ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಉತ್ತರ ಕನ್ನಡದಲ್ಲಿ ನೀವು ನೋಡಿ ಪರವಶರಾಗಬಹುದಾದ 7 ದೇಗುಲಗಳು: ಭಾಗ 2

ಉತ್ತರ ಕನ್ನಡ ಅತ್ಯಂತ ಚಂದದ ಊರು. ಜಲಪಾತಗಳು, ದೇಗುಲಗಳು, ಕಾಡು ರಸ್ತೆ, ಕಡಲ ತೀರ, ಹಾಡುಗಳು, ಕೃಷಿ ಎಲ್ಲವೂ ಇರುವ ಮ್ಯಾಜಿಕ್ ತಾಣ. ಅಲ್ಲಿ ಶಿಲ್ಪಕಲೆಯಿಂದ, ಪ್ರಕೃತಿ ವೈಭವದಿಂದ ಕಾಡುವ, ಮರುಳುಗೊಳಿಸುವ ದೇವ ಸನ್ನಿಧಿಗಳಿವೆ. ಅವುಗಳ ಪರಿಚಯ ಇಲ್ಲಿದೆ. ಯಾವತ್ತಾದರೊಂದು ದಿನ ಹೋಗಿ ಬರುವುದು ನಿಮ್ಮಿಷ್ಟ. ದೈವೇಚ್ಛೆ.

ಇಲ್ಲಿ 7 ದೇಗುಲಗಳ ಪರಿಚಯವಿದೆ. ಇನ್ನೂ 8 ದೇವಾಲಯಗಳ ಪರಿಚಯ ಭಾಗ 1ರಲ್ಲಿ ಓದಬಹುದು.

  1. ಯಾಣದ ಭೈರವೇಶ್ವರ

ಭೈರವೇಶ್ವರ ಹಾಗೂ ಮೋಹಿನಿ ಎರಡು ಬೃಹತ್ ಶಿಖರಗಳು. 64ರಷ್ಟು ಚಿಕ್ಕಪುಟ್ಟ ಶಿಖರಗಳು ಇಲ್ಲಿನ ವಿಶೇಷ. ಭೈರವೇಶ್ವರ ಶಿಖರದಲ್ಲಿ ಗುಹಾಂತರ್ಗತ ದೇವರು. ಭೈರವೇಶ್ವರನ ಜಟೆಯ ಮೇಲೆ ಗಂಗೆ ಜಿನುಗುತ್ತಿರುವುದು ಅಚ್ಚರಿ. ಶಿಖರದ ರಚನೆ ಅದ್ಭುತವಾದುದು. ನಿತ್ಯಹರಿದ್ವರ್ಣ ಕಾಡು. ಸದಾ ಹರಿಯುತ್ತಿರುವ ನೀರು ಇಲ್ಲಿನ ಸೊಬಗನ್ನು ಇಮ್ಮಡಿಗೊಳಿಸಿದೆ. ಲೈಮ್ ಸ್ಟೋನ್ ನಿಂದ ನಿರ್ಮಾಣಗೊಂಡ ಶಿಖರಗಳಿವು. 

ಕುಮಟಾ ತಾಲೂಕಿನ ಯಾಣ. ಕುಮಟಾ ತಾಲೂಕು ಕೇಂದ್ರದಿಂದ 26 ಕಿ.ಮೀ.ದೂರದಲ್ಲಿದೆ. ಕುಮಟಾ ಶಿರಸಿ ರಸ್ತೆಯ ಆನೆಗುಂದಿ ಬಳಿಯಿಂದ 12 ಕಿ.ಮೀ. ದೂರ ಇದೆ. 2 ಕಿ.ಮೀ.ಕಾಲ್ನಡಿಗೆಯಲ್ಲಿ ಸಾಗಬೇಕು. ಶಿರಸಿ-ವಡ್ಡಿಗಟ್ಟ- ಆಚವೆ ರಸ್ತೆಯಿಂದಲೂ ಯಾಣಕ್ಕೆ ಬರಬಹುದು. ಶಿರಸಿಯಿಂದ 35 ಕಿ.ಮೀ.ದೂರ ಇದೆ. 

2. ಇಡಗುಂಜಿ ಮಹಾಗಣಪತಿ

ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ವಿಘ್ನ ನಿವಾರಕ ಗಣಪ ಎಂದು ಪ್ರಸಿದ್ಧಿ ಪಡೆದಿದೆ. ಗಣೇಶ ಚತುರ್ಥಿ, ಪ್ರತಿ ಸಂಕಷ್ಟ ಚತುರ್ಥಿಯಂದು ಅಪಾರ ಜನರು ಸೇರುತ್ತಾರೆ. ಹೊನ್ನಾವರ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ 18 ಕಿ.ಮೀ.ದೂರದಲ್ಲಿದೆ. ಶರಾವತಿ ನದಿಯ ಸಮೀಪದಲ್ಲಿದೆ. 

3. ಕವಳಾ ಗುಹೆ

ಜೋಯಿಡಾ ತಾಲೂಕಿನ ಕಗ್ಗಾಡಿನಲ್ಲಿ ಗುಹೆಯೊಳಗೆ ಇರುವ ಪ್ರಕೃತಿ ನಿರ್ಮಿತ 5 ಅಡಿ ಎತ್ತರದ ದೇವರು ಕವಳೇಶ್ವರ. ದೇವರ ಮೇಲೆ ನೈಸರ್ಗಿಕವಾಗಿ ನೀರಿನ ಅಭಿಷೇಕವಾಗುತ್ತದೆ. ಪ್ರತಿ ಶಿವರಾತ್ರಿಯಂದು ಸಾವಿರಾರು ಜನರು ಈ ದೇವರ ದರ್ಶನ ಪಡೆಯುತ್ತಾರೆ. ಸಮುದ್ರಮಟ್ಟದಿಂದ 3200 ಅಡಿ ಎತ್ತರವಿದೆ. 

ದಾಂಡೇಲಿಯಿಂದ 16 ಕಿ.ಮೀ.ದೂರ ಇದೆ. ದಾಂಡೇಲಿ ಅಂಬಿಕಾನಗರ ರಸ್ತೆಯಲ್ಲಿ 15 ಕಿ.ಮೀ.ಸಾಗಿ ಪಣಸೋಲಿ ಎಂಬಲ್ಲಿಂದ ಕಾಲ್ನಡಿಗಯಲ್ಲಿ ಸುಮಾರು 1 ಕಿ.ಮೀ.ನಷ್ಟು ಮೆಟ್ಟಿಲೇರಬೇಕು.

4. ಗುಂಡಬಾಳ ಮುಖ್ಯಪ್ರಾಣ ದೇವಾಲಯ 

ಹೊನ್ನಾವರದಿಂದ ಪೂರ್ವಕ್ಕೆ 13ಕಿ.ಮೀ ದೂರದಲ್ಲಿರುವ ಗುಂಡಬಾಳೆ ಶರಾವತಿ ಕೊಳ್ಳದ ಪ್ರಮುಖ ಗ್ರಾಮ. ಯಕ್ಷಗಾನ ಕಲೆಯ ತವರು. ಇಲ್ಲಿಯ ಮುಖ್ಯ ಪ್ರಾಣ ದೇವರಾದ ಹನುಮಂತ ಅತ್ಯಂತ ಪ್ರಭಾವಶಾಲಿ, ಶಕ್ತಿಯುತ ಹಾಗೂ ಕಲಾಪೋಷಕ. ಹನುಮಂತ ದೇವರಿಗೆ ಯಕ್ಷಗಾನ ಅಂದರೆ ಪಂಚಪ್ರಾಣ. ಹೀಗಾಗಿ ವರ್ಷದ 8 ತಿಂಗಳು ನಿತ್ಯ ಯಕ್ಷಗಾನ ಆಟಗಳು ನಡೆಯುತ್ತಲೇ ಇರುತ್ತವೆ. ಭಕ್ತರು ಹರಕೆಯ ರೂಪದಲ್ಲಿ ಯಕ್ಷಗಾನದ ಸೇವೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ. ಯಕ್ಷಗಾನದ ಹರಕೆಯನ್ನು 8-10 ವರ್ಷಗಳ ಮುಂಚೆಯೇ ಕಾಯ್ದಿರಿಸಬೇಕು. ಅಂದರೆ ಭಕ್ತರು ಸಲ್ಲಿಸುವ ಹರಕೆಯ ಯಕ್ಷಗಾನಕ್ಕೆ ಇತಿಮಿತಿಗಳಿಲ್ಲ. ಈ ರೀತಿಯಲ್ಲಿ ಯಕ್ಷಗಾನ ನಡೆಯುವ ಸ್ಥಳವನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಯಕ್ಷಗಾನಕ್ಕೆ ಸಂಬಂಧಪಟ್ಟ ರಂಗವೇದಿಕೆ, ಬಣ್ಣದ ಮನೆ ಹೀಗೆ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ದೇವಸ್ಥಾನದ ಹೆಸರಿನ ಶ್ರೀ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಳಿ ಗುಂಡಬಾಳೆ ಮೇಳದ ಆಟ ನಿತ್ಯ ನಡೆಯುತ್ತಿರುತ್ತದೆ.

ಹೊನ್ನಾವರದಿಂದ 13 ಕಿ.ಮೀ.ದೂರ ಇದೆ. ಹೊನ್ನಾವರ -ಸಾಗರ ರಸ್ತೆಯಲ್ಲಿ 10 ಕಿ.ಮೀ.ಕ್ರಮಿಸಿ ಹಡಿನಬಾಳ ಬಳಿ ಎಡಗಡೆ ರಸ್ತೆಯಲ್ಲಿ 3 ಕಿ.ಮೀ.ಹೋಗಬೇಕು. ಬೆಂಗಳೂರಿನಿಂದ 410 ಕಿ.ಮೀ.ದೂರ ಇದೆ. 

5. ಚಿತ್ರಾಪುರ ಮಠ ಶಿರಾಲಿ

File:Shirali Math.jpg

ಪ್ರಾಚೀನ ಹಿನ್ನೆಲೆಯಿರುವ ಈ ಮಠದಲ್ಲಿ ಹಿಂದಿನ 6 ಯತಿವರ್ಯರ ಸಮಾಧಿ ಸ್ಥಳಗಳು ಇವೆ. ಇಲ್ಲಿರುವ ವಸ್ತು ಸಂಗ್ರಹಾಲಯ ಗಮನ ಸೆಳೆಯುತ್ತದೆ. ಅನೇಕ ಪ್ರಾಚ್ಯ ಮೂರ್ತಿಗಳು, ಶಾಸನಗಳು, ತಾಮ್ರ ಪಟಗಳು, ನಾಣ್ಯಗಳು ಇಲ್ಲಿವೆ. ಭವಾನಿ-ಶಂಕರ ಮಠದ ಆದಿ ದೇವರು. ಇಲ್ಲಿ ನಡೆಯುವ ವಿಧಿವಿಧಾನಗಳು, ಪೂಜೆ ಉತ್ಸವಗಳಲ್ಲಿ ಅಸಂಖ್ಯಾತ ಭಕ್ತರು ನಾಡಿನ ಎಲ್ಲೆಡೆಯಿಂದ ಆಗಮಿಸಿ ಪಾಲ್ಗೊಳ್ಳುತ್ತಾರೆ. ಆಧುನಿಕವಾದ ಗೋಶಾಲೆ, ವಸತಿ ವ್ಯವಸ್ಥೆ, ಆಸ್ಪತ್ರೆ, ಸಂಸ್ಕೃತಿಯ ಪಾಠಶಾಲೆ, ಅತಿಥಿಗೃಹ, ಎಲ್ಲವೂ ಶಿಸ್ತುಬದ್ಧವಾಗಿವೆ. ಮಠದ ಪ್ರಾಕಾರದಲ್ಲಿ ಗೋಪಾಲಕೃಷ್ಣ, ದತ್ತಾತ್ರೇಯ, ಶಾಂತಾದುರ್ಗ, ಕೇಶವನಾರಾಯಣ ಮಂದಿರಗಳಿವೆ.

ಭಟ್ಕಳದಿಂದ 6 ಕಿ.ಮೀ.ದೂರ ಇದೆ. ಭಟ್ಕಳದಿಂದ ಹೊನ್ನಾವರದತ್ತ ತೆರಳುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರಾಲಿ ಬಳಿ ಚಿತ್ರಾಪುರ ಮಠ ಇದೆ. ಬೆಂಗಳೂರಿನಿಂದ 480 ಕಿ.ಮೀ.ಇದೆ.

6. ಆರ್ಯಾದುರ್ಗಾ ದೇವಾಲಯ

ಪಶ್ಚಿಮ ಘಟ್ಟಗಳ ಸಾಲು, ಅರಬ್ಬಿ ಸಮುದ್ರ, ತೆಂಗು, ಮಾವುಗಳ ನೆಡುತೋಪು ಇವುಗಳ ನಡುವೆ ಗೋವಾ, ಮಹಾರಾಷ್ಟ್ರ, ಗುಜರಾತ ಹಾಗೂ ಇನ್ನಿತರ ಅನೇಕ ಕಡೆಗಳಿಂದ ‘ಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವ ಪುರಾಣ ಪ್ರಸಿದ್ಧ ಆರ್ಯಾದುರ್ಗಾ ದೇವಿಯ ಮಂದಿರ ಅಂಕೋಲಾದ ದಕ್ಷಿಣ ದಿಕ್ಕಿನಲ್ಲಿ ಇರುವ ವಂದಿಗೆ ಗ್ರಾಮದ ಹನುಮಟ್ಟೆಯಲ್ಲಿ ಇದೆ. ಭಕ್ತರ ಇಷ್ಟಾರ್ಥವನ್ನು ಪೂರೈಸುವ ಈ ಶಕ್ತಿ ಭಕ್ತರು ಅಪಾರ ಸಂಖ್ಯೆಯಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ.

ಅಂಕೋಲಾದಿಂದ 1 ಕಿ.ಮೀ.ದೂರ ಇದೆ. ಬೆಂಗಳೂರಿನಿಂದ 460 ಕಿ.ಮೀ.ದೂರದಲ್ಲಿದೆ. 

7. ಕಾತ್ಯಾಯಿನಿ ಬಾಣೇಶ್ವರ ದೇವಾಲಯ ಅವರ್ಸಾ

ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಪಡೆದ ಪುರಾತನ ಸ್ಥಳ ಅವರ್ಸಾ. ಕಾತ್ಯಾಯಿನಿ ದೇವಿಯ ಭವ್ಯ ಮಂದಿರವಿದೆ. ಈ ದೇವಾಲಯದ ಚರಿತ್ರೆ ಕುತೂಹಲಕಾರಿ ಹಾಗೂ ಭಕ್ತಿ ಪ್ರಧಾನವಾದುದಾಗಿದೆ. ನಾವೆ ಅಥವಾ ಹಡಗಿನ ಸಂರಕ್ಷಣೆಯ ಕಥೆಯಿಂದ ನಿರ್ಮಾಣಗೊಂಡ ದೇವಸ್ಥಾನ ಇದು. ಹಾಗಾಗಿಯೇ ಗುಡಿಯ ಛಾವಣಿ ಹಡಗಿನಂತೆ ಕಂಡುಬರುತ್ತದೆ. ದೇವಿಯ ಮೂರ್ತಿಯನ್ನು ಗೋವಾದಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಇಲ್ಲಿಯ ಪೂಜಾ ವಿ‘ನಗಳಲ್ಲಿ ಕೂಡಾ ಗೋವಾದಲ್ಲಿರುವ ಆಚರಣೆಗಳೇ ಕಂಡುಬರುತ್ತವೆ. 

ಅಂಕೋಲಾ ತಾಲೂಕಿನಲ್ಲಿದೆ. ಅಂಕೋಲಾದಿಂದ 16 ಕಿ.ಮೀ.ದೂರ ಇದೆ. ಬೆಂಗಳೂರಿನಿಂದ 460 ಕಿ.ಮೀ.ದೂರ ಇದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button