ಕಾರು ಟೂರುದೂರ ತೀರ ಯಾನಬೆರಗಿನ ಪಯಣಿಗರುಸ್ಫೂರ್ತಿ ಗಾಥೆ

ಎಲೆಕ್ಟ್ರಿಕ್ ಕಾರಲ್ಲಿ ಕೇವಲ 700 ರೂಪಾಯಿ ಖರ್ಚಲ್ಲಿ 1500 ಕಿಮೀ ಕ್ರಮಿಸಿದ ಜೈಪುರದ ಇಂಜಿನಿಯರ್ ಆಕಾಶ್

ಈಗೀಗ ಎಲೆಕ್ಟ್ರಿಕ್ ಕಾರುಗಳ ಹವಾ ಜಾಸ್ತಿಯಾಗುತ್ತಿದೆ. ಆದರೆ ಎಲೆಕ್ಟ್ರಿಕ್ ಕಾರು ಸಿಟಿಗೆ ಮಾತ್ರ ಎಂಬ ಭಾವನೆ ಬಹುತೇಕರಲ್ಲಿದೆ. ಲಾಂಗ್ ಟ್ರಿಪ್ ಹೋಗುವಾಗ ಎಲೆಕ್ಟ್ರಿಕ್ ಕಾರು ತೆಗೆದುಕೊಂಡು ಸೂಕ್ತವಲ್ಲ ಎಂದು ಅನೇಕರು ಭಾವಿಸಿರುವ ವೇಳೆಯಲ್ಲಿ ಜೈಪುರದ ಆಕಾಶ್ ಎಂಬ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಸುಮಾರು 1500 ಕಿಮೀಗಳನ್ನು ಕೇವಲ 700 ರೂಪಾಯಿ ಖರ್ಚು ಮಾಡಿ ಕ್ರಮಿಸಿ ಬಂದಿದ್ದಾರೆ. ಆ ಕುತೂಹಲಕರ ಕತೆ ಇಲ್ಲಿದೆ.

ಆಕಾಶ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್. ರಾಜಸ್ಥಾನದ ಜೈಪುರದಲ್ಲಿ ವಾಸ.(jaipur) ಅವರು ಮತ್ತು ಅವರ ಫ್ರೆಂಡ್ಸ್ ಸೇರಿಕೊಂಡು ಒಂದು ಲಾಂಗ್ ಡ್ರೈವ್ ಹೋಗಬೇಕು ಎಂದು ಆಲೋಚಿಸಿದರು. ಇನ್ನೇನು ಒಂದೆರಡು ದಿನಗಳಿವೆ ಎನ್ನುವಾಗ ಫ್ರೆಂಡ್ಸು ಕೈ ಎತ್ತಿದರು. ಆದರೆ ಆಕಾಶ್ ಎಷ್ಟು ರೆಡಿಯಾಗಿದ್ದರು ಎಂದರೆ ಅವರಿಗೆ ಪ್ಲಾನ್ ಕೈ ಬಿಡುವ ಮನಸ್ಸೇ ಇರಲಿಲ್ಲ. ಕಡೆಗೆ ಪತ್ನಿ ಕೌಶಲ್ ಜೊತೆ ಟೂರ್ ಹೋಗುವುದು ಎಂದು ನಿರ್ಧರಿಸಿದರು.

ಅವರ ಬಳಿ ಇದ್ದಿದ್ದು ಟಾಟಾ ನೆಕ್ಸನ್ ಎಲೆಕ್ಟ್ರಿಕ್ ಕಾರು.(tata nexon ev) ಅದು ಒಮ್ಮೆ ಚಾರ್ಜ್ ಮಾಡಿದರೆ 312 ಕಿಮೀ ಚಲಿಸುತ್ತದೆ ಅಂತ ಕಂಪನಿ ಹೇಳುತ್ತದೆ. ಆದರೆ ಅದು ನಿರ್ಧಾರವಾಗುವುದು ನಾವು ಹೇಗೆ ಡ್ರೈವ್ ಮಾಡುತ್ತೇವೆ ಅನ್ನುವುದರ ಮೇಲೆ. ಆಕಾಶ್ ಜೈಪುರದಿಂದ ಲೊಂಗೇವಾಲ ಎಂಬ ಪ್ರದೇಶಕ್ಕೆ ಹೋಗಿ ಬರಲು ತೀರ್ಮಾನಿಸಿದ್ದರು. ಜೈಪುರದಿಂದ ಹೊರಟು ಪುಷ್ಕರ್, ಜೋದ್ ಪುರ(jodhpur) ಮತ್ತು ಜೈ ಸಲ್ಮೇರ್(jaisalmer) ತಲುಪಿ ಅಲ್ಲಿಂದ ಲೊಂಗೇವಾಲ. ಒಟ್ಟು 1500 ಕಿಮೀ ದೂರ. ಅಲ್ಲಲ್ಲಿ ಕಾರು ಚಾರ್ಜ್ ಮಾಡಿದರೆ ಮಾತ್ರ ಈ ಟೂರು ಸಾಧ್ಯವಾಗುತ್ತಿತ್ತು.

ಆಕಾಶ್ ಸ್ವಲ್ಪ ಯೋಚನೆ ಮಾಡಿದರು. ಒಂದು ಎಕ್ಸ್ ಟೆನ್ಷನ್ ಕೇಬಲ್, ಅದರ ಜತೆಗೆ ಎಲೆಕ್ಟ್ರೋಮೀಟರ್ ಕಾರಲ್ಲಿ ಹಾಕಿ ಟೂರ್ ಹೊರಟೇಬಿಟ್ಟರು. ಎಲೆಕ್ಟ್ರೋಮೀಟರ್ ಯಾಕೆ ಎಂದರೆ ಎಲ್ಲಿ ಚಾರ್ಜ್ ಮಾಡುತ್ತಾರೋ ಅಲ್ಲಿ ಎಷ್ಟು ಚಾರ್ಜ್ ಮಾಡಿದರು ಎಂದು ತಿಳಿದುಕೊಳ್ಳುವುದಕ್ಕೆ. ಅಷ್ಟು ದುಡ್ಡು ಚಾರ್ಜ್ ಮಾಡಿದ ಮಹಡಿಯ ಮಾಲೀಕನಿಗೆ ಕೊಡಬಹುದಲ್ಲ ಎಂಬ ಆಲೋಚನೆ. ಅದರ ಜೊತೆಗೆ ಒಂದು ಅರ್ಥಿಂಗ್ ಕಿಟ್ ಇಟ್ಟುಕೊಂಡರು. ಕೆಲವು ಮನೆ, ಮಹಡಿ, ರೆಸ್ಟೋರೆಂಟ್ ಗಳಲ್ಲಿ ಸರಿಯಾದ ಅರ್ತಿಂಗ್ ಇರುವುದಿಲ್ಲ ಎಂಬ ಕಾರಣಕ್ಕೆ ಆ ಕಿಟ್ ಬೇಕಿತ್ತು. ಸರಿಯಾದ ಅರ್ತಿಂಗ್ ಇಲ್ಲದಿದ್ದರೆ ಈ ಹೋಟೆಲ್ ಗೂ ತೊಂದರೆ, ಕಾರಿಗೂ ತೊಂದರೆ.

ನಾಲ್ಕು ದಿನದ ಈ ಪ್ರವಾಸದಲ್ಲಿ ಎಲ್ಲಾದರೊಂದು ಕಡೆ ರಾತ್ರಿ ನಿಲ್ಲಿಸಿ ಚಾರ್ಜ್ ಮಾಡುತ್ತಿದ್ದರು. ಸುಮಾರು 10ರಿಂದ 11 ಗಂಟೆ ಚಾರ್ಜ್ ಮಾಡಿ ಅಲ್ಲಿಂದ ಹೊರಡುತ್ತಿದ್ದರು. 200 ಕಿಮೀ ಚಲಿಸಿದ ನಂತರ ಎಲ್ಲಾದರೊಂದು ಕಡೆ ನಿಲ್ಲಿಸಲೇಬೇಕಿತ್ತು. ಎಲೆಕ್ಟ್ರಿಕ್ ಕಾರುಗಳು ಹೇಗೆಂದರೆ ಒಂದು ಚಾರ್ಜಿಗೆ 300 ಕಿಮೀ ಕ್ರಮಿಸಬೇಕೆಂದರೆ 40 ಕಿಮೀ ವೇಗದಲ್ಲಿ ಹೋಗಬೇಕು. 100 ಕಿಮೀ ವೇಗದಲ್ಲಿ ಸಾಗಿದರೆ 150 ಕಿಮೀ ಚಲಿಸುವಷ್ಟರಲ್ಲಿ ಚಾರ್ಜ್ ಖಾಲಿಯಾಗುವ ಸಾಧ್ಯತೆ ಇರುತ್ತದೆ. ಅದನ್ನೆಲ್ಲಾ ಆಕಾಶ್ ಮೊದಲೇ ಲೆಕ್ಕ ಹಾಕಿಟ್ಟುಕೊಂಡಿದ್ದರು. 

ಕೆಲವೊಮ್ಮೆ ರಸ್ತೆ ಸರಿ ಇಲ್ಲದಿದ್ದರೂ ಚಾರ್ಜ್ ಜಾಸ್ತಿ ಖಾಲಿಯಾಗುತ್ತದೆ. ಹೆಚ್ಚು ಆ್ಯಕ್ಸಲೇಟರ್ ಕೊಟ್ಟರೆ, ಸಡನ್ ಬ್ರೇಕ್ ಹಾಕಿದರೆ ಜಾಸ್ತಿ ಪವರ್ ಖಾಲಿಯಾಗುತ್ತಿರುತ್ತದೆ. ಅದನ್ನೆಲ್ಲಾ ಹುಷಾರಾಗಿ ನೋಡಿಕೊಂಡು ಮುಂದೆ ಹೋಗಬೇಕು. ಆಕಾಶ್ ಈ ಪಯಣಕ್ಕೆ ತಾನು ತುಂಬಾ ಕಡಿಮೆ ಖರ್ಚು ಮಾಡಿದೆ ಎನ್ನುತ್ತಾರೆ. ಇಂಧನ ಕಾರಿನಲ್ಲಿ ಹೋಗಿದ್ದರೆ 1500 ಕಿಮೀ ಕ್ರಮಿಸಲು ಸುಮಾರು 100 ಲೀಟರ್ ಪೆಟ್ರೋಲ್ ಬೇಕಾಗುತ್ತಿತ್ತು. ಒಂದು ಲೀಟರ್ ಗೆ 90 ರೂಪಾಯಿ ಎಂದಿಟ್ಟುಕೊಂಡರೂ 9000 ರೂಪಾಯಿ ಬೇಕು. ಆದರೆ ಎಲೆಕ್ಟ್ರಿಕ್ ಕಾರಿಗೆ 200 ಯುನಿಟ್ ಪವರ್ ಬೇಕು. ಒಂದು ಯುನಿಟ್ ಗೆ 7 ರೂಪಾಯಿ ಎಂದುಕೊಂಡರೂ ಬೇಕಾಗುವುದು 1400 ರೂಪಾಯಿ. ಆದರೆ ಆಕಾಶ್ ಅವರ ಕೈಯಲ್ಲಿ ಎಲ್ಲರೂ ದುಡ್ಡು ತೆಗೆದುಕೊಂಡಿರಲಿಲ್ಲ. ಕೆಲವರು ಅಯ್ಯೋ ಪರವಾಗಿಲ್ಲ ಹೋಗಪ್ಪಾ ಎಂದಿದ್ದರು. ಆಕಾಶ್ ಹೆಚ್ಚೆಂದರೆ 100 ಯುನಿಟ್ ದುಡ್ಡು ಕೊಟ್ಟಿರಬಹುದು. 700 ರೂಪಾಯಿಗಳಲ್ಲಿ ಅವರ ಕಾರು ಖರ್ಚು ಮುಗಿದಿತ್ತು. ಎಲೆಕ್ಟ್ರಿಕ್ ಕಾರಲ್ಲಿ ಹೀಗೆ ಅವರು 1500 ಕಿಮೀ ಪಯಣಿಸಿದ ಕತೆ ಪ್ರವಾಸಿಗರನ್ನು ಮತ್ತು ಕಾರು ಪ್ರೇಮಿಗಳನ್ನು ಅಚ್ಚರಿಗೊಳಿಸಿದೆ. 

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button