ದೂರ ತೀರ ಯಾನವಿಸ್ಮಯ ವಿಶ್ವ

ಬಸ್ಸಲ್ಲಿ ಕುಳಿತ ಪುಟ್ಟ ಹುಡುಗಿ ಅಮ್ಮನ ಬಳಿ ಇನ್ನು ನಮಗೆ ಒಳ್ಳೆಯದಾಗುತ್ತದೆ ಎಂದಳು: ಪ್ರಣವ ಭಟ್ ಬರೆದ ಮನಮುಟ್ಟುವ ಪಯಣದ ಕತೆ

ಒಂದು ಸಣ್ಣ ಪಯಣ ಕೂಡ ದೊಡ್ಡ ಬದಲಾವಣೆ ತರುತ್ತದೆ. ಯಾರೋ ಒಬ್ಬರು ಸಿಗುತ್ತದೆ. ಅವರ ಒಂದು ಮಾತು, ಆ ಒಂದು ಬದುಕು ನಮ್ಮನ್ನು ಮತ್ತಷ್ಟು ಮಾನವೀಯರನ್ನಾಗಿ ಮಾಡುತ್ತದೆ. ಅಂಥಾ ಒಂದು ಪಯಣದ ಕತೆ ಬರೆದಿದ್ದು ಪ್ರಣವ ಭಟ್. 

ಪ್ರತಿ ದಿನ ಕಥೆಯೊಂದು ನಮ್ಮ ಸುತ್ತಲೂ ನಡೆದು ಏನೋ ಒಂದು ಸಣ್ಣ ನೀತಿಯ ಮೂಲಕ ತಿರುವು ಪಡೆದುಕೊಳ್ಳುತ್ತದೆ. ನಾನು ಬಸ್ಸಿನಲ್ಲಿ ಮಂಗಳೂರಿನಿಂದ ದೇರಳಕಟ್ಟೆಗೆ ಹೊರಟಿದ್ದೆ. ಅದು ಪ್ರೈವೇಟ್ ಬಸ್ಸಲ್ಲಿ ಕೊನೆ ಸೀಟಲ್ಲಿ ಕುಳಿತರೆ ಸಿನಿಮಾ ನೋಡಲು ಕೊನೆ ಸೀಟಿನಲ್ಲಿ ಕುಳಿತಂತೆ. ಎಲ್ಲಾರೂ ಒಂದೇ ದಿಕ್ಕಿನಲ್ಲಿ ಕಾಣುತ್ತಾರೆ. 

ಬಸ್ ಮುಂದಕ್ಕೆ ಚಲಿಸುತ್ತಾ ಕುತ್ತಾರು ಎಂಬ ಜಾಗ ಬಂತು. ಅಲ್ಲಿ ಒಂದು ಅಮ್ಮ, ಮಗಳು ಹಾಗೂ ಮಗ ಮೂರು ಜನ ಬಸ್ ಹತ್ತಿ ಹಿಂದೆ ಸೀಟಿನಲ್ಲಿ ನನ್ನ ಪಕ್ಕ ಅಮ್ಮ, ಮಗಳು ಮತ್ತು ಎದುರು ಮಗ ಕುಳಿತರು. ನೋಡುವಾಗ ಕೂಲಿ ಕೆಲಸಕ್ಕೆ ಹೋಗುವವರು ಅಂತ ತಿಳಿಯಬಹುದು. ಬಸ್ ಅಲ್ಲಿಂದ ಹಾರ್ನ್ ಸದ್ದು ಮಾಡುತ್ತಾ ಹೊರಟಿತು. 

ನಾನು ಅವರನ್ನ ಗಮನಿಸುತ್ತಾ ಇದ್ದೆ. ಕೂಡಲೇ ಆ ಸಣ್ಣ ಹುಡುಗಿ ತನ್ನ ಅಮ್ಮನಿಗೆ ಒಂದು ಬಿಳಿಯ ದಾರವನ್ನು ಕಿಸೆಯಿಂದ ತೆಗೆದು ಅಮ್ಮನ ಕೈಗೆ ಕೊಟ್ಟು ಕಟ್ಟಿಕೋ ಅಮ್ಮ ಎಂದಳು. ನನಗೂ ಕುತೂಹಲ ಮತ್ತಷ್ಟು ಹೆಚ್ಚಾಯಿತು. ಅಮ್ಮ ಮಗಳು ಹೇಳಿದಂತೆ ಕೈಗೆ ಕಟ್ಟಿಕೊಂಡು ಏನಿದು ಎಂದು ಮಗಳ ಬಳಿ ಕೇಳಿದಳು. ಆಗ ಆ ಸಣ್ಣ ಹುಡುಗಿ ಅಮ್ಮ ಇವತ್ತು ಖಂಡಿತ ತುಂಬಾ ಹಣ ಸಿಗುತ್ತೆ, ಊಟನೂ ಮಾಡಬಹುದು ನಾವು ಎಂದು ಹೇಳಿದಳು.

ಪಕ್ಕದಲ್ಲಿ ಇದ್ದ ನಾನು ಅದು ಹೇಗೆ? ಮುಂದೆ ಏನು ಹೇಳುತ್ತಾಳೆ ಎಂದು ಆ ಹುಡುಗಿಯನ್ನು ಕುತೂಹಲದಿಂದ ನೋಡುತ್ತಿದ್ದೆ. ಅಮ್ಮನಿಗೂ ಆಶ್ಚರ್ಯವಾಗಿ ಅದು ಹೇಗೆ ಎಂದು ಕೇಳಿದರು. ಆಗ ಆ ಹುಡುಗಿ ಅದು ಸಾಮಾನ್ಯ ದಾರವಲ್ಲ, ದೇವರ ದಾರ ಕಟ್ಟಿಕೊಂಡರೆ ಖಂಡಿತ ಒಳ್ಳೆಯದಾಗುತ್ತದೆ. ನಮ್ಮ ಇಷ್ಟಗಳು ಈಡೇರುತ್ತದೆ ಎಂದಳು. 

ಅಮ್ಮ ಒಮ್ಮೆ ಅವಳನ್ನ ನೋಡಿ ಯೋಚಿಸತೊಡಗಿದಳು. ನಾನು ಅವಳು ಹೇಳಿದ್ದು ಕೇಳಿ ದೊಡ್ಡ ಪಾಠವೇ ಕಲಿತೆ. ನಿಜವಾಗಿಯೂ ಮಕ್ಕಳು ಎಷ್ಟು ಮುಗ್ಧರು ಎಂದರೆ ಎಲ್ಲಿಯೋ ದೇವಸ್ಥಾನದಲ್ಲಿ ದಾರ ಕಟ್ಟಿಕೊಂಡದ್ದನ್ನು ಗಮನಿಸಿರುತ್ತಾರೆ. ಆದರೆ ಇಲ್ಲಿ ನನಗೆ ಅವಳು ಅಮ್ಮನಿಗೆ ಕಟ್ಟಿದ್ದು ದೇವರ ದಾರವಲ್ಲದಿದ್ದರು ಬರೀ ಬಿಳಿಯ ದಾರವಂತೂ ಆಗಿರಲಿಲ್ಲ. ಆ ದಾರದಲ್ಲಿ ಅವರಿಗೆ ಗೊತ್ತಿಲ್ಲದೆ ಒಂದು ನಂಬಿಕೆ ಹಾಗೂ ಧೈರ್ಯ ಅಡಗಿತ್ತು. ಅದುವೇ ಅವರ ಆ ದಿನಕ್ಕೆ ಏನಾದರೂ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯ ಆಧಾರವಾಗಿತ್ತು. 

ಇದನ್ನೆಲ್ಲ ಯೋಚನೆ ಮಾಡುತ್ತಾ ಇರುವಾಗ ಕಂಡಕ್ಟರ್ ದೇರಳಕಟ್ಟೆ ದೇರಳಕಟ್ಟೆ ಎಂದು ಕೂಗಿದ ನಾನು ಬಸ್ಸಿಂದ ಇಳಿದೆ. ನನ್ನ ಹಿಂದೆ ಆ ಸಣ್ಣ ಕುಟುಂಬ ಇಳಿಯಿತು. ನಾನು ನೋಡುತ್ತಿದ್ದಂತೆ ಎಲ್ಲರ ಬಳಿ ಹೋಗಿ ಹಣ ಬೇಡಲು ಶುರುಮಾಡಿದರು. ನಾನು ಸುಂದರ ಪಾಠ ಕಲಿಸಿದ ಆ ಸಣ್ಣ ಹುಡುಗಿಗೆ ಹಣವನ್ನು ನೀಡಿ ಅಲ್ಲಿಂದ ಹೊರಟೆ. ದಾರ ಮಾತ್ರ ಅಮ್ಮನ ಕೈಯಲ್ಲಿ ಹಾಗೇ ಇತ್ತು ಅದು ಅವರ ಏನಾದರೂ ಸಿಗುತ್ತದೆ ಎಂಬ ನಂಬಿಕೆಯ ಶಕ್ತಿಯನ್ನು ಹೆಚ್ಚಿಸುತ್ತಿತ್ತು.

Related Articles

Leave a Reply

Your email address will not be published. Required fields are marked *

Back to top button