ತುಂಬಿದ ಮನೆಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಭಯ ಹುಟ್ಟಿಸಿದ ಕುದುರೆ ಸವಾರಿ: ಸಿಂಧುಚಂದ್ರ ಹೆಗಡೆ ಬರೆಯುವ ಸಿಂಪ್ಲೀ ಕಾಶ್ಮೀರ ಸರಣಿ ಭಾಗ 2

ಪಹಲ್ ಗಾಂವ್ ನ ದೇಗುಲದಲ್ಲಿ ಮಗಳು ಶಿವನಿಗೆ ಅಭಿಷೇಕ ಮಾಡಿದ ಕತೆ, ಕುದುರೆ ಸವಾರಿ ಮಾಡುವಾಗ ಕುದುರೆ ಓಡಿಹೋಗಿ ಪ್ರಪಾತದಂಚಲ್ಲಿ ನಿಂತ ಕತೆ. ಒಂದಲ್ಲ ಎರಡಲ್ಲ. ಸಿಂಧುಚಂದ್ರ ಹೆಗಡೆ ಬರೆಯವು ಕತೆ ಓದುವುದೇ ಸೊಗಸು.

ದೋಣಿಯಾನ ಇನ್ನೇನು ಮುಗಿದು, ನಮ್ಮ ಹೌಸ್ ಬೋಟಿನತ್ತ ದೋಣಿ ಸಾಗುತ್ತಿರುವಾಗ ಒಂದಷ್ಟು ಹುಲ್ಲು ಜಡ್ಡಿನ ನಡುವೆ ದೋಣಿ ಸಿಲುಕಿದಂತಾಯಿತು. ಸ್ವಲ್ಪ ನಿರಾಳವಾಗಿದ್ದ ಮನಃ ಸ್ಥಿತಿ ಮತ್ತೆ ತಳಮಳದಲ್ಲಿ. ಏನೂ ಆಗಲಿಕ್ಕಿಲ್ಲ ಅಂದುಕೊಳ್ಳುತ್ತಿರುವಾಗಲೆ ದೋಣಿ ಮುಂದೆ ಸಾಗಿತು. ವ್ಹಾ ಎಂತಹ ಸೌಂದರ್‍ಯ ಈ ಸರೋವರದ್ದಾದರೂ ಎಂದೆ ಆ ದೋಣಿ ನಡೆಸುವವನ ಬಳಿ. ಅದಕ್ಕವನು ಹಾ, ಅದಕ್ಕೇ ಅಲ್ಲವೇ ಕಾಶ್ಮೀರ ಎಲ್ಲರಿಗೂ ಬೇಕು! ಎಂದು ನಿರ್ಭಾವುಕನಾಗಿ ನುಡಿದು ನಾವು ತಂಗಲಿದ್ದ ಬೋಟ್ ಹೌಸ್(boat house) ಬಳಿ ಬಿಟ್ಟ. 

ಒಂದೊಂದು ಬೋಟ್ ಹೌಸ್ ನಲ್ಲಿ ಎರಡು ಕೋಣೆ, ಒಂದು ಜಗುಲಿ.. ಸಂಪೂರ್ಣ ಮರದ ಕೆತ್ತನೆಯಿಂದ ಕಲಾತ್ಮಕವಾಗಿ ರೂಪಿಸಲಾಗಿದ್ದ ಆ ಕೋಣೆಗಳು ಎಂಥವರಾದರೂ ಒಮ್ಮೆ ವ್ಹಾ ಎನ್ನುವಂತಿದ್ದವು. ಮಗಳಂತೂ ಪ್ರತಿ ಕೋನ ಕೋನಗಳಿಂದ ಫೋಟೋ ತೆಗೆದು ಸಂಭ್ರಮಿಸಿದಳು. ರಾತ್ರಿ ಬಿಸಿಬಿಸಿ ಚಪಾತಿಯ ಊಟ, ಬೋಟ್ ಹೌಸ್ ಮಾಲೀಕನ ಎಕ್ಸ್ ಟ್ರಾ ಕಾಳಜಿ, ಅಲ್ಲಿಯ ನಿಶ್ಶಬ್ದ ವಲಯ ಎಲ್ಲದರಿಂದ ಪುಳಕಿತಳಾಗಿದ್ದೆ ನಾನು. ಹೀಗೆಲ್ಲಾ ಸ್ವರ್ಗದಂತೆ ಗೋಚರಿಸುವ ದಾಲ್(dal lake) ಸರೋವರಕ್ಕೆ ಅಷ್ಟೂ ಬೋಟ್ ಹೌಸ್ ಗಳ ಶೌಚಾಲಯದ ನೀರು ನೇರವಾಗಿ ಸೇರುವ ಸತ್ಯ ಆಮೆಲೆ ಗೊತ್ತಾಯಿತು.

ಮಾರನೇ ದಿನ ಬೆಳಗಾಗೆದ್ದು ನಾವು ಪಹಲ್ ಗಾಂವ್(pahalgam) ಎಂಬ ಊರಿಗೆ ಪಯಣ ಬೆಳೆಸಿದೆವು. ಶ್ರೀನಗರದಿಂದ(srinagar) 94 ಕಿಮೀ ದೂರವಿರುವ ಪಹಲ್ಗಾಂವ್ ಬೆಟ್ಟದ ತಪ್ಪಲಿನಲ್ಲಿರುವ ಸುಂದರ ಹಳ್ಳಿ. ಅಲ್ಲಿಗೆ ಸಾಗುವ ಹಾದಿಯಲ್ಲಿ ಸಿಗುವ ಶಂಕರಾಚಾರ್‍ಯ ಬೆಟ್ಟದಲ್ಲಿರುವ ಈಶ್ವರನ ಸನ್ನಿದಿಗೆ(pahalgam shiva temple) ನಮ್ಮನ್ನು ಕರೆದೊಯ್ಯಲಾಯಿತು.ಶಂಕರಾಚಾರ್‍ಯರು ಭೇಟಿ ನೀಡಿದ್ದ ಜಾಗ ಎಂಬುದನ್ನು ಅಲ್ಲಿ ಗುರುತಿಸಲಾಗಿದೆ. ಸಮೂರು 250 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಲ್ಲಿಗೆ. ಅಲ್ಲಿ ಬಹಳ ಬಿಗಿಯಾದ ಭದ್ರತೆ. ಮೊಬೈಲ್, ಕ್ಯಾಮೆರಾ, ಏನನ್ನೂ ಒಳಗೆ ಒಯ್ಯುವಂತಿಲ್ಲ. ಅಲ್ಲಿ ಪ್ರತಿಯೊಬ್ಬರನ್ನೂ ಚೆಕ್ ಮಾಡಿಯೇ ಬೆಟ್ಟ್ ಹತ್ತಲು ಅನುವು ಮಾಡಿಕೊಡುತ್ತಾರೆ. 

ಅಲ್ಲಿಯೂ ಭದ್ರತೆಗೆಂದು ನೇಮಿಸಲ್ಪಟ್ಟಿದ್ದ ಲೇಡಿ ಆಫೀಸರ್ ಮಗಳನ್ನು ನೋಡಿ, ಆರ್ಮಿಗೆ ಸೇರಿಸಬಹುದು, ಎಷ್ಟು ಚಂದದ ಎತ್ತರ, ಎಂದು ಕಣ್ಣು ಮಿಟುಕಿಸಿದಳು. ಭಾರತದ ರಕ್ಷಣಾಪಡೆ(Indian army) ಅಲ್ಲಿ ಮಾರುಮಾರಿಗೂ ನಿಂತು ಕರ್ತವ್ಯ ನಿರ್ವಹಿಸುತ್ತಿದೆ. ನಮ್ಮ 14 ಜನರ ತಂಡ ಬೆಟ್ಟ ಹತ್ತತೊಡಗಿತು.. ನನ್ನ ಮಗಳೂ ಸೇರಿ 4 ಮಕ್ಕಳು, 10 ಜನ ದೊಡ್ಡವರು. ಯಾರು ಮೊದಲು ಬೆಟ್ಟ ಏರುತ್ತಾರೆಂಬ ಜಿದ್ದಿಗೆ ಬಿದ್ದು ಮಗಳು ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಓಡತೊಡಗಿದಳು. ಬೆಟ್ಟದ ಮೊದಲ ಹಂತದಲ್ಲಿ ಪಾದರಕ್ಷೆಗಳನ್ನು ಕಳಚಿಟ್ಟು 20 ಮೆಟ್ಟಿಲುಗಳನ್ನು ಬರಿಕಾಲಲ್ಲಿ  ಹತ್ತಬೇಕು.. ಅಲ್ಲಿ  ನಿಜವಾದ ಸತ್ವ ಪರೀಕ್ಷೆ.. ನಾನು ಶೂಗಳನ್ನು  ಬಿಚ್ಚಿಡಬೇಕೆಂದು ನೋಡುತ್ತೇನೆ, ಕೈಗಳೇ ಆಡುವುದಿಲ್ಲ. ಬೆರಳುಗಳು ಮರಗಟ್ಟಿಹೋಗಿವೆ. ಅಂತೂಇಂತೂ ಶೂ ಕಳಚಿ ಪಾದವನ್ನು ನೆಲಕ್ಕಿಟ್ಟರೆ ಐಸ್ ಮೇಲೆ ನಿಂತ ಅನುಭವ. 

ಮಗಳಿಂದ ಶಿವನಿಗೆ ಅಭಿಷೇಕ

ಆ 20 ಮೆಟ್ಟಿಲುಗಳನ್ನು ಹತ್ತಿ ಹೋದೆವು ಬರಿಕಾಲಿನಲ್ಲಿ ಕುಣಿಯುತ್ತಾ. ಮಗಳು ಶಿವಲಿಂಗಕ್ಕೆ ಅರ್ಚನೆಗೈಯ್ಯಲು ಹೊರಟಿದ್ದ ಪೂಜಾರಿಯನ್ನೂ ಹಿಂದಿಕ್ಕಿಸಿ ಶಿವಲಿಂಗದತ್ತ ಧಾಮಿಸಿದ್ದಳು. ಅವಳನ್ನು ಪ್ರೀತಿಯಿಂದ ಮಾತನಾಡಿಸಿದ ಪೂಜಾರಿ, ಮಗೂ ನೀನು  ಈ ದಿನ ಎಲ್ಲರಿಗಿಂತ ಮೊದಲು ಬಂದವಳು ಶಿವ್ ಜೀ ಬಳಿ, ನೀನೇ ಅಭಿಷೇಕ ಮಾಡು, ಎಂದು ಒಂದು ತಂಬಿಗೆ ನೀರನ್ನಿತ್ತ. ನಂತರ ಹೂವನ್ನು ಏರಿಸು ಎಂದು ಹೂವನ್ನೂ ನೀಡಿದರು. ಮಗಳು ಖುಷಿಯಿಂದ ಅವರು ಹೇಳಿದಷ್ಟನ್ನು ಮಾಡಿ, ಶಿವರಾತ್ರಿಯಂದು ಎಲ್ಲರೂ ಕ್ಯೂದಲ್ಲಿ  ನಿಂತು ಮಾಡುವ ಕಾರ್‍ಯವನ್ನು ನಾನೆಷ್ಟು ಈಸಿಯಾಗಿ ಮಾಡಿದೆ ಅಲ್ಲವೇ ಎಂದು ನಗೆ ಬೀರಿದಳು. 

ಎರಡು ಪ್ರದಕ್ಷಿಣೆ ಹಾಕಿದ್ದೇ ನನ್ನ ಕಾಲುಗಳು ನನ್ನದಲ್ಲವೇನೋ ಎಂಬಂತೆ ಮರಗಟ್ಟಿಹೋಗಿದ್ದವು. ದಪ್ಪ ಇದ್ದವರು ಈ ಬೆಟ್ಟ ಹತ್ತಲು  ಸಾಧ್ಯವೇ ಎಂದು ಯೋಚಿಸುತ್ತಾ ಕುಳಿತಿದ್ದೆ. ನಮ್ಮ ಪಂಗಡದವರೆಲ್ಲರೂ ಒಬ್ಬೊಬ್ಬರಾಗಿ ಉಶ್ಯಪ್ಪಾ ಎನ್ನುತ್ತಾ ಬಂದು ಸೇರಿದರು. ಮುಂಜಾನೆ ಹೋಗಿದ್ದರಿಂದ  ಅಲ್ಲಿ ಅಷ್ಟೊಂದು ಜನಜಂಗುಳೀ ಇರಲಿಲ್ಲ. ಶಂಕರಾಚಾರ್‍ಯರು ತಪಸ್ಸಿಗೆ ಕುಳಿತಿದ್ದ ಜಾಗವನ್ನು ಅಲ್ಲಿ ಸಂರಕ್ಷಿಸಲಾಗಿದೆ. ತುಂಬಾ ಪುರಾತನ ಇತಿಹಾಸ ಹೊಂದಿರುವ ಶಿವಲಿಂಗದ ಕೆತ್ತನೆಯೂ ಅತ್ಯದ್ಭುತವಾಗಿದೆ. ಅತಿ ಎತ್ತರ ಪ್ರದೇಶಗಳಲ್ಲೊಂದಾಗಿರುವ ಗೋಪಾದ್ರಿ ಬೆಟ್ಟದಲ್ಲಿ ನಮ್ಮ ಮಿಲ್ಟ್ರಿ ಪಡೆಯವರು ಟೆಂಟ್ ಗಳಲ್ಲಿ ವಾಸ್ತವ್ಯ ಮಾಡಿ ಆ  ಕ್ಷೇತ್ರದ ರಕ್ಷಣೆಗೆ ಪಣ ತೊಟ್ಟು ನಿಂತಿದ್ದಾರೆ. 

ಪೈನ್ ಮರಗಳಿಂದ ತುಂಬಿರುವ ಆ ಬೆಟ್ಟದ ದೃಶ್ಯಾವಳಿಗಳನ್ನು  ಸವಿಯುತ್ತಾ ನಾವು ಪೆಹಲ್ ಗಾಂವ್ ಗೆ ತೆರಳುವ ಮಾರ್ಗಮಧ್ಯೆ ಸಿಗುವ ಆವಂತಿಪುರಕ್ಕೆ ಭೇಟಿ ಇತ್ತೆವು.ಅಲ್ಲಿ 1100 ವರ್ಷದ ಇತಿಹಾಸವಿರುವ  ವಿಷ್ಣುವಿನ ದೇವಸ್ಥಾನವಿದೆ. ಹಾಗೆನ್ನುವುದಕ್ಕಿಂತ ದೇವಸ್ಥಾನದ ಅವಶೇಷಗಳಿವೆ ಎಂದರೆ ತಪ್ಪಾಗಲಾರದು. ಸಿಂಗ್ ಒಬ್ಬರು ಅದನ್ನು ವಿವರಿಸಲು ಅಲ್ಲಿದ್ದಾರೆ. ಅಲ್ಲಿ ಏನೂ ಇಲ್ಲ, ನಾಲ್ಕಾರು ಕಲ್ಲಿನ ಕಂಬಗಳಿವೆ.. ಅದರ ಮೇಲೆ ರಂಗನಾಥನ ಕೆತ್ತನೆಯಿದೆ. ಅದರ ಛಾವಣಿಯಾಗಲೀ, ನೆಲಗಟ್ಟಾಗಲೀ ಏನೂ ಅಲ್ಲಿ ಉಳಿದಿಲ್ಲ. ಶ್ರೀನಗರ್ ಹಾಗೂ ಅನಂತನಾಗ್ ಹೈವೇ ಪಕ್ಕವಿರುವ ಈ ದೇವಸ್ಥಾನದ ದುಸ್ಥಿತಿಗೆ ಮರುಕವೆನಿಸುತ್ತದೆ. 

ಪಹಲ್ ಗಾಂವ್ ಗೆ ತೆರಳುವ  ಹಾದಿಯಲ್ಲಿ ಬಹಳಷ್ಟು ಕಣಿವೆಗಳು, ಸೇಬಿನ ತೋಟಗಳು ದಾರಿಯುದ್ದಕ್ಕೂ ಸಿಗುತ್ತವೆ. ಪಹಲ್ಗಾಂವ  ದಾರಿಯಲ್ಲಿ ಸಿಗುವ ಹಿಮಪರ್ವತಗಳು, ಹಸಿರು ಬಣ್ಣದ ಹೊಳೆ ನಮ್ಮನ್ನು ದಂಗು ಬಡಿಸುತ್ತವೆ. ಅಲ್ಲಿ ನಾವು ಅಕ್ಸಾ ಕಂಫರ್ಟ್ ಎಂಬ ಬೆಟ್ಟದ ತುತ್ತ ತುದಿಯ ಹೋಟೆಲ್ ನಲ್ಲಿ ಉಳಿದೆವು. ಕುದುರೆ ಸವಾರಿ ಹೋಗುವುದಿದ್ದರೆ ಇಲ್ಲಿ  ಹೋಗಬಹುದು ಎಂದು ರಾಯಿಸ್ ಹೇಳಿದ. ಮಧ್ಯಾಹ್ನ ಮೂರು ಘಂಟೆಗೇ ಚಳಿ ಶುರುವಾಗಿತ್ತು. 

ಕುದುರೆ ಸವಾರಿ ಭಯಂಕರ

ಹಸಿರುಹಾಸಿನ ಮೇಲೆ ಬಿಳಿ ಬಣ್ಣದ ಹೂಗಳು ಚಿತ್ತಾರ ಬಿಡಿಸಿದ್ದವು. ಒಂದೆಡೇ ಹಿಮಪರ್ವತ ಶ್ರೇಣಿ, ಮತ್ತೊಂದೆಡೆ ನೇರ ನಿಲುವಿನ ವಿಲ್ಲೋ ಮರಗಳು, ಪುಟ್ಟ ಅರಮನೆಯಂತಿರುವ ಹೋಟೆಲ್, ಕೋಣೆಗಳೂ ಹಾಗೆ, ಹೀಟರ್ ವ್ಯವಸ್ಥೆಯೊಂದಿಗೆ ಬಹಳ ವ್ಯವಸ್ಥಿತವಾಗಿತ್ತು. ನಾವೆಲ್ಲರೂ ಫ್ರೆಶ್ ಆಗಿ ಕುದುರೆ ಸವಾರಿ ಹೋಗುವುದೆಂದು ನಿಶ್ಚಯಿಸಿದೆವು. 13 ಕುದುರೆಗಳನ್ನು  ತರಿಸಲಾಯಿತು, ಎರಡು ಪುಟ್ಟ ಮಕ್ಕಳು ಒಂದೇ ಕುದುರೆಯಲ್ಲಿ, ಉಳಿದವರೆಲ್ಲರೂ ಒಬ್ಬೊಬ್ಬರು ಒಂದೊಂದು ಕುದುರೆಯ ಮೇಲೆ. ನಾನು ಬಿಳಿ ಬಣ್ಣದ ಬಹದ್ದೂರ್ ಹೆಸರಿನ ಕುದುರೆ ಮೇಲೆ, ಚಂದ್ರು ಕಪ್ಪು ಬಣ್ಣದ ರಾಜಾ ಹೆಸರಿನ ಕುದುರೆ ಮೇಲೆ ಕುಳಿತೆವು. 

ಮಗಳಿಗೊಂದು ಎಳೆ ಕುದುರೆಯ ಮೇಲೆ ಕುಳ್ಳಿಸಿದ್ದರು. ಅಬ್ಬಾ, ನನ್ನ ಜೀವಮಾನದಲ್ಲಿ ಎಂದಿಗೂ ಮರೆಯದ ಸವಾರಿ ಅದು.  ಕುದುರೆ ಸವಾರಿಯೆಂದರೆ ನೇರವಾದ ರಸ್ತೆಯ ಮೇಲೆ ಕುಲುಕಾಡುತ್ತಾ ಸಾಗುವುದೆಂಬ ಕಲ್ಪನೆಯಿದ್ದ ನನಗೆ, ಅತೀ ರೋಚಕ ಅನುಭವ ನೀಡಿ, ಸಾಹಸ ಎಂದರೇನೆಂದು ಕಲ್ಪನೆ ಕೊಟ್ಟ ಮಹಾಸವಾರಿ ಅದು. ಮೊದಲು ಒಂದೆರಡು ಮಾರು ಕುದುರೆಯ ಮೂಗುದಾಣ ಹಿಡಿದಿದ್ದ ಯುವಕ ಕೆಲವೇ ಕ್ಷಣಗಳಲ್ಲಿ ಅಲ್ಲಿಲ್ಲ. ನಾನೇ ಕುದುರೆಯನ್ನು ಓಡಿಸಬೇಕು. ನನಗೆ ಜೀವ ಹೋದಂತಾಯಿತು. 

ಒಟ್ಟು 13 ಕುದುರೆಗಳಿಗೆ ಇದ್ದದ್ದು ಆರೇ ಜನ  ಕಾವಲುಗಾರರು. ಒಮ್ಮೆ ಇಲ್ಲಿ, ಒಮ್ಮೆ ಅಲ್ಲಿ  ಎನ್ನುತ್ತಾ ಅತ್ತಿಂದಿತ್ತ ಓಡಾಡುತ್ತಾ ಆರಾಮ್ ಸುದ್ದಿ ಹೇಳುತ್ತಾ ಬರುತ್ತಿದ್ದಾರೆ ಅವರೆಲ್ಲಾ. ನಮ್ಮ ಟೀಮಿನ ಎಲ್ಲಾ ಸದಸ್ಯರು ಅಯ್ಯೋ, ಹಾಯ್ ಎನ್ನುತ್ತಾ ಗೊಣಗಾಡುತ್ತಾ ಕುದುರೆ ಮೇಲೆ ಬರುತ್ತಿದ್ದಾರೆ. ಚಂದ್ರು ಕುಳಿತಿದ್ದ ಕುದುರೆಯಂತೂ ಎಲ್ಲರಿಗಿಂತಾ ಮುಂದೆ ಹೋಗಿ ಪ್ರಪಾತದಂಚಿಗೇ ನಿಂತುಬಿಟ್ಟಿದೆ. ನಾನು, ಭಯ್ಯಾ  ಅಲ್ಲಿ ನೋಡಿ ಎಂದು ಹಿಂದಿಯಲ್ಲಿ  ಕಿರುಚತೊಡಗಿದೆ. 

ಮುಂದಿನ ಕಂತು: ಪಹಲ್ ಗಾಂವ್ ನ ಎಲ್ಲಾ ಅಂಗಡಿಗಳಲ್ಲೂ ಭಟ್ ಹೆಸರು

ಸಿಂಪ್ಲೀ ಕಾಶ್ಮೀರ ಸರಣಿಯ ಭಾಗ 1 ಓದಲು ಇಲ್ಲಿ ಕ್ಲಿಕ್ಕಿಸಿ

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

Related Articles

Leave a Reply

Your email address will not be published. Required fields are marked *

Back to top button