ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಕತೆಗಳು ಪಿಸುಗುಡುವ ಊರಿನಲ್ಲಿ: ಶ್ರೀರಂಗಪಟ್ಟಣದಲ್ಲಿ ಸಿಂಧೂ ಪ್ರದೀಪ್

ನಮ್ಮ ನಾಡು ಎಷ್ಟು ಶ್ರೀಮಂತವೆಂದರೆ ಕೆಲವೊಂದು ಊರಿಗೆ ಹೋದರೆ ಅಲ್ಲಿ ಎಲ್ಲೆಂದರಲ್ಲಿ ಕತೆಗಳೇ ಸಿಗುತ್ತವೆ. ಇತಿಹಾಸದ ಕತೆಗಳು, ದೇವರ ಕತೆಗಳು, ಯುದ್ಧದ ಕತೆಗಳು. ಅಂಥಾ ಒಂದು ಕತೆಗಳ ಊರು ಶ್ರೀರಂಗಪಟ್ಟಣ. ಮೈಸೂರು-ಬೆಂಗಳೂರು ಮಧ್ಯೆ ಇರುವ ಈ ಊರಿಗೆ ಭೇಟಿ ಕೊಟ್ಟ ಸಿಂಧೂ ಅಲ್ಲಿನ ಒಂದು ಚಿತ್ರಣವನ್ನು ರಸವತ್ತಾಗಿ ಬರೆದಿದ್ದಾರೆ. ಓದಿ ಮರುಳಾಗಿ.

ಕರ್ನಾಟಕದ ಪಾರಂಪರಿಕ ನಗರವೆಂದೇ ಖ್ಯಾತಿ ಹೊಂದಿರುವ ಊರು ಶ್ರೀರಂಗಪಟ್ಟಣ. ಬೆಂಗಳೂರು ಮೈಸೂರು ದಾರಿ ಮಧ್ಯೆ ಸಿಗುವ ಈ ಊರಿನ ಇತಿಹಾಸ ದೊಡ್ಡದು. ಈ ಊರಲ್ಲಿ ನೀವು ಎಲ್ಲೇ ಹೋದರೂ ಅಲ್ಲಿ ಕತೆಗಳು ಸಿಗುತ್ತವೆ. ನಿಜಕ್ಕೂ ನೋಡಿದರೆ ಇದು ಊರಲ್ಲ, ಕತೆಗಳ ಭಂಡಾರ.

ಶ್ರೀರಂಗಪಟ್ಟಣವೆಂಬ ಇತಿಹಾಸ ಕತೆಗಳ ಸಂಕಲನದಲ್ಲಿ ಒಂದು ಸ್ಥಳವಿದೆ. ಅದರ ಹೆಸರು ಗುಂಬಜ್-ಇ-ಶಾಹಿ (ಗುಂಬಜ್).(gumbaz e shahi srirangapatna) ಒಂದು ದಿನ ಶ್ರೀರಂಗಪಟ್ಟಣಕ್ಕೆ ಹೋದಾಗ ನಾವು ಅಲ್ಲಿಗೆ ಭೇಟಿ ಕೊಟ್ಟೆವು. ಹೇಳಿಕೇಳಿ ಇದೊಂದು ಸಮಾಧಿ ಸ್ಥಳ. ಇದನ್ನು ಟಿಪ್ಪು ಸುಲ್ತಾನ್ ತನ್ನ ತಂದೆ ಹೈದರ್ ಅಲಿ ಹಾಗೂ ತಾಯಿ ಉನ್ನಿಸಾ ಅವರ ಸಮಾಧಿಗಾಗಿ 1784ರಲ್ಲಿ ನಿರ್ಮಿಸಿದನು.. ಟಿಪ್ಪುವಿನ ಸಮಾಧಿ ಇರುವುದು ಕೂಡ ಅದೇ ಸ್ಥಳದಲ್ಲಿ.

ಈ ಗುಂಬಜ್ ಪರ್ಷಿಯನ್ ವಾಸ್ತು ಶೈಲಿಯ(persian architecture style) ಒಂದು ಉದಾಹರಣೆ ಆಗಿದೆ. ಇದನ್ನು ಕಪ್ಪು ಗ್ರಾನೈಟ್ ಹಾಗೂ ಅಂಫಿಬೊಲೈಟ್ ಕಲ್ಲುಗಳಿಂದ ನಿರ್ಮಿಸಿದ್ದಾರೆ. ಗುಂಬಜ್ ನ ಸುತ್ತ ನಾನಾ ಬಗೆಯ ಹೂವಿನ ಗಿಡ ಹಾಗೂ ಹಲವು ಬಗೆಯ ಮರಗಳಿಂದ ಕೂಡಿದ ಉದ್ಯಾನವನವೂ ಇದೆ.

ಇದರಲ್ಲಿ ಹಲವು ಹೂ, ಅಲಂಕಾರಿಕ ಗಿಡಗಳನ್ನು ಟಿಪ್ಪು ನಾನಾ ದೇಶಗಳಿಂದ ತಂದು ಇಲ್ಲಿ ನೆಟ್ಟನೆಂದು ಹೇಳಲಾಗುತ್ತದೆ.. ಹಾಗೆಯೇ ಇದರ ಸುತ್ತ ಇನ್ನೂ ಹಲವು ಟಿಪ್ಪು ಸುಲ್ತಾನನ ಸಂಬಂಧಿಕರ, ಸೈನಿಕರ ಸಮಾಧಿಯೂ ಇದೆ.

ಇತಿಹಾಸದ ಕತೆ

1792 ರ ಮೂರನೇ ಆಂಗ್ಲೋ ಮೈಸೂರು ಕದನದಲ್ಲಿ(anglo mysore war) ಬ್ರಿಟಿಷರು ಈ ಪ್ರದೇಶವನ್ನು ಆಕ್ರಮಿಸಿ ತನ್ನ ಸೈನಿಕರ ತಂಗುದಾಣವನ್ನಾಗಿ ಮಾಡಿದರು. ಹಲವು ಮರಗಳನ್ನು ಕಡಿದು ಅದರ ನೈಸರ್ಗಿಕ ಸೌಂದರ್ಯವನ್ನೇ ಹಾಳು ಮಾಡಿದರು.. ಹಲವು ವರ್ಷಗಳ ಕಾಲ ನಡೆದ ಕದನದಲ್ಲಿ 1799ರಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದನು.. ಎಲ್ಲವೂ ಬ್ರಿಟಿಷರ ಅಧೀನದಲ್ಲಿದ್ದ ದಿನಗಳು ಅವು. ಬ್ರಿಟಿಷ್ ಸರ್ಕಾರವು ಟಿಪ್ಪುವಿನ ದೇಹವನ್ನು ಎಲ್ಲಾ ರಾಜ ಮರ್ಯಾದೆಗಳೊಂದಿಗೆ ಮೆರವಣಿಗೆ ಮಾಡಿ ಅದೇ ಗುಂಬಜ್ ನಲ್ಲಿ ಸಮಾಧಿ ಮಾಡಲು ಅನುವು ಮಾಡಿ ಕೊಟ್ಟಿತು.. ಅಷ್ಟರಲ್ಲಾಗಲೇ ಗುಂಬಜ್ ನ ಹಲವು ಭಾಗಗಳು ಹಾನಿಗೊಳಗಾಗಿತ್ತು.. ಬ್ರಿಟಿಷ್ ಆಕ್ರಮಣಕಾರರು ಮೊದಲು ಇದ್ದ ಚಿನ್ನದ ಲೇಪನದ ಬಾಗಿಲನ್ನು ತೆಗೆದುಕೊಂಡು ಹೋದರು ಇದು ಲಂಡನ್ ನ ವಿಕ್ಟೋರಿಯ ವಸ್ತು ಸಂಗ್ರಹಾಲಯದಲ್ಲಿ ಈಗಲೂ ನೋಡಬಹುದು.

1855ರಲ್ಲಿ ಅಂದಿನ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಡಾಲ್ ಹೌಸಿ ಅವರು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಸ್ಮಾರಕಗಳ ನಿರ್ಲಕ್ಷತೆ ಕಂಡು ಸಾಕಷ್ಟು ಅಭಿವೃದ್ಧಿ ಪಡಿಸಿ ಮರ ಹಾಗೂ ದಂತದಿಂದ ನಿರ್ಮಿಸಿದ ಬಾಗಿಲನ್ನು ಉಡುಗೊರೆಯಾಗಿ ನೀಡಿದರು ಎನ್ನುತ್ತದೆ ಇತಿಹಾಸ. (ಪ್ರಸ್ತುತ ಇರುವ ಬಾಗಿಲು)..

ಈ ಐತಿಹಾಸಿಕ ಊರಿಗೆ ನೀವೊಮ್ಮೆ ಹೋಗಿ ಬನ್ನಿ. ಮೈಸೂರಿಗೆ ಹೋಗುವವರು ಪುರ್ಸೊತ್ತು ಮಾಡಿಕೊಂಡಾದರೂ ಇಲ್ಲಿಗೆ ಹೋಗಿಬನ್ನಿ. ಅಲ್ಲಿ ನೋಡಬೇಕಾದ ಸ್ಥಳಗಳು, ಕೇಳಬೇಕಾದ ಕಥೆಗಳು ತುಂಬಾ ಇದೆ. 

ಈ ಸ್ಥಳಕ್ಕೆ ಸಮೀಪ ಇರುವ ಸ್ಥಳಗಳು

*ಶ್ರೀರಂಗನಾಥಸ್ವಾಮಿ ದೇವಾಲಯ

*ಶ್ರೀರಂಗಪಟ್ಟಣದ ಕೋಟೆ

*ಕಾವೇರಿ ಅರ್ಕಾವತಿ ಸಂಗಮ

*ದರಿಯಾ ದೌಲತ್ ಉದ್ಯಾನವನ (ಟಿಪ್ಪು ಅರಮನೆ)

*ಜಮಾ ಮಸೀದಿ

*ನಿಮಿಷಾಂಭ ದೇವಿ ದೇವಾಲಯ ಹಾಗು ಇನ್ನೂ ಹಲವು..

Related Articles

Leave a Reply

Your email address will not be published. Required fields are marked *

Back to top button