Moreಇವರ ದಾರಿಯೇ ಡಿಫರೆಂಟುಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಮೇಘಾಲಯದಲ್ಲಿದೆ “ಶಿಳ್ಳೆಯ ಹಳ್ಳಿ”; ಇಲ್ಲಿ ಜನರನ್ನು ಹೆಸರಿನ ಬದಲು ವಿಶಿಷ್ಟ ರಾಗದಿಂದ ಕರೆಯಲಾಗುತ್ತದೆ.

ಭಾರತ ದೇಶವು ವಿವಿಧ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ದೇಶ. ಇಲ್ಲಿ ಪ್ರತಿ ಸ್ಥಳವೂ ತನ್ನದೇ ಆದ ವಿಶಿಷ್ಟ ಇತಿಹಾಸ, ಸಂಸ್ಕೃತಿಯನ್ನು ಹೊಂದಿದೆ.

ಅಂತೆಯೇ ಮೇಘಾಲಯದ (Meghalaya) ಹಳ್ಳಿಯೊಂದು ವಿಶಿಷ್ಟ ಸಂಸ್ಕೃತಿಗೆ ಹೆಸರಾಗಿದೆ. ಇಲ್ಲಿ ಹೆಸರಿನ ಬದಲು ಶಿಳ್ಳೆ ಅಥವಾ ವಿಶಿಷ್ಟ ರಾಗದಿಂದ ಜನರನ್ನು ಕರೆಯಲಾಗುತ್ತದೆ.

ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ (Shillong) ಸುಮಾರು 60 ಕಿಮೀ ದೂರದಲ್ಲಿರುವ ಕಾಂಗ್‌ಥಾಂಗ್ ಗ್ರಾಮವು (Kongthong village) ನೀವು ಭಾರತದಲ್ಲಿ ಕಾಣುವ ಅತ್ಯಂತ ಆಸಕ್ತಿದಾಯಕ ಸ್ಥಳಗಳಲ್ಲಿ ಒಂದಾಗಿದೆ.

ಈ ಗ್ರಾಮದಲ್ಲಿ ಸುಮಾರು 600 ಮಂದಿ ವಾಸಿಸುತ್ತಿದ್ದು, ಗ್ರಾಮವು ತನ್ನ ಸ್ವಯಂ-ಸಮರ್ಥನೀಯ ಆರ್ಥಿಕತೆ ಮತ್ತು ಸುಂದರ ನೈಸರ್ಗಿಕ ಸೌಂದರ್ಯದೊಂದಿಗೆ ಮೇಘಾಲಯದ ಅತ್ಯುತ್ತಮ ಪರಿಸರ ಪ್ರವಾಸೋದ್ಯಮ (Ecotourism) ತಾಣಗಳಲ್ಲಿ ಒಂದಾಗಿದೆ.

ಆದರೆ ಇದರ ಹೊರತಾಗಿ, ಈ ಹಳ್ಳಿ ವಿಶಿಷ್ಟ ಸಂಪ್ರದಾಯಕ್ಕೆ (Unique tradition) ಜನಪ್ರಿಯತೆ ಪಡೆದು ಕೊಂಡಿದೆ. ಇಲ್ಲಿಯ ಗ್ರಾಮದ ನಿವಾಸಿಗಳು ಹೆಸರುಗಳಿಗೆ ರಾಗಗಳನ್ನು ಹೊಂದಿದ್ದಾರೆ.

ವಿಸ್ಲಿಂಗ್ ವಿಲೇಜ್ (Whistling Village) ಎಂದೇ ಹೆಸರುವಾಸಿಯಾದ ಈ ಗ್ರಾಮದ ಜನರಿಗೆ ಈ ಸಂಪ್ರದಾಯ ಸರ್ವೇ ಸಾಮಾನ್ಯವಾಗಿದೆ.

ಇಲ್ಲಿ ಜನರಿಗೆ ಎರಡು ಹೆಸರಿವೆ ಒಂದು ಸಾಮಾನ್ಯ ಹೆಸರು ಮತ್ತು ಇನ್ನೊಂದು ರಾಗ (tunes) ಅಥವಾ ಶಿಳ್ಳೆ.

ಕಾಂಗ್‌ಥಾಂಗ್ ಗ್ರಾಮದಲ್ಲಿ ಯಾವುದೇ ಮಗು ಜನಿಸಿದಾಗ, ತಾಯಿ ಮಗುವಿಗೆ ವಿಶಿಷ್ಟವಾದ ರಾಗವನ್ನು ನೀಡುತ್ತಾಳೆ.

ತಾಯಿಯು ಮೊದಲ ಬಾರಿ ಮಗುವಿಗೆ ಜನ್ಮ ನೀಡಿದಾಗ ಯಾವ ಭಾವ ಅನುಭವಿಸುತ್ತಾಳೋ ಆ ರಾಗವನ್ನು ಆ ಮಗುವಿಗೆ ಇಡಲಾಗುತ್ತದೆ.

ಈ ರಾಗವೂ ಸಹ ಎರಡು ರೂಪ ಹೊಂದಿದೆ. ಒಂದು ಉದ್ದವಾದ ರಾಗ ಮತ್ತು ಎರಡನೆಯದು ಸಣ್ಣ ರಾಗ. ಈ ವಿಶಿಷ್ಟ ಸಂಪ್ರದಾಯಕ್ಕೆ ಎರಡು ಭಾವವಿದೆ.

ಮೊದಲನೆಯದು ತಾಯಿ ತನ್ನ ಮಗುವಿಗೆ ನೀಡುವ ರಾಗ ಮತ್ತು ಇನ್ನೊಂದು ಕುಟುಂಬದಲ್ಲಿ ಸಂವಹನ ನಡೆಸಲು ಬಳಸಲಾಗುವ ರಾಗ.ಇವರು ನಮ್ಮ ನಿಮ್ಮಂತಹ ಉಚ್ಚರಿಸಲು ಸುಲಭವಾದ ಹೆಸರುಗಳನ್ನು ಸಹ ಹೊಂದಿರುತ್ತಾರೆ.

ಈ ವಿಶಿಷ್ಟ ಸಂಪ್ರದಾಯವನ್ನು ಜಿಂಗ್‌ವಾಯ್ ಲಾಬೆ (Jingrwai Lawbei) ಎಂದು ಕರೆಯಲಾಗುತ್ತದೆ. ಅಂದರೆ, ಕುಲದ ಮೊದಲ ಮಹಿಳೆಯ ಹಾಡು.

ಕುತೂಹಲ ವಿಚಾರವೇನೆಂದರೆ ಇಲ್ಲಿ ಪ್ರತಿ ಮನೆಗೂ ವಿಭಿನ್ನ ರಾಗವಿದೆ. ರಾಗ ಅಥವಾ ವಿಸಿಲ್ (whistle) ಮೂಲಕ, ಇಲ್ಲಿ ವಾಸಿಸುವವರು ವ್ಯಕ್ತಿಯು ಯಾವ ಮನೆಯಿಂದ ಬಂದವರು ಎಂದು ತಿಳಿಯಬಹುದಂತೆ.

ಹಾಗಾಗಿ ಈ 600 ಮಂದಿಯ ಜೊತೆಗೆ 600 ರಾಗಗಳೂ ಸಹ ಇದೆ. ಕಾಂಗ್‌ಥಾಂಗ್ ಗ್ರಾಮದ ಜನರೂ ಈಗಲೂ ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ.

ವಿಶಿಷ್ಟ ಸಂಪ್ರದಾಯ ಆರಂಭವಾಗಿದ್ದು ಹೇಗೆ?

ಈ ಸಂಪ್ರದಾಯ ಆರಂಭವಾಗಿದ್ದು ಹೇಗೆ ಅನ್ನುವುದಕ್ಕೆ ಒಂದು ಕುತೂಹಲಕಾರಿ ಕಥೆ ಇದೆ. ಒಮ್ಮೆ ಇಬ್ಬರು ಸ್ನೇಹಿತರು ಎಲ್ಲೋ ಹೋಗುತ್ತಿದ್ದಾಗ, ಅವರ ಮೇಲೆ ಕೆಲವು ಗೂಂಡಾಗಳು ಹಲ್ಲೆ ಮಾಡಿದ್ದಾರೆ.

ಇವರಲ್ಲಿ ಒಬ್ಬನು ಗೂಂಡಾಗಳಿಂದ ತಪ್ಪಿಸಲು ಮರವನ್ನು ಹತ್ತಿ, ತನ್ನ ಸ್ನೇಹಿತರನ್ನು ಕರೆಯಲು ಕೆಲವು ಶಬ್ದಗಳನ್ನು ಮಾಡಿದನು.

ಅದನ್ನು ಸ್ನೇಹಿತನು ಅರ್ಥಮಾಡಿಕೊಂಡು ಅದರಂತೆ ನಡೆದನು. ಇದರಿಂದ ಇಬ್ಬರೂ ಸಹ ಗೂಂಡಾಗಳಿಂದ ತಪ್ಪಿಸಿಕೊಂಡರು. ಅಂದಿನಿಂದ ಈ ಸಂಪ್ರದಾಯವು ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ.

ಮೇಘಾಲಯದ ಈ ಅಪರೂಪದ ತಾಣಕ್ಕೆ ನೀವು ಒಮ್ಮೆ ಭೇಟಿ ನೀಡಲೇಬೇಕು.

ಅವರ ವಿಶಿಷ್ಟ ರಾಗಗಳನ್ನು (Unique Tunes) ಕೇಳಿ ಆ ಜನರ ಸಂಪ್ರದಾಯದ ಕುರಿತು ಮಾಹಿತಿ ಪಡಿಯಲೇಬೇಕು. ಅಂದ ಹಾಗೆ, ಈ ಗ್ರಾಮಕ್ಕೆ ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಭೇಟಿ ನೀಡಿದರೆ ಉತ್ತಮ. ಈ ಸಮಯದಲ್ಲಿ ಇಲ್ಲಿಯ ಪ್ರಕೃತಿ ಸೌಂದರ್ಯ ಅತ್ಯದ್ಭುತವಾಗಿರುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button