ದೂರ ತೀರ ಯಾನನಡಿಗೆ ನಮ್ಮ ಖುಷಿಗೆಬೆರಗಿನ ಪಯಣಿಗರುವಿಂಗಡಿಸದವಿಸ್ಮಯ ವಿಶ್ವ

ದುರ್ಗಮ ದುರ್ಗದ ಮೇಲೆ ಲವಲವಿಕೆಯ ದಂಪತಿ: ರೊಮ್ಯಾಂಟಿಕ್ ಟ್ರೆಕ್ಕಿಂಗ್ ಮಾಡಿ ಬಂದ ವಿಜಯ್-ದೀಪಾಗೆ ಹ್ಯಾಪಿ ಆ್ಯನಿವರ್ಸರಿ

ಸಾವನದುರ್ಗವೆಂಬ ಚಾರಣಿಗರ ಸ್ವರ್ಗದ ಬಾಗಿಲು ತಟ್ಟಿ, ಅದರ ಬೆನ್ನು ಹತ್ತಿ, ತುತ್ತ ತುದಿಯನ್ನು ಏರಿ ಪ್ರೀತಿಯ ಹೆಂಡ್ತಿ ಜೊತೆ ಕುಳಿತು ಚುಮುಚುಮು ಚಳಿ ಮತ್ತು ಜೋರಾದ ಗಾಳಿಯಲ್ಲಿ “ಕಾಂಗ್ರೆಸ್” ಕಡಲೆಬೀಜದ ಮಸಾಲಾ ತಿಂದ ಸುಂದರ ಮರೆಯಲಾರದ ಸವಿಕ್ಷಣಗಳನ್ನು ಅನುಭವಿಸಿ, ಅದೇ ಖುಷಿಯಲ್ಲಿ ವಿಜಯ್ ಬರೆದ ಸುಂದರ ಬರಹ ಇದು. ಅಂದಹಾಗೆ ಇಂದು ಡಿ.11 ಈ ಲವಲವಿಕೆಯ ದಂಪತಿ ವಿಜಯ್ ಮತ್ತು ದೀಪಾಗೆ ಆ್ಯನಿವರ್ಸರಿ ಸಂಭ್ರಮ. ಈ ಪ್ರವಾಸ ಪ್ರೇಮಿ ಜೋಡಿಗೆ ಮದುವೆ ದಿನದ ಶುಭಾಶಯ.

ನನ್ನ ಪುಟ್ಟ ಕೂಸು ಸಮುದ್ಯತಾಳಿಗೆ ಅವಳ ಅಜ್ಜಿ ತಾತನ ಜೊತೆ ಕಾಲ ಕಳೆಯೋದು ಅಂದ್ರೆ ಪ್ರಪಂಚವೇ ಬೇಡ. ಯಾಕೆ ಅಂದ್ರೆ ಅವಳಿಗೆ ಅವರೇ ಪೂರ್ಣ ಪ್ರಪಂಚ. ಹಾಗಾಗಿ ಹದಿನೈದು ದಿನಕ್ಕೊಮ್ಮೆ ಅಲ್ಲಿಗೆ ಹೋಗಿ ಅವಳನ್ನು ಒಂದು ದಿನ ಪೂರ್ತಿ ಅವರೊಟ್ಟಿಗೆ ಬಿಟ್ಟು ಖುಷಿಪಡಿಸುವ ಅಭ್ಯಾಸ ಮೊದಲಿನಿಂದಲೂ ಇದೆ. ಕಳೆದ ಭಾನುವಾರ ಬೆಳಿಗ್ಗೆಯೇ ಎದ್ದು ಅವಳನ್ನು ಅಲ್ಲಿಗೆ ಬಿಟ್ಟು ನಾವು ಸುಮ್ಮನೆ ಮನೆಯಲ್ಲಿ ಕೂತು ಕಾಲ ಹರಣ ಮಾಡುವ ಬದಲು ನನ್ನ ಹೆಂಡ್ತಿ ಜೊತೇಲಿ ಎಲ್ಲಾದ್ರೂ ಹೋಗಿ ತಿಂಡಿ ತಿಂದು ಬರೋಣ ಅಂತ ಮನಸ್ಸಲ್ಲೇ ಲೆಕ್ಕಹಾಕ್ಕೊಂಡು ಹೋಗಿದ್ದೆ. 

ಕರೋನ ಬಂದಾಗಿನಿಂದ ನನ್ನ ಹೆಂಡ್ತಿಗೆ (ದೀಪ) ನೆಚ್ಚಿನ ಮಲ್ಲೇಶ್ವರಂ ಶ್ರೀ ಸಾಗರ್ ಹೋಟೆಲ್ ಮಸಾಲಾ ದೋಸೆ ಕೊಡಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಏನಾದ್ರು ಮಾಡಿ ಮದುವೆಯ ಮುಂಚಿನ  ಪ್ರೇಮಿಗಳ ರೀತಿಯಲ್ಲಿ ಅಲ್ಲಿಗೆ ಹೋಗಿ ಅವಳಿಗೆ ಮಸಾಲೆ ದೋಸೆ ಕೊಡಿಸಿ ಖುಷಿ ಪಡಿಸಬೇಕೆಂಬ ಆಸೆಯಿಂದ ಅತ್ತೆ ಮನೆಯಿಂದ ಹೊರಟು ನೂರು ಮೀಟರ್ ಕಳೆದ ನಂತರ ಯಾವುದಕ್ಕೂ ಹೆಂಡತಿಯನ್ನು ಎಲ್ಲಿಗೆ ಹೋಗೋಣ ಅಂತ ಕೇಳಿ ಅವಳ ಆಸೆಯಂತೆ  ಹೋದರೆ ಸರಿ ಹೋಗಬಹುದೇನೋ ಎಂಬ ಮನಸ್ಸಿನ ಪ್ರಶ್ನೆಯನ್ನ ಅವಳ ಮುಂದೆ ಪ್ರಸ್ತುತ ಪಡಿಸಿದಾಗ ಬಂದ ಉತ್ತರ “ಜಡಿ ಮಳೆ, ಚಳಿ, ತಂಪಾದ ಗಾಳಿ ಹಾಗಾಗಿ ಸಾವನದುರ್ಗಕ್ಕೆ ಹೋಗೋಣ್ವಾ!!” 

ಅಲ್ಲಿಗೆ ಮಲ್ಲೇಶ್ವರಂ ಶ್ರೀ ಸಾಗರ್ ದೋಸೆಗೆ ಇತಿಶ್ರೀ ಹಾಡಿ  ನಾನು ನನ್ನ ಕಾರನ್ನ ಭರತ್ ನಗರದಿಂದ ಮಾಗಡಿ ಮುಖ್ಯ ರಸ್ತೆಗೆ ತಿರುಗಿಸಿ ನನ್ನ ಹೆಂಡ್ತಿಯ ಪ್ರೀತಿಯ ಹಾಡು ದಿಯಾ ಸಿನಿಮಾದ “ಹಾಯಾದ, ಹಾಯಾದ, ನನ್ನ ಪುಟ್ಟ ಲೋಕ ನೀನೆ ಅಲ್ಲವೇ” ಹಾಡು ಹಾಕಿ ಅವಳ ಕಂಠದಿಂದ ಗುನುಗುವ ಹಾಡಿನೊಂದಿಗೆ ಹಾಗೆ ಹರಟೆ ಹೊಡೆಯುತ್ತ ಹೊರಟೆವು. 

ಭರತ್ ನಗರದಿಂದ ಹೊರಟು ಹತ್ತು ಕಿಲೋ ಮೀಟರ್ ಆದ್ಮೇಲೆ ಲಕ್ಕುಪ್ಪೆ ಗ್ರಾಮದಲ್ಲಿ ಸ್ನೇಹಿತ ಪಾಲಾಕ್ಷ ಮನೆ ರಸ್ತೆ ಪಕ್ಕದಲ್ಲಿ ಕಾಣಿಸ್ತು, ಯಾಕೋ ತುಂಬಾ ದಿನ ಆಯಿತು ಮಾತಾಡ್ಸಿ, ಅವನನ್ನು ಜೊತೆಯಲ್ಲಿ ಕರ್ಕೊಂಡು ಹೋಗೋಣ ಅಂತ ಫೋನ್ ಮಾಡಿ ಬರ್ತಿಯೇನಪ್ಪಾ ಸಾವನದುರ್ಗಕ್ಕೆ ಅಂದ್ರೆ “ಏನ್ ಮಾಡೋದು ವಿಜಿ ನೀವೆಲ್ಲ ಐದು ದಿವಸ ಕೆಲಸ ಮಾಡೋರು, ನಮ್ಮ ಸೋಶಿಯಲ್ ಡಿಪಾರ್ಟ್ಮೆಂಟ್ ಸರ್ಕಾರೀ ಕೆಲಸದಲ್ಲಿ ದೊಡ್ಡ ವ್ಯಕ್ತಿಗಳ ಜನ್ಮದಿನ ಹಾಗೂ ಪುಣ್ಯ ಸ್ಮರಣೆ ಆಚರಣೆ ಮಾಡಬೇಕು. ಹಾಗಾಗಿ ನಮಗೆ ಭಾನುವಾರ ಆದ್ರೂ ಕೆಲಸ ಇದೆ ಅಂತ ಬೇಜಾರಲ್ಲೇ ಹೇಳಿ ನಮಗೆ ಜೊತೆಯಾಗಿ  ಸ್ವಲ್ಪ ಖಾಸಗಿ ಸಮಯ ಕಳೆಯಲು ಅವಕಾಶ ಕೊಟ್ಟ!

ಪಾಲಾಕ್ಷನ ಮನೆಯಿಂದ ಕೂಗಳತೆ ದೂರದಲ್ಲಿರೋ ತಾವರೆಕೆರೆಗೆ ಹೋದ್ಮೇಲೆ ಎಡಕ್ಕೆ ತಿರುಗಿದರೆ ಕೆಂಗೇರಿ, ಚಂದ್ರಪ್ಪ ಸರ್ಕಲ್ ಹಾಗೂ ಮಂಚನಬೆಲೆಗೆ ದಾರಿ ಅಂತ ಮಾತಾಡ್ತಾ ಮಾತಾಡ್ತಾ ಮುಂದೆ ಹೋಗೇಬಿಟ್ಟೆ, ಅಲ್ಲಿಂದ ಒಂಬತ್ತು ಕಿಲೋಮೀಟರ್ ಆದ್ಮೇಲೆ ಎಡಕ್ಕೆ ತಿರುಗಿದರೆ ಮತ್ತೆ ಕೆಂಗೇರಿ, ಚಂದ್ರಪ್ಪ ಸರ್ಕಲ್ ಹಾಗು ಮಂಚನಬೆಲೆಗೆ ಅಂತ ರಸ್ತೆ ಇದೆ, ಅಲ್ಲಿಂದ ಹೊರಟು ರಸ್ತೆಯುದ್ದಕ್ಕೂ ಅಕ್ಕ ಪಕ್ಕದಲ್ಲಿರೋ ಸುಂದರವಾದ ಬೆಟ್ಟ ಗುಡ್ಡದ ಕಲ್ಲುಗಳನೆಲ್ಲ ನೆಲಸಮ ಮಾಡ್ತಿರೋ ಕ್ರಷರ್, ಜೆಸಿಬಿ ಯಂತ್ರಗಳು, ಟಿಪ್ಪರ್ ಲಾರಿಗಳು, ಕಲ್ಲನ್ನು ಪುಡಿ ಮಾಡಿ “ಎಂ ಸ್ಯಾಂಡ್” ಅನ್ನೋ ಮರಳು ಮಾಡಿ, ಸಿಮೆಂಟ್ ಇಟ್ಟಿಗೆ ಅನ್ನೋ ಮಾಫಿಯಾದ ಸಾಮ್ರಾಜ್ಯದ ಧೂಳು ತುಂಬಿದ ರಸ್ತೆಗೆ ನೀರು ಹಾಕಿ ಕೆಸರು ಗುಂಡಿ ಮಾಡಿರೋ ಎಲ್ಲ ಸೊ ಕಾಲ್ಡ್ ಲೋಕಲ್ ರಾಜಕಾರಣಿಗಳಿಗೆಲ್ಲ ಬೈಕೊಂಡು ಹೇಗೋ ಚಂದ್ರಪ್ಪ ಸರ್ಕಲ್ ಸೇರ್ಕೊಂಡು, ಅಲ್ಲೇ ಇರೋ ನಮ್ಮ ಹೆಮ್ಮೆಯ ಇಸ್ರೋ ಸ್ಯಾಟಲೈಟ್ ಸ್ಟೇಷನ್ ಬಗ್ಗೆ ಹಾಗೂ ಇತ್ತೀಚೆಗಷ್ಟೇ ನಮ್ಮ ಮೋದಿಜಿ ಅವರು ಅಲ್ಲಿಗೆ ಬಂದಿದ್ರು ಅಂತ ಮಾತಾಡ್ಕೊಂಡು ಅಲ್ಲಿಂದ ಮುಂದಿನ ದಾರಿಯ ಎರಡು ಬದಿಯಲ್ಲಿ ಇರುವ ಕೆಲವು ಫಾರ್ಮ್ ಹೌಸ್ ಎಸ್ಟೇಟ್ ಮಾಲೀಕರ ಬಗ್ಗೆ ಖುಷಿಯಾಗಿ ನೋಡೋ ಅಷ್ಟ್ರಲ್ಲಿ ರಾಮನಗರಕ್ಕೆ ನೀರು ಕೊಡುವ ಮಂಚನಬೆಲೆ ಡ್ಯಾಮ್ ಕಣ್ಣ ಮುಂದೆ.

ರಸ್ತೆಯೇ ಅಲ್ಲಿಗೆ ಮುಗಿದ ಹಾಗೆ ಕಾಣಿಸ್ತು, ಹಾಗೆ ಕಾರನ್ನ ಸ್ವಲ್ಪ ಮೆಲ್ಲಗೆ ಮಾಡಿ ಹಿಂದಿನವರು ಶಬ್ದ ಮಾಡುವ ಮೊದಲೇ ಮನಸ್ಸಿಗೆ ಖುಷಿ ಮಾಡಿಕೊಂಡು ಮುಂದೆ ಅಕ್ಕ ಪಕ್ಕದಲ್ಲಿ ಮೀನು ಫ್ರೈ ಹಾಗೂ ಎಳನೀರು ಮಾರುವ ಅಂಗಡಿಗಳನ್ನು ನೋಡ್ಕೊಂಡು ಅದೇ ಅವರಿಗೆ ಆದಾಯ ಮತ್ತೆ ಪ್ರವಾಸಿಗರೇ ಅವರಿಗೆ ಎಲ್ಲ ಅಂತ ಮಾತಾಡ್ಕೊಂಡು ಮಂಚನಬೆಲೆಯಿಂದ ಸಾವನದುರ್ಗದ ಕಾಡಿನ ರಸ್ತೆಯನ್ನ ಸೇರಿಕೊಂಡೆವು.

ಮಂಚನಬೆಲೆಯಿಂದ ಸಾವನದುರ್ಗಕ್ಕೆ ಸುಮಾರು ಹದಿಮೂರು ಕಿಲೋಮೀಟರ್ ದೂರ ಅದರಲ್ಲಿ ಹನ್ನೊಂದು ಕಿಲೋಮೀಟರ್ ಕಾಡು ರಸ್ತೆ. ನಂಬಲು ತುಸು ಕಷ್ಟ ಆದರೂ ಸತ್ಯ. ಆ ಕಾಡಿನಲ್ಲಿ ಆನೆ, ಚಿರತೆ, ಕರಡಿ, ನರಿ, ಸೀಳು ನಾಯಿ ಸಾಮಾನ್ಯವಾಗಿ ವಾಸಿಸುವ ಪ್ರಾಣಿಗಳು, ಅದು ಬೆಂಗಳೂರಿನಿಂದ ಕೇವಲ 35 ಕಿಲೋ ಮೀಟರ್ ದೂರದಲ್ಲಿದೆ ಅಂದ್ರೆ ನಮ್ಮ ಜನ ನಂಬೋಲ್ಲ. ಆ ಕಾಡಿನ ಮಧ್ಯದ ಹಾದಿಯಲ್ಲಿ ಕಾಡಿನಲ್ಲಿ ಸಿಗುವ ಬ್ಯಾಲದ (ಬೆಲ್ಲದ) ಹಣ್ಣು, ಸೌತೆ ಕಾಯಿ ಹಾಗೂ ಹುರಿದ ಕಡಲೆಕಾಯಿ ಮಾರುವ ಸಣ್ಣ ವ್ಯಾಪಾರ ಮಾಡುವ ಜಾಗದಲ್ಲಿ ಅವರೊಡನೆ ಮಾತನಾಡಿ ಅವರಿಗೆ ಸ್ವಲ್ಪ ವ್ಯಾಪಾರ ಮಾಡಿ ನಮಗೆ ಬೇಕಾದ ಬ್ಯಾಲದ ಹಣ್ಣು ಮತ್ತೆ ಕಡಲೆಕಾಯಿ ತಗೊಂಡು ಹಾಗೆ ನಾವು ವೀರೇಗೌಡನ ದೊಡ್ಡಿ (ವಿ.ಜಿ.ದೊಡ್ಡಿ) ತಲುಪಿ, ಇಪ್ಪತ್ತು ವರ್ಷದ ಹಿಂದಿನ ಹಾಗೂ ಇಂದಿನ ವಿ.ಜಿ.ದೊಡ್ಡಿ ಅಭಿವೃದ್ಧಿ ಬಗ್ಗೆ ಹಾಗೂ ನನ್ನ ಶಾಲಾ ಕಾಲೇಜು ಸ್ನೇಹಿತರ ಬಗ್ಗೆ ನೆನೆಸಿಕೊಂಡು ಅವರ ಬಗ್ಗೆ ನನ್ನ ಹೆಂಡತಿಯ ಹತ್ತಿರ ಮಾತಾಡೋ ಅಷ್ಟರಲ್ಲಿ ನಾವು ನಾಯಕನ ಪಾಳ್ಯ ಬಂದಿತ್ತು. ಅಲ್ಲಿಂದ ಬಲಕ್ಕೆ ತಿರುಗಿ  ಸುಮಾರು ಮೂರು ಕಿಲೋಮೀಟರ್ ಕಾಡಿನ ಹಾದಿಯಲ್ಲಿ ಸಾಗಿದರೆ ಮೊದಲಿಗೆ ಸಿಗುವುದೇ ವೀರಭದ್ರಸ್ವಾಮಿ ದೇವಸ್ಥಾನ, ನಂತರ ಏಷ್ಯಾದ ಅತಿ ಎತ್ತರದ ಏಕಶಿಲಾ ಬೆಟ್ಟ ಸಾವನದುರ್ಗ ಹಾಗೂ ಅದರ ಆರಂಭದಲ್ಲಿ ನರಸಿಂಹಸ್ವಾಮಿ ದೇವಸ್ಥಾನ.

ಮೊದಲಿಗೆ ನಾವು ನರಸಿಂಹಸ್ವಾಮಿ ಹಾಗೂ ಮಹಾಲಕ್ಷ್ಮಿ ದೇವರ ದರ್ಶನ ಪಡೆದು ಬೆಟ್ಟ ಹತ್ತಲು ಶುರುಮಾಡಿದೆವು. ನನ್ನ ಹಾಗೂ ಸಾವನದುರ್ಗದ ಬೆಟ್ಟದ ಸಂಬಂಧ ಶಾಲಾ ಕಾಲೇಜು ದಿನಗಳಿಂದ ಬಹಳ ಹಳೆಯದು. ಹಾಗಾಗಿ ಅದರ ಏರಿಳಿತಗಳು ಮತ್ತು ಕಷ್ಟದ ಹಾದಿ ತಿಳಿದದ್ದೇ. ಆದರೆ ನನ್ನ ಶಕ್ತಿಯುತ ಹೆಂಡತಿಗೆ ಆತುರವಾಗಿ ತುತ್ತ ತುದಿ ತುಳಿಯುವ ಹಂಬಲ ಮತ್ತು ಕಾತುರ. ಮೊದಲ ಮಟ್ಟದ ಕೆಂಪೇಗೌಡರ ಕಾಲದ ಪಹರೆ ಕಾಯುವ ಕೋಟೆಯ ಗೋಡೆಯ ನಂತರ ನನಗೆ ಕಾಲು ನೋವಿನ ಅರಿವಾಗಿ ಅಲ್ಲೇ ನನ್ನೂರಿನ ಹುಡುಗ ಮಾರುತ್ತಿದ್ದ ಮಜ್ಜಿಗೆ ಕುಡಿದು ಸ್ವಲ್ಪ ತಡ ಮಾಡಿ ನನ್ನ ಕಾಲಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ಸಾಗುವ ಇಂಗಿತ. ಆದರೆ ಅದರಿಂದ ಅವಳಿಗೆ ತುಸು ಹುಸಿ ಮುಂಗೋಪ ಹೆಚ್ಚಾಗಿ ಸ್ವಲ್ಪ ಸಮಯ ಮೂಕರಂತೆ ಕೂತು ಮತ್ತೆ ಎರಡನೇ ಕೋಟೆಯ ಕಡೆಗೆ ನಡೆಯಲಾರಂಭಿಸಿದವು. 

ಇದರ ಮಧ್ಯ ನನ್ನ ಹೆಂಡ್ತಿ ನನ್ನನ್ನ ಅಶಕ್ತ ಎಂದು ಅವಮಾನಿಸಿ ಮನೆಯ ಕಡೆ ಹೊರಡೋಣ ಎಂದಿದ್ದು ಉಂಟು. ಬಾನೆತ್ತರಕ್ಕೆ ಕಾಣುವ ಏಕ ಶಿಲಾ ಬೆಟ್ಟ, ಮೇಲೆ ನೋಡಿದರೆ ಕೈ ಕಾಲುಗಳು ನಡುಕ ಆದರೂ ಮನಸ್ಸಿನ ಛಲ ಬಿಡದೆ ಏರುಸಿರು ಬಿಡುತ್ತ ತುಸು ಅತಿಯಾದ ಹೃದಯ ಬಡಿತದ ನಡುವೆ ಎರಡನೇ ಕೋಟೆಯ ಮುಂಚಿತವಾಗಿ ಮತ್ತೊಬ್ಬ ತಂಪು ಪಾನೀಯ ಮಾರುವ ಹುಡುಗನ ಜೊತೆ ಸ್ವಲ್ಪ ಮಾತು ಕಥೆ ನೆಡೆಸಿ ಅವನಿಗೆ ಸ್ವಲ್ಪ ವ್ಯಾಪಾರ ಮಾಡಿ ನನ್ನ ಗಂಟಲ ದಾಹವನ್ನು ತಣಿಸುವ ಪ್ರಯತ್ನಮಾಡಿ ಕೊನೆಗೂ ಎರಡನೇ ಹಂತದ ಕೋಟೆ ಬಳಿ ಕುಳಿತು ಸ್ವಲ್ಪ ವಿರಾಮ ತೆಗೆದುಕೊಳ್ಳೋಣ ಅನ್ನುವಷ್ಟರಲ್ಲಿ ನನ್ನ ಹೆಂಡತಿಗೆ ನೆನಪಾಗಿದ್ದೇ ಆ ಜಾರುವ ಕಲ್ಲು ಬೆಟ್ಟದ ಮೇಲೆ ಯೋಗಾಸನ ಮಾಡುವ ಯೋಚನೆ! 

ಹೇಗೋ ಮಾಡಿ ಕೆಲವು ಆಸನಗಳ ನಂತರ ಅವಳನ್ನು ಮೂರನೇ ಹಂತಕ್ಕೆ ಕರೆದೊಯ್ಯುವ ಯೋಚನೆ ಮಾಡುತ್ತಿರುವಾಗ ನನ್ನ ಹಿಂದೆ ಒಬ್ಬ ವಿಶೇಷ ಅತಿಥಿಯ ದರ್ಶನ, ಅವನ ಹೆಸರೇ “ಸಿಂಬ”. ಗಾತ್ರದಲ್ಲಿ ಚಿಕ್ಕವ ಆದರೆ ಸಾಧನೆಯಲ್ಲಿ ದೊಡ್ಡವ. ಯಾಕಂದರೆ ಅವನು ಅಷ್ಟರಲ್ಲಾಗಲೇ ಬೆಟ್ಟದ ತುತ್ತ ತುದಿಯೇರಿ ಎರಡನೇ ಹಂತದ ಕೋಟೆಯ ಬಳಿಗೆ ವಾಪಸ್ಸು ಬಂದು ಕೆಳಗಡೆ ಓದುವ ಆತುರದಲ್ಲಿದ್ದ. ನನಗಂತೂ ಅತಿಯಾದ ಹುಮ್ಮಸ್ಸು ಬಂದಿದ್ದೆ ಸಿಂಬನನ್ನು ನೋಡಿದ ಮೇಲೆ! ಕ್ಷಣಾರ್ಧದಲ್ಲೇ ಹೆಂಡ್ತಿ ಓಡಿಹೋಗಿ ತುದಿಯಲ್ಲಿದ್ದ ಆಗಿನ ಕಾಲದ ಸೈನಿಕರ ಪಹರೆ ಕಾಯುವ ಕೋಟೆಯ ಮೇಲೆ ಕುಳಿತು ಫೋಟೋ ತೆಗೆಸಿಕೊಳ್ಳಲು ಪೋಸು ಕೊಡುತ್ತ ಕೂತಿದ್ದಾಗಿತ್ತು, ನನ್ನ ಮೊಬೈಲ್ ಕ್ಯಾಮೆರಾ ಕ್ಲಿಕ್ ಮಾಡಲು ರೆಡಿಯಾಗಿತ್ತು!

ಮೂರನೇ ಹಂತದ ಬೆಟ್ಟ ಹತ್ತಲು ತುಸು ಸುಲಭ ಯಾಕೆಂದರೆ ಅರ್ಧ ದಾರಿ ಸಾಗುವಷ್ಟರಲ್ಲಿ ದೇಹದಂಡನೆಯಾಗಿ ಒಂದು ಮಟ್ಟಕ್ಕೆ ಕಷ್ಟ ಹಾಗೂ ಎತ್ತರಕ್ಕೆ ಉಸಿರಾಡುವ ಸ್ಥಿತಿಗೆ ಹೊಂದಿಕೊಂಡು ಸಾಗುತ್ತಿರುತ್ತೆ, ಮನಸ್ಸು ಕೂಡ ಸ್ವಲ್ಪ ನಿರಾಳವಾಗಿ ಅಬ್ಬಾ ಇನ್ನೇನು ಸ್ವಲ್ಪ ಅಷ್ಟೇ ಬಾಕಿ ಅನ್ನೋ ಯೋಚನೆಯಲ್ಲಿರುತ್ತೆ. ಅಷ್ಟರಲ್ಲಾಗಲೇ ನನ್ನ ಹೆಂಡ್ತಿಯ ಗಟ್ಟಿ ಮನಸ್ಸು ಆ ಇಳಿಜಾರು ಬೆಟ್ಟದಮೇಲೆ ಮತ್ತಷ್ಟು ಯೋಗಾಸನ ಮಾಡುವ ಗಟ್ಟಿ ನಿರ್ಧಾರ ಮಾಡಿಯಾಗಿತ್ತು, ವಿಜಯ್ ನಾನು ಯೋಗ ಮಾಡ್ತೀನಿ ನೋಡು ಅಂತ ಶುರು ಮಾಡೇಬಿಟ್ಟಳು! ಎಲ್ಲಿ ಸಾಮಾನ್ಯ ಜನ ನಡೆಯಲು ತಿಣುಕುತ್ತಿರುವರೋ ಅಲ್ಲಿ ಅವಳ ಯೋಗಾಸನದ ಭಂಗಿ ಹಾಗೂ ಸಮತೋಲನ ನೋಡಿ ಕೆಲವು ಚಾರಣಿಗರು “ಗುಡ್ ಸ್ಟಫ್” ಅಂತ ಕಾಂಪ್ಲಿಮೆಂಟ್ಸ್ ಕೊಟ್ಟು ಹುರಿದುಂಬಿಸಿ ಹೊರಟೇಬಿಟ್ಟರು ಹಾಗಾಗಿ ಅವಳ ಯೋಗದ ಭಂಗಿಗಳು ಬದಲಾಗತೊಡಗಿದವು ಅದರ ಮಧ್ಯೆ ನನಗೆ ಸ್ವಲ್ಪ ವಿರಾಮ ಸಿಕ್ಕಂತಾಗಿ ಮನಸ್ಸಿಗೆ ಖುಷಿಯೂ ಆಯಿತು! 

ಮೂರನೇ ಬೆಟ್ಟದ ತುದಿಯನ್ನು ತಲುಪಿದಾಗ ನಮಗೆ ಸಿಗುವುದೇ ಸೈನಿಕರ ವಿಶ್ರಾಂತಿ ಗೃಹ ಹಾಗೂ ನೀರಿನ ಕೊಳ. ಅಲ್ಲೇ ಇಬ್ಬರು ಯುವ ಚಾರಣಿಗರ ಸ್ವಇಚ್ಛೆಯಿಂದ ನಮ್ಮ ಕೆಲವು ಫೋಟೋ ತೆಗೆದು ಅವರ ಪರಿಚಯವಾದನಂತರ ಬಾಂಬ್ ನಂತಹ “ಪ್ರೇಮಿಗಳಾ ಸರ್” ಎಂಬ ಪ್ರಶ್ನೆಯನ್ನು ಕೇಳಿ ನಮ್ಮ  ಮನಸ್ಸಿಗೆ ಸ್ವಲ್ಪ ಖುಷಿಯೂ ಆಯಿತು ಯಾಕೆಂದರೆ ನಾವು ಇದೇ 11ನೇ ಡಿಸೆಂಬರ್ 7ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿದ್ದೆವು. ಹಾಗೆ ಅವರೊಂದಿಗಿನ ಪರಿಚಯದ ಮಾತಿನೊಂದಿಗೆ ಕೆಲವು ಗುಹೆಯಂತಹ ಸಣ್ಣ ಸಣ್ಣ ಮಾರ್ಗಗಳ ಮಧ್ಯೆ ಮತ್ತೊಂದಷ್ಟು ಫೋಟೋಗಳನ್ನೂ ತೆಗೆದು ತೆಗೆಸಿಕೊಂಡು ಮುಂದೆ ಸಾಗಿದೆವು. 

ಇನ್ನೇನು ಮೂರನೇ ಬೆಟ್ಟ ಮುಗಿಯಿತು. ಸ್ವಲ್ಪ ಒಳ್ಳೆಯ ಸಮತಟ್ಟಾದ ಕಾಲುದಾರಿಯ ನಡಿಗೆ ಸಾಗುತ್ತಿರುವಾಗಲೇ ಎದುರಿಗೆ ನಾಲ್ಕನೇ ಬೆಟ್ಟದ ತುದಿ, ನಂದಿಯ ಗೋಪುರ ಹಾಗೂ ಇತ್ತೀಚೆಗಷ್ಟೇ ಹಾರಿಸಿರುವ ಕನ್ನಡ ರಾಜ್ಯೋತ್ಸವದ ಬಾವುಟ ಜೋರು ಗಾಳಿಗೆ ಹಾರುತ್ತಿರುವ ದೃಶ್ಯ ನೋಡುತ್ತಲೇ ನಮಗೆ ತುದಿ ಏರಿದ ಆನಂದ. ಹಾಗಾಗಿ ಮೂರನೇ ಹಂತದ ಬೆಟ್ಟದಿಂದ ನಾಲ್ಕನೇ ಹಂತದ ಬೆಟ್ಟಕ್ಕೆ ಸಾಗುವ ದಾರಿ ಅಷ್ಟೇನೂ ಕಷ್ಟ ಅನ್ನಿಸದೆ ನಾವು ಏನೇನೂ ಕಷ್ಟಪಟ್ಟು ಬಂದಿದ್ದೇವೆಂದು ಅನ್ನಿಸುವುದಿಲ್ಲ. ಅಲ್ಲೇ ನಂದಿ ಗೋಪುರದ ಪಕ್ಕಕ್ಕೆ ಒಂದು ಪುಟ್ಟ ಟೇಬಲ್ ಹಾಕಿ ಕೆಲವು ತಂಪು ಪಾನೀಯ ಹಾಗೂ ಖಾರದ ತಿಂಡಿಗಳನ್ನು ಇಟ್ಟು ಮಾರುವ ಹುಡುಗ ಸಂಜೀವಿನಿಯಂತೆ. ಯಾಕೆಂದರೆ ನಾವು ನಮ್ಮ ದೇಹವನ್ನು ಹೊತ್ತು ಸಾಗಲು ಹೆಣಗಿ ಹೈರಾಣಾಗುವ ದಾರಿಯಲ್ಲಿ ಅಷ್ಟೊಂದು ಭಾರದ ವಸ್ತುಗಳನ್ನು ಪ್ರತಿ ಶನಿವಾರ ಹಾಗೂ ಭಾನುವಾರ ಹೆಗಲ ಮೇಲೆ ಹೊತ್ತು ಸಾಗಿ ಅಲ್ಲಿಗೆ ಬರುವ ಚಾರಣಿಗರ ದಾಹ ಹಾಗೂ ಹಸಿವನ್ನು ತಣಿಸಲು ತುಸು ಅತಿಯಾದ ದರದಲ್ಲಿ ಮಾರುವ ಅವರ ಕೆಲಸಕ್ಕೆ ನನ್ನ ಅಭಿನಂದನೆಗಳು.

ಸಾವನದುರ್ಗದ ನಂದಿ ಬೆಟ್ಟದ ತುತ್ತ ತುದಿಯಲ್ಲಿ ಸ್ವಲ್ಪ ಹೊತ್ತು ಚುಮು ಚುಮು ಚಳಿಯಲ್ಲಿ, ಜೋರಾಗಿ ಭೋರ್ಗರೆಯುವ ಗಾಳಿಯ ಮಧ್ಯೆ ಪ್ರೀತಿಯ ಹೆಂಡ್ತಿಯ ಜೊತೆಯಲ್ಲಿ ಕುಳಿತು ಅಲ್ಲೇ ಪಕ್ಕದಲ್ಲಿನ ಹುಡುಗ ಮಾಡಿಕೊಟ್ಟ “ಕಾಂಗ್ರೆಸ್” ಕಡಲೆಬೀಜದ ಮಸಾಲಾ ತಿಂದು, ನಂದಿನಿ ಬಾದಾಮಿ ಹಾಲು ಕುಡಿದು ದಾಹ ಮತ್ತು ಹಸಿವನ್ನು ಸ್ವಲ್ಪ ಕಡಿಮೆ ಮಾಡಿ ಇನ್ನೇನು ಕೆಲವು ಫೋಟೋ ತೆಗೆದುಕೊಂಡು ಹೊರಡುವ ಅನ್ನುವಷ್ಟರಲ್ಲಿ ನನ್ನ ಎಲ್ಲಾ ಚರಣಗಳಲ್ಲಿ ಸಿಗುವಂತೆ ಅಲ್ಲಿಯೂ ಒಬ್ಬ ಸುಖ ಪುರುಷ ಶ್ವಾನ ನಿದ್ರಾ ಭಂಗಿಯಲ್ಲಿ ಮಲಗಿದ್ದನ್ನು ಕಂಡು ಆಹಾ ಈ ಪ್ರಾಣಿಗಳಿಗೆ ಇರುವ ಸ್ವಾತಂತ್ರ್ಯ ಹಾಗೂ ಸುಖ ನಮ್ಮ ಮನುಷ್ಯರಿಗೆ ಸ್ವಲ್ಪ ಕಷ್ಟ ಸಾಧ್ಯ ಅನ್ನಿಸ್ಸಿ ನಾನು ಅಲ್ಲೇ ಸ್ವಲ್ಪ ಸಮಯ ಮಲಗಿ ಪೋಸು ಕೊಟ್ಟು ಹೆಂಡ್ತಿ ಕೈಯಲ್ಲಿ ಒಂದು ಫೋಟೋ ತೆಗೆಸಿಕೊಂಡು ಹೊರಡುವ ಮನಸ್ಸು ಮಾಡಿದೆವು. 

ಬೆಟ್ಟ ಹತ್ತುವಾಗ ಇರುವ ದೇಹದ ನೋವು, ಮನಸ್ಸಿನ ಧುಗುಡ, ಗಂಟಲಿನ ದಾಹ ಯಾವುದೂ ಕೂಡ ಬೆಟ್ಟದ ಮೇಲಿಂದ ಇಳಿಯುವಾಗ ಭಾಸವಾಗುವುದಿಲ್ಲವಾದರೂ ಕಾಲಿನ ಪಾದ, ಬೆರಳುಗಳು ಹಾಗೂ ಮಂಡಿ ಸಹಜವಾಗಿ ದೇಹದ ಭಾರದಿಂದ ಸ್ವಲ್ಪ ಭಾದಿಸದೆ ಯಾರನ್ನೂ ಬಿಡದು! ನನ್ನ ಸದಾ ಶಕ್ತಿವಂತ ಹೆಂಡತಿಗಂತೂ ಬೆಟ್ಟದಿಂದ ಇಳಿಯುವುದು ಯಾಕೋ ವಿಮಾನ ಆಕಾಶದ ಮೇಲಿಂದ ಭೂಮಿಗೆ ಇಳಿಯುವಂತ ನೆನಪಾಗಿ ಅವಳು ಕೂಡ ವಿಮಾನದಂತೆ ತನ್ನ ಬಾಹುಗಳನ್ನು ಚಾಚಿ ಮೇಲಿಂದ ಕೆಳಗೆ ಜೋರು ಗಾಳಿಯ ಜೊತೆಯಲ್ಲಿ ಓಡಿಕೊಂಡು ಇಳಿದೇಬಿಟ್ಟಳು!

ಬೆಟ್ಟದಿಂದ ಕೆಳಗೆ ಬಂದಮೇಲೆ ಅಲ್ಲೇ ಬೆಟ್ಟದ ಬುಡದಲ್ಲಿ ಎಳನೀರು ಮಾರುತ್ತಿದ್ದ ಹುಡುಗನ ಬಳಿ ಗಂಟಲಿನ ದಾಹ ತೀರಿಸಿ ಹಣ ಕೊಟ್ಟ ಮೇಲೆ ಅವಳ ಒಂದು ಪ್ರಶ್ನೆ ಅವನನ್ನು ಬಿಡದೆ ಉತ್ತರಿಸುವಂತೆ ಮಾಡಿತು ಅದೇನೆಂದರೆ “ಯಾಕೆ ನೀವು ಬೆಟ್ಟದ ಮೇಲೆ ಈ ಆರೋಗ್ಯಯುತ ಎಳನೀರು ಮಾರಬಾರದು ?” ಉತ್ತರ ಗೊತ್ತು ತಾನೇ! ನಾವೇ ಹೋಗಲು ಕಷ್ಟ ಮೇಡಂ ಇನ್ನು ಈ ತೂಕದ ಎಳನೀರು ಎಲ್ಲಿಂದ ಎತ್ತಿಕೊಂಡು ಹೋಗೋದು!

ಅಲ್ಲೇ ದೇವಸ್ಥಾನದ ಹೊರಗಡೆ ಇದ್ದ ನಲ್ಲಿಯಲ್ಲಿ ಕೊರೆಯುವ ನೀರಿನಲ್ಲಿ ಮುಖ ತೊಳೆದು ದೇವಸ್ಥಾನದ ಮುಂದೆ ನಿಂತು ದೇವರಿಗೆ ಮತ್ತೊಮ್ಮೆ ನಮಸ್ಕರಿಸಿ ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಹೆಂಡ್ತಿಗೆ ನನ್ನ ಮುದ್ದು ಕೂಸಿನ ನೆನಪಾಗಿ ವಿಜಯ್ ಸಮ್ಮುಗೆ ಏನಾದ್ರು ಆಟದ ವಸ್ತು ತಗೊಂಡೋಗೋಣ್ವಾ ಅಂದ್ಲು ಸರಿ ಹೇಗಿದ್ರು ನಮ್ಮನ್ನ ಇಂಥ ಚಾರಣ ಮಾಡೋಕೆ ಬಿಟ್ಟು ಅಜ್ಜಿ ತಾತನ ಜೊತೆ ಜಾಲಿಯಾಗಿ ಇರೋ ಆ ಪುಟ್ಟ ಕಂದಮ್ಮನಿಗೆ ಒಂದು ಸಣ್ಣ ಆಟಿಕೆ ಕೊಂಡೋಗಿಲ್ಲ ಅಂದ್ರೆ ಹೇಗೆ ಅಂತ ಅಲ್ಲೇ ಪಕ್ಕದಲ್ಲಿ ಇದ್ದ ಅಂಗಡಿಯಲ್ಲಿ ಒಂದು ಗನ್ ತೆಗೆದುಕೊಂಡು ನಮ್ಮ ಪ್ರಯಾಣವನ್ನು ಮನೆಯ ಕಡೆಗೆ ಬೆಳೆಸಿದೆವು.

ಬೆಂಗಳೂರಿನ ಜನ ಹಾಗೂ ವಾಹನ ನಿಬಿಡ ಸ್ಥಳಗಳಲ್ಲಿ ವಾರದ ಕೊನೆಯ ರಜೆ ದಿನ ಕಳೆಯುವ ಬದಲು ನಾವು ಇಲ್ಲೇ ಎಲ್ಲೋ ಅಕ್ಕ ಪಕ್ಕದಲ್ಲಿರೋ ಯಾವುದಾದ್ರೂ ಒಂದು ಕಾಡು, ಬೆಟ್ಟ, ಗುಡ್ಡ, ಕೆರೆ, ಡ್ಯಾಮ್, ದೇವಸ್ಥಾನಕ್ಕೆ ಹೋಗಿ ಬರುವುದರಲ್ಲಿ ಇರೋ ಸುಖಾನೇ ಬೇರೆ!

Related Articles

One Comment

Leave a Reply

Your email address will not be published. Required fields are marked *

Back to top button