3 ದಿನದಲ್ಲಿ 1700 ಕಿಮೀ ಪಯಣ: ಸಂಕೇತ್ ಚಿಪಲೂನಕರ್ ಬರೆದ ಬೈಕ್ ಅಡ್ವೆಂಚರ್ ಕಥನ
ಬೈಕ್ ಪ್ರೀತಿಸುವವರಿಗೆ ಬೈಕ್ ನಲ್ಲಿ ಒಂದು ಸುದೀರ್ಘ ಪಯಣಕ್ಕೆ ಹೋಗುವ ಆಸೆ ಇರುತ್ತದೆ. ಯಾವತ್ತೋ ಒಂದು ದಿನ ಅದು ನೆರವೇರಿದಾಗ ನೆಮ್ಮದಿ, ಸಮಾಧಾನ. ಬಹಳ ದಿನಗಳಿಂದ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೋಗುವ ಆಸೆ ಇಟ್ಟುಕೊಂಡಿದ್ದ ಇಬ್ಬರು ಬೈಕ್ ವ್ಯಾಮೋಹಿಗಳಾದ ಸಂಕೇತ್ ಚಿಪಲೂನಕರ್ ಮತ್ತು ರಕ್ಷಿತ್ ತಾಮನ್ ಕರ್ ಲಾಂಗ್ ಡ್ರೈವ್ ಹೋಗಿ ಬಂದ ಸಾಹಸ ಕಥನವಿದು. ಕನ್ಯಾಕುಮಾರಿ, ಧನುಷ್ಕೋಡಿ 3 ದಿನದಲ್ಲಿ ಹೇಗೆ ಸುತ್ತಾಡಿ ಬರಬಹುದು ಎಂದು ತಿಳಿಯಬೇಕಾದರೆ ಈ ಬರಹ ಓದಿ.
ಜೀವನದಲ್ಲಿ ಅದೆಷ್ಟೇ ಪರೀಕ್ಷೆಗಳನ್ನು ಬರೆದರೂ ಎಸ್.ಎಸ್.ಎಲ್.ಸಿ ಪರೀಕ್ಷೆಯ ಹಿಂದಿನ ಆಗುವ ಕಸಿವಿಸಿ ಅಥವಾ ನರ್ವಸ್ ನೆಸ್ ವಿಶಿಷ್ಟ. ಬದುಕಿನ ಮೊದಲ ದೊಡ್ಡ ಪರೀಕ್ಷೆ ಎಂಬ ಕಾರಣಕ್ಕೋ ಏನೋ. ಅಂದು ಅದೇ ಭಾವ ಅದೆಷ್ಟೋ ವರ್ಷಗಳ ಬಳಿಕ ಅನುಭವಿಸಿ ಖುಷಿಯಾಗಿತ್ತು. ಮರುದಿನ ಬೆಳಗ್ಗೆ ಕನ್ಯಾಕುಮಾರಿ ಹೊರಟಿದ್ದೆವು. ಬೈಕಿನಲ್ಲಿ.
ಐದು ಜನರ ಟೀಮ್ ರೆಡಿಯಾಗಿ ಒಬ್ಬೊಬ್ಬರೇ ಬಾರದಾಗಿ ಕೊನೆಗೆ ಉಳಿದವರು ನಾನು ನನ್ನ ಗೆಳೆಯ. ಪ್ಲಾನ್ ಮಾಡಿದ ಮೊದಲ ದಿನದಿಂದಲೇ ಇಬ್ಬರೇ ಆದರೂ ಸರಿ ಈ ಬಾರಿ ಕನ್ಯಾಕುಮಾರಿ ಮುಂದಿನ ವರ್ಷ ಲಡಾಕ್ ಎನ್ನುತ್ತಿದ್ದ ನಾವು ಅದೇ ರೀತಿ ಹೊರಡಬೇಕಾಯಿತು.
ತಿಳಿದವರ ಸಲಹೆ ಕೇಳಿ, ಹೋಗಿ ಬಂದವರ ಮಾತು ಕೇಳಿ ಅಗತ್ಯವಾಗಿ ಬೇಕಾಗಿದ್ದ ತಯಾರಿಗಳನ್ನು ಮಾಡಿಕೊಂಡಿದ್ದಾಗಿತ್ತು. ಹೊರಡೋ ನಾಲ್ಕು ದಿನದ ಮೊದಲೇ ನನ್ನ ಡಾಮಿನಾರ್ 400(Bajaj Dominar 400) ಬೈಕ್ ಸರ್ವಿಸ್ ಮಾಡಿಸಿ ಆ ನಾಲ್ಕು ದಿನದ ಓಡಾಟದಲ್ಲಿ ಬೈಕ್ ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡು, ಬೇಸಿಕ್ ಸೇಫ್ಟಿಗಾಗಿ ಇರುವ ಜಾಕೆಟ್ ಮತ್ತು ಕಾಲಿನ ಗಾರ್ಡ್ ಗಳನ್ನು ಎತ್ತಿಟ್ಟು ಮಲಗಿದರೆ ನಿದ್ದೆ ಹತ್ತಬೇಕಲ್ಲ. ಅದೇ ಎಸ್.ಎಸ್.ಎಲ್.ಸಿ ಫೀಲ್. ಅಂತೂ ಇಂತೂ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಮೂರು ಗಂಟೆಗಳ ನಿದ್ದೆ ಮಾಡಿ ಎದ್ದು ನಿಗದಿ ಮಾಡಿದ ಸಮಯಕ್ಕೆ ನಾನೂ ಗೆಳೆಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಿಕ್ಕಿದ್ದಾಯಿತು ಸೆಲ್ಫೀ ಕ್ಲಿಕ್ ಮಾಡಿ ವಾಟ್ಸಾಪ್ ಸ್ಟೇಟಸ್ ಮಾಡಿ ಹೊರಟೆವು.
ಮೊದಲಿನಿಂದಲೂ ಬೈಕ್ ರೈಡ್ ಎಂದರೆ ಧ್ಯಾನಸ್ಥ ಸ್ಥಿತಿ ಎಂದು ಅಂದುಕೊಂಡವನು ನಾನು. ಇದೇ ಹುಡುಕಾಟದಲ್ಲಿ, ಸಿಕ್ಕಾಗ ಆಗುವ ಖುಷಿಯಲ್ಲಿ, ಜಗತ್ತನೇ ಮರೆಯುವ ಚಲನೆಯಲ್ಲಿ ಕನ್ಯಾಕುಮಾರಿ ತಲುಪಿದ್ದೆ. ಗೊತ್ತಿರದ ಊರಿಗೆ ಹೊರಟಾಗ ಕಂಡು ಕೇಳರಿಯದ ಕಡೆ ತಿನ್ನುವ ಬದಲು ಗೊತ್ತಿರುವ ಅಥವಾ ಎಲ್ಲೋ ಹೆಸರು ಕೇಳಿದ್ದೇವೆ ಎಂದು ಆನ್ನಿಸಿದ ಕಡೆ ನಿಲ್ಲಿಸಿ ತಿಂಡಿ, ಊಟ ಮಾಡಿದ್ದೆವು. ಟೋಲ್ ಬಳಿಯಲ್ಲಿ, ಫೋಟೋಗೆ ಹೇಳಿ ಮಾಡಿಸಿದ ಜಾಗಗಳಲ್ಲಿ ಚಿಕ್ಕ ಪುಟ್ಟ ನಾಲ್ಕು ಬ್ರೇಕ್ ತೆಗೆದುಕೊಂಡದ್ದು ಬಿಟ್ಟರೆ ನಾನ್ ಸ್ಟಾಪ್ ಆಗಿ ಸೇರಿದ್ದೆವು.
ಬೈಕ್ ಆದ್ದರಿಂದ ಬುಕ್ ಮಾಡುವ ಹೊಟೇಲ್ ಗೆ ಕಾಂಪೌಂಡ್ ಇರಬೇಕು ಆಗ ಬೈಕ್ಸ್ ಸೇಫ್ ಅನ್ನೊ ಆಲೋಚನೆಯಂತೆ ಬುಕ್ ಮಾಡಿದ್ದ ಹೋಟೇಲ್ ನಲ್ಲಿ ಚೆಕ್ ಇನ್ ಮಾಡಿ ಕಡಲ ತಡಿಗೆ ಹೋದಾಗ ಆದ ಖುಷಿಯೇ ಅನನ್ಯ. ಮಂಗಳೂರಿನ ಹತ್ತಿರದ ಊರಿನವವರು ನಾವು, ಕಡಲು ಹೊಸದಲ್ಲ. ಆದರೆ 670 ಕಿಲೋಮೀಟರ್ ಬೈಕಿನಲ್ಲಿ ಬಂದೇ ಬಿಟ್ಟೆವಲ್ವ ಅನ್ನೋ ಖುಷಿ. ಆಗಲೇ ಹೇಳಿದ ಹಾಗೆ ಇದೇನು ದೊಡ್ಡ ಸಾಹಸ ಅಲ್ಲ ಆದರೆ ಎಸ್.ಎಸ್.ಎಲ್.ಸಿ ಯ ಹಾಗೆ ಮೊದಲ ದೊಡ್ಡ ಹೆಜ್ಜೆ.
ಪ್ಲಾನ್ ಪ್ರಕಾರ ಬೇಗನೇ ಹೊರಟು ಕಡಿಮೆ ಸ್ಟಾಪ್ ತೆಗೆದುಕೊಂಡು ಬಂದರೂ ವಿವೇಕಾನಂದ ರಾಕ್ (Vivekananda Rock)ಗೆ ಸಂಜೆಯೇ ಹೋಗಿ ಮರುದಿನ ಸನ್ ರೈಸ್ ನೋಡಿ ಕನ್ಯಾಕುಮಾರಿ ದೇವಾಲಯ ನೋಡಿ ಹೊರಡಬೇಕು ಎಂದುಕೊಂಡಿದ್ದು ಆಗಲಿಲ್ಲ. ಫೆರ್ರಿ ಕ್ಲೋಸ್ ಆಗಿತ್ತು. ಇದ್ದ ಸಮಯದಲ್ಲಿ ಬೀಚ್ ನ್ ಸುತ್ತ ಸುತ್ತಾಡುತ್ತಾ ಕಾಲ ಕಳೆಯುತ್ತಿರೆಬೇಕಾದರೆ ಬೈಕನ್ನು ಮರಳಲ್ಲಿ ನಿಲ್ಲಿಸಿ ಮುಂದಿನ ಬ್ರೇಕ್ ಹಿಡಿದು ಹಿಂದಿನ ಚಕ್ರದಿಂದ ಮರಳನ್ನು ಹಾರಿಸಿ ಯಾಕೊಂದು ವೀಡಿಯೋ ಮಾಡಬಾರದು ಅನ್ನಿಸಿತು. ಅನ್ನಿಸಿದ್ದನ್ನು ಮಾಡಲು ನಮ್ಮನ್ನು ತಡೆಯುವರು ಅಲ್ಲಿ ಯಾರೂ ಇರಲಿಲ್ಲ. ಅಂದುಕೊಂಡಂತೆ ವೀಡಿಯೋ ಚೆನ್ನಾಗಿ ಬಂತು ಸ್ಲೊ ಮೋಷನ್ ವಿಡಿಯೋ ಮತ್ತೂ ಚೆನ್ನಾಗಿ ಬಂತು. ನಮ್ಮ ಜೊತೆ ಬರಬೇಕಾಗಿದ್ದು, ಬಾರದೇ ಇರುವ ಗೆಳೆಯರ ಹೊಟ್ಟೆ ಉರಿಸಲು ಇಷ್ಟು ಸಾಕಿತ್ತು.
ಮಂಗಳೂರಿನಲ್ಲಿ ಕಾಣುವ ಅದೇ ಸೂರ್ಯಾಸ್ತ ಆ ದಿನ ಮಾತ್ರ ಅದೇನೋ ಬೇರೆಯದಾಗೇ ಕಂಡಿತು. ಕ್ಯಾಮೆರಾ ಸೈಡಿಗೆ ಇಟ್ಟು ಮೌನವಾಗಿ ಸೂರ್ಯಾಸ್ತ ನೋಡಿದ್ದೇ ಒಂದು ಮರೆಯಲಾಗದ ನೆನಪು. ರೈಡ್ ಸೆಲೆಬ್ರೇಟ್ ಮಾಡಬೇಕು ಅನ್ನಿಸಿ ಪಕ್ಕದಲ್ಲಿದ್ದ ಚೆನ್ನಾಗಿರೋ ಒಂದು ರೆಸ್ಟೋರೆಂಟ್ ಗೆ ಹೋದೆವು. ಆರ್ಡರ್ ಮಾಡಿದ್ದು ಒಂದೊಂದೇ ಬೀರು ಆದರೂ ಎರಡು ಗಂಟೆ ಕಾಲ ಎಲ್ಲೋ ಮನಸ್ಸಿನ ಮೂಲೆಯಲ್ಲಿದ್ದ ಮಾತುಗಳನ್ನೆಲ್ಲಾ ಬಡಿದೆಬ್ಬಿಸಿ ಮಾತನಾಡಿಬಿಟ್ಟೆವು. ಮನಸ್ಸಿಲ್ಲದ ಮನಸ್ಸಿಂದ ನಾಳೆ ಬೆಳಗ್ಗೆ ಬೇಗನೇ ಏಳಬೇಕು ಸೂರ್ಯೋದಯ ನೋಡಲೇಬೇಕು ಎಂದು ಬೇಗನೆ ಹೊಟೇಲ್ ರೂಮ್ ಸೇರಿಕೊಂಡೆವು.
ಸೂರ್ಯವಂಶಿ ಆದ ನಾನು ಜೀವನದಲ್ಲಿ ಬಹಳ ಕಡಿಮೆ ಸೂರ್ಯೋದಯವನ್ನು ನೋಡಿದವನು. ಅದಕ್ಕಾಗಿಯೋ ಅಥವಾ ಅಲ್ಲಿದ್ದ ಜನ ಸೂರ್ಯನನ್ನು ಕಂಡಾಗ ಆಚರಿಸುವ ಸಂಭ್ರಮಕ್ಕೋ ಇನ್ನು ಪ್ರತೀ ದಿನ ಸೂರ್ಯೋದಯ ನೋಡಬೇಕು ಅನ್ನಿಸಿದ್ದು ಸುಳ್ಳಲ್ಲ.
ಕನ್ಯಾಕುಮಾರಿ ದೇವಾಲಯ ನೋಡಿ ಫೇರ್ರಿ ರೈಡ್ ಗೆ ಹೋಗಲು ಕ್ಯೂ ನಲ್ಲಿ ನಿಂತಾಗ ಮುಂದಿರುವ ಗಂಡ ಹೆಂಡತಿ ಕನ್ನಡದವರಾಗಿದ್ದರು. ಎಲ್ಲಿಯವರು ಎಂದು ಕೇಳಿದಾಗ ನಾನು ಕೆಲಸದ ಮೇಲೆ ಎರಡು ವರ್ಷ ಇದ್ದ ಬೆಳಗಾವಿಯವರು ಎಂದು ಕೇಳಿ ನಮ್ಮವರೇ ಅನ್ನಿಸಿತು. ಅವರಿಗೂ ಹಾಗೆಯೇ ಅನ್ನಿಸಿರಬೇಕು. ಮಗಳು ಬುಕ್ ಮಾಡಿಕೊಟ್ಟ ಪ್ಲಾನ್ ಪ್ರಕಾರ ಮಧುರೈ ನೋಡಿ ಅಲ್ಲಿಗೆ ಬಂದಿದ್ದವರು ಅವರು. ಮೆಮೊರಿ ಫುಲ್ ಆಗಿದ್ದ ಫೋನಿನಲ್ಲಿ ಹೊಸ ಫೋಟೋಗಳನ್ನು ತೆಗೆಯಲಾರದೆ ಮಧುರೈ ನ ಫೋಟೋಗಳನ್ನು ಡಿಲೀಟ್ ಮಾಡಲೂ ಆಗದೇ ಒದ್ದಾಡುತ್ತಿದ್ದರು. ಇದ್ದ ಫೋಟೋಗಳನ್ನು ಗೂಗಲ್ ಫೋಟೋಸ್ ಗೆ ಹಾಕಿ ಹೊಸ ಫೋಟೋ ತೆಗೆಯಲು ಆಗುವಂತೆ ಮಾಡಿಕೊಟ್ಟಾಗ ಅವರಿಗಾದ ಖುಷಿ ಅಷ್ಟಿಷ್ಟಲ್ಲ. ನಮ್ಮ ಕೈಯಲ್ಲಿ ತಾವು ಗಂಡ ಹೆಂಡತಿ ಫೋಟೋಗಳನ್ನು ತೆಗೆಸಿಕೊಂಡರು. ಇಂದಿಗೂ ಪ್ರತೀ ಹಬ್ಬಕ್ಕೆ ತಪ್ಪದೇ ಕರೆ ಮಾಡುತ್ತಾರೆ.
ಕನ್ಯಾಕುಮಾರಿ(Kanyakumari)ಯಲ್ಲೇ ಇನ್ನೊಂದು ದಿನ ಕಳೆಯಬೇಕು ಅನ್ನಿಸಿದರೂ ಉಳಿದ ಒಂದುವರೆ ದಿನದಲ್ಲಿ ನಾವು ತಿರುಚೆಂದೂರ್ ಮತ್ತು ರಾಮೇಶ್ವರಂ ಹೋಗಬೇಕಿತ್ತು. ಹೊಟೇಲ್ ರೂಮ್ ಚೆಕ್ ಔಟ್ ಮಾಡಿ ಹೊರಬಂದಾಗ ನನ್ನ ಬೈಕ್ ನ ಟಯರ್ ಹಿಂದಿನ ದಿನದ ನಮ್ಮ ಮರಳು ಮೇಲೆಬ್ಬಿಸಿ ವೀಡಿಯೋ ಮಾಡಿದ ಪ್ರಭಾವದಿಂದ ಪಂಕ್ಚರ್ ಆಗಿತ್ತು. (ಮೊದಲೇ ಇದ್ದ ಪಂಕ್ಚರ್ ದೊಡ್ಡದಾಗಿತ್ತು)
ಪಂಕ್ಚರ್ ಹಾಕಲು ಹೋದಾಗ ಸರ್ ಇದು ದೊಡ್ಡ ಪಂಕ್ಚರ್ ಆಗಿದೆ ಟ್ಯೂಬ್ ಲೆಸ್ ಪಂಕ್ಚರ್ ಹಾಕುವ ಮಾಮೂಲಿ ವಿಧಾನದಲ್ಲಿ ಆಗಲ್ಲ ಟ್ಯೂಬ್ ಗೆ ಪಂಕ್ಚರ್ ಹಾಕುವಂತೆ ಹಾಕಿದ್ರೆ ಮಾತ್ರ ನಿಲ್ಲುತ್ತೆ ಅಂದ. ಆ ವಿಧಾನ ನನಗೂ ನನ್ನ ಗೆಳೆಯನಿಗೂ ಹೊಸದು. ಟಯರ್ ಬದಲಾಯಿಸಿ ಹೋಗಬೇಕೋ ಅವನು ಹೇಳಿದಂತೆ ಹಾಕಿ ಹೊರಡುವುದೋ ಎನ್ನುವ ದ್ವಂದ್ವ. ಆದದ್ದಾಗಲಿ ಅವನು ಹೇಳಿದಂತೆ ಮಾಡೋಣ ಎಂದು ಪಂಕ್ಚರ್ ಹಾಕಿದೆವು. ಅಲ್ಲೇ ಪಕ್ಕದಲ್ಲೇ ಇದ್ದ ಬಾಳೆ ಎಲೆ ಊಟದಲ್ಲಿ ಪಕ್ಕಾ ತಮಿಳುನಾಡು ಶೈಲಿಯ ಊಟ ಮಾಡಿ ತಿರುಚೆಂದೂರು ಹೊರಟೆವು.
ಸುನಾಮಿ ಬಂದಾಗ ಅಕ್ಕ ಪಕ್ಕ ಎಲ್ಲಾ ಕಡೆ ನೀರು ಬಂದರೂ ಈ ದೇವಸ್ಥಾನಕ್ಕೆ ಮಾತ್ರ ನೀರು ಬರಲಿಲ್ಲ ಎಂದಾಗಿ ಈ ದೇವಾಲಯ ಮತ್ತಷ್ಟು ಪ್ರಾಮುಖ್ಯತೆ ಪಡೆದಿತ್ತು. ಅಲ್ಲಿ ದೇವರ ದರ್ಷನ ಮಾಡಿ ಸಮುದ್ರ ಕಿನಾರೆಯಲ್ಲಿ ಹತ್ತು ನಿಮಿಷ ವಿಶ್ರಾಂತಿ ಮಾಡಿ ರಾಮೇಶ್ವರಂ ಗೆ ಹೊರಡುವಾಗ ಹೊಟೇಲ್ ಬುಕ್ ಮಾಡಿ ಹೊರಡುವ ಎಂದು ನಿರ್ಧರಿಸಿದೆವು. ನೆಟ್ವರ್ಕ್ ದಯೆಯಿಂದ ಹಾಗೂ ಪೇಮೆಂಟ್ ಎರಡು ಬಾರಿ ಕ್ಯಾನ್ಸಲ್ ಆದ್ದರಿಂದ ನಮ್ಮ ಅತ್ಯಮೂಲ್ಯ ಅರ್ಧ ಗಂಟೆ ಅಲ್ಲೇ ಕಳೆಯಿತು. ಕನ್ಯಾಕುಮಾರಿಯಲ್ಲಿ ಮಾಡಿದಂತೆ ಮೊದಲೇ ರೂಮ್ ಬುಕ್ ಮಾಡಬೇಕು ಎನ್ನುವುದು ಅಂದು ಕಲಿತ ಮೊದಲ ಪಾಠವಾಗಿತ್ತು.
ಹಿಂದಿನ ದಿನದ ಹೈವೆಯ ಏಕ ವೇಗದ ಚಲನೆಯಿಂದ ಈ ರಸ್ತೆ ಸ್ವಲ್ಪ ಬದಲಾವಣೆ ಕೊಟ್ಟಿತು. ಅಂಕು ಡೊಂಕು ಮತ್ತು ಊರಿನ ಒಳಗಿನ ದಾರಿಗಳು ಖುಷಿ ಕೊಟ್ಟವು. ರಾತ್ರಿ ಎಂಟು ಮೂವತ್ತರ ಹೊತ್ತಿಗೆ ಒಂದು ಹೋಟೇಲ್ ಸಿಕ್ಕಿತು. ಇದು ಬೇಡ ಮುಂದೆ ನೋಡುವ ಇನ್ನೊಂದು ತಾಸು ಸಾಗೋಣ ಎಂದು ಸಾಗಿದೆವು. ನಂತರ ಯಾವುದೇ ಒಳ್ಳೆಯ ಹೋಟೇಲ್ ಆ ದಾರಿಯಲ್ಲಿ ಸಿಗಲೇ ಇಲ್ಲ. ಗೊತ್ತಿರದ ದಾರಿ – ರಾತ್ರಿಯ ವೇಳೆ, ಸಿಕ್ಕ ಒಳ್ಳೆಯ ಹೋಟೇಲ್ ನಲ್ಲಿ ಊಟ ಮುಗಿಸಬೇಕು ನಮ್ಮ ಸಮಯಕ್ಕೆ ಕಾಯಬಾರದು ಎನ್ನುವ ಎರಡನೇ ಪಾಠವೂ ಅಂದೇ ಸಿಕ್ಕಿತು.
ಇನ್ನೇನು ರಾಮೇಶ್ವರಂಗೆ(Rameshwaram) 40 ಕಿಲೋಮೀಟರ್ ಇದೆ ಎಂದಾಗ ಹೈವೆ ಸಿಕ್ಕಿತು. ಅಲ್ಲೇ ಒಂದು ಸ್ಟಾಪ್ ಕೊಟ್ಟೆವು. ಅಲ್ಲಿ ಒಬ್ಬರು ಮಾತನಾಡಿಸಿದರು. ಎಲ್ಲಿಂದ ಬಂದಿದ್ದು ಯಾವ ಕಡೆಗೆ ಎಂದು ವಿಚಾರಿಸಿದರು. ಮರುದಿನದ ನಮ್ಮ ಟಾರ್ಗೆಟ್ ಧನುಷ್ಕೋಡಿ ಮತ್ತು ರಾಮೇಶ್ವರಂ ದೇವಾಲಯ ನೋಡಿ ವಾಪಾಸು ಹೋಗುವುದು ಎಂದು ಹೇಳಿದಾಗ, ಇದನ್ನು ಎಲ್ಲರೂ ನೋಡ್ತಾರೆ ಇಲ್ಲೊಂದು ಅಕ್ವೇರಿಯಂ ಇದೆ. ಭಾರತದಲ್ಲಿ ಸಿಗುವ ಎಲ್ಲಾ ಮೀನುಗಳೂ ಇಲ್ಲಿವೆ. ಪಂಬನ್ ಬ್ರಿಡ್ಜ್ ಸಮೀಪಿಸುತ್ತಿದ್ದಂತೆ ಎಡ ಬಲಕ್ಕೆ ಚಿಕ್ಕ ರಸ್ತೆಗಳು ಹೋಗುತ್ತವೆ ಅಲ್ಲಿ ಚೆನ್ನಾಗಿರೋ ಬೀಚ್ ಗಳಿವೆ. ಪ್ರೈವೇಟ್ ಬೀಚಸ್ ಗೆ ಹೋದ ಹಾಗೆ ಆಗುತ್ತದೆ. ಅಲ್ಲಿ ಚಿಲ್ ಮಾಡಿ, ಅಬ್ದುಲ್ ಕಲಾಂ ಮನೆ ಇದೆ. ಇದನ್ನೆಲಾ ನೋಡಿ ಎಂದರು.
ಮರುದಿನ ಮಧ್ಯಾಹ್ನ 2 ಗಂಟೆಗಾದರೂ ಬೆಂಗಳೂರು ಕಡೆ ವಾಪಾಸು ಹೊರಡಬೇಕಿತ್ತು. ಉಳಿದ ಸಮಯದಲ್ಲಿ ಇದಲ್ಲಾ ಅಸಾಧ್ಯವಾಗಿತ್ತು. ಹೋಗುವ ಜಾಗದ ಬಗ್ಗೆ ಅಲ್ಲಿರುವ ಜಾಗಗಳ ಬಗ್ಗೆ ಅವುಗಳ ಎಂಟ್ರಿ ಸಮಯದ ಬಗ್ಗೆ ಸರಿಯಾಗಿ ತಿಳಿದು ಅದಕ್ಕೆ ಬೇಕಾದಷ್ಟು ದಿನಗಳ ಪ್ಲಾನ್ ಮಾಡಬೇಕು. ಓಂದು ಟ್ರಿಪ್ ನಲ್ಲಿ ಒಂದೇ ಜಾಗವಾದರೂ ಸರಿ ಅಲ್ಲಿರುವ ಎಲ್ಲವನ್ನೂ ನೋಡಬೇಕು ಎನ್ನುವುದು ಅಂದಿನ ಪಾಠ ನಂ 3 ಆಗಿತ್ತು.
ಧನುಷ್ಕೋಡಿ(dhanushkodi)ಯ ರಸ್ತೆಯಲ್ಲಿ ಬೆಳಗ್ಗಿನ ಜಾವ ಬೈಕ್ ಓಡಿಸುವುದೇ ಒಂದು ವಿಶೇಷ ಅನುಭವ. ಎರಡೂ ಕಡೆ ನೀರು. ಒಂದು ಕಡೆ ನೀರು ನೀಲಿ ಕಂಡರೆ ಇನ್ನೊಂದು ಕಡೆ ಹಸುರು. ರಸ್ತೆಯ ಕೊನೆಯಲ್ಲಿರುವ ಧ್ವಜ ಸ್ತಂಭಕ್ಕಿಂತ ಮೊದಲೇ ಬ್ಯಾರಿಕೇಡ್ ಇತ್ತು. ಬೈಕ್ಸ್ ಹೋಗಬಹುದಾದರೂ ಮುಂದೆ ವಾಹನಗಳಿಗೆ ಎಂಟ್ರಿ ಇಲ್ಲ ಎಂಬ ಬೋರ್ಡ್ ಇತ್ತು. ಕೆಲವು ಬೈಕ್ ಗಳು ಅಲ್ಲೇ ಪಾರ್ಕ್ ಆಗಿದ್ದವು. ಆ ಸ್ತಂಭದ ಹತ್ತಿರ ನಿಂತು ಬೈಕ್ ಜೊತೆ ಫೋಟೋ ತೆಗೆಯದೇ ಹೋದರೆ ಅಲ್ಲಿಯ ತನಕ ಬೈಕ್ ನಲ್ಲಿ ಹೋದದ್ದೇ ವ್ಯರ್ಥ ಅನ್ನಿಸಿ, ಸಾಮಾನ್ಯವಾಗಿ ನಿಯಮ ಮೀರಿ ನಡೆಯದ ನಾವು ಅಂದು ರೂಲ್ಸ್ ಬ್ರೇಕ್ ಮಾಡಿಬಿಟ್ಟೆವು. ದಕ್ಷಿಣ ಭಾರತದ ಕೊನೆಯ ಭೂಮಿಯಲ್ಲಿ ನಿಂತು ಫೋಟೋ ಹೊಡೆಯುತ್ತಿದ್ದಾಗ ಮೊಬೈಲ್ ಸ್ಕ್ರೀನಿನಲ್ಲಿ ವೆಲ್ಕಮ್ ಟು ಏರ್ಟೆಲ್ ಶ್ರೀಲಂಕಾ ಎಂಬ ಸಂದೇಶ ಬಂತು. ಪಾಸ್ ಪೋರ್ಟ್ ಇಲ್ಲದೇ ವಿದೇಶಕ್ಕೆ ಹೋದ ಮೊದಲಿಗರು ನಾವೇ ಎಂಬಂತೆ ಖುಷಿ ಆಯಿತು.
ರಾಮೇಶ್ವರಂ ದೇವಾಲಯ ನೋಡಿ ವಾಪಾಸು ಹೊರಟಾಗ ಮಧ್ಯಾಹ್ನ 2.30. ಪಂಬನ್ ಬ್ರಿಡ್ಜ್ ನಲ್ಲಿ ಒಂದು ಬ್ರೇಕ್ ಮತ್ತು ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭ. ಎಷ್ಟೇ ಕಡಿಮೆ ಬ್ರೇಕ್ ತೆಗೆದುಕೊಂಡು ಬಂದರೂ ಹಗಲು ಬೈಕ್ ಓಡಿಸಿದಂತೆ ರಾತ್ರಿ ಓಡಿಸಲು ಆಗುವುದಿಲ್ಲ ಮತ್ತು ಓಡಿಸಲು ಬಾರದು ಕೂಡ. ನಿಧಾನಕ್ಕೆ ಎಲೆಕ್ಟ್ರಾನಿಕ್ ಸಿಟಿ ತಲುಪಿದಾಗ ರಾತ್ರಿಯ 2 ಗಂಟೆ.
ಆ ಮೂರುದಿನ ನಮ್ಮ ಬೈಕು ನಮ್ಮ ಜಗತ್ತು ಎನ್ನುವಂತೆ ತಿರುಗಾಡಿದ್ದೆವು. ಮೂರು ದಿನದಲ್ಲಿ 1700 ಕಿ.ಮೀ ಬೈಕ್ ಓಡಿಸಿದ್ದೆವು. ಸುಸ್ತಾಗಿತ್ತು. ಆದರೆ ಅನುಭವಕ್ಕೆ ಬರುತ್ತಿರಲಿಲ್ಲ. ಬೈಕ್ ಕೊಂಡದ್ದಕ್ಕೆ ಸಮಾಧಾನ ಮತ್ತು ಸ್ವಲ್ಪ ಮಟ್ಟಿನ ಸಾರ್ಥಕತೆ ಬಂತು ಎಂದು ಖುಷಿಪಟ್ಟೆವು.