ಇವರ ದಾರಿಯೇ ಡಿಫರೆಂಟುಸ್ಫೂರ್ತಿ ಗಾಥೆ

ಚಹಾವೆಂಬ ಪರಮ ಮಿತ್ರ: ತನ್ನಿಷ್ಟದ ಪಯಣದ ಜತೆಗಾರನಿಗೆ ಸುಜಯ್ ಪಿ ಬರೆದ ಪತ್ರ

ಉದ್ದೋಉದ್ದದ ದಾರಿಯ ತುದಿಗೆ, ಒಂದು ಚಳಿಯ ಮುಂಜಾವು, ಸೂರ್ಯ ಮುಳುಗುವ ಹೊತ್ತು, ಗಾಳಿ ಬೀಸುವ ಬೆಟ್ಟದ ತುದಿ ಹೀಗೆ ಯಾವುದೋ ಒಂದು ಗಳಿಗೆ ಎಲ್ಲೋ ಒಂದು ಕಡೆ ಮನಸ್ಸು ಭಾರವಾದಾಗ ಒಂದು ತೊಟ್ಟು ಚಹಾ ಸಿಕ್ಕರೆ ಜೀವಕ್ಕೆ ಶಕ್ತಿ ಮದ್ದು ಸಿಕ್ಕ ಹಾಗೆ. ಇಡೀ ಪಯಣವನ್ನು ಲವಲವಿಕೆಯಿಂದ ಮುಗಿಯುವಂತೆ ಮಾಡಬಲ್ಲ ಚಹಾ ಎಂಬ ಆತ್ಮಬಂಧು ಕುರಿತು ಏಕಾಂಗಿ ಪಯಣಿಗ, ಹುಮ್ಮಸ್ಸಿನ ಬರಹಗಾರ, ಪುತ್ತೂರಿನ ಹುಡುಗ ಸುಜಯ್ ಪಿ ಬರೆದ ಪತ್ರದಂಥಾ ತಾಕುವ ಬರಹ.

ಪಯಣಗಳು ಅಮಲಿನಂತೆ. ಒಮ್ಮೆ ತಿರುಗಾಟದ ಹುಚ್ಚು ಹಿಡಿಯಿತೆಂದರೆ ಮುಗಿಯಿತು, ಸಮಯ ಸಿಕ್ಕಿತೆಂದರೆ ದೂರದೂರಿನ ದಾರಿಗಾಗಿ ಗೂಗಲ್ ಮಾಡಿಯೇ ಮಾಡುತ್ತೀರಿ. ಸಮಯ ಸಿಕ್ಕಿಲ್ಲವೆಂದರೆ ಹತ್ತಿರದ ಸ್ಥಳಗಳು ಇದ್ದೇ ಇದೆಯಲ್ಲ.

ಇಂತಿಪ್ಪ ಪಯಣಗಳಲ್ಲಿ ನನಗೆ ಏನಿಲ್ಲದಿದ್ದರೂ ನಡೆಯುತ್ತದೆ. ಆದರೆ ಚಹಾವೊಂದನ್ನು ಬಿಟ್ಟು.

ಅದು ಪ್ರವಾಸ ಅಂತ ಮಾತ್ರವಲ್ಲ ಎಲ್ಲಾದರೂ ಕೂಡಾ ಚಹಾದ ಸಣ್ಣ ಗೂಡಂಗಡಿ ಸಿಕ್ಕರೆ ಸಾಕು ಚಹಾ ಬೇಕೇ ಬೇಕು.

ಚಹಾ ಕುಡಿದರೆ ಏನೋ ಸಿಕ್ಕಂತೆ, ಕುಡಿಯದಿದ್ದರೆ ಏನೋ ಕಳೆದುಕೊಂಡಂತೆ. ಆ ‘ಏನೋ’ ಎಂಬುದು ಏನೆಂಬುದು ಚಹಾ ಕುಡಿವಾಗ ಮಾತ್ರ ನೆನಪಿದ್ದು ಚಹಾದ ಬಿಸಿಯ ಜೊತೆಗೇ ಮಾಯವಾಗಿಬಿಡುತ್ತದೆ. 

ಕುಡಿದ ಚಹಾಗಳ, ಚಹಾ ಮಾಡಿ ಕೊಟ್ಟ ಮುಖಗಳ  ನೆನಪುಗಳಿಗೆ ಲೆಕ್ಕವಿಡಲಾಗದು. ಅದು ಬೆಳಿಗ್ಗೆ ಐದರ ಚಳಿಗೆ ಶಿವಮೊಗ್ಗದ(shimoga) ಬಸ್ ಸ್ಟಾಂಡಿನ ಅಜ್ಜ ಕೊಟ್ಟ ಚಹಾ ಇರಬಹುದು, ಬಳ್ಳಾರಿಯ(bellary) ರೈಲ್ವೇ ಸ್ಟೇಷನಲ್ಲಿ ಕುಡಿದ ಅರ್ಧ ಬೆರಳಿನಷ್ಟೇ ಉದ್ದದ ಪೇಪರ್ ಗ್ಲಾಸಿನ ಚಹಾ ಇರಬಹುದು‌. ಗೆಳತಿಯೊಬ್ಬಳ ಜೊತೆಗೆ ಹಂಚಿ ಕುಡಿದ ಚಹಾ ನಿಮಗೆಂದೂ ಮರೆಯದು. ಮುಂಬಯಿಯ(mumbai) ಬೀದಿಗಳಲ್ಲಿ ಕಾಲಿಟ್ಟಲ್ಲೆಲ್ಲಾ ಸಿಗುವ ಶುಂಠಿ ಮಸಾಲೆಯ ಚಹಾಗಳಂತೂ ತಲೆನೋವಿಗೆ ಔಷಧಿಯಂತೆ ಕೆಲಸ ಮಾಡಬಲ್ಲದು.

ಮೈಸೂರಿನಲ್ಲಿ(mysore) ಒಂದೇ ಕೈಯಲ್ಲಿ ಚಹಾ ಮಾಡುವ ತಾತರೊಬ್ಬನ ಬಳಿ ಸಿಗುವ ಚಹಾಕ್ಕೆ “ಸಕ್ಕರೆ ಕಡಿಮೆ ಹಾಕಿ ಅಜ್ಜಾ…” ಅಂದರೂ ಅದರ ಸಿಹಿ ಕಡಿಮೆಯಾಗದು, ಕಾರಣ ನನಗಂತೂ ತಿಳಿಯದು. ಅವತ್ತೊಂದು ದಿನ ತಿರುಪತಿ(thirupathi) ಬೆಟ್ಟದ ತುದಿಯಲ್ಲಿ ಕುಡಿದ ಚಹಾ ಸುಟ್ಟ ನಾಲಿಗೆ ಸರಿಯಾಗಲು ಮೂರು ದಿನ ಬೇಕಾಗಿತ್ತು.

ಹಂಪಿಯಲ್ಲಿ(hampi) ಅಡ್ಡಾಡುವಾಗ ಚಹಾ ಮಾರುವ ಹುಡುಗನೋ ಹೆಂಗಸೋ ಕಂಡಾಗ ಇವರು ಹಂಪಿಯ ರಾಜರ ಕಾಲದಿಂದಲೂ ಇಲ್ಲೇ ಚಹಾ ಮಾರುತ್ತಲೇ ಇದ್ದರೇನೋ ಎಂದು ಅಸಂಬದ್ಧ ಆಲೋಚನೆಯೊಂದು ಬಂದು ನನ್ನೊಳಗೇ ನಕ್ಕಿದ್ದೂ ಇದೆ.

ಚಾರ್ಮಾಡಿ ಘಾಟಿಯ(charmadi ghat) ಏರು ಶುರುವಾಗುವಲ್ಲಿ ಇರುವ ಅಂಗಡಿಯೊಂದರಲ್ಲಿ ಸಿಗುವ ಚಹಾದ ಬಿಸಿ ಘಾಟಿ ಏರಿದ ಮೇಲೂ ಹಾಗೇ ಇದ್ದಿದ್ದೊಂದು ಬಿಸಿಯಾದ ಅನುಭವವೂ ಇದೆ.

ಕಾಲೇಜನಲ್ಲಿ ಇದ್ದಾಗ ಗೆಳೆಯರ ಜೊತೆ ಪುತ್ತೂರಿನಿಂದ ಮಡಿಕೇರಿಯ ಮುಗಿಲುಪೇಟೆಗೆ ಹೋಗಲು ಇದ್ದ ಒಂದೇ ಒಂದು ನೆಪವೆಂದರೆ ಬೆಟ್ಟದ ಮೇಲಿರುವ ಅಂಗಡಿಯಲ್ಲಿ ಸಿಗುವ ಚಹಾವೆಂಬ‌ ಅಚ್ಚರಿ ಎಂದರೆ ನಂಬುವಿರಾ.

ಪಯಣಗಳನ್ನು ಚೆಂದ ಮಾಡುವುದು ಯಾವುದು ಎಂಬ ಪ್ರಶ್ನೆಗೆ ನೂರಾರು ಕಾರಣಗಳು ಸಿಗಬಹುದು. ಆದರೆ ಚೆಂದ ಆಗದೇ ಇರುವ ಪಯಣ ಯಾವುದು ಎಂದು ಕೇಳಿದರೆ ಚಹಾ ಸಿಗದ ದಾರಿ ಎಂದಷ್ಟೇ ಹೇಳಬಹುದು. ಎಂತೆಂಥಾ ಸನ್ನಿವೇಶಗಳನ್ನೂ ಒಂದು ಚಹಾ ಕೆಲವು ಕ್ಷಣ ಮರೆಸಬಲ್ಲದು ಅನ್ನುವುದೇ ಅದರ ಶಕ್ತಿ. ಹಾಗಾಗಿಯೇ ಚಹಾ ಅನ್ನುವುದು ನಮ್ಮ ಆತ್ಮಬಂಧು. ಆ ಆತ್ಮಬಂಧುವಿಗೆ ನಮಸ್ಕಾರ.

Related Articles

Leave a Reply

Your email address will not be published. Required fields are marked *

Back to top button