ಏಕಾಂಗಿ ಸಂಚಾರಿವಿಂಗಡಿಸದಸ್ಫೂರ್ತಿ ಗಾಥೆ

ಬೇಸರ ಕಳೆದು ವಿಶ್ವಾಸ ಮೂಡಿಸಿದ ನನ್ನಿಷ್ಟದ ಸಮುದ್ರ ತೀರ: ಸೂರ್ಯಾಸ್ತ ತನ್ನನ್ನು ಬದಲಿಸಿದ ಕುತೂಹಲಕರ ಕತೆ ಬರೆದ ಸಾಫ್ಟ್ ವೇರ್ ಇಂಜಿನಿಯರ್ ಸ್ವಾತಿ

ಕೆಲವು ತಾಣಗಳಿಗೆ ಹೋಗಿ ಕುಳಿತರೆ ಸಾಕು ನೆಮ್ಮದಿ ಸಿಗುತ್ತದೆ. ಹೊಸ ಭರವಸೆ ಮೂಡುತ್ತದೆ. ಒಂದು ರಾತ್ರಿ ಇದ್ದಕ್ಕಿದ್ದಂತೆ ಎದ್ದು ಗೋಕರ್ಣ ಸಮುದ್ರ ತೀರಕ್ಕೆ ಹೋಗಿ ಅಲ್ಲಿ ಸೂರ್ಯಾಸ್ತ ನೋಡಿ ಮರುಳಾಗಿ ಹುಮ್ಮಸ್ಸು ತುಂಬಿಕೊಂಡು ಬಂದು ಸ್ವಾತಿ ಜಿಎನ್ ಬರೆದ ಚಂದದ ಬರಹ ಇದು. ಸ್ವಾತಿ ಮೂಲತಃ ತುಮಕೂರಿನವರು. ಸಿದ್ಧಗಂಗಾ ಇಂಜಿನಿಯರಿಂಗ್ ಕಾಲೇಜಿನಿನಲ್ಲಿ ಬಿಇ ಪದವಿ ಪಡೆದವರು. ಸಾಹಿತ್ಯದಲ್ಲಿ ಆಸಕ್ತಿ ಇರುವ ಅವರು ಬರೆದ ಕಾವ್ಯಾತ್ಮಕ ಬರಹ ಇಲ್ಲಿದೆ.   

ಮನೆಯಲ್ಲಿ ಜಗಳವಾಡಿದ್ದೆ. ಬೇಜಾರಾಗಿತ್ತು. ಎಲ್ಲಾದರೂ ದೂರ ಒಬ್ಬಳೇ ಹೋಗಬೇಕೆಂದುಕೊಂಡೆ. ಬ್ಯಾಗು ಧರಿಸಿ ಒಬ್ಬಳೇ ಹೊರಟೂ ಬಿಟ್ಟೆ. ಹಾಗೆ ನಾನು ಹೊರಟ್ಟಿದ್ದು ಗೋಕರ್ಣದ(gokarna) ಸಮುದ್ರ ತೀರಕ್ಕೆ. ಬೆಂಗಳೂರಿನಿಂದ ಸರಿ ಸುಮಾರು 500 ಕೀಲೊಮೀಟರ್ ದೂರ ಇರುವ ಊರು. ರಾತ್ರಿ ಬೆಂಗಳೂರಿನಿಂದ ಬಸ್ಸು ಹತ್ತಿದೆ. ಬೆಳಗ್ಗೆ 8 ಗಂಟೆ ಹೊತ್ತಿಗೆ ಗೋಕರ್ಣಕ್ಕೆ ತಲುಪಿದೆ.

ಆ ಊರು ಗೊತ್ತಿರಲಿಲ್ಲ. ಅಲ್ಲಿನ ಜನರು ಗೊತ್ತಿರಲಿಲ್ಲ. ನನ್ನ ಸುತ್ತಮುತ್ತ ಇದ್ದವರೆಲ್ಲರೂ ಅಪರಿಚಿತರೇ. ಒಂಚೂರು ಭಯವಿತ್ತು. ಆದರೆ ನಾನು ನಿಭಾಯಿಸಬಲ್ಲೆ ಅನ್ನುವ ಧೈರ್ಯ ಜಾಸ್ತಿ ಇತ್ತು. ಸ್ವಲ್ಪ ಹೊತ್ತಿಗೆ ಹೊಸ ಊರು ಹೊಂದಿಕೊಂಡಿತು. ಅಲ್ಲಿನ ತಂಪಾದ ಗಾಳಿಗೆ ಕದಡಿದ ಕೊಳದಂತಾಗಿದ್ದ ಮನಸ್ಸು ಶಾಂತವಾಗಿತ್ತು.   

ನನ್ನ ಸಮುದ್ರ ಚಾರಣ ಶುರುಗಾಗಿದ್ದು ಅಘನಾಶಿನಿಯಿಂದ.(aghanashini) ಸುತ್ತ ಹಸಿರು ಮಧ್ಯ ನೀರು. ಜೀವನ ಎಷ್ಟು ಸೊಗಸಾಗಿದೆ ಅನಿಸಿದ್ದು ಆ ಕ್ಷಣದಲ್ಲಿ! ನೀರ್ವಾಣದಿಂದ ಕಾಲು ನಡಿಗೆಯಲ್ಲಿ ಹೊರಟೆ. ನಡೆದೆ ನಡೆದೆ. ಆ ನಡಿಗೆ ದಾರಿಯಲ್ಲಿ ನನಗೆ ಮೊದಲು ಸಿಕ್ಕಿದ್ದು ಪ್ಯಾರಡೈಸ್ ಬೀಚ್. ಮರಳು ದಾರಿ, ನೆತ್ತಿಯಲ್ಲಿದ್ದ ಸೂರ್ಯ ಎರಡೂ ಸೇರಿ ವಾತಾವರಣ ಸುಡುತ್ತಿತ್ತು. ನಾನು ಅರ್ಧ ಒಣಗಿದ್ದೆ.

ಕೊಂಚ ವಿಶ್ರಾಂತಿ ಬೇಕಿತ್ತು. ಅಲ್ಲೇ ಚೂರು ನೆರಳಿರುವಲ್ಲಿ ಮರಳಿನ ಮೇಲೆ ಕೂತೆ. ಅಲೆ ಬಡಿಯುತ್ತಿದ್ದ ಸಮುದ್ರದತ್ತ ನೋಡಿದೆ. ಕೊನೆಯೇ ಇಲ್ಲದಂತೆ ಕಾಣಿಸಿತು. ಇಲ್ಲಿ ಯಾವುದಕ್ಕೂ ಕೊನೆ ಇಲ್ಲ. ಸುಖವೆಂಬುದು ಸಾಪೇಕ್ಷ. ನಡೆದಷ್ಟೂ ದಾರಿಯಿದೆ. ದಕ್ಕಿಸಿಕೊಂಡಷ್ಟು ಬಾಂಧವ್ಯವಿದೆ.. ಹೀಗೆ ಕೆಲವು ಸಾಲುಗಳು ಮನಸ್ಸಿಗೆ ಬಂದವು. ಹಳೆಯ ನೆನಪುಗಳು ಜಾಸ್ತಿ ಕಾಡತೊಡಗಿದವು. ಆ ದೈತ್ಯ ಸಮುದ್ರದ ಮುಂದೆ ನಾನು ಒಬ್ಬಂಟಿ ಅನ್ನಿಸಿದ ಕ್ಷಣ ಅದು.

ಅಲ್ಲಿಂದ ಎದ್ದು ಮತ್ತೆ ಹೊರಟೆ. ಮರಳು ಕಾದಿತ್ತು. ಇಡುವ ಪ್ರತಿ ಹೆಜ್ಜೆಯೂ ತುಸು ಕಷ್ಟವೇ ಆಗಿತ್ತು. ಓಂ ಬೀಚ್(om beach) ಕಡೆಗೆ ನಡೆಯುತ್ತಿದ್ದೆ. ಅಲ್ಲೊಂದು ಎತ್ತರ ಪ್ರದೇಶ. ಒಂದು ಕಡೆ ಸಮುದ್ರ ಮತ್ತೊಂದು ಕಡೆ ಆಳವಾದ ಇಳಿಜಾರು. ಎತ್ತರ ಪ್ರದೇಶವನ್ನು ದಾಟುವಾಗ ಸರಕ್ಕೆಂದು ಆಯ ತಪ್ಪಿ ಜಾರಿದೆ. ಬಿದ್ದು ಅಷ್ಟು ದೂರ ಜಾರಿದೆ. ಸದ್ಯ ಏನು ಆಗಲಿಲ್ಲ. ಒಬ್ಬಳೇ ನಕ್ಕು ಹಗುರಾದೆ. ಮತ್ತೆ ಎದ್ದು ನಿಂತೆ. ಕಡಿದಾದ ದಾರಿಗಳು ಕಷ್ಟ ಕೊಡುತ್ತಿದ್ದವು. ಆದರೆ ವಿಶಾಲವಾದ ಸಮುದ್ರ ಎಲ್ಲವನ್ನು ಮರೆಸಿ ಭರವಸೆ ತುಂಬುತ್ತಿತ್ತು. ಈ ಪಯಣ ನನಗೆ ಜೀವನದ ಪಯಣದಂತೆ ಅನ್ನಿಸುತ್ತಿತ್ತು.

ಆ ನಡಿಗೆಯುದ್ದಕ್ಕೂ ಸಮುದ್ರ ಭೋರ್ಗರೆತ ಕಿವಿಗೆ ಬೀಳುತ್ತಿತ್ತು. ನಾನು ಮಂತ್ರಮುಗ್ಧಳಾಗುತ್ತಿದ್ದೆ. ಸಮುದ್ರದ ಸೆಳೆತವೇ ಹಾಗೆ. ಪ್ರತಿ ಸಲ ತನಷ್ಟಕ್ಕೆ ತಾನೆ ನಮಗೆ ಅರಿವಿಲ್ಲದೆ ಕಾಡುತ್ತದೆ. ನೋಡಿದಷ್ಟೂ ಧನ್ಯತೆ ಮೂಡಿಸುತ್ತದೆ. ಅಲೆಗಳ ರಭಸ ಯಾವ ರಾಕ್ ಬ್ಯಾಂಡ್ ಸಂಗೀತಕ್ಕೆ ಸಮವಿಲ್ಲ ಅನ್ನಿಸುತ್ತದೆ. ಪ್ರಕೃತಿಯ ಸೋಜಿಗದ ಮುಂದೆ ಮಾನವ ಯಾವ ಲೆಕ್ಕ.

ಅಲ್ಲೊಂದು ಕಡೆಗೆ ಮತ್ತೆ ಕುಳಿತೆ. ಮನಸ್ಸು ಹಾಡುತ್ತಿತ್ತು.

ಸುಶ್ರಾವ್ಯವಾದ ಮೌನವಿತ್ತು

ಅಲೆಗಳ ಜೊತೆ ಒಂದು ಅನಾಮಿಕ ಹಾಡು ತೇಲಿ ಬಂದಿತ್ತು

ಒಂದೊಂದೇ ಹೆಜ್ಜೆಯಿಟ್ಟು ಡಾಲ್‍ಫೀನ್ ಬೀಚ್(dolphin beach), ಹೆಲ್ ಬೀಚ್, ಓಂ ಬೀಚ್ ದಾಟುತ್ತಾ ಹೋದೆ. ಕೊನೆಗೆ ತಲುಪಿದ್ದು ಕುಮಟಾ ಕಡಲ ತೀರಕ್ಕೆ. ಅಷ್ಟು ಹೊತ್ತಿಗೆ ಸಂಜೆಯಾಗಿತ್ತು. ಅದು ಸೂರ್ಯಾಸ್ತದ ಸಮಯ.

ದಿಗಂತದತ್ತ ದಿಟ್ಟಿಸಿ ನೋಡಿದರೆ ಸೂರ್ಯನ ಕಿರಣಗಳು ಹೊಸ ದಿಗಂತದಂತೆ ಭಾಸವಾಗಿತ್ತು. ಪ್ರತಿ ಕವಿಯು ಒಬ್ಬ ವಿರಹಿಯೇ. ಕಡಲು ಒಬ್ಬ ವಿರಹಿಯ ಶೂನ್ಯ ಬಿಂದು. 

ಅವತ್ತು ಆ ಕಡಲು ಬದುಕಿನ ಹೊಸ ಪುಟವನ್ನು ತೆರೆಯುವ ತುಡಿತದಲಿತ್ತು  ಆದರೆ ನಾನು ಅಳಿಸದ ನೆನಪುಗಳ ಬುತ್ತಿಯಲ್ಲಿ ಕರಗಿದ್ದೆ. ಆದರೆ ಸೂರ್ಯ ಮತ್ತೆ ಹುಟ್ಟಿ ಬರುವ ಭರವಸೆ ನೀಡಿದ್ದ. ಹೊಸ ಬದುಕಿನ ವಿಶ್ವಾಸ(hope) ತುಂಬುತ್ತಿದ್ದ. ಆ ಕ್ಷಣ ಇವತ್ತಿಗೂ ಉಳಿದಿದೆ. ಆ ಪಯಣ ಮನಸ್ಸಿನಲ್ಲಿ ಯಾವತ್ತಿಗೂ ಉಳಿದಿರುತ್ತದೆ.

Related Articles

One Comment

Leave a Reply

Your email address will not be published. Required fields are marked *

Back to top button