೆ. ಇನ್ನೂ ದಾರಿ ತುಂಬಾ ದೂರವಿದೆ. ಈ ಯಂಗ್ ಜೋಡಿಯ ಕತೆ ಅನೇಕರಿಗೆ ದೇಶ ಸುತ್ತುವ ಮತ್ತು ಕತೆ ಹೇಳುವ ಸ್ಫೂರ್ತಿ ನೀಡಿದ್ದಂತೂ ಹೌದು. ಅದಕ್ಕಾಗಿ ಈ ಜೋಡಿಗೆ ಅಭಿನಂದನೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.
ಬನ್ನಿ ಜೊತೆಯಾಗಿ