ತುಂಬಿದ ಮನೆದೂರ ತೀರ ಯಾನನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಎತ್ತಿನಭುಜ ಏರಲಾಗುತ್ತದೋ ಇಲ್ಲವೋ ಎಂಬ ಅನುಮಾನವಿತ್ತು: ಸಿಂಧೂ ಪ್ರದೀಪ್ ಬರೆದ ಸುಂದರ ಬೆಟ್ಟದ ಕತೆ

ಕರ್ನಾಟಕದಲ್ಲಿರುವ ಅತ್ಯಂತ ಸುಂದರ ಬೆಟ್ಟಗಳಲ್ಲಿ ಒಂದು ಎತ್ತಿನಭುಜ. ಆ ಬೆಟ್ಟವನ್ನು ನೋಡುವುದು, ಬೆಟ್ಟದ ಮೇಲೆ ನಿಲ್ಲುವುದು ವಿವರಿಸಲಾಗದ ಚಂದದ ಅನುಭವ. ಒಂದು ದಿನ ಯಾವುದೋ ಪ್ಲಾನ್ ಮಾಡದೇ ಎತ್ತಿನಭುಜ ಹತ್ತಿ ಬಂದ ಸಿಂಧೂ ಪ್ರದೀಪ್ ಬರೆದ ಅನುಭವ ಕಥನವಿದು. ಬೆಂಗಳೂರಿನಲ್ಲಿ ಗೃಹಿಣಿಯಾಗಿರುವ ಸಿಂಧೂ ಮೂಲತಃ ಭದ್ರಾವತಿ ಹುಡುಗಿ. ಫುಡ್ ಮತ್ತು ಟ್ರಾವೆಲ್ ಬ್ಲಾಗ್ ಬರೆಯುವುದು ಇವರ ಹವ್ಯಾಸ.

Sindhu Pradeep

ನಮ್ಮ ಕರ್ನಾಟಕದಲ್ಲಿ ಬೆಟ್ಟಗಳಿಗೇನೂ ಕಮ್ಮಿಯಿಲ್ಲ, ಈ ಪಶ್ಚಿಮ ಘಟ್ಟಗಳ ಸೌಂದರ್ಯ ಎಂದಿಗೂ ಅವರ್ಣನೀಯ. ಮಲೆನಾಡ ಹೆಬ್ಬಾಗಿಲಾದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಹುಟ್ಟಿ ಬೆಳೆದು ಕಾಂಕ್ರಿಟ್ ಕಾಡಿನಲ್ಲಿ ನೆಲೆಸಿರುವ ನನಗೆ ಈ ಮಲೆನಾಡು ಪ್ರದೇಶಗಳ ಆಕರ್ಷಣೆ ಹೇಳತೀರದು..

ಈ ಮಲೆನಾಡ ಪ್ರದೇಶಗಳು ಇತ್ತೀಚೆಗೆ ಎಲ್ಲಾ ಪ್ರವಾಸಿಗರನ್ನು ಆಕರ್ಷಿಸುವ ಒಂದು ಪ್ರಮುಖ ತಾಣವಾಗಿದೆ. ಇತ್ತೀಚಿನ ಯುವ ಪೀಳಿಗೆ ಅಂತೂ ಈ ಮಾನ್ಸೂನ್ ರೈಡ್, ಟ್ರೆಕಿಂಗ್ ಎಂದು ವಾರಾಂತ್ಯದಲ್ಲಿ ಬೆಟ್ಟಗುಡ್ಡಗಳ ಸುತ್ತಾಟದಲ್ಲಿ ತೊಡಗುತ್ತಾರೆ. ಇಂದು ನಾನು ಹೇಳಹೊರಟಿರುವುದು ಇದೇ ರೀತಿಯ ಒಂದು ಟ್ರೆಕಿಂಗ್ ಕಥೆ.

ನಿಮಗೆಲ್ಲಾ ಗೊತ್ತಿರುವಹಾಗೆ ಟ್ರೆಕಿಂಗ್ ಹೋಗುವವರು ಬಹಳಷ್ಟು ಪೂರ್ವ ನಿಯೋಜನೆ ಮಾಡಿಕೊಂಡು ಹೊರಡುತ್ತಾರೆ. ಆದರೆ ನಾನಿಲ್ಲಿ ಹೇಳುತ್ತಿರುವು ಯಾವ ಪೂರ್ವ ನೀಯೋಜನೆಯೂ ಇಲ್ಲದ ಒಂದು ಪಯಣ. ಅನ್ ಪ್ಲಾನ್ಡ್ ಟ್ರಿಪ್..

ನಾನು ನನ್ನ ಗಂಡ ಇಬ್ಬರಿಗೂ ಪ್ರವಾಸ ಎಂದರೆ ತುಂಬಾ ಪ್ರೀತಿ.. ಸಮಯ ಸಿಕ್ಕಾಗೆಲ್ಲಾ ಒಂದಲ್ಲಾ ಒಂದು ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತೇವೆ..

ಹೀಗೆ ನನ್ನ ತವರೂರಿನಿಂದ ಬೆಂಗಳೂರಿಗೆ ತಿರುಗಿ ಬರುವಾಗ ಇದ್ದಕ್ಕಿದಹಾಗೆ ಪ್ಲಾನ್ ಮಾಡಿ ಸಕಲೇಶಪುರದ ಕಡೆಗೆ ಕಾರು ತಿರುಗಿಸಿದೆವು. ತರೀಕೆರೆಯಿಂದ ಚಿಕ್ಕಮಗಳೂರು ಬೇಲೂರು ಮಾರ್ಗವಾಗಿ ಸಕಲೇಶಪುರ ತಲುಪಿದೆವು. ಅಷ್ಟರಲ್ಲಾಗಲೇ ಸಮಯ ಸಂಜೆ ಏಳು, ಅಲ್ಲಿಂದ ನೇರವಾಗಿ ಕ್ಯಾನಹಳ್ಳಿಯಲ್ಲಿರುವ ರಾಸ್ತಾ ಹೋಮ್ ಸ್ಟೇ (Rasta Homestay)ಗೆ ಉಳಿದುಕೊಳಲು ಹೋದೆವು. ಇದು ನನ್ನ ಸ್ನೇಹಿತನ ಹೋಮ್ ಸ್ಟೇ ಆಗಿರುವ ಕಾರಣ ಇದು ನನ್ನ ಎರಡನೇ ಭೇಟಿ.. ಅಲ್ಲಿರುವ ಸ್ನೇಹಿತರೆಲ್ಲರೂ ಸೇರಿ ಅಡುಗೆ ಮಾಡಿ ತಿಂದು ಒಂದು ರಾತ್ರಿ ಅಲ್ಲೇ ಕಳೆದೆವು.. ಹೀಗೆ ಮಾತನಾಡುತ್ತಾ ನಾಳೆ ಬೆಳಿಗ್ಗೆ ಎತ್ತಿನ ಭುಜ ಹೋಗೋಣ ಎಂದು ಪ್ಲಾನ್ ಮಾಡಿದರು. ಬರೀ ಇನ್ಸ್ಟಾ ಗ್ರಾಮ್ ನಲ್ಲಿ ಅಷ್ಟೇ ಅದರಬಗ್ಗೆ ನೋಡಿದ್ದೆ ನಾನು.. ಕೆಲವೊಂದು ವಿಡಿಯೋಸ್ ನೋಡಿ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗಬೇಕು ಅನ್ನೋ ಆಸೆ ಇತ್ತು..

Sindhu Pradeep

ಇನ್ಸ್ಟಾಗ್ರಾಮ್ ನನಲ್ಲಿ ಫುಡ್ ಅಂಡ್ ಟ್ರಾವೆಲ್ ಬ್ಲಾಗರ್ ಆದ ನನಗೆ ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ ಮುಖ್ಯವಾಗಿ ಬೇಕಾಗುವುದು ಫೋಟೋಸ್.. ಆಯಾ ಸ್ಥಳಕ್ಕೆ ಹೊಂದುವ ಉಡುಗೆ ಆಯಾ ಸ್ಥಳಕ್ಕೆ ಹೊಂದುವ ಭಂಗಿಯಲ್ಲಿ ಫೋಟೋಸ್ ತೆಗೆದು ಪೋಸ್ಟ್ ಮಾಡುವುದು ನನ್ನ ಹವ್ಯಾಸ.. ಹೀಗೆ ಎತ್ತಿನ ಭುಜ ಎಂದ ತಕ್ಷಣ ನನಗೆ ಟ್ರೆಕಿಂಗ್ ಹೋಗಲು ಯಾವ ಉಡುಗೆ ತೊಡಬೇಕೆಂದು ಚಿಂತೆಯಾಯಿತು.. ಏಕೆಂದರೆ ಕೇವಲ ಮೂರು ದಿನಕ್ಕೆಂದು ತಾಯಿಯ ಮನೆಗೆ ಹೋದ ನಾನು ಕೆಲವು ಕಾರಣಗಳಿಂದ ಒಂದೂವರೇ ತಿಂಗಳು ಅಲ್ಲೇ ಉಳಿಯಬೇಕಾಗಿ ಬಂತು. ಟ್ರೆಕ್ಕಿಂಗ್ ಗೆ ಬೇಕಾದ ಯಾವುದೇ ಉಡುಗೆ ಆಗಲಿ ಶೂ ಆಗಲಿ ನಾನು ತೆಗೆದಿಟ್ಟುಕೊಂಡಿರಲಿಲ್ಲ. ಅದಕ್ಕಾಗಿ ಮೊದಲೇ ಹೇಳಿದ್ದು ಇದು ಒಂದು ಅನ್ ಪ್ಲಾನ್ಡ್ ಟ್ರಿಪ್ ಅಂತ.

ರಾತ್ರಿ ಕಳೆದು ಬೆಳಕಾಯಿತು, ಎಲ್ಲರೂ ರಾತ್ರಿ ತಡವಾಗಿ ಮಲಗಿದ್ದ ಕಾರಣ ತಡವಾಗಿ ಎದ್ದೆವು.. ರಾತ್ರಿ ಎಲ್ಲಾ ಉಡುಗೆಯ ಬಗ್ಗೆ ಚಿಂತಿಸಿದ ನಾನು ಬೆಳಿಗ್ಗೆ ಇದ್ದಿದ್ದರಲ್ಲಿ ಸಮಾಧಾನ ಅನಿಸುವ ಒಂದು ಉದ್ದನೆಯ ಲಂಗ ತೊಟ್ಟು ಟ್ರೆಕಿಂಗ್ ಹೊರಟೆ.. ನನಗೆ ಗೊತ್ತು ಇದು ಟ್ರೆಕ್ಕಿಂಗ್ ಗೆ ತದ್ವಿರುದ್ಧ ಉಡುಪು ಎಂದು.. ಹೋಮ್ ಸ್ಟೇಯಿಂದ ಹೊರಡುವುದರಲ್ಲಿ 11.30 ಆಗಿತ್ತು. ಕ್ಯಾನಹಳ್ಳಿ ಸಕಲೇಶಪುರದಿಂದ ಹಾನಬಾಳ್ ಮಾರ್ಗವಾಗಿ ಮೂಡಿಗೆರೆಯ ಬೈರಪುರ ತಲುಪಿದೇವು.. ತಿರುವುಮುರುವುಗಳಿರುವ ರಸ್ತೆಗಳ ಇಕ್ಕೆಲಗಳಲ್ಲಿ ಕಾಫಿ ಎಸ್ಟೇಟ್, ಭತ್ತದ ಗದ್ದೆಗಳೇ ರಾರಾಜಿಸುತ್ತಿದ್ದವು. ಈ ತಿರುವಿನ ರಸ್ತೆಯಲ್ಲಿ ಪ್ರಯಾಣಿಸುವುದೇ ಒಂದು ರೋಮಾಂಚನ.. ಹೀಗೆ ಬೈರಪುರದಿಂದ ಎಡಕ್ಕೆ ನಮ್ಮ ಕಾರು ಚಲಿಸಿತು.. ಇಲ್ಲಿಂದಲೇ ನಮಗೆ ಎತ್ತಿನ ಭುಜ ಗೋಚರಿಸುತ್ತಿತ್ತು.

ರಸ್ತೆಯ ಕೊನೆಯಲ್ಲಿ ಒಂದು ದೇವಾಲಯದ ಪಕ್ಕದಲ್ಲಿ ವಾಹನವನ್ನು ನಿಲ್ಲಿಸಿದೆವು, ಅದುವೇ ಶ್ರೀ ನಾಣ್ಯ ಭೈರವೇಶ್ವರ ದೇವಾಲಯ ಇದು 13ನೇ ಶತಮಾನದ ಹೊಯ್ಸಳರ ಕಾಲದ ದೇವಾಲಯವೆಂದು ತಿಳುದುಬರುತ್ತದೆ, ಇಲ್ಲಿಂದ ಮುಂದೆ ವಾಹನಗಳು ಚಲಿಸುವುದಿಲ್ಲ. ಎತ್ತಿನ ಭುಜದ ತುತ್ತ ತುದಿ ತಲುಪಲು ಕಾಲ್ನಡಿಗೆಯಲ್ಲಿ ಸುಮಾರು 3 ಕಿಮೀ ಕ್ರಮಿಸಬೇಕು.

ಪಶ್ಚಿಮ ಘಟ್ಟಗಳ ಚಾರ್ಮಾಡಿ ಘಾಟಿಯ ಒಂದು ಭಾಗವೇ ಈ ಎತ್ತಿನ ಭುಜ. ಸಮುದ್ರಮಟ್ಟಕ್ಕಿಂತ 4265 ಅಡಿ ಎತ್ತರದಲ್ಲಿರುವ ಈ ಬೆಟ್ಟ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಪುರ ಎಂಬ ಸಣ್ಣ ಹಳ್ಳಿಯಲ್ಲಿ ಇದೆ. ಸ್ಥಳೀಯರು ಇದನ್ನು ಶಿಶಿಲಾ ಗುಡ್ಡ ಎಂದೂ ಕರೆಯುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡಲು ಅಥವಾ ಚಾರಣ ಮಾಡಲು ಎರಡು ದಾರಿ ಇದೆ. ಒಂದು ನಾವು ಆಯ್ದುಕೊಂಡ ಸುಲಭದ ದಾರಿ ಬೈರಪುರದಿಂದ. ಇನ್ನೊಂದು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲಾ ಎಂಬ ಹಳ್ಳಿಯಿಂದ ಇದೆ. ಅದು ಸ್ವಲ್ಪ ಕಷ್ಟದ ಹಾಗೂ ದೂರದ ದಾರಿ. ಸುಮಾರು 10 ಕೀ ಮಿ ಕೆಲವು ಬೆಟ್ಟ ಗುಡ್ಡಗಳು ನದಿ ತೊರೆಗಳನ್ನು ದಾಟಿ ತಲುಪಬೇಕು.. 

ಭೈರವೇಶ್ವರ ದೇವಾಲಯದಿಂದ ಕಾಲ್ನಡಿಗೆ ಪ್ರಾಂರಂಭಿಸಿದ ನಮಗೆ ಎದುರು ಕಂಡಿದ್ದು ದಟ್ಟವಾದ ಅರಣ್ಯ. ಅದರೊಳಗೆ ಸಾಗುವ ಕಾಲು ದಾರಿ.. ನಡೆಯಲು ಅಷ್ಟೇನು ಕಷ್ಟ ಅನಿಸದ ದಾರಿಯಾಗಿತ್ತು ಅದು.. ಹೀಗೆ ಸಾಗುತ್ತ ಮುಂದೆ ಹೋದಂತೆ ಎತ್ತರದ ಬೆಟ್ಟ ಎದುರಾಯಿತು. ಆ ಉದ್ದ ಲಂಗವನ್ನು ತೊಟ್ಟು ಇದನ್ನ ಹತ್ತುವುದೇ ಒಂದು ದೊಡ್ಡ ಸಮಸ್ಯೆ ನನಗೆ.. 

ದಾರಿಯುದ್ದಕ್ಕೂ ನಂಗೆ ಆಗಲ್ಲ ಅನ್ನೋ ಮಾತೊಂದೇ ನನ್ನ ಬಾಯಲ್ಲಿತ್ತು.. ನನ್ನ ಜೊತೆ ನನ್ನ ಗಂಡ, ನನ್ನ 5 ವರ್ಷದ ಮಗ ಹಾಗೂ ಒಬ್ಬ ಸ್ನೇಹಿತ ಜೊತೆಗಿದ್ದರು. ನಡೆಯುತ್ತ ದಟ್ಟ ಕಾಡು ಮಾಯವಾದಂತೆ ಹುಲ್ಲುಗಾವಲು ಎದುರಾಯಿತು ಇಲ್ಲಿಂದ ಚಾರ್ಮಾಡಿ ಶ್ರೇಣಿಗಳು ಅದ್ಭುತವಾಗಿ ಕಾಣಿಸುತಿತ್ತು ಅಲ್ಲೇ ಕುಳಿತು ಸ್ವಲ್ಪ ವಿಶ್ರಮಿಸಿದೆವು. ಇಲ್ಲಿಂದ ಮುಂದೆ ಸಾಗುತ್ತಿದಂತೆ ಕಣ್ಮುಂದೆ ಇದ್ದಿದ್ದು ಕಷ್ಟಕರವಾದ ದಾರಿ.. 

70 ರಿಂದ 80 ಡಿಗ್ರಿ ಇಳಿಜಾರಿನ ದಾರಿ ಅದು ಅದರ ಜೊತೆಗೆ ದೊಡ್ಡ ದೊಡ್ಡ ಬಂಡೆ ಕಲ್ಲುಗಳನ್ನು ಹತ್ತಿ ಸಾಗಬೇಕಿತ್ತು.. ಇದನ್ನೆಲ್ಲಾ ನೋಡಿ ನಾನು ಅಳುವುದೊಂದೇ ಬಾಕಿ. ಅಂಥಾ ದುರ್ಗಮ ದಾರಿಯಲ್ಲಿ ನನ್ನ 5 ವರ್ಷದ ಮಗ ಯಾರ ಸಹಾಯವೂ ಇಲ್ಲದೆ ಪಟ್ ಎಂದು ಮೇಲೆ ಏರಿಯೇಬಿಟ್ಟ.. ಅದನ್ನು ನೋಡಿ ನನಗೆ ಹುರುಪು ಹೆಚ್ಚಾಗಿ ಹಿಂತಿರುಗಿ ನೋಡದೆ ತುತ್ತ ತುದಿ ತಲುಪಿಬಿಟ್ಟೆ..

ಆ ತುದಿಯಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಕಾಣುವ ಆ ದೃಶ್ಯ ಅವರ್ಣನೀಯ.. ಆ ಹಸಿರು ಬೆಟ್ಟಗಳು ಸ್ವರ್ಗಲೋಕದಂತೆ ಭಾಸವಾಗುತ್ತಿತ್ತು.. ಒಂಬತ್ತು ಗುಡ್ಡ, ಜೇನುಕಲ್ಲು ಗುಡ್ಡ, ದೀಪದಕಲ್ಲು ಗುಡ್ಡ ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು ಗುಡ್ಡಗಳ ಸಾಲು..

ಅರ್ಧ ತಾಸು ತುತ್ತ ತುದಿಯಲ್ಲಿ ಕಳೆದು ಬೆಟ್ಟ ಇಳಿಯಲು ಪ್ರಾರಂಭಿಸಿದೆವು. ಇಳಿಯುವುದು ಅಷ್ಟೇನು ಸುಲಭವಾಗಿರಲಿಲ್ಲ. ಮಣ್ಣುಗಳು ಜಾರುತಿದ್ದವು. ಹೇಗೋ ಜಾಗ್ರತೆಯಿಂದ ಇಳಿದು ಭೈರವೇಶ್ವರ ದೇವಾಲಯ ತಲುಪಿದೆವು.. 

ಮತ್ತೆ ಅದೇ ಹಾನಬಾಳ್ ಮಾರ್ಗವಾಗಿ ಸಕಲೇಶಪುರ ತಲುಪಿ ಅಲ್ಲೇ ಮಲೆನಾಡಿನ ಅಕ್ಕಿ ರೊಟ್ಟಿ ಸವಿದು ಬೆಂಗಳೂರು ತಲುಪಲು ರಾತ್ರಿ 10.30 ಆಯ್ತು.. ಈ ಚಾರಣದ ಅನುಭವ ಮರೆಯುವುದು ಸಾಧ್ಯವೇ ಇಲ್ಲ.. ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಿ ರೋಮಾಂಚನ ಅನುಭವಿಸಿ.

ಅನುಭವದ ಮಾತು:

ಅಕ್ಟೋಬರ್ ನಿಂದ ಜನವರಿ ತಿಂಗಳಲ್ಲಿ ಇಲ್ಲಿ ಭೇಟಿ ನೀಡಬಹುದು.. ಮಳೆಗಾಲದಲ್ಲಿ ಜಿಗಣೆಗಳ ಕಾಟ ತುಂಬಾ ಇರುವುದರಿಂದ ಮುಂಜಾಗ್ರತೆ ವಹಿಸುವುದು ಉತ್ತಮ.. ದಯವಿಟ್ಟು ಈ ಸ್ಥಳವನ್ನು ಪ್ಲಾಸ್ಟಿಕ್ ನಿಂದ ದೂರವಿಡಿ.. 

Related Articles

Leave a Reply

Your email address will not be published. Required fields are marked *

Back to top button