ದೂರ ತೀರ ಯಾನನಡಿಗೆ ನಮ್ಮ ಖುಷಿಗೆಮೋಟಾರ್ ಸೈಕಲ್ ಡೈರಿಸೂಪರ್ ಗ್ಯಾಂಗು

ಪುತ್ತೂರಿನಿಂದ ಎತ್ತಿನಭುಜಕ್ಕೆ ಬೈಕ್ ಸವಾರಿ: ಎಸ್ ಡಿಎಂ ಕಾಲೇಜಿನ ಬೈಕ್ ಪ್ರೇಮಿ ರಾಮ್ ಮೋಹನ್ ಭಟ್ ಬರಹ

ಚಿಕ್ಕಮಗಳೂರು ಜಿಲ್ಲೆ ಎತ್ತಿನಭುಜಕ್ಕೆ ಹೋಗಲು ನಾನಾ ದಾರಿಗಳಿವೆ. ಎಲ್ಲಿಂದ ಹೊರಡುತ್ತೀರಿ ಅನ್ನುವುದರ ಮೇಲೆ ದಾರಿ ತೀರ್ಮಾನ ಆಗುತ್ತದೆ. ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿ ರಾಮ್ ಮೋಹನ್ ಭಟ್ ತನ್ನ ಗೆಳೆಯ ಎಲ್ಲಪ್ಪರ ಜೊತೆ ಬೈಕಿನ ಜೊತೆ ಎತ್ತಿನಭುಜಕ್ಕೆ ಹೋಗಿ ಅಲ್ಲಿ ಚಾರಣ ಮಾಡಿ ಬಂದ ಕತೆ ಹೇಳಿದ್ದಾರೆ. ಹೇಗೆ ಹೋಗಬೇಕು ಅನ್ನುವುದರಿಂದ ಹಿಡಿದು ಚಾರಣದ ಹೇಗೆ ಮಾಡಬೇಕು ಅನ್ನುವುದರ ಸಂಪೂರ್ಣ ವಿವರ ಇಲ್ಲಿದೆ.       

ಸ್ವತಂತ್ರ ಅನ್ನೋ ರೆಕ್ಕೆ ಕಟ್ಟಿ ಮನ ಬಂದಲ್ಲಿಗೆ ವಲಸೆ ಹೋಗುವ ನನ್ನಂತ ಪ್ರವಾಸ ಪ್ರೇಮಿಗಳಿಗೆ ಈ ಲಾಕ್ ಡೌನ್ ಒಂದು ಪಂಜರದಂತೆ ಭಾಸವಾಗಿತ್ತು. ದಿಗ್ಬಂಧನ ಕೊಂಚ ಸಡಿಲವಾದ ಬಳಿಕ “ಎಲ್ಲಿಗಾದರೂ ಒಂದು ರೈಡ್ ಹೋಗಬೇಕಲ್ಲ” ಅಂತ ನಾನಂದಾಗ “ಎತ್ತಿನ ಭುಜ ಏರಿ ನೋಡೋಣ” ಅಂತ ಆರೋಹಣದ ಐಡಿಯಾ ಕೊಟ್ಟವ ಗೆಳೆಯ ಜಿತೇಶ. ಮೂಲೆಯಲ್ಲಿ ಕುಳಿತು ಧೂಳು ಹಿಡಿಸಿಕೊಂಡಿದ್ದ ಬೈಕಿಗೂ ಜಡ ಹಿಡಿದ ಮೈ,ಮನಸ್ಸಿಗೂ ಒಂದು ಪಯಣ ಅಗತ್ಯವಾಗಿತ್ತು.

ಪಶ್ಚಿಮಘಟ್ಟಗಳ(Western ghats) ಸೌಂದರ್ಯ ಎಂದಿಗೂ ಅವರ್ಣನೀಯ. ಕಾಂಕ್ರೀಟ್ ಕಾಡಿನಲ್ಲಿ ನೆಲೆಸಿರುವವರಿಗೆ ಮಲೆನಾಡಿನ ಆಕರ್ಷಣೆ ಹೇಳತೀರದು. ಚಿಕ್ಕಮಗಳೂರು ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಎತ್ತಿನ ಭುಜವೂ ಒಂದು.

ಎತ್ತಿನ ಭುಜ ಚಾರಣದ ವಿಚಾರ ಮನೆಯಲ್ಲಿ ಪ್ರಸ್ತಾಪಿಸಿದ್ದೇ ತಡ ಅತ್ತ ಅಡುಗೆ ಕೋಣೆಯಿಂದ “ಶುರುವಾಯ್ತು ಇವನ ತಿರ್ಗಾಟ. ಈ ಸಮಯದಲ್ಲಿ ಬೇಕ ಇದೆಲ್ಲ. ತಿರುಗೋದೇ ಕೆಲಸವ “ಎಂಬ ದನಿ. ತಂದೆಯ ಓರೆಗಣ್ಣಿನ ನೋಟ

ಹಾಗೂ ಮೌನದ ಉತ್ತರ. ಈ ಗ್ರೀನ್ ಸಿಗ್ನಲ್ ಗಳನ್ನು ಪಡೆದು ಪಯಣಕ್ಕೆ ಸಜ್ಜಾದೆವು.

ಬೆಳಗ್ಗೆ 8 ಗಂಟೆಗೆ ಅಮ್ಮ ಎಬ್ಬಿಸಿದರೂ ಏಳದೆ ಅತ್ತ ತಿರುವಿ ಮುಸುಕಿನೊಳಗೆ ಸೇರಿಕೊಳ್ಳೋ ಪೈಕಿಯವ ನಾನು, ಆದರೆ ರೈಡ್ ಎಂದಾಕ್ಷಣ  ಮುಂಜಾನೆ 5.30ಕ್ಕೆ ಅಲಾರಾಮಿನ ರಂಪಾಟಕ್ಕೇ ಎದ್ದು ನವೋಲ್ಲಾಸದಿಂದ ಹೊರಟು ನಿಂತೆ. 6.30ಕ್ಕೆ ಪುತ್ತೂರಿನಿಂದ ಹೊರಟ ನಮ್ಮ ಸವಾರಿ ಚಾರ್ಮಾಡಿ ಘಾಟಿಯ(charmadi ghat) ದೃಶ್ಯ ವೈಭೋಗವನ್ನು ಸವಿಯುತ್ತಾ ಪ್ರಕೃತಿ ಮಡಿಲಲ್ಲಿ ನಿಂತು ಫೋಟೋ ಕ್ಲಿಕ್ಕಿಸುತ್ತ ಕೊಟ್ಟಿಗೆ ಹಾರ ತಲುಪಿದ್ದು  9.30ಕ್ಕೆ.

ನಾವು ಸಾಗುವ ವೇಳೆ ಹಚ್ಚಹಸುರಿನ ಸುಂದರ ನೇಸರ ಮಂಜಿನ ಬಿಳಿ ಪರದೆಯೊಳಗೆ ಅವಿತು ಕುಳಿತಿತ್ತು. ಕೊಟ್ಟಿಗೆ ಹಾರದಲ್ಲಿ ಹಸಿದ ಹೊಟ್ಟೆಗೆ ತಿಂಡಿ ತಿನ್ನಿಸಿ, ನನಗೂ ಬಾಯಾರಿಕೆ ಆಗಿದೆ ಅಂತ ಬೊಬ್ಬೆ ಹೊಡೆದ ಬೈಕಿಗೆ ಪೆಟ್ರೋಲ್ ಕುಡಿಸಿ ಗುರಿಯೆಡೆಗೆ ಮುನ್ನುಗ್ಗಿದೆವು. ಮುಂದೆ ಹೋದಂತೆ ನೆಟ್ ವರ್ಕ್ ಕ್ಷೀಣಿಸುತ್ತಾ ಹೋಯಿತು, ಗೂಗಲ್ ದಾರಿದೀಪ(google maps) ಕೈಕೊಟ್ಟಿತು.

ಆ ವೇಳೆ ದಿಕ್ಕೇ ತೋಚದ ನಮಗೆ “ಹೀಗೆ 15 ಕಿ.ಮಿ. ಹೋಗಿ ಮೂಡಿಗೆರೆ ಸಿಗುತ್ತೆ. ಅಲ್ಲಿಂದ 20 ಕಿ. ಮಿ. ಅಷ್ಟೇ ಎತ್ತಿನ ಭುಜ ಬಂತು” ಅಂತ ಬೆರಳ ತುದಿಯಲ್ಲೇ ಎತ್ತಿನ ಭುಜ ತೋರಿಸಿ ಬಿಟ್ಟ ಒಬ್ಬ ಪುಣ್ಯಾತ್ಮ ದಾರಿಹೋಕ.

ತಿರುವುಮುರುವುಳ್ಳ ರಸ್ತೆಗಳ ಇಕ್ಕೆಲಗಳಲ್ಲಿ ಕಾಫಿ ಎಸ್ಟೇಟ್ ,ಬತ್ತದ ಗದ್ದೆಗಳು, ಎತ್ತ ನೋಡಿದರೂ ಕಣ್ಮನ ಸೆಳೆಯುವ

ಹಸಿರ ಶಿಖರ. ಇವೆಲ್ಲವೂ ಯಾತ್ರೆಯ ದಣಿವನ್ನು ಮರೆಸಿತ್ತು.ಸಂಶಯವೆನಿಸಿದಾಗ  ಹಾದಿ ಬದಿ ಸಿಕ್ಕವರಲ್ಲಿ ಮಾರ್ಗ

ಕೇಳಿ ಅಂತೂ ಇಂತೂ ಗುರಿಯೆಡೆಗೆ ಸಮೀಪಿಸಿದೆವು. ತಲೆ ಎತ್ತಿ ದೈತ್ಯಾಕಾರದಿ ಬೆಳೆದು ನಿಂತ ಬೆಟ್ಟವೇರುವುದು ಒಂದು ಸವಾಲೇ ಸರಿ. ಹೆಸರೇ ಹೇಳುವಂತೆ ಬೆಟ್ಟ ಎತ್ತಿನ ಭುಜದ ಆಕಾರದಲ್ಲಿದೆ.

ಬೆಟ್ಟದತ್ತ ಹೆಜ್ಜೆ ಹಾಕುವ ಮೊದಲು ಪಕ್ಕದಲ್ಲೇ ನೆಲೆಸಿರುವ ಭೈರವೇಶ್ವರನಿಗೆ ನಮಿಸಿ “ನಮ್ಮ ಚಾರಣ ಯಶಸ್ವಿಯಾಗಲಿ” ಎಂದು ಮನದಲ್ಲೇ ಪ್ರಾರ್ಥಿಸಿದೆವು. ಶ್ರೀ ನಾಣ್ಯ ಭೈರವೇಶ್ವರ ದೇವಾಲಯ 13ನೇ ಶತಮಾನದ ಹೊಯ್ಸಳರ ಕಾಲದ ದೇವಾಲಯ.

ಎತ್ತಿನ ಭುಜದ ತುತ್ತ ತುದಿಗೆ ತಲುಪಲು ಕಾಲ್ನಡಿಗೆಯಲ್ಲಿ 3 ಕಿ.ಮಿ. ಕ್ರಮಿಸಬೇಕು. ಕೊಂಚ ಮುಂದೆ ಸಾಗಿದಂತೆ ನಮಗೆ ಎದುರಾದದ್ದು ದಟ್ಟ ಕಾಡು, ಅದರ ಮಧ್ಯ ಪುಟ್ಟ ಕಾಲು ದಾರಿ. ಹಿರಿದಾದ ಮರ, ಅವುಗಳನ್ನ ಲಬಕ್ಕನೆ ಅಪ್ಪಿಕೊಂಡು

ತುದಿಯವರೆಗೂ ವ್ಯಾಪಿಸಿರುವ ಬಳ್ಳಿಗಳು, ಹಿಮ್ಮೇಳದಂತೆ ಹಕ್ಕಿಗಳ ನಿನಾದ, ಕಾಡದಾರಿಯಾಗಿ ಸಾಗುತ್ತಿದ್ದ ನಮ್ಮನ್ನು ಪಿಳಿ ಪಿಳಿ ಕಣ್ಣುಗಳಿಂದ “ಯಾವುದಪ್ಪಾ ಈ ಪ್ರಾಣಿ” ಎಂಬಂತೆ ದಿಟ್ಟಿಸುತ್ತಿದ್ದ ಪುಟ್ಟ ಅಳಿಲು ಮರಿಗಳು. ಈ ಸೊಬಗನ್ನು ಕಣ್ಣಲೇ ಸೆರೆ

ಹಿಡಿಯುತ್ತಾ ನಾನು ನಿಂತಲ್ಲೇ ಮೂಕನಾದೆ.

ನನ್ನೊಂದಿಗೆ ಬಂದ ಈ ಆಸಾಮಿ ಎಲ್ಲಪ್ಪ ಅಂತ ಗೆಳೆಯನೆಡೆಗೆ ಕಣ್ಣು ಹಾಯಿಸಿದರೆ ಆತ ಕಾಡುಪ್ರಾಣಿಯಂತೆ ಕಾಡಿನೊಳಕ್ಕೆ ನುಗ್ಗುತ್ತಿದ್ದ. ಆದರೆ ಒಂದು ವ್ಯತ್ಯಾಸ, ಇವನ ಕೈಯಲ್ಲಿ ಕ್ಯಾಮರಾ ಇತ್ತು. ಹಲವು ಸಾಹಸಗಳ ಫಲದಿಂದ ಸುಂದರ ಕ್ಷಣಗಳನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿದ ಉತ್ತಮ ಫೋಟೋಗ್ರಾಫರ್ ಈತ.

ದೊಡ್ಡ ಹೆಜ್ಜೆ ಇಡುತ್ತಾ ಮುಂದೆ ಸಾಗಿದಂತೆ ಕಾಡು ಮಾಯವಾಗಿ ಹುಲ್ಲು ಹಾಸಿದ ಹಾದಿ. ಹಿತಕರ ಹಾದಿ ಸವೆಸಿದಮೇಲೆ ಎತ್ತರದ ಬೆಟ್ಟವೇರುವ ಸವಾಲು. ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನೇರಿ ಸಾಗಬೇಕಿತ್ತು. ಇವೆಲ್ಲವನ್ನೂ ಕಂಡು “ನನ್ನಿಂದ ಸಾಧ್ಯವಿಲ್ಲ” ಅಂತ ನಾನಲ್ಲೇ ಕೂರುವುದೊಂದು ಬಾಕಿ. ನಾನು ಏದುಸಿರು ಬಿಡುತ್ತಾ ಬಂಡೆಗಳ ಮೇಲೆ ತೆವಳುತ್ತಿರುವಾಗ ಜಿತೇಶ ತುತ್ತ ತುದಿಗೇರಿಬಿಟ್ಟಿದ್ದ. ಇದರಿಂದ ನನ್ನ ಸ್ವಾಭಿಮಾನಕ್ಕೆ ಪೆಟ್ಟಾಯಿತೋ ಏನೋ, ಹಿಂತಿರುಗಿ ನೋಡದೆ ಥಟ್ಟನೆ ಬೆಟ್ಟವೇರಿದೆ. ಸುತ್ತಲಿನ ದೃಶ್ಯ ಕಣ್ಣಿಗೆ ಔತಣವೇ ಸರಿ. ಈ ಹಸಿರು ಸ್ವರ್ಗದ ಚೈತನ್ಯವನ್ನು ಪ್ರತ್ಯಕ್ಷವಾಗಿ ಕಂಡವನೇ ಬಲ್ಲ. ಚಾರ್ಮಾಡಿ ಘಾಟಿಯ ಒಂದು ಭಾಗವೇ ಎತ್ತಿನ ಭುಜ.ಸಮುದ್ರ ಮಟ್ಟಕ್ಕಿಂತ 4265 ಅಡಿ ಎತ್ತರದಲ್ಲಿದೆ ಎಂದು ತಿಳಿದುಕೊಂಡಿದ್ದೆ.

ದಣಿವು ನೀಗಿಸಲು ತಂಪು ಪಾನೀಯ, ಮುರುಕು ತಿಂಡಿಗಳ ಸೇವೆ ನಡೆಯಿತು.ಹಿಂತಿರುಗುವಾಗ ನಮ್ಮೊಳಗಿನ ಹುರುಪು ಮತ್ತಷ್ಟು ಹೆಚ್ಚಿತು. ಭೇಟಿ ನೀಡಿದ ಜಾಗದಲ್ಲಿ ನಿಮ್ಮ ಹೆಜ್ಜೆ ಗುರುತುಗಳಿರಲಿ, ಸುಂದರ ನೆನಪುಗಳು ಮನದಲಿ ಮಾಸದೆ ಛಾಪು ಮೂಡಲಿ.

ಜೂನ್ 5ರಂದು ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬೆ ಹೊಡೆಯೋ ಪರಿಸರ ಪ್ರೇಮಿಗಿಂತ ಕರ್ತವ್ಯ ಮರೆಯದೆ ಸ್ವಚ್ಛತೆ ಕಾಪಾಡುವಾತನೇ ಶ್ರೇಷ್ಠ. ಬರೀ ‘ವೀಕೆಂಡ್ ನೇಚರ್ ಲವರ್ಸ್’ ಗಳಾಗದೆ ಸದಾ ಹಸಿರಿನ ಸಂರಕ್ಷಣೆಗೆ ಕೈ ಜೋಡಿಸೋಣ.

Related Articles

Leave a Reply

Your email address will not be published. Required fields are marked *

Back to top button