ಬೆರಗಿನ ಪಯಣಿಗರುಮ್ಯಾಜಿಕ್ ತಾಣಗಳುವಿಸ್ಮಯ ವಿಶ್ವಸ್ಫೂರ್ತಿ ಗಾಥೆ

ಅಂಡಮಾನಿನಲ್ಲಿ ಅಲೆಮಾರಿಗಳು: ಮಾಕೋನಹಳ್ಳಿ ವಿನಯ್ ಮಾಧವ

`ನೀನು ಇಲ್ಲಿಯವಳೇನಾ?’ 

ನೇರವಾಗಿ ಬಂದ ನನ್ನ ಪ್ರಶ್ನೆ ಶ್ರುತಿಗೆ ಇಷ್ಟವಾಗಲಿಲ್ಲ ಅಂತ ಕಾಣುತ್ತೆ. ನನ್ನನ್ನೊಮ್ಮೆ ಮತ್ತೆ ಅಂಬಿಕಾಳನ್ನೊಮ್ಮೆ ನೋಡಿದವಳು ಒಂದು ಕ್ಷಣ ಮೌನವಾದಳು.

ಮೋಟಾರು ದೋಣಿಯ ಮೂತಿಯ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತಿದ್ದ ಶ್ರುತಿ, ಚಿತ್ರಗಳಲ್ಲಿನ ಕಾಳಿಯಂತೆ ಕಾಣುತ್ತಿದ್ದಳು. ಆದರೆ ಬೆಂಕಿಯನ್ನೇನು ಉಗುಳದೆ, ಸೌಮ್ಯವಾಗೇ ಇದ್ದಳು. ಬಿಸಿಲಿಗೆ ಚರ್ಮ ಕಂದಿಹೋಗಿದೆ ಅಂತ ಹೇಳೋದ್ದಕ್ಕಿಂತ, ಒಂದು ಸುತ್ತು ಸುಟ್ಟುಹೋಗಿದೆ ಅಂತಾನೇ ಹೇಳಬಹುದಿತ್ತು. ಸಮುದ್ರದ ನೀರು ಮತ್ತೆ ಬಿಸಿಲಿನ ಹೊಡೆತಕ್ಕೆ, ಕೂದಲು ಬ್ಲೀಚ್ ಆಗಿ, ವಿದೇಶಿಯರ ಕೂದಲ ಬಣ್ಣಕ್ಕೆ ತಿರುಗಿತ್ತು. ಆದರೂ, ಮುಖ ಲಕ್ಷಣವಾಗೇ ಇದೆ ಅಂತ ಅನ್ನಿಸ್ತು.

ಶ್ರುತಿ

`ನಮ್ಮ ತಂದೆ ಕೊಲ್ಕತ್ತಾದವರು. ಅವರು ಸೈನ್ಯದಲ್ಲಿದ್ದುದ್ದರಿಂದ, ನಾನು ದೇಶದ ಎಲ್ಲಾ ಕಡೆ ಬೆಳೆದೆ. ಈಗ ಇಲ್ಲಿದ್ದೀನಿ. ಅದೊಂಥರಾ…. ನಾನು ಎಲ್ಲಿಯವಳೂ ಅಲ್ಲ, ಎಲ್ಲಾ ಕಡೆಗೂ ಸಲ್ಲುವವಳು,’ ಅಂತ ಮೌನ ಮುರಿದಳು.

`ನಿಂದೊಂದು ಫೋಟೋ ತೆಗೀಲಾ?’ ಅಂದಾಗ ಮತ್ತೆ ಗಲಿಬಿಲಿಗೊಂಡಳು. 

`ನಾನು ಸಾಧಾರಣವಾಗಿ ಮನುಷ್ಯರ ಫೋಟೋ ತೆಗೆಯೋದಿಲ್ಲ. ನಿಂದೊಂದು ತೆಗೀಬೇಕು ಅಂತ ಅನ್ನಿಸ್ತಿದೆ,’ ಅಂದೆ. ನನ್ನ ಜೊತೆ ದನಿಗೂಡಿಸಿದ ಅಂಬಿಕಾ, `ಅವರು ಯಾವಾಗಲೂ ಕಾಡು ಪ್ರಾಣಿಗಳ ಹಿಂದೆ ಇರ್ತಾರೆ. ನಿಂದೇ ಮೊದಲು ಅಂತ ಕಾಣುತ್ತೆ, ಮನುಷ್ಯರದ್ದು ತೆಗೀಬೇಕೂಂತ ಅನ್ನಿಸಿರೋದು,’ ಅಂದಾಗ, ಶ್ರುತಿ ನಕ್ಕು ಸುಮ್ಮನಾದಳು.

ನಾನು ಫೋಟೋ ತೆಗೆಯುವಾಗ ಮಾತು ಮುಂದುವರೆಸಿದ ಶ್ರುತಿ, `ನಾನೂ ಜರ್ನಲಿಸ್ಟ್ ಆಗಿದ್ದೆ,’ ಅಂತ ತಣ್ಣಗೆ ಹೇಳಿದಳು.

`ಹೌದಾ? ಎಲ್ಲಿ?’ ಅಂತ ಕೇಳಿದೆ.

`ಮೊದಲು ಡೆಲ್ಲಿಯಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಕೆಲಸ ಮಾಡಿದೆ. ಆಮೇಲೆ ಮುಂಬಯಿಗೆ ಬಂದೆ. ನನ್ನ ಕೊನೆ ಕೆಲಸ `ಕ್ಯೂ3’ ಅನ್ನೋ ಸಂಸ್ಥೆಗೆ. ಅಲ್ಲಿ ಕೆಲಸ ಮಾಡಿದ್ದು ಬರೀ ಹತ್ತು ತಿಂಗಳು. ನೆಟ್ಟಗೆ ಇಲ್ಲಿ ಬಂದೆ. ಎರಡು ವರ್ಷ ಆಯ್ತು… ನೆಮ್ಮದಿಯಾಗಿದ್ದೇನೆ,’ ಅಂದಳು.

`ಮನೆಯವರು ಏನೂ ಹೇಳಲಿಲ್ಲವಾ?’ ಅಂತ ಕೇಳಿದೆ.

`ನಾನು ಯಾರಿಗೂ ಕೇಳಲಿಲ್ಲ. `ಕ್ಯೂ3’ ಗೆ ಸೇರೋ ಮೊದಲೇ ಸ್ಕೂಬಾ ಡೈವಿಂಗ್ ಕೋರ್ಸ್ ಮಾಡಿದ್ದೆ. ಮುಂಬಯಿಯಲ್ಲಿ ಕೆಲಸ ಮಾಡುವಾಗ ಅಂಡಮಾನ್ ನನ್ನನ್ನು ತುಂಬಾ ಕಾಡುತ್ತಿತ್ತು. ಒಂದು ದಿನ ಯೋಚನೆ ಮಾಡಿದವಳೇ, ಇಲ್ಲಿಗೆ ಬಂದು ಸೇರಿಕೊಂಡೆ.

ಯಾವುದಕ್ಕೂ ಮನೆಯಿಂದ ದುಡ್ಡು ಕೇಳಲಿಲ್ಲ. ಮೊದಲು ಅಮ್ಮ ಸ್ವಲ್ಪ ಹೆದರಿದ್ದರು. ನಾನೇ ಸಮಾಧಾನ ಮಾಡಿದೆ. ಮುಂಬಯಿಗಿಂತ ಇದು ಎಷ್ಟೋ ಕ್ಷೇಮ ಅಂತ ಹೇಳಿದೆ. ಅಲ್ಲಿ ಯಾವಾಗ ಬೇಕಾದರೂ ಅಪಘಾತವಾಗಬಹುದು. ರಾತ್ರಿ ಹೆಣ್ಣು ಮಕ್ಕಳು ಹೊರಗೆ ಹೋಗುವಾಗ ಯೋಚನೆ ಮಾಡಬೇಕು. ಇಲ್ಲಿ ಅಂಥಹದ್ದೇನೂ ಇಲ್ಲ. ಎಷ್ಟು ಹೊತ್ತಿಗೆ, ಎಲ್ಲಿ ಬೇಕಾದ್ರೂ ಒಬ್ಬಳೇ ತಿರುಗುತ್ತೇನೆ,’ ಅಂದಳು.

ಸ್ಕೂಬಾ ಡೈವಿಂಗ್ ಮಾಡ್ಬೇಕೂ ಅಂತ ಮಗಳು ಸೃಷ್ಟಿ ಹೇಳಿದಾಗ, ನನಗೂ ಮಾಡಬೇಕು ಅಂತ ಅನ್ನಿಸಿತ್ತು. ಲಕ್ಷದ್ವೀಪದ ಬಗ್ಗೆ ಯೋಚನೆ ಮಾಡುವಾಗ, ಗೆಳೆಯ ಸುಧಾಕರ ಶಾಸ್ತ್ರಿ ಅಂಡಮಾನಿನಲ್ಲಿ ಮಾಡಲು ಸಲಹೆ ನೀಡಿದರು. ಸರಿ, ಒಂದು ವಾರದ ಮಟ್ಟಿಗೆ ನನ್ನ ಅಂಡಮಾನಿನ ಪ್ರವಾಸದ ಮೂರನೇ ದಿನದಂದು ಸ್ಕೂಬಾ ಡೈವಿಗೆ ಹೋದೆವು.

ಅಂಡಮಾನಿಗೆ ತಲುಪಿದ ಮೊದಲನೇ ದಿನ ಪೋರ್ಟ್ ಬ್ಲೇರ್ ನಲ್ಲೇ ಉಳಿದುಕೊಂಡೆವು. ಮಾರನೇ ದಿನ, ಹ್ಯಾವ್ ಲಾಕ್ ದ್ವೀಪಕ್ಕೆ ಬಂದು, ಬೇರ್ ಫುಟ್ ರೆಸಾರ್ಟ್ ನಲ್ಲಿ ಉಳಿದುಕೊಂಡೆವು. ಅಲ್ಲೇ ಗೊತ್ತಾಗಿದ್ದು ನಮಗೆ…. ಬೇರ್ ಫೂಟ್ ಸಮುದ್ರ ಕ್ರೀಡೆಗಳನ್ನು ನೆಡೆಸುವ ದೊಡ್ಡ ಸಂಸ್ಥೆ ಅಂತ. ಬೇರೆ ಸಣ್ಣ ಸಣ್ಣ ಸಂಸ್ಥೆಗಳಿದ್ದರೂ, ಬೇರ್ ಫೂಟ್ ತುಂಬಾನೇ ದೊಡ್ಡ ಸಂಸ್ಥೆ. 

ಸಾಯಂಕಾಲ ರೆಸಾರ್ಟ್ ಗೆ ಸಮೀರ್ ಮತ್ತು ಶ್ರುತಿ ಬಂದರು. ಯಾರಿಗೆ ಸಮುದ್ರ ಕ್ರೀಡೆಗಳಲ್ಲಿ ಆಸಕ್ತಿ ಇರುತ್ತೋ, ಅವರು ಅವರು ಹೆಸರು ನೊಂದಾಯಿಸಿಕೊಳ್ಳಬಹುದಿತ್ತು. ಮಾರನೇ ದಿನ ಬೆಳಗ್ಗೆ ಬೇರ್ ಫೂಟ್ ನ ಇನ್ನೊಂದು ಕೇಂದ್ರಕ್ಕೆ – ಸ್ಕೂಬಾ ಸೆಂಟರ್ ಗೆ ಹೋದಾಗ, ಸಮೀರ್ ಮತ್ತು ಶ್ರುತಿ ಕಾಯುತ್ತಿದ್ದರು. ಅವರ ಜೊತೆ ವಿದೇಶಿಯನಾದ ಮಾರ್ಕ್ ಮತ್ತೆ ಇನ್ನಿಬ್ಬರು ಹುಡುಗರೂ ಇದ್ದರು. ಒಟ್ಟು ಆರು ಜನ ನಾವು ಮತ್ತೆ ಏಳೆಂಟು ಜನ ನಮ್ಮ ತರಬೇತುದಾರರನ್ನು ಹೊತ್ತ ಮೋಟಾರು ದೋಣಿ ಸ್ಕೂಬಾ ಮಾಡುವ ಜಾಗದ ಕಡೆ ಹೊರಟಿತು. ನಮ್ಮ ಜೊತೆ ಇದ್ದವರೆಲ್ಲ ಹುಡುಗಾಟದ ವಯಸ್ಸಿನವರು ಅಂತ ಅನ್ನಿಸಿತ್ತು. ನಾವೆಲ್ಲ ದೋಣಿಯಲ್ಲಿ ನೆರಳು ಹುಡುಕಿ ಕುಳಿತಿದ್ದರೆ, ಇವರೆಲ್ಲ ಬಿಸಿಲನ್ನು ಹುಡುಕಿಕೊಂಡು ಹೋಗಿ ಕೂತಿದ್ದರು. ಶ್ರುತಿಯಂತೂ, ದೋಣಿಯ ಮೂತಿಯ ಮೇಲೆ ಚಕ್ಕಳ ಮಕ್ಕಳ ಹಾಕಿದವಳು, ಸ್ಕೂಬಾ ಮಾಡುವ ಜಾಗ ಬರುವವರೆಗೆ ಕೆಳಗಿಳಿಯಲಿಲ್ಲ.

ಮೊದಲನೇ ಸುತ್ತು ಸ್ಕೂಬಾಗೆ ನನ್ನ ಕುಟುಂಬವನ್ನು ಕರೆದುಕೊಂಡು ಹೋದರು. ಎರಡನೇ ಸುತ್ತಿಗೆ, ಇನ್ನೊಂದು ಜೋಡಿಯನ್ನು ಕರೆದುಕೊಂಡು ಹೋದರು. ಆಗ ದೋಣಿಯಲ್ಲಿ ಶ್ರುತಿ ನಮ್ಮ ಜೊತೆ ಉಳಿದುಕೊಂಡಳು.

`ನಾನೊಬ್ಬಳೇ ಅಲ್ಲ. ಇಲ್ಲಿ ಎಲ್ಲರೂ ಬೇರೆ ಬೇರೆ ಜೀವನಗಳಿಂದ ಬಂದವರು. ಇಲ್ಲಿಗೆ ಬರೋಕೆ ಮುಂಚೆ, ಸಮೀರ್ `ಓ ಆಂಡ್ ಎಂ’ ಅಡ್ವರ್ಟೈಸ್ ಮೆಂಟ್ ಕಂಪನಿಯಲ್ಲಿ, ಡೆಲ್ಲಿಯಲ್ಲಿ ಕೆಲಸ ಮಾಡುತ್ತಿದ್ದ. ಒಳ್ಳೆಯ ಹುದ್ದೆಯಲ್ಲೇ ಇದ್ದ. ಒಂದು ದಿನ ಎಲ್ಲವನ್ನೂ ಬಿಟ್ಟು ಇಲ್ಲಿಗೆ ಬಂದು ಕೆಲಸಕ್ಕೆ ಸೇರಿದ. ಹಾಗೇ, ಕೆಲವರು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರೂ ಇಲ್ಲಿಗೆ ಬಂದು ಸೇರಿದ್ದಾರೆ. ಮುಂಚೆಲ್ಲ ಎಲ್ಲಾದರೂ ಕೆಲಸ ಮಾಡುತ್ತಿದ್ದವರು ಮಾತ್ರ ಇಲ್ಲಿಗೆ ಬಂದು ಕೆಲಸಕ್ಕೆ ಸೇರುತ್ತಿದ್ದರು. ಈಗ ಬದಲಾಗಿದೆ. ಜನಗಳಿಗೆ ಸ್ಕೂಬಾ ಬಗ್ಗೆ ತಿಳುವಳಿಕೆ ಜಾಸ್ತಿಯಾಗಿದೆಯಲ್ಲ, ಕೆಲವರು ಕಾಲೇಜು ಮುಗಿಸಿ ನೇರವಾಗಿ ಬಂದು ಇಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಬೇರ್ ಫೂಟ್ ದೊಡ್ಡ ಸಂಸ್ಥೆ ಮತ್ತು ಈಗ ಅಂಡಮಾನಿನ ಡಿಗ್ಲಿಪುರ ಮತ್ತೆ ಚೆನ್ನೈನಲ್ಲೂ ಸ್ಕೂಬಾ ಶುರು ಮಾಡಿದ್ದಾರೆ,’ ಅಂದಳು.

ಸ್ಕೂಬಾಗೆ ಇತ್ತೀಚಿನವರೆಗೆ ಅಂಥಾ ಹೆಗ್ಗಳಿಕೆಯೇನೂ ಇರಲಿಲ್ಲ. ಆದರೆ, ಪ್ಯಾಡಿ ಸಂಸ್ಥೆ (Professional Association for Diving Instructors) ಅಸ್ತಿತ್ವಕ್ಕೆ ಬಂದ ಮೇಲೆ, ಅದರದೇ ಆದ ಒಂದು ಪ್ರಪಂಚ ಸೃಷ್ಟಿಯಾಗಿದೆ. ಪ್ರಪಂಚದ ಎಲ್ಲಾ ಸ್ಕೂಬಾ ಚಟುವಟಿಕೆಗಳನ್ನು ಗಮನಿಸುತ್ತಾ, ಅವುಗಳ ತರಬೇತುದಾರರಿಗೆ ಪ್ರಮಾಣೀಕರಣ ಮಾಡುತ್ತದೆ. ಹಾಗಾಗಿ, ಈಗ ಸ್ಕೂಬಾದಲ್ಲೂ ವೃತ್ತಿಪರತೆ ಶುರುವಾಗಿದೆ, ಅಂತ ಶ್ರುತಿ ಹೇಳಿದಳು.

ಆನಂತರ ಶ್ರುತಿ ಮತ್ತು ಅಂಬಿಕಾ ನೆಡುವೆ ಹೆಂಗಸರ ಮಾತುಕತೆ ಶುರುವಾಯ್ತು. `ನಾವು ವರ್ಷಕೊಮ್ಮೆ ಒಂದು ತಿಂಗಳು ಊರಿಗೆ ಹೋಗಿ ಬರುತ್ತೇವೆ. ಹಾಗೆ ಬರೋವಾಗ ಚರ್ಮ ಸ್ವಲ್ಪ ಬೆಳ್ಳಗಾಗಿ, ನಮ್ಮ ಕೂದಲು ಕಪ್ಪಾಗಿ ಬರುತ್ತೇವೆ. ಈ ಕೂದಲಿನ ಬಣ್ಣ ಇದೆಯಲ್ಲ, ಇದು ಸಮುದ್ರದ ನೀರು ಮತ್ತೆ ಇಲ್ಲಿನ ಬಿಸಿಲಿಗೆ ಬ್ಲೀಚ್ ಆಗಿರೋದು. ಅಲ್ಲಿ ಹೋದಾಗ ನಮ್ಮ ಚಿಕ್ಕಮ್ಮ ಎಲ್ಲ ಹೇಳ್ತಿರ್ತಾರೆ. ಈ ಥರ ಕೂದಲು ಮಾಡ್ಕೊಳ್ಳೋಕೆ ಇಲ್ಲಿನ ಹುಡುಗಿಯರು ಎಷ್ಟೆಲ್ಲ ಖರ್ಚು ಮಾಡ್ತಾರೆ.. ನಿಂಗೆ ಅದಾಗೇ ಬರುತ್ತೆ ಅಂತ. ಈ ಥರ ಬ್ಲೀಚ್ ಆಗೋದು ಕೂದಲಿಗೆ ಒಳ್ಳೆಯದಲ್ಲ.. ಒಂಥರಾ ಪುಡಿ ಪುಡಿಯಾಗುತ್ತೆ… ಏನೂ ಮಾಡೋಕ್ಕಾಗೋಲ್ಲ.’

ನಾನು ಮೊದಲನೇ ಸಲ ಸ್ಕೂಬಾಗೆ ಹೋದದ್ದು ಟರ್ಟಲ್ ಬೀಚಿನಲ್ಲಿ…. ಸಮೀರ್ ಜೊತೆ. ಎರಡನೇ ಸಲ ಸ್ಕೂಬಾಗೆ ಲೈಟ್ ಹೌಸ್ ಹತ್ತಿರ ಹೋದಾಗ, ನನ್ನನ್ನು ಶ್ರುತಿ ನೀರಿನೊಳಗೆ ಕರೆದುಕೊಂಡು ಹೋದಳು. ಮೊದಲನೇ ಸಲ ಹೋದಾಗ ಒಂದು ಆಕ್ಟೋಪಸ್ ನೋಡಿದ್ದೆ. ಈ ಸಲ, ಲಯನ್ ಫಿಶ್ ಮತ್ತು ದೊಡ್ಡ ದೊಡ್ಡ ಕಪ್ಪೆಚಿಪ್ಪುಗಳನ್ನೂ ನೋಡಿದೆ. ಮೇಲಕ್ಕೆ ಬರೋ ಹೊತ್ತಿಗೆ ಸುಸ್ತಾಗಿದ್ದೆ.

ಸ್ಕೂಬಾ ಮುಗಿಸಿ ಕ್ಯಾಂಪಿನ ಕಡೆಗೆ ವಾಪಾಸ್ ಹೋಗುವಾಗ ಶ್ರುತಿ ಮಾತಾಡಿದ್ದನ್ನೇ ಯೋಚಿಸುತ್ತಿದ್ದೆ. ಶ್ರುತಿ, ಸಮೀರ್, ಮಾರ್ಕ್ ಎಲ್ಲರೂ ಒಂಥರಾ ಅಲೆಮಾರಿಗಳಂತೆ ಕಾಣಿಸೋಕೆ ಶುರುವಾದರು. ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಪ್ರಪಂಚ ಕಂಡ ಜಿಪ್ಸಿಗಳು, ಓಶೋ ಮತ್ತು ಹರೇ ಕೃಷ್ಣ ಪಂತದಂತೆ, ಸ್ಕೂಬಾನೂ ಒಂದು  ಅಲೆಮಾರಿ ಜಗತ್ತು ಅನ್ನಿಸೋಕೆ ಶುರುವಾಯ್ತು.

ಆದರೆ, ಅದಕ್ಕೂ, ಇದಕ್ಕೂ ಒಂದು ವ್ಯತ್ಯಾಸವಿದೆ. ಆ ಪ್ರಪಂಚಗಳಿಗೆ ಹೋದವರು ಸಮಾಜವನ್ನು ಹೇಗೆ ತಿರಸ್ಕರಿಸಿದ್ದರೋ, ಸಮಾಜವೂ ಅವರನ್ನು ತಿರಸ್ಕರಿಸಿತ್ತು. ಅವರುಗಳ ಜೀವನ ಶೈಲಿಯಲ್ಲಿ ಶಿಸ್ತು ಅನ್ನೋದು ಇರಲಿಲ್ಲ ಮತ್ತು ಡ್ರಗ್ಸ್ ಅನ್ನೋದು ಜೀವನದ ಶೈಲಿ ಅನ್ನೋ ಆರೋಪ ಹೊತ್ತಿದ್ದರು.

ಆದರೆ, ಈ ಅಲೆಮಾರಿಗಳ ಶಿಸ್ತು ಮತ್ತು ಕಾರ್ಯಕ್ಷಮತೆಯನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ. ಇವರುಗಳು ಸಮಾಜವನ್ನೂ ತಿರಸ್ಕರಿಸಿಲ್ಲ, ಅಥವಾ ಸಮಾಜವೂ ಇವರನ್ನು ತಿರಸ್ಕರಿಸಲು ಕಾರಣಗಳಿಲ್ಲ. ವರ್ಷದಲ್ಲಿ ಒಂದೆರೆಡು ತಿಂಗಳು ಪ್ರವಾಸಿಗರಿಗೆ ಈ ದ್ವೀಪಗಳು ಮುಚ್ಚಿರುತ್ತವೆ. ಆಗ ಇವರೆಲ್ಲ ತಮ್ಮ ಕುಟುಂಬದ ಬಳಿ ಹೋಗಿ ಬರುತ್ತಾರೆ.

ಇವರೆಲ್ಲ ಸಮುದ್ರವನ್ನು ಅದರಷ್ಟೇ ಅಗಾಧವಾಗಿ ಪ್ರೀತಿಸ್ತಾರೆ ಅನ್ನೋದು ಗೊತ್ತಾಯ್ತು. ಬರುವ ಪ್ರವಾಸಿಗಳಿಗೆಲ್ಲ ಹೇಳೋದಿಷ್ಟೆ. `ಇದು ನಮ್ಮ ಮನೆ ಅಲ್ಲ. ನಾವಿಲ್ಲಿ ಅತಿಥಿಗಳು. ಇದು ಸಮುದ್ರ ಜೀವಿಗಳ ಮನೆ. ಅವುಗಳನ್ನು ಟೀಕಿಸಬೇಡಿ… ಅವುಗಳಿಗೆ ತೊಂದರೆ ಕೊಡಬೇಡಿ. ದಯವಿಟ್ಟು ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು ಸಮುದ್ರಕ್ಕೆ ಹಾಕಬೇಡಿ. ಅವುಗಳನ್ನು ನೋಡಿ ಸಂತೋಷ ಪಡಿ.’ ಅವರು ಹೇಳಿದಂತೆ ನೆಡೆದುಕೊಳ್ಳುತ್ತಿದ್ದರು ಕೂಡ.

ಅದಕ್ಕಿಂತ ಹೆಚ್ಚಾಗಿ, ಇವರೆಲ್ಲ ಒಂದು ವೃತ್ತಿಯಲ್ಲಿ ಇದ್ದು ತಮ್ಮ ಜೀವನವನ್ನು ತಾವೇ ದುಡಿದುಕೊಳ್ಳುತ್ತಾರೆ. ಆ ವೃತ್ತಿಗೆ ಒಂದು ಬಂಡವಾಳಶಾಹಿ ಮತ್ತು ಜಾಗತೀಕರಣದ ಸ್ಪರ್ಷವಿದೆ. ಹಾಗಾಗಿ, ಈ ಅಲೆಮಾರಿಗಳಿಗೆ ನಮ್ಮ ಪ್ರಮಾಣಿಕರಣ ಬೇಕಾಗೊಲ್ಲ ಅಂಥ ಅನ್ನಿಸ್ತು.

ಸ್ಕೂಬಾ ಸೆಂಟರ್ ಗೆ ವಾಪಾಸ್ ಬಂದಾಗ, ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೊರಡುವಾಗ, ನೂರೆಂಟು ಪೇಪರ್ ಗಳಿಗೆ ಸಹಿ ಹಾಕಿ, ಸಮೀರ್ ಮತ್ತು ಮಾರ್ಕ್ ಜೊತೆಯಲ್ಲಿ ಸ್ಕೂಬಾ ಮಾಡೋದರ ಬಗ್ಗೆ ತಿಳುವಳಿಕೆ ತೆಗೆದುಕೊಳ್ಳುವ ಗಡಿಬಿಡಿಯಲ್ಲಿ ಏನನ್ನೂ ಗಮನಿಸಿರಲಿಲ್ಲ. ಆದರೆ, ಈಗ ನೋಡಿದರೆ ಅದೊಂದು ಚಟುವಟಿಕೆಗಳ ಕೇಂದ್ರ. ನಾವು ಬಟ್ಟೆ ಬದಲಿಸುವ ಗಡಿಬಿಡಿಯಲ್ಲಿದ್ದಾಗ ನಮ್ಮ ಜೊತೆ ಬಂದ ಶ್ರುತಿ, ಸಮೀರ್ ಮತ್ತೆ ಇನ್ನೆರಡು ಹುಡುಗರು ನಿಧಾನವಾಗಿ ಗುಂಪಿನಲ್ಲಿ ಕರಗಿಹೋಗಿದ್ದರು.

ಆದರೆ, ಅಲ್ಲಿ ಎಷ್ಟೋ ಶ್ರುತಿ, ಸಮೀರ್, ಮಾರ್ಕ್ ಗಳು ಮತ್ತು ವಿದೇಶಿ ಹುಡುಗಿಯರು, ಯಂತ್ರಗಳಂತೆ ತಮ್ಮ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಅಲ್ಲಿನ ಸ್ಕೂಬಾ ತರಬೇತುದಾರರು ಮತ್ತು ಬೇರ್ ಫೂಟ್ ಸಂಸ್ಥೆಯ ಸಿಬ್ಬಂದಿ ಅಂತ ಗೊತ್ತಾಯ್ತು. ಜಾಗತೀಕರಣದ ಪ್ರಭಾವಕ್ಕೊಳಗಾಗಿ, ಕಾಂಕ್ರೀಟ್ ಕಾಡುಗಳಿಂದ ತಪ್ಪಿಸಿಕೊಂಡು, ಪ್ರಕೃತಿಯತ್ತ ಬಂದ ಇವರು, ಜಾಗತೀಕರಣದ ಪ್ರಭಾವಳಿಗಳಿಂದ ಹೊರ ಬರಲಾಗಿಲ್ಲ. ಬಂಡವಾಳಶಾಹಿಯಿಂದಲೂ ಬಿಡುಗಡೆಯಿಲ್ಲ. ಯಾಕೆಂದರೆ, ಇಲ್ಲಿ ಬಂಡವಾಳ ಹೂಡಿರುವವರೇ ಬೇರೆ ಮತ್ತು ಇವರೆಲ್ಲ ಆ ಬಂಡವಾಳದ ನೆರಳಲ್ಲೇ ಬದುಕುತ್ತಿರುವವರು. ಆದರೂ, ಸಂಬಳ, ಸವಲತ್ತು ಮತ್ತೆ ಕಾರ್ಪೊರೇಟ್ ಕಂಪನಿಯ ಕೆಲಸ ಅಂತ ಜೀವನವಿಡೀ ಕಂಪ್ಯೂಟರ್ ಮುಂದೆ ಕುಳಿತುಕೊಂಡು, ವೈಯಕ್ತಿಕ ಜೀವನದ ಬಗ್ಗೆ ನೂರೆಂಟು ಪ್ರಶ್ನೆಗಳನ್ನು ತಲೆ ಮತ್ತು ಹೃದಯದಲ್ಲಿ ತುಂಬಿಟ್ಟುಕೊಂಡು ತೊಳಲಾಡುತ್ತಾ, ಭವಿಷ್ಯದ ಅನಿಶ್ಚಿತತೆಯನ್ನು ಮರೆಯಲು ಜಾಗ ಹುಡುಕುತ್ತಿರುವ ಈಗಿನ ನಗರವಾಸಿಗಳಿಗಿಂತ ಎಷ್ಟೋ ವಾಸಿ ಅನ್ನಿಸ್ತು.

ತೇಜಸ್ವಿ ಒಮ್ಮೆ ಹೇಳಿದ ಮಾತು ನೆನಪಾಯ್ತು. ಜಾಗತೀಕರಣ ಮತ್ತೆ ಬಂಡವಾಳಶಾಹಿಗಳ ವಿರುದ್ದ ಹೋರಾಡೋದ್ರಲ್ಲಿ ಅರ್ಥವಿಲ್ಲ ಅಂತ ಅನ್ನಿಸುತ್ತೆ. ಅವು ಅನಿವಾರ್ಯವಾಗಿಬಿಟ್ಟಿವೆ. ನಾವು ಮತ್ತು ನಮ್ಮ ರೈತರು ಕಲಿಯಬೇಕಾದ್ದೇನೆಂದರೆ, ಈ ಜಾಗತೀಕರಣದ ಜಗತ್ತಿನಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು.

ಇವರೆಲ್ಲ ಅದನ್ನು ಪ್ರಾಯಶಃ ಜೀವನದಲ್ಲಿ ಅರ್ಥಮಾಡಿಕೊಂಡಿದ್ದಾರೆ ಅನ್ನಿಸ್ತು. ಇವರನ್ನೆಲ್ಲ ನಾನು ಒಂದೇಸಲಕ್ಕೆ ಒಪ್ಪಿಕೊಂಡಿದ್ದೆ.

ಶ್ರುತಿಯಂತೆ ಸುಟ್ಟುಹೋದ ಐದಾರು ಭಾರತೀಯ ಹುಡುಗಿಯರಿದ್ದರೆ, ಸಮೀರ್ ಮತ್ತು ಮಾರ್ಕ್ ನಂಥವರೂ ಬೇಕಾದಷ್ಟಿದ್ದರು. ಎಲ್ಲರೂ ಅವರವರ ಕೆಲಸಗಳಲ್ಲಿ ತೊಡಗಿದ್ದರು. ಯಾರೂ, ಯಾರನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಸ್ಕೂಬಾ ಮಾಡಬೇಕೆಂದು ಬಂದವರಿಗೆ ಅದರ ವಿಷಯ ವಿವರಿಸುತ್ತ, ತಮ್ಮ ಪಾಡಿಗೆ ತಾವಿದ್ದರು. ನಾನು ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಿದ್ದೇನೆ ಅನ್ನಿಸಿತು ಮತ್ತೆ ಇವರೆಲ್ಲರೂ ಆ ಲೋಕದ ಪಾತ್ರದಾರಿಗಳು ಅಂತ ಅನ್ನಿಸ್ತು.

ನಾನು ಸಮುದ್ರಕ್ಕೆ ಹೊರಡುವಾಗ, ಸಮೀರ್ ನಿಂದ ಟೋಪಿಯನ್ನು ಎರವಲು ಪಡೆದಿದ್ದೆ. ಬಟ್ಟೆ ಬದಲಿಸಿದ ನಂತರ, ಅದನ್ನು ವಾಪಾಸ್ ಕೊಡಲು ಅವನನ್ನು ಹುಡುಕುತ್ತಾ ಹೊರಟೆ. ಸಮೀರ್ ಸಿಗಲಿಲ್ಲ, ಆದರೆ, ಮಾರ್ಕ್ ಸಿಕ್ಕ.

ಟೋಪಿಯನ್ನು ಮಾರ್ಕ್ ಕೈಯಲ್ಲಿ ಕೊಟ್ಟು, ಸಮೀರ್ ಗೆ ತಲುಪಿಸುವಂತೆ ಹೇಳಿದೆ. ಹಾಗೇ, ನೀನು ಎಲ್ಲಿಯವನು ಅನ್ನೋ ಪ್ರಶ್ನೆ ನಾಲಿಗೆ ತುದಿಯವರೆಗೆ ಬಂತು. ಅಷ್ಟರಲ್ಲಿ ಶ್ರುತಿಯ ಉತ್ತರ ನೆನಪಾಯ್ತು. `ನಾನು ಎಲ್ಲಿಯವಳೂ ಅಲ್ಲ, ಆದರೆ ಎಲ್ಲಾ ಕಡೆಗೂ ಸಲ್ಲುವವಳು.’

ಪ್ರಶ್ನೆಯನ್ನು ಹಾಗೆ ನುಂಗಿ, ಸುಮ್ಮನೆ ನಕ್ಕು ಮಾರ್ಕ್ ಗೆ ಥ್ಯಾಂಕ್ಸ್ ಹೇಳಿ ವಾಪಾಸ್ಸಾದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. 

ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button