ದೂರ ತೀರ ಯಾನನಡಿಗೆ ನಮ್ಮ ಖುಷಿಗೆಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸೂಪರ್ ಗ್ಯಾಂಗು

ಮಾಯಾಲೋಕದಲ್ಲಿ ಸೈಕಲ್ ಸವಾರಿ: ಶ್ರೀಕೃಷ್ಣ ಕುಳಾಯಿ ಬರೆದ ಪ್ರಾಗ್ ಪ್ರವಾಸ ಕತೆ ಭಾಗ 1

ಜೆಕ್ ರಿಪಬ್ಲಿಕ್ ದೇಶದ ಪ್ರಾಗ್ ತಾಣವನ್ನು ಸಿನಿಮಾವೊಂದರಲ್ಲಿ ನೋಡಿ ಪ್ರೇರಿತರಾಗಿ ಆ ಊರಿಗೆ ಹೋಗಿ ಬಂದು ಶ್ರೀಕೃಷ್ಣ ಕುಳಾಯಿ ಬರೆದ ಬರಹ ಇದು.    

ಬ್ಯಾಂಗ್ ಬ್ಯಾಂಗ್’ ಸಿನಿಮಾ ನೋಡುತಿದ್ದಾಗ ಅದರಲ್ಲಿ ಸುಂದರ ಊರನ್ನು ತೋರಿಸಿದ್ದರು. ರಾತ್ರಿಯಲ್ಲಿ ಆ ಊರು ಬಹಳ ಚೆನ್ನಾಗಿ ಕಾಣಿಸುತಿತ್ತು. ಎಷ್ಟು ಚೆನ್ನಾಗಿದೆ ಈ ಊರು ರಾತ್ರಿಯಲ್ಲಿ, ಇದನ್ನು ನೋಡಬೇಕೆಂಬ ಬಯಕೆ ಆಗಿತ್ತು. ಆಮೇಲೆ ಬೇರೆಯವರು ಪ್ರಾಗ್ ಗೆ ಹೋದ ಚಿತ್ರಗಳನ್ನು ತಮ್ಮ ಫೇಸ್‌ಬುಕ್ ನಲ್ಲಿ ಹಾಕಿದಾಗ ಪ್ರಾಗ್ ನೋಡಬೇಕೆಂಬ ಬಯಕೆ ಇಮ್ಮಡಿಸಿತ್ತು. ಪ್ರಾಗ್ ಕ್ಯಾಸಲ್, ಹಳೇ ಕಟ್ಟಡಗಳು, ಬ್ರಿಡ್ಜ್… ಹೀಗೆ ಮನದದಾಳಾದ ಆಸೆಯಿಂದ ಪ್ರಾಗ್ ಗೆ ಹೋಗಲು ತಯಾರಿ ನಡೆಸಿದೆವು. ಅದಾವುದೋ ಕಾರಣದಿಂದ ಹೋಗಲಾಗಲಿಲ್ಲ. ಇನ್ನೊಮ್ಮೆ ತಯಾರಿ ನಡೆಸಿದರೂ ಹೋಗಲಾಗಲಿಲ್ಲ. ಮಗದೊಮ್ಮೆ ಮರಳಿ ಯತ್ನವ ಮಾಡು ಎಂಬಂತೆ ನಮ್ಮ ಸವಾರಿ ಹೊರಟಿತು.

ಮ್ಯೂನಿಚ್ ನಿಂದ ರಾತ್ರಿ ಬಸ್ಸಲ್ಲಿ ಪ್ರಾಗ್ ಗೆ ಹೋದೆವು.. ಚೆಕ್ ಪಬ್ಲಿಕ್(Czech Republic)  ರಾಜಧಾನಿ ಪ್ರಾಗ್(Prague) ತಲುಪಿ, ನಾವು ಕಾದಿರಿಸಿದ್ದ “ಐಬಿಸ್” ಹೋಟೆಲ್ ಗೆ ಬಂದು, ದಣಿವಾರಿಸಿ ಕೊಂಡೆವು. ಹೋಟೆಲ್ ಪ್ರಾಗ್ ನ “ಓಲ್ಡ್ ಟೌನ್” ನಲ್ಲಿ ಇದೆ. ರೆಡಿಯಾಗಿ ಹಳೆಯ ಕಟ್ಟಡಗಳ ನಡುವೆ ನಡೆಯುತ್ತಾ ಮುನ್ನಡೆದು ಹೋದಂತೆಲ್ಲ ಹಳೆಯ ಕಟ್ಟಡಗಳು, ಗೋಪುರಗಳು, ಸಣ್ಣ ರಸ್ತೆಗಳು, ನಡುವೆ ಓಡಾಡುವ ಟ್ರ್ಯಾಮ್, ಅಲ್ಲೆಲ್ಲೋ ಹಣ್ಣು ತರಕಾರಿ ಮಾರುವ ಮಾರುಕಟ್ಟೆ. ಅಷ್ಟು ದೂರದಲ್ಲಿ “ಖಗೋಳ ಗಡಿಯಾರ” ಕಾಣಿಸಿತು.

ಇದು “ಓಲ್ಡ್ ಟೌನ್ ಹಾಲ್” ಸ್ಕ್ವೇರ್.(oldtown square) ಟೌನ್ ಹಾಲ್ ಗೋಡೆಯಲ್ಲಿ ಗಡಿಯಾರ ಹಾಕಿದ್ದಾರೆ. ಜಗತ್ತಿನ ಮೂರನೆಯ ಹಳೆಯ “ಖಗೋಳ ಗಡಿಯಾರ ” ಎಂದು ಹೆಸರಾಗಿದೆ. ಆರು ನೂರು ವರುಷ ಪೂರೈಸಿದ ಸುಂದರಿ. ಅದರ ಗೋಪುರವೂ ಆಕರ್ಷಕವಾಗಿದೆ. ಗೋಥಿಕ್ ಶೈಲಿಯ ಚರ್ಚ್ ಸಹ ಅಲ್ಲಿದೆ.

ಪ್ರಾಗ್ ಸುತ್ತಲು ಸೈಕಲ್ ಟೂರ್ ಬುಕ್ ಮಾಡಿದ್ದೆವು. ಸೈಕಲ್ ಟೂರ್ ಶುರುವಾಗುವ ಸ್ಥಳಕ್ಕೆ ಹೋದಾಗ, ನನಗೆ ಬೇಕಾದ ಸೈಕಲ್ ಆರಿಸಿಕೊಂಡೆ. ಸೈಕಲ್ ಓಡಿಸದೆ ಬಹು ವರ್ಷ ವಾದ ಕಾರಣ ನಾವು ಒಂದೆರಡು ರೌಂಡ್ ಓಡಿಸಿ ಸವಾರಿಗೆ ಸಿದ್ಧವಾದೆವು. ನನ್ನವಳಿಗಾದ ಖುಷಿ ಅಷ್ಟಿಷ್ಟಲ್ಲ.

ನಮ್ಮ ಜೊತೆ ಇನ್ನೂ ಆರು ಜನ ಸೇರಿದ್ದರು. ನಾಲ್ಕು ಜನ ಆಸ್ಟ್ರೇಲಿಯದಿಂದ ಬಂದ ಪ್ರವಾಸಿಗರಾಗಿದ್ದರು. ಇಬ್ಬರು ವಯಸ್ಸಾದ ದಂಪತಿಗಳು ಇಂಗ್ಲೆಂಡ್ ನವರಾಗಿದ್ದರು. ನಮ್ಮ ಗೈಡ್ ಜೇಮ್ಸ್ ಐರ್ಲೆಂಡ್ ನವನಾಗಿದ್ದು, ನಮ್ಮನ್ನು ಸ್ವಾಗತಿಸಿದ. ಅವನು ಹೈ ಸ್ಕೂಲ್ ಮುಗಿಸಿ, ಬ್ರೇಕ್ ತೆಗೆದುಕೊಂಡಿದ್ದಾನೆ. ಫ್ರೀ ಟೈಮ್ ನಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದಾನೆ.

ಗೈಡ್ ನಮಗೆ ರಸ್ತೆಯಲ್ಲಿ ಪಾಲಿಸಬೇಕಾದ ಸೂಚನೆ ಕೊಟ್ಟು, ಅವನ ಹಿಂದೆ ನಾವು ಒಬ್ಬರಾದ ಮೇಲೆ ಒಬ್ಬರು ಸವಾರಿ ಹೊರಟೆವು. ಮೊದಲು ಖಗೋಳ ಶಾಸ್ತ್ರ ಗಡಿಯಾರದ ಬಳಿ ಕರೆದೊಯ್ದು ಅದರ ಬಗ್ಗೆ ವಿವರಿಸಿದ. ಸನಿಹದಲ್ಲಿದ ಚರ್ಚ್ ಅನ್ನು ನೋಡಿದೆವು. ಕಿನ್ ಸ್ಕಿ ಪ್ಯಾಲೇಸ್ ಎಂಬ ಪುಟ್ಟ ಅರಮನೆಯೂ, ಜಾನ್ಹಸ್ ಎಂಬಾತನ ಮೂರ್ತಿಯೂ ಇದೆ.

ಅನಂತರ ಜ್ಯೂಯಿಶ್ ಜನ ಇದ್ದ ಭಾಗಕ್ಕೆ ಹೋಗಿ , ಅಲ್ಲಿನ ಜ್ಯೂಯಿಶ್ ಇತಿಹಾಸ, ಸಿನಗೋಗ್ ಬಗ್ಗೆ ವಿವರಿಸಿದ.

ಅನಂತರ ವಿಟವಾ ನದಿಯ ಬಳಿ ಹೋಗಿ, ಅಲ್ಲಿಂದ ದೂರದಲ್ಲಿ ಕಾಣಿಸುತಿದ್ದ ಪ್ರಾಗ್ ಕ್ಯಾಸಲ್, ಚಾರ್ಲ್ಸ್ ಬ್ರಿಡ್ಜ್, ಬಗ್ಗೆ ಪ್ರಾಗ್ ಮಧ್ಯ ಯುಗದ ಇತಿಹಾಸ, ಅದು ಶುರುವಾದ ಬಗೆ ಬಗ್ಗೆ ವಿವರಿಸಿದ. ನದಿಯ ಬಳಿ ನಿಂತಾಗ ಪ್ರಾಗ್ ಕ್ಯಾಸಲ್ ನ ವಿಹಂಗಮ ನೋಟ. ನದಿಯ ಇನ್ನೊಂದು ಕಡೆ ಮೆಟ್‌ರಾನಮ್ ಎಂಬ ಬೆಟ್ಟವಿದ್ದು, ಮುಂಚೆ ಅಲ್ಲಿ ಸ್ಟಾಲಿನ್ ಮೂರ್ತಿಯನ್ನು ಇಟ್ಟಿದ್ದರು. ಅನಂತರ ಅದನ್ನು ನಾಶ ಮಾಡಲಾಯಿತು.

ಪ್ರಾಗ್ ಬೊಹೇಮಿಯಾ ರಾಜರ ಆಡಳಿತಕ್ಕೆ ಹತ್ತನೆಯ ಶತಮಾನದಲ್ಲಿ ಒಳಗಾಗಿತ್ತು. ಹದಿನಾಲ್ಕನೆಯ ಶತಮಾನದಲ್ಲಿ ಹೋಲಿ ರೋಮನ್ ಎಂಪೈಯರ್ ಗೆ ಒಳಗಾಗಿತ್ತು. ಪ್ರಾಗ್ ನ ಮುಖ್ಯ ಕಟ್ಟಡಗಳು ಮಧ್ಯಯುಗದಲ್ಲಿ ಕಟ್ಟಲ್ಪಟ್ಟವು. ಅನಂತರ ಅಸ್ಟ್ರೋ ಹಂಗೇರಿಯನ್ ಆಡಳಿತಕ್ಕೆ ಒಳಪಟ್ಟಿತ್ತು. ಮುಂದೆ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಟ್ಟಿತ್ತು. ದ್ವಿತೀಯ ಮಹಾಯುದ್ಧ ಸಮಯದಲ್ಲಿ ಜರ್ಮನ್ ಆಡಳಿತಕ್ಕೆ ಒಳಪಟ್ಟಿತ್ತು. ಶರಣಾದ ಕಾರಣ ಪ್ರಾಗ್ ನಗರಕ್ಕೆ ಆಗಬಹುದಿದ್ದ ದಾಳಿ ತಪ್ಪಿತ್ತು. ಅನಂತರ ಸೋವಿಯಟ್ ಒಕ್ಕೂಟಕ್ಕೆ ಸೇರಿ, ಕಮ್ಯುನಿಸ್ಟ್ ಆಡಳಿತಕ್ಕೆ ಸೇರಿತು. ಮುಂದೆ ಪ್ರತಿಭಟನೆಗಳು ನಡೆದು, ಅವು ಹತ್ತಿಕ್ಕಿದವು. ಕೊನೆಗೆ 1993ರಲ್ಲಿ ಸ್ವತಂತ್ರ ದೇಶವಾಯ್ತು. ಹೀಗೆ ಇತಿಹಾಸದ ಬೇರೆ ಬೇರೆ ವಿವರಗಳನ್ನು ಹೇಳುತ್ತಾ ನಮ್ಮನ್ನು ಮುಂದೆ ನಮ್ಮ ಗೈಡ್ ಕರೆದೊಯ್ಯುತಿದ್ದ.

Show image detail

ಒಪೆರಾ ಮುಂದೆ ನಿಲ್ಲಿಸಿ, ಅದರ ಬಗ್ಗೆ ವಿವರಿಸಿದ. ಅಂದು ಸಂಜೆ ಅದರಲ್ಲಿ ಕಾರ್ಯಕ್ರಮ ಇತ್ತು.

ಅನಂತರ ನದಿಯನ್ನು ದಾಟಿ ಬಂದೆವು. ಚಾರ್ಲ್ಸ್ ಬ್ರಿಡ್ಜ್ ನ(charles bridge) ಕೆಲ ಭಾಗದ ಬಳಿ ಬಂದು, ಚಾರ್ಲ್ಸ್ ಬ್ರಿಡ್ಜ್ ಬಗ್ಗೆ ಹೇಳುತ್ತಾ ರಾಜನಿಗೆ ಖಗೋಳ ಶಾಸ್ತ್ರದ ಬಗ್ಗೆ ನಂಬಿಕೆ ಇದ್ದ ಕಾರಣ, ಒಳ್ಳೆಯ ದಿನ ನೋಡಿ ಬ್ರಿಡ್ಜ್ ಶುರುವಾಯಿತು. ಬೆಳಿಗ್ಗೆ 5:31 9 ಜುಲೈ 1357. ಆದ ಕಾರಣ ಅದು ಶುರುವಾದ ಸಮಯ ತಿಳಿದಿದೆ. ಅಲ್ಲಿ ನದಿಯ ಪ್ರವಾಹ ಬಂದು ಹಿಂದೆ ಊರಿಗೆ ತೊಂದರೆ ಆದ ಕಾರಣ, ಕಾಪಾಡುವ ಗೋಡೆಗಳಿವೆ ಎಂದು ವಿವರಿಸುತ್ತಾ ಹೋದ. ನದಿಯ ಮದ್ಯ ಪುಟ್ಟ ದ್ವೀಪವಿದೆ.

ಕಮ್ಯುನಿಸ್ಟ್ ಯುಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ ಕಾರಣ ಅಲ್ಲೊಂದು ಗೋಡೆಯ ಮೇಲೆ ಪ್ರತಿಭಟನಾ ಬರಹಗಳನ್ನು ಜನ ಬರೆಯುತ್ತಿದ್ದರು. ಆ ಗೋಡೆಯನ್ನು ನೋಡಿದೆವು. ಬರಹಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಈಗ ಪ್ರವಾಸಿ ಆಕರ್ಷಣೆ ಆಗಿದೆ. ಇದು ಅಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಮ್ಮೆಯ ಪ್ರತೀಕ. ಆ ಕಾಲದಲ್ಲಿದ್ದ ಪ್ರತಿಭಟನಾ ಕಾಲದಲ್ಲಿ ಕಲಾವಿದರು ಮಾಡಿದ ಮಗುವಿನ ಮೂರ್ತಿ, ಒಬ್ಬ ಉಚ್ಚೆ ಹೊಯ್ಯುವ ಪ್ರತಿಮೆ ಹೀಗೆ ವಿವಿದ ಜಾಗಗಳನ್ನು ಸೈಕಲ್ ಸವಾರಿ ಮೂಲಕ ನೋಡಿದೆವು.

ಅಲ್ಲೂ ಸಹ ಪ್ಯಾರಿಸ್ ನಲ್ಲಿರುವಂತೆ “ಬೀಗ” ಗಳನ್ನು ಹಾಕಿರುವ, ಪ್ರೀತಿಯ ಸಂಕೇತವಾದ ಬ್ರಿಡ್ಜ್ ಇದೆ. ಅದೇನೋ ಗೊತ್ತಿಲ್ಲ. ಇಲ್ಲಿನ ಪ್ರೇಮಿಗಳಿಗೆ ಸೇತುವೆಯ ಮೇಲೆ ಬೀಗ ಹಾಕಿದರೆ ತಮ್ಮ ಪ್ರೇಮ ಶಾಶ್ವತ ಎಂಬ ನಂಬಿಕೆ. ನಮ್ಮ ಗೈಡ್ ಮಿತ್ರಾ ಪ್ರತೀ ಗೆಳತಿಯರ ಜೊತೆ ಬಂದು ಇಲ್ಲಿ ಬೀಗ ಹಾಕುತ್ತಾನಂತೆ ಎಂದಾಗ ನಮ್ಮ ಗುಂಪಿನ ತುಂಬಾ ನಗು.

ಅಭ್ಯಾಸವಿಲ್ಲದ ಕಾರಣ ಎತ್ತರ ಜಾಗ ಬಂದಾಗ ಸೈಕಲ್ ಹೊಡೆಯಲು ತುಸು ಕಷ್ಟವಾದರೂ, ಕಮ್ಮಿ ಸಮಯದಲ್ಲಿ ಎಷ್ಟೊಂದು ಸ್ಥಳ ನೋಡಿದಂತಾಯ್ತು. ವೆನೀಲಸ್ ಸ್ಕ್ವೇರ್ ಗೆ ಬಂದಾಗ, ನಾಜಿಗಳ ಕಾಲದಲ್ಲಿ ಅವರು ಉಳಿಕೊಳ್ಳುತಿದ್ದ ಕಟ್ಟಡ, ಈಗ ತುಂಬಾ ದುಬಾರಿ ಹೋಟೆಲ್ ಆಗಿದೆ. ಸುತ್ತ ಶಾಪಿಂಗ್ ಮಾಡಲು ತುಂಬಾ ಅಂಗಡಿಗಳಿವೆ.

ಜಾನ್ ಪಲಾಕ್ಸ್ ಎಂಬ ಯುವಕ 1969ರಲ್ಲಿ ಕಮ್ಯುನಿಸ್ಟ್ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿ ಆತ್ಮಾಹುತಿ ಮಾಡಿದ್ದು ಇಲ್ಲೇ. ಅನಂತರ ಇಪ್ಪತ್ತು ವರ್ಷಗಳ ನಂತರ ಪ್ರತಿಭಟನೆ ತಾರಕ್ಕೇಕೆರಿ ಲಕ್ಷ ಜನ ಸೇರಿದ್ದು ಇಲ್ಲೇ. ಅವನು ಸತ್ತು ಅಮರನಾಗಿ ಸ್ವಾತಂತ್ರ್ಯದ ಕಿಡಿ ಹಚ್ಚಿದ. ಅಲ್ಲಿರುವ ಮುಖ್ಯ ಕಟ್ಟಡ “ನ್ಯಾಶನಲ್ ಮ್ಯೂಸಿಯಮ್” ಆಗಿದ್ದು ನವೀಕರಣ ಆಗುತ್ತಾ ಇದೆ. ನೀವು ಮುಂದಿನ ಬಾರಿ ಬಂದಾಗ ಹೋಗಬಹುದು ಎಂದ ನಮ್ಮ ಗೈಡ್.

ಹೀಗೆ ನೋಡಿ ಇನ್ನೊಂದು , ಸಂದಿಗೊಂದಿನ ದಾರಿ ದಾಟಿ, ಮುಖ್ಯ ರಸ್ತೆಗೆ ಬಂದು ನದಿಯನ್ನು ದಾಟತೊಡಗಿದೆವು. ಸೈಕಲ್ ಸ್ನೇಹಿ ಊರಾದ ಕಾರಣ, ಬೇರೆ ವಾಹನಗಳು ಸೈಕಲ್ ಗೆ ದಾರಿ ಬಿಡುತಿದ್ದವು.. ನಮ್ಮ ಗುಂಪಿನಲ್ಲಿ, ಸೈಕಲ್ ಹೊಡೆಯುತಿದ್ದ ವಯಸ್ಸಾದ ದಂಪತಿಗಳು, ಎರಡೂವರೆ ಗಂಟೆಯಿಂದ ಸೈಕಲ್ ಹೊಡೆಯುತ್ತಿದ್ದರೂ, ಮುಖದಲ್ಲಿ ಸ್ವಲ್ಪವೂ ಸುಸ್ತಿರಲಿಲ್ಲ.

ಹೀಗೆ ಸೈಕಲ್ ಸವಾರಿ ಮುಗಿಸಿ, ವಾಪಸ್ ಬಂದು ಸೈಕಲ್ ಮರಳಿಸಿದಾಗ, ಮುಖದಲ್ಲಿ ಬೆವರ ಹನಿ. ಓಲ್ಡ್ ಟೌನ್ ಸ್ಕ್ವೇರ್ ನ ಸನಿಹದಲ್ಲಿದ್ದ ಮಾರ್ಕೆಟ್ ನಲ್ಲಿ ಈಗ ಜ್ಯೂಸ್, ವಿವಿದ ತಿಂಡಿಗಳನ್ನು ಮಾರುತಿದ್ದರು. ಬೇರೆ ಕಟ್ಟಡಗಳ ನಡುವೆ ಕೃಷ್ಣ ವರ್ಣದ “ಪೌಡರ್ ಟವರ್” ಎದ್ದು ಕಾಣುತಿತ್ತು. ಹಿಂದೆ ಇಲ್ಲಿ ಮದ್ದು ಗುಂಡುಗಳನ್ನು ಸಂಗ್ರಹಿಸಲಾಗುತ್ತಿತ್ತಂತೆ. ಮಧ್ಯಾಹ್ನದ ಬಿಸಿಲಲ್ಲಿ ಆ ಹಳೆಯ ಕಟ್ಟಡಗಳ ನಡುವಿನ ಸ್ಕ್ವೇರ್ ನಲ್ಲಿ ಕುಳಿತು, ಐಸ್ ಕ್ರೀಮ್ ತಿನ್ನುತ್ತಾ ಕೂತಾಗ ಮಹದಾನಂದ.

ರಾಜರ ಆಳ್ವಿಕೆ, ಮಧ್ಯಯುಗ, ಮಹಾಯುದ್ಧದ ಇತಿಹಾಸ, ಉತ್ತಮ ಸ್ತಿತಿಯಲ್ಲಿ ಇರುವ ಹಳೆಯ ಕಟ್ಟಡಗಳು, ಇಷ್ಟಪಟ್ಟು ನಡೆಯಬಹುದಾದ ರಸ್ತೆಗಳು, ಪ್ರತೀ ರಸ್ತೆಗೂ- ಕಟ್ಟಡಕ್ಕೂ ಒಂದೊಂದು ಕಥೆಗಳು, ಸ್ಕ್ವೇರ್, ಮೂರ್ತಿಗಳು, ಕಪ್ಪನೆಯ ಗೋಪುರಗಳು, ಆರು ನೂರು ವರ್ಷ ಮೀರಿ ನಿಂತ ಗಡಿಯಾರ, ಪ್ರವಾಸಿ ಸ್ನೇಹಿ ಊರು, ಹಿಂಡು ಹಿಂಡು ಪ್ರವಾಸಿಗರು, ಕ್ರಾಂತಿಯ ಕಿಡಿ, ಊರ ನಡುವೆ ನಿಂತ ಕ್ಯಾಸಲ್, ಚಾರ್ಲ್ಸ್ ಬ್ರಿಡ್ಜ್, ಇದೆಲ್ಲವ ಕಂಡು ನಿರಂತರ ಹರಿಯುವ ನದಿ… ಜೊತೆಗೆ ಸೈಕಲ್ ಸವಾರಿ…. ಹೀಗೆ ದಿನದಲ್ಲಿ ಪ್ರಾಗ್ ನಮ್ಮನ್ನು ಇತಿಹಾಸದ ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ತಿಳಿದುಕೊಂಡ ವಿವರಗಳು ನಮಗೆ ಬಲು ಇಷ್ಟವಾಗಿತ್ತು. ಒಳ್ಳೆಯ ಪ್ರವಾಸವೆಂದರೆ ಇದೇ ಅಲ್ಲವೇ. ಪ್ರಾಗ್ ನಮ್ಮನ್ನು ನಮಗರಿವಿಲ್ಲದಂತೆ ಸ್ನೇಹಿತನಂತೆ ಹತ್ತಿರಕ್ಕೆ ಸೆಳೆದಿತ್ತು..

ಭಾಗ 2- ಪ್ರಾಗ್ ಕಾಸಲ್ ನಲ್ಲಿ ಹೆಜ್ಜೆ ಗುರುತುಗಳು

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button