ಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸಂಸ್ಕೃತಿ, ಪರಂಪರೆ

ಕಾರ್ಕಳಕ್ಕೆ ಹೋದವರು ನೋಡಬಹುದಾದ ಎರಡು ತಣ್ಣನೆ ತಾಣಗಳು: ಗೊಮ್ಮಟನ ಸನ್ನಿಧಿಯಲ್ಲಿ ನವ್ಯಶ್ರೀ ಶೆಟ್ಟಿ

ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಮಂಜುನಾಥ್ ಕಾಮತ್ ಸರ್ ಅವರ ಮದುವೆ ಆರತಕ್ಷತೆ ಹೋಗುವುದರ ಬಗ್ಗೆ ಕ್ಲಾಸಿನ ಬೆಸ್ಟ್ ಫ್ರೆಂಡ್ಸ್ ಗಳ ವಾಟ್ಸಾಪ್ ಗ್ರೂಪ್ ಸನ್ಯಾಸಿಲ್ ಅಸಲ್ಡೊಂಜಿ ಕುಸಲ್ ನಲ್ಲಿ ಚರ್ಚೆಗಳಾಗುತಿತ್ತು. ಕಾರ್ಕಳದಲ್ಲಿ ಆರತಕ್ಷತೆ ಇರುವುದರಿಂದ ಅಲ್ಲಿನ ಹತ್ತಿರದ ಯಾವುದಾದರೂ ಬೇರೆ ಪ್ರವಾಸಿ ಸ್ಥಳ ನೋಡಿಕೊಂಡು ಬರುವುದರ ಬಗ್ಗೆ ಕೂಡ ಚರ್ಚೆ ನಡೆಯುತ್ತಿತ್ತು. ಆದರೆ ಯಾವ ಸ್ಥಳ ಅನ್ನುವುದರ ಖಚಿತತೆ ಇರಲಿಲ್ಲ.

ಕಾರ್ಕಳ(namma karla) ವೆಂಕಟರಮಣ ದೇವಸ್ಥಾನದ ಸಮೀಪ ಹಾಲ್ ಒಂದರಲ್ಲಿ ಆರತಕ್ಷತೆ ಮುಗಿಸಿ ಹತ್ತಿರ ಇರುವ ಯಾವುದಾದರೂ ಸ್ಥಳಕ್ಕೆ ಹೋಗುವ ಎಂದು ಯೋಚಿಸುತ್ತಿದ್ದಾಗ ಗೂಗಲ್ ಫ್ರೆಂಡ್ ನಾವಿದ್ದ ಸ್ಥಳದ ಕೆಲವೇ ದೂರದಲ್ಲಿ ಕಾರ್ಕಳ ಬಾಹುಬಲಿ ಮೂರ್ತಿಯಿದೆ ಎಂದು ತೋರಿಸಿತು. ನಂತರ ನಮ್ಮ ಪಯಣ ಹೊರಟಿದ್ದು ಕಾರ್ಕಳ ಗೊಮ್ಮಟ ಮೂರ್ತಿ ಜೊತೆಗೆ ಚತುರ್ಮುಖ ಬಸದಿ ಕಾಣಲು.

ಗೊಮ್ಮಟ ಮೂರ್ತಿ

ಜೈನಕಾಶಿ(jain kashi) ಮೂಡಬಿದ್ರಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಊರಿದು ಕಾರ್ಕಳ. ಉಡುಪಿ ಜಿಲ್ಲೆಯ ಕಾರ್ಕಳದ ಕೊನೆಯ ಬಸ್ ನಿಲ್ದಾಣದಿಂದ ಗೊಮ್ಮಟ ಮೂರ್ತಿ ಇರುವ ಪ್ರದೇಶಕ್ಕೆ ಸುಮಾರು 2-3 ಕಿಮೀ. ಕಾರ್ಕಳ ಮುಲ್ಕಿ ಮಾರ್ಗವಾಗಿ ಹೋಗುವ ಬಸ್ ನಲ್ಲಿ ಹೋಗಬಹುದು. ಇಲ್ಲವೆಂದರೆ ಆಟೋದಲ್ಲಿ ಹೋಗುವುದಾದರೆ ಸುಮಾರು 30ರಿಂದ 50 ರು ಖರ್ಚಾಗಬಹುದು.

ಹೈಸ್ಕೂಲ್ ನಲ್ಲಿ ಶೈಕ್ಷಣಿಕ ಪ್ರವಾಸದಲ್ಲಿ ಶ್ರವಣ ಬೆಳಗೊಳದ ಗೊಮ್ಮಟ ಮೂರ್ತಿ ನೋಡಿದ್ದೆ. ಆದರೆ ಕಾರ್ಕಳದ ಬಾಹುಬಲಿ ನೋಡಿದ್ದು ಇದೇ ಮೊದಲು. 2 ಗಂಟೆಯ ಉರಿ ಬಿಸಿಲು, ಜೊತೆಗೆ ಮಧ್ಯಾಹ್ನ ಊಟ ತಿಂದಿದ್ದು ಕೆಲವರಿಗೆ ಕೊಂಚ ಜಾಸ್ತಿನೇ ಆಗಿತ್ತು, ನಿದ್ದೆ ಅಮಲು ಕೂಡ ಸೇರಿ ಕೊಂಡಿತ್ತು. ಆದರೂ ಬಾಹುಬಲಿ(bahubali) ಮೆಟ್ಟಿಲುಗಳನ್ನು ಹತ್ತುವ ಸಾಹಸಕ್ಕೆ ಉತ್ಸಾಹದಿಂದ  ಮುಂದಾದೆವು. ಕೈಯಲ್ಲಿ ನೀರಿನ ಬಾಟಲಿಗಳ ಜೊತೆಗೆ ಮೆಟ್ಟಿಲು ಹತ್ತಲು ಆರಂಭಿಸಿದೆವು. ಆರಂಭದಲ್ಲಿ ಹುರುಪಿನಿಂದ ಬೇಗ ಬೇಗ  ಹತ್ತಿದೆವು. ಆದರೆ  10 ಮೆಟ್ಟಿಲು ಹತ್ತುತ್ತಿದ್ದಂತೆ ಆರಂಭದ ಉತ್ಸಾಹ ಗಂಟು ಮೂಟೆ ಕಟ್ಟಿತ್ತು. ಕೊನೆಗೂ ಎಲ್ಲ ಮೆಟ್ಟಿಲುಗಳನ್ನು ಹತ್ತಿಕೊಂಡು ಅಲ್ಲಿನ ಆವರಣದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದುಕೊಂಡು ಬಾಹುಬಲಿ ಮೂರ್ತಿ ನೋಡಿದೆವು

ಕಾರ್ಕಳದ ಗೊಮ್ಮಟ(gommateshwara) ಮೂರ್ತಿ ಜಗತ್ತಿನ ಎರಡನೇ ಅತಿ ಎತ್ತರದ ಏಕಶಿಲಾ ಮೂರ್ತಿ. ಸುಮಾರು 42 ಅಡಿ ಎತ್ತರವಿದೆ.ಸುಮಾರು 200 ಮೆಟ್ಟಿಲುಗಳನ್ನು ಹತ್ತಿ ಬಾಹುಬಲಿ ದರ್ಶನ ಮಾಡಬೇಕು.

ಇಲ್ಲಿ ಕಾಣುವ ಬಾಹುಬಲಿ ತಪಸ್ಸಿಗೆ ನಿಂತಂತೆ ಇದೆ. ಜೋಲು ಕಿವಿ, ಗಿಣಿ ಮೂಗಿನ ಬಾಹುಬಲಿ ನೋಡಿದ ಮೇಲೆ ನಡೆದುಕೊಂಡು ಬಂದ ಆಯಾಸ ಮೆಲ್ಲನೆ ಹೋಗಿತ್ತು. ಇಲ್ಲಿನ ಗೊಮ್ಮಟ ಮೂರ್ತಿ ಸುಮಾರು 500 ವರ್ಷಕ್ಕೆ ಹಳೆಯದು. ಇಲ್ಲಿ ಪ್ರತಿ 12 ವರ್ಷಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ.

ಇಲ್ಲಿ ಸುತ್ತಮುತ್ತ ಹಸಿರಿನ ಗಿರಿ ಶಿಖರಗಳೇ ಕಣ್ಣಿಗೆ ಕಾಣುತ್ತದೆ. ಅನೇಕ ಪ್ರವಾಸಿಗರು ಬಂದು ಭೇಟಿ ನೀಡುವ ಕಾರ್ಕಳದ ಬಾಹುಬಲಿ ಮೂರ್ತಿ ನೋಡಿ ಅಲ್ಲಿ ಸ್ನೇಹಿತರ ಜೊತೆಗೆ ಚಂದದ ಫೋಟೋ ಕ್ಲಿಕ್ಕಿಸಿಕೊಂಡ ಅನಂತರ ಪಯಣ ಹೊರಟಿದ್ದು ಚತುರ್ಮುಖ ಬಸದಿ ಕಡೆಗೆ

ಚತುರ್ಮುಖ ಬಸದಿ

ಬಾಹುಬಲಿ ಮೂರ್ತಿ ನೋಡಲು ಹತ್ತುವ ಮೆಟ್ಟಿಲುಗಳ ಮೇಲೆ ನಿಂತುಕೊಂಡು ನೋಡಿದರೆ ಬಸದಿ ತೋರುತ್ತದೆ. ಬಾಹುಬಲಿ ಮೂರ್ತಿಯ ಕೊಂಚ ದೂರದಲ್ಲಿ ಚತುರ್ಮುಖ ಬಸದಿ ಇದೆ. ನಟರಾಜ ಸರ್ವೀಸ್ ನಲ್ಲಿ ಬಸದಿ ತಲುಪಿದೆವು.

ಅಲ್ಲಿನ ಸುತ್ತಿನ ಕಂಬಗಳು,ಅದರ ಮೇಲಿನ ಚಿತ್ತಾರಗಳು.ಅಂದಿನ ಕಾಲದ ಕಲೆಗಾರರ ಶ್ರೀಮಂತ ಪ್ರತಿಭೆಗಳಿಗೆ ಕೈಗನ್ನಡಿ .

ಬಸದಿಯ(chaturmukha basadi) ಒಳಗಡೆ ಹೋಗಿ ಸುತ್ತಲಿನ 4 ಬದಿಯಲ್ಲಿ ಇರುವ  ಪ್ರತಿಮೆ ನೋಡಿದೆವು. ಬಳಿಕ ಅಲ್ಲಿದ್ದ ಮುನಿಯೊಬ್ಬರು ಬಸದಿಯ ವಿಶೇಷತೆ ತಿಳಿಸಿದರು. ಅಲ್ಲಿನ ಕಂಬದಲ್ಲಿ ಇಟ್ಟಿರುವ ಕನ್ನಡಿಯಲ್ಲಿ ನೋಡಿದರೆ ಬಾಹುಬಲಿ ಮೂರ್ತಿ ಕಾಣಿಸುತ್ತದೆ. ಈ ಬಸದಿಯ ಬಗ್ಗೆ ನೀವು ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಅಂದರೆ ನಿಮಗೆ ಇಲ್ಲಿ ಬೇರೆ ಬೇರೆ ಭಾಷೆಯಲ್ಲಿ ಪುಸ್ತಕಗಳು ಲಭ್ಯವಿದೆ.

ಈ ಬಸದಿಯ ಗರ್ಭ ಗೃಹ ಪೀಠದಲ್ಲಿ ರಾಜ ಮಲ್ಲಿನಾಥ ಮತ್ತು ಮುನಿ ಸುವೃತನಾಥ ತೀರ್ಥಂಕರ ಒಟ್ಟು 12ಪ್ರತಿಮೆಗಳನ್ನು 3 ಮೂರ್ತಿಗಳು ಒಟ್ಟಾಗಿ  ನಿಂತ ಭಂಗಿಯಲ್ಲಿ 4 ದಿಕ್ಕುಗಳಿಗೆ ಮುಖ ಮಾಡಿ ಏಕಶಿಲಾ ಮೂರ್ತಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.24 ತೀರ್ಥಂಕರ ಮೂರ್ತಿಗಳೊಂದಿಗೆ ಯಕ್ಷಿ ಪದ್ಮಾವತಿಯ ಮೂರ್ತಿಯು ಇದೆ.ಇಲ್ಲಿನ ಚತುರ್ಮುಖ ಬಸದಿ 108  ಶಿಲಾ ಸ್ತಂಭಗಳ  ಮೇಲೆ ನಿಂತಿದೆ.ಬಸದಿಯ ಸುತ್ತಲ ಪ್ರಶಾಂತತೆಯ ವಾತಾವರಣ ಕೂಡ ಪ್ರವಾಸಿಗರಿಗೆ ಖುಷಿ ನೀಡುತ್ತದೆ

ನಮ್ಮ ಮೇಷ್ಟ್ರ ಆರತಕ್ಷತೆಗೆ ಕಾರ್ಕಳ ಹೋದವರಿಗೆ ಕಾರ್ಲದ ಸುಂದರ ತಾಣಗಳಾದ ಬಾಹುಬಲಿ ಹಾಗೂ ಚತುರ್ಮುಖ ಬಸದಿಯ ದರ್ಶನವಾಯಿತು.ನೀವು ಕೂಡ ಕಾರ್ಕಳ ಹೋದಾಗ ಇಲ್ಲಿಗೆ ಒಮ್ಮೆ ಭೇಟಿ ನೀಡಿ.

Related Articles

Leave a Reply

Your email address will not be published. Required fields are marked *

Back to top button