ಬೆರಗಿನ ಪಯಣಿಗರುವಿಂಗಡಿಸದವಿಸ್ಮಯ ವಿಶ್ವಸ್ಫೂರ್ತಿ ಗಾಥೆಸ್ಮರಣೀಯ ಜಾಗ

ಹನಿಮೂನ್ ಹೋಗೋ ಬದಲು ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ 600 ಕೆಜಿ ಕಸ ಎತ್ತಿದ ಅನುದೀಪ್, ಮಿನುಷಾ ಜೋಡಿಗೆ ಅಭಿನಂದನೆ: ನಿಮ್ಮಂತಹ ಯುವಜನರ ಸಂಖ್ಯೆ ಸಾವಿರವಾಗಲಿ

ಪ್ರವಾಸ ನಮ್ಮನ್ನು ಬದಲಿಸುತ್ತದೆ. ಖುಷಿ ಕೊಡುತ್ತದೆ. ನಾವು ಯಾವುದೇ ಜಾಗಕ್ಕೆ ಹೋದರೂ ಆ ಜಾಗ ನಮ್ಮನ್ನು ಕಿಂಚಿತ್ತಾದರೂ ಸಮಾಧಾನದಿಂದ ಇರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಾವು ಆ ಜಾಗಕ್ಕೆ ಋಣಿಯಾಗಿರಬೇಕು. ನಾವು ಆ ತಾಣವನ್ನು ಪ್ರೀತಿಸಿದರೆ ಆ ತಾಣ ನಮ್ಮನ್ನು ಪ್ರೀತಿಸುತ್ತದೆ. ಅದನ್ನು ಅರ್ಥ ಮಾಡಿಕೊಂಡು ನಾಡಿಗೆ ಅರ್ಥವಾಗುವಂತೆ ಕೆಲಸ ಮಾಡಿದ್ದು ಬೈಂದೂರಿನ ಅನುದೀಪ್ ಮತ್ತು ಮಿನುಷಾ ಕಾಂಚನ್ ಜೋಡಿ. ಹನಿಮೂನಿಗೆ ಹೋಗುವ ಬದಲು ಸೋಮೇಶ್ವರ ಬೀಚಿನಲ್ಲಿ ತುಂಬಿದ್ದ 600 ಕೆಜಿ ಕಸವನ್ನು ಎತ್ತಿ ಮಾದರಿಯಾಗಿದ್ದಾರೆ. ಜಗತ್ತಿಗೆ ಸ್ಫೂರ್ತಿಯಾದ ಈ ಚಂದದ ಜೋಡಿಗೆ ಕನ್ನಡ.ಟ್ರಾವೆಲ್ ತಂಡದ ಹೃದಯಪೂರ್ವಕ ಧನ್ಯವಾದ.    

  • ಸಂಪಾದಕ
Anudeep Hegde

ಎಲ್ಲರಿಗೂ ಕಡಲೆಂದರೆ ಇಷ್ಟ. ಯಾವತ್ತೋ ಒಂದಿನ ಕಡಲ ಬದಿಗೆ ಹೋಗಿ ಮೆಲ್ಲಮೆಲ್ಲಗೆ ಹೆಜ್ಜೆ ಇಟ್ಟು ದಡಕ್ಕಪ್ಪಳಿಸೋ ಅಲೆಗೆ ಕಾಲೊಡ್ಡಿ ಖುಷಿ ಪಡುತ್ತೇವೆ. ಆದರೆ ಅದೇ ಸಮುದ್ರ ದಡದ ತುಂಬಾ ಕಸ ಬಿದ್ದಿದ್ದರೆ ಅದನ್ನು ಅಲಕ್ಷಿಸುತ್ತೇವೆ. ಪ್ರವಾಸ ಎಂದರೆ ನಾವು ಹೋದ ಜಾಗ ನಮ್ಮನ್ನು ಖುಷಿ ಪಡಿಸುವುದಷ್ಟೇ ಅಲ್ಲ, ಆ ಜಾಗವನ್ನು ನಾವು ಖುಷಿಯಾಗಿಟ್ಟರಬೇಕು. ಶುಚಿಯಾಗಿಟ್ಟರಬೇಕು. ಅಂಥದ್ದೊಂದು ಅಪರೂಪದ ಕೆಲಸ ಮಾಡಿದ ಬೈಂದೂರಿನ ಅನುದೀಪ್  ಹೆಗ್ಡೆ ಮತ್ತು ಮಿನುಷಾ ಕಾಂಚನ್ ಜೋಡಿಗೆ ನಮ್ಮ ನಮಸ್ಕಾರ.

ಬೈಂದೂರು ಉಡುಪಿ ಜಿಲ್ಲೆಯ ಒಂದು ತಾಲೂಕು. ಸಮುದ್ರ ದಡದ ಊರು. ಆ ಊರಿನ ಮಕ್ಕಳು ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್. ಅನುದೀಪ್ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿದ್ದರೆ ಮಿನುಷಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 

Anudeep Hegde

ಈ ಚಂದದ ಜೋಡಿಯ ಸುಮಾರು ಐದಾರು ವರ್ಷಗಳ ಪ್ರೇಮಕತೆಗೆ ಕಳೆದ ನವೆಂಬರ್ 27ರಂದು ಮದುವೆಯ ಮುದ್ರೆ ಬಿದ್ದಿದೆ. ಮದುವೆಯಾದ ಮೇಲೆ ಎಲ್ಲರಂತೆ ಜೋಡಿ ಹಕ್ಕಿಗಳು ಹನಿಮೂನಿಗೆ ಯಾವುದಾದರೊಂದು ಅಂದದ ಊರಿಗೆ ಹೋಗುವ ಆಸೆ ಇಟ್ಟುಕೊಂಡಿದ್ದರು. ಆ ಯೋಚನೆ ಮಾಡಲೆಂದೇ ಮನೆ ಸಮೀಪದ ಸೋಮೇಶ್ವರ ಬೀಚಿಗೆ ಹೋಗಿದ್ದಾರೆ. ಆ ಭೇಟಿ ಅವರ ಬದುಕನ್ನೇ ಬದಲಿಸಿತು.

Anudeep Hegde

ಅವರು ಹೋದಾಗ ಸೋಮೇಶ್ವರ ಬೀಚಿನ ತುಂಬಾ ಆಲ್ಕೋಹಾಲ್ ಬಾಟಲ್ ಗಳು, ಮೆಡಿಸಿನ್ ಬಾಟಲ್ ಗಳು, ಪ್ಲಾಸ್ಟಿಕ್ ಹೀಗೆ ಕಸಗಳೇ ಬಿದ್ದಿದ್ದವು. ಸುಂದರವದ ಪರಿಸರದಲ್ಲಿ ಕಪ್ಪುಚುಕ್ಕೆಗಳಂತೆ ಇದ್ದ ಈ ಕಸಗಳನ್ನು ಹೆಕ್ಕಿದರೆ ಹೇಗೆ ಎಂಬ ಐಡಿಯಾ ಅನುದೀಪ್ ಗೆ ಹೊಳೆದಿದ್ದೇ ತಡ ಮಿನುಷಾರಿಗೆ ಹೇಳಿದರು. ಮಿನುಷಾ ಒಪ್ಪಿಕೊಂಡರು. 

ಅವತ್ತೇ ಹೋಗಿ ಗ್ಲೌಸ್ ತಂದರು. ಪ್ರತಿದಿನ ತಮ್ಮ ಬದುಕಿನ ಎರಡು ಗಂಟೆಯನ್ನು ಸೋಮೇಶ್ವರ ಬೀಚಿಗೆ ಕೊಟ್ಟರು. ಅಲ್ಲಿ ಬಿದ್ದಿದ್ದ ಕಸಗಳನ್ನೆಲ್ಲಾ ಒಂದು ದೊಡ್ಡ ಕಸದ ಬ್ಯಾಗ್ ತಂದು ತುಂಬಿದರು. ಹಾಗೇ ತುಂಬುತ್ತಲೇ ಹೋದರು. ಡಿಸೆಂಬರ್ 4ರವರೆಗೆ ಇಬ್ಬರೇ ಕಸ ಹೆಕ್ಕಿದರು. ಅಷ್ಟಾಗುವಾಗ ಅಲ್ಲಿನ ಮತ್ತೊಂದಷ್ಟು ಮಂದಿಯ ಯುವ ತಂಡ ಇವರ ಜತೆಯಾಯಿತು. ಅಲ್ಲಿಯವರೆಗೆ ಶೇ.80 ಕಸ ಹೆಕ್ಕಿದ್ದ ಇವರಿಬ್ಬರಿಗೆ ಆನೆ ಬಲ ಬಂತು. ಎಲ್ಲರೂ ಸೇರಿ ಉಳಿದ ಕಸವನ್ನೆಲ್ಲಾ ಹೆಕ್ಕಿ ಸೋಮೇಶ್ವರ ಬೀಚನ್ನು ಕಸಮುಕ್ತಗೊಳಿಸಿದರು. 

Anudeep Hegde

ಡಿಸೆಂಬರ್ 5ರವರೆಗೆ ನಡೆದ ಇವರ ಕೆಲಸ ನಿಜಕ್ಕೂ ಎಲ್ಲರಿಗೂ ಮಾದರಿ. ರಮಣೀಯ ಜಾಗಗಳು ನಮ್ಮನ್ನು ಚೆನ್ನಾಗಿಡುತ್ತವೆ. ಆ ಜಾಗವನ್ನು ಚೆನ್ನಾಗಿಡುವುದು ನಮ್ಮ ಜವಾಬ್ದಾರಿ. ಚೆಂದದ ತಾಣವನ್ನು ನಾವು ಪ್ರೀತಿಸಿದರೆ ಆ ತಾಣ ನಮ್ಮನ್ನು ಪ್ರೀತಿಸುತ್ತದೆ. ಪ್ರವಾಸ ಹೋಗುವವರು ಅದನ್ನು ಅರ್ಥ ಮಾಡಿಕೊಳ್ಳಬೇಕು. 

Anudeep Hegde

ಮಧುರವಾಗಿ ಕಳೆಯಬೇಕಾಗಿದ್ದ ಸಮಯವನ್ನು ನಾಡಿಗಾಗಿ ಕೊಟ್ಟು ಮಾದರಿಯಾದ ಅನುದೀಪ್ ಮತ್ತು ಮಿನುಷಾ ದಂಪತಿಗೆ ಕನ್ನಡ.ಟ್ರಾವೆಲ್ ತಂಡದ ಹೃದಯಪೂರ್ವಕ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button