ರುಚಿಯಾದ ಆಹಾರಕ್ಕೆ ಪ್ರಿಯವಾದ ಉಡುಪಿಯ ಜಾಗಗಳು

ಕೊರೋನಾದಿಂದ ನಾವೆಲ್ಲ ಮನೆಯಲ್ಲಿಯೇ ಕುಳಿತುಬಿಟ್ಟಿದ್ದೇವೆ. ಈ ಲಾಕ್ ಡೌನ್ ಕಾಲೇಜು ವಿದ್ಯಾರ್ಥಿಗಳಿಗೆ ಬೇಸರ ತರಿಸಿ ಹೋಗಿದೆ. ಸದಾ ಕಾಲೇಜು , ಫ್ರೆಂಡ್ಸ್ ಎಂದಿರುತ್ತಿದ್ದ ನಮಗೆಲ್ಲ ಯಾವಾಗ ಈ ವೈರಸ್ ದೂರ ಹೋಗಿ ಮೊದಲಿನ ಹಾಗೆ ಎಲ್ಲವೂ ಆಗುತ್ತದೆ ಎನ್ನುವ ನಿರೀಕ್ಷೆ.
ಲಾಕ್ ಡೌನ್ ನಲ್ಲಿ ಕಾಲೇಜು, ಕ್ಯಾಂಪಸ್ , ಕ್ಯಾಂಟೀನ್ ಜೊತೆಗೆ ತಿನ್ನುವ ಕಾರಣಕ್ಕಾಗಿ ಹೋಗುತ್ತಿದ್ದ ಖಾಯಂ ಸ್ಥಳಗಳನ್ನು ಮಿಸ್ ಮಾಡಿ ಕೊಳ್ಳುತ್ತಿದ್ದೇನೆ. ಎಲ್ಲವೂ ಬೇಗ ಸರಿ ಹೋಗಲಿ ಎನ್ನುವ ಆಸೆ ನಮ್ಮದು.ನಮ್ಮ ಗೆಳೆಯರ ಬಳಗದ ಖಾಯಂ ತಿನ್ನುವ ತಾಣಗಳ ಮಾಹಿತಿ ಇಲ್ಲಿದೆ. ನೀವೂ ಉಡುಪಿಗೆ (udupi) ಬಂದಾಗ ಇಲ್ಲಿನ ರುಚಿ ನೋಡಿ ಹೋಗಿ.
- ನವ್ಯಶ್ರೀ ಶೆಟ್ಟಿ
‘ಸ್ಟೂಡೆಂಟ್ಸ್ ಲೈಫ್ ಇಸ್ ಗೋಲ್ಡನ್ ಲೈಫ್ ‘ ಎನ್ನುತ್ತಾರೆ . ಆದರೆ ಕೊರೋನಾ ನಮ್ಮ ಗೋಲ್ಡನ್ ಕ್ಷಣಗಳನ್ನು ಕಸಿದುಕೊಂಡುಬಿಟ್ಟಿದೆ. ಕಾಲೇಜು ನೋಡದೆ ತಿಂಗಳು ಉರುಳಿ ಹೋಗಿದೆ. ಕಾಲೇಜಿನ ಕ್ಯಾಂಪಸ್, ಕ್ಯಾಂಟೀನ್, ತರಗತಿ ಕೋಣೆಗಳನ್ನು ಯಾವಾಗ ನೋಡುತ್ತೇವೆ ಅನ್ನುವ ಕಾತುರ. ಕಾಲೇಜಿನ ಜೊತೆಗೆ ಕಾಲೇಜು ದಿನಗಳಲ್ಲಿ ಹೋಗುತ್ತಿದ್ದ ಕೆಲವು ತಾಣಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅದರಲ್ಲೂ ತಿನ್ನಲು ಹೋಗಲೆಂದೇ ನಮ್ಮ ನೆಚ್ಚಿನ ಕೆಲವು ಜಾಗಗಳಿದ್ದವು. ಈಗ ಹೋಗಬೇಕು ಎನಿಸಿದರೂ ಹೋಗುವಂತಿಲ್ಲ. ಮನೆಯಲ್ಲಿಯೇ ಕುಳಿತು ಆ ದಿನಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದೇವೆ.
ಸಮ್ಮನ (sammana)
ಎಂಜಿಎಂ ಕಾಲೇಜಿನ ಎದುರಿಗಿರುವ ಈ ಹೋಟೆಲ್ ಒಂದರ್ಥದಲ್ಲಿ ಎಂಜಿಎಂ ವಿದ್ಯಾರ್ಥಿಗಳಿಗೆ ಇನ್ನೊಂದು ಮನೆ ಇದ್ದ ಹಾಗೆ. ರುಚಿ ಕಟ್ಟು ಅಡುಗೆ ಜೊತೆಗೆ ರಾಜೇಶ್ ಅಣ್ಣನ ಚಂದದ ಮಾತು ,ಇವೆಲ್ಲವೂ ನಿಮಗೆ ಹೋಟೆಲ್ ಸಮ್ಮನ ಅಲ್ಲಿ ಯಥೇಚ್ಚವಾಗಿ ಸಿಗುತ್ತದೆ. ನಾನು ಸೇರಿದಂತೆ ನನ್ನ ಸ್ನೇಹಿತರು ಇಲ್ಲಿಗೆ ಹೋದಾಗ ಮೊದಲು ಮೆನು ಕಾರ್ಡ್ ನತ್ತ ನಮ್ಮ ನೋಟ.
ಬಿರಿಯಾನಿ ಪ್ರಿಯಳಾದ ನಾನು ಮೆನು ಕಾರ್ಡ್ ನಲ್ಲಿ ಮೊದಲು ಕಣ್ಣು ಹಾಯಿಸುವುದು ಬಿರಿಯಾನಿಯನ್ನು. ಇಲ್ಲಿಗೆ ನಾನು ಅದೆಷ್ಟು ಬಾರಿ ಹೋಗಿದ್ದೇನೆ ಎನ್ನುವ ಲೆಕ್ಕವಿಲ್ಲ . ಆದರೆ ಇಲ್ಲಿಗೆ ಹೋದಾಗೆಲ್ಲ ನಾನು ಊಟ ,ಬಿರಿಯಾನಿ ಬಿಟ್ಟರೆ ಬೇರೆ ಏನೂ ಆರ್ಡರ್ ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ಬೇರೇನೂ ತಿಂದಿಲ್ಲ ಎಂದಲ್ಲ. ಬೇರೆ ಬೇರೆ ಫುಡ್ ಆರ್ಡರ್ ಮಾಡುತಿದ್ದ ನನ್ನ ಫ್ರೆಂಡ್ಸ್ ತಟ್ಟೆಯ ಎಲ್ಲ ಖಾದ್ಯಗಳ ರುಚಿಯನ್ನು ಸವಿದಿದ್ದೇನೆ. ಬಹುಶಃ ಇಲ್ಲಿನ ಬಹುತೇಕ ಖಾದ್ಯಗಳ ರುಚಿ ನೋಡಿ ಆಗಿದೆ.

ಸಮ್ಮನ ರಾಜೇಶ್ ಅಣ್ಣ ಎಂದೇ ಫೇಮಸ್ ಆಗಿದ್ದ ರಾಜೇಶ್ ಅಣ್ಣನ ಮಾತು ,ಅದೆಷ್ಟೋ ದಿನ ನಮಗೆ ವಿರಾಮ ತಾಣ ಆಗಿದ್ದ ಜಾಗ, ಬಿಲ್ ಮಾಡಿ ಬರುವಾಗ, ನಮಗೂ ಇರಲಿ ನಮ್ಮ ಫ್ರೆಂಡ್ಸ್ ಗೂ ಇರಲಿ ಎಂದು ಜಾಸ್ತಿ ತೆಗೆದುಕೊಳ್ಳುತ್ತಿದ್ದ ಸೋಂಪು ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದೆಷ್ಟೋ ಬಾರಿ ಎಂಜಿಎಂ ಉಪನ್ಯಾಸಕರು , ವಿದ್ಯಾರ್ಥಿಗಳಿಂದ ಕಳೆ ಕಾಣುತ್ತಿದ್ದ ಸಮ್ಮನ ಸವಿಯನ್ನು ಅದೆಷ್ಟು ಬೇಗ ಸವಿಯುತ್ತೇನೆ ಎನ್ನುವ ಕಾತುರ.
ಮಣಿಪಾಲ್ ಫಾಸ್ಟ್ ಫುಡ್ (Manipal fast food)
ಇದು ಎಂಜಿಎಂ ಕಾಲೇಜಿನ ಹಲವು ವಿದ್ಯಾರ್ಥಿಗಳಿಗೆ ತಿನ್ನಲು ನೆಚ್ಚಿನ ಜಾಗ. ವೈಕುಂಠ ಬಾಳಿಗ ಕಾನೂನು ಕಾಲೇಜಿಗೆ ಹೋಗುವ ರಸ್ತೆಯ ಮಾರ್ಗದಲ್ಲೇ ಮಣಿಪಾಲ್ ಫಾಸ್ಟ್ ಫುಡ್ ಪಾಯಿಂಟ್ ಇದೆ. ಅದೆಷ್ಟು ಬಾರಿ ಇಲ್ಲಿಗೆ ಹೋಗಿದ್ದೆ ಎನ್ನುವ ಲೆಕ್ಕವೇ ಇಲ್ಲ. ನಾನು ಹಾಗೂ ನನ್ನ ಗೆಳತಿ ಮನೆಯಿಂದ ಊಟ ತರದಿದ್ದರೆ, ಬೆಳಿಗ್ಗೆಯೇ ಊಟಕ್ಕೆ ಮಣಿಪಾಲ್ ಕ್ಯಾಂಟೀನ್ ಊಟಕ್ಕೆ ಹೋಗುವುದು ಎಂದು ನಿರ್ಧರಿಸಿರುತ್ತೇವೆ. ದಾಲ್ ಸಾಂಬಾರ್ , ಕಬಾಬ್ ಊಟಕ್ಕೆ ನಾವು ಖಾಯಂ ಗ್ರಾಹಕರು .
ಒಮ್ಮೊಮ್ಮೆ ಮನೆ ಊಟ ತಂದಿದ್ದರು ಏನಾದರೂ ಸುಳ್ಳು ಹೇಳಿ ಇಲ್ಲಿಗೆ ಹೋಗುತ್ತಿದ್ದೇವೆ. ನಿನಗೆ ಮನೆ ಊಟ ಸೇರುವುದಿಲ್ಲ ಹೊರಗಿನ ಊಟ ಚೆನ್ನಾಗಿ ಸೇರುತ್ತೆ ಎನ್ನುವ ಅಮ್ಮನ ಬೈಗುಳ ಯಥೇಚ್ಚವಾಗಿ ಸಿಗುತ್ತಿತ್ತು. ಕ್ಲಾಸ್ ಬೇಗ ಮುಗಿದರೂ ನಾವು ಇಲ್ಲಿಗೆ ಹೋಗುತ್ತಿದ್ದೆವು. ಸಂಜೆಯಾದರೂ ಏನಾದರೂ ತಿನ್ನಬೇಕು ಎಂದೆನಿಸಿದಾಗ ಹೆಚ್ಚಾಗಿ ಹೋಗುತ್ತಿದ್ದದ್ದು ಇಲ್ಲಿಗೆ. ದಂಪತಿಗಳು ನಡೆಸುವ ಈ ಪುಟ್ಟ ಕ್ಯಾಂಟೀನ್ ನೀವು ಹೋದರೆ ನಿಮಗೆ ಮನೆಯ ಅನುಭವ ನೀಡುತ್ತದೆ. ಅಡುಗೆ ಕೂಡ ಮನೆ ಅಡುಗೆ ತಿಂದಷ್ಟು ರುಚಿ. ಇಲ್ಲಿ ಎಲ್ಲಾ ರೀತಿಯ ಫಾಸ್ಟ್ ಫುಡ್ ಮಾಡುತ್ತಾರೆ .ಊಟ ಕೂಡ ಇದೆ. ನಾವಂತೂ ಇಲ್ಲಿನ ದಾಲ್ ಸಾಂಬಾರ್ ಹಾಗೂ ಕಬಾಬ್ ಪ್ರಿಯರು. ರುಚಿ ಇನ್ನೂ ನಾಲಗೆಯ ಮೇಲೆ ಹಾಗೇನೆ ಇದೆ.

50ರೂ ಇದ್ದರೂ 500ರೂಪಾಯಿ ಇದ್ದಂತೆ ಬಿಲ್ಡಪ್ ಕೊಡುವ ನಮಗೆ 35 ರೂಪಾಯಿಯಲ್ಲಿ ಹೊಟ್ಟೆ ತುಂಬಾ ಊಟ ಸಿಗುತ್ತಿತ್ತು. ಕಾಲೇಜು ವಿದ್ಯಾರ್ಥಿಗಳಿಗೆ ಅಂತ ಡಿಸ್ಕೌಂಟ್ ಬೇರೆಯಿದೆ. 25 ರೂ ಊಟ, 10ರೂಗೆ ಕಬಾಬ್ ಆ ದಿನವೇ ಸಂತೃಪ್ತಿ. ಇಲ್ಲಿ ಎಲ್ಲಾ ಆಹಾರ ಕಡಿಮೆ ಬೆಲೆಯಲ್ಲಿ ಶುಚಿ ರುಚಿ ಆಗಿ ಸಿಗುತ್ತದೆ. ನೀವು ಒಮ್ಮೆ ಉಡುಪಿ, ಮಣಿಪಾಲ್ ಹಾದಿಯಲ್ಲಿ ಎಂಜಿಎಂ ಕಾಲೇಜು ಹತ್ತಿರವಿರುವ ಈ ಫುಡ್ ಪಾಯಿಂಟ್ ಗೆ ಭೇಟಿ ನೀಡಿ.
ನೀವು ಇದನ್ನು ಇಷ್ಟ ಪಡುಬಹುದು: ಕರಾವಳಿಯ ಹೆಮ್ಮೆ ಘೀ ರೋಸ್ಟ್ ಪುರಾಣ…
ಊಟ, ಕಬಾಬ್, ಕೋರಿ ರೊಟ್ಟಿ, ಪರೋಟ, ಗೋಬಿ, ನೂಡೆಲ್ಸ್ ಎಲ್ಲವೂ ಫೇಮಸ್. ನಾನ್ ವೆಜ್ ಪ್ರಿಯರ ಜೊತೆಗೆ ಸಸ್ಯಾಹಾರಿ ಪ್ರಿಯರಿಗೂ ಇಲ್ಲಿವೆ ರುಚಿ ರುಚಿ ಖಾದ್ಯ. ಅದೆಷ್ಟೋ ಹರಟೆಯ ಮಾತುಗಳನ್ನು ನಾವು ಆಡಿದ್ದು ಇಲ್ಲಿಯೇ. ಅಲ್ಲಿಗೆ ಹೋಗದೆ ಎರಡು ತಿಂಗಳು. ಮನೆಯಲ್ಲಿ ದಾಲ್ ಸಾಂಬಾರ್ ಮಾಡಿದರೆ ನೆನಪಾಗುವುದು ಮಣಿಪಾಲ್ ಕ್ಯಾಂಟೀನ್ , ಅಂಕಲ್ ಮತ್ತು ಆಂಟಿ, ನಾವು ತಡವಾಗಿ ಹೋದರು ನಮಗಾಗಿ ತೆಗೆದಿಡುತ್ತಿದ್ದ ದಾಲ್ ಸಾಂಬಾರ್.
ಸ್ವಾದಿಷ್ಟ (swadishta)
ಉಡುಪಿಯಲ್ಲಿ ಎರಡು ಸ್ವಾದಿಷ್ಟ ಹೋಟೆಲ್ ಇದೆ. ಒಂದು ಸರ್ವೀಸ್ ಬಸ್ ಸ್ಟ್ಯಾಂಡ್ ಹತ್ತಿರ. ಇನ್ನೊಂದು ಕರಾವಳಿ ಬೈಪಾಸ್ ಹೋಗುವ ಮಾರ್ಗದಲ್ಲಿ. ಎರಡೂ ಕಡೆ ಬಿರಿಯಾನಿಯ ಸವಿಯನ್ನುಂಡಿದ್ದೇವೆ. ಮೊದಲ ಬಾರಿ ಕರಾವಳಿ ಬೈಪಾಸ್ ಹತ್ತಿರದ ಸ್ವಾದಿಷ್ಟ ಹೋಗಿದ್ದು ಫಸ್ಟ್ ಇಯರ್ ನಲ್ಲಿ. 7-8ಜನರ ಗ್ಯಾಂಗ್ ,ಅದೊಂದು ಶನಿವಾರ ಸ್ವಾದಿಷ್ಟ ಕಡೆ ಹೊರಟಿದ್ದೆವು. ಹೋಗುವ ಮುನ್ನವೇ ನಮ್ಮ ಬಜೆಟ್ ನೋಡಿ ಹೋಗುವುದು ಅಭ್ಯಾಸ. ಸ್ವಾದಿಷ್ಟ ಹೋಗುವಾಗಲೂ ಹಾಗೆ ಮಾಡಿದ್ದು. ನಾನ್ ವೆಜ್ ಹೋಟೆಲ್ ಹೋದರೆ ಬಿರಿಯಾನಿ ಮಾತ್ರ ಎನ್ನುತ್ತಿದ್ದ ನಾನು ,ಮೊದಲು ಶೋರ್ಮಾ ಟೇಸ್ಟ್ ಮಾಡಿದ್ದು ಸ್ವಾದಿಷ್ಟ ಅಲ್ಲಿಯೇ. ಅಲ್ಲಿ ಎಲ್ಲವೂ ಸ್ವಾದಿಷ್ಟವೇ. ದೊಡ್ಡ ಹೋಟೆಲ್ ಅದರಂತೆ ಬಿಲ್ ಕೂಡ ದೊಡ್ಡದು .

ಮೊದಲ ಬಾರಿ ನಾವು ತಿನ್ನಲು ಹೋದಾಗ ನಮ್ಮ ಬಜೆಟ್ ಗೆ ಮೀರಿ ಬಿಲ್ ಆಗಿತ್ತು . ಆವಾಗಲೇ ಬ್ಯಾಗ್ ಮೂಲೆಯಲ್ಲಿದ್ದ ಚಿಲ್ಲರೆಗಳೆಲ್ಲ ಹೊರ ಬಂದಿದ್ದು. ಸ್ವಾದಿಷ್ಟ ಎಂದಾಗ ಮೊದಲು ನೆನಪಾಗುವುದು , ನಾವು ಚಿಲ್ಲರೆ ಒಟ್ಟು ಮಾಡಿ ಬಿಲ್ ಕೊಟ್ಟಿದ್ದು. ಆದರೆ ನಾವು ತಿನ್ನಲು ಹೋಗುವಾಗ ನಮ್ಮ ಆಯ್ಕೆಯಲ್ಲಿ ಸ್ವಾದಿಷ್ಟ ಕೂಡ ಖಾಯಂ ಸದಸ್ಯತ್ವ ಸ್ಥಾನ ಪಡೆದುಕೊಂಡಿತ್ತು.
ಕಬ್ಬಿನ ಜ್ಯೂಸ್, ಸರ್ವಿಸ್ ಬಸ್ ನಿಲ್ದಾಣ
ಆಹಾರ ಪ್ರಿಯರು ಒಂದೆಡೆ ಸೇರಿದರೆ ನಮಗೆ ಅಲ್ಲಿನ ಆಹಾರ ಮುಖ್ಯ ಹೊರತು ಅಂಗಡಿಯ ಹೆಸರಲ್ಲ. ಅದರಂತೆ ಈ ಕಬ್ಬಿನ ಜ್ಯೂಸ್ ಅಂಗಡಿ. ಉಡುಪಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ಈ ಕಬ್ಬಿನ ಜೂಸ್ ಅಂಗಡಿ ಇದೆ. ಅಂಗಡಿಯ ಹೆಸರು ನೆನಪಿಲ್ಲ. ಆದರೆ ಅಂಗಡಿಗೆ ಹೋಗಿ ರುಚಿ ಸವಿದ ಕಬ್ಬಿನ ಜ್ಯೂಸ್ ರುಚಿ ಇನ್ನೂ ನೆನಪಿದೆ. 20 ರೂಪಾಯಿಗೆ ಸಿಗುವ ಕಬ್ಬಿನ ಜ್ಯೂಸ್ ನಿಮ್ಮ ದಾಹ ತಣಿಸುವುದು ಮಾತ್ರ ಅಲ್ಲದೆ, ಮತ್ತೆ ನಿಮ್ಮನ್ನು ಅಲ್ಲಿಗೆ ಬರುವಂತೆ ಮಾಡುತ್ತದೆ ಈ ಕಬ್ಬಿನ ಜ್ಯೂಸ್ ರುಚಿ.

ಕಳೆದ ಬಾರಿ ಲಾಕ್ ಡೌನ್ ಕೊಂಚ ಸಡಿಲವಾದ ಬಳಿಕ , ಉಡುಪಿ ಹೋದಾಗ ಈ ಕಬ್ಬಿನ ಜ್ಯೂಸ್ ಸವಿಯುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾವೇ ಅದಕ್ಕೆ ನಮ್ಮದೇ ಕೆಲವೊಂದು ಹೆಸರಿಟ್ಟುಕೊಂಡು ಜ್ಯೂಸ್ ರುಚಿ ಸವಿಯುತ್ತಿದ್ದೇವು. ಆದರೆ ಇವಾಗ ಅದಕ್ಕೆ ಅವಕಾಶವಿಲ್ಲ.ಆದರೆ ಮತ್ತೆ ಕಾಲೇಜು ಆರಂಭವಾದ ಬಳಿಕ ಕಬ್ಬಿನ ಜ್ಯೂಸ್ ಅಂಗಡಿಗೆ ಹೋಗುವುದು ಖಾಯಂ. ನೀವು ಉಡುಪಿ ಬಂದಾಗ ಒಮ್ಮೆ ಸರ್ವೀಸ್ ಬಸ್ ಸ್ಟ್ಯಾಂಡ್ ನಲ್ಲಿರುವ ಈ ಕಬ್ಬಿನ ಜ್ಯೂಸ್ ರುಚಿ ನೋಡಿ ಹೋಗಿ.
ಗೋಲಿ ಸೋಡ , ಕೃಷ್ಣ ಮಠ ಸಮೀಪ (goli soda)
ನೀವು ಉಡುಪಿ ಬಂದಾಗ ಗೋಲಿ ಸೋಡಾ ಸವಿಯದಿದ್ದಲ್ಲಿ , ಉಡುಪಿ ಬಂದದ್ದು ಒಂದರ್ಥದಲ್ಲಿ ವ್ಯರ್ಥ. ನಾನೂ ಎಂಜಿಎಂ ಬಂದ ಮೇಲೆ ಗೋಲಿ ಸೋಡಾ ರುಚಿ ಕಂಡಿದ್ದು. ಮೊದಲೆಲ್ಲಾ ನನ್ನ ಸ್ನೇಹಿತರು ಗೋಲಿ ಸೋಡಾ ಅಂದಾಗ ಅದೇನೂ ಎನ್ನುವಂತೆ ನೋಡುತ್ತಿದ್ದೆ. ಆದರೆ ಇವಾಗ ಗೋಲಿ ಸೋಡಾ ಅತ್ಯಾಪ್ತ ಗೆಳೆಯನಾಗಿ ಬಿಟ್ಟಿದ್ದಾನೆ.ಹೀಗೊಮ್ಮೆ ಫ್ರೆಂಡ್ಸ್ ಕೃಷ್ಣ ಮಠದ ಹತ್ತಿರದ ಗೋಲಿ ಸೋಡಾ ಮಾರುವ ಅಂಗಡಿಗೆ ಕರೆದು ಕೊಂಡು ಹೋಗಿದ್ದರು. ಆ ಬಳಿಕ ಕೃಷ್ಣ ಮಠ ಹೋದಾಗಲೆಲ್ಲ ನಾವು ಗೋಲಿ ಸೋಡಾ ಅಂಗಡಿಗೆ ಖಾಯಂ ಗ್ರಾಹಕರು.

ಗೋಲಿ ಸೋಡಾ ದಲ್ಲಿ ಕೂಡ ಹಲವು ಫ್ಲೇವರ್. ಅಂಗಡಿಯ ಜಗುಲಿಯಲ್ಲಿ ಕುಳಿತು ಹರಟೆ ಹೊಡೆಯುತ್ತಾ, ಗೋಲಿ ಸೋಡಾ ಕುಡಿಯುತ್ತಾ ಇರುತ್ತಿದ್ದೆವು. 10ರೂ ಗೆ ಸಿಗುವ ಗೋಲಿ ಸೋಡಾ ಕುಡಿದಾಗಲೆಲ್ಲ ನಾನು ಉಡುಪಿ ಕಡೆ ಕಾಲೇಜಿಗೆ ಬಂದಿದ್ದು ಒಳ್ಳೆಯದಾಯಿತು ಎಂದು ಮನಸಿನ ಮೂಲೆಯಲ್ಲಿ ಸದಾ ಅನ್ನಿಸಿರುತ್ತದೆ. ಗೋಲಿ ಸೋಡಾ ಕುಡಿಯಲು ಜೊತೆಯಾಗಲು ಅದೇ ನಮ್ಮ 4-5 ಜನದ ಗ್ಯಾಂಗ್. ಆಗೊಮ್ಮೆ ಹೀಗೊಮ್ಮೆ ಜೊತೆಯಾಗುತ್ತಾರೆ ಕೆಲವು ಸೀನಿಯರ್. ಆದರೆ ಗೋಲಿ ಸೋಡಾ ಸವಿಯದೇ ಅದೆಷ್ಟೋ ದಿನಗಳೇ ಕಳೆದಿದೆ.
ಕ್ರೀಮ್ ಬೌಲ್ (cream bowl)
ಕ್ರೀಮ್ ಬೌಲ್ ಉಡುಪಿಯ ಆಸುಪಾಸಿನ ಐಸ್ ಕ್ರೀಮ್ ಪ್ರಿಯರ ನೆಚ್ಚಿನ ತಾಣ. ಪೆಪ್ಸಿ , ಕ್ಯಾಂಡಿ , ಗಡಬಡ್ , ಐಸ್ ಕ್ರೀಮ್ ಎಂದು ತಿಳಿದಿದ್ದ ನನಗೆ, ಕ್ರೀಮ್ ಬೌಲ್ ನಲ್ಲಿ ಮೊದಲ ಸಲ ಐಸ್ ಕ್ರೀಮ್ ತರಾವರಿ ವಿಧ ನೋಡಿ ಬೆರಗಾಗಿದ್ದೆ. ಇಲ್ಲಿ 35-40ರೂನಿಂದ ನಿಮಗೆ ಐಸ್ ಕ್ರೀಮ್ ಸಿಗುತ್ತದೆ. ತರಾವರಿ ಐಸ್ ಕ್ರೀಮ್ ನಿಮ್ಮ ಬಾಯಿಯಲ್ಲಿ ನಿರೂರಿಸಿಬಿಡುತ್ತದೆ. ಉಡುಪಿಯ ಅಸು ಪಾಸಿನ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾಕಷ್ಟು ಜನ ಕ್ರೀಮ್ ಬೌಲ್ ಗೆ ಗ್ರಾಹಕರು . ಕ್ರೀಮ್ ಬೌಲ್ ಐಸ್ ಕ್ರೀಮ್ ಗೆ ಕಾದು ಕುಳಿತುಕೊಳ್ಳುವವರು ಅನೇಕರು. ಮಧ್ಯಾಹ್ನ 3 ಗಂಟೆಗೆ ಕ್ರೀಮ್ ಬೌಲ್ ಓಪನ್ ಆಗುವ ಮುನ್ನ ಗಂಟೆಗಟ್ಟಲೆ ನಾವು ಕ್ರೀಮ್ ಬೌಲ್ ಎದುರು ಕಾಯುತಿದ್ದದ್ದು ನೆನಪು. ಇಲ್ಲಿ ಎಲ್ಲವೂ ಸೆಲ್ಫ್ ಸರ್ವೀಸ್. ಅದೆಷ್ಟೋ ಬಾರಿ ಹೋದರು ಫ್ರೂಟ್ ಸಲಾಡ್ ನನ್ನ ಮೊದಲ ಆದ್ಯತೆ.

ಮನೆಯವರಿಗೆ ನಾನು ಹೇಳುತ್ತಿದ್ದ ಸುಳ್ಳುಗಳಿಗೆ ಕ್ರೀಮ್ ಬೌಲ್ ಕೆಲವೊಮ್ಮೆ ಮೂಕ ಸಾಕ್ಷಿ. ಕ್ರೀಮ್ ಬೌಲ್ ನಲ್ಲಿದ್ದು, ಬಸ್ ನಲ್ಲಿ ಇದ್ದೇನೆ ಎನ್ನುತ್ತಾ ಅಪ್ಪನಿಗೆ ಅದೆಷ್ಟೋ ಬಾರಿ ಸುಳ್ಳು ಹೇಳುತಿದ್ದೆ. ಸುಳ್ಳಿನ ಮೂಲಕ ಬೈಗುಳದಿಂದ ಪಾರಾಗುವ ಯೋಚನೆ. ಇಂದು ಕ್ರೀಮ್ ಬೌಲ್ ಹೋಗದೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ತಿಂಗಳಲ್ಲಿ 3-4 ಬಾರಿಯಾದರೂ ನಾವು ಕ್ರೀಮ್ ಬೌಲ್ ಕಡೆ ನಮ್ಮ ಪಯಣ ಬೆಳೆಸುತ್ತಿದ್ದೇವು.
ನೀವು ಐಸ್ ಕ್ರೀಮ್ ಪ್ರಿಯರಾದರೇ ಲಾಕ್ ಡೌನ್ ಮುಗಿದ ಬಳಿಕ ಉಡುಪಿಯ ಕ್ರೀಮ್ ಬೌಲ್ ಗೆ ಒಮ್ಮೆ ಹೋಗಿ ಬನ್ನಿ. ಕೃಷ್ಣ ಮಠದ ರಥ ಬೀದಿಯ ಹತ್ತಿರ ಇರುವ ರಿಕ್ಷಾ ನಿಲ್ದಾಣದ ಕೊಂಚ ದೂರದಲ್ಲಿ ಕ್ರೀಮ್ ಬೌಲ್ ಇದೆ. ಮನೆಯಲ್ಲಿರುವ ಈ ಸಮಯದಲ್ಲಿ ಐಸ್ ಕ್ರೀಂ ಗಾಡಿಯ ಹಾರ್ನ್ ಶಬ್ಧ ಕೇಳಿದಾಗಳೆಲ್ಲ ಕ್ರೀಮ್ ಬೌಲ್ ನೆನಪಾಗುತ್ತದೆ.
ಇವು ಮಾತ್ರವಲ್ಲ ರಥ ಬೀದಿಯ ಗೋಲ್ಗೊಪ್ಪ , ಉಪ್ಕರಿಯ ಅಂಗಡಿ , ಮಣಿಪಾಲದ ಖುಷಿ , ಉಡುಪಿಯ ಒಡೆಯ ಹೋಗುತಿದ್ದ ಆ ದಿನಗಳು , ಅದಕ್ಕೆಂದೇ ಉಳಿಸುತ್ತಿದ್ದ ಪಾಕೆಟ್ ಮನಿ, ತಿರುಗಾಟವನ್ನು, ತಿನ್ನುವುದನ್ನು ಇಷ್ಟಪಡುವ ಗೆಳೆಯರನ್ನು ಮಿಸ್ ಮಾಡಿಕೊಳ್ಳುವಂತೆ ಮಾಡಿ ಬಿಟ್ಟಿದೆ ಕರೋನಾ. ಕಾಲೇಜು ಆರಂಭವಾದ ಬಳಿಕ ನನ್ನೆಲ್ಲಾ ಈ ಇಷ್ಟದ ತಾಣಗಳಿಗೆ ಹೋಗಲು ಕಾಯುತ್ತಿದ್ದೇನೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ