ಕಾರು ಟೂರುವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ನನಗೆ ಸಮಾಧಾನ ಕೊಡುವ ದೇವ ಸನ್ನಿಧಿ ಕುರುಡುಮಲೆ: ಸುಜಾತ ರಾವ್ ಪರಿಚಯಿಸಿದ ನೆಮ್ಮದಿಯ ತಾಣ

ಯಾವುದೋ ಒಂದು ಸಮಯದಲ್ಲಿ ನಮ್ಮಿಷ್ಟದ ಜಾಗಕ್ಕೆ ಹೋಗಬೇಕು ಅನ್ನಿಸುತ್ತದೆ. ಅಲ್ಲಿಗೆ ಹೋದರೆ ಏನೋ ಒಂದು ಸಮಾಧಾನ. ಮನಸ್ಸಿಗೆ ನೆಮ್ಮದಿ. ಅಂಥಾ ಒಂದು ಚಂದದ ತಾಣ ಕುರುಡಮಲೆ ಬಗ್ಗೆ ಕೋಲಾರ ಶ್ರೀನಿವಾಸಪುರ ತಾಲೂಕಿನ ನಾರಾಯಣಪುರದ ವಿ ಎಂ ಸುಜಾತ ರಾವ್ ಬರೆದಿದ್ದಾರೆ. ಇದನ್ನು ಓದಿ, ನೀವು ನೆಮ್ಮದಿಯ ತಾಣವನ್ನು ನೆನಪಿಸಿಕೊಳ್ಳಿ.

Chirag Kaje

ನನಗೆ ಖುಷಿಯಾದಾಗ, ಬೇಜಾರಾದಾಗ, ದುಃಖವಾದಾಗ ಎಲ್ಲಿಯಾದರೂ ಹೋಗಬೇಕೆನಿಸುತ್ತದೆ. ಆದರೆ ದೂರ ಪ್ರಯಾಣ ಬೆಳೆಸಲು ಮೊದಲೇ ತಯಾರಾಗಿರಬೇಕು. ಅದಕ್ಕೆ ನಾನು ನನಗೆ ಇಷ್ಟವಾದ ಹಾಗು ಪ್ರಸಿದ್ಧವೂ ಆಗಿರುವ ಕುರುಡುಮಲೆ ಮಹಾ ಗಣಪತಿಯನ್ನು ನೋಡಲು ಹೊರಟುಬಿಡುತ್ತೇನೆ. 

Chirag Kaje

ನಮ್ಮದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿ ನಾರಾಯಣಪುರ. ನನ್ನೂರಿನಿಂದ ಕೇವಲ 20 ಕಿಮೀ ದೂರದಲ್ಲಿ ಈ ಕ್ಷೇತ್ರವಿದೆ. ಮುಳಬಾಗಿಲಿನಿಂದ ಅಂದಾಜು 7 ಕಿ.ಮೀ ದೂರದಲ್ಲಿರುವ ಈ ಊರು, ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ. ಈ ಸ್ಥಳದ ಬಗ್ಗೆ ಅನೇಕ ಪುರಾಣಗಳಿವೆ.

Chirag Kaje

ಊರಿನಲ್ಲಿರುವ ಗಣಪನ ದೇವಸ್ಥಾನ ಬಹಳ ಪ್ರಖ್ಯಾತ. ಇಲ್ಲಿಯ 10 ಅಡಿ ಎತ್ತರದ, ಒಂದೇ ಕಲ್ಲಿನಲ್ಲಿ ಕೆತ್ತಿರುವ ಪ್ರಖ್ಯಾತ ವಿನಾಯಕನ ಮೂರ್ತಿ ದಿನನಿತ್ಯ ದೂರ ದೂರದಿಂದ ಉತ್ಸಾಹಿಗಳನ್ನು, ಭಕ್ತರನ್ನು ಇಲ್ಲಿಗೆ ಕರೆತರುತ್ತದೆ. ವಿನಾಯಕನ ಮೂರ್ತಿ ರಾಮಾಯಣದ ಕಾಲದ್ದೆಂದು ಸ್ಥಳೀಯರ ನಂಬಿಕೆ. 

Chirag Kaje

ಕುರುಡುಮಲೆಯ ಹೆಸರು ಮೊದಲು ಕೂಡುಮಲೆ ಎಂದಾಗಿತ್ತೆಂದೂ, ನಂತರ ಜನರ ಬಾಯಲ್ಲಿ ಅದು ಕುರುಡುಮಲೆ ಆಯಿತೆಂದೂ ಹಲವು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇದೇ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಕುರುಡುಮಲೆ ಸೋಮೇಶ್ವರ ದೇವಸ್ಥಾನ ಚೋಳರ ಕಾಲದ ಶಿಲ್ಪಕಲೆಯಿಂದ ಕೂಡಿದೆ. ಚೋಳ ರಾಜನು ಸ್ವತಃ ಇಲ್ಲಿಗೆ ಬಂದು ಈ ದೇವಸ್ಥಾನವನ್ನು ಸಂಸ್ಥಾಪಿಸಿದ್ದನಂತೆ. ಇಲ್ಲಿಯ ಹಲವು ಶಿಲ್ಪಗಳು ಅನೇಕ ದಾಳಿಯಲ್ಲಿ ಮುರಿದು ಹೋದವಂತೆ. ಅಳಿದುಳಿದ ಶಿಲ್ಪಕಲೆಯಲ್ಲಿ ಹಲವು ವಿಭಿನ್ನ ಮನಮೋಹಕ ಕಲಾಕೃತಿಗಳಿವೆ. ಇವೆಲ್ಲ ಅಮರಶಿಲ್ಪಿ ಜಕ್ಕಣಾಚಾರ್ಯನ ಕೆತ್ತನೆಯೆಂದು ಹೇಳಲಾಗುತ್ತದೆ. ಈ ದೇವಾಲಯಕ್ಕೆ ರಾಮೇಶ್ವರದಿಂದ ಕಲ್ಲುಗಳು ಹಾಗು ಕಂಬಗಳನ್ನು ತರಲಾಗಿದೆ ಎಂದು ಪ್ರತೀತಿ. 

Chirag Kaje

ಸೋಮೇಶ್ವರ ದೇವಾಲಯದ ಲಿಂಗವನ್ನು ನೋಡಿದಾಗ ಭಕ್ತಿಭಾವ ತಂತಾನೇ ಮೂಡುತ್ತದೆ. ನನಗಂತೂ ಆ ಅನುಭವವನ್ನು ಹೊಂದುವುದೇ ಒಂದು ರೋಮಾಂಚನ. ಸುತ್ತಲೂ ಬೆಟ್ಟ ಗುಡ್ಡಗಳು, ದೇವಾಲಯದ ಮುಂದೆ ಕೌಂಡಿನ್ಯ ನದಿಯ ಮೂಲದ ಪುಷ್ಕರಣಿ, ಕಣ್ಣು ಹಾಯಿಸಿದಷ್ಟೂ ಹಸಿರು, ಕಟ್ಟಿಕೊಂಡು ಹೋದ ಬುತ್ತಿಯನ್ನು ತಿನ್ನುವ ಸಂಭ್ರಮ ಇವೆಲ್ಲಾ ನನಗೆ ಶಾಂತಿ, ಸಮಾಧಾನ ನೀಡುತ್ತದೆ. ಮಳೆಗಾಲದಲ್ಲಂತೂ ಅಲ್ಲಲ್ಲಿ ಹರಿಯುವ ತೊರೆಗಳು, ತುಂಬಿಕೊಂಡ ಹಳ್ಳಕೊಳ್ಳ ಕೆರೆಗಳು ಇಲ್ಲಿನ್ನ ಸೌಂದರ್ಯ ಹೆಚ್ಚಿಸಿ ಕಣ್ಮನ ಸೂರೆಗೊಳ್ಳುತ್ತದೆ. ಇಲ್ಲಿ ಸಿಗುವ ಸೀತಾಫಲವಂತೂ ಬಹಳ ರುಚಿ. 

Chirag Kaje

ನಾನಂತೂ ಈ ಕ್ಷೇತ್ರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ.

Related Articles

Leave a Reply

Your email address will not be published. Required fields are marked *

Back to top button