ಇತಿಹಾಸದ ರೋಮಾಂಚಕ ಕತೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಗೇರುಸೊಪ್ಪೆ: ಎಸ್ ಡಿಎಂ ಕಾಲೇಜು ವಿದ್ಯಾರ್ಥಿ ಪವನ್ ಜೈನ್ ಸಾಗರ ಬರೆದಿರುವ ಕುತೂಹಲಕರ ಕಥನ
ಜೋಗಫಾಲ್ಸ್ – ಹೊನ್ನಾವರ ಹೆದ್ದಾರಿಯಲ್ಲಿ ಸುಮಾರು 27 ಕಿಲೊಮೀಟರ್ ಕ್ರಮಿಸಿದ ನಂತರ ಎಡಕ್ಕೆ ಸಿಗುವ ಕಾಡಿನ ಒಳದಾರಿಯಲ್ಲಿ 6 ಕಿಲೊಮೀಟರ್ ಸಾಗಿದರೆ ಸಿಗುತ್ತದೆ ಗೇರುಸೊಪ್ಪೆ. ಅಲ್ಲಿ ತಲುಪಿದರೆ ಕತೆಗಳದೇ ಕಾರುಬಾರು. ಆ ಕತೆ ಕೇಳಿದ ಮೇಲೆ ಆ ನೆಲದ ಮೇಲೆ ನಿಮಗಿರುವ ಗೌರವ ಜಾಸ್ತಿಯಾಗುತ್ತದೆ.
ವಿಜಯನಗರದ ಸಾಮ್ರಾಜ್ಯದ ಅವಧಿಯಲ್ಲೇ, ಈಗಿನ ಕರ್ನಾಟಕದ ಕರಾವಳಿ ಪ್ರದೇಶವನ್ನು ಒಬ್ಬ ರಾಣಿ ಐವತ್ತು ವರ್ಷಗಳಷ್ಟು ಸುಧೀರ್ಘ ಕಾಲ ಆಳ್ವಿಕೆ ನಡೆಸಿದ್ದಳು. ಧೈರ್ಯ ಸಾಹಸಕ್ಕೆ ಖ್ಯಾತಿ ಪಡೆದಿದ್ದ ಆಕೆಯೇ “ಗೇರುಸೊಪ್ಪೆಯ ರಾಣಿ ಚೆನ್ನ ಭೈರಾದೇವಿ”. ಈಗಿನ ಕಾರವಾರ, ದಕ್ಷಿಣ ಕನ್ನಡ, ಮಲಬಾರ ಮತ್ತು ಗೋವಾದ ಹಲವು ಪ್ರದೇಶಗಳು ಈಕೆಯ ರಾಜ್ಯಾಡಳಿತಕ್ಕೆ ಒಳಪಟ್ಟಿದ್ದವು. ಸ್ಥಳೀಯ ರಾಜರುಗಳು ಮತ್ತು ಪೋರ್ಚುಗೀಸರ ಅತಿಕ್ರಮಣದಿಂದ ತನ್ನ ರಾಜ್ಯವನ್ನು ಸತತವಾಗಿ ರಕ್ಷಣೆ ಮಾಡಿಕೊಂಡಿದ್ದಳು. ಈಕೆಯ ರಾಜ್ಯವು ಉತ್ಕೃಷ್ಟ ಸಾಂಬಾರು ಮತ್ತು ಕಾಳು ಮೆಣಸಿನ ಅರಣ್ಯೋತ್ಪನ್ನಗಳ ಕಣಜವಾಗಿದ್ದು, ಯುರೋಪ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ಪಡೆದಿತ್ತು. ಇದೇ ಕಾರಣದಿಂದ ಈ ಪ್ರದೇಶಗಳ ಹಿಡಿತ ಪಡೆಯಲು ಸತತ ಕದನಗಳು ನಡೆಯುತ್ತಿದ್ದವು. ನಿರಂತರ ಪ್ರಯತ್ನಗಳನ್ನು ಮಾಡುತ್ತಲಿದ್ದ ಪೋರ್ಚುಗೀಸರು, ರಾಣಿ ಚೆನ್ನಭೈರಾದೇವಿಯನ್ನು “ಕಾಳು ಮೆಣಸಿನ ರಾಣಿ” ಎಂಬುದಾಗಿ ಕರೆದರು. “ಸಾಳುವ” ರಾಜ ಮನೆತನಕ್ಕೆ ಸೇರಿದ್ದ ರಾಣಿಯು ಬಹಳ ಸಮರ್ಥ ಆಡಳಿತಗಾರಳಾಗಿದ್ದಳು.
ಜೈನ ಧರ್ಮೀಯಳಾದ ರಾಣಿಯು ಅನೇಕ ಬಸದಿಗಳು ಮತ್ತು ದೇಗುಲಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದಳು. ಈಕೆಯ ಸಂಪದ್ಭರಿತ ರಾಜ್ಯವನ್ನು ವಶ ಮಾಡಿಕೊಳ್ಳಲು ಕೆಳದಿ ಮತ್ತು ಬಿಳಗಿ ಅರಸರು ಜಂಟಿಯಾಗಿ ನಡೆಸಿದ ಆಕ್ರಮಣದಲ್ಲಿ ರಾಣಿ ಚೆನ್ನಭೈರಾದೇವಿ ರಾಜ್ಯವನ್ನು ಕಳೆದುಕೊಂಡು ಸೆರೆಯಾಗಿ ಕೆಳದಿಯಲ್ಲಿ ಸಾವನ್ನಪ್ಪುತ್ತಾಳೆ. ಹೀಗೆ 1554ರಿಂದ 1602ರವರೆಗೆ ಸಶಕ್ತವಾಗಿ ಆಳ್ವಿಕೆ ನಡೆಸಿದ ರಾಣಿಯು ಈಗ ಇಲ್ಲವಾದರೂ ಗೇರುಸೊಪ್ಪೆಯಲ್ಲಿ ಕಾಣಸಿಗುವ ಚತುರ್ಮುಖ ಬಸದಿ ಅಲ್ಲದೆ ಆ ಸುತ್ತಮುತ್ತಲಿನ ಕಾಣ ಸಿಗುವ ಬಸದಿಗಳು, ಶಿಲ್ಪಗಳು ರಾಣಿ ಚೆನ್ನಭೈರಾದೇವಿಯ ಕರ್ತೃತ್ವ ಶಕ್ತಿ, ಕಾರ್ಯಶೀಲತೆಯನ್ನು ನೆನಪಿಸುವುದರ ಮುಖಾಂತರ ಜನಮಾನಸದಲ್ಲಿ ಉಳಿದಿದ್ದಾರೆ.
ಗೇರುಸೊಪ್ಪೆಯ ಇನ್ನೊಂದು ಹೆಸರು ಕ್ಷೇಮಪುರ. ಈಗಲೂ ದಟ್ಟಾರಣ್ಯದಿಂದ ಸುತ್ತುವರೆದಿದೆ. ಜೋಗಫಾಲ್ಸ್ – ಹೊನ್ನಾವರ ಹೆದ್ದಾರಿಯಲ್ಲಿ ಸುಮಾರು 27 ಕಿಲೊಮೀಟರ್ ಕ್ರಮಿಸಿದ ನಂತರ ಎಡಕ್ಕೆ ಸಿಗುವ ಕಾಡಿನ ಒಳದಾರಿಯಲ್ಲಿ 6 ಕಿಲೊಮೀಟರ್ ಸಾಗಿ ಗೇರುಸೊಪ್ಪೆ ತಲುಪಬಹುದಾಗಿದೆ. ಹೀಗೆ ಸಾಗುವ ಹಾದಿಯಲ್ಲಿ ಮೊದಲು ಒಂದು ಚೆಕ್ ಡ್ಯಾಂ ಸಿಗುತ್ತದೆ. ಹಾಗೆಯೇ ಮುಂದುವರೆಯುವಾಗ ದಾರಿಯ ಎಡಕ್ಕೆ ಸೂರ್ಯಕಿರಣಗಳು ನೆಲಕ್ಕೆ ಬೀಳದಂತೆ ಚಾಚಿಕೊಂಡಿರುವ ಅಗಾಧ ಮರಗಳು, ಗಿಡಬಳ್ಳಿಗಳಿರುವ ಅರಣ್ಯವಿದೆ.
ಬಲಗಡೆ ಕಣಿವೆಯಲ್ಲಿ ಶರಾವತಿ ನದಿ ಅಂಕುಡೊಂಕಾಗಿ ಹರಿಯುತ್ತಲಿದ್ದು, ಇವೆಲ್ಲಾ ಯಾತ್ರಾರ್ಥಿಗಳ ಮನದಲ್ಲಿ ಅಲೌಕಿಕ ಶಾಂತಿ ನೆಮ್ಮದಿ ಸೃಷ್ಟಿಸುವುದರೊಂದಿಗೆ ಮನುಷ್ಯ ಪ್ರೇರಿತ ಅಹಂಭಾವಗಳು ಅಳಿಸಿ ಪ್ರಕೃತಿಯೊಂದಿಗೆ ಲೀನವಾಗುವಂತಾಗುತ್ತದೆ. ದಾರಿಯಲ್ಲಿ ಅಲ್ಲಲ್ಲಿ ಕಾಣಬಹುದಾದ ಪ್ರಾಣಿಗಳು,ಪಕ್ಷಿಗಳು, ನೀರಿನ ಝರಿಗಳು ಇವುಗಳನ್ನೆಲ್ಲಾ ನೋಡುತ್ತಾ, ಅನುಭವಿಸುತ್ತಾ ಸಾಗುವಾಗ ದಾರಿ ಸಾಗಿದ್ದೆ ಗೊತ್ತಾಗುವುದಿಲ್ಲ. ಇವೆಲ್ಲ ಅನುಭವದ ಸಣ್ಣ ವರ್ಣನೆಯಾಗಿದ್ದು, ಅವರವರ ಅನುಭವಕ್ಕೆ ಇನ್ನೂ ಹೆಚ್ಚಿನದು ಪ್ರಾಪ್ತಿಯಾದರೆ ಆಶ್ಚರ್ಯವಿಲ್ಲ.
ಗೇರುಸೊಪ್ಪೆ ತಲುಪಿದ ನಂತರ ಮೊದಲು ಕಾಣಸಿಗುವುದು ಜ್ವಾಲಾಮಾಲಿನಿದೇವಿಯವರ ಬಸದಿ, ಈಗಲೂ ಪೂಜೆಗೊಳ್ಳುತ್ತಲಿದ್ದು ಜೈನ ಧರ್ಮೀಯರು ನಂಬಿಕೆ, ಶ್ರದ್ಧಾಭಕ್ತಿಗಳಿಂದ ನಡೆದುಕೊಳ್ಳುವ ಶಕ್ತಿಸ್ಥಳವಾಗಿದೆ. ಗರ್ಭಗುಡಿಯಲ್ಲಿ ಚಂದ್ರಪ್ರಭ ತೀರ್ಥಂಕರ ಭವ್ಯ ಶಿಲಾಮೂರ್ತಿಯಿದ್ದು, ಕೆಳಗಿನ ಹಂತದಲ್ಲಿ ಚಂದ್ರಪ್ರಭರ ಲೋಹದ ಬಿಂಬ ಹಾಗು ಇನ್ನೂ ಕೆಳಗಿನ ಹಂತದಲ್ಲಿ ಜ್ವಾಲಾಮಾಲಿನಿದೇವಿಯ ಲೋಹದ ಬಿಂಬವನ್ನು ಕಾಣಬಹುದಾಗಿದೆ.
ಗರ್ಭಗೃಹದ ಹೊರಗೆ ಕುದುರೆ ಬ್ರಹ್ಮದೇವರ ಮತ್ತು ಜ್ವಾಲಮಾಲಿನಿ ದೇವಿಯ ಶಿಲಾಮೂರ್ತಿಗಳಿವೆ. ನರಸಿಂಹರಾಜಪುರ ಸಿಂಹನಗದ್ದೆಯ ಜ್ವಾಲಾಮಾಲಿನಿ ದೇವಿ ಬಸದಿ ಪ್ರಖ್ಯಾತಿ ಪಡೆದಿದ್ದರೂ, ಮೂಲ ಸ್ಥಳ ಗೇರುಸೊಪ್ಪೆಯೆಂದು ಹೇಳಲಾಗುತ್ತದೆ. ಮಹಾವೀರ ಬಸದಿ, ಪಾರ್ಶ್ವನಾಥ ಬಸದಿ ಮತ್ತು ನೇಮಿನಾಥ ಬಸದಿಗಳನ್ನು ಕಾಣಬಹುದು. ದಟ್ಟ ಕಾಡಿನ ಇರುವ ಈ ಹಲವು ಬಸದಿಗಳ ಸನ್ನಿಧಿಯು, ಭಕ್ತಾದಿಗಳನ್ನು ಲೌಕಿಕ ಜಂಜಡಗಳಿಂದ ಮುಕ್ತಿಗೊಳಿಸುವಂತಿದೆ.
ಇತಿಹಾಸಕಾರರ ಪ್ರಕಾರ ಆ ಕಾಲದಲ್ಲಿ 108 ಬಸದಿಗಳು ಮತ್ತು ತೆರೆದ ಬಾವಿಗಳಿದ್ದು ಕಾಲಕ್ರಮೇಣ ನಶಿಸಿವೆ. ಈಗಿರುವುದು ಅರೆ ಶಿಥಿಲಗೊಂಡ ಚತುರ್ಮುಖ ಬಸದಿ. ಈ ಬಸದಿಯನ್ನು ವಿಜಯನಗರ ಕಾಲಾವಧಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹ ಮಧ್ಯಭಾಗದಲ್ಲಿದ್ದು, ನಾಲ್ಕು ದಿಕ್ಕಿಗೂ ಪದ್ಮಾಸನ ಭಂಗಿಯಲ್ಲಿ ತಪೋನಿರತರಾಗಿರುವ ಆದಿನಾಥ, ಅಜಿತನಾಥ, ಶಂಭವನಾಥ ಮತ್ತು ಅಭಿನಂದನ ತೀರ್ಥಂಕರರ ಗ್ರಾನೈಟ್ ಶಿಲೆಯ ಮೂರ್ತಿಗಳಿವೆ. ಈ ಮೂರ್ತಿಗಳ ನಡುವೆ ಒಂದು ಬಾವಿಯಿದೆಯೆಂದು ಹೇಳಲಾಗುತ್ತದೆ. ನಾಲ್ಕೂ ದಿಕ್ಕುಗಳಿಗೆ ಒಂದೊಂದು ಪ್ರವೇಶ ದ್ವಾರವಿದೆ. ಗರ್ಭಗೃಹದ ನಾಲ್ಕು ದಿಕ್ಕುಗಳ ಪ್ರವೇಶ ದ್ವಾರದಲ್ಲಿ ಎಡಬಲಕ್ಕೆ ಹಾವು ಗದೆಗಳನ್ನು ಹಿಡಿದ ದ್ವಾರಪಾಲಕರಿದ್ದಾರೆ. ಈ ಬಸದಿಯು ನಕ್ಷತ್ರಾಕಾರದ ಜಗತಿ ಮೇಲಿದೆ. ಹೊರ ಗೋಡೆಯ ಮೇಲೆ ಅಲಂಕೃತ ಗೂಡುಗಳಲ್ಲಿ ದೇವ ದೇವಿಯರ ಉಬ್ಬು ಶಿಲ್ಪಗಳಿವೆ ಮತ್ತು ಜಾಲಂದ್ರಗಳಿವೆ. ನಾಲ್ಕು ಸ್ಥಂಭಗಳಿಂದ ಕೂಡಿದ ನವರಂಗಗಳಿವೆ. ಅದರಲ್ಲಿ ದೇವಕೋಷ್ಟಗಳಿವೆ. ಮೂರು ದ್ವಾರಬಂಧಗಳ ಲಲಾಟದಲ್ಲಿ ತೀರ್ಥಂಕರರ, ದಕ್ಷಿಣ ದ್ವಾರಬಂಧದಲ್ಲಿ ಗಜಲಕ್ಷ್ಮಿ ಶಿಲ್ಪಗಳಿವೆ.
ಗೇರುಸೊಪ್ಪೆಯಲ್ಲಿ ಯಾವ ಹೋಟೆಲ್‍ಗಳು ಇರುವುದಿಲ್ಲ, ಊಟ ಸ್ಥಳೀಯ ಪುರೋಹಿತರ ಮನೆಯಲ್ಲಿ ನಡೆಯುತ್ತದೆ. ಇಲ್ಲಿನ ಸಾಂಬಾರು ಪದಾರ್ಥಗಳಿಂದ ವಿದೇಶಗಳಲ್ಲೂ ಹೆಸರುವಾಸಿಯಾಗಿದ್ದ ಗೇರುಸೊಪ್ಪೆ ಇಂದು ಚಿಕ್ಕ ಗ್ರಾಮ. ಆಗಿನ ವೈಭವವನ್ನು ಸಾರುವ ಕಾಯೋತ್ಸರ್ಗ ಮತ್ತು ಪದ್ಮಾಸನ ತಪೋಭಂಗಿಯ ಗ್ರಾನೈಟ್ ಶಿಲೆಯ ಅನೇಕ ಜಿನಮೂರ್ತಿಗಳನ್ನು, ಶಿಥಿಲಗೊಂಡ ಮನೆ, ಮಂದಿರಗಳು, ಬಸದಿಗಳ ಅಡಿಪಾಯ, ಶಿಲಾಶಾಸನಗಳನ್ನು ಕಾಣಬಹುದು.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ.
ಬನ್ನಿ ಜೊತೆಯಾಗಿ