ಮ್ಯಾಜಿಕ್ ತಾಣಗಳುವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಬೆರಗಾಗಿಸುವ, ಶಾಂತಿ ತುಂಬುವ ನಾಡಿನ 9 ಪವಿತ್ರ ಜೈನ ಕ್ಷೇತ್ರಗಳು

ಶಿಲ್ಪಕಲೆಯಿಂದ ಅಚ್ಚರಿ ಹುಟ್ಟಿಸುವ, ಆ ತಾಣಕ್ಕೆ ಹೋಗಿ ಕುಳಿತರೆ ಮನಸ್ಸಿಗೆ ನೆಮ್ಮದಿ ನೀಡುವ ಕರ್ನಾಟಕದ ಒಂಭತ್ತು ಜೈನ ಕ್ಷೇತ್ರಗಳ ವಿವರ ಇಲ್ಲಿದೆ. ಯಾವತ್ತಾದರೂ ಈ ಕ್ಷೇತ್ರಗಳಿಗೊಮ್ಮೆ ಭೇಟಿ ಕೊಡಿ.

  1. ಧರ್ಮಸ್ಥಳದ ತ್ಯಾಗಮೂರ್ತಿ

ಕಾರ್ಕಳದ ನಂತರ ಅತಿ ಎತ್ತರದ ಬಾಹುಬಲಿ ಮೂರ್ತಿಯಿರುವುದು ಧರ್ಮಸ್ಥಳದಲ್ಲಿ. ರೆಂಜಾಳ ಗೋಪಾಲ ಶೆಣೈ ಎಂಬ ಶಿಲ್ಪಿ ಇದನ್ನು ಕಾರ್ಕಳದಲ್ಲಿ ಸಿದ್ಧ ಮಾಡಿದ್ದರು. ಕಾರ್ಕಳದಿಂದ ಧರ್ಮಸ್ಥಳಕ್ಕೆ ಈ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ. 1967ರ ನವರಾತ್ರಿಯ ಸಂದರ್ಭದಲ್ಲಿ ಕಾರ್ಕಳದ ಶಿಲ್ಪಶ್ರೇಷ್ಠ ರೆಂಜಾಳ ಗೋಪಾಲ ಶೆಣೈ ಕಾರ್ಕಳದ ಮಂಗಲಪಾದೆಯಲ್ಲಿ ಮೂರ್ತಿ ಕೆತ್ತನೆ ಕೆಲಸ ಪ್ರಾರಂಭಿಸಿದರು. ಬಳಿಕ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 1972ರಲ್ಲಿ 42 ಅಡಿ ಎತ್ತರದ 170 ಟನ್ ತೂಕದ ಏಕಶಿಲಾ ಗೊಮ್ಮಟ ಬಿಂಬದ ಸಾಗಾಟ ನಡೆಸಿದರು. 1973ರಲ್ಲಿ ಧರ್ಮಸ್ಥಳವನ್ನು ಮೂರ್ತಿ ತಲುಪಿತು. 1982ರಲ್ಲಿ ಅದರ ಪ್ರತಿಷ್ಠಾಪನಾ ವಿಧಿ ಮತ್ತು ಪ್ರಥಮ ಮಹಾಮಸ್ತಕಾಭಿಷೇಕ ಕೈಗೊಳ್ಳಲಾಯಿತು. 

Prajavani

ಹೋಗುವುದು ಹೇಗೆ: ಧರ್ಮಸ್ಥಳಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಬಸ್ ಗಳಿವೆ. ರೈಲಿನಲ್ಲಿ ಪ್ರಯಾಣ ಮಾಡುವವರು ಕಡೂರು ಜಂಕ್ಷನ್‌ಗೆ ಬಂದು ಅಲ್ಲಿಂದ ಬಸ್‌ಮೂಲಕ ಧರ್ಮಸ್ಥಳಕ್ಕೆ ತೆರಳಬೇಕು. ಮಂಗಳೂರಿಗೆ ಬಂದೂ ಧರ್ಮಸ್ಥಳಕ್ಕೆ ಬರಬಹುದು. 

  1. ಮೈಸೂರಿನ ಗೊಮ್ಮಟಗಿರಿ

ಮೈಸೂರಿನಿಂದ 25 ಕಿಮೀ. ವಾಯವ್ಯಕ್ಕೆ ಹೊರಟರೆ ಕಾವೇರಿ ದಕ್ಷಿಣಕ್ಕೆ ಶ್ರವಣಗುಡ್ಡದಮೇಲೆ 5.5 ಮೀ ಎತ್ತರದ ಗೊಮ್ಮಟ ಮೂರ್ತಿಯಿದೆ. ಈ ಪ್ರದೇಶವನ್ನು ಗೊಮ್ಮಟಗಿರಿ ಎಂದೂ ಕರೆಯುತ್ತಾರೆ. ಸು.30.48 ಮೀ ಎತ್ತರದ ಬಂಡೆಯೊಂದರ ಮೇಲೆ ಮೂರ್ತಿ ಸ್ಥಾಪನೆಯಾಗಿದೆ. ದೂರದಿಂದ ಆ ಬೆಟ್ಟ ಒಂದು ದೊಡ್ಡ ರಥದಂತೆ ಕಾಣಿಸುತ್ತದೆ. ಇಲ್ಲಿ ಮೂರ್ತಿ ಸ್ಥಾಪನೆ ಕುರಿತು ಯಾವುದೇ ಮೂಲಾಧಾರಗಳು ದೊರೆತಿಲ್ಲ. ಚರಿತ್ರೆ ವೈಶಿಷ್ಟ ಪೂರ್ವಾಭಿಮುಖವಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೂರ್ತಿಯ ಕೈಗಳು ಸರ್ಪಗಳು ಬಿಚ್ಚಿದ ಹೆಡೆಗೆ ತಾಗುತ್ತಿರುವುದು ಈ ಮೂರ್ತಿಯ ವೈಶಿಷ್ಟ್ಯ. ಈ ಮೂರ್ತಿಗೆ ಪ್ರತಿವರ್ಷ ಮಸ್ತಕಾಭಿಷೇಕ ನೆರವೇರುತ್ತದೆ. ಇಲ್ಲಿ 24 ತೀರ್ಥಂಕರ ಪುಟ್ಟ ಬಸದಿಗಳಿವೆ. 

ಹೋಗುವುದು ಹೇಗೆ: ಮೈಸೂರಿನಿಂದ ಹುಣಸೂರಿನ ಕಡೆ ಹೋಗಿ ಇಲವಾಲದ ನಂತರ ಬರುವ ಮನುಗನಹಳ್ಳಿ ಚೆಕ್ ಪೋಸ್ಟ್ ಬಳಿ ಬಲಕ್ಕೆ ತಿರುಗಬೇಕು.

  1. ಕಾರ್ಕಳದಲ್ಲಿ ಬಾಹುಬಲಿ, ಚತುರ್ಮುಖ ಬಸದಿ

ಕೆಲವು ಊರುಗಳೇ ಜೈನರಿಗೆ ಪವಿತ್ರ ಕ್ಷೇತ್ರವಾಗಿರುತ್ತದೆ. ಅಂಥಾ ಒಂದು ಜೈನ ಪುಣ್ಯ ಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ. ಕಾರ್ಕಳವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ಬಾಹುಬಲಿ. 200ಕ್ಕೂ ಅಧಿಕ ಶಿಲಾ ಮೆಟ್ಟಿಲುಗಳನ್ನು ಹೊಂದಿರುವ ಗೊಮ್ಮಟೇಶ್ವರ ಬೆಟ್ಟದಲ್ಲಿ ಏಕಶಿಲೆಯಲ್ಲಿ ಮಂದಹಾಸ ಬೀರುತ್ತಾ ನಿಂತ ಬಾಹುಬಲಿಯ ಮೂರ್ತಿ ದರ್ಶನ ಮಾಡಿದರೆ ನೆಮ್ಮದಿ. 1432 ರಲ್ಲಿ ಜೈನ ಅರಸ ವೀರಪಾಂಡ್ಯನು ಪ್ರತಿಷ್ಠಾಪಿಸಿದ ಮೂರ್ತಿ 42 ಅಡಿ ಎತ್ತರವಿದೆ. ಈ ಗೊಮ್ಮಟ ಬೆಟ್ಟದಲ್ಲಿ ನಿಂತು ನೋಡಿದರೆ ಚಂದದ ಚತುರ್ಮುಖ ಬಸದಿಯೂ ಕಾಣಿಸುತ್ತದೆ. ಸಂಜೆ ಹೊತ್ತು ಆ ಬಸದಿಗೆ ಹೋದರೆ ಖುಷಿಯೋ ಖುಷಿ.

ಕಾರ್ಕಳದಲ್ಲಿ ಕರಿಕಲ್ಲುಗಳು ಹೆಚ್ಚಾಗಿ ಇರುವ ಕಾರಣ ಮೊದಲಿಗೆ ಈ ಊರಿಗೆ ಕಾರಕ ಎಂಬ ಹೆಸರು ಬಂತು. ಕ್ರಮೇಣ ಅದು ಕಾರ್ಕಳವಾಯಿತು. ಸುಮಾರು ಎಂಟು ಶತಮಾನಗಳ ಹಿಂದೆ ಭೈರ ಅರಸ ವಂಶದ ಅರಸರು ತಮ್ಮ 500 ವರ್ಷಗಳ ಆಳ್ವಿಕೆಯಲ್ಲಿ ಕಾರ್ಕಳವನ್ನು ಒಂದು ಐತಿಹಾಸಿಕ ಪುಣ್ಯಕ್ಷೇತ್ರವನ್ನಾಗಿ ಮಾಡಿದರು.

ಸಮೀಪದ ಆಕರ್ಷಣೀಯ ಸ್ಥಳಗಳು: ಜೈನರ ಆರಾಧನಾ ಕೇಂದ್ರಗಳಾಗಿರುವ 18 ಜಿನ ಮಂದಿರಗಳು ಮತ್ತು ಚತುರ್ಮುಖ ಬಸದಿ, ಹಿರಿಯಂಗಡಿ ಮಾನಸ್ತಂಭ.

ಹೋಗುವುದು ಹೇಗೆ: ಉಡುಪಿಯಿಂದ ಕಾರ್ಕಳಕ್ಕೆ ಸಾಕಷ್ಟು ಬಸ್‌ಗಳಿವೆ. ಜಿಲ್ಲಾ ಕೇಂದ್ರವಾಗಿದ್ದರಿಂದ ರಾಜ್ಯದ ಮೂಲೆ ಮೂಲೆಯಿಂದ ಬಸ್‌ಗಳಿವೆ. 

  1. ಬೆಳಗಾವಿ ಕಮಲ ಬಸದಿ

 ಇಲ್ಲಿ ಎರಡು ಶತಮಾನದ ಹಿಂದೆ ಪ್ರತಿಷ್ಠಾಪಿಸಲಾದ ಭಗವಾನ್‌ ನೇಮಿನಾಥರ ಮೂರ್ತಿ ಇದೆ. ಅಲ್ಲದೆ ಈ ಬಸದಿಯಲ್ಲಿ ಜೈನ ತೀರ್ಥಂಕರರಿಗೆ ಕೊಡುಗೆ ನೀಡಲು ಕಲ್ಲಿನಲ್ಲಿ ನಿರ್ಮಿಸಲಾದ 72 ದಳದ ಕಮಲದ ಹೂವು ಇದೆ. ಬೆಳಗಾವಿ ನಗರದ ದಂಡು ಮಂಡಳಿಯ ವ್ಯಾಪ್ತಿಗೊಳಪಡುವ ಕೋಟೆ ಒಳಗಡೆ ಕಮಲ ಬಸದಿ ಇದೆ. 

ಹೋಗುವುದು ಹೇಗೆ: ಬೆಳಗಾವಿ ಕೇಂದ್ರ ಹಾಗೂ ನಗರ ಬಸ್ ನಿಲ್ದಾಣದಿಂದ ಕೇವಲ 100 ಮೀಟರ್ ನಡೆದರೆ ಬಸದಿ ಸಿಗುತ್ತದೆ. ರೈಲು ನಿಲ್ದಾಣದಿಂದ 6 ಕಿ.ಮೀ. ದೂರದಲ್ಲಿದ್ದು, ವಡಗಾಂವಿ, ಟಿಳಕವಾಡಿ, ಅನಿಗೋಳ, ರೈಲು ನಿಲ್ದಾಣದಿಂದ ಬಸ್‌ಗಳ ಮೂಲಕ ಹೋಗಬಹುದು. 

  1. ಮೂಡಬಿದ್ರೆಯ ಸಾವಿರ ಕಂಬದ ಬಸದಿ 

ಜೈನಕಾಶಿ ಎಂದೇ ಕರೆಯಲ್ಪಡುವ ಊರು ಮೂಡಬಿದ್ರಿ. ಅಲ್ಲಿರುವ ಸಾವಿರ ಕಂಬಗಳ ಬಸದಿ ಜೈನರ ಪುಣ್ಯ ಸ್ಥಳ. ಈ ಬಸದಿ ಸಹಸ್ರ ಏಕಶಿಲಾ ಸ್ತಂಭಗಳಲ್ಲಿ ಕುಸುರಿ ಕೆತ್ತನೆಯ ಮಹಾಕಾವ್ಯಕ್ಕೊಂದು ಮೇರು ನಿದರ್ಶನ. ಜಗತ್ತಿನಲ್ಲೇ ಇದಕ್ಕೆ ಸರಿಸಾಟಿಯಾದ ಜಿನಮಂದಿರ ಇನ್ನೊಂದಿಲ್ಲ ಎನ್ನುವುದೇ ಇದರ ಹಿರಿಮೆ. ವಿಜಯನಗರದ ಎರಡನೇ ದೇವರಾಯ ಅರಸನ ಕಾಲದಲ್ಲಿ 1430ರ ಜನವರಿ 29ರಂದು ಈ ಬಸದಿ ಲೋಕಾರ್ಪಣೆಯಾಗಿದೆ ಎಂದು ಶಾಸನ ಹೇಳುತ್ತದೆ. ಚರಿತ್ರೆ ವೈಶಿಷ್ಟ್ಯ ಶಾಸನಗಳಲ್ಲಿ ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದು ಉಲ್ಲೇಖಿತವಾಗಿದೆ. ಇಲ್ಲಿ ಏಳು ಪ್ರವೇಶ ದ್ವಾರಗಳಿವೆ. 1008 ಕಂಬಗಳ ಪೈಕಿ 796 ಕಂಬಗಳು ಪೂರ್ಣ ಪ್ರಮಾಣದ್ದಾದರೆ, ಉಳಿದವು ದೊಡ್ಡ ಕಂಬಗಳಲ್ಲಿ ಮೂಡಿರುವ ಸಣ್ಣ ಕೆತ್ತನೆಗಳ ಕಂಬಗಳು. ಪ್ರತಿಯೊಂದು ಕಂಬಗಳಲ್ಲಿಯೂ ಶಿಲ್ಪಕಲಾ ಕೆತ್ತನೆ, ಕುಸುರಿ ಕಲೆಗಳಿವೆ. ಈ ಜಿನಮಂದಿರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನಲ್ಲಿದೆ. ಮೂಡುಬಿದಿರೆ ಪೇಟೆಗೆ ಸಮೀಪದಲ್ಲೇ ಇದೆ.

ಹೋಗುವುದು ಹೇಗೆ: ಮಂಗಳೂರಿನಿಂದ ಮೂಡುಬಿದಿರೆಗೆ 35 ಕಿ.ಮೀ. ಅಂತರ. ಬೆಟ್ಟ ಕಣಿವೆ, ತಿರುವು ಮಾರ್ಗವಾಗಿ ಸಾಗಿದರೆ ವಿದ್ಯಾಗಿರಿಯಲ್ಲಿ ಆಳ್ವಾಸ್ ಕಾಲೇಜು ಸಿಗುತ್ತದೆ. ಅಲ್ಲಿಂದ ಸುಮಾರು 1 ಮೈಲು ಸಂಚರಿಸಿದರೆ ಮೂಡುಬಿದಿರೆ ಪೇಟೆ, ಅಂತರ ದೂರವಿಲ್ಲದಿರುವುದರಿಂದ ರಿಕ್ಷಾದಲ್ಲೇ ಸಂಚರಿಸಬಹುದು. ಬೇಕಾದಷ್ಟು ಬಸ್ ಸೌಲಭ್ಯಗಳೂ ಇವೆ. ನಡೆದುಕೊಂಡು ಹೊದರೆ ಕೇವಲ 15 ನಿಮಿಷ.

  1. ನವ ತೀರ್ಥಂಕರರ ಕ್ಷೇತ್ರ ವರೂರು 

ಹುಬ್ಬಳ್ಳಿ ಸಮೀಪದ ವರೂರು ಗ್ರಾಮದ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ ನವಗ್ರಹ ತೀರ್ಥ ಕ್ಷೇತ್ರ ಸ್ಥಾಪಿಸಿದ ಖ್ಯಾತಿ ಮುನಿಶ್ರೀ ಗುಣಧರನಂದಿ ಮಹಾರಾಜರಿಗೆ ಸಲ್ಲುತ್ತದೆ. ವಿಶಾಲವಾದ ಪ್ರದೇಶದಲ್ಲಿ ನವಗ್ರಹ ತೀರ್ಥ ಕ್ಷೇತ್ರ ಸ್ಥಾಪನೆಗೊಂಡಿದ್ದು ಇದೇ ಮೊದಲು ಎಂದು ಹೇಳಲಾಗುತ್ತದೆ. ಒಂಬತ್ತು ಗ್ರಹಗಳು ಹಾಗೂ ಅವುಗಳ ಮೇಲೆ ಒಂಬತ್ತು ಜೈನ ತೀರ್ಥಂಕರರನ್ನು ಸ್ಥಾಪಿಸಲಾಗಿದೆ. ವರೂರು ಸುತ್ತ ಮುತ್ತ ಗಾಯತ್ರಿ ಮಠ, ಗೊಟಗೋಡೆ ರಾಕ್ ಗಾರ್ಡನ್ ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ.

ಹೋಗುವುದು ಹೇಗೆ: ಪುಣೆ – ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತೆ ಹುಬ್ಬಳ್ಳಿ ಸಮೀಪದಲ್ಲಿ ಈ ಗ್ರಾಮವಿದೆ. ಮಾರ್ಗ ಈ ಗ್ರಾಮ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಪ್ರಯಾಣಗೊಂದಲವಾಗದು. ಹುಬ್ಬಳ್ಳಿಯಿಂದ ಸಾಕಷ್ಟು ಬಸ್‌ಗಳಿವೆ. 

  1. ವೇಣೂರಿನ ಗೊಮ್ಮಟೇಶ್ವರ

ಭೂಮಟ್ಟದಲ್ಲಿರುವ ಬಾಹುಬಲಿ ಶ್ರವಣಬೆಳಗೊಳ, ಕಾರ್ಕಳ ಮತ್ತು ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿಗಳನ್ನು ಬೆಟ್ಟ ಮತ್ತು ಗುಡ್ಡದ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ, ವೇಣೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿ ಭೂಮಟ್ಟದ ಮೇಲಿದೆ. 35 ಅಡಿ ಎತ್ತರದ ಏಕ ಶಿಲಾ ವಿಗ್ರಹವನ್ನು ಕ್ರಿ.ಶ. 1604ನೇ ಮಾರ್ಚ್ 1ರಂದು ಚಾವುಂಡರಾಯ ವಂಶದ ತಿಮ್ಮರಾಜ ಪ್ರತಿಷ್ಠಾಪಿಸಿದ ಎಂದು ಹೇಳಲಾಗುವ ಮಾಹಿತಿ ವಿಗ್ರಹದ ಬಲಬದಿಯಲ್ಲಿರುವ ಸಂಸ್ಕೃತ ಶಾಸನದಿಂದ ದೊರೆಯುತ್ತದೆ. ಕಾರ್ಕಳದ ಮೂರ್ತಿಗೂ ಮತ್ತು ವೇಣೂರಿನ ಮೂರ್ತಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಕಾರ್ಕಳದಲ್ಲಿ ಪ್ರತಿಷ್ಠಾಪಿಸಲಾಗಿರುವ ಮೂರ್ತಿಯನ್ನು ಕೆತ್ತಿದ ವೀರ ಶಂಭು ಕಲ್ಕುಡ ವಂಶಸ್ಥರೇ ಈ ಮೂರ್ತಿಯನ್ನು ಕೆತ್ತಿದ್ದಾರೆ. 

ವೇಣೂರಿನ ಅಂದಿನ ಜೈನ ಸಾಮಂತ ಅರಸರು 1603 ರಲ್ಲಿ ಕಾರ್ಕಳದ ಗೋಮಟೇಶ್ವರ ವಿಗ್ರಹ ಕೆತ್ತಿದ ವೀರ ಶಂಭು ಕಲ್ಕುಡ ಕುಟುಂಬದವರನ್ನು ಕರೆಯಿಸಿ ವೇಣೂರಿನ ಸಮೀಪದ ( ಅಂದು ಕಂಬಳ ನಡೆಯುವ ಸ್ಥಳ ) ಕಲ್ಯಾಣಿ ಎಂಬಲ್ಲಿ 35 ಅಡಿ ಎತ್ತರದ ಏಕಶಿಲೆಯ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿ ಪ್ರತಿಷ್ಠಾಪಿಸಿದರು. ವೇಣೂರಿನ ಬಾಹುಬಲಿ ಮೂರ್ತಿ ರಾಜ್ಯದಲ್ಲಿರುವ ಇತರ ನಾಲ್ಕು ಬಾಹುಬಲಿ ವಿಗ್ರಹಗಳ ಪೈಕಿ ಅತ್ಯಂತ ಸಣ್ಣದು. 

ಹೋಗುವುದು ಹೇಗೆ: ವೇಣೂರು ಜಿಲ್ಲಾ ಕೇಂದ್ರ ಮಂಗಳೂರಿನಿಂದ 53 ಕಿ.ಮೀ. ದೂರದಲ್ಲಿದೆ. ಮೂಡುಬಿದಿರೆ ಮೂಲಕ ವೇಣೂರಿಗೆ ತಲುಪಬಹುದು.

  1. ಗೇರುಸೊಪ್ಪೆ ಬಸದಿ 

ಚೆನ್ನಭೈರಾದೇವಿ ಆಳಿದ ನೆಲ ಇದು. ಕ್ರಿ.ಶ. 1409 ರಿಂದ 1610 ರವರೆಗೆ ಜೈನ ಅರಸರ ರಾಜಧಾನಿಯಾಗಿತ್ತು. ಕರ್ನಾಟಕದ ಶಿಲ್ಪಕಲೆಯಲ್ಲಿ ಅತ್ಯುಚ್ಚ್ರಾಯ ಕೊಡುಗೆಯಾದ ಚತುರ್ಮುಖ ಬಸದಿ ಇಲ್ಲಿದೆ. ಅಲ್ಲದೇ ಪಾರ್ಶ್ವನಾಥ ಬಸದಿ, ವರ್ಧಮಾನ ಬಸದಿ, ಜ್ವಾಲಮಾಲಿನಿ ದೇವಾಲಯ ಇನ್ನಿತರೆ ಕುರುಹುಗಳನ್ನು ಕೂಡ ಇಲ್ಲಿ ಕಾಣಬಹುದು. ಚತುರ್ಮುಖ ಬಸದಿಯ ನಾಲ್ಕು ನಿಟ್ಟಿನಿಂದ ನೋಡಿದರೂ ಏಕ ರೀತಿಯಲ್ಲಿ ಗೋಚರಿಸುವ ನಾಲ್ಕು ಬೃಹದಾಕಾರದ ಮೂರ್ತಿ, ಹೆಬ್ಬಾಗಿಲುಗಳು, ಗರ್ಭಗುಡಿ ಹಾಗೂ ಹೊರಗುಡಿಯಲ್ಲಿಯ ಕೆತ್ತನೆಯ ಕೆಲಸ, ತಾಂತ್ರಿಕ ನೈಪುಣ್ಯ, ಕಲೆಗಾರಿಕೆಗಳು ಪ್ರವಾಸಿಗರನ್ನು ಮುಗ್ಧಗೊಳಿಸುತ್ತದೆ. ಶರಾವತಿ ಟೇಲರೇಸ್ ಎಂದು ಕರೆಯುವ ಗೇರುಸೊಪ್ಪ ಜಲ ವಿದ್ಯುತ್ ಯೋಜನೆಯ ಅಣೆಕಟ್ಟೆಯ ಸಮೀಪದಲ್ಲಿದೆ. ಶರಾವತಿ ಕೊಳ್ಳದ ಬಳಿಯೇ ಚತುರ್ಮುಖ ಬಸದಿಯೂ ಇದ್ದು, ಇದು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. 

ಹೋಗುವುದು ಹೇಗೆ: ಹೊನ್ನಾವರದಿಂದ 40 ಕಿ.ಮೀ.ದೂರದಲ್ಲಿದೆ. ಹೊನ್ನಾವರದಿಂದ ಗೇರುಸೊಪ್ಪ ತನಕ (ಹೊನ್ನಾವರ ಬೆಂಗಳೂರು ರಸ್ತೆ ) ಬಸ್ ಸೌಲಭ್ಯ ಇದೆ. ಗೇರುಸೊಪ್ಪದಿಂದ ಆಟೋಗಳನ್ನು ಬಾಡಿಗೆ ಪಡೆದು ಹೋಗಬಹುದು. ಹೊನ್ನಾವರದಿಂದ ಕಾರು ಬಾಡಿಗೆ ಪಡೆದು ತೆರಳಬಹುದು. ಗೇರುಸೊಪ್ಪದಿಂದ ಶರಾವತಿ ನದಿಯಲ್ಲೂ ದೋಣಿಯ ಮೂಲಕ ಪ್ರಯಾಣಿಸಬಹುದು.

  1. ವಿಜಯಪುರದ ಪಾರ್ಶ್ವನಾಥ ಬಸದಿ

ವಿಜಯಪುರದ ದರ್ಗಾ ಬಡಾವಣೆಯಲ್ಲಿ ಸಹಸ್ರಫಣಿ ಪಾರ್ಶ್ವನಾಥ ದೇವಾಲಯವಿದೆ. ಈ ದೇವಾಲಯದ ಗರ್ಭಗುಡಿಯಲ್ಲಿನ ಸಹಸ್ರಫಣಿಯ ಮೇಲ್ಬಾಗದಲ್ಲಿ ಹಾಲು ಸುರಿದರೆ ಅದು ಎಲ್ಲಾ ಕಡೆಗೆ ಹರಿದು ಹೋಗುತ್ತದೆ. ಇದನ್ನು ನೋಡುವುದೇ ಒಂದು ವಿಸ್ಮಯ. ಜೈನ ಸಮಾಜ ಬಾಂಧವರು ದೇವಸ್ಥಾನದಲ್ಲಿ ದಿನವೂ ಬೆಳಗ್ಗೆ, ಸಂಜೆ ಪೂಜಾ ಕೈಂಕರ್ಯ ಕೈಗೊಳ್ಳುತ್ತಾರೆ. 

ಹೋಗುವುದು ಹೇಗೆ: ವಿಜಯಪುರದಿಂದ ಈ ದೇವಾಲಯ ಕೂಗಳತೆಯಷ್ಟು ದೂರದಲ್ಲಿದೆ. ಇಲ್ಲಿಗೆ ತೆರಳಲು ಸಾಕಷ್ಟು ಸಿಟಿಬಸ್, ಆಟೋ ಸೌಲಭ್ಯವಿದೆ.

Related Articles

Leave a Reply

Your email address will not be published. Required fields are marked *

Back to top button