ವಂಡರ್ ಬಾಕ್ಸ್ವಿಸ್ಮಯ ವಿಶ್ವಸ್ಮರಣೀಯ ಜಾಗ

ಬೆಂಗಳೂರಿನ ಲಾಲ್‌ಬಾಗ್ ಸೃಷ್ಟಿಯಾದ ಕಥೆ ಗೊತ್ತಾ: ಬ.ನ. ಸುಂದರರಾವ್ ಬರೆದ ಬೆಂಗಳೂರಿನ ಇತಿಹಾಸ

ಯಾರಾದರೂ ಬೆಂಗಳೂರಿಗೆ ಬಂದರೆ ಲಾಲ್ ಬಾಗ್ ಭೇಟಿ ಕೊಡದೆ ವಾಪಸ್ ಹೋಗುವ ಹಾಗಿಲ್ಲ ಎಂಬ ಅಲಿಖಿತ ನಿಯಮವೇ ಇದೆ. ಇನ್ನು ಬೆಂಗಳೂರಲ್ಲೇ ಇರುವವರಂತೂ ಆಗಾಗ ಲಾಲ್ ಬಾಗಿಗೆ ಭೇಟಿ ನೀಡುತ್ತಿರುತ್ತಾರೆ. ಇಂಥಾ ಚಂದದ ಲಾಲ್ ಬಾಗಿನ ಕತೆ ನಿಮಗೆ ಗೊತ್ತಾ? ಕರ್ನಾಟಕದ ಹೆಮ್ಮೆಯಾಗಿರುವ ಈ ಲಾಲ್ ಬಾಗಿನ ವೈಭವದ ಇತಿಹಾಸ ಓದಿ ತಿಳಿದುಕೊಳ್ಳಿ. 

Roopal Shetty

ಈ ಲಾಲ್‌ಬಾಗ್ ತೋಟದ ಆರಂಭ ಬಹಳ ಹಿಂದೆಯೇ ಅಂದರೆ ಹೈದರ್ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿಯೇ ಆಯಿತು. ಕ್ರಿ.ಶ. 1760ರಲ್ಲಿ ಹೈದರಾಲಿಯು ಬೆಂಗಳೂರು ಕೋಟೆಯ ಪೂರ್ವಭಾಗದಲ್ಲಿ ಸುಮಾರು ಒಂದು ಮೈಲಿ ದೂರದಲ್ಲಿ ನಾಲ್ಕು ಎಕರೆಗಳಷ್ಟು ಜಮೀನನ್ನು ಹದಗೊಳಿಸಿ ಒಂದು ರಾಜೋದ್ಯಾನವನ್ನು ನಿರ್ಮಿಸಿದನು. ಈ ವೇಳೆಗಾಗಲೇ ಸೀರೆ ಮತ್ತು ನಗರ ಪ್ರಾಂತಗಳಲ್ಲಿ ಇಂತಹ ರಾಜೋದ್ಯಾನಗಳ ನಿರ್ಮಾಣವಾಗಿತ್ತು. ಹೈದರಾಲಿಗೆ ತೋಟದ ಹುಚ್ಚು ಬಹಳ. ತೋಟಗಾರಿಕೆಯಲ್ಲಿ ನಿಪುಣರಾದವರನ್ನು ದೆಹಲಿ, ಲಾಹೋರ್, ಮುಲ್ತಾನ್ ಮುಂತಾದ ಪ್ರಾಂತಗಳಿಗೆ ಕಳುಹಿಸಿ ಅತ್ಯಂತ ಶ್ರೇಷ್ಠವಾದ ಮತ್ತು ನೇತ್ರಾನಂದಕರವಾದ ಗುಲಾಬಿ ಗಿಡಗಳನ್ನೂ ಅಜೂರ, ದಾಳಿಂಬೆ, ಮೊದಲಾದ ಹಣ್ಣಿನ ಗಿಡಗಳನ್ನೂ ತರಿಸಿ ಈ ಲಾಲ್‌ಬಾಗ್‌ನಲ್ಲಿ ನೆಡಿಸಿದನು. ಈ ತೋಟಕ್ಕೆ ಪಕ್ಕದಲ್ಲಿದ್ದ ಕೆರೆಯ ನೀರನ್ನೇ ಬಳಸಲಾಗುತ್ತಿತ್ತು. ಆ ಕೆರೆಗೆ ಹೈದರನೇ ಭದ್ರವಾದ ಕಟ್ಟೆಯನ್ನು ಕಟ್ಟಿಸಿ ಭದ್ರಗೊಳಿಸಿದನು. 

ಹೈದರನ ತರುವಾಯ ಈ ತೋಟ ಟಿಪ್ಪು ಸುಲ್ತಾನನ ವಶಕ್ಕೆ ಬಂದಿತು. ಅವನ ಕಾಲದಲ್ಲಿ ಲಾಲ್‌ಬಾಗ್ ಉದ್ಯಾನವನ ಮಾತ್ರವಲ್ಲದೆ ಕ್ರೀಡೋದ್ಯಾನವಾಗಿಯೂ ಮಾರ್ಪಟ್ಟಿತು. ಅಲ್ಲದೆ ಮಾವಿನಗಿಡ, ಹಲಸಿನಗಿಡ ಮೊದಲಾದ ಫಲವೃಕ್ಷಗಳನ್ನೂ ನೆಡಿಸಿದನು. ಈ ಮರಗಳ ಹಣ್ಣುಗಳನ್ನು ಅರಮನೆಗೆ ಕಳುಹಿಸಲಾಗುತ್ತಿತ್ತು. ಅಲ್ಲದೆ ನಾನಾ ವಿಧವಾದ ಹಣ್ಣುಗಳು ಆರ್ಕಾಟಿನಿಂದಲೂ ಆಮದಾಗುತ್ತಿದ್ದುವು. ಟಿಪೂ ಸುಲ್ತಾನನ ಕಾಲದಲ್ಲಿ ನೆಡಿಸಿದ ಮೂರು ಮಾವಿನಮರಗಳು ಇಂದಿಗೂ ಲಾಲ್‌ಬಾಗ್‌ನಲ್ಲಿ ಮೆರೆಯುತ್ತಿವೆ. 

Roopal Shetty

ಹೂಗಳು, ಹಣ್ಣುಗಳೆಂದರೆ ಟಿಪೂ ಸುಲ್ತಾನನಿಗೆ ಅತ್ಯಂತ ಆಕ್ಕರೆ, ತನ್ನ ಇಬ್ಬರು ರಾಯಭಾರಿಗಳನ್ನು ಫ್ರಾನ್ಸಿನ ಮಾರಿಷಸ್ ದ್ವೀಪಕ್ಕೆ (Mauritus Islands) 1797ರ ಡಿಸೆಂಬರ್‌ನಲ್ಲಿ ಕಳುಹಿಸಿದ್ದನು. ಹುಸೇನ್ ಅಲಿ ಮತ್ತು ಷೇಕ್ ಇಬ್ರಾಹಿಂ ಎಂಬ ಈ ಇಬ್ಬರು ರಾಯಭಾರಿಗಳು ಅಲ್ಲಿನ ನಾನಾ ವಿಧವಾದ ತೋಟಗಳನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕಂಡು, 1798 ರ ಏಪ್ರಿಲ್ ಮೂವತ್ತರಂದು ಮಂಗಳೂರಿಗೆ ಹಿಂದಿರುಗಿದರು. ಗಿಡಗಳು ಮತ್ತು ಬೀಜಗಳನ್ನೊಳಗೊಂಡ ಇಪ್ಪತ್ತು ಕಟ್ಟುಗಳು ಅವರ ಜೊತೆಯಲ್ಲಿ ಬಂದಿದ್ದುವು. ಈ ಸುದ್ದಿ ತಿಳಿದ ಕೂಡಲೇ ಶ್ರೀರಂಗಪಟ್ಟಣದಿಂದ ಒಂಟೆ ಮತ್ತು ಕುದುರೆಗಳನ್ನು ಮಂಗಳೂರಿಗೆ ಕಳುಹಿಸಿದರು . ಆಫ್ರಿಕಾಟ್(Apricot), ಸೇಬು(Apple), ರಾಸಪೇರಿ(Raaspherries), (Blackberries), (Sweet Limbs), ಪೈನ್ ಆಪಲ್(Pineapple), ದ್ರಾಕ್ಷಿ (Grapes), ಅಂಜೂರ (Fig), ಗೋಡಂಬಿ(Cashewnut), ಖರ್ಜೂರ(date), ಪಪ್ಪಾಯಿ(Pappaya), (Chinies Orange) ಇತ್ಯಾದಿ.. ಗಿಡಗಳನ್ನೂ ನಾನಾ ವಿಧವಾದ ಹೂಗಳ ಗಿಡಗಳನ್ನೂ ತರಿಸಿ, ನೆಡಿಸಿ, ಉದ್ಯಾನವನ್ನು ಸಿಂಗಾರಗೊಳಿಸಿದನು. 

1799ರಲ್ಲಿ ಟಿಪೂ ಸುಲ್ತಾನನು ಮಡಿದ ಮೇಲೆ ಇಂಗ್ಲಿಷರು ಈ ತೋಟವನ್ನು ವಶಪಡಿಸಿಕೊಂಡರು. ಬಹಳ ವರ್ಷಗಳ ಕಾಲ ಇದು ಮೇಜರ್‌ ವಾಗ್ ಎಂಬಾತನ ವಶದಲ್ಲಿತ್ತು. ಇವನ ಕಾಲದಲ್ಲಿ ಈ ತೋಟ ಇನ್ನೂ ಅಭಿವೃದ್ಧಿಗೆ ಬಂದಿತು. ಇವನು ತಾನೇ ಶ್ರದ್ಧೆ ವಹಿಸಿ, ಉಸ್ತುವಾರಿ ನಡೆಸಿ, ತೋಟದ ಕೆಲಸಗಳನ್ನು ಮಾಡಿಸುತ್ತಿದ್ದುದರಿಂದ ವೃಕ್ಷಗಳು ಚೆನ್ನಾಗಿ ಬೆಳೆದು ಸಮೃದ್ಧಿಯಾದ ಬೆಳೆಯನ್ನು ಕೊಡುತ್ತಿದ್ದುವು. ಈತನು 1819ರಲ್ಲಿ ಅಂದಿನ ಗೌರ್ನರ್ ಜನರಲ್ ಆಗಿದ್ದ ಮಾರ್ಕ್ವಿಸ್ ಆಫ್ ಹೇಸ್ಟಿಂಗ್ಸ್ ಅವರಿಗೆ ಈ ತೋಟವನ್ನು ಕಾಣಿಕೆಯಾಗಿ ಅರ್ಪಿಸಿದನು. ಆಗ ಕಲ್ಕತ್ತೆಯ ರಾಯಲ್ ಬೊಟ್ಯಾನಿಕಲ್ ಗಾರ್ಡನ್ಸ್‌ನ ಸೂಪರಿಂಟೆಂಡೆಂಟ್‌ರಾಗಿದ್ದ ಡಾ|| ವಾಲಿಚ್ (Walich) ಎಂಬಾತನು ಬಂಗಾಳದ ಪ್ರೆಸಿಡೆನ್ಸಿ ಉದ್ಯಾನವನದ ಇಲಾಖೆಗೆ ಈ ತೋಟವನ್ನೂ ಒಂದು ಶಾಖೆಯನ್ನಾಗಿ ಸೇರಿಸಿಕೊಂಡನು. ಅನಂತರ ಗೌರ್ನರ್ ಜನರಲ್ ಅವರು ಮೈಸೂರಿನಲ್ಲಿ ರೆಸಿಡೆಂಟರಾಗಿದ್ದ ಮಿಸ್ಟರ್ ಕೋಲ್ ಅವರ ವಶಕ್ಕೆ ಈ ತೋಟವನ್ನು ಕೊಟ್ಟರು. ಆದರೆ ಇದರ ಮೇಲ್ವಿಚಾರಣೆ ಮಾತ್ರ ವಾಲಿಬ್‌ರವರಿಗೇ ಸೇರಿತ್ತು. ಈ ತೋಟದ ಸಿಬ್ಬಂದಿಯನ್ನು ಇಟ್ಟುಕೊಳ್ಳುವುದಕ್ಕೂ, ಗಿಡಮರಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದಕ್ಕೂ ರೆಸಿಡೆಂಟರಿಗೆ ಸಂಪೂರ್ಣ ಅಧಿಕಾರ ಕೊಡಲ್ಪಟ್ಟಿತ್ತು. ಈ ಸಿಬ್ಬಂದಿಯ ವೆಚ್ಚವನ್ನೆಲ್ಲಾ ಕೇಂದ್ರ ಸರ್ಕಾರವೇ ವಹಿಸಿಕೊಂಡಿತ್ತು. ಈ ಕ್ರಮ 1831ರವರೆಗೂ ನಡೆದುಕೊಂಡು ಬಂದಿತು. 

1831ರಲ್ಲಿ ಮೈಸೂರು ರಾಜ್ಯಭಾರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಇಂಗ್ಲಿಷರು ಪಡೆದಮೇಲೆ ಲಾಲ್‌ಬಾಗ್ ಚೀಫ್ ಕಮಿಷನರ್ ಅವರ ವಶಕ್ಕೆ ಬಂದಿತು. 1839ರ ನಂತರ ಚೀಫ್ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅಂದಿನ ವ್ಯವಸಾಯ ಹಾಗೂ ಕೈತೋಟಗಳ ಸಂಘವೊಂದನ್ನು ಸ್ಥಾಪಿಸಿ, ಆ ಸಂಘಕ್ಕೆ(Horticultural Society) ಈ ತೋಟವನ್ನು ವಹಿಸಿಕೊಟ್ಟರು. ಈ ತೋಟದಲ್ಲಿ ಕೆಲಸಮಾಡಲು ಜೈಲುಖೈದಿಗಳನ್ನು ಕಳುಹಿಸಲಾಗುತ್ತಿತ್ತು. ಈ ಸೊಸೈಟಿಯ ವಶದಲ್ಲಿರುವವರೆಗೆ ಸಾರ್ವಜನಿಕರಿಂದ ಈ ತೋಟದ ಅಭಿವೃದ್ಧಿಗಾಗಿ ಚಂದಾ ಹಣವನ್ನೂ ಪಡೆಯಲಾಗುತ್ತಿತ್ತು. 1842ರಲ್ಲಿ ಈ ಸಂಘವು ಕೆಲಸ ಮಾಡದೆ ತಟಸ್ಥವಾಯಿತು. ಆಗ ಈ ತೋಟವು ಪುನಃ ಚೀಫ್ ಕಮಿಷನರ್ ಅವರ ವಶಕ್ಕೆ ಬಂದಿತು. ಅಲ್ಲಿಂದೀಚೆಗೆ ಸರಿಯಾದ ಸಿಬ್ಬಂದಿ ವ್ಯವಸ್ಥೆಯಿಲ್ಲದೆ ಹದಿನಾಲ್ಕು ವರ್ಷಗಳ ಕಾಲ – ಅಂದರೆ 1856ರ ವರೆಗೆ ಬೀಡುಬಿದ್ದಿತು. ಆಗಾಗ್ಗೆ ಕಸಗುಡಿಸಿ ಚೊಕ್ಕಟ ಮಾಡುವುದಷ್ಟೇ ನಡೆಯುತ್ತಿದ್ದಿತು. ದಕ್ಷಿಣಭಾರತದ ಅರಣ್ಯ ಇಲಾಖಾ ಮುಖ್ಯಾಧಿಕಾರಿಗಳಾಗಿದ್ದ ಡಾ| ಕೈಗ್ ಹಾರನ್ (Dr. Cleghorn ) ಅವರು ಶ್ರಮವಹಿಸಿ ಈ ತೋಟವನ್ನು ಪುನಃ ರಾಜ್ಯ ಸರ್ಕಾರಕ್ಕೆ ಕೊಡಿಸುವ ಪ್ರಯತ್ನ ಮಾಡಿದರು. 

Roopal Shetty

1856ರ ಆಗಸ್ಟ್‌ನಲ್ಲಿ ಡಾ। ಕೈಗ್ ಹಾರನ್ ಅವರು ಮತ್ತು ಮದರಾಸಿನ ವ್ಯವಸಾಯ ಮತ್ತು ತೋಟಗಳ ಸಂಘದ ಅಧ್ಯಕ್ಷರಾದ ಮಿ| ಜೆಫ್ರಿ(Jeffery)ರವರು ಬೆಂಗಳೂರಿಗೆ ಬಂದು, ಸರ್ ಮಾರ್ಕ್ ಕಬ್ಬನ್ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನಲ್ಲಿ ಒಂದು ಸೊಗಸಾದ ತೋಟದ ನಿರ್ಮಾಣ ಮಾಡಬೇಕೆಂಬ ತಮ್ಮ ಅಭಿಪ್ರಾಯವನ್ನು ಕಬ್ಬನ್‌ರವರ ಮುಂದಿಟ್ಟರು. ಕಬ್ಬನ್‌ರವರು ಈ ಅಭಿಪ್ರಾಯಕ್ಕೆ ಕೂಡಲೇ ತಮ್ಮ ಒಪ್ಪಿಗೆಯನ್ನಿತ್ತರು. 

ಈ ಆದರ್ಶ ಉದ್ಯಾನವನಕ್ಕೆ ಲಾಲ್‌ಬಾಗ್ ಅರ್ಹವಾಗಿದೆಯೆಂದು ತೀರ್ಮಾನಿಸಿ, ಸರ್ಕಾರೀ ಆಡಳಿತದ ಮೂಲಕವೇ ಕೆಲಸಗಳನ್ನು ಮಾಡಲು ಆರಂಭಿಸಿದರು. ಬೆಳೆಗಳಲ್ಲಿ ಸಂಶೋಧನೆ, ದೇಶೀಯ ಗಿಡಮರಗಳಿಗೆ ಪ್ರೋತ್ಸಾಹ, ಲಾಭದಾಯಕ ವೃಕ್ಷಗಳನ್ನು ಬೆಳೆಸುವುದು ಇತ್ಯಾದಿ ವಿಷಯಗಳನ್ನೇ ಗುರಿಯಾಗಿಟ್ಟುಕೊಂಡು ಒಂದು ಇಲಾಖೆಯನ್ನು ಸ್ಥಾಪಿಸಲಾಯಿತು. ರಾಯಲ್ ಬೊಟ್ಯಾನಿಕಲ್ ಗಾರ್ಡನ್ಸ್ ಡೈರೆಕ್ಟರ್ ( Sir W, Hooker, Director of Royal Botanic Garden K.E.W. ) ಹೂಕರ್‌ರವರ ಸಹಾಯವನ್ನು ಕೋರಲಾಯಿತು. ಆಗ ಅವರು “ಹೀರಾಲಾಲ್” ಎಂಬ ಅನುಭವಸ್ಥನಾದ ಮೇಸ್ತ್ರಿಯನ್ನು ಬೆಂಗಳೂರಿಗೆ ಕಳುಹಿಸಿದರು. 

1860ರಲ್ಲಿ ಪಾರ್ವ ದಿಕ್ಕಿನಲ್ಲಿ ಐವತ್ತು ಗಜಗಳಷ್ಟು ನೆಲವನ್ನು ಸೇರಿಸಿಕೊಳ್ಳಲಾಯಿತು. ಡಾ| ಕೈಗ್ ಹಾರನ್ ಅವರ ಸಲಹೆಯಂತೆ ಮಿ! ವಿಲಿಯಂ ನ್ಯೂ ಅವರು ಲಾಲ್‌ಬಾಗ್‌ನಲ್ಲಿರುವ ಗಿಡಗಳ, ಹೂಗಳ, ಬಳ್ಳಿಗಳ ಮತ್ತು ವೃಕ್ಷಗಳ ಪಟ್ಟಿಯೊಂದನ್ನು ತಯಾರಿಸಿದರು. ಎಡಿನ್‌ಬರೋದಲ್ಲಿದ್ದ ಬೊಟಾನಿಕಲ್ ಸೊಸೈಟಿಗೆ ಈ ಪಟ್ಟಿಯನ್ನು ಕಳುಹಿಸಲಾಯಿತು. ಆ ಸೊಸೈಟಿಯವರು ತಮ್ಮ ಸಂಚಿಕೆಯಲ್ಲಿ (1861ರ ಜುಲೈ ತಿಂಗಳ ಸಂಚಿಕೆ ) ಈ ಪಟ್ಟಿಯನ್ನು ಪ್ರಕಟಿಸಿದರು .

1894 ರ ಜನವರಿಯಲ್ಲಿ ಮಿ ನ್ಯೂ ಅವರ ಅಧಿಕಾರಾವಧಿ ಮುಗಿದದ್ದರಿಂದ ಸರ್ ಡಬ್ಬು ಹೂಕರ್ ಅವರ ಸಲಹೆಯಂತೆ ಎ. ಬ್ಲ್ಯಾಕ್ ಅವರನ್ನು ಈ ಉದ್ಯಾನವನದ ಮೇಲ್ವಿಚಾರಣಾ ಅಧಿಕಾರಿಯನ್ನಾಗಿ ನೇಮಿಸಲಾಯಿತು. ನ್ಯೂ ಅವರಂತೆಯೇ ಇವರೂ ಉತ್ಸಾಹಶಾಲಿಗಳಾಗಿದ್ದು ಈ ಲಾಲ್‌ಬಾಗ್‌ನ ಕೀರ್ತಿಯನ್ನು ಹೆಚ್ಚಿಸಿದರು. 

Roopal Shetty

1881ರಲ್ಲಿ ಕಮಿಷನರ್ ಸರ್ಕಾರ ಹೋಗಿ ಮಹಾರಾಜರ ಆಡಳಿತ ಪ್ರಾರಂಭವಾಯಿತು. ಆಗ ಲಾಲ್‌ಬಾಗ್ ಮತ್ತು ತೋಟವು ಅಂದಿನ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ಅವರ ವಶಕ್ಕೆ ಬಂದಿತು. ಆಗ ಲಾಲ್‌ಬಾಗ್ ಮತ್ತಷ್ಟು ಬೆಳೆಯಿತು . ಜಾನ್ ಕ್ಯಾಮೆರಾನ್ ಅವರ ಕಾಲದಲ್ಲಿ ಈ ತೋಟದ ವಿಸ್ತೀರ್ಣ ದ್ವಿಗುಣವಾಯಿತು. 1889 ರಲ್ಲಿ ಮೂವತ್ತು ಎಕರೆಗಳಷ್ಟು ಪ್ರದೇಶವನ್ನು ತೋಟಕ್ಕೆ ಸೇರಿಸಿಕೊಳ್ಳಲಾಯಿತು. 1891ರಲ್ಲಿ ಕೆಂಪೇಗೌಡನ ಗೋಪುರವಿರುವ ಗುಡ್ಡವೂ ಸೇರಿದಂತೆ ಹದಿಮೂರು ಎಕರೆಗಳಷ್ಟು ಜಾಗ ಲಾಲ್‌ಬಾಗ್‌ಗೆ ಸೇರಿತು. ಈ ಕಲ್ಲುಗುಡ್ಡವು ಲಾಲ್‌ಬಾಗ್‌ಗೆ ಒಂದು ಹೊಸ ಕಳೆಯನ್ನೇ ತಂದಿದೆಯೆಂದರೆ ಅತಿಶಯೋಕ್ತಿಯಾಗಲಾರದು. 

ಇದೇ ವರ್ಷದಲ್ಲಿಯೇ ಮುಖ್ಯದ್ವಾರದ ಮುಂದೆ ಮತ್ತಷ್ಟು ಸ್ಥಳವನ್ನು ಆಕ್ರಮಿಸಿಕೊಂಡು ದೊಡ್ಡ ದೊಡ್ಡ ಬಾಗಿಲುಗಳನ್ನು ನಿರ್ಮಿಸಲಾಯಿತು. 1894ರಲ್ಲಿ ಪೂರ್ವಕ್ಕೆ ಒಂಬತ್ತೂವರೆ ಎಕರೆಗಳಷ್ಟು ಹೆಚ್ಚು ಜಮೀನನ್ನು ವಶಪಡಿಸಿಕೊಂಡು ಸಸ್ಯ ಸಂಬಂಧವಾದ ಸಂಶೋಧನೆ ಆರಂಭಿಸಲಾಯಿತು. ಹೀಗಾಗಿ ಹತ್ತೊಂಭತ್ತನೆಯ ಶತಮಾನದ ಅಂತ್ಯದ ಹೊತ್ತಿಗೆ ನೂರು ಎಕರೆಗಳಷ್ಟು ಪ್ರದೇಶವನ್ನು ಈ ಲಾಲ್‌ಬಾಗ್ ಆಕ್ರಮಿಸಿಕೊಂಡಿತು. 

1889 ರ ನವೆಂಬರ್ 28 ರಂದು ಮೈಸೂರು ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅವರು ಇಂಗ್ಲೆಂಡಿನ ಯುವರಾಜ ಹೆಚ್.ಆರ್.ಹೆಚ್ . ಪ್ರಿನ್ಸ್ ಆಫ್ ವೇಲ್ಸ್ ಅವರಿಗೆ ಒಂದು ಭಾರಿ ಸತ್ಕಾರ ಕೂಟವನ್ನು ಈ ಲಾಲ್‌ಬಾಗ್ ತೋಟದಲ್ಲೇ ಏರ್ಪಡಿಸಿದ್ದರು. ಆಗ ಆ ರಾಜಕುಮಾರರ ಅಮೃತ ಹಸ್ತದಿಂದಲೇ ಗ್ಲಾಸ್ ಹೌಸ್‌ನ ಅಸ್ತಿಭಾರ ಶಿಲೆಯನ್ನು ಹಾಕಿಸಲಾಯಿತು . 1890ರ ವೇಳೆಗೆ ಅಂದರೆ ಒಂದು ವರ್ಷದಲ್ಲಿ ಗ್ಲಾಸ್ ಹೌಸ್ ಕಂಗೊಳಿಸಿತು. ಇಂದಿಗೂ ಇದು ಅತ್ಯಾಕರ್ಷಕವಾಗಿ ಶೋಭಿಸುತ್ತಿದೆ. ವರ್ಷಕ್ಕೆರಡು ಸಲ ಫಲಪುಷ್ಪ ಪ್ರದರ್ಶನಗಳು ಈ ಗ್ಲಾಸ್ ಹೌಸಿನಲ್ಲಿಯೇ ನಡೆಯುತ್ತವೆ. ಜಾನ್ ಕ್ಯಾಮರಾನ್‌ ಅವರು 1874 ರಿಂದ 1908 ರ ವರೆಗೆ ಅವಿಶ್ರಾಂತರಾಗಿ ದುಡಿದರು . ಅವರ ಶ್ರಮದ ಫಲವಾಗಿ ಹಾಗೂ ಇಲ್ಲಿ ನಡೆಯುತ್ತಿದ್ದ ಸಂಶೋಧನೆ – ಪ್ರದರ್ಶನಗಳ ಫಲವಾಗಿ ಫಲಪುಷ್ಪಗಳ ಮಾರಾಟಗಾರರೂ ಹೆಚ್ಚುತ್ತ ಬಂದರು. ಕ್ರಮೇಣವಾಗಿ ಖಾಸಗಿ ಜನರೂ ಈ ಹೂಗಿಡಗಳ ಸೌಂದರಕ್ಕೆ ಮರುಳಾಗಿ ತಮ್ಮ ಮನೆಗಳ ಮುಂದೆ ತೋಟವನ್ನು ನಿರ್ಮಾಣ ಮಾಡಲು ತೊಡಗಿದರು. 

1908 ರಲ್ಲಿ ಮಿ| ಕೃಂಬಿಗಲ್ ಅವರು ಅಧಿಕಾರಕ್ಕೆ ಬಂದರು. ಇವರ ಕಾಲದಲ್ಲಿ ಪಶ್ಚಿಮದ ಅಂದರೆ ಬಸವನಗುಡಿಯ ಕಡೆ ಒಂದು ಪ್ರವೇಶ ದ್ವಾರ ತೆರೆಯಲಾಯಿತು. ಇದೇ ವರ್ಷದಲ್ಲಿ ಮುಖ್ಯದ್ವಾರಕ್ಕೆ ಎದುರಾಗಿ ಮೈಸೂರು ಮಹಾರಾಜರ ಶಿಲಾಪ್ರತಿಮೆಯನ್ನು ಸ್ಥಾಪಿಸಲಾಯಿತು. 

Roopal Shetty

1919ರಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಗುರುದೇವ ರವೀಂದ್ರನಾಥರನ್ನು ಬೆಂಗಳೂರಿಗೆ ಆಹ್ವಾನಿಸಿ ಗೌರವಿಸಿದರು. ಅವರಿಗೆ ಸತ್ಕಾರ ಈ ಪ್ರಖ್ಯಾತ ಉದ್ಯಾನವನದಲ್ಲಿಯೇ ನಡೆಯಿತು. 1919ರಲ್ಲಿ ನೀರಿನ ನಾಲೆಗಳನ್ನು ಮುಚ್ಚಿ ನೆಲದ ಕೆಳಗಡೆಯಲ್ಲೇ ಹರಿಯುವಂತೆ ಪೈಪುಗಳನ್ನು ಅಳವಡಿಸಲಾಯಿತು. ಕೃಂಬಿಗಲ್ ಅವರು ಅಲಂಕಾರದ ಗಿಡಗಳ ಮತ್ತು ಲಾಭದಾಯಕ ಗಿಡಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಲಾಲ್‌ಬಾಗ್‌ನ ಅಭಿವೃದ್ಧಿಗೆ ಬಹಳ ಮಟ್ಟಿಗೆ ಕಾರಣರಾದರು. ಇವರ ನೆನಪಿಗಾಗಿ ಲಾಲ್ ಬಾಗ್ ಪಕ್ಕದಲ್ಲಿರುವ ರಸ್ತೆಗೆ ಕೃಂಬಿಗಲ್ ರಸ್ತೆ ಎಂದು ಹೆಸರಿಡಲಾಗಿದೆ. 

ಅವರ ತರುವಾಯ ರಾವ್ ಬಹದ್ದೂರ್ ಎಚ್.ಸಿ. ಜವರಯ್ಯನವರು ಅಧಿಕಾರ ವಹಿಸಿಕೊಂಡರು. ಇವರ ಕಾಲದಲ್ಲಿ ಲಾಲ್‌ಬಾಗಿನ ಕೀರ್ತಿ ಮತ್ತಷ್ಟು ಹರಡಿತು. ಅಲ್ಲದೆ ನಾಗರಿಕರು ಹೆಚ್ಚು ಹೆಚ್ಚಾಗಿ ಬಂದು ವಿಹರಿಸುವ ಅಭ್ಯಾಸ ಆರಂಭವಾಗಿ ಲಾಲ್‌ಬಾಗ್ ವಿಹಾರೋದ್ಯಾನವೂ ಆಯಿತು. 

ಇದುವರೆಗೆ ಅನೇಕ ಪ್ರಸಿದ್ಧ ರಾಜಕಾರಣಿಗಳು, ಹೊರದೇಶಗಳ ಪ್ರಖ್ಯಾತ ಮಹನೀಯರು ಈ ಲಾಲ್‌ಬಾಗ್‌ಗೆ ಸಂದರ್ಶನ ನೀಡಿದ್ದಾರೆ. ಪ್ರಧಾನಿ ನೆಹರೂ, ದಿ . ದಾಗ್‌ಹ್ಯಾಮರ್ ಷೀಲ್ಡ್, ರಷ್ಯಾದ ಪ್ರಧಾನಿ ಬುಲ್ಲಾನಿನ್, ಕ್ರುಶ್ಚೇವ್, ಮಾರ್ಷಲ್ ಟಿಟೋ ಮೊದಲಾದವರು ಇವರಲ್ಲಿ ಪ್ರಮುಖರು. ಕೆಲವು ಪ್ರಮುಖರು ತಮ್ಮ ಸಂದರ್ಶನದ ಕುರುಹಾಗಿ ಗಿಡಗಳನ್ನು ನೆಟ್ಟಿದ್ದಾರೆ .

ಗ್ಲಾಸ್‌ಹೌಸ್‌ನಲ್ಲಿ ಸರ್ ಎಂ . ವಿಶ್ವೇಶ್ವರಯ್ಯನವರ ಜನ್ಮ ಶತಾಬ್ದ ಸಮಾರಂಭ ನಡೆದಿತ್ತು. ನೂರು ವರ್ಷಗಳನ್ನು ದಾಟಿದ ವೃದ್ಧ ವಿಶ್ವೇಶ್ವರಯ್ಯನವರ ಪಾದಧೂಳಿಯಿಂದ ಅಂದು ಗ್ಲಾಸ್‌ಹೌಸ್‌ ಪಾವನಗೊಂಡಿತು. ಆ ಸಮಾರಂಭದಲ್ಲಿ ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಮತ್ತು ಪಂಡಿತ್ ಜವಾಹರ್‌ಲಾಲ್ ನೆಹರೂ ಅವರು ಉಪಸ್ಥಿತರಿದ್ದರು. 

ಹೀಗೆ ಹೈದರ್ ಮತ್ತು ಟಿಪೂ ಸುಲ್ತಾನರ ಕೊಡುಗೆಯಾಗಿರುವ ಬೆಂಗಳೂರಿನ ಆಕರ್ಷಕವಾದ ಉದ್ಯಾನವನ ಒಂದು ರೋಮಾಂಚಕಾರೀ ಇತಿಹಾಸವನ್ನೇ ಒಳಗೊಂಡಿದೆ. ಇಂಥ ಆದರ್ಶ ಉದ್ಯಾನವನವನ್ನು ಪಡೆದಿರುವುದು ಬೆಂಗಳೂರಿಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಒಂದು ಹೆಮ್ಮೆಯ ವಿಚಾರ.

(ಅಂಕಿತ ಪುಸ್ತಕ ಪ್ರಕಟಿಸಿರುವ ಬ.ನ. ಸುಂದರರಾಯರು ಬರೆದಿರುವ ಬೆಂಗಳೂರಿನ ಇತಿಹಾಸ ಪುಸ್ತಕದ ಆಯ್ದಭಾಗ ಇದು.)

Related Articles

Leave a Reply

Your email address will not be published. Required fields are marked *

Back to top button