ದೂರ ತೀರ ಯಾನವಿಂಗಡಿಸದಸೈಕಲ್ ಹತ್ತು ಊರು ಸುತ್ತುಸ್ಫೂರ್ತಿ ಗಾಥೆ

ಖರ್ಚಿಗೆ ಚಹಾ ಮಾರಿಕೊಂಡು ಕೇರಳದಿಂದ ಕಾಶ್ಮೀರಕ್ಕೆ ಸೈಕಲಲ್ಲಿ ಹೊರಟಿರುವ ನಿಧಿನ್

ಪ್ರವಾಸದ ಆಸೆ ಇರುವವರೆಲ್ಲಾ ಪ್ರವಾಸ ಹೋಗಲ್ಲ. ಆದರೆ ಕೇರಳದ ನಿಧಿನ್ ಮಾತ್ರ ಎಲ್ಲರಿಗಿಂತ ಡಿಫರೆಂಟು. ಒಂದೇ ಹಳೆಯ ಸೈಕಲ್ ಹಿಡಿದುಕೊಂಡು ಖರ್ಚಿಗೆ ಚಹಾ ಮಾರಿಕೊಂಡು ಕೇರಳದಿಂದ ಕಾಶ್ಮೀರಕ್ಕೆ ಹೊರಟಿದ್ದಾನೆ. ಈಗಾಗಲೇ ರಾಜಸ್ಥಾನ ತಲುಪಿದ್ದಾನೆ. ಅವನ ಕುರಿತ ಇಂಟರೆಸ್ಟಿಂಗ್ ಕತೆ ಇದು.

ಎಲ್ಲಾ ಹುಡುಗರಂತೆ ಇದ್ದ ಒಬ್ಬ ಸಾಮಾನ್ಯ ಹುಡುಗನ ಹೆಸರು ನಿಧಿನ್ ಎಂಆರ್. ಊರು ಕೇರಳದ ತ್ರಿಶ್ಶೂರು. 23 ವರ್ಷ ವಯಸ್ಸಿನ ಅವನಿಗೆ ದೇಶ ಸುತ್ತುವ ಆಸೆ. ಅದರಲ್ಲೂ ಕಾಶ್ಮೀರಕ್ಕೆ ಹೋಗಬೇಕು ಎಂಬ ಮಹದಾಸೆ. ಆಸೆ ನೆರವೇರಿಸಲು ಕೈಯಲ್ಲಿ ಕಾಸಿಲ್ಲ. ಹಾಗಂತ ಕನಸು ಬಿಟ್ಟು ಬಿಡುವ ಮನಸ್ಸೂ ಇಲ್ಲ. ಲಾಕ್ ಡೌನ್ ನಲ್ಲಿ ಆಸೆ ಬಲವಾಯಿತು. ಒನ್ ಫೈನ್ ಡೇ ಕಾಶ್ಮೀರಕ್ಕೆ ಹೋಗಿಬಿಡುವ ನಿರ್ಧಾರ ಮಾಡಿಬಿಟ್ಟ. 

ನಿರ್ಧಾರ ಏನೋ ಮಾಡಿಯಾಯಿತು. ಆದರೆ ಹೋಗುವುದು ಹೇಗೆ. ಬೈಕ್ ಬಾಡಿಗೆ ಪಡೆದುಕೊಳ್ಳೋಣ ಎಂದರೆ ಅದಕ್ಕೂ ದುಡ್ಡಿಲ್ಲ. ಕಡೆಗೆ ತಮ್ಮನ ಸೈಕಲೊಂದು ಸೈಡಲ್ಲಿ ನಿಂತಿದ್ದದ್ದು ಕಣ್ಣಿಗೆ ಬಿತ್ತು. ಹೇಗೂ ತಮ್ಮ ಸೈಕಲ್ ಬಳಕೆ ನಿಲ್ಲಿಸಿದ್ದ. ಹಾಗಾಗಿ ಕಾಶ್ಮೀರಕ್ಕೆ ಸೈಕಲಲ್ಲೇ ಹೋದರೆ ಹೇಗೆ ಎಂಬ ಆಲೋಚನೆ ಮೂಡಿತು. ತಕ್ಷಣ ಸೈಕಲನ್ನು ರಿಪೇರಿ ಮಾಡಿಸಿ ರೆಡಿ ಮಾಡಿಸಿದ. 3,300 ಕಿಮೀಗಳ ಪಯಣಕ್ಕೆ ಸಿದ್ಧನಾದ.

ಇಂಟರೆಸ್ಟಿಂಗ್ ಅಂದ್ರೆ ಸೈಕಲ್ ರಿಪೇರಿ ಮಾಡುವುದಕ್ಕೂ ನಿಧಿನ್ ಬಳಿ ದುಡ್ಡಿರಲಿಲ್ಲ. ಅದಕ್ಕಾಗಿ ಅವನು ತನ್ನ ಸೋನಿ ಡಿಎಚ್ ಸಿ ಎಚ್ 300 ಕ್ಯಾಮೆರಾ ಮಾರಿಬಿಟ್ಟ. ಕೈಗೆ 13 ಸಾವಿರ ರೂಪಾಯಿ ಸಿಕ್ಕಿತು. ಸೈಕಲ್ ಚೈನ್, ಸೈಕಲ್ ಬ್ರೇಕ್ ಸರಿ ಮಾಡಿಸಿದ.

 ಈ ಹೊತ್ತಲ್ಲಿ ಅವನಿಗೆ ಒಂದು ಜ್ಞಾನೋದಯವಾಯಿತು. ಕ್ಯಾಮೆರಾ ಮಾರಲು ಅವನು ತ್ರಿಶ್ಶೂರಿನಿಂದ ಕೋಝಿಕೋಡ್ ಗೆ ಹೋಗಬೇಕಾಗಿತ್ತು. ಅಲ್ಲಿಗೆ ಬಸ್ಸಲ್ಲಿ ಹೋಗಿ ಕ್ಯಾಮೆರಾ ಮಾರಿ ವಾಪಸ್ ಬರುವಾಗ ಬಸ್ಸಲ್ಲಿ ನಿದ್ದೆ ಮಾಡಿಬಿಟ್ಟ. ಎದ್ದಾಗ ಅನ್ನಿಸಿತು ಒಂದು ಬಸ್ಸು ಪಯಣಕ್ಕೇ ಇಷ್ಟು ಸುಸ್ತಾದರೆ ಸೈಕಲಲ್ಲಿ ಕಾಶ್ಮೀರಕ್ಕೆ ಹೋಗುವುದು ಹೌದಾ.. ಅಲ್ಲಿಂದ ಸೀರಿಯಸ್ಸಾಗಿ ಟ್ರಿಪ್ ಹೋಗುವುದಕ್ಕೆ ಮಾನಸಿಕವಾಗಿ ರೆಡಿಯಾಗತೊಡಗಿದ. 

ಇನ್ನು ಹೋದಲ್ಲೆಲ್ಲಾ ಖರ್ಚಾಗುತ್ತದೆ. ಅದಕ್ಕೆ ದುಡ್ಡು ಒಟ್ಟುಗೂಡಿಸುವುದು ಹೇಗೆ ಎಂದುಕೊಂಡಾಗ ಮತ್ತೊಂದು ಅದ್ಭುತ ಐಡಿಯಾ ಹೊಳೆಯಿತು. ದಾರಿಯುದ್ದಕ್ಕೂ ಟೀ ಮಾಡಿ ಮಾರಿಕೊಂಡು ಹೋಗುವ ಆಲೋಚನೆ ಅದು. ಅದಕ್ಕೆ ಕಾರಣವೂ ಇತ್ತು. ಅವನು ಕಳೆದ ಎರಡು ವರ್ಷಗಳಿಂದ ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದ. ಟೀ ಚೆನ್ನಾಗಿ ಮಾಡುತ್ತೇನೆ ಎಂಬ ವಿಶ್ವಾಸವಿತ್ತು. ತಕ್ಷಣ ಅದನ್ನು ಕಾರ್ಯಗತಗೊಳಿಸಲು ಸೈಕಲ್ಲಿನಲ್ಲಿ ಸಾಗಿಸಬಹುದಾದ ಒಂದು ಪೋರ್ಟೆಬಲ್ ಸ್ಟವ್ ತೆಗೆದುಕೊಂಡ. ಸೈಕಲಿಗೆ ಕೇರಳ ಟು ಕಾಶ್ಮೀರ ಎಂದು ಬರೆದ ಪೋಸ್ಟರ್ ಹಾಕಿಕೊಂಡ. ಬ್ಯಾಗನ್ನು ಸರಿಮಾಡಿಕೊಂಡು 2011, ಜನವರಿ 1ರಂದು ರೂ.170 ಜೇಬಲ್ಲಿಟ್ಟುಕೊಂಡು ಹೊರಟ. 

ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಏಳುವುದು. ಸಂಜೆ ನಾಲ್ಕು ಗಂಟೆವರೆಗೂ ಸೈಕಲ್ ಪಯಣ. ಆಮೇಲೆ ನೀರು ಮತ್ತು ಹಾಲು ಸಿಗುವ ಜಾಗದಲ್ಲಿ ಸೈಕಲ್ ನಿಲ್ಲಿಸಿ ಟೀ ಮಾಡುತ್ತಿದ್ದ. ಸಕ್ಕರೆ, ಟೀ ಪುಡಿ ಬ್ಯಾಗಲ್ಲೇ ಇರುತ್ತಿತ್ತು. ಪಾತ್ರೆ ಮತ್ತು ಟೀ ಫ್ಲಾಸ್ಕೂ ಇತ್ತು. ಫ್ಲಾಸ್ಕಲ್ಲಿ 35 ಕಪ್ ಟೀ ಹಿಡಿಯುತ್ತಿತ್ತು. ಅಷ್ಟು ಟೀ ಮಾರಿದರೆ ದಿನಕ್ಕೆ 350 ರೂಪಾಯಿ ಸಿಗುತ್ತಿತ್ತು. ಅಷ್ಟು ಹಣದಿಂದ ಅವತ್ತಿನ ಆಹಾರ ಮತ್ತಿತರ ವಸ್ತುಗಳನ್ನು ಖರೀದಿಸುತ್ತಿದ್ದ. ಇವನ ಕತೆಯನ್ನು ಕೇಳಿದ ಸುಮಾರು ಮಂದಿ ಟೀ ತೆಗೆದುಕೊಳ್ಳದೆಯೇ ಸುಮ್ಮನೆ ದುಡ್ಡು ಕೊಟ್ಟು ಪ್ರೀತಿ ತೋರಿಸುತ್ತಿದ್ದದ್ದೂ ಇದೆ.

ನೀವು ಇದನ್ನು ಇಷ್ಟಪಡಬಹುದು: ಜಗತ್ತಿನಲ್ಲಿ 195 ದೇಶಗಳಲ್ಲಿ 186 ದೇಶ ಸುತ್ತಿ ಬಂದಿರುವ ರವಿ ಪ್ರಭು

ಟೀ ಮಾರಿಯಾದ ಮೇಲೆ ಹತ್ತಿರದ ಪೆಟ್ರೋಲ್ ಬಂಕ್ ಗೆ ಹೋಗಿ ಅಲ್ಲಿ ತನ್ನ ಟೆಂಟ್ ಹಾಕಿ ಮಲಗುತ್ತಿದ್ದ. ಅವನ ಈ ಪಯಣದಲ್ಲಿ ದಾರಿ ತೋರಿಸುತ್ತಿದ್ದದ್ದು ಗೂಗಲ್ ಮ್ಯಾಪ್. ಯಾವಾಗ ಮ್ಯಾಪ್ ಕೈ ಕೊಡುತ್ತದೆಯೋ ಆ ಪ್ರದೇಶದ ಜನರ ಬಳಿ ಕೇಳುತ್ತಿದ್ದ. 

ಪಯಣದ ಆರಂಭದಲ್ಲಿ ಹೆಲ್ಮೆಟ್, ಗ್ಲೌಸ್ ಕೂಡ ನಿಧಿನ್ ಬಳಿ ಇರಲಿಲ್ಲ. ಈತನ ಸಾಹಸಗಾಥೆಯನ್ನು ಕೇಳಿದ ಕೆಲವರು ಅವನ ಸೇಫ್ಟಿಗಾಗಿ ಹೆಲ್ಮೆಟ್ ಮತ್ತು ಗ್ಲೌಸ್ ಕೊಡಿಸಿದ್ದಾರೆ. ನಿಧಿನ್ ಸೈಕಲ್ ತುಳಿಯುತ್ತಾ ತುಳಿಯುತ್ತಾ 30 ದಿನದಲ್ಲಿ ರಾಜಸ್ಥಾನ ತಲುಪಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಕಾಶ್ಮೀರಕ್ಕೆ ಹೋಗಿ ಅಲ್ಲಿನ ಪರ್ವತ ನೋಡುವ ಕನಸು ಕಾಣುತ್ತಿದ್ದಾನೆ. ಇಂಥಾ ಪ್ರವಾಸ ಪ್ರೇಮಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button