ಕಾಡಿನ ಕತೆಗಳುವಿಂಗಡಿಸದವಿಸ್ಮಯ ವಿಶ್ವ

ಹಬ್ಬಿದಾ ಮಲೆ ಮಧ್ಯದೊಳಗೆ ಹುಲಿ ಹೆಜ್ಜೆ ಜಾಡು ಹಿಡಿದು: ಮುತ್ತೋಡಿ ಕಾಡಿನಲ್ಲಿ ಹುಲಿ ಗಣತಿ ನೆನಪು

ಮನುಷ್ಯರಿಗೆ ಪ್ರವೇಶವಿರದ ಕಾಡಿನಲ್ಲಿ ಹುಲಿಗಣತಿ ನಡೆಸಲು ಹೋದಾಗ ಆದ ರೋಚಕ ಅನುಭವ ಕಥನ.

  • ಯಾಮಿನಿ

ಹುಲಿ ಅಂದ್ರೆ ದೇವರ ಥರ. ಕಣ್ಣಿಗೆ ಬೀಳಬೇಕು ಅಂದ್ರೆ ಅದೃಷ್ಟ ಇರಬೇಕು. 

ಮಣಿ ಅಷ್ಟೂ ಹೊತ್ತಿನ ಮೌನವನ್ನು ಕಲಕಿಬಿಟ್ಟ.

ಒಂದರೆ ಕ್ಷಣ. ಮತ್ತೆ ಮೌನ, ಚಿಕ್ಕಮಗಳೂರಿನಲ್ಲಿರುವ ಮುತ್ತೋಡಿ ಕಾಡಿಗೆ ಕತ್ತಲಾವರಿಸಿ ಬಹಳ ಹೊತ್ತಾಗಿತ್ತು. ಚಳಿ ಹಬ್ಬಿ ಮೈ ತಬ್ಬಿ ನಡುಗಿಸುತ್ತಿತ್ತು. ಪಕ್ಕದಲ್ಲಿ ಸೋಮವಾಹಿನಿ ನದಿ ಹರಿಯುವ ಸದ್ದು. ಕತ್ತಲಲ್ಲಿ ದಿಟ್ಟಿಸಿದರೆ ಅಲ್ಲೊಂದು ಇಲ್ಲೊಂದು ಮಿಂಚು ಹುಳ, ಅಲ್ಲೆಲ್ಲೋ ದೂರದಲ್ಲಿ ಮರಮುರಿದ ಸದ್ದಾದರೆ ಆನೆ ಇರಬಹುದೇ ಅನ್ನೋ ಅನುಮಾನ.

ಎದುರಿಗಿದ್ದ ಒಲೆಯಲ್ಲಿ ಧಗಧಗ ಬೆಂಕಿ ಉರಿಯುತ್ತಿತ್ತು. ಸಫಾರಿ ಡ್ರೈವರ್ ಆಗಿ ಕೆಲಸ ಮಾಡುವ ಮಣಿ ಕತೆ ಹೇಳುತ್ತಿದ್ದ. ಅವನು ಕಾಡಿಗೆ ಬಂದ ಕತೆ. ಹುಲಿ ನೋಡಿದ ಕತೆ. ಅವನು ಅಲ್ಲಿಗೆ ಬಂದು ಎರಡು ವರ್ಷ ಆಗಿದೆ. ಆದರೆ ಪೂರ್ತಿ ಒಂದು ವರ್ಷ ಹುಲಿ ಕಣ್ಣಿಗೆ ಬಿದ್ದಿರಲಿಲ್ಲ. ಅಷ್ಟು ಸಮಯ ಬೇರೆ ಯಾರಾದರೂ ಬಳಿ ಬಂದು ನಾನು ಹುಲಿ ನೋಡಿದೆ ಎಂದರೆ ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತೆ

ಆಗುತ್ತಿತ್ತು. ಅದೃಷ್ಟವಿಲ್ಲ ಎಂಬ ನೋವು. ಅವತ್ತೆಲ್ಲಾ ಟೆನ್ಷನ್. ಅವನಿಗೂ ಒಂದು ದಿನ ದೇವರು ಕಣ್ಣಿಗೆ ಬಿದ್ದಿದ್ದರು. ಅದೂ ಒಂದಲ್ಲ ಮೂರು ಹುಲಿ. ಎರಡು ಮಕ್ಕಳು ಮತ್ತು ತಾಯಿ, ತಣ್ಣನೆಯ ದನಿಯಲ್ಲಿ ಅವನು ಸಾರಿ ಹೋಗಿದ್ದಾಗ ದಾರಿಯ ಪಕ್ಕ ನಿಂತಿದ್ದ ಹುಲಿ

ಅವನನ್ನು ದಿಟ್ಟಿಸಿ ನೋಡಿದ ಕತೆಯನ್ನು ಹೇಳುತ್ತಿದ್ದರೆ ಚಳಿ ಜಾಸ್ತಿಯಾಗಿತ್ತು. 

ಮರುದಿನ ಬೆಳಿಗ್ಗೆ ಹುಲಿ ಗಣತಿ ಶುರು. ಆ ದಿನಪೂರ್ತಿ ಹುಲಿ ಗಣತಿಗೆಂದು ಬಂದಿದ್ದ ಸ್ವಯಂಸೇವಕರು ಮತ್ತು ಅರಣ್ಯ ಸಿಬ್ಬಂದಿಗಳಿಗೆ ಹುಲಿ ಗಣತಿ ಹೇಗೆ ಮಾಡಬೇಕು ಅನ್ನುವುದರ ತರಬೇತಿ ನೀಡಲಾಗಿತ್ತು. ಅಲ್ಲಿದ್ದ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಒಂದೊಂದು ಗುಂಪುಗಳನ್ನಾಗಿ ಮಾಡಿ ಭದ್ರಾ, ಟೈಗರ್ ರಿಸರ್ವ್ ನ ಬೇರೆ ಬೇರೆ ಕ್ಯಾಂಪ್‌ಗಳಿಗೆ ಕಳಿಸಲಾಗಿತ್ತು. ಒಂದೊಂದು ಕ್ಯಾಂಪ್ ಗೆ ಒಂದೊಂದು ಬೀಟ್ ನಿಗದಿ ಪಡಿಸಿದ ಒಂದಷ್ಟು ದೂರ ಕ್ರಮಿಸಿ ಹುಲಿ ಗಣತಿ ಮಾಡಬೇಕಿತ್ತು. ಪ್ರತಿಯೊಬ್ಬರು ಮಾನಸಿಕವಾಗಿ ಸಿದ್ದರಾಗಿದ್ದರು. ಯಾರಿಗೊತ್ತು, ಬೆಳಿಗ್ಗೆ ದಾರಿಯಲ್ಲಿ ಚಿರತೆ, ಕರಡಿ, ಆನೆ ಸಿಗಬಹುದು. ನಡೆಯುತ್ತಿದ್ದಾಗ ಎದುರಿಗೆ ಹುಲಿ ಪ್ರತ್ಯಕ್ಷವಾದರೂ ಆಗಬಹುದು.

ಮೊದಲ ದಿನದ ಪುಳಕ 

ಬೆಳಿಗ್ಗೆ ಆರು ಗಂಟೆ. ಮುತ್ತೋಡಿ ಕಾಡು ತನ್ನನ್ನು ತಾನು ಸಂಪೂರ್ಣವಾಗಿ ಚಳಿಗೆ ಒಡ್ಡಿಕೊಂಡಿತ್ತು. ಹತ್ತು ಡಿಗ್ರಿ ಸೆಲ್ಸಿಯಸ್ ತಾಪಮಾನ, ನಮ್ಮ ಬೀಟ್ ನಲ್ಲಿ ನಾವು ಮೂರು ಜನ. ಮಂಜು ಆಚಿರಿಸಿದ ದಾರಿ. ಕೆಲವೇ ನಿಮಿಷದಲ್ಲಿ ನಮ್ಮ ಬೀಟ್‌ನ ಆರಂಭಿಕ ಪಾಯಿಂಟಿನಲ್ಲಿ ನಿಂತಿದ್ದೆವು. ಇನ್ನೇನು ನಮ್ಮ ಕೆಲಸ ಶುರುವಾಗಬೇಕು. 

ನಮಗೆ ದಾರಿಯಲ್ಲಿ ಲಭ್ಯವಾಗುವ ಮಾಹಿತಿಗಳನ್ನೆಲ್ಲಾ ಆ್ಯಪ್‌ನಲ್ಲಿ ನಮೂದಿಸಬೇಕು. ಆ್ಯಪ್ ತೆರೆದು ಅದರಲ್ಲಿ ನಮ್ಮ ಕ್ಯಾಂಪ್‌ನ ಮಂದಿಯ ವಿವರಗಳನ್ನೆಲ್ಲಾ ತುಂಬಿಸುವಷ್ಟರಲ್ಲಿ ಬೇರೆ ಕ್ಯಾಂಪ್‌ನ ಇಬ್ಬರು ಸಿಬ್ಬಂದಿಗಳು ಆ ದಾರಿಯಲ್ಲೇ ಬಂದರು. ನಮ್ಮನ್ನು

ನೋಡಿ ನಿಂತರು. ಅವರ ಕಣ್ಣಲ್ಲಿ ಬೆರಗು. ದನಿಯಲ್ಲಿ ಎಕ್ಸೈಟ್ ಮೆಂಟ್, ಒಂದು ಚಿರತೆ ರಸ್ತೆ ದಾಟಿ ಹೋಯಿತು, ನಿಮಗೆ ಸಿಕ್ಕಿತಾ ಎಂದರು. ಹೊಟ್ಟೆಯಲ್ಲಿ ಹತ್ತು ಚಿಟ್ಟೆ ಒಂದೇ ಸಲ ನರ್ತಿಸಿದಂತೆ. ಆ ಫೀಲಿಂಗು ತುಂಬಾ ಹೊತ್ತು ಹಾಗೇ ಇತ್ತು. ಅಷ್ಟು ಹೇಳಿ ಅವರು ಅಲ್ಲಿಂದ ಸಾಗಿ ಹೋದರು. 

ನಮ್ಮ ನಡಿಗೆ ಶುರುವಾಯಿತು. ಹುಲಿ, ಚಿರತೆ ನಡೆದಾಡುವ ಈ ದಾರಿಯಲ್ಲಿ ನಮ್ಮ ಕೆಲಸ ಏನು ಅಂದರೆ ಮಾಂಸಾಹಾರಿ

ಪ್ರಾಣಿಗಳ ಇರುವಿಕೆಯ ಮಾಹಿತಿ ಸಂಗ್ರಹ ಮಾಡುವುದು. ಅದರಲ್ಲೂ ಮುಖ್ಯವಾಗಿ ಹುಲಿ ಇರುವಿಕೆಯ ಮಾಹಿತಿ ಸಂಗ್ರಹ. ಒಂದೋ ನೇರವಾಗಿ ಹುಲಿ, ಚಿರತೆ, ಸೀಳು ನಾಯಿ ಇತ್ಯಾದಿ ಪ್ರಾಣಿಗಳನ್ನು ನೋಡಿ ಆ ಪ್ರಾಣಿಗಳು ಎಲ್ಲಿ ಸಿಕ್ಕಿತು

ಎಂದು ನಮೂದಿಸುವುದು. ಎಲ್ಲಿ ಎಂದರೆ ಜಿಪಿಎಸ್ ನಲ್ಲಿ ಸಿಗುವ ಅಕ್ಷಾಂಶ ರೇಖಾಂಶಗಳನ್ನು ಬರೆದಿಟ್ಟುಕೊಳ್ಳುವುದು. ಆ ಪ್ರಾಣಿಗಳು ನೇರವಾಗಿ ನೋಡಲು ಸಿಗದೆ ಹೋದರೆ ದಾರಿಯಲ್ಲಿ ಕಾಣ ಸಿಗುವ ಅವುಗಳು ಓಡಾಡಿದ ಗುರುತುಗಳ ಮಾಹಿತಿಯನ್ನು ಸಂಗ್ರಹಿಸಬೇಕು. ಸಾಮಾನ್ಯವಾಗಿ ಹುಲಿ, ಚಿರತೆಗಳುಮಣ್ಣುಹಾದಿಗಳು, ಕಾಲುಹಾದಿಗಳು, ನದೀ ಪಾತ್ರಗಳು, ಹಳ್ಳದ ಜಾಡುಗಳಲ್ಲಿ ಹೆಚ್ಚಾಗಿ ಓಡಾಡುತ್ತವೆ. ಅಲ್ಲೆಲ್ಲಾ ಅವುಗಳ ಹೆಜ್ಜೆ ಗುರುತು ಮೂಡಿರುತ್ತವೆ. ಆ ಹೆಜ್ಜೆ ಗುರುತುಗಳು (ಪಗ್ ಮಾರ್ಕ್), ಲದ್ದಿ, ಮರದ ಕಾಂಡಗಳ ಮೇಲೆ ಉಗುರುಗಳಿಂದ ಕೆರೆದ ಗುರುತು ಇವುಗಳನ್ನೆಲ್ಲಾ ಗಮನಿಸಬೇಕು ಮತ್ತು ಅದನ್ನೆಲ್ಲಾ ಬರೆದಿಟ್ಟುಕೊಳ್ಳಬೇಕು.

ಆಗಿನ್ನೂ ಪೂರ್ತಿ ಬೆಳಕು ಹರಿದಿರಲಿಲ್ಲ. ತುಂಬಾ ದೂರದ ದಾರಿ ಕಾಣುತ್ತಿರಲಿಲ್ಲ, ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಒಮ್ಮೆ ದಾರಿಯನ್ನೂ ಇನ್ನೊಮ್ಮೆಮರಗಳ ಕಾಂಡಗಳನ್ನೂ ಮತ್ತೊಮ್ಮೆಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದ ಕಡೆಗೆ ನೋಡುತ್ತಾ ಸಾಗುತ್ತಿದ್ದ ವೇಳೆಯಲ್ಲಿ ಅಲ್ಲೊಂದು ಕಡೆ ಜೋರಾಗಿ ಘೋಕ್ ಎಂಬ ಸದ್ದು ಕೇಳಿಸಿತು. ಎದೆ ಝಲ್ ಎಂದಿತು. ತಕ್ಷಣ ನಿಂತುಬಿಟ್ಟೆವು. ಅಲ್ಲಾಡಲಿಲ್ಲ. ಹತ್ತು ಸೆಕೆಂಡು ದಿಟ್ಟಿಸಿ ನೋಡಿದರೆ ದೂರದಲ್ಲಿ ಒಂದು ಕಡವೆ ಕುಟುಂಬ. ಈ ಕಡವೆಗಳು ಭಾರಿ ಹುಷಾರು. ತಮಗೆ ಏನಾದರೂ ತೊಂದರೆಯಾಗಲಿದೆ ಎಂಬ ಸೂಚನೆ ಸಿಕ್ಕರೆ ಸಾಕು ತಕ್ಷಣ ತಮ್ಮ ಸುತ್ತಮುತ್ತಲಿನ ಎಲ್ಲರಿಗೂ ಕೇಳಿಸುವ ಹಾಗೆ ಸದ್ದು ಮಾಡುತ್ತವೆ.

ಇನ್ನು ಹುಲಿ, ಚಿರತೆಯ ಸುಳಿವು ಸುಕ್ಕರಂತೂ ನಿರಂತರವಾಗಿ ಸದ್ದು ಮಾಡುತ್ತಲೇ ಇರುತ್ತವೆ. ಈ ಗುಣ ಲಂಗೂರ್, ಕಾಡು ಕುರಿಗಳಿಗೂ ಇವೆ. ಒಂದು ವೇಳೆ ಕಾಡು ಕುರಿ ಕಣ್ಣಿಗೆ ಬಿತ್ತು ಎಂದರೆ ಸಮೀಪದಲ್ಲೆಲ್ಲೂ ಹುಲಿ, ಚಿರತೆಗಳಿಲ್ಲ ಎಂದೇ ಅರ್ಥ. ಯಾಕೆಂದರೆ ಕಾಡುಕುರಿಗೆ ಸುಮಾರು ನೂರಿನ್ನೂರು ಮೀಟರ್ ದೂರದಲ್ಲಿ ಹುಲಿ, ಚಿರತೆ ಇದ್ದರೂ ವಾಸನೆಯಲ್ಲೇ ತಿಳಿದುಬಿಡುತ್ತದೆ. ಅಷ್ಟು ಸೂಕ್ಷ್ಮ ಮೂಗು ಅದಕ್ಕೆ. ಅಪಾಯ ಬರುತ್ತಿದೆ ಎಂದರೆ ಸಾಕು ಬೊಗಳುತ್ತಾ ಓಡುತ್ತದೆ. ಆ ಕಾರಣಕ್ಕೆ ಅದನ್ನು

ಬಾರ್ಕಿಂಗ್ ಡೀರ್ ಅನ್ನುತ್ತಾರೆ.

ಅಷ್ಟು ಹೊತ್ತಿಗೆ ಮರಗಳೆಡೆಯಿಂದ ಸೂರ್ಯ ರಶ್ಮಿ ಹಾದು ನೆಲ ಸೇರುತ್ತಿತ್ತು. ಅಲ್ಲೊಂದು ಇಲ್ಲೊಂದು ಬಿಸಿಲು ಕೋಲು ಗೋಚರಿಸತೊಡಗಿತು. ಕಾಡಿನ ಗಾಢ ಮೌನವನ್ನೂ ಹಿತವಾದ ಗಾಳಿಯನ್ನು ಅನುಭವಿಸುತ್ತಾ ಸಾಗುತ್ತಿದ್ದಂತೆ ಸಿಕ್ಕೇ ಬಿಟ್ಟಿತು ಒಂದು ಹೆಜ್ಜೆ ಗುರುತು. ದೊಡ್ಡ ಹೆಜ್ಜೆ ಅನುಮಾನವೇ ಬೇಡ. ಹುಲಿರಾಯನ ಹೆಜ್ಜೆ. ಆ ಹೆಜ್ಜೆಯನ್ನು ನೋಡುವುದೇ ದಿವ್ಯ ಅನುಭೂತಿ. ಅಷ್ಟು ದೊಡ್ಡ ಗಾತ್ರದ ಆ ಹೆಜ್ಜೆ ಗುರುತಿನ ಒಡೆಯ ಒಂದು ವೇಳೆ ಎದುರಿಗೆ ಬಂದರೆ ಹೇಗಿರುತ್ತದೆ ಅನ್ನಿಸಿತು. ಪುಣ್ಯವೋ ದುರದೃಷ್ಟವೋ ಅವತ್ತು ಹುಲಿರಾಯ ಸಿಗಲಿಲ್ಲ. ಆದರೆ ಹುಲಿ, ಚಿರತೆ ಹಾದು ಹೋದ ಸುಮಾರು ಗುರುತುಗಳು ಸಿಕ್ಕವು. ಇವತ್ತು ಕಾಡಿನ ಚಿತ್ತ ಏನಿತ್ತೋ, ನಾಳೆ ಅದೃಷ್ಟ ಬದಲಾಗಬಹುದು.

ಎರಡನೆಯ ದಿನ 

ಎರಡನೇ ದಿನ ತುಸು ಅಂಜಿಕೆ ಮರುದಿನ ಮುಂಜಾವಿನಲ್ಲಿ ಗಣತಿ ಶುರುವಾಗುವ ಹೊತ್ತಿಗೆ ದೇಹ, ಮನಸ್ಸು ಕಾಡಿಗೆ ಪೂರ್ತಿ ಹೊಂದಿಕೊಂಡಿತ್ತು. ಇವತ್ತು ದಾರಿ ಬೇರೆ.

ಕಳೆದ ವಾರ ಆ ದಾರಿಯಲ್ಲಿ ಹುಲಿ ಸಿಕ್ಕಿತ್ತು ಎಂದು ನಮ್ಮ ಜೊತೆ ಇದ್ದ ಅರಣ್ಯ ಸಿಬ್ಬಂದಿ ಹೇಳಿದ್ದು ಕೇಳಿ ಕುತೂಹಲ ಹುಟ್ಟಿತ್ತು. ಅಲ್ಲದೇ ಸ್ವಲ್ಪ ಭಯವೂ ಇತ್ತು. ಪಕ್ಕದ ಬೀಟಿನ ಹುಡುಗನೊಬ್ಬ ರಾತ್ರಿ ಸಿಕ್ಕಿದ್ದ. ಅವನಿಗೆ ಹಿಂದಿನ ದಿನ ದಾರಿಯಲ್ಲಿ ಆನೆಗಳ ಗುಂಪು ಸಿಕ್ಕಿತ್ತು. ಕಾಡಾನೆಗಳು ತುಂಬಾ ಅಪಾಯಕಾರಿ. ಹಾಗಾಗಿ ಅವನು ನೋಡಿದವನೇ ವಾಪಸ್ ತಿರುಗಿ ಓಡಿ ಹೋಗಿದ್ದ. ಅವನ

ಹಿಂದೆ ಅರಣ್ಯ ಸಿಬ್ಬಂದಿ. ಅವರು ದಾರಿ ತಪ್ಪದಂತೆ ಎಚ್ಚರಿಸುತ್ತಿದ್ದರು. ಆದರೆ ಸಂದರ್ಭ ಕೇಳಿಸಿಕೊಳ್ಳುವಂತದ್ದಾಗಿರಲಿಲ್ಲ, ವೇಗ ಕಾಯ್ದುಕೊಳ್ಳಲು ಸ್ವಲ್ಪವೂ ತಿರುಗದೇ ಓಡಿದ. ನಿಲ್ಲು ನಿಲ್ಲು ಅಂತ ಧ್ವನಿ ಅವನಿಗೆ ಕೇಳಿಸುವ ಹೊತ್ತಿಗೆ ಎದುರಲ್ಲಿ ಮತ್ತೊಂದು ಒಂಟಿ ಸಲಗ, ಭಾರಿ ವೇಗದಲ್ಲಿದ್ದ ಅವನು ಗಕ್ಕನೆ ಬ್ರೇಕ್ ಹಾಕಿ ಮತ್ತೊಂದು ದಾರಿಯಲ್ಲಿ ಹೊರಬಂದಿದ್ದ. ಆನೆಗಳು ಹೋದ ಮೇಲೆ ಗಣತಿ ಮುಂದುವರಿದಿತ್ತು. ಆ ಕತೆ ಸಿನಿಮಾದಂತೆ ಕಣ್ಣೆದುರಿಗಿತ್ತು. ಹೀಗಾಗಿಸ್ವಲ್ಪ ಹೆಚ್ಚಾಗಿಯೇ ಹುಷಾರಾಗಿದ್ದೆವು. ಕಾಡಿನದಾರಿಗಳು

ನಿಗೂಢವಾಗಿರುತ್ತವೆ ಮತ್ತು ದಾರಿ ತಪ್ಪಬೇಕು ಅಂತ ಆಸೆ ಹುಟ್ಟಿಸುತ್ತವೆ.

ಆದರೆ ದಾರಿ ತಪ್ಪುವುದು ಕಾಡಿನ ಮಟ್ಟಿಗೆ ಒಳ್ಳೆಯದಲ್ಲ. ಅವತ್ತು ಕಡವೆ, ಕಾಡು ಕುರಿ, ಲಂಗೂರ್, ಜಿಂಕೆ, ಕಾಡು ಕೋಳಿ, ಕಾಡು ಕೋಣ ಎದುರಾದವು. ಅವತ್ತಿನ ಪುಣ್ಯ ಅಷ್ಟೇ. 

ಹುಲಿ ಗಣತಿಯ ಉದ್ದೇಶವೇನು? 

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ಮಾಂಸಹಾರಿ ಪ್ರಾಣಿಗಳ ಮಾಹಿತಿ ಒಟ್ಟುಗೂಡಿಸಲಾಗುತ್ತದೆ. ಎರಡನೇ ಹಂತದಲ್ಲಿ ಗೊರಸುಳ್ಳ ಪ್ರಾಣಿಗಳ ಅಂದ್ರೆ ಜಿಂಕೆ, ಕಡವೆ ಪ್ರಾಣಿಗಳ ಮಾಹಿತಿ ಮತ್ತು ಸಸ್ಯಗಳ ಮಾಹಿತಿ ಸಂಗ್ರಹ ನಡೆಸಲಾಗುತ್ತದೆ.

ಈ ಹುಲಿಗಣತಿಯ ಉದ್ದೇಶ ಆಯಾಯ ಪ್ರದೇಶದಲ್ಲಿ ಎಷ್ಟು ಹುಲಿ ಇದೆ ಎಂದು ಅಂದಾಜಿಸುವುದು. ಆದರೆ ಅದಷ್ಟೇ ಅಲ್ಲ, ಹುಲಿ ಅನ್ನುವುದು ಒಂದು ಕಾಡಿನ ಆರೋಗ್ಯವನ್ನು ಸೂಚಿಸುತ್ತದೆ. ಹುಲಿ ಇದ್ದರೆ ಕಾಡು ಚೆನ್ನಾಗಿದೆ ಅಂತರ್ಥ. ಕಾಡು ಚೆನ್ನಾಗಿದ್ದರೆ ನದಿ ಮೂಲಗಳು ಚೆನ್ನಾಗಿರುತ್ತವೆ. ನದಿ ಚೆನ್ನಾಗಿದ್ದರೆ ನಾಡು ಚೆನ್ನಾಗಿ ರುತ್ತದೆ. ಹಾಗಾಗಿ ಮುತ್ತೋಡಿಯಲ್ಲೋ ನಾಗರಹೊಳೆಯಲ್ಲೋ ಹುಲಿ ಸಂತತಿ ಬೆಳೆಯುತ್ತಾ ಹೋದರೆ ಪ್ರಕೃತಿ ಚೆನ್ನಾಗಿದ್ದು ಬೆಂಗಳೂರಿ ನಲ್ಲಿರುವವರಿಗೆ ಸರಿಯಾಗಿ ನೀರು ಸಿಕ್ಕಿ ಜೀವನ

ಚೆನ್ನಾಗಿರುತ್ತದೆ. ಹಾಗಾಗಿ ಕಾಡಿನ ಆರೋಗ್ಯ ಚೆನ್ನಾಗಿದೆಯೋ ಇಲ್ಲೋ ಅಂತ ತಿಳಿದುಕೊಳ್ಳುವುದು ಕೂಡ ಹುಲಿ ಗಣತಿಯ ಉದ್ದೇಶ.

ಕಾಡಿನಲ್ಲಿ ಎಲ್ಲಕ್ಕೂ ಕಾರಣವಿದೆ. ಯಾವುದು ವಿನಾಕಾರಣ ನಡೆಯುವುದಿಲ್ಲ, ಮಂಗ ನೆಲ್ಲಿಕಾಯಿ ತಿನ್ನಲು ಮರ ಹತ್ತಿದಾಗ ಬಿದ್ದ ನೆಲ್ಲಿಕಾಯಿಯನ್ನು ಕಡವೆ ತಿಂದು ಬದುಕುತ್ತದೆ. ಅದೇ ಕಡವೆ ಹುಲಿಗೆ ಆಹಾರವಾಗುತ್ತದೆ. ಒಂದು ಕಾಡಲ್ಲಿ ಇಂತಿಷ್ಟು ಹುಲಿ ಇದ್ದರೆ ಅದರ ಆಹಾರಕ್ಕೆ ತಕ್ಕಷ್ಟು ಕಡವೆ, ಜಿಂಕೆ ಇರಬೇಕು. ಅವುಗಳು ಅಲ್ಲಿ ಜೀವಿಸುವುದಕ್ಕೆ ಕಾಡು ಚೆನ್ನಾಗಿರಬೇಕು. ಕಾಡಲ್ಲಿ ಎಲ್ಲಾ ಪ್ರಾಣಿಗಳಿಗೂ ಆಹಾರ ಸಿಕ್ಕರೆ ಕಾಡು ಸಮೃದ್ಧವಾಗಿರುತ್ತದೆ. ಕಾಡು ಸಮೃದ್ಧವಾಗಿದೆಯೋ ಇಲ್ಲವೋ ಅನ್ನುವ ಅಂದಾಜು ಗಣತಿಯಲ್ಲಿ ಸಿಗುತ್ತದೆ. ಹುಲಿ ಹೆಜ್ಜೆ ಗುರುತು ಹುಡುಕುತ್ತಾ ಸಾಗುತ್ತಿದ್ದಾಗ ಇವೆಲ್ಲವೂ ಮನಸಿಗೆ ಬಂತು.

ಮೂರುದಿನಕಳೆಯುತ್ತಿದ್ದಂತೆಕಾಡಿನಭಯಕಡಿಮೆಯಾಗಿತ್ತು. ಹುಲಿ, ಚಿರತೆಗಳು ಮನುಷ್ಯರು ನಡೆದುಕೊಂಡು ಹೋಗುತ್ತಿದ್ದರೆ ಮನುಷ್ಯರ ವಾಸನೆಯಿಂದಲೇ ಬದಿಗೆ ಸರಿಯುತ್ತವೆ. ದಟ್ಟ ತ ಕಾಡಿನಲ್ಲಿ ಎಲ್ಲೋ ಸರಕ್ಕನೆ ಸರಿದು ಹೋಗುತ್ತವೆ.

ಗಾಳಿಯ ದಿಕ್ಕು ವಿರುದ್ಧವಾಗಿದ್ದರೆ ಮಾತ್ರ ಅವುಗಳಿಗೆ ವಾಸನೆ ಗೊತ್ತಾಗದೆ ಕಣ್ಣಿಗೆ ಬೀಳಬಹುದು.

ಕಣ್ಣಿಗೆ ಬಿದ್ದರೂ ಅವುಗಳು ತೊಂದರೆ ಗ ಮಾಡುವುದಿಲ್ಲ. ಯಾಕೆಂದರೆ ಮಾನವರಿಗಿಂತ ಜಾಸ್ತಿ ಭಯ ಈ

ಅವುಗಳಿಗೆ ಆಗಿರುತ್ತದೆ. ಯಾವಾಗ ಹೋರಾಟ ಮಾಡಲೇಬೇಕಾಗಿ ಬರುತ್ತದೋ ಆವಾಗ ಮಾತ್ರ ಅವು ದಾಳಿಗೆ

ಇಳಿಯುತ್ತದೆ. ಅದು ಹುಲಿ ನ್ಯಾಯ. 

ಕೊನೆಯ ದಿನ

ಅವತ್ತು ಕಾಡಲ್ಲಿ ಕೊನೆಯ ದಿನ. ಇವತ್ತಾದರೂ ಹುಲಿಯೋ ಚಿರತೆಯೋ ಕಣ್ಣಿಗೆ ಬೀಳಬಹುದು ಅನ್ನೋ ಆಸೆ.

ಕತ್ತಲಲ್ಲಿ ದಾರಿ ತಪಡಿಂತೆ ಹುಷಾರಾಗಿ ನಡೆದು ಹೋಗುತ್ತಿದ್ದರೆ ಪೊದೆಯಲ್ಲಿ ಯಾರೋ ನೋಡುತ್ತಿರುವಂತೆ ಭಾಸವಾಯಿತು. ಕಡೆಗೂ ಹೆದರಿಕೊಂಡಂತೆ ಗಣತಿ ಮುಗಿದುಹೋಯಿತು. ಆದರೆ ದೇವರು ಸಿಗಲಿಲ್ಲ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button