ದೂರ ತೀರ ಯಾನಬೆರಗಿನ ಪಯಣಿಗರುವಿಂಗಡಿಸದಸೈಕಲ್ ಹತ್ತು ಊರು ಸುತ್ತುಸ್ಫೂರ್ತಿ ಗಾಥೆ

ಸೈಕಲಲ್ಲಿ ಮುಂಬೈನಿಂದ ಕನ್ಯಾಕುಮಾರಿಗೆ ಬಂದ ಮೂವರು ಗೆಳೆಯರು: 25 ಸಾವಿರ ರು. ಖರ್ಚಲ್ಲಿ 1687 ಕಿಮೀ ಪಯಣ

ಬೆಳಿಗ್ಗೆ 4 ಗಂಟೆಗೆ ಸೈಕಲ್ ಹತ್ತುವುದು. 11 ಗಂಟೆವರೆಗೆ ನಿರಂತರ ಸೈಕಲ್ ಪಯಣ. 11 ಗಂಟೆಗೆ ಎಲ್ಲಿ ಯಾವ ಡಾಬಾ ಸಿಗುತ್ತದೋ ಅಲ್ಲಿ ಸೈಕಲ್ ನಿಲ್ಲಿಸುವುದು. ಲ್ಯಾಪ್ ಟಾಪ್ ತೆರೆದು ಕೆಲಸ ಮಾಡುವುದು. ಈ ಹೊತ್ತಲ್ಲಿ ಅಲ್ಲಿನ ಸ್ಥಳೀಯ ಆಹಾರದ ರುಚಿ ನೋಡುವುದು, ಅಲ್ಲಿನ ಜನರ ಕತೆ ಕೇಳುವುದು.. ಹೀಗೆ ಸುಮಾರು ಒಂದು ತಿಂಗಳು ಮುಂಬೈನಿಂದ ಕನ್ಯಾಕುಮಾರಿಗೆ ಸೈಕಲಲ್ಲಿ 1867 ಕಿಮೀ ಪಯಣಿಸಿದ ಮೂವರು ಗೆಳೆಯರ ಕುತೂಹಲಕರ ಕಥನ.

ಯಾವುದೋ ಒಂದು ದಿನ ಮನೆಯಲ್ಲಿ ಕುಳಿತಿದ್ದಾಗ ಬೇಕನ್ ಜಾರ್ಜ್ ಎಂಬ ಐಟಿ ಹುಡುಗನಿಗೆ ಎಷ್ಟು ದಿನ ಹೀಗೇ ವರ್ಕ್ ಫ್ರಮ್ ಹೋಮ್ ಅಂತ ಮನೆಯಲ್ಲೇ ಕುಳಿತುಕೊಳ್ಳುವುದು ಎಂದು ಅನ್ನಿಸಿತು. ಹಾಗೆ ಅನ್ನಿಸಿದ್ದೇ ತಡ ತಾನೊಂದು ಲಾಂಗ್ ಸೈಕಲ್ ಟ್ರಿಪ್ ಹೋಗಬಹುದಲ್ಲ ಎಂಬ ವಿಚಾರ ಮನಸ್ಸಿಗೆ ಬಂತು. ತಕ್ಷಣ ಈ ಐಡಿಯಾವನ್ನು ಇಬ್ಬರು ಗೆಳೆಯರಾದ ಆಲ್ವಿನ್ ಜೋಸೆಫ್ ಮತ್ತು ರತೀಶ್ ಭಾಲೆರಾವ್ ಅವರಿಗೆ ತಿಳಿಸಿದ. ಯೋಚ್ನೆ ಮಾಡೋಕೆ ಸ್ವಲ್ಪ ಟೈಮ್ ಕೊಡಪ್ಪಾ ಎಂದು ಹೋದರು ಗೆಳೆಯರು.

Bakcen George

ಅವರಿಬ್ಬರು ಬರದಿದ್ದರೇನಂತೆ ತಾನೊಬ್ಬನೇ ಹೋಗುತ್ತೇನೆ ಎಂದು ರೆಡಿಯಾದ ಜಾರ್ಜ್. ಮುಂಬೈನಿಂದ ಕನ್ಯಾಕುಮಾರಿಗೆ ಹೋಗುವ ದಾರಿ ಗೊತ್ತು ಮಾಡಕೊಂಡ. ಬ್ಯಾಗ್ ರೆಡಿ ಮಾಡತೊಡಗಿದ. ಇನ್ನೇನು ಹೊರಡೋಕೆ ಎರಡು ದಿನ ಬಾಕಿ ಇದೆ ಅನ್ನುವಾಗ ಗೆಳೆಯರಿಬ್ಬರು ನಾವೂ ಬರುತ್ತೇವೆ ಎಂದರು. ಮೂರು ಸೈಕಲ್ ಗಳು ರೆಡಿಯಾಯಿತು.

Ratish

ಈ ಮೂವರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು. ವರ್ಕ್ ಫ್ರಮ್ ಹೋಮ್ ಸೌಲಭ್ಯ ಪಡೆದಿದ್ದವರು. ಒಂದು ತಿಂಗಳು ಆಫೀಸಲ್ಲಿ ರಜೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೊಂದು ಯೋಜನೆ ರೆಡಿ ಮಾಡಿದರು. ಕೆಲಸಕ್ಕೆ ರಜೆ ಹಾಕುವ ಪ್ರಮೇಯವೇ ಇಲ್ಲ, ಆಫೀಸ್ ಟೈಮಲ್ಲಿ ಸೈಕಲನ್ನು ಎಲ್ಲಾದರೂ ಸೈಡಿಗೆ ಹಾಕಿ ಕೆಲಸ ಮಾಡುವುದು. ಆಫೀಸು ಕೆಲಸ ಮುಗಿದ ಮೇಲೆ ಸೈಕಲ್ ಹತ್ತುವುದು. ಇದು ಅವರ ಐಡಿಯಾ.

ಸೈಕಲ್ಲಿನ ಆರೋಗ್ಯ ವಿಚಾರಿಸಿಕೊಂಡರು. ಬ್ಯಾಗ್ ರೆಡಿಮಾಡಿಕೊಂಡರು. ಬಟ್ಟೆ ಬ್ಯಾಗಿನ ಜೊತೆ ಲ್ಯಾಪ್ ಟಾಪ್ ಬ್ಯಾಗನ್ನೂ ಹಿಡಿದುಕೊಂಡರು. ಮುಂಬೈ- ಪುಣೆ- ಕೊಲ್ಹಾಪುರ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಸೇಲಂ, ಮಧುರೈ, ತಿರನಲ್ವೇಲಿ, ಕನ್ಯಾಕುಮಾರಿ. ಇದು ಅವರು ಹಾಕಿಕೊಂಡ ದಾರಿ.

ನವೆಂಬರ್ ನಲ್ಲಿ ಒಂದು ದಿನ ಅವರ ಪಯಣ ಶುರುವಾಯಿತು. ಬೆಳಿಗ್ಗೆ 4 ಗಂಟೆಗೆ ಸೈಕಲ್ ಹತ್ತುವುದು. 11 ಗಂಟೆವರೆಗೆ ನಿರಂತರ ಸೈಕಲ್ ಪಯಣ. 11 ಗಂಟೆಗೆ ಎಲ್ಲಿ ಯಾವ ಡಾಬಾ ಸಿಗುತ್ತದೋ ಅಲ್ಲಿ ಸೈಕಲ್ ನಿಲ್ಲಿಸುವುದು. ಲ್ಯಾಪ್ ಟಾಪ್ ತೆರೆದು ಕೆಲಸ ಮಾಡುವುದು. ಈ ಹೊತ್ತಲ್ಲಿ ಅಲ್ಲಿನ ಸ್ಥಳೀಯ ಆಹಾರದ ರುಚಿ ನೋಡುವುದು, ಅಲ್ಲಿನ ಜನರ ಕತೆ ಕೇಳುವುದು ಅವರ ಪಯಣದ ಭಾಗವಾಯಿತು. ಕಡಿಮೆ ಖರ್ಚಿನ ಲಾಡ್ಜಲ್ಲಿ ಉಳಿದುಕೊಳ್ಳುತ್ತಿದ್ದರು. ಒಂದೆರಡು ಕಡೆ ಕೊರೋನಾ ಕಾರಣ ರೂಮು ಕೊಡುವುದಿಲ್ಲ ಎಂದಿದ್ದು ಬಿಟ್ಟರೆ ಬೇರೆಲ್ಲೂ ಅಂಥಾ ತೊಂದರೆ ಏನೂ ಆಗಲಿಲ್ಲ.

ಊರನ್ನು ದಾಟುತ್ತಾ, ಜಿಲ್ಲೆಗಳನ್ನು ಹಿಂದೆ ಹಾಕುತ್ತಾ, ದೂರ ತೀರ ಬಂದೇ ಬಿಟ್ಟರು ಮೂವರು ಹುಡುಗರು. ಸುಮಾರು ಒಂದು ತಿಂಗಳ ಪಯಣ ಇದು. ರಜೆ ಪಡೆಯಲಿಲ್ಲ. ಕೆಲಸಕ್ಕೆ ಕಳ್ಳ ಬೀಳಲಿಲ್ಲ. ಕೆಲಸಕ್ಕೆ ಕೆಲಸವೂ ಆಯಿತು, ಟೂರೂ ಆಯಿತು. ವೀಕೆಂಡಲ್ಲಿ ಮಾತ್ರ ಆರಾಮಾಗಿ ಊರು ಸುತ್ತುತ್ತಿದ್ದರು. ಅದನ್ನು ಹೊರತುಪಡಿಸಿದರೆ ಆಯಾಯ ಊರುಗಳಲ್ಲಿ ಸಾಮಾನ್ಯವಾಗಿ ಪ್ರವಾಸಿಗರು ಭೇಟಿ ಕೊಡುವ ಸ್ಥಳಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಂತ ಬೇಜಾರೇನಿಲ್ಲ.

ಪ್ರಯಾಣಗಳು ಖುಷಿ ಕೊಡುತ್ತವೆ. ಆದರೆ ಈ ಥರದ ಅಡ್ವೆಂಚರ್ ಗಳು ನಾವು ನಮಗೆ ಕೊಡುವ ಗಿಫ್ಟು. ಬೆವರಲ್ಲಿ ಒದ್ದೆಯಾಗಿದ್ದೇವೆ, ಧೂಳಿನಲ್ಲಿ ಮುಳುಗಿ ಪರದಾಡಿದ್ದೇವೆ, ಬಿಸಿಲಲ್ಲಿ ಒದ್ದಾಡಿದ್ದೇವೆ, ಚಳಿಯಾದಾಗ ಮುರುಟಿದ್ದೇವೆ, ಎಲ್ಲಾ ಥರದ ಪರಿಸ್ಥಿತಿ ದಾಟಿಕೊಂಡು ಬಂದಿದ್ದೇವೆ. ಈಗ ಬರೀ ಖುಷಿಯನ್ನು ಹೊತ್ತು ತಿರುಗಾಡುತ್ತಿದ್ದೇವೆ ಎನ್ನುತ್ತಾರೆ ಅವರು.

ಈ ಜರ್ನಿ ಸುಲಭದ್ದಾಗಿರಲಿಲ್ಲ. ಅಷ್ಟು ಕಿಮೀಗಳನ್ನು ಕ್ರಮಿಸುವ ವಿಶ್ವಾಸವೂ ಇರಲಿಲ್ಲ. ಆದರೆ ದಿನ ಕಳೆದಂತೆ ವಿಶ್ವಾಸ ಮೂಡಿತು. ಎಲ್ಲವೂ ಸುಲಭವಾಗಿ ಕಾಣತೊಡಗಿತು. ಯಾವ ಕೆಲಸವೇ ಆಗಲಿ ನಾವು ಆರಂಭಿಸಬೇಕಷ್ಟೇ. ಉಳಿದಂತೆ ಜನ ಸಹಕರಿಸುತ್ತಾರೆ. ನಮ್ಮ ಮ್ಯಾನೇಜರ್ ಗಳು ನಮ್ಮನ್ನು ಬೆಂಬಲಿಸಿದರು. ಸಹೋದ್ಯೋಗಿಗಳು ಅವರೇ ಟೂರ್ ಹೊರಟಂತೆ ಥ್ರಿಲ್ ಆದರು. ನಮ್ಮನ್ನು ಪ್ರೀತಿಯಿಂದ ನೋಡಿಕೊಂಡರು ಎನ್ನುವುದು ಅವರ ಮನಸ್ಸು ತುಂಬಿದ ಮಾತುಗಳು. ಅಂದಹಾಗೆ ಈ ಪಯಣಕ್ಕೆ ಅವರಿಗೆ ಒಬ್ಬೊಬ್ಬರಿಗೆ ಆದ ಖರ್ಚು ರು.25000. ಕ್ರಮಿಸಿದ ದೂರ 1687 ಕಿಮೀಗಳು.

ಮೈ ದಣಿಯೆ ಸುಸ್ತಾಗಿ ಅಲ್ಲೆಲ್ಲೋ ಸಿಕ್ಕ ಹಸಿರು ಬಯಲಲ್ಲಿ ಬೆನ್ನು ಚಾಚಿದಾಗ, ಮೌನವಾಗಿದ್ದ ಪರಿಸರದಲ್ಲಿ ಆಕಾಶ ನೋಡುತ್ತಾ ಮಲಗಿದಾಗ ಆದ ಖುಷಿ ತುಂಬಾ ದೀರ್ಘಕಾಲ ಅವರಲ್ಲಿ ಉಳಿಯಲಿದೆ. ಕೊರೋನಾ ನೋವನ್ನು ಮರೆಸುವುದಕ್ಕೆ, ಜೀವನೋತ್ಸಾಹ ತುಂಬಿಕೊಳ್ಳುವುದಕ್ಕೆ ಇಂಥಾ ಅಡ್ವೆಂಚರ್ ಗಳು ಎಲ್ಲರಿಗೂ ಸಾಧ್ಯವಾಗಬೇಕಿದೆ.  

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button