ಇವರ ದಾರಿಯೇ ಡಿಫರೆಂಟುಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವಸ್ಫೂರ್ತಿ ಗಾಥೆ

ರೋಡ್ ಸೈಡ್ ನಲ್ಲಿದ್ದ ನನ್ ದೇವ್ರು: ಮಾಕೋನಹಳ್ಳಿ ವಿನಯ ಮಾಧವ ಬರೆದ ಮಾಸ್ತಿಕಟ್ಟೆ ವನದೇವತೆಯ ಕತೆ

ಏನು ಕೊಲ್ಲೂರಿಗೆ ಹೋಗಿ ಬರೋದಷ್ಟೆನಾ?’ ಅಂತ ಅಮ್ಮನಿಗೆ ಕೇಳಿದೆ. ನನ್ನ ದೊಡ್ಡಮ್ಮನ ಮಗ ದೇವಿಪ್ರಸಾದ್, ಅಮೇರಿಕಾದಿಂದ ಬಂದು, ಕೊಲ್ಲೂರಿನಲ್ಲಿ ಚಂಡಿಕಾ ಹೋಮ ಮಾಡಿಸುತ್ತಿದ್ದ ಪ್ರಯುಕ್ತ, ನಾನು ಅಮ್ಮ, ಲಲಿತ ದೊಡ್ಡಮ್ಮ ಮತ್ತೆ ಸರೋಜಿನಿ ಚಿಕ್ಕಮ್ಮನಿಗೆ ಡ್ರೈವರ್ ಕೆಲಸ ಅನ್ನೋದು ನಿಕ್ಕಿಯಾಗಿತ್ತು.

`ಹೋಗ್ತಾ ಧರ್ಮಸ್ಥಳಕ್ಕೆ ಹೋಗೋಣ. ದೊಡ್ಡಮ್ಮ ಕಟೀಲು(katil) ನೋಡಿಲ್ಲವಂತೆ. ನಿನಗೆ ಟೈಮ್ ಇದ್ದರೆ, ಅದನ್ನೂ ನೋಡಿಕೊಂಡು ಹೋದರಾಯ್ತು,’ ಅಂತ ಅಮ್ಮ ಪೀಠಿಕೆ ಹಾಕಿದಾಗ, `ಸರಿ ಬಿಡು…. ಹಿಂದಿನ ದಿನವೇ ಹೊರಟು ಧರ್ಮಸ್ಥಳ, ಕಟೀಲು, ಉಡುಪಿ ನೋಡಿಕೊಂಡು, ಕುಂದಾಪುರದಲ್ಲಿ(kundapura) ಉಳಿಯೋಣ. ಅಲ್ಲಿವರೆಗೆ ಹೋದ ಮೇಲೆ, ಮುರುಡೇಶ್ವರಕ್ಕೂ ಹೋಗಿ, ಸಿಗಂದೂರು ಕಡೆಯಿಂದ ವಾಪಾಸ್ ಬಂದ್ರೆ ಆಯ್ತು ಬಿಡು,’ ಎಂದೆ.

ಅಮ್ಮನಾಗಲಿ, ಹೆಂಡತಿಯಾಗಲಿ ಅಥವಾ ಅತ್ತೆಯಾಗಲಿ, ಈ ಥರದ ತೀರ್ಥಯಾತ್ರೆ ಮನೆಯ ಹೆಂಗಸರಿಗೆ ಮಾಡಿಸಿದರೆ, ಒಂದಾರು ತಿಂಗಳು ನಮ್ಮ ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು, ಮನಸ್ಸಿಗೆ ಶಾಂತಿ ನೀಡುತ್ತಾರೆ ಎನ್ನುವುದು ನನ್ನ ವೈಯಕ್ತಿಕ ಅನುಭವ. ಮನಶಾಂತಿಗಾಗಿ ನಾನು ಡ್ರೈವರ್ ಕೆಲಸ ಮಾಡಲು ನಾನು ಸಿದ್ದನಾಗಿರುತ್ತೇನೆ. ಆದರೆ, ದೇವಸ್ಥಾನದಲ್ಲಿ ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಬೇಕು ಅಷ್ಟೆ.

ಕೊಲ್ಲೂರಿಗೆ(kollur) ಇನ್ನೇನು ಐದು ಕಿಲೋಮೀಟರ್ ದೂರ ಇದೆ ಎನ್ನುವಾಗ, ಎಡಗಡೆಗೆ ಜಂಗಲ್ ಲಾಡ್ಜಸ್(jungle lodges) ಮತ್ತು ರೆಸಾರ್ಟ್ಸ್ ಎನ್ನುವ ಬೋರ್ಡ್ ಕಾಣಿಸಿತು. `ಇವರನ್ನು ಹೋಮಕ್ಕೆ ಇಳಿಸಿ, ಇಲ್ಲಿಗೆ ಒಂದು ರೌಂಡ್ ಬಂದು ಹೋಗಬಹುದು,’ ಎಂದು ಮನಸ್ಸಲ್ಲೇ ಲೆಕ್ಕಾಚಾರ ಹಾಕುತ್ತಿದ್ದಂತೆ, ರಸ್ತೆಯ ಪಕ್ಕ ಕಾಡು ಸ್ವಲ್ಪ ಜಾಗ ತೆರೆದುಕೊಂಡಂತೆ ಮತ್ತು ಅದರೊಳಗೆ ವಿಭಿನ್ನ ಬಣ್ಣಗಳು ಕಂಡಂತಾಯಿತು. ಅದೇನು ಅಂತ ನೋಡುವುದರೊಳಗೆ ಕಾರು ಬಹಳಷ್ಟು ಮುಂದೆ ಹೋಗಿತ್ತು.

ಕೊಲ್ಲೂರು ದೇವಸ್ಥಾನದ ಬಳಿ ಎಲ್ಲರನ್ನೂ ಇಳಿಸಿ, ಹೋಮ ನಡೆಯುವ ಜಾಗದ ಬಗ್ಗೆ ವಿಚಾರಿಸಿ, ಕಾರು ನಿಲ್ಲಿಸಿ ಹತ್ತು ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿದವನೇ, ವಾಪಾಸ್ ಜಂಗಲ್ ಲಾಡ್ಜ್ ಕಡೆಗೆ ತಿರುಗಿಸಿದೆ. ಜಂಗಲ್ ಲಾಡ್ಜ್ ಗಿಂತ ಮುಂಚೆ, ಕಾಡು ತೆರೆದುಕೊಂಡಿದ್ದ ಜಾಗದ ಹತ್ತಿರ ಕಾರು ನಿಲ್ಲಿಸಿ ಅದೇನು ಅಂತ ನೋಡಿದೆ. ತಕ್ಷಣ ಅರ್ಥವಾಯಿತು…. ಅದೊಂದು ಕಾಡು ದೇವತೆಯ ಪೂಜಾಸ್ಥಳ ಅಂತ. ಸರಿ, ವಾಪಾಸ್ ಬರುವಾಗ ಬಂದರಾಯ್ತು, ಎಂದುಕೊಂಡು ಮುಂದಕ್ಕೆ ಹೋದೆ.

ಜಂಗಲ್ ಲಾಡ್ಜ್ ಇದ್ದ ಸ್ಥಳವೇನೋ ಅದ್ಭುತವಾಗಿತ್ತು. ಆದರೆ, ಅದನ್ನು ರಿಪೇರಿ ಮಾಡೋಕೆ ಅಂತ ಎಲ್ಲವನ್ನೂ ಬಿಚ್ಚಿ ಹಾಕಿದ್ದರು. ಒಂದೈದು ನಿಮಿಷ ಓಡಾಡಿ, ವಾಪಾಸ್ ಕಾಡು ದೇವತೆಯ ಸ್ಥಳಕ್ಕೆ ಬಂದೆ.

ಕಾರು ನಿಲ್ಲಿಸಿ, ರಸ್ತೆ ಪಕ್ಕದಲ್ಲಿ ನಿರ್ಮಿಸಿದ್ದ ಎರಡು ಮೆಟ್ಟಲುಗಳನ್ನು ಹತ್ತಿದಾಗಲೇ ಅದೆಷ್ಟು ಅಗಲವಿದೆ ಎಂಬುದು ಅರ್ಥವಾಗಿದ್ದು. ಒಂದು ಎಕರೆಗಿಂತ ಹೆಚ್ಚು ಅಗಲದಲ್ಲಿ ಬೆಳೆದಿದ್ದ ಪೊದೆಗಳನ್ನು ತೆಗೆದಿದ್ದರು. ಆದರೆ, ಮರಗಳು ಹಾಗೇ ಇದ್ದವು. ಮಧ್ಯದ ಮರದ ಕೆಳಗೆ ಕಲ್ಲಿನ ಅನೇಕ ವಿಗ್ರಹಗಳಿದ್ದರೆ, ಸುತ್ತ ಮುತ್ತಲಿನ ಮರಗಳ ಕೇಳಗೂ ಅಲ್ಲಲ್ಲಿ, ಒಂದೊಂದು ಕಲ್ಲಿನ ವಿಗ್ರಹಗಳಿದ್ದವು.

ಮಧ್ಯದ ಮರದ ಎದುರು ಸಣ್ಣ ಜಾಗದಲ್ಲಿ ಇಟ್ಟಿಗೆ ಹಾಕಲಾಗಿತ್ತು. ಅದರ ಎರಡೂ ಕಡೆ ಕಲ್ಲಿನ ಕಂಭಗಳನ್ನು ನೆಟ್ಟು, ಅವುಗಳ ಇಕ್ಕೆಲದಲ್ಲೂ ಗಂಟೆಗಳನ್ನು ಕಟ್ಟಲಾಗಿತ್ತು. ವಿಗ್ರಹಗಳ ಪಕ್ಕದಲ್ಲಿ, ಮರದ ಮನುಷ್ಯನ ಮೂರ್ತಿಗಳಿದ್ದವು. ಹಾಗೇ ಸುತ್ತ ನೋಡಿದಾಗ, ಕೆಲವು ಮರದ ತೊಟ್ಟಿಲುಗಳೂ ಇದ್ದವು. ಇವೆಲ್ಲವೂ ಆ ಒಂದು ಎಕರೆ ಜಾಗದಲ್ಲಿ ಹರಡಿಕೊಂಡಿದ್ದರಿಂದ, ನನಗೇನೂ ಅರ್ಥವಾಗಲಿಲ್ಲ.

ಅಲ್ಲೇ ನಿಂತಿದ್ದ ಪೂಜೆ ಮಾಡುವವರು, ನನ್ನನ್ನು ನೋಡಿ ಹತ್ತಿರ ಬಂದರು. `ಒಂದು ಸುತ್ತು ನೋಡಿಕೊಂಡು ಬರಬಹುದಾ?’ ಎಂದು ಕೇಳಿದೆ. `ಸರಿ’ ಅಂತ ನಕ್ಕು ಹಿಂದೆ ಹೋಗಿ, ತಮ್ಮ ಸ್ಥಾನದಲ್ಲಿ ಕುಳಿತರು.

ಸೂರ್ಯನ ನೆರಳು ನೆಲವನ್ನು ತಲುಪದಷ್ಟು ದಟ್ಟವಾಗಿ ಮರಗಳು ಬೆಳೆದಿದ್ದವು. ಹೆಚ್ಚೂ ಕಡಿಮೆ, ಎಲ್ಲಾ ಮರಗಳ ಕೆಳಗೂ ಕಲ್ಲುಗಳಿದ್ದವು. ಪ್ರತೀ ಮರದ ಹತ್ತಿರ ಒಂದು ಮರದ ವಿಗ್ರಹವೋ, ಇಲ್ಲೋ ತೊಟ್ಟಿಲೋ ಇರುತ್ತಿತ್ತು. ಕೆಲವು ವಿಗ್ರಹಗಳ ಹತ್ತಿರ ಮಾತ್ರ ಗಂಟೆಗಳನ್ನು ಕಟ್ಟಲಾಗಿತ್ತು. ಮಧ್ಯದ ಮರದ ಹಿಂದೆ ಹೋದಾಗ, ತೊಟ್ಟಿಲುಗಳ ರಾಶಿಯೇ ಬಿದ್ದಿತ್ತು. ಪೂರ್ತಿ ಒಂದು ಸುತ್ತು ಬಂದರೂ ನನಗೇನೂ ಅರ್ಥವಾಗಲಿಲ್ಲ.

ಇಟ್ಟಿಗೆ ಹಾಕಿದ್ದ ಜಾಗದ ಹತ್ತಿರ ಬಂದು, ವಿಗ್ರಹಗಳನ್ನು ನೋಡುತ್ತಾ ನಿಂತಾಗ, ಪೂಜೆ ಮಾಡುವವರು ಬಂದರು. ತಕ್ಷಣ ಕಾಣಿಕೆ ಹಾಕುತ್ತಿದ್ದ ತಟ್ಟೆಯನ್ನು ನೋಡಿದೆ. ಐವತ್ತು ಪೈಸೆ, ಒಂದು ರೂಪಾಯಿ, ಎರಡು ರೂಪಾಯಿ ಮತ್ತು ಐದು ರೂಪಾಯಿ ನಾಣ್ಯಗಳು ಮಾತ್ರ ಇದ್ದವು. ಗಂಧದ ಕಡ್ಡಿ ಬಿಟ್ಟರೆ, ಬೇರೆ ಆರತಿ ಮಾಡಿದ ಕುರುಹುಗಳಿರಲಿಲ್ಲ. ಸರಿ, ಪರ್ಸಿನಿಂದ ಐವತ್ತು ರೂಪಾಯಿ ನೋಟು ತೆಗೆದು, ಆ ತಟ್ಟೆಯಲ್ಲಿ ಹಾಕಿ, ನಮಸ್ಕಾರ ಮಾಡಿದೆ.

ಪೂಜೆ ಮಾಡುವವರು ನೋಟನ್ನು ತೆಗೆದುಕೊಂಡು, ತಟ್ಟೆಯಲ್ಲಿದ್ದ ಒಂದು ಹೂವು ಮತ್ತು ಎರಡು ಎಲೆಗಳನ್ನು ತೆಗೆದು ವಿಗ್ರಹದ ಮೇಲೆ ಇಟ್ಟರು. ವಿಗ್ರಹದ ಮೇಲಿಂದ ಒಂದು ಹೂವು ಮತ್ತು ಎರಡು ಎಲೆ ತೆಗೆದು ನನ್ನ ಕೈಗೆ ಕೊಟ್ಟು, ನನ್ನ ಹಣೆಗೆ ಕುಂಕುಮ ಹಚ್ಚಿ, `ನಿಮ್ಮ ಹರಕೆ ಏನಿದೆ?’ ಎಂದು ಕೇಳಿದರು.

ತಬ್ಬಿಬ್ಬಾದ ನಾನು, `ಇಲ್ಲ… ಕೊಲ್ಲೂರಿಗೆ ಹೋಗೋವಾಗ ಇದನ್ನು ನೋಡಿದೆ. ನೋಡಿಕೊಂಡು ಹೋಗೋಣಾ ಅಂತ ಬಂದೆ. ಯಾವ ದೇವರಿದು?’ ಎಂದು ಕೇಳಿದೆ.

ಮುಗುಳ್ನಕ್ಕ ಪೂಜೆ ಮಾಡುವವರು, `ಇದು ಮಾಸ್ತಿಕಟ್ಟೆ ವನ ದೇವತೆ. ಈ ಕಾಡಿನ ದೇವಿ. ತುಂಬಾ ಶಕ್ತಿಶಾಲಿ ದೇವರು. ಕೊಲ್ಲೂರು ದೇವಸ್ಥಾನಕ್ಕೆ ಬರೋ ಹಾಗೆ ಹೊರಗಡೆಯವರು ಇಲ್ಲಿಗೆ ಬರೋದಿಲ್ಲ. ಆದರೆ, ಇಲ್ಲಿ ಸುತ್ತ ಮುತ್ತಲಿನ ಜನಗಳಿಗೆ ಈ ದೇವಿ ಬಹಳ ಶ್ರೇಷ್ಠ,’ ಎಂದರು.

`ಇದೇನು? ಇಷ್ಟೊಂದು ಗಂಟೆಗಳನ್ನು ಕಟ್ಟಿದ್ದೀರಲ್ಲ?’ ಎಂದೆ.

`ನಾವಲ್ಲ…. ಇದು ಹರಕೆ ತೀರಿಸುವವರು ಬಂದು ಕಟ್ಟುವುದು. ಆ ತೊಟ್ಟಿಲುಗಳು ಮತ್ತೆ ಈ ಮರದ ಗೊಂಬೆಗಳಿವೆಯಲ್ಲ… ಇವೆಲ್ಲ ಹರಕೆ ತೀರಿಸುವುವವರು ಬಂದು ಕಟ್ಟುವುದು. ನಾವು ಇದನ್ನು ಮುಟ್ಟುವ ಹಾಗಿಲ್ಲ,’ ಎಂದರು.

`ಏನು ಹರಕೆ?’ ಎಂದೆ.

`ಈ ಕಡೆಯ ಜನಗಳಿಗೆ ಎರಡು ಬಗೆಯ ಸಮಸ್ಯೆ ಇರುತ್ತದೆ. ಮೊದಲನೆಯದು, ಮಕ್ಕಳಾಗದೇ ಇರುವುದು. ಅಂಥವರು ಬಂದು, ಇಲ್ಲಿಗೆ ಹರಕೆ ಕಟ್ಟಿ ಹೋಗುತ್ತಾರೆ. ಅದು ಒಂದು ವೀಳ್ಯದೆಲೆ ಮೇಲೆ, ಒಂದು ನಾಣ್ಯ ಇಟ್ಟು, ಮಕ್ಕಳಾದರೆ ಭಗವತಿ ದೇವಿಗೆ ತೊಟ್ಟಿಲು ಕಟ್ಟುತ್ತೇವೆ ಎಂದು. ಮಕ್ಕಳಾದ ಮೇಲೆ, ಇಲ್ಲಿಗೆ ಒಂದು ಮರದ ತೊಟ್ಟಿಲನ್ನು ತಂದು, ಅದನ್ನು ಮರಕ್ಕೆ ಕಟ್ಟಿ, ತೂಗಿ, ಆಮೇಲೆ ಅದನ್ನು ಬಿಚ್ಚಿ ಇಲ್ಲೇ ಬಿಟ್ಟು ಹೋಗುತ್ತಾರೆ. ಹಾಗಾಗಿ ಇಲ್ಲಿ ಇಷ್ಟೊಂದು ತೊಟ್ಟಿಲುಗಳನ್ನು ನೀವು ಕಾಣುವುದು.’

`ಎರಡನೇ ಹರಕೆ ಎಂದರೆ, ಇಲ್ಲಿನ ಹೆಚ್ಚಿನ ಜನರು ಮೀನುಗಾರಿಕೆಯಲ್ಲಿ ಇರ್ತಾರಲ್ಲ? ಅವರು. ಕೆಲವೊಂದು ಸಲ ಸಮುದ್ರಕ್ಕೆ ಮೀನು ಹಿಡಿಯಲು ಹೋದವರು ವಾಪಾಸ್ ಬರುವುದಿಲ್ಲ. ಒಂದು ದಿನದ ಮೇಲೆ ಕಳೆದರೆ, ಅವರ ಮನೆಯವರು ಬಂದು, ಸಮುದ್ರಕ್ಕೆ ಹೋದವರು ವಾಪಾಸಾದರೆ, ಅವರನ್ನು ಮಾಸ್ತಿಕಟ್ಟೆ ದೇವಿಗ ಸೇವೆಗೆ ಬಿಡ್ತೀವಿ ಅಂತ ಹರಕೆ ಹೊರುತ್ತಾರೆ. ಅವರು ವಾಪಾಸ್ ಬಂದ ಮೇಲೆ, ಕುಟುಂಬದವರ ಜೊತೆ ಇಲ್ಲಿಗೆ ಬಂದು, ಪೂಜೆ ಮಾಡ್ತಾರೆ. ಮಾಸ್ತಿಕಟ್ಟೆ ದೇವಿ ಸೇವೆಗೆ ಬಿಡಬೇಕಲ್ಲ, ಅದಕ್ಕೆ ಮರದಲ್ಲಿ ಈ ಥರದ ಗೊಂಬೆ ಮಾಡಿ, ಇಲ್ಲಿ ಬಿಟ್ಟು ಹೋಗ್ತಾರೆ,’ ಎಂದರು.

`ಹಾಗೆ ಸಮುದ್ರಕ್ಕೆ ಹೋದವರು ವಾಪಾಸ್ ಬರ್ತಾರಾ?’ ಎಂದು ಕೇಳಿದೆ.

`ಬಂದವರು ಮಾತ್ರ ಆ ಥರದ ಗೊಂಬೆ ಇಡುವುದು. ಮಕ್ಕಳಾದ ಮೇಲೆಯೇ ತೊಟ್ಟಿಲುಗಳು ಇಡುವುದು. ಹಾಗೆಯೇ ಇಡುವಂತಿಲ್ಲ. ಕೆಲವರು ಎರಡು, ಮೂರು ದಿನಗಳಲ್ಲಿ ಬರ್ತಾರೆ. ಒಂದಿಬ್ಬರಂತೂ, ಹತ್ತು ದಿನಗಳ ಕಾಲ ಸಮುದ್ರದಲ್ಲಿ ಕಳೆದು ಹೋಗಿ, ಆಮೇಲೆ ವಾಪಾಸು ಬಂದಿರುವುದೂ ಇದೆ. ಅವರು ಹುಶಾರಾಗಿ, ಇಲ್ಲಿ ಬಂದು ಹರಕೆ ತೀರಿಸುವ ಹೊತ್ತಿಗೆ ತಿಂಗಳು ಸಹ ಕಳೆದಿವೆ. ವರ್ಷದಲ್ಲಿ ಹತ್ತರಿಂದ-ಇಪ್ಪತ್ತು ಜನರಾದರೂ ಈ ಥರ ಹರಕೆ ಕಟ್ಟಿಕೊಳ್ಳುತ್ತಾರೆ. ಒಂದಿಬ್ಬರು ಬಿಟ್ಟರೆ, ಹೆಚ್ಚಿನವರೆಲ್ಲ ಹರಕೆ ತೀರಿಸಲು ವಾಪಾಸು ಬರುತ್ತಾರೆ. ಹಾಗಾಗಿ ಜನಗಳು ಇಷ್ಟೊಂದು ನಂಬುವುದು. ಮತ್ತೆ ಇಲ್ಲಿ ಎಲ್ಲಾ ಜಾತಿಯವರೂ ಬರ್ತಾರೆ…. ಕ್ರಿಶ್ಚಿಯನ್, ಮುಸ್ಲಿಂ…  ಎಲ್ಲಾರೂ,’ ಎಂದು ಪೂಜೆ ಮಾಡುವವರು ಹೇಳಿದರು.

`ಹಾಗಾದರೆ ಈ ಗಂಟೆಗಳು?’ ಎಂದು ಕೇಳಿದೆ.

`ಇವೆಲ್ಲ ಸಣ್ಣ, ಪುಟ್ಟ ವೈಯಕ್ತಿಕ ಸಮಸ್ಯೆಗಳಿದ್ದಾಗ ಕಟ್ಟುವ ಹರಕೆಗಳು. ಮಕ್ಕಳಿಗೆ ಮದುವೆ ನಿಧಾನವಾದಾಗ, ಬೇರೆ ದೆವ್ವದ ಕಾಟ ಅಥವಾ ತುಂಬಾ ಸಂತೋಷವಾದಾಗ ಬಂದು ಕಟ್ಟುವವರೂ ಇದ್ದಾರೆ. ಒಟ್ಟು, ಜನಗಳಿಗೆ ದೇವಿಯ ಜೊತೆ ಇರೋಕೆ ಒಂದು ಕಾರಣ, ಅಷ್ಟೆ,’ ಎಂದರು.

`ಹಾಗೇ, ಇಲ್ಲಿ ಕೆಲವರು ವರ್ಷಕೊಮ್ಮೆ ದೇವರಿಗೆ ಕೋಳಿ ಕೊಡುತ್ತಾರೆ. ಅದನ್ನು ಅದೋ, ಆ ಮೂಲೆಯ ವಿಗ್ರಹದ ಮುಂದೆ ಕೊಡ್ತಾರೆ. ಅವರೇ ಅದನ್ನು ಕ್ಲೀನ್ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಅವರ ನಂಬಿಕೆ,’ ಎಂದರು.

ನಾನು ಮುಗುಳ್ನಗುತ್ತಾ ತಲೆ ಅಲ್ಲಾಡಿಸಿದೆ.

`ನಿಮಗೇನಾದರೂ ಸಮಸ್ಯೆಗಳಿವೆಯೇ?’ ಎಂದು ಕೇಳಿದರು.

ಇಲ್ಲ ಎನ್ನುವಂತೆ ನಗುತ್ತಾ ತಲೆ ಅಲ್ಲಾಡಿಸಿದೆ.

`ಜೀವನದಲ್ಲಿ ಏನಾದರೂ ಸಮಸ್ಯೆ ಬಂದರೆ, ಇಲ್ಲಿ ಬಂದು ಪ್ರಯತ್ನ ಮಾಡಿ. ನೀವೇನೂ ಕಾಣಿಕೆ ಕೊಡಬೇಕು ಅಂತ ಇಲ್ಲ. ನಿಮ್ಮ ಸಮಸ್ಯೇ ಪರಿಹಾರವಾದರೆ, ನಿಮಗಿಷ್ಟ ಬಂದ ಹಾಗೆ ಇಲ್ಲಿ ಬಂದು ದೇವಿಗೆ ಪೂಜೆ ಮಾಡಬಹುದು. ನೀವುಂಟು, ದೇವರುಂಟು,’ ಎಂದರು.

`ಸಮಸ್ಯೆಗಳು ಬರದೇ ಹೋದರೂ, ಈ ಕಡೆ ಮುಂದೆ ಬಂದರೆ ಇಲ್ಲಿಗೆ ಬಂದು ಹೋಗ್ತೇನೆ. ತುಂಬಾ ಚೆನ್ನಾಗಿದೆ. ನನಗೆ ಬಹಳ ಇಷ್ಟವಾಯಿತು,’ ಎಂದು, ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು, ಕೊಲ್ಲೂರಿಗೆ ಹೊರಟೆ.

ದೇವಸ್ಥಾನ ತಲುಪುವ ಹೊತ್ತಿಗೆ ನೆನಪಾಯಿತು, ಮನೆಯವರನ್ನು ಬಿಟ್ಟು, ಈಗ ಬರ್ತೀನಿ ಅಂತ ಹೋದವನು, ಒಂದೂವರೆ ಗಂಟೆಯ ನಂತರ ಬಂದಿದ್ದೇನೆ ಎಂದು. ಹೋಮ ನೆಡೆಯುತ್ತಿದ್ದ ಸ್ಥಳಕ್ಕೆ ಹೋದ ತಕ್ಷಣ, ಅಮ್ಮ `ಎಲ್ಲಿ ಹೋಗಿದ್ದೆ?’ ಎನ್ನುವಂತೆ ಹುಬ್ಬು ಗಂಟಿಕ್ಕಿ ನನ್ನನ್ನೇ ನೋಡಿದಳು. ಅಮ್ಮನ ಪಕ್ಕ ಹೋಗಿ ಕೂರುವಾಗ ಹಣೆಯ ಮೇಲಿದ್ದ ಕುಂಕುಮ ನೋಡಿ, `ಓ… ಪೂಜೆ ಮಾಡಿಸಿಕೊಂಡು ಬಂದೆಯಾ? ಯಾವ ಪೂಜೆ?’ ಅಂತ ಆಶ್ಚರ್ಯದಿಂದ ಕೇಳಿದಳು.

ಸಾಧಾರಣವಾಗಿ ಪೂಜೆಗಳಿಂದ ಮಾರು ದೂರ ಉಳಿಯುವ ನಾನು, ತಣ್ಣಗೆ ಹೇಳಿದೆ: `ಮಾಸ್ತಿಕಟ್ಟೆ ದೇವಿ ಪೂಜೆ’.

Related Articles

Leave a Reply

Your email address will not be published. Required fields are marked *

Back to top button