ಕಾಡಿನ ಕತೆಗಳು

ಭೂತಾನಿನಲ್ಲಿ ಒಂದು ಕರಾಳ ರಾತ್ರಿ: ಸ್ಕಂದ ಪ್ರಸಾದ್ ಬರೆದ ಮರೆಯಲಾಗದ ಟ್ರೆಕ್ಕಿಂಗ್ ಕತೆ

ಗೆಳೆಯರ ಜೊತೆ ಭೂತಾನಿನ ಮಣ್ಣಲ್ಲಿ ಟ್ರೆಕ್ಕಿಂಗ್ ಹೋಗಿದ್ದ ಸ್ಕಂದ ಪ್ರಸಾದ್ (SoloAdventureSoul) ಬರೆದ ಸುಂದರ ಪ್ರವಾಸದ ಒಂದು ಅಧ್ಯಾಯ.

SoloAdventureSoul

ಹದಿನೇಳು ದಿನದ ಬೈಕ್ ಪ್ರವಾಸದ 14ನೇ ದಿನ ಭೂತಾನಿನ ಪುನಾಖ ಎಂಬ ಪಟ್ಟಣ ತಲುಪಿದ್ದೆವು. ನಾನು ಮತ್ತು ಗೆಳೆಯರು ಸಂಜೆಯ ಹೊತ್ತಲ್ಲಿ ಹೋಗಿ ಪುನಾಖ ತೂಗು ಸೇತುವೆ ನೋಡಿ ಬಂದಿದ್ದೆವು. ಆ ದಿನ ಮಳೆಗೆ ಬೈಕು ಸವಾರಿ ಮಾಡಿದ್ದರಿಂದ ನಾವೆಲ್ಲರೂ ಸುಸ್ತಾಗಿದ್ದೆವು. ಸ್ವಲ್ಪ ಹೊತ್ತು ವಿಶ್ರಮಿಸಿ, ರೂಮಲ್ಲಿ ಮೊಬೈಲು ಚಾರ್ಜ್ ಗೆ ಇಟ್ಟು ಒಬ್ಬನೇ ಹೊರಟೆ. ಬೈಕು ಸ್ಟಾರ್ಟ್ ಮಾಡಿದಾಗ ಹೋಟೆಲ್ watchmen ಹೇಳಿದ “Sir I will close the gate at 10”. ಬೈಕಲ್ಲಿ ಸಮಯ 9 ತೋರಿಸುತ್ತಿತ್ತು. ಇನ್ನೊಂದು ಗಂಟೆ ಆರಾಮವಾಗಿ ಸುತ್ತಾಡಿ ಬರಬಹುದೆಂದು ಬೈಕಲ್ಲಿ ಸುಮಾರು 7ಕಿಮೀ ಕ್ರಮಿಸಿದೆ. ಸಂಜೆ ಬಂದ ದಾರಿ ನೆನಪಿದ್ದದರಿಂದ, ಎಲ್ಲಾ ತಿರುವುಗಳನ್ನು ದಾಟಿ ‘ಪುನಾಖ ತೂಗು ಸೇತುವೆ’ ತಲುಪಿದೆ. 

ಹೇಳುವುದನ್ನು ಮರೆತೆ ಇಲ್ಲಿ ಭಾರತದ ಸಿಮ್ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ದಾರಿ ತಪ್ಪಿದರೆ ಕರೆ ಮಾಡಲು ಸಾಧ್ಯವಿಲ್ಲ. ನಮ್ಮ ಸ್ವಂತ ಬೈಕಿಗೆ ಭೂತಾನ್ ಪರ್ಮಿಟ್ ಮಾಡಿಸಿ ಪ್ರವೇಶಿಸಬಹುದು. ಆದರೆ ಭಾರತದಲ್ಲಿ ಬೈಕ್ ಓಡಿಸಿದಂತೆ ಓಡಿಸಿದರೆ ಪೋಲೀಸರ ಕೈಯಲ್ಲಿ ಸಿಕ್ಕಿ ಬೀಳುವುದು ಖಂಡಿತ. ನಮ್ಮ ಪಥದಲ್ಲೇ ಸಾಗಬೇಕು, ಸುಖಾ ಸುಮ್ಮನೆ ರಸ್ತೆ ಬದಿಯಲ್ಲಿ ನಿಲ್ಲಿಸುವಂತಿಲ್ಲ,ನಮ್ಮ ಬೈಕ್ ಇಂಡಿಕೇಟರ್ ನ ಸದ್ಬಳಕೆ ಮಾಡಬೇಕು. ರಾತ್ರಿ ವೇಳೆ ಪ್ರತಿ ವಾಹನಗಳು ತಮ್ಮ ತಮ್ಮ ಹೆಡ್ ಲೈಟನ್ನು ಡಿಮ್‌‌ ಮಾಡಲೇ ಬೇಕು. ಪ್ರತಿಯೊಂದು ಲಾರಿಯೂ ಈ ರೀತಿ ‌ಮಾಡುವುದು ಬೈಕ್ ಸವಾರರಿಗೆ ಬಹು ಉಪಕಾರಿ. ಭಾರತದಲ್ಲೂ ಈ ರೀತಿ ನಿಯಮ ಪಾಲಿಸಿದರೆ ಅದೆಷ್ಟೋ ಅಪಘಾತ ತಪ್ಪಬಹುದು.

ಪುನಾಖ ಸೇತುವೆ ಭೂತಾನಿನ ಅತ್ಯಂತ ಉದ್ದದ (550 ft) ತೂಗು ಸೇತುವೆ ಕೆಳಗೆ ಭೋರ್ಗರೆಯುವ ಪೊಚೊ ನದಿ. ಸೇತುವೆ ಆಚೆಗೆ ಶೇಂಘಾನ, ಸಂಡಿಂಖ ಮತ್ತು ವಾಂಖ ಎಂಬ ಸಣ್ಣ ಸಣ್ಣ ಹಳ್ಳಿಗಳು. ಹಳ್ಳಿಯಿಂದ ಆಚಗೆ ಬೆಟ್ಟ, ಪರ್ವತಗಳು. ಆ ಪರ್ವತದ ಕಾಡುಗಳಿಂದ ಮಂಜು ನಿಧಾನವಾಗಿ ಗಾಳಿ ಬೀಸಿದಂತೆ ತೇಲಿ ಹೋಗುವುದು ನೋಡುತ್ತಾ, ತೂಗು ಸೇತುವೆಯ ಮಧ್ಯದಲ್ಲಿ ಕುಳಿತು ನದಿಯ ಶಬ್ದ ಕೇಳುತ್ತಾ ಕುಳಿತಿದ್ದೆ. ಮೆದುಳಿನ ಮೂಲೆಯಿಂದ ಒಂದು ಸಿಗ್ನಲ್ ಬಂತು “ಮಾರಾಯ ನೀನಿರುವುದು ಭೂತಾನ್ನಲ್ಲಿ. ನೀನು ನೋಡಿದ ಸಮಯ ಭಾರತೀಯ ಕಾಲಮಾನದಲ್ಲಿದೆ. 

ಭೂತಾನಿನ ಕಾಲಮಾನಕ್ಕಿಂತ ಅರ್ಧ ಗಂಟೆ ಹಿಂದಿದೆ ಭಾರತದ ಸಮಯ”. 

ಎದ್ನೋ ಬಿದ್ನೋ ಎಂದು ಬೈಕ್ ಸಮೀಪ ಓಡಿದೆ. ಸಮಯ ನೋಡುತ್ತೇನೆ 9:30 ಅಂದರೆ ಭೂತಾನಿನ ಸಮಯ 10. ಅಂದರೆ ವಾಚ್ಮೆನ್ ನೀಡಿದ ಗಡುವು. 

ಬೈಕಲ್ಲಿ ಹೆಡ್ ಲೈಟ್ ಅಷ್ಟೊಂದು ಸರಿಯಾಗಿ ಇರಲಿಲ್ಲ ಕುದುರೆ ಕಣ್ಣಿಗೆ ಪಟ್ಟಿ ಕಟ್ಟಿ ಓಡಿಸಿದಂತಾಗುತಿತ್ತು. ಈ ಅಪರಿಚಿತ ದೇಶದಲ್ಲಿ ಹೋಟೆಲಿನ ಗೇಟಿಗೆ ಬೀಗ ಹಾಕಿದ್ದರೆ?!!! ಹೀಗೆ ಕಕ್ಕಾಬಿಕ್ಕಿಯಾಗಿ ಆಲೋಚಿಸುತ್ತಾ ಶರ ವೇಗದಲ್ಲಿ ಹೋಗುತ್ತಿರುವಾಗ ಯಾಕೋ ಅಪರಿಚಿತ ರಸ್ತೆಯಲ್ಲಿ ಹೋದಂತಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆ ಕಂಡು ದಾರಿ ತಪ್ಪಿದ್ದು ಖಾತ್ರಿಯಾಯಿತು. ಕೂಡಲೇ ಬೈಕ್ ತಿರುಗಿಸಿದೆ, ಗೇಟು ಬಂದ್ ಮಾಡಿದ್ದರೂ ಪರವಾಗಿಲ್ಲ ರಾತ್ರಿ ಇಡೀ ದಾರಿ ಹುಡುಕುವ ಪರಿಸ್ಥಿತಿ ಬರದಿದ್ದರೆ ಸಾಕು ದೇವರೇ ಎಂದು ಬೇಡಿದೆ. ಭಾರತದ ಕಾಲಮಾನ ಪ್ರಕಾರ ಗಂಟೆ 10 ಆಗಿತ್ತು, ಈಗ ವಾಚ್ಮೆನ್ ಬೀಗ ಹಾಕುವುದು ಬಿಡಿ, ಗೊರಕೆ ಹೊಡೆಯುತ್ತಿರಬಹುದು ಎಂದೆನಿಸಿತು. 

ಭೂತಾನಿನ ವಿಶೇಷತೆಯೇ ದೇಶದ ಜನ ಸಂಖ್ಯೆ. ಇಡೀ ದೇಶದಲ್ಲಿ ಕೇವಲ 8 ಲಕ್ಷ ಜನ. ಆದರೆ ನಮ್ಮ ದಕ್ಷಿಣ ಬೆಂಗಳೂರು ಲೋಕಸಭೆಯಲ್ಲಿಯೇ ಭೂತಾನಿಗಿಂತ ಜಾಸ್ತಿ ಮತದಾರರಿದ್ದಾರೆ. ಎಲ್ಲಾ ರಸ್ತೆ ನಮ್ಮ corona lockdown ರಸ್ತೆಗಳಿಂತಲೂ ನಿರ್ಜನವಾಗಿತ್ತು. ಒಬ್ಬ ಪೊಲೀಸೂ ಇಲ್ಲ, ಗೂರ್ಖಾನೂ ಇಲ್ಲ. ಇನ್ನೇನು ಮಾಡುವುದು ಎಂದು ಆಲೋಚಿಸಿ ಪುನಃ ತೂಗು ಸೇತುವೆ ಹತ್ತಿರ ಹೋಗಿ ಅಲ್ಲಿಂದ ನಿಧಾನಕ್ಕೆ ಎಲ್ಲಾ ತಿರುವಿನಲ್ಲಿ ನೆನಪಿಸಿಕೊಂಡು ಹೋಟೆಲು ದಾರಿ ಹುಡುಕಿದರೆ ಮಾತ್ರ ಈ ಚಕ್ರವ್ಯೂಹದಿಂದ ಮುಕ್ತಿ ಎಂದು ನಿರ್ಧರಿಸಿ ಹೊರಟೆ. 

ಯಾವಾಗ ತೂಗು ಸೇತುವೆ ಸಿಕ್ಕಿತೋ ಅಬ್ಬಾ ಬಚಾವ್!!! ಎಂದು ಬೈಕ್ ತಿರುಗಿಸಿ ಹೋಗುವಾಗ ತಿಳಿಯಿತು, ಈ ಮೊದಲು, ಗೇಟು ಮುಚ್ಚುವ ಮೊದಲು ತಲುಪ‌ಬೇಕೆಂದು ರಭಸದಲ್ಲಿ ಬಂದ ಕಾರಣಕ್ಕೆ ಒಂದು ಎಡ ತಿರುವಿನ ಬದಲು ನೇರವಾಗಿ ಹೋದದ್ದೇ ಈ ಪಜೀತಿಗೆ ಕಾರಣ. 

ಇನ್ನು ಕ್ಲೈಮಾಕ್ಸು ವಿಷಯ ಹೇಳುವುದಾದರೆ ಹೋಟೆಲಂತೂ ತಲುಪಿದ್ದಾಯಿತು. ಆದರೆ ಈ ಮೈ ಕೊರೆಯುವ ಚಳಿಗೆ ನಡುಗುತ್ತಾ ಬೈಕಿನ ಮೈನ್ ಸ್ಟಾಂಡ್ ಹಾಕಿ ಕುಳಿತು, ಕೈಗಳನ್ನು ತಿಕ್ಕಿ ತಿಕ್ಕಿ ಬಿಸಿ ಮಾಡುತ್ತಿದ್ದಾಗ ಹೋಟೆಲಿನ ಅಡುಗೆ ಮನೆಯಲ್ಲಿ ಲೈಟ್ ಆನ್ ಆಯಿತು. ಕೂಡಲೇ ಅದರ ಕಿಟಕಿ ಹತ್ತಿರ ಓಡಿ ‘Sir Please open the gate’ ಅಂದೆ. ಗೇಟು ತೆಗೆದು ವಿಚಾರಿಸಿ ಒಳಗೆ ಹೋಗಲು ಅನುಮತಿ ನೀಡಿದರು ಹೋಟೆಲಿನ ನಳ. ರೂಮಿನ ಕೀ ಇಲ್ಲದೆ ಬಾಗಿಲು ತೆರೆಯಲು ಸಾಧ್ಯವಿರಲಿಲ್ಲ.  ಗೆಳೆಯರು ನಿದ್ರಿಸುವ ಮೊದಲು ರೂಮು ಲಾಕ್ ಆಗದಂತೆ ಒಂದು ಚಪ್ಪಲಿ ಇಟ್ಟಿದ್ದರು ಬಾಗಿಲ ಕೆಳಗೆ. ಮರುದಿನ  ಬೇಗ ಎದ್ದು ಸವಾರಿ ಹೊರಡಬೇಕಿತ್ತು, ಇನ್ನೂ ಪ್ರವಾಸದ ಕೊನೆಯ 3 ದಿನ ಬಾಕಿ ಇತ್ತು. 

Related Articles

Leave a Reply

Your email address will not be published. Required fields are marked *

Back to top button