ಕಾರು ಟೂರುತುಂಬಿದ ಮನೆದೂರ ತೀರ ಯಾನವಿಂಗಡಿಸದಸೂಪರ್ ಗ್ಯಾಂಗು

ಎರಡು ದಿನ ಮಲೆನಾಡ ದರ್ಶನ: ದಾವಣಗೆರೆ ಹುಡುಗಿ ಲಕ್ಷ್ಮೀ ಬರೆದ ಮಲೆನಾಡಿನ ಚಿತ್ರಗಳು

ಲಕ್ಷ್ಮೀ ಮೂಲತಃ ದಾವಣಗೆರೆಯವರು. ಸದ್ಯ ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ. ಒನ್ ಫೈನ್ ಡೇ ಮಲೆನಾಡ ದರ್ಶನ ಮಾಡುವ ಮನಸ್ಸಾಗಿ ಭದ್ರಾವತಿಯಲ್ಲಿರುವ ಅಣ್ಣನ ಮನೆಗೆ ಹೋಗಿ ಅಲ್ಲಿಂದ ಎರಡು ದಿನ ಮಲೆನಾಡು ಸುತ್ತಿ ಬಂದು ಬರೆದ ಮಲೆನಾಡಿನ ಚಿತ್ರಗಳು ಇಲ್ಲಿವೆ.    

ನಮ್ದು ಬಯಲು ಸೀಮೆ. ಆದ್ರೆ ನೀರಾವರಿ ಇರೋದ್ರಿಂದ ಹಸಿರು ಹಾಸಿಗೆ ಥರ ಕಾಣೋ ಗದ್ದೆ, ಬೆದ್ಲು ನೋಡೋಕ್ ಚೆಂದ. ಆಕಾಶ ತಂಕ ಹಬ್ಬಿರೋ ಎನ್ನುವಂತ ಕಾಡು ನೋಡ ಸೊಬಗು ಸಿಗೋದು ನಮ್ಮ ಪಕ್ಕದ ಮನಿ ಕಾಡು ಮಲೆನಾಡಿನಲ್ಲಿ!(malnad)

ಆಸೆಗೆ ಅಂಕುಶ ಇಲ್ಲ ನೋಡ್ರಿ.. ಮನಸಲ್ಲಿ ಮೂಡಿದ್ ತಕ್ಷಣ ಕಣ್ಣಲ್ಲಿ ಸವಿಬೇಕು. ಅಣ್ಣನಿಗೊಂದ್ ಕರೆ ಹಚ್ಚಿ, ಒಂದು ದಿನದ ಪಯಣಕ್ಕೆ ಸಿದ್ಧವಾದೆವು. 

ಇನ್ನೊಂದ್ ಗುಟ್ಟು.. ಮಲೆನಾಡಿನಲ್ಲಿ  ಸವಾರಿ ಮಾಡೋದೇ ಒಂದು ಮಜ(ಕಾರಿನಲ್ಲಿ ಹೋದರೆ ಕಾನನವು ಸಪೂರವಾಗಿ ಕಾಣೊಲ್ಲವೇನೋ ಎಂಬ ಅನ್ನಿಸಿಕೆ ). ಅದು ಪ್ರೀತಿಯ ಅಣ್ಣನ ಜೊತೆ! 

ಅಣ್ಣನ ಮನೆ ಭದ್ರಾವತಿ, ಅಲ್ಲಿಂದಲೇ ನಮ್ಮ ಪ್ರಯಾಣ ಮುಂಜಾನೆ 6 ಗಂಟೆಗೆ ಶುರುವಾಯಿತು. ಮಳೆಹನಿಗಳ ಜಿನುಗಿನಲಿ, ಸ್ವೆಟರ್ ಟೋಪಿಗಳ ಹೊದ್ದು, ಬ್ಯಾಗಿನೊಳಗೆ ದೊಡ್ಡಮ್ಮನ ರುಚಿಯಾದ ಬುತ್ತಿ, ನೀರಿನ ಬಾಟಲಿಗಳನ್ನು ತುಂಬಿ, ಮಾಸ್ಕನ್ನು ಮುಖಕ್ಕೆ ಒತ್ತಿ…ನಿಧಾನ, ಜಾಗ್ರತೆ, ಹುಷಾರು, ಅಲ್ಲಿ ಇಲ್ಲಿ ತಿನ್ಬೇಡಿ, ಹೊತ್ತು ಮುಳುಗೋ ಅಷ್ಟರಲ್ಲಿ ಮನೆಗೆ ಸೇರಿ ಎಂಬ ಹಾರೈಕೆಗಳನ್ನು ಕಿವಿಯಲ್ಲಿ ಬಚ್ಚಿಟ್ಟು ಮುಗುಳು ನಗುತ್ತ ತಲೆಯಾಡಿಸಿ ಹೊರಟೆವು  ….

ಮೊದಲು ಸಕ್ರೆಬೈಲು

ಶಿವಮೊಗ್ಗದಿಂದ 12 ಕಿ.ಮೀ ಸಾಗಿದರೆ ಕರುನಾಡ ದೊಡ್ಡ ಆನೆ ಬಿಡಾರ ‘ಸಕ್ಕರೆಬೈಲು’ ಸಿಗುತ್ತದೆ. ಬೆಳಗ್ಗೆ 10 ಗಂಟೆಯೊಳಗೆ ಹೋದರಷ್ಟೇ ಗಜಪಡೆಗಳ ದರ್ಶನ ಭಾಗ್ಯ. 

ದಾರಿ: ಭದ್ರಾವತಿ- ಶಿವಮೊಗ್ಗ- ಗಾಜನೂರು- ಸಕ್ಕರೆಬೈಲು(sakrebailu)

ಕಂಡದ್ದು: ಮುದ್ದು ಮರಿಯಾನೆಗಳ ಚೇಷ್ಟೆ, ತಾಯಿ ಆನೆಗಳನ್ನು ಗೋಳಾಡುವ ದೃಶ್ಯಗಳು, ಗಾಜನೂರಿನ ಹಿನ್ನೀರಲ್ಲಿ ಆನೆಗಳ ಸ್ನಾನ, ಆಟ-ತುಂಟಾಟಗಳು. ಆನೆಗಳ ಆಹಾರ ಪದ್ಧತಿ, ಕಾಡಿನ ಗುರುತುಗಳು, ಅವುಗಳ ಚಿಕಿತ್ಸೆ, ಮೊಂಡಾನೆಗಳನ್ನು ಪಳಗಿಸುವ ಕ್ರಮಗಳನ್ನೂ ಕೇಳಿ ತಿಳಿದುಕೊಂಡೆವು. ನನಗಂತೂ ತಿಳಿದಿರಲಿಲ್ಲ ತಾಯಿ ಆನೆ 2 ವರ್ಷಗಳ ಕಾಲ ಗರ್ಭ ಧರಿಸುತ್ತದೆ ಎಂದು!  

ಈ ದೃಶ್ಯವನ್ನು ನೋಡಿದಾಗ ಅನಿಸಿದ್ದು , ‘ನಾನು ನನ್ನ ತಂಗಿ ಪ್ರತೀ ಬಾರಿ ಕಿತ್ತಾಡಿದಾಗ, ಅಮ್ಮ ಬಂದು ಬಿಡಿಸುವ ಹಾಗೆ !’

ಕೇಳಿದ್ದು: ಪ್ರತೀ ವರ್ಷ ಇಲ್ಲಿ ಅಕ್ಟೋಬರ್ ತಿಂಗಳಲ್ಲಿ ಆನೆಗಳ ಹಬ್ಬ ನಡೆಯುತ್ತದೆ. ಬಣ್ಣಗಳಿಂದ ಅಲಂಕಾರ ಮಾಡುತ್ತಾರೆ. ಅವುಗಳಿಂದ ಮನೋರಂಜನಾ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಗಜಪಡೆಯ ಫುಟ್ಬಾಲ್, ಕ್ರಿಕೆಟ್, ಓಡಾಟಗಳನ್ನೂ ಸವಿಯಬಹುದು. ಸೂರಜ್, ಕರ್ಣ, ಬಾಲಣ್ಣ, ಸೋಮಣ್ಣ, ನೇತ್ರಾವತಿ,ಗೀತಾ ….ಹೀಗೆ ಗಜಗಳಿಗೆ ನಾಮಕರಣವಾಗಿತ್ತು.

ಏಕೋ ಹೊರಗೆ ಬಂದೊಡನೆ ಮನಸ್ಸಲ್ಲಿ ಸಂತಸ -ಬೇಸರ ಒಟ್ಟಿಗೆ ಮೂಡಿದವು. ಸಂತೋಷ ಏಕೆ ಅಂದರೆ ನಾನು ಎಂದೂ ಇಷ್ಟೊಂದು ಆನೆಗಳನ್ನು ಹತ್ತಿರದಿಂದ  ನೋಡಿಯೇ ಇರಲಿಲ್ಲ. ಬೇಸರವೇಕೆಂದರೆ, ಹಕ್ಕಿಯಾಗಿ ಸ್ವತಂತ್ರವಾಗಿ ಹಾರಬಯಸುವ ಮನುಷ್ಯ, ಇತರೆ ಜೀವಿಗಳಿಗೆ ಏಕೆ ಆ ಸ್ವಾತಂತ್ರವನ್ನು ಕಸಿದು ಕೊಳ್ಳುತ್ತಿರುವನು ಎಂದು? 

ಮುಂದಿನ ನಿಲ್ದಾಣ ಮಂಡಗದ್ದೆ ಪಕ್ಷಿಧಾಮ.

ಸಕ್ಕರೆಬೈಲು ಮಂಡಗದ್ದೆ ದಾರಿ: ಗಾಜನೂರಿಂದ 15 ಕಿ.ಮೀ, ಶಿವಮೊಗ್ಗದಿಂದ 32 ಕಿ.ಮೀ, ಬೆಂಗಳೂರಿನಿಂದ 345 ಕಿ.ಮೀ.

ಕಂಡದ್ದು: ಸುಮಾರು 1 ಎಕರೆ ಪ್ರದೇಶದ ನಡುಗಡ್ಡೆ, ನೀರಲ್ಲಿ ಕೆಲ ಮರಗಳು, ಮರಗಳ ಎಲೆಗಳ ರೀತಿ ವಿವಿಧ ಹಕ್ಕಿಗಳು ಸಿಂಗರಿಸಿದ್ದವು, ನೀರಿನಲ್ಲಿ ಹೆಸರೇ ತಿಳಿಯದ ಬಾತುಕೋಳಿಗಳು. ಸೈಬೀರಿಯನ್ ಸ್ಟೋಕ್ಸ್, ಫ್ಲ್ಯಾಮಿಂಗೋ, ಬಾತುಕೋಳಿಗಳು, ಕೋಗಿಲೆಗಳು, ಕಿಂಗ್ ಫಿಶರ್ ಗಳು ,ನೀಲಿ ಹಾಕ್ , ಹದ್ದುಗಳು, ಕೈಟ್, ಡಾರ್ಟರ್, ಎಗ್ರೆಟ್ , ಸ್ನೇಕ್ ಬರ್ಡ್ ಇತ್ಯಾದಿ.

ಕೇಳಿದ್ದು: ಪ್ರವಾಸೋದ್ಯಮ ಇಲಾಖೆಯಿಂದ(tourism) ಹಕ್ಕಿಗಳ ಸಫಾರಿ ಕೂಡ ಉಂಟು. ಜುಲೈ ತಿಂಗಳಿನಿಂದ ಸೆಪ್ಟೆಂಬರ್ ವರೆಗೂ ನಾವು ಹಕ್ಕಿಗಳನ್ನು ಕಾಣಬಹುದು. ಆಗಸ್ಟ್ ತಿಂಗಳಲ್ಲಿ ಸುಮಾರು 5000 ಪಕ್ಷಿಗಳು ತಮ್ಮ ವಂಶಾಭಿವೃದ್ಧಿಗೆ ಆಗಮಿಸುತ್ತವೆ. ತುಂಗೆಯ ಹೊರಹರಿವಿನ ನೀರೇ ಮಂಡಗದ್ದೆಗೆ(mandagadde) ಸೇರುತ್ತದೆ.

ಚಿಬ್ಬಲ ಗುಡ್ಡೆ ಶ್ರೀ ಸಿದ್ಧಿ ವಿನಾಯಕನ ಸನ್ನಿಧಾನ

ದಾರಿ: ಮಂಡಗದ್ದೆ- ತೀರ್ಥಹಳ್ಳಿ- ತುಂಗಾ ಸೇತುವೆ-  ಮೇಳಿಗೆ- ಚಿಬ್ಬಲ ಗುಡ್ಡೆ (ತೀರ್ಥಹಳ್ಳಿ ಇಂದ 10 ಕಿ.ಮೀ)

ತುಂಗಾ ಸೇತುವೆಯ ಮೇಲೆ ನಿಂತು ತುಂಗೆಯ ಹರಿವಿನ ಸೌಂದರ್ಯವನ್ನು ಸವಿದೆವು.

 ಚಿಬ್ಬಲಗುಡ್ಡೆ ಪುಣ್ಯಕ್ಷೇತ್ರವೂ ಆಗಿದೆ. ಜತೆಗೆ ಮತ್ಸ್ಯಧಾಮವೆಂದು ಕೂಡ ಕರೆಯುತ್ತಾರೆ.  

ಋಷಿಮುನಿಗಳು ತಪಸ್ಸು ಮಾಡಿ ಮಂತ್ರ ಸಿದ್ದಿ ಪಡೆದುದಕ್ಕಾಗಿ ಇಲ್ಲಿನ ಗಣಪತಿಗೆ (ಉದ್ಭವ ಮೂರ್ತಿಗೆ) ಸಿದ್ದಿವಿನಾಯಕ(chibbalagudde vinayaka temple) ಎಂಬ ಹೆಸರು ಬಂದಿದೆ. ಇಲ್ಲಿ ಭಗವಂತನ ಅಂಶವೇ ಆಗಿರುವ ಮೀನುಗಳಿಗೆ ಆಹಾರವನ್ನು ನೀಡಿ, ವಿನಾಯಕನಲ್ಲಿ ಪ್ರಾರ್ಥಿಸಿದರೆ ಸಕಲ ಚರ್ಮರೋಗಗಳು (ಚಿಬ್ಬುಗಳು) ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ಸ್ಥಳಕ್ಕೆ ಚಿಬ್ಬಲಗುಡ್ಡೆ ಎಂಬ ಹೆಸರು ರೂಢಿಯಲ್ಲಿದೆ.

ದೇವಸ್ಥಾನದ ಹಿಂದೆ ತುಂಗಾಧಾರೆ ಇದೆ.ಕೋತಿಗಳೂ ಇರುವರು. ಪುಟ್ಟ ಪುಟ್ಟ ನಡುಗಡ್ಡೆಗಳು, ದೊಡ್ಡ ದೊಡ್ಡ ಮೀನುಗಳು. ಮೆಟ್ಟಿಲ ಮೇಲೆ ಕುಳಿತು,ಮೀನಿನ ಕಚಗುಳಿಗಳು, ಅನೇಕ ಕಪಿಗಳು ನಮ್ಮನ್ನೇ ನೋಡುತ್ತಾ ಕುಳಿತಿದ್ದವು. (ತಮ್ಮ ಮಿತ್ರರು ಬಂದಿರುವರು ಎಂದು)… 

ಚಿಬ್ಬಲಗುಡ್ಡೆಯಿಂದ ಮೃಗವಧೆಗೆ 14 ಕಿಮಿ ದಾರಿ

ಈಶ್ವರನ ತಾಣವಿದು. ರಾಮ ಸೀತೆಯರು ಶಿವನಿಗೆ ಪೂಜಿಸಿದ ತಾಣವಿದು. ಇಲ್ಲಿಯೂ ಕೂಡ ದೇವಸ್ಥಾನದ ಹಿಂದೆ ತುಂಗೆಯ ತೊರೆಯ ಬಳುಕು ಬಹಳ ಸೊಗಸಾಗಿದೆ.

ಮೃಗವಧೆಯಿಂದ ಕುಪ್ಪಳ್ಳಿಗೆ 31 ಕಿ.ಮೀ

ತೀರ್ಥಹಳ್ಳಿಗೆ ಹೋಗಿ ಕುಪ್ಪಳ್ಳಿಗೆ ಹೋಗಿ ಬರಲಿಲ್ಲವೆಂದರೆ ಹೇಗೆ? 

ಕುವೆಂಪುರವರನ್ನು ಕಾಡಿನ ಕವಿ ಎಂದೇ ಕರೆಯುವವರುಂಟು. ಹಚ್ಚ ಹಸುರಿನ ಮಧ್ಯೆ, ಸುತ್ತಲೂ ಬೆಟ್ಟಗುಡ್ಡಗಳು, ಆಕಾಶವೇ ಕೈಗೆ ಎಟುಕುವುದೂ ಹಾಗಿದ್ದ ಮಳೆಯ ಮೋಡಗಳು. ಅವರ ಮನೆಯೊಳಗೆ ನಡೆದೆವು. ತೊಟ್ಟಿ ಮನೆಯ ಕುಶಲತೆ, ಅತ್ತ, ಕೆಂಪು ಹೆಂಚುಗಳು, ಅವರ ಕುಟುಂಬದ ವಿವರಗಳು, ಸಾಹಿತಿಗಳ ಜೊತೆ ಒಡನಾಟದ ಚಿತ್ರಪಟಗಳು, ಬಳಸುತ್ತಿದ್ದ ವಸ್ತುಗಳು, ಕೃಷಿಯ ಉಪಕರಣಗಳು, ಅವರ ಎಲ್ಲಾ ಕೃತಿಗಳು ಮನೆಯಲ್ಲಿ ಪ್ರದರ್ಶನಕ್ಕಿದ್ದವು. ಮನೆಯಿಂದ ಹೊರಬಂದಾಗ ಮನಸ್ಸು ಬಹಳ ತಿಳಿಯಾದ ಅನುಭವ. 

ಕುಪ್ಪಳ್ಳಿಯಿಂದ ಆಗುಂಬೆಗೆ 1 ಗಂಟೆಯ ಪ್ರಯಾಣ

ಆಗುಂಬೆ ಶ್ರೇಣಿಗಳೊಡನೆ ಸೂರ್ಯನ ಕಣ್ಣಾಮುಚ್ಚಾಲೆ, ಭಾಸ್ಕರನ ಈ ದಿನದ ವಿದಾಯ ಹೇಳಲು ಸಕಲ ಜೀವಿಗಳು ಸಿದ್ಧವಾಗಿದ್ದವು. ಹಕ್ಕಿಗಳು ಗೂಡು ಸೇರಿಕೊಳ್ಳಲು ಹಿಂಡು ಹಿಂಡಾಗಿ ಹೊರಟವು. ನಾವು ಕೂಡ ಕತ್ತಲಾಗುವುದರೊಳಗೆ ಬಂದ ದಾರಿಯಲ್ಲೇ ಗೂಡು ಸೇರಿಕೊಂಡೆವು.

ಹಿಂತಿರುಗುವಾಗ ಸಿಗುವ ಮೂಡುಬಾ ಸೇತುವೆಯಲ್ಲಿ ಮರೆಯದೆ ಫೋಟೋ ಕ್ಲಿಕ್ಕಿಸಬೇಕು! ಪ್ರಕೃತಿಯ ಸಂಧ್ಯಾರಾಧನೆ ಮಾಡಿ ಈ ದಿನದ ದೃಶ್ಯಗಳನ್ನು ನೆನಪಿನ ಪುಟಗಳಲ್ಲಿ ಸೇರಿಸಾಯ್ತು.

ಮರುದಿನ ಭದ್ರಾ ಅಣೆಕಟ್ಟಿಗೆ ಭೇಟಿ

ಭದ್ರಾ ಅಣೆಕಟ್ಟಿಗೆ ಬಿಆರ್ ಪಿ ಎಂದೂ ಕರೆಯುವದುಂಟು. ಮಳೆಗಾಲದಲ್ಲಿ ಹೋದರೆ ಹಾಲಿನ ಕೆನೆಗಳು ಉರುಳುತ್ತಿದೆಯೋ ಎಂಬಂತೆ ಭಾಸವಾಗುತ್ತದೆ. ಹಿನ್ನೀರಿಗೆ ಹೋಗುವ ಜಾಗವಿದೆ. ವಿಶಾಲವಾದ ಪ್ರದೇಶವದು. ಸರ್ ಎಂ ವಿಶ್ವೇಶ್ವರಯ್ಯ ನವರ ಕೈಚಳಕಕ್ಕೆ ಮರುಳಾಗದೆ ಇರಲಾರೆವು.

ಕರ್ನಾಟಕ ಸರ್ಕಾರದ ವತಿಯಿಂದ ಇಡೀ ಪ್ರದೇಶವನ್ನು ಸುತ್ತು ಹೊಡೆಸುವ ತಂಡವಿದೆ. ಉಳಿದುಕೊಳ್ಳಲು ರೆಸಾರ್ಟ್ ವ್ಯವಸ್ಥೆ ಕೂಡ ಇದೆ. ಅವರು ಕಾಡಿನೊಳಗೆ ದೋಣಿ, ದಂಡೆ, ವಸತಿ, ಫೈರ್ ಕ್ಯಾಂಪ್ ಸಜ್ಜಿಕೆ ಕೂಡ. ಅದನ್ನು ಉಪಯೋಗಿಸಿಕೊಳ್ಳಬಹುದು. ಒಂದು ಕಡೆ ಪುಟ್ಟ ಶಿವಾಲಯ, ಮತ್ತೊಂದು ಕಡೆ ಕ್ರಸ್ಟ್ ಗೇಟ್ ಗಳ  ಬಳಕೆಯನ್ನು, ನೀರಿನ ಸದುಪಯೋಗವನ್ನು ಸಿಬ್ಬಂದಿಯಿಂದ ಕೇಳಿ ತಿಳಿದುಕೊಂಡೆವು..

ಭದ್ರೆಯ  ‘ಉ’ ಆಕಾರದ ಬಳುಕನ್ನು ಗೊಂದಿ ಗುಡ್ಡದಿಂದಲೇ ನೋಡಬೇಕು. ಗುಡ್ಡದ ತುದಿಯಲ್ಲಿ ಶ್ರೀ ರಂಗನಾಥನ ಮತ್ತು ಕೂಗೋ ಮಲ್ಲಪ್ಪನ ಗುಡಿ ಇರುವುದು. ಭದ್ರಾವತಿ ಇಂದ ಸುಮಾರು 15 ಕಿ.ಲೋ  ದೂರವಷ್ಟೇ. ಗುಡ್ಡವನ್ನು ಏರಲು ವೃತ್ತಾಕಾರದ ದಾರಿ. ಗುಡ್ಡವನ್ನು ಹತ್ತುವ ಅಭ್ಯಾಸ ಇದ್ದರೆ, ಕಾಲ್ನಡಿಗೆಯ ದಾರಿ ಉಂಟು, ಏರಬಹುದು.

ಕೊನೆಗೆ ನಗರದ ಲಕ್ಷ್ಮೀನರಸಿಂಹನ ದರ್ಶನ ಮಾಡಿ ಹೊರಡುವ ಮಾತಾಯಿತು. ಕ್ರಿ.ಶ 13ನೇ ಶತಮಾನದಲ್ಲಿ ಹೊಯ್ಸಳರು ಬಳಪದ ಕಲ್ಲಿನ ಸುಂದರ ಲಕ್ಷ್ಮೀ ನರಸಿಂಹನ ದೇವಸ್ಥಾನವನ್ನು ದ್ರಾವಿಡ ಶೈಲಿಯಲ್ಲಿ ವಿನ್ಯಾಸ ಮಾಡಿದ್ಧಾರೆ. ಶಿವಮೊಗ್ಗದಿಂದ 20 ಕಿ.ಲೋ ದೂರವಷ್ಟೇ.

ದರ್ಶನ ಮಾಡಿ ಹೊರಗೆ ಬಂದಾಗ ಕತ್ತಲು ಕಟ್ಟಿತ್ತು. ನಮ್ಮ 1 ದಿನದ ಯೋಜನೆ 2 ದಿನವಾಯಿತು. ನಮ್ಮ ಪಯಣದ ಗುರಿ ಅಪೂರ್ಣ ಆದರೂ 2 ದಿನಗಳ ಕಾಲ ಕಾಡಿನ ಅನುಭವ-ಆನುಭಾವಿಕತೆಗೆ ಶರಣಾದೆವು. ತೇಜಸ್ವಿಯವರ ಮಾತಿನೊಡನೆ ನನ್ನ ಪಯಣದ ಕಥೆಯನ್ನು ಮುಗಿಸುತ್ತಿದ್ದೇನೆ-

‘ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’. ಪ್ರಯಾಣ ಯಾವುದೇ ಆಗಿರಲಿ, ಎಲ್ಲಿಗೇ ಆಗಿರಲಿ, ಆ ಪರಿಸರದ ಸ್ವಚ್ಛತೆ ನಮ್ಮ ಜವಾಬ್ದಾರಿಯಾಗಿರಬೇಕು.

Related Articles

One Comment

Leave a Reply

Your email address will not be published. Required fields are marked *

Back to top button