ಮೋಟಾರ್ ಸೈಕಲ್ ಡೈರಿವಿಂಗಡಿಸದಸೂಪರ್ ಗ್ಯಾಂಗುಸ್ಮರಣೀಯ ಜಾಗ

ನಿಸರ್ಗದ ಮಡಿಲಲ್ಲಿ ಹೀಗೊಂದು ಯಾನ

ಲಾಕ್ಡೌನ್ ಜಂಜಾಟದಿಂದ ಬಳಲಿದ್ದ ನಮಗೆ, ಲಾಕ್ಡೌನ್ ಸಡಿಲಗೊಂಡಿದ್ದು ವರದಾನವಾಗಿತ್ತು. ಎಲ್ಲಾದರೂ ಸುತ್ತಬೇಕು, ಮನಸ್ಸನ್ನು ಹಗುರಗೊಳಿಸಿಕೊಳ್ಳಬೇಕು ಎಂದು ತೀವ್ರವಾಗಿ ಅನ್ನಿಸಿದಾಗ, ಗೆಳೆಯರ ಬಳಗದೊಂದಿಗೆ ಬೈಕೇರಿ, ಹೊರಟಿದ್ದು ದೇವರಾಯನ ದುರ್ಗಕ್ಕೆ.
ಅಲ್ಲಿಯ ಪ್ರಕೃತಿಯನ್ನು ಕಣ್ತುಂಬಾ ಸವಿದಿದ್ದು ಮಾತ್ರವಲ್ಲ, ಅಲ್ಲಿಯ ಪರಿಸರವನ್ನು ಶುಚಿಗೊಳಿಸಿದೆವು. ಅದೊಂದು ಅದ್ಭುತ ಅನುಭವ!

  • ಚಂದನ ಎಸ್

ಸತತವಾಗಿ ಏಳು ತಿಂಗಳುಗಳ ಕಾಲ ಮನೆಯಲ್ಲಿಯೇ ಕೂತು-ಕೂತು ಜೂ ನಲ್ಲಿ ಕೂಡಿ ಹಾಕಿರುವ ಪ್ರಾಣಿಗಳಂತೆ ಇದ್ದೆವು. ಅದೃಷ್ಟವಶಾತ್ ಲಾಕ್ ಡೌನ್ ಕೊಂಚ ಸಡಿಲಗೊಂಡಿತು. ಹೊರ ಜಗತ್ತನ್ನು ನೋಡಲು ಹಾತೊರೆಯುತ್ತಿದ್ದ ನನಗೆ, ಇದೇ ಒಳ್ಳೆಯ ಅವಕಾಶ ಎಂದು ಸಡನ್ ಬೈಕ್ ಟ್ರಿಪ್ ಪ್ಲಾನ್ ಕುರಿತು ನನ್ನ ಸ್ನೇಹಿತರಿಗೆ ಹೇಳಿದೆ. ನನ್ನ ಹಾಗೇ ಬಿಡುಗಡೆ ಹೊಂದಲು ಕಾಯುತ್ತಿದ್ದ ಆ ಪ್ರಾಣಿಗಳು ಕೂಡ ಒಂದೇ ಮಾತಿಗೆ ಒಪ್ಪಿಕೊಂಡವು.

ರಜೆ ದಿನಗಳಂದು ಸೂರ್ಯ ನೆತ್ತಿಮೇಲೆ ಬಂದರೂ, ಹಾಸಿಗೆಯಿಂದ ಕದಲದೆ ಮಲಗುತ್ತಿದ್ದವರು, ಅಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ತಯಾರಾಗಿ ಮನೆಯಿಂದ ಹೊರಟು, ನಮ್ಮೆಲ್ಲರಿಗೂ ಹತ್ತಿರವಾಗುವ ನಮ್ಮ ಹಳೆ ಶಾಲೆಯ ಬಳಿ ಒಂದಾದೆವು.

ನಸುಕಿನಲ್ಲಿ ಶುರುವಾದ ಪಯಣ

ಆಗ ಸಮಯ ಸುಮಾರು ಐದು ಗಂಟೆಯಾಗಿತ್ತು. ಬಹಳ ದಿನಗಳ ನಂತರ ಸ್ನೇಹಿತರನ್ನು ನೋಡಿ ಹೇಳಲಾಗದಷ್ಟು ಖುಷಿ ಆದರೂ, ಸಮಯ ವ್ಯರ್ಥ ಮಾಡದೆ, ಅಲ್ಲಿಂದ ಮೂರು ಬೈಕ್ಗಳಲ್ಲಿ ತಲಾ ಇಬ್ಬರಂತೆ ಪಯಣವನ್ನು ಆರಂಭಿಸಿದೆವು. ಈ ನಮ್ಮ ಪಯಣ ಬೆಂಗಳೂರಿನಿಂದ ಸುಮಾರು 80 ಕಿ. ಮೀ. ದೂರವಿರುವ ದೇವರಾಯನ ದುರ್ಗ ಬೆಟ್ಟದ ಕಡೆಗೆ ಸಾಗಿತು. ನಮ್ಮ ಈ ದಿಢೀರ್ ಟ್ರಿಪ್ಗೆ ಯಾಂತ್ರಿಕ ಮಾರ್ಗದರ್ಶಿಯಾಗಿ ಸಾಥ್ ಕೊಟ್ಟಿದ್ದು ಗೂಗಲ್ ಮ್ಯಾಪ್.

ಮುಂಜಾನೆ ಕೊರೆಯುವ ಚಳಿಯಲ್ಲಿ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿಯಲ್ಲಿ ಎಲ್ಲರೂ ಬೈಟು ಟೀ ಕುಡಿದೆವು. ಜೊತೆಗೆ ಚಾ ಕಪ್ ಹಿಡಿದು ಸೆಲ್ಫಿ ತೆಗೆದುಕೊಳುವುದನ್ನು ಮಾತ್ರ ಮರೆಯಲಿಲ್ಲ. ಅಂದಿನ ಫೋಟೊಗಳು ನೆನಪುಗಳನ್ನು ಈಗಲೂ ಹಸಿಗೊಳಿಸುತ್ತಿವೆ. ಸೂರ್ಯೋದಯವನ್ನು ನೋಡುವ ಕಾತುರದಿಂದ ಅಲ್ಲಿಂದ ಬೇಗನೆ ಹೊರೆಟೆವು.

ನೀವುಇದನ್ನುಇಷ್ಟಪಡಬಹುದು: ಒಂದು ಟ್ರಿಪ್ಪಿನ ಕಥೆ ; ಮೂರು ದಿನ… ನೂರು ನೆನಪು…!

ದೇವರಾಯನ ದುರ್ಗದಲ್ಲೊಂದು ಸೂರ್ಯೋದಯ
ಬೆಟ್ಟದ ಮೇಲೆ ಸಾಲಾಗಿ ಕೂತು ನಿಸರ್ಗದ ಮಡಿಲಿನಿಂದ ಸೂರ್ಯ ಆಕಾಶದುದ್ದಕ್ಕೂ ಕೆಂಪೇರಿಸುತ್ತ ಬರುತ್ತಿದ್ದನು. ನಮ್ಮ ಕ್ಯಾಮರಾ ಕಣ್ಣಲಿ ಈ ಅದ್ಭುತ ದೃಶ್ಯವನ್ನು ಸೆರೆಹಿಡಿಯಲು ಒಂದೆಡೆ ಇಟ್ಟು, ನಾವು ಆ ಮನೋಹರ ಸೊಬಗನ್ನು ಕಣ್ತುಂಬಿಕೊಂಡೆವು. ಅಷ್ಟೊತ್ತಿಗೆ ದೇವಸ್ಥಾನದ ದ್ವಾರ ತೆಗೆದಿತ್ತು. ದೇವರ ದರ್ಶನ ಮುಗಿಸಿಕೊಂಡು ಬಂದೆವು.

ಹೊರಗೆ ಬಂದಾಕ್ಷಣ, ನಮಗಿಂತ ಚೇಷ್ಟೆ ಮಾಡುತ್ತಿದ್ದ ಮಂಗಗಳ ತುಂಟಾಟವನ್ನು ನೋಡಿ, ಅವುಗಳಿಗೆ ಬಾಳೆಹಣ್ಣನ್ನು ಕೊಟ್ಟು ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡೆವು. ನಂತರ ಬೆಟ್ಟದ ತಪ್ಪಲಿನಲ್ಲಿರುವ ಕೆರೆಯ ಬಳಿ ಹೋದೆವು. ಅಲ್ಲಿನ ವಾತಾವರಣ ಬಹಳ ಶಾಂತವಾಗಿತ್ತು. ಆದರೆ ಈ ಜಾಗ ನಾವು ಮೊದಲು ನೋಡಿದಷ್ಟು ಚೆನ್ನಾಗಿರಲಿಲ್ಲ.

ಕಸವನ್ನ ಆವರಿಸಿಕೊಂಡ ಕೆರೆಯ ತಟ

ಕೆರೆಯ ಸುತ್ತಲೂ ಇದ್ದ ಮರ-ಗಿಡಗಳ ನಡುವೆ ಹಸಿರಿಗಿಂತ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲ್ಗಳೇ ಹೆಚ್ಚು ಕಾಣುತ್ತಿದ್ದವು. ಇದನ್ನು ನೋಡಿ ಬಹಳ ಬೇಸರವಾಯಿತು. ಆ ಸ್ಥಳವನ್ನು ಹಾಗೇ ಬಿಟ್ಟು ಹೋಗಲು ಮನಸಾಗದೆ, ನಾವೆಲ್ಲರೂ ಸೇರಿ ಅಲ್ಲಿ ಬಿದ್ದಿದ್ದ ಕಸವನ್ನು ತೆಗೆಯಲು ಮುಂದಾದೆವು. ನಮ್ಮ ನಂತರ ಮತ್ತಷ್ಟು ಜನ ಬಂದರು. ಅವರಲ್ಲಿ ಕೆಲವರು ನಮ್ಮನ್ನು ಹುಚ್ಚರಂತೆ ಕಂಡರೂ, ಇನ್ನೂ ಕೆಲವರು ನಮ್ಮೊಂದಿಗೆ ಕೈ ಜೋಡಿಸಿ ಆದಷ್ಟು ಸಹಾಯ ಮಾಡಿದರು.


ಎಷ್ಟೋ ಜನರು ನಗರದ ಜಂಜಾಟದಿಂದ ತಪ್ಪಿಸಿಕೊಳ್ಳಲು ಪರಿಸರದ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಅಂತವರಲ್ಲಿ ಒಂದಷ್ಟು ಮಂದಿ ಸೌಜನ್ಯವಿಲ್ಲದೆ, ಹೋದಲ್ಲೆಲ್ಲ ಅಸಭ್ಯ ವರ್ತನೆ ತೋರಿ, ಪ್ರಕೃತಿಯನ್ನು ಹಾಳುಮಾಡುತ್ತಾರೆ. ಇಂತವರಿಗೆ ನನ್ನದೊಂದು ಕಿವಿಮಾತು. ನಿಸರ್ಗ ಸೌಂದರ್ಯವನ್ನು ಹಾಳು ಮಾಡುವ ಹಕ್ಕು ನಮಗಿಲ್ಲ. ಆದ್ದರಿಂದ ಬುದ್ಧಿಜೀವಿಗಳೇ ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳಿ ಎಂದು ಹೇಳಲು ಆಶಿಸುತ್ತೇನೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button