ಕಾರು ಟೂರುದೂರ ತೀರ ಯಾನಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಚಂದದ ಊರು ಉತ್ತರ ಕನ್ನಡದಲ್ಲಿ ನೀವು ನೋಡಿ ಪರವಶರಾಗಬಹುದಾದ 8 ದೇಗುಲಗಳು: ಭಾಗ 1

ಉತ್ತರ ಕನ್ನಡ ಅತ್ಯಂತ ಚಂದದ ಊರು. ಜಲಪಾತಗಳು, ದೇಗುಲಗಳು, ಕಾಡು ರಸ್ತೆ, ಕಡಲ ತೀರ, ಹಾಡುಗಳು, ಕೃಷಿ ಎಲ್ಲವೂ ಇರುವ ಮ್ಯಾಜಿಕ್ ತಾಣ. ಅಲ್ಲಿ ಶಿಲ್ಪಕಲೆಯಿಂದ, ಪ್ರಕೃತಿ ವೈಭವದಿಂದ ಕಾಡುವ, ಮರುಳುಗೊಳಿಸುವ ದೇವ ಸನ್ನಿಧಿಗಳಿವೆ. ಅವುಗಳ ಪರಿಚಯ ಇಲ್ಲಿದೆ. ಯಾವತ್ತಾದರೊಂದು ದಿನ ಹೋಗಿ ಬರುವುದು ನಿಮ್ಮಿಷ್ಟ. ದೈವೇಚ್ಛೆ.

ಇಲ್ಲಿ 8 ದೇಗುಲಗಳ ಪರಿಚಯವಿದೆ. ಇನ್ನೂ ಏಳು ದೇವಾಲಯಗಳ ಪರಿಚಯ ಭಾಗ 2ರಲ್ಲಿ ಓದಬಹುದು.

1.ಬನವಾಸಿ ಮಧುಕೇಶ್ವರ

ಶಿರಸಿಯಿಂದ ಕೇವಲ 20 ಕಿ.ಮೀ.ದೂರ. ಕನ್ನಡದ ಪ್ರಥಮ ರಾಜಧಾನಿ. ಕದಂಬರ ದೊರೆ ಮಯೂರವರ್ಮ, ಆದಿ ಕವಿ ಪಂಪನ ನೆಲೆವೀಡು. ಬನವಾಸಿಯ ಮಧುಕೇಶ್ವರ ದೇವಾಲಯ, ಏಕಶಿಲಾ ಆಸ್ಥಾನ ಮಂಟಪ ಹಾಗೂ ತ್ರಿಲೋಕ ಮಂಟಪಗಳು ಇಲ್ಲಿನ ವಿಶೇಷತೆ. ಮಧುಕೇಶ್ವರ ದೇವಾಲಯವೂ ಶಿಲೆಯಿಂದ ನಿರ್ಮಿತವಾಗಿದೆ. ಐತಿಹಾಸಿಕ ತಾಣವಾದ ಇಲ್ಲಿ ಪ್ರತಿವರ್ಷ ಕದಂಬೋತ್ಸವ ನಡೆದು ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಹುಬ್ಬಳ್ಳಿಯಿಂದ 120 ಕಿ.ಮೀ.ದೂರದಲ್ಲಿದೆ. ವರದಾ ನದಿಯ ತೀರದಲ್ಲಿರುವ ಇದು ಪ್ರವಾಸಿ ತಾಣವೂ ಹೌದು.

2. ಮಾರಿಕಾಂಬೆ ದೇವಾಲಯ

ಶಿರಸಿ ನಗರದಲ್ಲಿರುವ ಮಾರಿಕಾಂಬಾ ದೇವಾಲಯ ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಎರಡು ವರ್ಷಗಳಿಗೊಮ್ಮೆ  ನಡೆಯುವ ಮಾರಿ ಜಾತ್ರೆ. ರಾಜ್ಯದ ಅತ್ಯಂತ ದೊಡ್ಡ ಜಾತ್ರೆಯಾಗಿದೆ. ಲಕ್ಷಾಂತರ ಜನರು ಈ ಜಾತ್ರೆಯಲ್ಲಿ ಸೇರುವುದು ವಿಶೇಷವಾಗಿದೆ. ಸೋದೆ ಅರಸರ ಕಾಲದಿಂದ ಈ ದೇವಾಲಯ ಹೆಚ್ಚು ಅಭಿವೃದ್ಧಿಗೊಂಡಿತು. ದೇವಾಲಯದ ಹೊರಗಡೆ ಗೋಡೆಯ ಮೇಲಿರುವ ಸಾಂಪ್ರದಾಯಿಕ ಕಾವಿ ಚಿತ್ರ ಚಿತ್ತಾಕರ್ಷಕವಾಗಿದೆ. 1668ರಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಬೆಂಗಳೂರಿನಿಂದ 400 ಕಿ.ಮೀ.ದೂರದಲ್ಲಿದೆ. ಶಿರಸಿ ನಗರದಲ್ಲೆ ದೇವಾಲಯ ಇದೆ.

3. ಮುರುಡೇಶ್ವರ

ನೈಸರ್ಗಿಕ ಚೆಲುವು ಹಾಗೂ ಮಾನವ ನಿರ್ಮಿತ ಅದ್ಭುತದಿಂದ ಮುರುಡೇಶ್ವರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. 64 ಅಂತಸ್ತುಗಳ ಗೋಪುರ, ಬೃಹತ್ ಶಿವನ ಪ್ರತಿಮೆ, ಹಿತೋಪದೇಶದ ಪ್ರತಿಮೆ, ಪೌರಾಣಿಕ ಪ್ರತಿಮೆಗಳಿರುವ ಗುಹೆ, ಚಿಕ್ಕಮಕ್ಕಳಿಗೆ ಆಟವಾಡಲು ಕೃತಕ ಸಮುದ್ರ ಇವೆಲ್ಲವೂ ಇಲ್ಲಿ ನಿರ್ಮಾಣಗೊಂಡಿದೆ. ಜತೆಗೆ ಆತ್ಮಲಿಂಗದ ತುಣುಕು ಇಲ್ಲಿದೆ ಎಂಬ ಪ್ರತೀತಿ. ಇದೊಂದು ಭಕ್ತಿ ಹಾಗೂ ಪ್ರವಾಸಿ ತಾಣವಾಗಿದೆ. ಕಡಲತೀರದಲ್ಲಿ ವಿವಿಧ ಬಗೆಯ ಜಲ ಸಾಹಸ ಕ್ರೀಡೆಗಳಿವೆ. 

ಮುರುಡೇಶ್ವರ ಭಟ್ಕಳ ತಾಲೂಕಿನಲ್ಲಿದೆ. ಹೊನ್ನಾವರ ತಾಲೂಕಿನಿಂದಲೂ ಹೋಗಬಹುದು. ಪೌರಾಣಿಕ ಹಿನ್ನೆಲೆ ಇರುವ ದೇವಾಲಯ, ಆಧುನೀಕತೆಯ ಮೇಳೈಸುವಿಕೆಯಿಂದ ಮುರುಡೇಶ್ವರ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಭಟ್ಕಳದಿಂದ ಹೊನ್ನಾವರದತ್ತ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಕಿ.ಮೀ.ಕ್ರಮಿಸಿ, ಎಡಕ್ಕೆ 2 ಕಿ.ಮೀ. ಹೋದರೆ ಮುರುಡೇಶ್ವರ. ಭಟ್ಕಳ ಹಾಗೂ ಹೊನ್ನಾವರದಿಂದ ಹೋಗಬಹುದು. ಸಾರಿಗೆ ಸಂಸ್ಥೆ ಬಸ್ ಇದೆ. ಕಾರು, ಆಟೋಗಳೂ ಲಭ್ಯವಿದೆ.

4. ಕರಿಕಾನ ಪರಮೇಶ್ವರಿ ದೇವಾಲಯ

ಹೊನ್ನಾವರ ತಾಲೂಕಿನ ಅರೆ ಅಂಗಡಿ ಎಂಬಲ್ಲಿಂದ ಸುಮಾರು 5 ಕಿ.ಮೀ.ನಷ್ಟು ಕಡಿದಾದ ಗುಡ್ಡ ಏರಬೇಕು. ವಾಹನಗಳಲ್ಲಿ ತೆರಳಬಹುದು. ಎತ್ತರದ ಸ್ಥಳದಲ್ಲಿ ದಟ್ಟ ಅರಣ್ಯದಲ್ಲಿ ಇರುವ ಈ ಕರಿಕಾನ ಪರಮೇಶ್ವರಿ ದೇವಾಲಯ ಪ್ರವಾಸಿ ತಾಣವೂ ಹೌದು. ಶ್ರೀಧರ ಸ್ವಾಮೀಜಿ ತಪಸ್ಸು ಮಾಡಿದ ಸ್ಥಳ. ಪ್ರತಿ ವರ್ಷ ನವರಾತ್ರಿಯಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಹೊನ್ನಾವರದಿಂದ ಅರೆ ಅಂಗಡಿ ಹೆಬ್ಬಾನಕೇರಿ ಮಾರ್ಗದಲ್ಲಿ 8 ಕಿ.ಮೀ.ಕ್ರಮಿಸಿದರೆ ಅರೆ ಅಂಗಡಿ ಸಿಗುತ್ತದೆ. ಅಲ್ಲಿಂದ ದೇವಾಲಯಕ್ಕೆ 5 ಕಿ.ಮೀ.ದೂರದಲ್ಲಿದೆ. ಬೆಂಗಳೂರಿನಿಂದ 400 ಕಿ.ಮೀ.ದೂರದಲ್ಲಿದೆ. 

5. ಧವನಗಿರಿ ದೇವಾಲಯ

ಸಿದ್ದಾಪುರ ತಾಲೂಕಿನಲ್ಲಿರುವ ಧವನಗಿರಿ ದೇವಾಲಯ ಕನ್ನಡದೇವಿಯ ಮೊದಲ ದೇವಾಲಯ. ಇಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಮೂರ್ತಿ ಇದೆ. ಪ್ರತಿ ದಿನ ಪೂಜೆ ಸಲ್ಲಿಸಲಾಗುತ್ತದೆ. ರಾಜ್ಯೋತ್ಸವ, ನವರಾತ್ರಿ ಸಂದರ್ಭಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಎತ್ತರದ ಸ್ಥಳದಲ್ಲಿರುವ ಈ ದೇವಾಲಯ ಪ್ರಶಾಂತ ಪರಿಸರದಲ್ಲಿದೆ. ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ 8 ಕಿ.ಮೀ.ಕ್ರಮಿಸಿದರೆ ಧವನಗಿರಿ ತಲುಪಬಹುದು. 

6. ಉಳವಿ ಚನ್ನಬಸವೇಶ್ವರ ದೇವಾಲಯ

ಕಲ್ಯಾಣದ ಕ್ರಾಂತಿ ಸಂದರ್ಭದಲ್ಲಿ ಚನ್ನಬಸವೇಶ್ವರರು ಜೋಯಿಡಾ ತಾಲೂಕಿನ ಕಗ್ಗಾಡಿನಲ್ಲಿರುವ ಉಳವಿಗೆ ಬಂದು ನಿಂತು ಇಲ್ಲಿ ಧಾರ್ಮಿಕ ಸಾಧನೆ ಮಾಡಿ ಐಕ್ಯರಾದರು. ಅವರ ಸಮಾಧಿಯೂ ಇಲ್ಲಿದೆ. ಶಿವಶರಣರ ಆರಾಧನಾ ತಾಣ ಇದಾಗಿದೆ. ಉಳವಿ ಜಾತ್ರೆಯಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಸೇರುತ್ತಾರೆ. ಉತ್ತರ ಕರ್ನಾಟಕದ ವಿವಿಧೆಡೆಯಿಂದ ಭಕ್ತರು ಚಕ್ಕಡಿಗಾಡಿಗಳಲ್ಲಿ ಆಗಮಿಸುವುದು ವಿಶೇಷ. ದಾಂಡೇಲಿಯಲ್ಲಿ 35 ಕಿ.ಮೀ.ದೂರದಲ್ಲಿದೆ. ಜೋಯಿಡಾ ತಾಲೂಕು ಕೇಂದ್ರದಿಂದ 30 ಕಿ.ಮೀ.ದೂರದಲ್ಲಿದೆ. 

7. ಗೋಕರ್ಣ ಮಹಾಬಲೇಶ್ವರ ದೇವಾಲಯ

msriram 

ಆತ್ಮಲಿಂಗ ಇಲ್ಲಿದೆ ಎಂಬ ಪ್ರತೀತಿ ಇರುವ ಗೋಕರ್ಣ ಮಹಾಬಲೇಶ್ವರ ದೇವಾಲಯ ಈ ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿವರಾತ್ರಿ ಹಾಗೂ ಮಹಾರಥೋತ್ಸವ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿಯೊಬ್ಬ ಭಕ್ತರೂ ಆತ್ಮಲಿಂಗ ಸ್ಪರ್ಶಿಸಿ ಪೂಜೆ ಸಲ್ಲಿಸಬಹುದು. ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರಿನಿಂದ 430 ಕಿ.ಮೀ.ದೂರದಲ್ಲಿದೆ. ಕುಮಟಾ ತಾಲೂಕಿನ ಗೋಕರ್ಣ ಕುಮಟಾದಿಂದ 36 ಕಿ.ಮೀ.ದೂರದಲ್ಲಿದೆ.

8. ಸೋದೆ ಮಠ 

ಸೋಂದಾ ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿತು. ಸೋಂದಾ ರಾಜರ ಐತಿಹಾಸಿಕ ಸ್ಥಳ. ಅರಸಪ್ಪ ನಾಯಕರ ಕಾಲದಲ್ಲಿ ಧಾರ್ಮಿಕ ಮಠ ತಲೆ ಎತ್ತಿತು. ಇಲ್ಲಿ ವಾದಿರಾಜರ ಬೃಂದಾವನ ಪ್ರಸಿದ್ಧವಾಗಿದೆ. ತ್ರಿವಿಕ್ರಮ ದೇವಾಲಯದಲ್ಲಿರುವ 21 ಮೀ. ಎತ್ತರದ ಧ್ವಜ ಸ್ತಂಭ ಏಕ ಶಿಲೆಯಲ್ಲಿದೆ. ಇಲ್ಲಿ ದಿಗಂಬರ ಜೈನ ಮಂದಿರಗಳನ್ನೂ ನೋಡಬಹುದು. ಶಿರಸಿಯಿಂದ 18 ಕಿ.ಮೀ.ದೂರದಲ್ಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button